— ೧೪ —
ಆರಾಧನಳ ಆಗಮನ!
ಮುಂದಿನ ಅಂಕಣದತ್ತ ಮುಂದುವರೆಯುವ ಮುನ್ನ, ನನ್ನ ಮಿತ್ರರೊಬ್ಬರಾದ ಎಂ. ಎಲ್. ಪ್ರಭಾಕರ್ ಅವರು, ಕಳೆದ ಅಂಕಣದಲ್ಲಿ ಕಳ್ಳತನದ ಬಗ್ಗೆ ಓದಿ, “ನೀವು ಅಲ್ಲಿಯ ಪೋಲೀಸರಿಗೆ ಏಕೆ ದೂರು ನೀಡಲಿಲ್ಲ?” ಎಂದು ಸಹಜವಾದ ಪ್ರಶ್ನೆ ಎತ್ತಿದ್ದಾರೆ. ಹೌದು, ಕೊಡಲಿಲ್ಲ. ನಮ್ಮ ದೇಶದಲ್ಲೇ ಪೋಲೀಸು ಮತ್ತವರ ಕಾರ್ಯವೈಖರಿ ಹೇಗೆ ಎಂಬ ಅರಿವಿರುವ ಜನ, ಸಾಮಾನ್ಯವಾಗಿ ದೂರು ನೀಡದೆ ಸುಮ್ಮನಿರುವ ವಿಷಯ ಹೊಸದೇನಲ್ಲ. ಅತೀವ ಅನಿವಾರ್ಯ ಆದಾಗ ಮಾತ್ರ ದೂರು, ಅಲ್ಲವೆ. ಇನ್ನು ಸೋಮಾಲಿಯದ ವಿದೇಶಿ ನೆಲದಲ್ಲಿ! ಮನೆಯ ಎದುರೇ ಇದ್ದ ರಾಷ್ಟ್ರೀಯ ಗುಪ್ತ ವಿಭಾಗದವರೇ ಕ್ಯಾರೆ ಅನ್ನದಿದ್ದಾಗ, ಮತ್ತು ಬೇಕಾಬಿಟ್ಟಿ ಗುಂಡು ಹಾರಿಸಿದಾಗ, ಇನ್ನಾವ ಪೋಲೀಸು ಏನು ಕತೆ? ಮೇಲಾಗಿ ಒಂದು ವಿದೇಶಿ ಕುಟುಂಬಕ್ಕಾಗಿ, ತಮ್ಮ ನಾಡಿನ ಪ್ರಜೆಗೇ ಶಿಕ್ಷೆಯೇ – ಆತ ಒಬ್ಬ ಕಳ್ಳನೇ ಆಗಿದ್ದರೂ ಸಹ! ಬಹುಶಃ ಎಲ್ಲ ದೇಶಗಳಲ್ಲೂ ಇದೇ ಸ್ಥಿತಿಯಿದೆ ವಿದೇಶಿಯರ ಬಗ್ಗೆ, ಅಂದರೂ ಅದು ತಪ್ಪಾಗಲಾರದು. ಹಾಗಂತ ನಮಗೆ ಅಲ್ಲಿ ಯಾರೂ ಸ್ಪಂದಿಸಿ ಸಹಕರಿಸುತ್ತಿರಲಿಲ್ಲ ಅಂತಲ್ಲ. ವಾಸ್ತವವಾಗಿ ಬ್ಯಾಂಕಿಂದ ಹಿಡಿದು ಯಾವ ಕಛೇರಿಗೆ ಹೋದರೂ ಅತಿ ಉತ್ಸಾಹದಿಂದ ಮತ್ತು ಹೆಚ್ಚು ಆಸಕ್ತಿಯಲ್ಲಿ ಕೆಲಸಗಳನ್ನು ತುರ್ತಾಗಿ ಮಾಡಿಕೊಡುತ್ತಿದ್ದರು. ಆದರೆ ಅಂತಹ ಕೆಲಸವೇ ಬೇರೆ, ಪೋಲೀಸ್ ತಮ್ಮ ಪ್ರಜೆಗೇ ನಮಗಾಗಿ ಶಿಕ್ಷಿಸುವುದೇ ಬೇರೆ, ಅಲ್ಲವೇ? ಪ್ರಭಾಕರ್ ಅವರೇ ಈ ಉತ್ತರ ಸಮಂಜಸವೇ?
