ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-1

ಡಾ. ಅರಕಲಗೂಡು ನೀಲಕಂಠ ಮೂರ್ತಿ ಯವರು ವೃತ್ತಿಯಿಂದ ವೈದ್ಯರು ಹಾಗು ಹವ್ಯಾಸಿ ಸಾಹಿತಿಗಳು. ಹಲವಾರು ವರ್ಷಗಳ ಹಿಂದೆ ಅವರು ಕೆಲಸದ ನಿಮಿತ್ತ ಸೊಮಾಲಿಯಾದಲ್ಲಿ (ಆಫ್ರಿಕಾ) ನೆಲೆಸಿದ್ದಾಗ ಅಲ್ಲಿನ ತಮ್ಮ ಅನುಭವಗಳನ್ನು ಪತ್ರಿಕೆಗೆ ಲೇಖನ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ…

(ಆಫ್ರಿಕಾಕ್ಕೆ ಪ್ರಪ್ರಥಮವಾಗಿ ‘ಕಗ್ಗತ್ತಲೆಯ ಖಂಡ’ ಎಂಬ ಅಡ್ಡಹೆಸರು ಕೊಟ್ಟದ್ದು, ವೇಲ್ಸ್ (ಯು.ಕೆ. ಯ ಒಂದು ಪ್ರಾಂತ್ಯ) ಭಾಗದ ಪತ್ರಕರ್ತ ಮತ್ತು ಅನ್ವೇಷಕ, ಹೆನ್ರಿ ಮಾರ್ಟನ್ ಸ್ಟ್ಯಾನ್ಲೆ)

-ಒಂದು-

ಲಕೋಟೆಯೊಂದು ಬಂತು!

ನಾನಾಗ ಬೆಂಗಳೂರಿನ ಪ್ರಸನ್ನ ಟಾಕೀಸ್ ಸನಿಹ ಸಣ್ಣ ಕ್ಲಿನಿಕ್ ತೆರೆದು ವೃತ್ತಿ ಆರಂಭಿಸಿದ್ದೆ. ನಾನೇ ಹೊಸ ಗಿರಾಕಿ; ಇನ್ನು ರೋಗಿಗಳಿಗೆ ಎಂಥ ನಂಬಿಕೆ? ಮೇಲಾಗಿ ಆಗ, 1976 ರಲ್ಲಿ, ಮೂರರಿಂದ ಐದು ರೂಪಾಯಿ ಒಬ್ಬರಿಗೆ ಪ್ರಚಲಿತ ಫೀಸು!! ಬೆಳಿಗ್ಗೆಯಿಂದ ರಾತ್ರಿವರೆಗೂ ಹೆಚ್ಚೆಂದರೆ ನಾಲ್ಕೈದು ರೋಗಿಗಳು ಬಂದರೆ ನನಗೆ ಅದೇ ಬಂಪರ್.
ನನ್ನ ಪರಿಸ್ಥಿತಿ ಅರಿತ ಬಂಧುವೊಬ್ಬರು (ಟಿ.ಬಿ. ತಜ್ಞ), ನೈಟ್ ಡ್ಯೂಟಿಗಾಗಿ, ಒಕ್ಕಲಿಗರ ಹಾಸ್ಟೆಲ್ ಹತ್ತಿರದ ನರ್ಸಿಂಗ್ ಹೋಮ್ ಕೆಲಸಕ್ಕೆ ಸೇರಿಸಿದರು; ಅವರೂ ಸಹ ಅಲ್ಲಿಯ ಸಂದರ್ಶಕ ತಜ್ಞರು. ನನಗೆ ತಿಂಗಳಿಗೆ ನೂರೈವತ್ತು ರೂಪಾಯಿ ಸಂಬಳ!
ನನಗೆ ಇನ್ನೊಂದು ಸಮಸ್ಯೆ ಇತ್ತು. ರಾತ್ರಿ ಮಲಗುವುದೆಲ್ಲಿ ಎಂಬುದು.
ರಾತ್ರಿ ಪಾಳಿಯ ನರ್ಸಿಂಗ್ ಹೋಮ್ ಕೆಲಸ ಆದ್ದರಿಂದ ಅದೂ ದಿಢೀರನೆ ಪರಿಹಾರವಾಗಿತ್ತು.
ಬೆಳಿಗ್ಗೆ ಬೇಗ ಅಲ್ಲಿಯೇ ಸ್ನಾನ ಮುಗಿಸಿ, ಎಂಟರ ಹೊತ್ತಿಗೆ ಬೆಳಗಿನ ಡ್ಯೂಟಿ ಡಾಕ್ಟರ್ ಬಂದೊಡನೆ, ಬಸ್ ಹಿಡಿದು ಪ್ರಸನ್ನ ಟಾಕೀಸ್ ಹತ್ತಿರ ಇಳಿದು, ಅಲ್ಲೇ ಒಂದು ಹೋಟೇಲಿನಲ್ಲಿ ಮಸಾಲೆ ದೋಸೆ (ನನಗೆ ಇಂದಿಗೂ ಇಷ್ಟದ ಉಪಹಾರ) ಕಾಫಿ ನಂತರ ಕ್ಲಿನಿಕ್ ತಲಪಿದರೆ, ಕೆಲಸದ ಜೊತೆ, ಆಗಾಗ ಮಂಪರು, ಮತ್ತು ಮಧ್ಯಾಹ್ನನ ಊಟದ ತರುವಾಯ, ಷಟರ್ ಎಳೆದು ನಿದ್ದೆಯೂ ಅಲ್ಲೇ!

