–ಮೊಗದಿಶುವಿನಲ್ಲಿನ ಮೊದಲ ಮನೆ (ಕಳ್ಳರ ಹಾವಳಿ)–
ನಾನು ಈ ಮೊದಲೇ ನನ್ನ ಹಿಂದಿನ ಸಂಚಿಕೆಯೊಂದರಲ್ಲಿ, ಇಂಗ್ಲೆಂಡಿಗೆ ಸಾಧ್ಯವಾದರೆ ಪ್ರಯತ್ನಿಸಿ ಹೋಗುವ ಇಚ್ಛೆಯ ಬಗ್ಗೆ ತಿಳಿಸಿದ್ದೆ. ಅದಕ್ಕಾಗಿ, ಅರ್ಜಿಯ ಸಂಗಡ ಬ್ರಿಟಿಷ್ ಪೌಂಡ್ ಸ್ಟರ್ಲಿಂಗುಗಳ ಡ್ರಾಫ್ಟ್ ಕೂಡ ಕಳಿಸಬೇಕಾಗಿತ್ತು. ಆದರೆ ಯುದ್ಧನಿರತ ಹಾರ್ಗೀಸಾದಲ್ಲಿ ಎಲ್ಲ ಪ್ರಕಾರದ ಸಂಪರ್ಕಗಳೂ ಒಮ್ಮೆಲೇ ಕಡಿತವಾಗಿದ್ದುದರಿಂದ ಅದು ಅಸಾಧ್ಯವಾಗಿತ್ತು. ಹಾಗಾಗಿ ರಜೆಗೆ ಹೋದಾಗ ಭಾರತದಿಂದಲೇ ಕಳಿಸಲು ಯೋಚಿಸಿದ್ದೆ ಎಂದು.
ಭಾರತದಲ್ಲಿ ನನ್ನ ಗೆಳೆಯನನ್ನು ವಿಚಾರಿಸಲಾಗಿ, ಅದರ ಅಂತಿಮ ಗಡುವು ಮುಗಿದು ಕೇವಲ ಎರಡು ದಿನ ಆಯಿತು ಎಂದಿದ್ದ. ಆದ್ದರಿಂದ ನಾನಿದ್ದ ಹಾರ್ಗೀಸಾದ ವಿಷಮ ಪರಿಸ್ಥಿತಿಯನ್ನು ವಿವರಿಸಿ ಮತ್ತೊಂದು ಪತ್ರವನ್ನು ಜನರಲ್ ಮೆಡಿಕಲ್ ಕೌನ್ಸಿಲ್ಲಿಗೆ ಬರೆದಿದ್ದೆ. ಅದಕ್ಕೆ ಉತ್ತರವಾಗಿ ಇಂಗ್ಲೆಂಡ್ ನಿಯಮಗಳ ಅನ್ವಯ ಕೇವಲ ಒಂದೇ ಒಂದು ಘಂಟೆ ತಡವಾದರೂ, ಅಂತಹ ಅರ್ಜಿಗಳಿಗೆ ಮನ್ನಣೆ ಅಸಾಧ್ಯ ಎಂಬ ಉತ್ತರ ಬಂದಿತ್ತು. ಅಂದಿನ ಯುದ್ಧನಿರತ ಸೋಮಾಲಿಯಾದಲ್ಲಿ ಪಶ್ಚಿಮದತ್ತ ಹಾರುವ ನನ್ನ ಕನಸಿಗೆ ಇನ್ನೇನು ರೆಕ್ಕೆಪುಕ್ಕಗಳನ್ನು ಹೊಲೆದ ಹಾಗೆಯೇ ಅನ್ನಿಸಿತ್ತು. ಅಂತಹ ಅದೆಷ್ಟು ಜನರ ಅವೆಷ್ಟು ಕನಸುಗಳನ್ನು ಈ ಯುದ್ಧ ಮತ್ತು ಜಗತ್ತಿನೆಲ್ಲೆಡೆ ಜರುಗುವ ಇಂಥ ಯಾರೂ ಬಯಸದ ಯುದ್ಧಗಳಿಂದ ಏನೆಲ್ಲ ಅನಾಹುತಕ್ಕೆ ದಾರಿಯಾಗಬಹುದು ಎಂಬ ಯೋಚನೆ ಆಗಲೂ ನನ್ನನ್ನು ನೋವಿನ ಗುಂಗಿಗೆ ಎಳೆದಿತ್ತು ಮತ್ತು ಇಂದಿಗೂ ಸಹ!
