ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೨

— ೧೨ —

ಒಗಾದನ್ ಯುದ್ಧ! – 3

ವಿಮಾನ ನಿಲ್ದಾಣದಿಂದ ಮೊದಲ ದಿನ, ಸೀಟುಗಳು ದೊರಕದೆ ಮರಳಿ ಮನೆಗೆ ಬಂದು, ಇದ್ದುದರಲ್ಲಿ ಏನೋ ಬೇಯಿಸಿ ತಿಂದು ಮಲಗಿಯೂ ಬಹಳ ಸಮಯ ನಿದ್ದೆ ಬರದೆ ಹೊರಳಾಡಿ, ಕೊನೆಗೆ ಬೆಳಗಿನಿಂದ ನಡೆದ ಪ್ರಹಸನದ ದುಗುಡದಿಂದಲೇ ಸುಸ್ತಾಗಿದ್ದ ಕಾರಣವೋ ಎಂಬಂತೆ, ಅಂತೂ ರಾತ್ರಿ ಸರಿ ಹೊತ್ತಿಗೆ ನಿದ್ದೆ ಹತ್ತಿ, ಏಳುವಾಗ ದಡಬಡ. ಬೆಳಿಗ್ಗೆ ಯಥಾಪ್ರಕಾರ ಗಂಟುಮೂಟೆ ಗಾಡಿಗೆ ತುಂಬಿ ಮರುಪ್ರಯತ್ನಕ್ಕೆ ಹೋಗಿ, ಆ ದಿನವೂ ಇಲ್ಲದೆ ವಾಪಸ್ಸು ಬಂದದ್ದಾಯಿತು. ಹೀಗೆ ಸುಮಾರು ನಾಲ್ಕೈದು ದಿನದ ಸಾಹಸದ ನಂತರ, ಕೊನೆಗೂ ಆ ಒಂದು ದಿನ ಬಂದೇಬಿಟ್ಟು, ಅಂತೂ ಸೈನಿಕ ವಿಮಾನ ಏರಿದೆವು. ಐಷಾರಾಮಿ ಪ್ರಯಾಣಿಕ ವಿಮಾನದ ಆಂತರಿಕ ಕಂಡಿದ್ದ ನಮಗೆ, ಹೆಂಡತಿ ಮತ್ತು ಅತ್ತಿಗೆಯವರಿಗೆ ಬಹುಶಃ ಮುಖ್ಯವಾಗಿ, ಪ್ರಥಮ ಬಾರಿ ಇಂಥ ವಿಮಾನದ ಒಳಗುಟ್ಟು ನೋಡಿ ಆಶಾಭಂಗ ಖಂಡಿತ ಆದರೂ, ಸದ್ಯ ಯುದ್ಧಭೂಮಿ ತೊರೆದು ಮನೆಯತ್ತ ಹೊರಟಿದ್ದಕ್ಕೆ ಅತ್ಯಂತ ಆನಂದ ಅಂತೂ ಆಗಿತ್ತು. ಹೇಗಾದರಿರಲಿ ತಲುಪಿದರೆ ಸಾಕು ಎಂದು, ಇಲ್ಲದಿದ್ದರೆ ಮುಂದೆ ಇಲ್ಲಿ ಯಾವ ಪರಿಸ್ಥಿತಿ ವಕ್ಕರಿಸುವುದೋ ಏನೋ!