ನನ್ನ ಆತ್ಮೀಯ ಗೆಳೆಯ ಡಾಕ್ಟರ್ ಜಗನ್ನಾಥ ಕೂಡ ಅಲ್ಲೇ ಹತ್ತಿರ, ಅಪ್ಪ ಅಮ್ಮ ತಂಗಿ ಹಾಗೂ ತಮ್ಮಂದಿರ ಸಂಗಡ ವಾಸವಿದ್ದ. ಆಗಾಗ ಅವನೂ ಬಂದು ನನ್ನ ವೃತ್ತಿಗೆ ಸಹಕಾರಿಯಾಗಿದ್ಧ. ಈಗವನು ಖ್ಯಾತ ಮಕ್ಕಳತಜ್ಞ ಹಾಗೂ ಬಸವೇಶ್ವರನಗರದಲ್ಲಿ ವಾಸ. ಈಗಲೂ ನಾವು ಅಷ್ಟೇ ಅನ್ಯೋನ್ಯ ಹಾಗೂ ನನ್ನ ಕುಟುಂಬದ ಬೆಂಗಳೂರು ಭೇಟಿಯ ತಂಗುದಾಣ.
ಹೀಗಿರುವಾಗ ಒಂದು ದಿನ ಆಕಾಶದಿಂದ ಪರಮೇಶ್ವರ ಪ್ರತ್ಯಕ್ಷ ಆದಂತೆ ನನ್ನ ಕೈಗೆ ವಿದೇಶದಿಂದ ಹಾರಿದ್ದ ಲಕೋಟೆ ಬಂದು ಬಿದ್ದಿತು. ಅದೇನು ಎತ್ತ ಎಂಬ ಗೊತ್ತು ಗುರಿ ಇಲ್ಲ. ಮೇಲಾಗಿ ಅದರ ಮೇಲಿನ ಭಾಷೆ ಸಹ ಪರಕೀಯವಾಗಿತ್ತು. ತಕ್ಷಣಕ್ಕೆ ಏನೂ ಹೊಳೆಯದೆ, ಒಡೆದು ಓದಿದೆ. ಇದೊಂದು ಕನಸು ಘನೀಭವಿಸಿ ನನ್ನ ಕೈಮೇಲೆ ಕೂತಂತಹ ಭಾವನೆ ಮೂಡಿತು.