ರಜೆ ಮುಗಿಸಿ ಹಿಂತಿರುಗಿದ ನಂತರ ಮೊಗದಿಶುವಲ್ಲೇ ಕೆಲಸ ಮಾಡುವ ಅನುಮತಿ ನಮ್ಮ ಹಾಗೆ ಹಾರ್ಗೀಸಾ ಬಿಟ್ಟವರೆಲ್ಲರಿಗೂ ದೊರಕಿತ್ತು. ಮೊದಲೇ ಇನ್ನೂ ಯುದ್ಧದ ಕುದಿವ ಕಡಾಯಿಯ ಮಧ್ಯದಿಂದ ಎದ್ದು ಬಂದಿದ್ದವರಲ್ಲವೇ? ನನ್ನ ಮತ್ತು ಅಣ್ಣನ ಎರಡೂ ಕುಟುಂಬಗಳಿಗೆ ಐದು ದಿನಗಳ ಮಟ್ಟಿಗೆ ಶಬೆಲ್ಲಿ ಹೋಟೆಲಿನಲ್ಲಿ ಅಧಿಕೃತವಾಗಿ ಮತ್ತೆ ವಾಸ್ತವ್ಯವಾಯ್ತು. ಅಷ್ಟರೊಳಗೆ ಮನೆ ಹುಡುಕಬೇಕಿತ್ತು. ಮಾರನೆ ದಿನ ಸಂಜೆಯೇ ಡಾ. ಜಾರ್ಜ್ ವರ್ಗೀಸ್ ಅವರ ಮನೆಯ ಗಂಟೆ ಬಾರಿಸಿದೆವು. ವರ್ಗೀಸರಿಗೆ ನಮ್ಮನ್ನು ಕಂಡು ಅಚ್ಚರಿ ಮತ್ತು ಸಂತೋಷ. ನಾನು ಅಣ್ಣ, ಅತ್ತಿಗೆ, ಕಮಲ ಮತ್ತು ಇಬ್ಬರು ಮಕ್ಕಳನ್ನೂ ಹಾಗೂ ಅವರು ಮಡದಿ, ಆನ್ (Ann) ಪರಿಚಯಿಸಿದ್ದಾಯಿತು. ಔಪಚಾರಿಕ ಮಾತೆಲ್ಲ ಮುಗಿಸಿ, ಮನೆ ಬೇಕಿದ್ದ ವಿಷಯ ಎತ್ತಲು, ಅವರ ಪಕ್ಕದ ಅದೇ ಸಂಕೀರ್ಣಕ್ಕೇ ಹೊಂದಿಕೊಂಡಿದ್ದ, ಎರಡು ಬೆಡ್ ರೂಮಿನದ್ದು ಖಾಲಿ ಇರುವುದನ್ನು ತಿಳಿಸಿ, ನಾಳೆಯೇ ನೋಡಲು ಬನ್ನಿ ಎಂದು ಹೇಳಿ ಬೀಳ್ಕೊಟ್ಟರು.
ಒಟ್ಟಿನಲ್ಲಿ ಮೊಗದಿಶುವಿನ ಮೊದಲ ಬಾಡಿಗೆ ಮನೆಯನ್ನು ಡಾ. ವರ್ಗೀಸ್ ಸಹಾಯದಿಂದ ಸೇರಿಕೊಂಡಿದ್ದೆವು. ಮೊದಲ ಮಹಡಿಯಲ್ಲಿದ್ದ ಮನೆಯ ಒಳಾಂಗಣದಲ್ಲಿ ವಿಶಾಲವಾಗಿದ್ದ ಉದ್ದವಾದ ಹಾಲ್, ಎರಡು ದೊಡ್ಡ ಮಲಗುವ ಕೋಣೆಗಳು, ಅಡಿಗೆ ಮನೆ, ಸ್ನಾನಕ್ಕೆ ಹಾಗೂ ಬಟ್ಟೆ ಒಗೆತಕ್ಕೆ ಬೇರೆ ಬೇರೆ ಕೊಠಡಿಗಳು, ಇದ್ದು ನಮ್ಮ ಎರಡು ಕುಟುಂಬಗಳಿಗೆ ಸಾಕಾಗಿತ್ತು.
