–-೧೧–
ಒಗಾದನ್ ಯುದ್ಧ! – 2
ಆಗಾಗ ಹಾರ್ಗೀಸಾ ನಗರದ ಆಕಾಶದ ಮೇಲೆ ಜರುಗುತ್ತಿದ್ದ ವಾಯುದಳ ವಿಮಾನಗಳ ಗಸ್ತು ಹಾರಾಟ, ದಿನ ಕಳೆಯುತ್ತಾ ಪ್ರತಿ ದಿನವೂ ನಡೆಯುವ ಪ್ರಕ್ರಿಯೆಯಾಗಿ ಪರಿಣಮಿಸಿತ್ತು. ಆದ್ದರಿಂದ ಆರಂಭದ ದಿನಗಳ ಭಯ ಎಲ್ಲರ ಮನಸ್ಸಿನಿಂದಲೂ ಮಾಯವಾಗಿತ್ತು. ಆದರೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭ ಆಗಿದೆಯೋ ಅಥವ ಇಲ್ಲವೋ ಎಂಬ ಪ್ರಶ್ನೆಗೆ ಯಾರಲ್ಲೂ ನಿಖರ ಉತ್ತರ ಇರಲಿಲ್ಲ. ಎಷ್ಟೇ ಆಗಲಿ ಆಳ್ವಿಕೆ ಇದ್ದದ್ದು ಸರ್ವಾಧಿಕಾರಿಯ ಕೈಲಲ್ಲವೇ? ಎಲ್ಲ ಗುಟ್ಟು ಗುಟ್ಟು!
ಇನ್ನೇನು ನಮ್ಮ ಪ್ರಯಾಣದ ದಿನ ಹತ್ತಿರ ಬರುತ್ತಿದ್ದಂತೆ, ಸೂಟ್ ಕೇಸ್ ಪ್ಯಾಕಿಂಗ್ ಮುಗಿಸಿದ್ದಾಯಿತು. ವಿಮಾನ ನಿಲ್ದಾಣಕ್ಕೆ ಹೋದ ದಿನವೇ ಸೀಟಿನ ಲಭ್ಯತೆ ಕಷ್ಟವಾಗಿ, ಮನೆಗೆ ವಾಪಸ್ಸು ಬರಬೇಕಾದ ಸಂದರ್ಭ ಬರಲೂಬಹುದೆಂದು ಗೊತ್ತಾಗಿ, ವಾರಕ್ಕಾಗುವಷ್ಟು ರೇಶನ್ ಉಳಿಸಿಕೊಂಡಿದ್ದೆವು. ಅಲ್ಲದೆ, ಸೋಮಾಲಿ ಏರ್ ಲೈನ್ಸ್ ಕಛೇರಿಯಲ್ಲೇ ಸೈನಿಕ ಸರಕು ವಿಮಾನದ ಪ್ರಯಾಣಿಕರ ನೋಂದಣಿ ಇದ್ದುದರಿಂದ, ನಮ್ಮ ಹೆಸರುಗಳನ್ನೂ ಕೊಟ್ಟು ಬಂದದ್ದಾಗಿತ್ತು. ಉಳಿಕೆ ರೇಶನ್ ಮನೆ ಕೆಲಸದವಳದಾಗಿತ್ತು.