ಕಳ್ಳತನದ ಪ್ರಸಂಗದ ನಂತರ ನಾವು ರಜೆಗೆ ಭಾರತಕ್ಕೆ ಬಂದು ಹಿಂತಿರುಗುವ ಹೊತ್ತಿಗೆ ಅಣ್ಣ ಬೇರೊಂದು ಮನೆ ಆಗಷ್ಟೇ ನೋಡಿ, ನಮಗಾಗಿ ಕಾಯ್ದಿದ್ದರು. ಡಾ. ವರ್ಗೀಸರಿಗೆ ನಾವು ಅವರ ನೆರೆ ಬಿಟ್ಟು ಹೊರಟಿದ್ದು ನೋವಾಗಿದ್ದು ಸಹಜ. ನನಗೂ ಸಹ. ನಮ್ಮ ಪರಿಸ್ಥಿತಿಯ ಅರಿವು ಅವರಿಗೂ ಆಗಿದ್ದರಿಂದ, ಸುಮ್ಮನಾಗಿದ್ದರು. ಆದರೆ, ನಮ್ಮ ಮನೆಯಲ್ಲಿ ಸೀಮೆ ಎಣ್ಣೆ ಮತ್ತು ಬೆಂಕಿ ಪೊಟ್ಟಣ ಇಟ್ಟಿದ್ದು, ಎದುರು ಮನೆ ಇಟಲಿ ಪ್ರಜೆಗೆ ಚಾಕು ಹಾಕಿದ್ದು ಎಲ್ಲ ಅರಿತೂ ಯಾರಿಗೂ ಅಂಥ ಮನೆಯಲ್ಲಿ, ಅದೆಂಥ ಆತ್ಮೀಯತೆ ನಡುವೆಯೂ ಇರುವ ಧೈರ್ಯ ಖಂಡಿತ ಇರದು, ಅಲ್ಲವೇ?
ಮೊಗದಿಶು ನಗರದ ನಡುವಿನ ದೊಡ್ಡ ಮಾರುಕಟ್ಟೆಗೆ ಅನತಿ ದೂರದಲ್ಲೇ ನಮ್ಮ ಬದಲಾದ ಮನೆ. ಆ ಮನೆಯ ಸುತ್ತಲೂ ನೆಲದ ಮೇಲೆ ಕೂತ, ನಿಂತ ವ್ಯಾಪಾರಿಗಳು; ಅವರ ತದೇಕ ‘ಕೂಗುಮೇಳ’ ರಾತ್ರಿ ಹನ್ನೊಂದರ ಹೊತ್ತಿಗೆ ಸ್ಥಗಿತ. ಅದೊಂದು ಹಳೆಯ ಸಂಕೀರ್ಣ. ಎಲ್ಲ ಮೂರೂ ಅಂತಸ್ತಿನಲ್ಲೂ ಭಾರತೀಯರ ವಾಸ ಮಾತ್ರ; ನಮ್ಮದು ಮೊದಲ ಅಂತಸ್ತು. ಪಕ್ಕದಲ್ಲೇ ಸತ್ಯಸಿಂಗ್ ಎಂಬ ಕೇರಳದ ಇನ್ನೊಬ್ಬ ಪಶುವೈದ್ಯರ ಮನೆ. ಅಲ್ಲದೆ ಕಳ್ಳತನದ ಮಾತೇ ಇಲ್ಲ! ಅಷ್ಟು ಜನಜಂಗುಳಿ. ಅಲ್ಲಿಯ ವಾಸದ ನಾಲ್ಕು ತಿಂಗಳ ನಂತರ, ನನ್ನ ಮಡದಿಯನ್ನು ಎರಡನೇ ಹೆರಿಗೆಗಾಗಿ ಭಾರತಕ್ಕೆ ಕಳಿಸುವ ಸಂದರ್ಭ, ಆಗ ಸಹ ಹೆಂಡತಿ ಮಗುವಿಗಷ್ಟೇ ಅಲ್ಲದೆ, ನನಗೂ ನೈರೋಬಿಗೆ ಹೋಗಿ ಕಳಿಸಿ ಬರಲು ನಮ್ಮ ಶಾಖೆಯವರೇ ಟಿಕೆಟ್ ಕೊಟ್ಟಿದ್ದರು. ನಮ್ಮ ದೇಶದ ಕಛೇರಿಗಳಲ್ಲಿ ಅಂಥದ್ದಕ್ಕೂ ಕೊಕ್ಕೆ ಹಾಕುವ ಮಂದಿ ಬೇಕಾದಷ್ಟು!