ನಮ್ಮ ಮನೆಯ ಎದುರಲ್ಲಿ ಕೇರಳದ ಡಾ. ಜೋಸೆಫ್ ಎಂಬ ವೈದ್ಯರಿದ್ದು, ಅವರೂ ಸಹ ಹಾರ್ಗೀಸಾದಲ್ಲಿದ್ದು ಬಂದವರೇ. ಎರಡೂ ಮನೆಗಳಿಗೂ ಒಂದೇ ಮಟ್ಟಿಲು. ನಮ್ಮ ಕಿಟಕಿ ಎದುರು ರಸ್ತೆಯ ಆಚೆ ಬದಿಗೆ, ಯಾವಾಗಲೂ ಮುಚ್ಚಿರುವ ಒಂದು ಕಬ್ಬಿಣದ ವಿಶಾಲವಾದ, ಸುಮಾರು ಎಂಟು ಅಡಿ ಎತ್ತರದ ಬಾಗಿಲು. ಕ್ರಮೇಣ ನಮಗೆ ತಿಳಿದದ್ದು, ಅದು ರಾಷ್ಟ್ರೀಯ ಗುಪ್ತ ಭದ್ರತಾ ದಳದ ಒಂದು ಅಂಗದ ವಿಭಾಗ ಎಂಬುದು. ಅಲ್ಲಿ ಅನೇಕ ರಾತ್ರಿಗಳಲ್ಲಿ ಕರಾಳ ಕಿರುಚುವ ಸದ್ದು ಕೇಳುವುದು ನಮಗೆ ಅಲ್ಲಿದ್ದಷ್ಟು ದಿನ ಒಗ್ಗಿ ಹೋಗಿತ್ತು. ಮನೆಯ ಇನ್ನೊಂದು ದಿಕ್ಕಿನಲ್ಲಿ ಸೋಮಾಲಿ ಜನದ ವಾಸ. ಆ ಎಲ್ಲ ಮನೆಗಳ ಒಡೆಯ, ಅವನ ಅಪ್ಪನ ಅವಸಾನದ ನಂತರ, ‘ಹಾವೇಸ್’ ಎಂಬ ಹೆಸರಿನ, ಇನ್ನೂ ಯೌವನಸ್ಥ ಯುವಕ. ಸ್ವಲ್ಪ ಹುಡುಗಾಟ. ಆತನ ಹೆಸರನ್ನು ಕೆಲವರು ‘ಆವೇಸ್’ ಎಂದೂ ಕರೆಯುತ್ತಿದ್ದರು. ಇಂದಿನ ತನಕ ಆ ಎರಡರಲ್ಲಿ ಯಾವುದು ಸರಿ ಅಥವ ಅದರ ಅರ್ಥ ನನಗೆ ತಿಳಿದಿಲ್ಲ.
ಮಧ್ಯಾಹ್ನದ ನಂತರ ಕ್ಲಿನಿಕ್ ಕೆಲಸ ಮುಗಿದಮೇಲೆ, ಬೇರೆ ಏನೂ ಮಾಡಲು ಕಸುಬಿಲ್ಲದೆ ಎಷ್ಟು ದಿನ ಅಂತ ಕೂತು, ನಿಂತು, ಅಡ್ಡಾಡಿ ಕಳೆಯಲು ಸಾಧ್ಯ? ಮೇಲಾಗಿ ಬರುವಾಗ ಲಗ್ಗೇಜಿನ ತೂಕದ ಸಂಕಟದಿಂದ ಪುಸ್ತಕಗಳನ್ನು ತರಲೂ ಆಗಿರಲಿಲ್ಲ. ಕೊನೆಗೆ ಒಂದೆರಡು ತಾಸು ನಿದ್ದೆಯ ಮೊರೆ ಹೋದದ್ದು ಇಂದಿಗೂ ವ್ಯಾಧಿಯಾಗಿ ನನ್ನಲ್ಲಿ ಉಳಿದಿದೆ, ಆದರೀಗ ನಿದ್ದೆಯ ಸಮಯ ಖಂಡಿತ ಅರ್ಧ ತಾಸಿನ ಮೇಲಿಲ್ಲ – ಬಹುಶಃ ವಯಸ್ಸು!
ಸಂಜೆ ಹೊತ್ತು ಒಟ್ಟಿಗೆ ಹೊರಗೆ ಹೋಗಿ ಅಲ್ಲಿಲ್ಲಿ ಸುತ್ತಾಡಿ ಅಥವ ಯಾರಾದರೊಬ್ಬ ಭಾರತೀಯರ ಮನೆಗೆ ಭೇಟಿ ಕೊಟ್ಟು ಬರುವುದು, ಹೀಗೆ ನಡೆಯುತ್ತಿತ್ತು. ಅಷ್ಟಲ್ಲದೆ, ಸಿನೆಮಾಗಳಿಗೂ ಹೋಗುವ ರೂಢಿಯಾಗಿತ್ತು.