ಮೊದಲ ಪ್ರಯತ್ನದ ದಿನ, ಅಣ್ಣನ ದೈನಂದಿನ ವಾಹನ ಮತ್ತು ಚಾಲಕನ ಆಗಮನವಾಗಿ, ಆತನೇ ಎಲ್ಲ ಲಗ್ಗೇಜನ್ನೂ ತುಂಬಿ ತಯಾರು ಮಾಡಿದ. ಪುನಃ ಮರಳಿ ಬರದಂತೆ ಆಗಲಿ ಎಂಬ ಮನಸ್ಸಿನಲ್ಲಿ, ಮನೆಯತ್ತ ಟಾಟಾ ಮಾಡಿ ಹೊರಟೆವು. ನಿಲ್ದಾಣದಲ್ಲಿ ಸಾಕಷ್ಟು ಜನ ಇದ್ದದ್ದು ಕಂಡ ಕೂಡಲೇ ನಿರಾಸೆಯಾದದ್ದು ನಿಜ. ಸರಕು ವಿಮಾನ (ಕಾರ್ಗೋ ಪ್ಲೇನ್) ಇಳಿದ ತಕ್ಷಣ, ಒಂದೆರಡು ಫೈಟರ್ ವಿಮಾನ ಆಕಾಶಕ್ಕೇರಿದವು; ಬಹುಶಃ ಬಂದಿಳಿದಿದ್ದ ವಿಮಾನದ ರಕ್ಷಣೆಗಾಗಿ ಮತ್ತು ಬೇಹುಗಾರಿಕೆಗಾಗಿ. ಅಷ್ಟಲ್ಲದೆ ಮೊದಲು ಕಂಡಿರದ ಇಂಥ ವಿಮಾನಗಳ ಹಾರಾಟ ನೋಡಲೂ ಹೆಚ್ಚು ಜನ ಬಂದಿರಬಹುದು ಅನ್ನಿಸಿತು. ಆದರೂ ಆ ದಿನ ನಮಗೆ ಜಾಗ ದೊರಕಲಿಲ್ಲ. ಮತ್ತೆ ನೊಂದ ಮನಸ್ಸುಗಳ ಹೊತ್ತು ಮನೆಯತ್ತ!
ಅದೃಷ್ಟಕ್ಕೆ ಪೀಠೋಪಕರಣಗಳನ್ನು ನಾವೇ ಖರೀದಿಸಿರಲಿಲ್ಲ. ಎಲ್ಲ ಬಂಗಲೆಗಳೂ ಮೊದಲೇ ಸುಸಜ್ಜಿತ; ಅಲ್ಲದೆ ಪ್ರತಿ ಮನೆಯಲ್ಲೂ ಚಳಿಯಲ್ಲಿ ಮೈಕಾಯಿಸಲು ಅಗ್ಗಿಷ್ಟಿಕೆ ಇದ್ದಿತು (ಮೊದಲೇ ಆಂಗ್ಲರಿಗಾಗಿ ನಿರ್ಮಿಸಿ, ಅವರು ಹಾಗೇ ಬಿಟ್ಟು ಹೋದದ್ದು; ಅಪ್ಪಟ ಚಳಿಯ ಇಂಗ್ಲೆಂಡಿನಿಂದಲೇ ಬಂದಿದ್ದ ಚಾಳಿ ಅಲ್ಲವೇ!) ಆದರೆ ಕನಿಷ್ಠ ಬೇಕಾಗಿದ್ದ ಪಾತ್ರೆ ಮುಂತಾದ್ದೆಲ್ಲ ಅಲ್ಲೇ ಉಳಿಸಿ, ನಮ್ಮ ನಿರ್ಗಮನದ ನಂತರ ಮನೆ ಕೆಲಸದವಳಿಗೆ ಒಯ್ಯಲು ಹೇಳಿದ್ದೆವು; ಕಾರಣ, ಯುದ್ಧ ಯಾವ ಸ್ತರಕ್ಕೆ ಏರುವುದೋ ತಿಳಿಯದೆ, ರಜೆ ಮುಗಿಸಿ ಬಂದಾಗ, ಮೊಗದಿಶುವಲ್ಲೇ ನಮ್ಮನ್ನು ಉಳಿಸುವಂತೆ ಮನವಿ ಮಾಡಲು ತೀರ್ಮಾನಿಸಿದ್ದೆವು. ನಾವು ಮಾತ್ರ ಅಲ್ಲದೆ, ಉಳಿದೆಲ್ಲ ಭಾರತೀಯರೂ ಹಾಗೇ ಯೋಚಿಸಿ, ನಿರಂತರವಾಗಿ ಹಾರ್ಗೀಸಾದಿಂದ ಪ್ರಯಾಣ ಮಾಡುತ್ತಿದ್ದರು.