ಕಾರ್ಗೋ ವಿಮಾನ

ಎಷ್ಟು ಜನ ಸರಕು ಸಾಗಣೆ ಸೈನಿಕ ವಿಮಾನ ಹತ್ತಿರಬಹುದೋ ತಿಳಿಯೆ? ಒಳಗೆ ವಿಮಾನ ಚಾಲಕರ ಕೊಠಡಿ (ಪೈಲಟ್ಸ್ ಕಾಕ್ ಪಿಟ್) ನಂತರ, ಇಡೀ ವಿಮಾನದ (ಕ್ಯಾಬಿನ್) ಉದ್ದಕ್ಕೂ ಎರಡೂ ಕಡೆ ರೆಕ್ಸಿನ್ ಹಾಸಿನ ಮೆತ್ತೆ ಬೆಂಚುಗಳು. ಕೂತವರು ಸುರಕ್ಷತೆಗಾಗಿ ಹಿಡಿದುಕೊಳ್ಳಲು ತಲೆಯಮೇಲೆ ಬಸ್ಸುಗಳಲ್ಲಿರುವಂತೆ, ಅದೇ ರೆಕ್ಸಿನ್ ಹಿಡಿಕೆಗಳು, ಅಷ್ಟೆ! ಅಂತೂ ಆಸೀನರಾಗಿ, ಟೇಕ್ ಆಫ್ ಸಹ ಆಯಿತು. ಎರಡು ಬದಿಗಳಲ್ಲೂ ಒತ್ತೊತ್ತಿ ಕೂತ ಪ್ರಯಾಣಿಕರು – ಅಷ್ಟೊಂದು ಮಂದಿ ಹಾರ್ಗೀಸಾ ತೊರೆಯುತ್ತಿದ್ದರು! ಒಂದು ಬದಿಗೆ ಅಣ್ಣ, ಇನ್ನೊಂದು ಕಡೆ ನಾನು. ಮಧ್ಯೆ ಅತ್ತಿಗೆ ಮತ್ತು ಅವರ ಮಗಳು ಪಾವನ, ನನ್ನ ಹಂಡತಿ, ಮಗು. ಕೊನೆಗೂ ಮೊಗದಿಶು ತಲಪಿ, ಒಂದು ದಿನದ ಮಟ್ಟಿಗೆ ಹೋಟೆಲ್ ಸೇರಿದೆವು. ಪ್ರಯಾಣದ ಮಧ್ಯೆ ಸುಕೃತಕ್ಕೆ ಯಾವ ತೊಡಕೂ ಆಗದೆ ಬಂದಿದ್ದೆವು. ಮಾರನೇ ದಿನವೇ ನಮ್ಮ ನೈರೋಬಿ ಫ್ಲೈಟ್. ಹತ್ತು ಗಂಟೆ ಹೊತ್ತಿಗೆ, ಆರೋಗ್ಯ ಇಲಾಖೆ ಕಾರನ್ನೂ ಕಳಿಸಿ ವಿಮಾನ ನಿಲ್ದಾಣಕ್ಕೆ ಬಿಟ್ಟುಕೊಟ್ಟರು. ಮೊಗದಿಶುವಿಂದ ನೈರೋಬಿಗೆ, ಸೋಮಾಲಿ ಏರ್ ಲೈನ್ಸ್ ಮತ್ತು ಒಂದು ಗಂಟೆ ನಲವತ್ತು ನಿಮಿಷದ ಪ್ರಯಾಣ. ಅಲ್ಲಿಂದ ಏರ್ ಇಂಡಿಯ. ನೈರೋಬಿ ನಗರ ಮೊದಲ ಸಲ ಕಂಡು, ಆಫ್ರಿಕಾ ಖಂಡದಲ್ಲಿ ಇಂಥ ಸುಂದರ ನಗರವೇ ಅನ್ನಿಸಿತು. ಅಲ್ಲಿ ಕೂಡ ಒಂದು ದಿನ ತಂಗಿದ್ದು, ಮರುದಿನ ಬಾಂಬೆಗೆ. ಏರ್ ಇಂಡಿಯ, ನೈರೋಬಿಯಲ್ಲಿ ‘ನ್ಯೂ ಸ್ಟ್ಯಾನ್ಲೆ’ ಎಂಬ ತಾರಾ ಹೋಟೆಲಿನಲ್ಲಿ ಕೊಠಡಿಗಳನ್ನು ಕೊಡುವ ರೂಢಿ. ನೈರೋಬಿ ಎಷ್ಟು ಸುಂದರವೋ, ಸಂಜೆಯ ಹೊತ್ತು ಅಷ್ಟೇ ಅಪಾಯಕರ. ಕಳ್ಳತನದಿಂದ ಹಿಡಿದು ಎಲ್ಲ ಥರದ ದುಷ್ಕೃತ್ಯಗಳೂ ಅಲ್ಲಿ ಸಾಧ್ಯ. ಹಾಗಾಗಿ, ಹೋಟೆಲಿನ ಪ್ರತಿ ಕೊಠಡಿಯಲ್ಲೂ, ಸಂಜೆ ಆರು ಘಂಟೆಯ ನಂತರ ಹೊರಗೆ ಹೋಗದಹಾಗೆ ಬಾಗಿಲ ಹಿಂದೆ, ಎಚ್ಚರಿಕೆಯ ಸೂಚನಾಪತ್ರ ಅಂಟಿಸಿದ್ದರು! ಗನ್ ಫೈಟ್ ಸದ್ದೂ ಕೇಳಿದ್ದೇವೆ ಒಮ್ಮೆ. ಈಗ ಹೇಗೋ ತಿಳಿಯದು. ಮೊದಲ ವರ್ಷದ ಹೊರದೇಶದ ಕೆಲಸ ಮುಗಿಸಿ, ಕೊನೆಗೂ ತಾಯ್ನಾಡು ತಲಪಿದ್ದಾಯಿತು!