ಇಲ್ಲಿ ನಾನು ಸೋಮಾಲಿಯ ದೇಶದ ಸಿನೆಮಾ ಥಿಯೇಟರುಗಳ ಬಗ್ಗೆ ಬರೆದರೆ ಖಂಡಿತ ಅಪ್ರಸ್ತುತವಲ್ಲ. ಏಕೆಂದರೆ ಅಲ್ಲಿ ಹೆಚ್ಚು ಹೆಚ್ಚು ಹಿಂದಿ ಸಿನೆಮಾಗಳೇ ಪ್ರದರ್ಶನ ಆಗುತ್ತಿದ್ದುದು. ಎಲ್ಲೋ ಒಮ್ಮೊಮ್ಮೆ ಇಟಾಲಿಯನ್ ಭಾಷೆ ಸಿನೆಮಾ ಸಹ ಬರುತ್ತಿತ್ತು. ಮೇಲಾಗಿ, ಮೇಲೆ ಚಾವಣಿ ಇಲ್ಲದ ಓಪನ್ ಥಿಯೇಟರುಗಳೇ ಅಲ್ಲಿಯ ವಿಶೇಷ. ಹಾಗಾಗಿ ಸಂಜೆ ಐದರ ಮೇಲೆಯೇ ಪ್ರದರ್ಶನ. ಅಷ್ಟಲ್ಲದೆ, ಆರಂಭದಿಂದಲೇ ಸಹ ಪ್ರಾರಂಭ ಮಾಡುತ್ತಿರಲಿಲ್ಲ. ಆದರೆ, ಒಮ್ಮೆ ಅದು ಮುಗಿದ ಕೂಡಲೇ ಮತ್ತೆ ಮೊದಲಿಂದಲೇ ಆರಂಭ ಆಗುತ್ತಿದ್ದುದರಿಂದ ಯಾರಿಗೂ ಏನೂ ನೋಡಲಿಲ್ಲ ಅನಿಸುತ್ತಿರಲಿಲ್ಲ. ಒಮ್ಮೆ ಟೆಕೆಟ್ ಪಡೆದು ಒಳ ಹೋದರೆ, ರಾತ್ರಿ ಹನ್ನೆರಡರತನಕ ಅಲ್ಲೇ ಕೂತು ಎಲ್ಲ ಎರಡೂವರೆ ಅಥವ ಮೂರು ಶೋಗಳನ್ನೂ ನೋಡಬಹುದಿತ್ತು. ಎಷ್ಟು ಹೊತ್ತಿಗೆ ಬೇಕಾದರೂ ಹೊಗಿ ಬೇಸರ ಆದಾಗ ಹೊರಗೆ ಬರಬಹುದಾಗಿತ್ತು. ಹಾಗೆ ನಾವು ವಾರಕ್ಕೊಂದಾದರೂ ಸಿನೇಮಾ ನೋಡುವ ಪರಿಪಾಠ ಇತ್ತು. ಆಗ ಹೆಚ್ಚಾಗಿ ರಾಜೇಶ್ ಖನ್ನ ಸೋಮಾಲಿ ಜನರಿಗೆ ಅತ್ಯಂತ ಪ್ರಿಯವಾಗಿದ್ದ. ಆದರೆ, ಅಲ್ಲಿಯ ಮೂತ್ರಾಲಯಗಳು ಮಾತ್ರ ಅತ್ಯಂತ ಅಸಹ್ಯಕರವಾಗಿರುತ್ತಿದ್ದವು. ಒಂದು ರೀತಿಯ ಮೂತ್ರದ ತೊರೆಯೊಳಗೇ ಒಳಹೋಗಿ ಹೊರಬಂದಂಥ ಕೆಟ್ಟ ಪರಿಸ್ಥಿತಿ!
ಅಂತೂ ನಿಧಾನ ಅನೇಕರ ಪರಿಚಯ ಆಯಿತು. ಒಮ್ಮೆ ಮುದ್ದಪ್ಪನವರು ಮತ್ತವರ ಪತ್ನಿ, ನಿರ್ಮಲ ಅವರು ಬಂದಿದ್ದರು. ಮುದ್ದಪ್ಪನವರು ನನ್ನಣ್ಣನ ಸಮವಯಸ್ಕರು ಮತ್ತು ಅವರದ್ದು ಆ ದೇಶದ ಅರ್ಥಮಂತ್ರಿಯವರ ಕಛೇರಿಯಲ್ಲಿ ಕೆಲಸ. ಇದೇ ಮುದ್ದಪ್ಪನವರ ಪರಿಚಯ ನನಗೆ ಪ್ರಥಮ ಬಾರಿ ಹಾರ್ಗೀಸಾದಿಂದ ಒಬ್ಬನೇ ಬಂದಿದ್ದಾಗ ಆಗಿತ್ತು. ಅದು ಭಾರತೀಯ ರಾಯಭಾರಿ ಕಛೇರಿಯ ದೀಪಾವಳಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ. ಆಗ ಅವರ ಪತ್ನಿ ಸ್ವಲ್ಪ ಜಬರ್ದಸ್ತಿನವರು ಅನ್ನಿಸಿತ್ತು. ಅನೇಕ ಸಲ ನಮ್ಮ ಮೊದಲ ಅಭಿಪ್ರಾಯ ತಪ್ಪೂ ಆಗಬಹುದು. ಇವರ ವಿಷಯದಲ್ಲೂ ಹಾಗೇ ಆದದ್ದು.