ಅಂದು ರಾತ್ರಿ ಸುಮಾರು ಹೊತ್ತು ನಿದ್ದೆ ಹತ್ತಲಿಲ್ಲ. ನಾವು ಬಂದ ಕೇವಲ ಒಂದೇ ವರ್ಷಕ್ಕೆ ಎಂಥ ಸಂಕಷ್ಟಕ್ಕೆ ಸಿಲುಕಿದ್ದಾಯಿತು ಅನ್ನಿಸಿ ಜಿಗುಪ್ಸೆ ಕೊರೆಯತೊಡಗಿತು…ಹೌದು, ಈ ಬಡ ದೇಶಕ್ಕೆ ಯಾವ ಪುರುಷಾರ್ಥ ಸಾಧನೆಗೆ ಇಂಥ ಯುದ್ಧ, ಹುಚ್ಚು ವೆಚ್ಚ ಅಂತೆಲ್ಲ ಯೋಚನೆಗಳು ತಲೆಯೊಳಗಿನ ತಿರುಪು ಮೊಳೆ ಕೊರೆತವಾಗಿ, ಒಂದಿಷ್ಟು ಪೂರ್ವ ಆಫ್ರಿಕಾ ಭೌಗೋಳಿಕ ವಿನ್ಯಾಸ ಹಾಗೂ ಇತಿಹಾಸದ ಬಗ್ಗೆ ತಿಳಿಯಲು ಆರಂಭಿಸಿದೆ.
ಒಗಾದನ್ ಒಟ್ಟಾರೆ ಕಡಿಮೆ ಹಾಗೂ ವಿರಳ ಜನಸಂಖ್ಯೆಯ, ಸಂಚಾರಿ ಪಶುಪಾಲಕರೇ ಹೆಚ್ಚು ಇರುವಂಥ, ಬಹುಮಟ್ಟಿಗೆ ಮರುಭೂಮಿಯಂಥ ಪ್ರದೇಶ. ಅವರಲ್ಲಿ ಹೆಚ್ಚಿನವರು ಸೋಮಾಲಿ ಭಾಷೆ ಮಾತನಾಡುವ ವಿವಿಧ ಬುಡಕಟ್ಟುಗಳವರು. ಮತ್ತು ಸೋಮಾಲಿಯ ಹಾಗೂ ಇಥಿಯೋಪಿಯಾ ನಡುವಿನ ಗಡಿಗೆ ಹೊಂದಿಕೊಂಡ ಬಂಜರು ಹಾಗೂ ಶುಷ್ಕ ಪ್ರದೇಶ. ಒಗಾದನ್ನಿನಲ್ಲಿ ತೈಲ ಮತ್ತು ಗ್ಯಾಸ್ ಇರುವ ಕ್ಷೇತ್ರ ಸಹ ಅಲ್ಲಲ್ಲಿ ಇವೆಯಂತೆ. ಆದರೆ, ರಾಜಕೀಯ ಮತ್ತು ಇತರ ಅಸ್ಥಿರತೆಗಳಿಂದ ಯಾವ ಥರದ ಅಭಿವೃದ್ಧಿಯನ್ನೂ ಕಾಣದ ಅನಾಥ ಪ್ರದೇಶ! ಹತ್ತೊಂಭತ್ತನೇ ಶತಮಾನದಿಂದ ಈ ಪ್ರದೇಶದ ಹಕ್ಕಿಗಾಗಿ, ಇಥಿಯೋಪಿಯ ಹಾಗೂ ಅಂದಿನ ಇಟಲಿ ಆಶ್ರಿತ ಸೋಮಾಲಿಲ್ಯಾಂಡ್ ಪರಸ್ಪರ ಸಾಧಿಸುತ್ತಾ ಬಂದಿವೆ. 1948 ರಲ್ಲಿ ಅಮೆರಿಕದ ಒತ್ತಾಯದ ಮೇರೆಗೆ, ಬ್ರಿಟಿಷರು ಒಗಾದನ್ನನ್ನು ಇಥಿಯೋಪಿಯಾ ವಶಕ್ಕೆ ನಿರಂತರ ಒಪ್ಪಿಸಿಬಿಟ್ಟರು! ಮುಂದೆ, ಸತತವಾಗಿ ಬಂದ ಎಲ್ಲ ಸೋಮಾಲಿ ಸರಕಾರಗಳೂ ಸಹ, ಹಿಂದಿನ ವಸಾಹತುಗಾರ ಅಧಿಕಾರ, ಎರಡೂ ದೇಶಗಳ ನಡುವೆ ಎಳೆದಿದ್ದ ಸಾವಿರ ಕಿ.ಮಿ. ಗಡಿ ರೇಖೆಯ ಬಗ್ಗೆ ತಕರಾರು ಎತ್ತುತ್ತಲೇ ಬಂದಿವೆ. 1964 ರಲ್ಲಿ ಎರಡೂ ದೇಶಗಳು ಒಗಾದನ್ನಿಗಾಗಿ ಮೊದಲ ಯುದ್ಧ ಕಾದಾಡಿದ್ದವು.