ರಷ್ಯಾ ಸೈನಿಕರು ಒಗಾದನ್ ಯುದ್ಧ ಸಮಯದಲ್ಲಿ

ಆಶ್ಚರ್ಯ ಎಂದರೆ, ಒಗಾದನ್ ಯುದ್ಧ ಈಗ ಪೂರ್ಣಪ್ರಮಾಣ ಆರಂಭ ಆಗಿದ್ದಿರಲೂಬಹುದು, ಎಂದು ರಜೆಯಲ್ಲಿದ್ದಾಗ ಆಗಾಗ ಅನ್ನಿಸುತ್ತಿದ್ದರೂ ಸಹ, ತಿಳಿಯುವುದಾದರೂ ಹೇಗೆ? ಮೇಲಾಗಿ, ನಮ್ಮಲ್ಲಿಯ ಪತ್ರಿಕೆಗಳಿಗೆ ಅದು ಮುಖ್ಯ ಸುದ್ದಿ ಅಲ್ಲದಂತೆ, ಏನೂ ಪ್ರಕಟವಾಗುತ್ತಿರಲಿಲ್ಲ; ಅಕಸ್ಮಾತ್ ಒಮ್ಮೊಮ್ಮೆ ಆದರೂ, ಅದು ಕಾಲಮ್ ತುಂಬುವ ಜಾಗಕ್ಕೆ ಮೀಸಲು, ಅಷ್ಟೆ! ಹಾಗಾಗಿ, ನಾವು ಹಿಂತಿರುಗಿ ಮೊಗದಿಶು ತಲಪುವ ತನಕ ಹೆಚ್ಚೇನೂ ಗೊತ್ತಿರಲಿಲ್ಲ. ಮೊಗದಿಶುಗೆ ಹಿಂತಿರುಗಿದ ಮೇಲೆ, ಅಣ್ಣ ಹಾಗೂ ನಾನು, ರಾಜಧಾನಿಗೇ ಎಲ್ಲ ಭಾರತೀಯರಂತೆ ವರ್ಗ ಮಾಡಿಸಿಕೊಂಡು, 1977ರ ಡಿಸೆಂಬರ್ ಮೊದಲ ವಾರದ ಹೊತ್ತಿಗೆ, ಸಂಪೂರ್ಣ ಕೆಲಸದಲ್ಲಿ ಮಗ್ನರಾಗಿದ್ದೆವು.