ಹೀಗೆ ನಮ್ಮ ಕೆಲಸ ಹಾಗೂ ಬದುಕಿನ ಇತರ ಚಟುವಟಿಕೆಗಳಲ್ಲಿ ಸುಮಾರು ಆರೇಳು ತಿಂಗಳು ಕಳೆದದ್ದೇ ತಿಳಿಯಲಿಲ್ಲ. ಈ ಮಧ್ಯೆ ತಿಂಗಳು, ಎರಡು ತಿಂಗಳಿಗೋ ಒಮ್ಮೊಮ್ಮೆ ಎಲ್ಲ ಕೂಡಿ ಹತ್ತಿರದ ಒಂದೊಂದು ಯಾವುದಾದರೂ ಸ್ಥಳಕ್ಕೆ ಪಿಕ್ನಿಕ್ ಅಂತ ಹೋಗುವುದು ಸಹ ಇತ್ತು. ಮತ್ತು ನನ್ನ ಹಾಗು ವರ್ಗೀಸರ ಸ್ನೇಹ ಗಾಢವಾಗುತ್ತಾ ನಡೆದಿತ್ತು ಎಷ್ಟೇ ಆದರೂ ನನಗೆ ಅನ್ನ ಹಾಕಿದ್ದ ಗೆಳೆಯರಲ್ಲವೇ.
ಅಂತಹ ಒಂದು ಪಿಕ್ನಿಕ್ ಹೋಗುವ ಹಿಂದಿನ ದಿನ ಗುರುವಾರದ ರಾತ್ರಿ. ಅಲ್ಲಿ ವಾರದ ರಜ ಶುಕ್ರವಾರ ಆದುದರಿಂದ ಆ ದಿನವೇ ನಾವು ಅಂಥ ವಿಹಾರ ಹೋಗುತ್ತಿದ್ದುದು ರೂಢಿ ಇಲ್ಲಿಯ ಭಾನುವಾರದಂತೆ. ವರ್ಗೀಸ್, ಡಾ. ಜೋಸೆಫ್ ಹಾಗೂ ಡಾ. ಸತ್ಯಸಿಂಗ್ ಅವರ ಕುಟುಂಬಗಳೊಡನೆ ನಾವು; ಇಷ್ಟು ಮಂದಿ. ಅದಕ್ಕಾಗಿ ಬೇಕಾದ ಬೇಕರಿ ತಿನಿಸುಗಳು, ತಂಪು ಪಾನೀಯ ತರುವುದು ನಮ್ಮ ಜವಾಬ್ದಾರಿ ಆಗಿತ್ತು. ಇನ್ನುಳಿದಂತೆ ಊಟದ ಬೇರೆ ಬೇರೆ ಥರ ತಿನಿಸುಗಳನ್ನು ತರುವುದು ಒಬ್ಬೊಬ್ಬರ ಪಾಲಿಗೆ. ಬೆಳಿಗ್ಗೆ ಹತ್ತು ಗಂಟೆಗೆ ಪ್ರಯಾಣ ನಿಗದಿ ಆಗಿತ್ತು.
ವಾರ ವಾರದ ರೂಢಿಯಂತೆ, ಆ ರಾತ್ರಿ ಸಹ ನನ್ನಣ್ಣ ಮತ್ತು ನಾನು, ರಜೆಯ ಹಿಂದಿನ ರಾತ್ರಿ ಆದ್ದರಿಂದ, ಒಂದು ವಿಸ್ಕಿ ಸೀಸೆ ತಂದು, ಇಬ್ಬರೂ ಎರಡೆರಡು ಪೆಗ್ಗು ಕುಡಿದು, ಊಟದ ಮೇಜಿನ ಮೇಲೆಯೇ ಉಳಿದದ್ದನ್ನು, ಉಳಿದಿದ್ದ ಊಟ ಹಾಗೂ ಮಾರನೆ ದಿನದ ಪ್ರವಾಸಕ್ಕಾಗಿ ತಂದಿದ್ದ ವಸ್ತುಗಳನ್ನೂ ಇಟ್ಟು ಮಲಗಿದ್ದೆವು. ಸುಮಾರು ನಾಲ್ಕೈದು ದಿನದಿಂದ ನಲ್ಲಿನೀರು ಬೇರೆ ನಿಂತು, ಅಷ್ಟೂ ಬಟ್ಟೆಗಳೆಲ್ಲ ಬಾತ್ ರೂಮಲ್ಲೇ ಒಗೆತ ಕಾಣದೆ ಬಿದ್ದಿದ್ದವು. ಶುಕ್ರವಾರದಿಂದ ಖಂಡಿತ ಬರುತ್ತದೆಂಬ ಆಶ್ವಾಸನೆ ಬಂದಿತ್ತು. ಇಲ್ಲದಿದ್ದರೆ ನಮ್ಮ ದಿನನಿತ್ಯದ ಉಡುಗೆಗಳಿಗೂ ತತ್ವಾರ ಬರುವುದು ನಿಶ್ಚಿತವಾಗಿತ್ತು. ಸಾಮಾನ್ಯವಾಗಿ ನಾನು ಮತ್ತು ಕಮಲ ನಮ್ಮ ಕೋಣೆಯ ಬಾಗಿಲು ತೆರೆದೇ ಮಲಗುತ್ತಿದ್ದುದು ಮಗುವಿನ ರಾತ್ರಿಯ ಅಗತ್ಯಗಳಿಗಾಗಿ. ಅಣ್ಣ ಬಾಗಿಲು ಮುಚ್ಚಿ ಮಲಗುತ್ತಿದ್ದರು. ನಾಳೆಯ ಪ್ರವಾಸಕ್ಕಾಗಿ ಸಾಕಷ್ಟು ಓಡಾಡಿದ್ದ ನನಗೆ ಗಾಢ ನಿದ್ದೆ.
ಮಾರನೇ ಬೆಳಿಗ್ಗೆ ಪಾರ್ವತಕ್ಕ (ಅತ್ತಿಗೆ) ಬೇಗ ಎದ್ದೇಳಿ ಎಂದು ಗಾಬರಿ ಧ್ವನಿ ಏರಿಸಿ ಕರೆದಾಗ, ನಾನು ಅಣ್ಣ ಒಟ್ಟಿಗೇ ಎದ್ದು ನೋಡಿದರೆ, ರಾತ್ರಿ ಕಳ್ಳರು ಬಂದು ಹೋಗಿದ್ದು ಅರಿವಿಗೆ ಬಂತು. ಮುಂಬಾಗಿಲನ್ನು ಮುಚ್ಚದೆ ಹಾಗೆ ತೆರೆದು ಹೋಗಿದ್ದರು. ಊಟದ ಮೇಜಲ್ಲಿ ಕುಳಿತು, ಸಾಕಷ್ಟು ಕುಡಿದು, ಊಟ ಸಹ ಮುಗಿಸಿದ್ದರು. ನಮ್ಮ ತೆರೆದಿದ್ದ ರೂಮಲ್ಲಿ ನೇತು ಹಾಕಿದ್ದ ಆ ದಿನದ ಪ್ಯಾಂಟ್ ಮತ್ತು ಶರಟು, ಮತ್ತು ಬಾತ್ರೂಮಲ್ಲಿದ್ದ ದಿನನಿತ್ಯದ ಅಷ್ಟೂ ಬಟ್ಟೆ ಕಳವಾಗಿದ್ದವು. ಅದೃಷ್ಟಕ್ಕೆ ನನ್ನ ಸೂಟ್ ಕೇಸಲ್ಲಿದ್ದ ಡಾಲರುಗಳು ಮತ್ತು ಹೊಸದಾಗಿ ಕೊಂಡಿದ್ದ ಅಸಾಹಿ ಪೆಂಟಾಕ್ಸ್ ಕ್ಯಾಮರ ಹಾಗೇ ಇದ್ದವು, ನನ್ನ ಹೆಂಡತಿಯ ಸರ, ಬಳೆ ಮತ್ತು ಪಾಸ್ ಪೋರ್ಟ್ ಸಹ! ಅಣ್ಣನ ರೂಂ ಬಂದಾಗಿದ್ದುದರಿಂದ ಅಲ್ಲಿ ಎಲ್ಲ ಇದ್ದಹಾಗೇ ಇತ್ತು. ಇಷ್ಟೇ ಅಲ್ಲದೆ, ಕಳ್ಳರ ಪಕ್ಕಾ ಕದೀಮತನಕ್ಕೆ ಸಾಕ್ಷಿಯಾದಂತೆ, ಜೊತೆಯಲ್ಲಿ ಒಂದು ಖಾಲಿ ಸೀಸೆಗೆ ಸೀಮೆ ಎಣ್ಣೆ ತುಂಬಿ, ಅದರ ಪಕ್ಕ ಒಂದು ಬೆಂಕಿಕಡ್ಡಿ ಪೊಟ್ಟಣ ಸಹ ಇಟ್ಟಿದ್ದುದು ನಮಗೆ ನಿಜ ದಿಗಿಲು ಹುಟ್ಟಿಸಿತ್ತು. ಅಕಸ್ಮಾತ್ ಎಚ್ಚರ ಆಗಿದ್ದರೆ, ಗತಿ!