ವಿಶಾಲ ಸೋಮಾಲಿಯಾ (Greater Somalia) ಎಂಬ ಪರಿಕಲ್ಪನೆ, ಸೋಮಾಲಿ ಜನರಲ್ಲಿ ಬೇರೂರಿರುವ ಕನಸು! ಬಹುಶಃ ಎಂದಿಗೂ ಅಳಿಯದ ಕನಸು. ಪ್ರಜಾಪ್ರಭುತ್ವ ಏನಾದರೂ ಇದ್ದಿದ್ದರೆ ಅದಕ್ಕಾಗಿ ಒಗ್ಗಟ್ಟಾಗಿ ಹೋರಾಡುವ ಸಾಧ್ಯತೆ ಇದ್ದಿರಲೂ ಸಾಕು. ಆದರೆ ನಿರಂಕುಷ ಸರಕಾರದ ಜೊತೆಗೆ ಹೆಜ್ಜೆ ಯಾರು ತಾನೆ ಹಾಕುವರು? ಅಂಥ ವಿಶಾಲ ಸೋಮಾಲಿಯ ಅಕಸ್ಮಾತ್ ಸಾಕಾರ ಆಗಿದ್ದರೆ, ಅದು ಹೀಗಿರುತ್ತಿತ್ತು:
(೧) ಇದುವರಿಗೆ ಒಟ್ಟಾಗಿ ಒಂದು ದೇಶ ಎಂದು ಹೆಮ್ಮಪಟ್ಟಿದ್ದ, ಸದ್ಯ ತನಗೆ ತಾನೇ ಸ್ವಾಯತ್ತತೆ ಘೋಷಣೆ ಮಾಡಿಕೊಂಡು, ಈಗ ತನ್ನದೇ ಸರಕಾರ ಹೊಂದಿರುವ, ಹಾರ್ಗೀಸಾ ರಾಜಧಾನಿಯಾಗಿರುವ ಉತ್ತರ ಸೋಮಾಲಿಲ್ಯಾಂಡ್.
(೨) ಭಯೋತ್ಪಾದನೆ ಪೀಡಿತ, ಮೊಗದಿಶು ರಾಜಧಾನಿಯಾದ ದಕ್ಷಿಣ ಸೋಮಾಲಿಯ.
(೩) ಸ್ವತಂತ್ರ ದೇಶವಾಗಿರುವ ಜಿಬೂತಿ (Djibouti) ಮೊದಲು ಫ್ರೆಂಚ್ ಆಳ್ವಿಕೆಗೆ ಒಳಪಟ್ಟಿತ್ತು. ಅದರ ರಾಜಧಾನಿ, ಹವಳದ ದಿಣ್ಣೆಗಳುಳ್ಳ ಪ್ರದೇಶವಾದ ಜಿಬೂತಿ ನಗರ.
(೪) ಈಗ ಇಥಿಯೋಪಿಯ ವಶವಾಗಿರುವ, ಒಗಾದನ್ ಮತ್ತು ದೈರ್ ದಾವಾ.