ಸೈನ್ಯದ ರವಾನೆ

ಜೂಲೈ 1977 ರಲ್ಲಿ, ಅಧ್ಯಕ್ಷರಾದ ಮಹಮ್ಮದ್ ಸಿಯಾದ್ ಬರ್ರೆ ಅವರ ಮಾರ್ಗದರ್ಶನದಲ್ಲಿ, ಸೋಮಾಲೀ ರಾಷ್ಟ್ರೀಯ ಸೈನ್ಯದ ಮೂವತ್ತೈದು ಸಾವಿರ ಸೈನಿಕರ ಜೊತೆಗೆ, ಪಶ್ಚಿಮ ಸೋಮಾಲಿಯಾ ವಿಮೋಚನಾ ಸೇನೆಯ ಹದಿನೈದು ಸಾವಿರ ಮಂದಿ ಒಟ್ಟಾಗಿ, ಇಥಿಯೋಪಿಯಾದ ಒಗಾದನ್ ಪ್ರದೇಶಕ್ಕೆ ನುಗ್ಗಿದ್ದರು. (ಇಥಿಯೋಪಿಯಾ ದೇಶಕ್ಕೆ 1948 ರಲ್ಲಿ, ಬ್ರಿಟಿಷರು ಒಗಾದನ್ ಪ್ರಾಂತ್ಯವನ್ನು ಅಮೆರಿಕ ಒತ್ತಡಕ್ಕೆ ಮಣಿದು ಬಿಟ್ಟುಕೊಟ್ಟಿದ್ದರು!)
ರಷಿಯನ್ನರು ತಮ್ಮೊಡನೆ ಇರುವ ಧೈರ್ಯ ಬೇರೆ, ಸೋಮಾಲಿಯಾ ಆಡಳಿತಕ್ಕೆ ಹೆಚ್ಚು ವಿಶ್ವಾಸ ತಂದಿತ್ತು. ಆದರೆ, ಅದು ಹಾಗಾಗಲೇ ಇಲ್ಲ. ರಷಿಯನ್ ಆಡಳಿತ ಈ ಯುದ್ಧ ನಿಲ್ಲಿಸುವಂತೆ ಸಿಯಾದ್ ಬರ್ರೆಗೆ ಉಪದೇಶಿಸಿದರೂ, ಅವರು ಅದಕ್ಕೆ ಸೊಪ್ಪುಹಾಕದೆ ಯುದ್ಧಕ್ಕೆ ಮುಂದಾದಾಗ, ರಷಿಯಾ ದೇಶ ಇಥಿಯೋಪಿಯಾಕ್ಕೆ ಸಹಾಯ ಮಾಡತೊಡಗಿತು. ಇದರಿಂದ ರೇಗಿದ ಸಿಯಾದ್ ಬರ್ರೆ, ರಷೀಯನ್ನರನ್ನು ದೇಶ ಬಿಟ್ಟು ತೊಲಗಿಸಿ, ಏಕಾಂಗಿ ಆಗಿ ಯುದ್ಧ ಮುಂದುವರೆಸಿದರು.