ತಕ್ಷಣ ವರ್ಗೀಸ್ ಅವರು ಹಾವೇಸ್ ಯುವಕನನ್ನು ಕರದು ಎಲ್ಲ ತೋರಿಸಿ, ಕಳ್ಳರಿಗೆ ಚಾವಿ ಹೇಗೆ ಸಿಕ್ಕಿತು ಎಂದಿದ್ದಕ್ಕೆ ಆತನಿಂದ ಉತ್ತರವಿರಲಿಲ್ಲ. ಸದ್ಯ ಆ ದಿನವೇ ಮುಂಬಾಗಿಲ ಬೀಗ ಬದಲಾಯಿಸಿ, ಎಲ್ಲ ಚಾವಿಗಳನ್ನೂ ನಾವೇ ಇಟ್ಟುಕೊಂಡಿದ್ದಾಯಿತು. ವರ್ಗೀಸ್ ಅವರು ತಾವೇ ಮುತುವರ್ಜಿ ವಹಿಸಿ ಉಳಿದ ಪಿಕ್ನಿಕ್ ಸ್ನೇಹಿತರಿಗೂ, ವಿಷಯ ತಿಳಿಸಿ ಅಂದಿನ ಪ್ರವಾಸ ಮುಂದೂಡಿದ್ದರು. ವಾಸ್ತವವಾಗಿ ಡಾ. ಜೋಸೆಫ್ ತಮ್ಮ ಸೋಮಾಲಿಯಾದ ಸುದೀರ್ಘ ಸೇವೆ ಮುಗಿಸಿ, ಭಾರತಕ್ಕೆ ಮತ್ತೆ ಹಿಂತಿರುಗಿ ಬರದ ಹಾಗೆ ಹೋಗುತ್ತಿದ್ದುದರಿಂದ, ಆ ಪ್ರವಾಸ ಹಮ್ಮಿಕೊಂಡಿದ್ದುದು. ಎಲ್ಲ ಮುಗಿದು ನಿಟ್ಟುಸಿರು ಬಿಡುವ ಹೊತ್ತಿಗೆ, ಪಾಪ ಕಮಲಳಿಗೆ ಒಂದೂ ದಿನನಿತ್ಯದ ಬಟ್ಟೆ ಇಲ್ಲದೆ, ಭಾರತಕ್ಕೆ ತಿಳಿಸಿ, ಅವಳಣ್ಣ ಪುಟ್ಟಸ್ವಾಮಿಶೆಟ್ಟಿ ಪಾರ್ಸೆಲ್ ಮೂಲಕ ಕಳಿಸಿದ್ದರು! ನನ್ನದು ಹೇಗೋ ನಡೆಯುತ್ತದೆ ಅಥವ ಅಲ್ಲಿನ ಮಾರುಕಟ್ಟೆಯಲ್ಲೇ ಸದ್ಯಕ್ಕೆ ಕೊಳ್ಳಬಹುದಾಗಿತ್ತು; ಆದರೆ ಭಾರತೀಯ ಹೆಂಗಸರಿಗೆ ಅದು ಕಷ್ಟ.
ಕಾಲದ ಉರುಳುವಿಕೆಯ ಭರದಲ್ಲಿ ಆಗಸ್ಟ್ ತಿಂಗಳ ಎರಡು ವಾರ ಕಳೆದದ್ದೇ ಗೊತ್ತಾಗಲಿಲ್ಲ. ಕಳ್ಳತನದ ವಿಷಯ ಸಹ ಮರೆತು, ಮೆದುಳ ಸಂದಿಯಲ್ಲೆಲ್ಲೋ ಕಳೆದು ಹೋಗಿತ್ತು. ಆಗ ಇದ್ದಕ್ಕಿದ್ದಂತೆ ರಜೆಯ ಬಗ್ಗೆ ನೆನಪಾಗಿ, ನಮ್ಮ ಕಛೇರಿಯ ಮುಸ್ತಫಾನಿಗೆ ನಾವು ರಜೆಗೆ ಅಕ್ಟೋಬರಿನಲ್ಲಿ ಹೋಗುವುದಾಗಿ ತಿಳಿಸಿ, ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಕೇಳಿಕೊಂಡೆ. ಆತ ಫೈಲ್ ನೋಡಿ ಖಾತ್ರಿ ಮಾಡಿಕೊಂಡು ಆಗಲಿ ಎಂದ. ಆದರೆ ಅಣ್ಣನಿಗೆ ಹೀಗೆ ಪ್ರತಿ ವರ್ಷ ರಜೆ ಇಲ್ಲ ಎಂದು ಮೊದಲೇ ತಿಳಿಸಿದ್ದೆ. ಕಮಲ ಯಾರಿಗೆ ಏನು ಕೊಂಡು ಹೋಗಬೇಕೆಂಬ ಪಟ್ಟಿ ಸಹ ತಯಾರು ಮಾಡಿದಳು.