ಅಷ್ಟರಲ್ಲಿ, ಅಣ್ಣನ ಕುಟುಂಬ ರಜೆಗೆ ಹೋಗುವ ಸಮಯ; ಅದಕ್ಕೆ ಮುನ್ನ, ಮಡದಿಗೆ ಹೆಣ್ಣು ಮಗು ಆದ ಸುದ್ದಿ, ನಮ್ಮ ಮನೆಗೆ ದೇವತೆಯ ಆಗಮವಾದಷ್ಟು ಆನಂದ ಹೊತ್ತು ಬಂದಿತ್ತು. ಅಣ್ಣನೊಡನೆ ಸಮಾಲೋಚಿಸಿ, ಇಬ್ಬರೂ ಸೇರಿ ಮಗನಿಗೆ ಅನಿರುದ್ಧ ಎಂದು ಹೆಸರಿಟ್ಟಿದ್ದಂತೆ, ಮಗಳಿಗೆ ಆರಾಧನ ಎಂಬ ಹೆಸರನ್ನು ಸೂಚಿಸಿ, ಸುದ್ದಿ ಕಳಿಸಿದ್ದೆವು – ನನ್ನ ಮಡದಿಗೂ ಇಷ್ಟ ಆದರೆ ಮಾತ್ರ ಇಡಬಹುದು ಎಂದು. ಅಣ್ಣ ಮತ್ತು ಕುಟುಂಬ ರಜೆಗೆ ಹೋದ ನಂತರ, ಒಬ್ಬಂಟಿಯಾದ ನನಗೆ ಅಡಿಗೆ ಬರದು. ಬ್ರೆಡ್, ಆಮ್ಲೆಟ್ ಇದ್ದೇ ಇತ್ತು. ಜೊತೆಗೆ, ಕಮಲ ಕೆಲವು ಪಾಕ ವಿಧಾನಗಳನ್ನು ಬರೆದಿಟ್ಟು ಹೋಗಿದ್ದಳು. ಅವು ಬಹಳ ವಿರಳವಾಗಿ ಉಪಯೋಗವಾದವು!