ನನ್ನ ಮೊದಲನೆ ಅಣ್ಣ (ನಾವು ಕರೆಯುತ್ತಿದ್ದ ದೊಡ್ಡಣ್ಣ), ಡಾ. ಮೈಲಾರ ಶೆಟ್ಟಿ ನೇತ್ರತಜ್ಞರು. ಅನೇಕ ವರ್ಷಗಳ ಸರಕಾರಿ ಹುದ್ದೆಯಲ್ಲಿದ್ದರೂ, ಅವರಿಗೆ ಹೊರದೇಶದಲ್ಲಿ ಕೆಲಸ ಮಾಡುವ ಬಲವಾದ ಆಸೆಯಿತ್ತು. ಅದು ಸಾಕಾರವಾದಂತೆ, ಪತ್ರಿಕೆಯೊಂದರಲ್ಲಿ ಸೋಮಾಲಿಯಾ ದೇಶಕ್ಕೆ ನೇತ್ರತಜ್ಞ ಒಬ್ಬರ ಅವಶ್ಯಕತೆಯ ಜಾಹಿರಾತು ನೋಡಿ, ಎಲ್ಲ ಔಪಚಾರಿಕೆಗಳೂ ಮುಗಿದ ನಂತರ ಹಾರ್ಗೀಸಾ ಎಂಬ ಪಟ್ಟಣದಲ್ಲಿ ಅಲ್ಲಿಯ ದೊಡ್ಡ ಆಸ್ಪತ್ರೆಯ ಮುಖ್ಯ ತಜ್ಞರಾಗಿದ್ದರು.
ಅದೇ ಅಣ್ಣ ನನ್ನನ್ನ ವೈದ್ಯಕೀಯ ಹಾಗೂ ನನ್ನ ಇನ್ನೊಬ್ಬ ಅಣ್ಣನನ್ನು ಪಶುವೈದ್ಯಕೀಯ ಓದಿಸಿದ್ದು. ಈಗ ಅದೇ ನಮ್ಮ ದೊಡ್ಡಣ್ಣ ನನ್ನ ಬದುಕಿನ ಭಗವಂತನಾಗಿದ್ದರು! ಹೇಗೆ ಏನು ಎಂಬ ಯಾವ ಸುಳಿವೂ ನೀಡದೆ, ನನಗೆ ಕೆಲಸ ಕೊಡಿಸಿದ್ದರು.