ಕ್ಯೂಬಾ ಅಧ್ಯಕ್ಷ ಫಾಡೆಲ್ ಕ್ಯಾಸ್ಟ್ರೊ

ಈ ನಡುವೆ, ಕ್ಯೂಬಾ ದೇಶದ ಅಧ್ಯಕ್ಷರಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಅವರಿಗೆ, ಸೋಮಾಲಿಯಾ ಅಧ್ಯಕ್ಷರಾದ ಸಿಯಾದ್ ಬರ್ರೆ ತನ್ನ ಸಮಾಜವಾದಿ ಮಾರ್ಗಕ್ಕೆ ಬೆನ್ನು ತೋರಿಸಿದ್ದು ಮತ್ತು ಬಹುಶಃ ರಷ್ಯನ್ನರನ್ನು ತಮ್ಮ ದೇಶ ತೊರೆಸಿದ್ದು ರುಚಿಸದೆ, ಈ ಯುದ್ಧದಲ್ಲಿ ಇಥಿಯೋಪಿಯಾ ದೇಶದ ಅಧ್ಯಕ್ಷ ಮೆಂಗಿಷ್ತು ಹೈಲೆ ಮರಿಯನ್ ಅವರನ್ನು ಬೆಂಬಲಿಸಲು ನಿರ್ಧರಿಸಿ, ತಮ್ಮ ದೇಶದ 15,000 ಜನ ಬಲದ ಸೈನ್ಯವನ್ನು ಒಗಾದನ್ ಯುದ್ಧಕ್ಕಾಗಿ ಕಳಿಸಿದರು. ಕ್ಯೂಬಾ ದೇಶದ ಇಂಗಿತ 1975-76 ರಲ್ಲಿನ ತನ್ನ ಮೊದಲ ಜಯವಾಗಿದ್ದ ಅಂಗೋಲ ನಂತರ, ಇದನ್ನು ಎರಡನೆ ಆಫ್ರಿಕಾ ಗೆಲುವಾಗಿಸುವುದಾಗಿತ್ತು. ಅಷ್ಟರಲ್ಲಿ ಇಥಿಯೋಪಿಯಾ ಅಧ್ಯಕ್ಷ ಮೆಂಗಿಷ್ತು ಅವರಿಗೆ ಈ ಯುದ್ಧ ಕಷ್ಟ ಆಗುತ್ತಿದೆ ಎಂಬ ಅರಿವೂ ಆಗಿ, ಈ ಯುದ್ಧ ಸೋತು ಒಗಾದನ್ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದ್ದುದು, ಫಿಡೆಲ್ ಕ್ಯಾಸ್ಟ್ರೊ ಅವರ ಅನಿರೀಕ್ಷಿತ ಸಹಾಯದಿಂದ ದಿಢೀರನೆ ಬದಲಾಗಿಹೋಯಿತು. ಕ್ಯೂಬಾ ಅಲ್ಲದೆ, ಸೋವಿಯತ್ ತುಕಡಿ ಸಹ ಮೆಂಗಿಷ್ತು ಸಹಾಯಕ್ಕೆ ಬಂದಿತ್ತು. ಮತ್ತು ಸುಮಾರು ನೂರು ಕೋಟಿ ರೂಪಾಯಷ್ಟು (ಒಂದು ಬಿಲಿಯನ್ ಡಾಲರ್) ಸಾಮಗ್ರಿ ಕೂಡ ಸರಬರಾಜಾಗಿ, ಯುದ್ಧದ ಗತಿಯೇ ಬದಲಾಯಿತು.

ವಾಸ್ತವವಾಗಿ ಬ್ರಿಟಿಷರಿಗಿದ್ದ ಇಚ್ಛೆಯ ಪ್ರಕಾರ, ಬ್ರಿಟಿಷ್ ಒಗಾದನ್ ಸಂಗಡ, ತಮ್ಮದೇ ಆಳ್ವಿಕೆಗೆ ಒಳಪಟ್ಟಿದ್ದ ಸೋಮಾಲಿಲ್ಯಾಂಡ್, ಹಾಗೂ ಇಟಾಲಿಯನ್ ವಸಾಹತಿಗೆ ಸೇರಿದ್ದ ಇನ್ನೊಂದು ಸೋಮಾಲಿಲ್ಯಾಂಡ್ ಭಾಗ, ಎಲ್ಲವನ್ನೂ ಒಟ್ಟು ಸೇರಿಸಿ ಒಂದೇ ಒಂದು ಸಂಘಟಿತ ರಾಷ್ಟ್ರವೆಂದು ಘೋಷಿಸುವುದಾಗಿತ್ತು. ಆದರೆ ಅದನ್ನು ಅಂದಿಗೂ ಮತ್ತು ಇಂದಿಗೂ ಸಾಧಿಸಲು ಆಗಲೇ ಇಲ್ಲ!

ಜನರಲ್ ‘ವಾಸಿಲಿ ಪೆಟ್ರೋವ್’ ಅವರ ನೇತೃತ್ವದಲ್ಲಿ, ಕ್ಯೂಬಾದ ಶಸ್ತ್ರಸಜ್ಜಿತ ಪಡೆಯು, 1978ರ ಜನವರಿ 23 ರಂದು, ಸೋಮಾಲಿಯಾ ಸೈನ್ಯಕ್ಕೆ ಅತ್ಯಂತ ಹೆಚ್ಚಿನ ಹಾನಿಯನ್ನು ಉಂಟುಮಾಡಿ, ಯುದ್ಧ ಆರಂಭ ಆದಂದಿನಿಂದ ಎಂದೆಂದೂ ಸೋಮಾಲಿಯಾ ಕಂಡಿರಿಯದಂಥ ನಷ್ಟ ಅನುಭವಿಸುವಂತೆ ಮಾಡಿದರು!