(೫) ಕೆನ್ಯಾ ದೇಶದ ಉತ್ತರವಲಯ ಜಿಲ್ಲೆಯಲ್ಲಿರುವ (Northern Frontier District) ಗಾರಿಸ್ಸಾ, ವಜೀರ್ ಮತ್ತು ಮಂದೇರಾ ವಿಭಾಗಗಳು.
ಹಾಗಾಗಿ ಸೋಮಾಲಿಯಾದಲ್ಲಿ ನಾವಿದ್ದಾಗಲೂ, ಆ ದೇಶದ ಬಾವುಟದಲ್ಲಿ, ಆಫ್ರಿಕಾ ಕೊಂಬು (ಹಾರ್ನ್ ಆಫ್ ಆಫ್ರಿಕ) ಎಂದು ಕರೆಸಿಕೊಳ್ಳುವ ಪೂರ್ವ ಆಫ್ರಿಕದ ಈ ಐದೂ ಭಾಗಗಳನ್ನೂ ಒಳಗೊಂಡಿರುವಂತೆ, ಐದು ಕೋನಗಳುಳ್ಳ ನಕ್ಷತ್ರದ ಚಿತ್ರ ಇರುವುದು! ಛಿದ್ರವಾಗಿ ಮತ್ತೆ ಒಟ್ಟಾಗಲು ಅಸಾಧ್ಯವಾದಂತಿರುವ, ಒಂದೊಂದು ಭಾಗವನ್ನೂ ಒಂದೊಂದು ಕೋನ ಸಾಂಕೇತಿಕವಾಗಿ ವ್ಯಕ್ತಪಡಿಸುತ್ತದೆ.
ಉತ್ತರ ದಕ್ಷಿಣ ಕೂಡಿಕೊಂಡು ಒಂದು ದೇಶ ಆಗಿದ್ದಾಗ ಸಹ, ಆ ಒಕ್ಕೂಟವನ್ನೇ ಉಳಿಯಲು ಬಿಡದಂತಹ ಆಡಳಿತ ನೀಡಿ, ಮಿಲಿಟರಿ ಸಹಕಾರದ ಬೆದರಿಕೆಯಿಂದ ಜನತೆಯನ್ನಿಟ್ಟಿದ್ದ ಸರಕಾರಕ್ಕೆ, ಕೇವಲ ಮತ್ತೆ ವಿಶಾಲ ಸೋಮಾಲಿಯಾದ ಭ್ರಮಾಬಲೆ ಬೀಸಿ ಎಷ್ಟು ಕಾಲ ತಳ್ಳಲು ಸಾಧ್ಯ? ಕೊನೆಗೆ ಆ ಉತ್ತರವೂ ಬೇರ್ಪಟ್ಟು ಸ್ವತಂತ್ರ ಘೋಷಿಸಿದ್ದೂ ಆಯಿತು ಮತ್ತು ಕೆಟ್ಟ ಸರಕಾರವನ್ನು ಕಿತ್ತೊಗೆಯುವ ಸಲುವಾಗಿ, ದಂಗೆಯ ನಂತರ ದಂಗೆಗಳಾಗಿ, ಈಗ ದಕ್ಷಿಣದಲ್ಲಿ ಸರಕಾರ ಅಂತ ಒಂದಿದ್ದರೂ ಸಹ, ಅದರ ಉಳಿಗಾಲ ಎಷ್ಟು ದಿನ. ಅಲ್ಲದೆ, ಭಯೋತ್ಪಾದನೆಯ ನಿರಂತರ ದುಃಸ್ವಪ್ನ ಬೇರೆ! ವಿಶಾಲ ಸೋಮಾಲಿಯ ಮತ್ತು ಅಂತಹ ಕನಸುಗಳು ಕೂಡ ಈಗ ಛಿದ್ರ ನಕ್ಷೆ.