ಈ ನಡುವೆ, ನಮ್ಮ ಶಾಖೆಗೆ ಹೊಸ ವ್ಯವಸ್ಥಾಪಕ ನಿರ್ದೇಶಕರೊಬ್ಬರು ವರ್ಗವಾಗಿ ಬಂದು, ನನಗೆ ಕೆಲಸ ಕೊಟ್ಟಿದ್ದ ‘ಹರೇದ್ ಫಾರಾ ನೂರ್’ ಎಂಬ ಸಜ್ಜನರನ್ನು ಬೇರೆಡೆಗೆ ಕಳಿಸಿದ್ದರು; ಕಾರಣ ಈಗ ಬಂದಿದ್ದ ‘ಹಸನ್ ಮಹಮ್ಮದ್ ಜಾಮಾ’ ಎಂಬುವವರು, ಅಧ್ಯಕ್ಷ ‘ಸೈಯ್ಯದ್ ಬರ್ರೆಯ’ ಮಾರೆಹಾನ್ ಪಂಗಡದವರು. ಕೆಲಕಾಲದ ನಂತರ ಈ ಹೊಸಬರು ನನ್ನನ್ನು ಅವರಿಗೆ ಇಂಗ್ಲೀಷ್ ಕಲಿಸಲು ಕೇಳಿಕೊಂಡರು. ಅದಕ್ಕಾಗಿ, ಕ್ಲಿನಿಕ್ ಕೆಲಸದ ನಂತರ ಪ್ರತಿದಿನ ಅರ್ಧ ಗಂಟೆ ತಡವಾಗಿ ಮನೆಗೆ ಹೋಗುವಂತಾಗಿತ್ತು. ಅಂತಹ ಒಂದು ಸಂದರ್ಭ, ನನ್ನನ್ನು ‘ಇನ್ನೊಬ್ಬ ಭಾರತೀಯ ವೈದ್ಯರು ಕಿಸ್ಮಾಯೋ ಎಂಬಲ್ಲಿಗೆ ಬೇಕು; ಕೀಲು ಮೂಳೆ (ಆರ್ತೋಪೀಡಿಕ್) ವಿಷಯದ ತರಬೇತಿ ಇದ್ದರೆ ಉತ್ತಮ’ ಎಂದೂ, ‘ನನ್ನ ಗೆಳೆಯರಲ್ಲಿ ಯಾರಾದರೂ ಬರುವುದ್ದರೆ ತಿಳಿಸಿ’ ಎಂದಿದ್ದರು. ನನಗೆ ಇಬ್ಬರು ಆತ್ಮೀಯರು; ಒಬ್ಬ ಡಾ. ಪ್ರಸನ್ನ ಕುಮಾರ್, ಮತ್ತೊಬ್ಬ ಡಾ. ಜಗನ್ನಾಥ. ಪ್ರಸನ್ನನಿಗೆ ಆಗಲೇ ಸರ್ಕಾರಿ ನೌಕರಿ ಇತ್ತು; ಜಗನ್ನಾಥ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದ. ಹಾಗಾಗಿ, ನಾನು ಜಗನ್ನಾಥನಿಗೆ ಹೇಳಿ, ಯಾವುದಾದರೂ ಆರ್ತೋಪೀಡಿಕ್ ವಿಭಾಗದಲ್ಲಿ ಸ್ವಲ್ಪ ಕೆಲಸ ಮಾಡುವಂತೆ ಮತ್ತು ಮದುವೆ ಮಾಡಿಕೊಂಡು ಹೊರಡಲು ಸಿದ್ಧವಾಗುವಂತೆ ತಿಳಿಸಿದೆ. ಪ್ರಸನ್ನನಿಗೆ ಬೇಜಾರಾಗಿತ್ತು ಅಂತ ಗೊತ್ತಾಗಿ, ಅವನಿಗೆ ವಿವರ ತಿಳಿಸಿ ಸಮಾಧಾನಪಡಿಸಿದ್ದೆ. ಈಗಲೂ ನನಗೆ ಇಬ್ಬರದ್ದೂ ಉತ್ತಮ ಸ್ನೇಹ. ವಾಸ್ತವವಾಗಿ, ಐವತ್ತು ವರ್ಷಗಳ ಹಿಂದೆ ಪ್ರಪ್ರಥಮವಾಗಿ, ನಾನು ಮೈಸೂರು ಮೆಡಿಕಲ್ ಕಾಲೇಜಿನ ಮೆಟ್ಚಿಲೇರಿದ್ದಾಗ, ಮೊದಲು ನನ್ನನ್ನು ಮಾತನಾಡಿಸಿದ್ದು ಮತ್ತು ಗೆಳೆಯನಾಗಿದ್ದು ಈ ಪ್ರಸನ್ನನೇ. ಇಬ್ಬರೂ ಕ್ಲಾಸ್ ಮೇಟ್ಸ್ ಸಹ. ಈಗ ತಾನೇ ಮಲೇಶಿಯಾದಿಂದ ವಾಪಸ್ ಬಂದು ಮೈಸೂರಿನ ಸಿದ್ಧಾರ್ಥ ನಗರದಲ್ಲಿ ವಾಸವಾಗಿದ್ದಾನೆ.