ನಾನು, ಕಮಲ ಅರಕಲಗೂಡಿನಿಂದ ಏರ್‌ಪೋರ್ಟಿಗೆ ಹೊರಡುವಾಗಿನ ಚಿತ್ರ

ಅಷ್ಟರಲ್ಲಿ ನನ್ನ ಗೆಳೆಯ ಜಗನ್ನಾಥ ಬಂದ. ನಾನು ಏನೂ ಹೇಳದೆ, ಆ ಕೆಲಸದ ವಿಷಯ ಹೊತ್ತು ತಂದಿದ್ದ ಆ ದೇಶದ ಆ ಖಾಲಿ ಲಕೋಟೆ ಮಾತ್ರ ಅವನ ಕೈಗಿತ್ತೆ. “ವಕಾಲದ್ದ ಬದ್ಬಾದದ ಶಕಲಾಹ ಈ ಸೋಮಾಲಯೀದ್, ಮುಖ್ದಿಷೋ” ಎಂದು ಮುದ್ರಿತವಾಗಿತ್ತು. ಅವನು,”ಏನೋ ಇದು ಯಾವ ದೇವಲಿಪಿನೋ” ಎಂದು ವಾಸ್ತವವಾಗಿ ಆಶ್ಚರ್ಯಪಟ್ಟರೂ, ಅದರ ಬಗ್ಗೆ ಕುತೂಹಲಿಯಾಗಲಿಲ್ಲ.
ನಂತರ ಒಳಗಿನ ಪತ್ರ ಕೊಟ್ಟಾಗ, ಓದಿದ್ದೇ ಅನಾಮತ್ತು ನನ್ನ ತಬ್ಬಿದ. ಅವನ ಕಣ್ಣಲ್ಲಿ ನೀರು! “ಯಾಕೋ ಏನಾಯ್ತೋ ನಿಂಗೆ, ನನಗೆ ಕೆಲಸ ಸಿಕ್ಕಿದರೆ ಖುಷಿ ಪಡ್ಬೇಕೋ ಕಣ್ಣೀರ್ ಹಾಕ್ಬೇಕೋ ಏನು?” ಅಂದೆ. ಸ್ವಲ್ಪ ಸಮಯ ಆದ ಮೇಲೆ, “ನಿನ್ನ ಬಿಟ್ಟಿರೋದು ಹೇಗೆ ಅಂತ ಅಳು ಬಂತು” ಅಂದ.
ಈ ಪತ್ರದ ನಂತರ ಸುಮಾರು ದಿನ ಸಹನೆಯಿಲ್ಲದೆ ಕಾಯಬೇಕಾಯಿತು. ಏಕೆಂದರೆ ಅಂದಿನ ದಿನಗಳಲ್ಲಿ ಕೇವಲ ಅಂಚೆಯನ್ನಷ್ಟೇ ನಂಬಿದ್ದ ಕಾಲ! ದೂರವಾಣಿ ಸಹ ಟ್ರಂಕ್ ಕಾಲ್ ಬುಕ್ ಮಾಡಿ ಕಾಯಬೇಕಾಗಿತ್ತು – ಅಲ್ಲದೆ ದುಬಾರಿ ಬೇರೆ.
ಈ ನಡುವೆ ಮನೆಯಲ್ಲಿ ನನ್ನ ಮದುವೆ ಪ್ರಸಂಗ ಆರಂಭವಾಗಿತ್ತು. ನನ್ನ ಅಮ್ಮನಿಗೆ ಅವರ ಕಸಿನ್ (ತಮ್ಮ) ಮಗಳನ್ನು ನನಗೆ ಕಟ್ಟುವ ಬಲವಾದ ಆಸೆ ಇದ್ದುದನ್ನು ನಾನು ಊಹಿಸಿದ್ದೆ. ಒಪ್ಪಿಗೆ ಕೊಟ್ಟಮೇಲೆ ನನ್ನ ಅರ್ಧಾಂಗಿ ಆಗಬೇಕಿದ್ದವಳ (ಕಮಲ) ಪಾಸ್‌ಪೋರ್ಟ್‌ ಕೂಡ ನನ್ನದರ ಜೊತೆಗೇ ಅರ್ಜಿಗಳು ಹೋದವು. ಅದಕ್ಕಾಗಿ ಮದ್ರಾಸ್ (ಚೆನ್ನೈ) ಸುತ್ತಬೇಕಾಯಿತು. ದೀರ್ಘ ಕಾಲ ಅನ್ನಿಸಿದ ತರುವಾಯ, ಅಂತೂ ಒಂದು ದಿನ ಟಿಕೆಟ್ ಲೆಟರ್ ಬಂತು. ಖುಷಿಗೆ ಎಲ್ಲೆ ಎಲ್ಲಿ? ಅದೂ ಪ್ರಥಮ ಬಾರಿ ವಿಮಾನಯಾನ!
ಬೆಂಗಳೂರಿನ ಯೂನಿಟಿ ಬಿಲ್ಡಿಂಗ್ ಸಂಕೀರ್ಣದ ಏರ್ ಇಂಡಿಯಾ ಆಫೀಸಿಗೆ ದೌಡು. ಆಗ ಭಾರತದಲ್ಲಿ ಏರ್ ಇಂಡಿಯಾ ಅಂತರರಾಷ್ಟ್ರೀಯ ಹಾಗೂ ಇಂಡಿಯನ್ ಏರ್‌ಲೈನ್ಸ್ ದೇಶೀಯ ಈ ಎರಡೇ ನಮ್ಮದಾಗಿದ್ದ ವಿಮಾನ ಸಂಸ್ಥೆಗಳು.