ಸೋಮಾಲಿಯಾ ಸೈನ್ಯದ ಮಹಿಳಾ ವಿಭಾಗ

ಇಥಿಯೋಪಿಯಾ ಹಾಗೂ ಕ್ಯೂಬಾ ಸೈನ್ಯಗಳು, 300 ಯುದ್ಧ ಟ್ಯಾಂಕ್, 156 ಫಿರಂಗಿ ಮತ್ತು 46 ಕಾಳಗ ವಿಮಾನಗಳ ಸಹಾಯದಿಂದ, ಹರಾರ್, ದಿರಿಡಾವ ಮತ್ತು ಜಿಜಿಗಾ ಎಂಬ ಒಗಾದನ್ ಸ್ಥಳಗಳಲ್ಲಿ ಪ್ರಬಲ ಮೇಲುಗೈ ಸಾಧಿಸಿ, ಸೋಮಾಲಿ ಸೈನ್ಯವನ್ನು ವ್ಯವಸ್ಥಿತವಾಗಿ ಒಗಾದನ್ನಿನ ಗಡಿಯಿಂದಾಚೆಗೆ ಅಟ್ಟಿ, ಮಾರ್ಚಿ 23, 1978ರ ಹೊತ್ತಿಗೆ, ನಾಲ್ಕನೇ ಮೂರರಷ್ಟು ಒಗಾದನ್ನನ್ನು ಇಥಿಯೋಪಿಯನ್ನರು ಮರುಸ್ವಾಧೀನ ಪಡೆದಿದ್ದರು. ಅಲ್ಲಿಗೆ, ಒಗಾದನ್ ಯುದ್ಧ ಅಧಿಕೃತ ಅಂತ್ಯ ತಲಪಿತ್ತು!

ಆ ಯುದ್ಧದಲ್ಲಿ, ಸೋಮಾಲಿಯಾ ರಾಷ್ಟ್ರೀಯ ಪಡೆಯ ಮೂರನೆ ಒಂದು ಭಾಗ ನೆಲಕ್ಕುರುಳಿ ಅಳಿದು ಹೋಗಿತ್ತು. ಸೋಮಾಲಿಯಾದ ವಾಯುಪಡೆ ಸಹ ಧ್ವಂಸವಾಗಿತ್ತು. ಆದ್ದರಿಂದ ಆ ಯುದ್ಧದ ಪರಿಣಾಮ ಸೋಮಾಲಿಯಾ ಸೈನ್ಯದ ನೈತಿಕ ಅಧಃಪತನಕ್ಕೆ ಕಾರಣವಾಯಿತು ಅಲ್ಲದೆ, ಇಡೀ ಸೈನ್ಯವೇ ಸಂಪೂರ್ಣ ಅವ್ಯವಸ್ಥೆಯತ್ತ ತಲಪಿತ್ತು! ಅಷ್ಟೇ ಸಾಲದೆಂಬಂತೆ, ಒಟ್ಟಾರೆ ದೇಶದ ಜನತೆಯನ್ನು ಒಂದು ರೀತಿಯಲ್ಲಿ ಕೋಪದ ಮಡುವಿನಲ್ಲಿ ಮುಳುಗಿಸಿತ್ತು. ಇಷ್ಟೂ ಕಾರಣಗಳ ಒತ್ತಡವು ಕಾಲ ಕಳೆದಹಾಗೆ, ನಿಧಾನವಾಗಿ ವೃತ್ತಾಕಾರ ವಿಷದಂತೆ ಸುತ್ತಿ ಸುತ್ತಿ ಬಂಡಾಯದತ್ತ ಎಳೆದು, ಕೊನೆಗೆ, 1991ರಲ್ಲಿ ಅತ್ಯಂತ ಹೇಯ ಆಂತರ್ಯುದ್ಧಕ್ಕೆ ದಾರಿ ಆಯಿತು!

1978, ನವೆಂಬರ್ ತಿಂಗಳಲ್ಲಿ ನಾವು ಮೊಗದಿಶುವಲ್ಲಿ ಯಥಾಪ್ರಕಾರ, ಹಾರ್ಗೀಸಾದ ತಂಪು ವಾತಾವರಣ ವಿಧಿಯಿಲ್ಲದೆ ಸ್ವಯಂ ತೊರೆದು, ಇಲ್ಲಿಯ ಸಮುದ್ರತೀರದ ಸೆಕೆ ಮತ್ತು ಬೆವರು ಹರಿಸುವ ಪರಿಸ್ಥಿತಿಗೆ ಹೊಂದಿಕೊಂಡಾಗಿತ್ತು. ಮೊಗದಿಶು ಹಿಂದೂಮಹಾಸಾಗರದ ತೀರದಲ್ಲಿದೆ. ಯುದ್ಧ ನಡೆಯುವ ಕಡೆ ನಡೆಯುತ್ತಿತ್ತು ಅನ್ನುವ ಹಾಗಿದ್ದೂ ಸಹ, ಅದರ ಪರಿಣಾಮವಾಗಲೀ, ಸುದ್ದಿ ಸಮಾಚಾರವಾಗಲೀ ಒಂದು ಗುಲಗಂಜಿಯಷ್ಟೂ ತಿಳಿಯದೆ, ಎಲ್ಲ ಸರಿಯಾಗಿದೆ ಎಂಬ ಭ್ರಮಾಲೋಕದೊಳಗೆ ಇದ್ದುದಂತೂ ನಿಜ! ‘ಹಿದ್ದಿಕ್ತಾ ಅಕ್ತೋಬರ್’ ಎಂಬ ಸ್ಥಳೀಯ ಸೋಮಾಲಿ ಹಾಗೂ ‘ಹೇಗನ್’ ಎಂಬ ಆಂಗ್ಲ ದೈನಂದಿನ ಪತ್ರಿಕೆಗಳು ಪ್ರಸರಣೆಯಲ್ಲಿದ್ದವು. ಆದರೆ ಅವುಗಳ ಸಂಪೊರ್ಣ ಹಿಡಿತ ಸರಕಾರದ ಕಾಣದ ಕೈಗಳಲ್ಲಿ! ಹಾಗಾಗಿ ಅವುಗಳಲ್ಲೂ ಏನೂ ತಿಳಿಯುವ ಹಾಗಿರಲಿಲ್ಲ. ದಶಕಕ್ಕೂ ಮಿಕ್ಕಿದ ಕಾಲ ಮಿಂಚಿಹೋದ ನಂತರವೇ ನಮ್ಮೆಲ್ಲರ ಅರಿವಿಗೆ ಅದರ ಪ್ರಬಲ ಪ್ರಭಾವ ನಿಧಾನವಾಗಿ ಜಿನುಗಿದಂತೆ ಬಂದದ್ದು. ಹೇಗಿದೆ ನೋಡಿ ಮಿಲಿಟರಿಯ, ಪ್ರಜಾಪ್ರಭುತ್ವದ ತಂಟೆ ಇಲ್ಲದ ಸರಕಾರಗಳ ಹಿಡಿತ!

ಇದಾಗಿತ್ತು ನೋಡಿ ನಾವು ಅಷ್ಟಿಷ್ಟು ಕಂಡುಂಡ ಒಗಾದನ್ ಯುದ್ಧದ ರುಚಿ!

ಮುಂದಿನವಾರ ಮುಂದುವರೆಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

1 Comment

  • ಕಥೆ ಬಹಳ ಚೆನ್ನಾಗಿದೆ. ಅಭಿನಂದನೆಗಳು

Leave a Reply

Your email address will not be published. Required fields are marked *