ನಾನು ರಜೆಗೆ ಹೊರಡುವ ಸಮಯಕ್ಕೆ, ಎಲ್ಲ ಪ್ರಕ್ರಿಯೆಗಳೂ ಕಾಲಕ್ಕೆ ಸರಿಯಾಗಿ ನೆರವೇರಿ, ಕಮಲ ಮತ್ತು ನನ್ನ ಎರಡು ಮಕ್ಕಳ ಸಂಗಡ ಮತ್ತೆ ಮೊಗದಿಶುವತ್ತ ಹೊರಡುವಾಗ, ಜಗನ್ನಾಥ ಮತ್ತವನ ಮಡದಿ, ರತ್ನ ಸಹ ಜೊತೆಯಾಗದ್ದರು. ನನಗದು ನಿಜವಾಗಿ ಅತಿಶಯ ಆನಂದ ಆಗಿದ್ದು ಸತ್ಯ! ಈ ಬಾರಿ ಅಬುಧಾಬಿ ಮೂಲಕ. ಬೆಂಗಳೂರು-ಬಾಂಬೆ-ಅಬುಧಾಬಿ-ಬರ್ಬರಾ-ಮೊಗದಿಶು ಹೀಗೆ. ಜಗನ್ನಾಥ ನನ್ನ ಮನೆ ನಾಲ್ಕು ದಿನ ಇದ್ದು ಕಿಸ್ಮಾಯೋ ಕಡೆಯ ಫ್ಲೈಟ್ ಹಿಡಿದು ಹೊರಟ. ಅಷ್ಟರಲ್ಲಿ ಕಮಲ ಮತ್ತು ರತ್ನ ಸಾಕಷ್ಟು ವರ್ಷಗಳ ಸ್ನೇಹಿತೆಯರಂತೆ ಹತ್ತಿರ ಆಗಿದ್ದರು. ಈಗಲೂ ಅವರಿಬ್ಬರೂ ಆತ್ಮೀಯರು. ಮಗಳ ಮದುವೆಯಾಗಿ, ಬೆಂಗಳೂರಿನಲ್ಲಿ ಮನೆ ಮಾಡುವವರೆಗೂ, ರಾಜಧಾನಿಗೆ ಹೋದಾಗಲೆಲ್ಲ ಜಗನ್ನಾಥನ ಮನೆಯೇ ನಮ್ಮ ‘ಹೋಟೆಲ್’! ಅವರೂ ಮೈಸೂರಿಗೆ ಬಂದರೆ ಈಗ ಸಹ ನಮ್ಮ ಟೆಂಟಿನಲ್ಲೇ ಅವರ ವಾಸ್ತವ್ಯ!
ಈ ನಡುವೆ, ನನ್ನ ಇಂಗ್ಲೆಂಡಿನ ಕನಸು ಭಗ್ನವಾದ ನಂತರ, ಹಾರ್ಗೀಸಾದಲ್ಲಿ ವ್ಯವಹರಿಸುತ್ತಿದ್ದ ಹಾಗೆ, ಇಲ್ಲಿಂದ ಸಹ ಬೇರೆಬೇರೆ ದೇಶಗಳೊಡನೆ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಲೇ ಇದ್ದೆ; ಕೊಂಡುಕೊಂಡಿದ್ದ ಟೈಪಿಂಗ್ ಯಂತ್ರ ಮತ್ತು ಕಲಿತಿದ್ದ ಕಲೆ ವ್ಯರ್ಥ ಆಗಬಾರದಲ್ಲವೇ? ಹೆಚ್ಚೂಕಮ್ಮಿ ಎಲ್ಲ ಕಡೆಯಿಂದ ‘ಇಲ್ಲ’ ಎಂಬ ಉತ್ತರ ಬರುತ್ತಿತ್ತು ಅಥವ ಏನೂ ಬರುತ್ತಲೇ ಇರಲಿಲ್ಲ. ಟೈಪಿಂಗ್ ಮತ್ತದರ ವೇಗ ಮರೆಯಬಾರದೆಂಬ ಹಂಬಲ ಹಾಗೆ ಮಾಡಿಸಿತ್ತು! ಆದರೆ, ಒಂದು ದೇಶ ಮಾತ್ರ ನನಗೆ ಕೆಲಸ ಕೊಡಲೊಪ್ಪಿ, ನಮ್ಮ ನಾಲ್ವರಿಗೂ ಟಿಕೆಟ್ ಕಳಿಸಲೂ ಒಪ್ಪಿತ್ತು. ಅದು ಬ್ರಿಟಿಷ್ ಗಯಾನ ದೇಶ; ದಕ್ಷಿಣ ಅಮೆರಿಕಾದ ಉತ್ತರದ ತುದಿಯಲ್ಲಿದೆ. ಅಲ್ಲಿ ಭಾರತೀಯರು ಶೇಕಡ ನಲವತ್ತರಷ್ಠು ಇದ್ದಾರೆ. ಯೂರೋಪ್ ವಸಾಹತುದಾರರ ದಾಳಿಗೆ ಮುನ್ನ ಇದ್ದಂಥ ಮೂಲ ಸ್ಥಳೀಯರಿಗೆ ಅದು ‘ಗಿಯಾನ’ ಆಗಿತ್ತು. ವಸಾಹತುಗಳು ತಮ್ಮ ತಮ್ಮ ಸ್ವತಂತ್ರ ಗಳಿಸುವ ಸಮಯಕ್ಕೆ, ಬ್ರಿಟಿಷ್ ಗಯಾನ, ಸುರಿನಾಮೆ (ಡಚ್ ಗಯಾನ) ಎರಡೂ ಸಂಪೂರ್ಣ ಸ್ವತಂತ್ರ ರಾಷ್ಟ್ರಗಳಾದರೆ, ಫ್ರೆಂಚರ ಗಯಾನ ಈಗಲೂ ಫ್ರೆಂಚ್ ಆಡಳಿತದಲ್ಲೇ (1946ರಿಂದ) ಇದ್ದು, ಯೂರೋಪಿಯನ್ ಯೂನಿಯನ್ನಿನ ಭಾಗ ಕೂಡ ಆಗಿದ್ದು, ಅದರ ಅಧಿಕೃತ ಕರೆನ್ಸಿ ಸಹ ‘ಯೂರೋ’. ಇದು ಅತಿ ಸಂಕ್ಷಿಪ್ತ ಗಯಾನ ಇತಿಹಾಸ; ಆಸಕ್ತಿ ಉಳ್ಳ ಓದುಗರಿಗಾಗಿ.
ಆದರೆ ಸೋಮಾಲಿಯ ಥರ ಅಲ್ಲಿ ವರ್ಷಕ್ಕೊಮ್ಮೆ ಭಾರತಕ್ಕೆ ಫ್ಯಾಮಿಲಿ ಟಿಕೆಟ್ ಕೊಡುವ ಬದಲಿಗೆ ಮೂರು ವರ್ಷಕ್ಕೊಮ್ಮೆ ಎಂದಾಗಿತ್ತು. ನನಗೆ ನನ್ನ ತಾಯಿ ಎಂದರೆ ಅಮರ ಪ್ರೇಮ. ಅವರನ್ನು ಅಷ್ಟು ವರ್ಷ ನೋಡದೇ ಇರುವುದಾದರೂ ಹೇಗೆ? ಆದ್ದರಿಂದ ಅಳೆದೂ-ಸುರಿದು, ಕೊನೆಗೂ ಉತ್ತರ ಅಮೆರಿಕಾಕ್ಕೆ ಹತ್ತಿರ ಆದ್ದರಿಂದ, ಅಲ್ಲಿಂದಲೂ ಬೇರೆ ಪ್ರಯತ್ನ, ಅದರಲ್ಲೂ ಅಮೆರಿಕಾಕ್ಕೂ ಹೋಗುವ ಸಾಧ್ಯತೆ ಇರಬಹುದೆಂಬ ಕಲ್ಪನೆಯಲ್ಲಿ ಒಪ್ಪಿ, ಮುಂದೆ ಭಾರತಕ್ಕೆ ರಜೆಗೆ ಹೊರಡುವಾಗ, ಎಲ್ಲ ಲಗ್ಗೇಜಿನ ಸಮೇತ ಭಾರತಕ್ಕೆ ಹೊರಟಿದ್ದೆವು – ಅಷ್ಟರಲ್ಲಿ ಅಣ್ಣನಿಗಿಂತ ನನಗೇ ತೀರ ಹತ್ತಿರವಾಗಿದ್ದ ಮುದ್ದಪ್ಪನವರು, ಊರಿಗೆ ಹೋದ ಮೇಲೂ ಯೋಚಿಸಿ ತೀರ್ಮಾನಿಸಿ ಎಂದು ಪರಿಪರಿಯಾಗಿ ಕೇಳಿಕೊಂಡು ಬೀಳ್ಕೊಟ್ಟಿದ್ದರು. ರಜೆಯಲ್ಲಿ ಟಿಕೆಟ್ ಗಳಿಗಾಗಿ ಕಾಯುತ್ತಿದ್ದಾಗ, ಗಯಾನ ಆರೋಗ್ಯ ವಿಭಾಗದಿಂದ ಮತ್ತೊಂದು ಪತ್ರ ಬಂತು; ಅದರಲ್ಲಿ, ಮೂರು ವರ್ಷದ ಬದಲು ಕುಟುಂಬ ಟಿಕೆಟ್ಟನ್ನು ನಾಲ್ಕು ವರ್ಷಕ್ಕೊಮ್ಮೆ ಕೊಡುವುದಾಗಿ, ಅದಕ್ಕೆ ಒಪ್ಪಿದರೆ ಟಿಕೆಟ್ ಕಳಿಸುವುದಾಗಿ ತಿಳಿಸಿದ್ದರು. ಇದನ್ನೂ ಒಪ್ಪಲು ಸಾಧ್ಯವಿಲ್ಲದೆ, ಸೋಮಾಲಿಯಾಕ್ಕೆ ಹಿಂತಿರುಗಿದ್ದೆವು!
ಈ ನಡುವೆ ಡಾ ವರ್ಗೀಸರ ಮೂರು ವರ್ಷದ ಸೇವಾ ಅವಧಿ ಮುಗಿದು, ಅವರು ಭಾರತಕ್ಕೆ ಹೊರಡುವ ಸಮಯ. ಅಷ್ಟರಲ್ಲಿ ಅವರ ಮಕ್ಕಳಾದ ಮರಿಯಮ್ ಮತ್ತು ಜೋಷ್ ರಜೆಗೆ ಬಂದು ಹೋಗಿದ್ದೂ ಆಗಿತ್ತು. ಅವರ ಸೇವಾಂತ್ಯದ ಸಂಪೂರ್ಣ ಹಣ ಇನ್ನೂ ಬಂದಿರಲಿಲ್ಲವಾದರೂ, ಅವರು ಕೆಲಸಕ್ಕೆ ಭಾರತದಲ್ಲಿ ಹಾಜರಾಗಲೇಬೇಕಾದ ದಿನ ಹತ್ತಿರವಾದ್ದರಿಂದ, ಅವರ ಶ್ರೀಮತಿ ಅಲ್ಲಿಯವರೆಗೆ ಮೊಗದಿಶುವಲ್ಲೇ ಉಳಿದರು. ಹಾಗಾಗಿ, ಆ ಹಣಕ್ಕಾಗಿ ಓಡಾಡಿ, ಆ ಶಿಲ್ಲಿಂಗ್ ರೂಪದ ಹಣಕ್ಕೆ ಬ್ಯಾಂಕಿನಲ್ಲಿ ಡಾಲರಿನ ಡ್ರ್ಯಾಫ್ಟ್ ತೆಗೆದು ಕಳಿಸುವ ಜವಾಬ್ದಾರಿ ನನಗೆ ಒದಗಿದ್ದು ಖುಷಿಯಾಯಿತು; ಹೀಗಾದರೂ ಅವರ ಅನ್ನದ ಋಣ ತೀರಿಸಿದ ತೃಪ್ತಿ ಸಿಗುವುದಲ್ಲ ಎಂದು. ನನಗೆ ಅಷ್ಟು ಹೊತ್ತಿಗೆ ಮೊಗದಿಶುವಿನಲ್ಲಿ ತುಂಬಾ ಕಛೇರಿಗಳಿಂದ ಬರುತ್ತಿದ್ದ ರೋಗಿಗಳ ಸೇವೆಸಲ್ಲಿಸಿ, ಅನೇಕ ಕಡೆ ಜನರ ಪರಿಚಯ ಚನ್ನಾಗಿಯೇ ಆಗಿತ್ತು. ಆದರೂ ಆ ಕೆಲಸ ಪೂರೈಸಲು ಎರಡು ವಾರಕ್ಕೂ ಹೆಚ್ಚು ಕಾಲ ಹಿಡಿಯಿತು; ನಮ್ಮ ದೇಶದಲ್ಲಾಗಿದ್ದರೆ? ಅದು ನಿಮ್ಮ ಕಲ್ಪನೆಗೆ ಬಿಟ್ಟಿದ್ದು! ಅಂತೂ ಕುಟುಂಬ ಸಹಿತ ಏರ್ಪೋರ್ಟಿಗೆ ಹೋಗಿ, ವರ್ಗೀಸರ ಶ್ರೀಮತಿಯವರನ್ನು ಭಾರತದತ್ತ ಬೀಳ್ಕೊಟ್ಟಿದ್ದೆವು.
ಅಣ್ಣನಿಗೂ ಏಕೋ ಸೋಮಾಲಿಯ ಕೆಲಸಕ್ಕೆ ತಿಲಾಂಜಲಿ ಹೇಳಿ ಇನ್ನೂ ಇತರ ದೇಶಗಳನ್ನು ಸುತ್ತಿ ಕೆಲಸ ಮಾಡುವ ಖಯಾಲಿ ಆರಂಭ ಆಗಿತ್ತು. ಆದರೆ ನನಗೆ ಗಯಾನ ಭ್ರಮನಿರಸನದ ನಂತರ, ಹಳೇ ಗಂಡನ ಪಾದವೇ ಗತಿ ಅನ್ನುವ ಹಾಗೆ, ಸೋಮಾಲಿಯಾನೇ ನನ್ನ ಕಾಯಕದ ಅಂತಿಮ ವಿದೇಶ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೆ. ಅಲ್ಲದೆ ವರ್ಷಕ್ಕೊಮ್ಮೆ ಭಾರತಕ್ಕೆ ಹೋಗಿ ನನ್ನ ತಾಯಿಯ ದರ್ಶನ ಮಾಡಬಹುದಲ್ಲ ಎಂಬಾಸೆ! ಅಣ್ಣ, ಅತ್ತಿಗೆ ಮತ್ತು ಮಗಳನ್ನು ಭಾರತಕ್ಕೆ ಕಳಿಸಿ, ಅವರು ಭಾರತದ ಬದಲಿಗೆ, ನೈಜೀರಿಯ, ಜಿಂಬಾಬ್ವೆ ಮುಂತಾದ ದೇಶಗಳ ರೌಂಡ್ ಟ್ರಿಪ್ ಟಿಕೆಟ್ ಪಡೆದು, ಸೋಮಾಲಯಾಕ್ಕೆ ಬೈ ಹೇಳಿ ಹೊರಟರು. ನಮ್ಮ ಅದೃಷ್ಟಕ್ಕೆ ಆಗಲೇ ತಿಳಿಸಿದ್ದ ಹಾಗೆ, ಮುದ್ದಪ್ಪ ಕುಟುಂಬ ನಮಗೆ ಬಹಳ ಆತ್ಮೀಯ ಆಗಿದ್ದರು. ಅಣ್ಣ ಮತ್ತು ವರ್ಗೀಸರು ಹೊರಟ ನಂತರದ ಶೂನ್ಯತೆಯನ್ನು ತುಂಬಲು!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ಸಂಖ್ಯೆ: 98446 45459