ಅಂತೂ ನಮ್ಮ ಸರದಿ. ಸೋಮಾಲಿ ಏರ್‌ಲೈನ್ಸ್ ಲೆಟರ್ ನೋಡಿ ಸಿಬ್ಬಂದಿ ಕೇಳಿದ ಮೊದಲ ಪ್ರಶ್ನೆ, ಯುಎಇ ವೀಸಾ ಆಗಿದೆಯಾ ಎಂದು. ಟಿಕೆಟ್ಟನ್ನು, ಬೆಂಗಳೂರು-ಬಾಂಬೆ (ಈಗಿನ ಮುಂಬೈ) – ಅಬುಧಾಬಿ – ಬರ್ಬರಾ ಮಾರ್ಗವಾಗಿ ಮಾಡಿದ್ದರು. ಆಗಿನ ಕಾಲದಲ್ಲಿ ಗಲ್ಫ್ ದೇಶೀಯ ವೀಸಾಗಳು ಸುಲಭ ಇರಲಿಲ್ಲ. ಮೇಲಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಬೇರೆ ಹೇರಿದ್ದರು. ಅಂತೂ ಇಂತು ಕುಂತಿ ಮಕ್ಕಳ ರಾಜ್ಯದ ಸ್ಥಿತಿ ನಮ್ಮದಾಯಿತು. ಅಣ್ಣನಿಗೆ ವಿವರವಾದ ಕಾಗದದ ಸಂಗಡ ಟಿಕೆಟ್ಟನ್ನೂ ಕಳಿಸಿದ್ದಾಯಿತು. ಮತ್ತೆ ಕಾಯುವಿಕೆ.
ಅಷ್ಟರಲ್ಲಿ ನನ್ನ ಮತ್ತು ಕಮಲ ಇಬ್ಬರ ಮದುವೆ ಕೂಡ ನಡೆದುಹೋಯಿತು.
ಕೊನೆಗೂ ದೂರದೂರಿನಂಚೆ ಮತ್ತೆ ಬಂದೇಬಿಟ್ಟಿತು. ಈ ಬಾರಿ, ಬೆಂಗಳೂರು-ಬಾಂಬೆ-ಏಡನ್-ಹರ್ಗೀಸ ಎಂಬ ಮಾರ್ಗ. ಆದರೆ ಏಡನ್ ಅಥವ ಸೋಮಾಲಿ ವೀಸಾಗಳ ಬಗ್ಗೆ ಒಂದಿಷ್ಟೂ ಕೆದಕದೆ ಬುಕ್ ಮಾಡಿಬಿಟ್ಟರು ಏರ್‌ಲೈನ್ಸ್ ನವರು! ಆಶ್ಚರ್ಯ.
ಅಂತೂ ಒಂದು ಬಹುಮುಖ್ಯ ಅಡಚಣೆ ಗೆದ್ದಿದ್ದಾಗಿತ್ತು. ಇನ್ನೂ ನಮ್ಮಣ್ಣನ ಪತ್ರದಲ್ಲಿದ್ದಂತೆ ಬಾಂಬೆಯ ಎಮನ್ ದೇಶದ ಪ್ರಾಂತೀಯ ದೂತಾವಾಸದಲ್ಲಿ ಎಮನ್ (ಏಡನ್) ವೀಸಾ ಪ್ರಮೇಯ ಇತ್ತು. ಅಲ್ಲದೆ, ಏಡನ್ ಏರ್ ಇಂಡಿಯಾ ಕಛೇರಿಯಲ್ಲಿ ಅಣ್ಣನ ಪರಿಚಿತರೇ ಮೇನೇಜರ್ ಆಗಿದ್ದರಿಂದ ಅದರ ಗೊಡವೆ ಸದ್ಯಕ್ಕಿರಲಿಲ್ಲ.

ಅಣ್ಣ ಪ್ರಯಾಣ ಮಾಡುವಾಗಲೇ ಅವರ ಸಹೋದ್ಯೋಗಿಗಳು, ‘ಆಫ್ರಿಕ ಕಗ್ಗತ್ತಲೆಯ ಖಂಡ, ಅಲ್ಲಿ ನಿಮ್ಮನ್ನು ಲಂಚ್ ಅಥವ ಡಿನ್ನರ್ ಊಟಕ್ಕೆ ಬಡಿಸಿಕೊಂಡು ಚಪ್ಪರಿಸುತ್ತಾರೆ’ ಎಂದು ಹೆದರಿಸುತ್ತಿದ್ದರಂತೆ. ಅಥವ ತಮಾಷೆಗೂ ಇರಬಹುದು. ಆ ಹಂತಕ್ಕಿತ್ತು ಅಂದಿನ ವಿದ್ಯಾವಂತರಲ್ಲೂ ಕೆಲ ದೇಶಗಳ ಬಗ್ಗೆ ಜ್ಞಾನ! ಮೇಲಾಗಿ ಇಂದಿನಂತೆ ಅಂತರರಾಷ್ಟ್ರೀಯ ಪ್ರಯಾಣ ಬಹಳ ವಿರಳವಾಗಿದ್ದುದರಿಂದ ಈ ರೀತಿ ಸಾಧ್ಯತೆಗಳು ಹೆಚ್ಚಿದ್ದವು. ಹಾಗಾಗಿ ನನಗೂ ಸಹ ಹೊರಡುವ ಮುನ್ನ ಸ್ವಲ್ಪ ದಿಗಿಲು. ನನ್ನ ಸಂಗಡ ಆಗ ತಾನೆ ಮದುವೆಯಾಗಿದ್ದ ಮುಗ್ಧ ಹೆಂಡತಿ; ಹೈಸ್ಕೂಲು ಹಂತಕ್ಕೇ ಬೇಕಾಬಿಟ್ಟಿ ಓದಿ ಸುಸ್ತಾಗಿ, ಓದಿಗೆ ತಿಲಾಂಜಲಿ ಹೇಳಿ, ಹೊರ ಜಗತ್ತಿನ ಅರಿವೇ ಇಲ್ಲದವಳು. ಪ್ರಬುದ್ಧಳೂ ಅಲ್ಲದೆ, ಸಂಪೂರ್ಣ ಎಡವಟ್ಟೂ ಅಲ್ಲದ ಹುಡುಗಾಟಿಕೆಯವಳು! ಆದರೆ, ಈಗಾಗಲೇ ಸೋಮಾಲಿಯಾದಲ್ಲಿ ಅಣ್ಣ, ಅತ್ತಿಗೆ ಮತ್ತು ಅವರ ಕಿರಿಯ ಮಗಳಿದ್ದುದು ನನಗೆ ಧೈರ್ಯ!
ಬಂದದ್ದು ಬರಲಿ ಎಂಬ ಅನಿಸಿಕೆ ನನಗೆ ಧೈರ್ಯದ ಸುಧೆ ಹರಿಸಿತ್ತು. ಇಂತಹ ಯಾವ ವಿಷಯ ನನ್ನ ಪತ್ನಿಗೆ ಹೇಳುವ ಸ್ಥಿತಿ ಇರಲಿಲ್ಲ. ಅದೆಲ್ಲ ಅರ್ಥ ಆಗದ, ಒಂದಿಷ್ಟು ಅರ್ಥ ಆದರೂ ಅದರತ್ತ ಗಮನವೇ ಇಲ್ಲದ ಸ್ಥಿತಿ. ನಾ ಜೊತೆಗಿರುವುದಷ್ಟೆ ಅವಳ ಧೈರ್ಯ! ಅವಳು ವರುಷಗಳುರುಳಿದಂತೆ ಬೌದ್ಧಿಕತೆಯಲ್ಲಿ ಎತ್ತರೆತ್ತರ ಆಗಿ ಈಗಿರುವುದು ವಿರುದ್ಧ ಧ್ರುವದಲ್ಲಿ; ಅಷ್ಟು ಬದಲಾಗಿರುವಳು!

ನಾನಂದು ನನ್ನ ಗೆಳೆಯನ ಸಂಗಡ ಕ್ಲಿನಿಕ್ಕಿನಲ್ಲಿ ಪತ್ರದ ವಿಷಯ ತಿಳಿಸಿ ಖುಷಿಪಟ್ಟಿದ್ದಕ್ಕೂ, ಮತ್ತು ಇನ್ನೇನು ವಿಮಾನ ಏರಿ ಹಾರುವೆವು ಎಂಬ ಸಮಯಕ್ಕೂ ಸರಿಸುಮಾರು ಎಂಟು ಹತ್ತು ತಿಂಗಳೇ ಕಳೆದುಹೋಗಿದ್ದವು. ಹಾಗಿತ್ತು ಅಂದಿನ ದಿನಮಾನಗಳ ಅಂಚೆ ವ್ಯವಹಾರಗಳ ವೇಗದ ಗತಿ! ಅಂಚೆ ಬಿಟ್ಟು ಬೇರೆ ಗತಿಯೂ ಇರಲಿಲ್ಲ. ಇಂದಿನ ಕಾಲಮಾನದ ಹೋಲಿಕೆ ಸಾಧ್ಯತೆ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಬಹುಷಃ, ಹೊಸ ಯುಗದ ಹೊಸ ಪೀಳಿಗೆಗಳಿಗೆ ಇದನ್ನು ಓದುತ್ತ ಓದುತ್ತಲೇ ಗೊರಕೆ ಶುರುವಾಗಬಹುದು…!

ಮುಂದುವರಿಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

4 Comments

  • ಬಹಳ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು ನೀಲಣ್ಣ.

  • Pleasant surprise
    Eagerly waiting for forthcoming episodes.

  • Superb sir….. waiting for your continuity

  • Felt happy reading this.. It’s very nice

Leave a Reply

Your email address will not be published. Required fields are marked *