ಈ ಮಧ್ಯೆ ಡಾ. ಜೋಸೆಫ್ ಅವರಿದ್ದ ನಮ್ಮ ಎದುರು ಮನೆಗೆ ಒಬ್ಬ ಇಟಲಿ ದೇಶದ, ಸುಮಾರು ಅರ್ಧ ಶತಕ ವಯಸ್ಸಿನ ವ್ಯಕ್ತಿ ಬಂದು ಸೇರಿದ್ದ. ಒಂದು ರಾತ್ರಿ ಯಾರೋ ಜೋರು ಕೂಗಿದ ಸದ್ದು ನಮ್ಮನ್ನು ಎಚ್ಚರ ಮಾಡಿತ್ತು. ಮತ್ತೆ ಕಳ್ಳರ ಆಗಮನ ಆಗಿತ್ತು!
ಬಹುಶಃ ನಮ್ಮ ಮನೆ ಪ್ರಯತ್ನಿಸಿ, ಬೀಗವೇ ಬದಲಾದುದರಿಂದ, ಅದು ಸಾಧ್ಯ ಆಗದೆ, ಇಟಾಲಿಯನ್ ಮನೆಗೆ ನುಗ್ಗಿದ್ದಾರೆ. ಆದರೆ ಆ ಸಮಯದಲ್ಲಿ ಆತ ಎಚ್ಚರ ಇದ್ದು ಪುಸ್ತಕದಲ್ಲಿ ತಲ್ಲೀನನಾಗಿ, ಬಿಯರ್ ಸಹ ಆಗಾಗ ಹೀರುತ್ತಿದ್ದ ಎಂದು ಆಮೇಲೆ ತಿಳಿಯಿತು.
ಕಳ್ಳರನ್ನು ಎದುರಿಸಿ ನಿಂತ ಆತನ ಮುಂಗೈಗೆ ಚಾಕು ಏಟು ಬಿದ್ದಾಗ, ತಾನೂ ಸೋಲದೆ ಹೋರಾಡಿ ಅಬ್ಬರಿಸಿದಾಗ, ಅವರು ಹೆದರಿ ಹೊರನಡೆದು ನೇರ ಮಹಡಿಯಿಂದ ಕೆಳಕ್ಕೆ ಧುಮುಕಿ ಓಡಿದರು. ಅಷ್ಟರಲ್ಲಿ ನಾವು ಕಿಟಕಿ ಮೂಲಕ ನೋಡುತ್ತಿದ್ದೆವು. ಎದುರಿನ ಭದ್ರತಾ ಕಾವಲುಗಾರ, ನಿಂತೇ ಗುರಿ ಇಡುವ ಬದಲಿಗೆ, ತಾನೂ ಕಳ್ಳನ ಹಿಂದೆ ಓಡುತ್ತಾ ಗನ್ ಫೈರ್ ಒಮ್ಮೆ ಮಾಡಿದ. ಅಷ್ಟರಲ್ಲಿ ಕಳ್ಳ ನಾಪತ್ತೆ!
ಮತ್ತೆ ಮತ್ತೆ ಹೀಗೆ ಆಗುತ್ತಿರುವುದು ಒಳ್ಳೆಯ ಸೂಚನೆ ಅಲ್ಲ ಅನ್ನಿಸಿ ಮಾರನೆ ದಿನ, ನಾನು ಅಣ್ಣ ಮನೆ ಬದಲಾಯಿಸುವ ತೀರ್ಮಾನಕ್ಕೆ ಬಂದೆವು. ಹಾಗೆ ವರ್ಗೀಸ್ ಅವರಿಗೂ ತಿಳಿಸಿದ್ದಾಯಿತು. ಅಲ್ಲಿಗೆ ನಮ್ಮ ಮೊಗದಿಶು ಮೊದಲ ಮನೆಯ ಅಥವ ‘ಹಾವೇಸ್ ಮನೆ’ಯ ಋಣ ತೀರಿತ್ತು!
ಮುಂದುವರೆಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