ಅಂತೂ ಹಾರ್ಗೀಸಾ ಆಕಾಶದಲ್ಲಿ ಯುದ್ಧದ ಕಪ್ಪುಮೋಡ ದಟ್ಟವಾಗಿ ಆಚ್ಛಾದಿಸಿದಂತಿದ್ದರೂ, ಅದರ ದೈನಂದಿನ ಆಗುಹೋಗುಗಳ ಸುದ್ದಿ ಒಂದಿಷ್ಟೂ ಅರಿಯದೆ, ಅಥವ ಯಾವ ಮೂಲೆಯಿಂದಲೂ ಸರ್ಕಾರ ಹರಿಯಗೊಡದೆ, ಸಾಮಾನ್ಯ ಜನತೆ ಸಂಪೂರ್ಣ ಖಾಲಿ ಸ್ಲೇಟಿನಂತೆ ಜೀವಿಸುತ್ತಿದ್ದರು. ಆದರೆ, ವಿಮಾನಗಳ ಹಾರಾಟ ದಿನ ಕಳೆದ ಹಾಗೆ ಹೆಚ್ಚು ಹೆಚ್ಚಾಗಿ ಕರ್ಕಷ ಸದ್ದುಮಾಡುತ್ತಿದ್ದವು. ಅದರಿಂದ ಏನೋ ನಡೆದಿದೆ ಎಂದು ತಿಳಿಯುತ್ತಿತ್ತು. ಮೇಲಾಗಿ, ಬೇರೆ ಯಾವ ರೀತಿಯ ಸಂಪರ್ಕಗಳೂ ಇರಲಿಲ್ಲವಾಗಿ, ಒಂದು ರೀತಿಯ ‘ಸಂವಹನ ಕುರುಡು-ಕಿವುಡು’ ಸಹ ಎಲ್ಲರನ್ನೂ ಆವರಿಸಿದ್ದವು! ಒಟ್ಪಿನಲ್ಲಿ, ಜೂಲೈ 1977 ರಲ್ಲಿ ಯುದ್ಧ ಆರಂಭವಾಗಿತ್ತೆಂದು ನಾವು ಹಾರ್ಗೀಸಾ ಬಿಟ್ಟು ಬಂದ ನಂತರವೇ ನಮಗೆ ತಿಳಿದದ್ದು. ಆದರೆ, ಅಲ್ಲಿಯೇ ಇದ್ದಾಗ, ಅದರ ಪ್ರಭಾವ ಅಲ್ಪಮಟ್ಟಿಗೆ ಎಲ್ಲರ ಅರಿವಿಗೆ ಆದದ್ದು ಅಕ್ಟೋಬರ್ ನಂತರವೇ. ಎಲ್ಲ ವಸ್ತುಗಳ ಬೆಲೆ ದಿಢೀರನೆ ಆಕಾಶದತ್ತ ಹಾರುವ, ಏರುವ ಗಾಳಿಪಟವಾಗತೊಡಗಿತ್ತು. ಆ ಗಾಳಿಪಟ ಯಾವ ಘಳಿಗೆಯಲ್ಲಿ ಬೇಕಾದರು ಕಿತ್ತು, ಎತ್ತೆತ್ತಲೋ ಗೊತ್ತಾಗದಂತೆ ಹಾರಿ ಹೋಗಬಹುದಿತ್ತು ಅಥವ ಹರಿದು ಚಿಂದಿಯೂ ಆಗಬಹುದಿತ್ತು. ಏಕೆಂದರೆ ಅಲ್ಲಿಯ ಮಾರುಕಟ್ಟೆಗೆ ಬಹುತೇಕ ಎಲ್ಲ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಹೊರದೇಶಗಳಿಂದಲೇ ಆಮದಾಗಿ ಬರಬೇಕಿತ್ತಲ್ಲವೇ? ಅಂತಹ ಸಮಯದಲ್ಲಿ ಬೇಕೆಂದರೂ, ಎಷ್ಟೇ ದುಬಾರಿಯಾದರೂ ಕಾಸು ತೆತ್ತರೂ ಏನು ತಾನೆ ಕೊಳ್ಳಲಾಗುತ್ತಿತು?
ಮುಂದುವರೆಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