–೧೫–
ಮೊಗದಿಶು ಸಂತರು – 1
ಕಳೆದ ವಾರ ಲೇಖನದ ಅಂತಿಮ ಪ್ಯಾರ, ಕಣ್ತಪ್ಪಿ ಎರಡು ಬಾರಿ ಅಚ್ಚಾಗಿತ್ತು. ವಾಸ್ತವವಾಗಿ ಅದೇ ಅಂತ್ಯವೂ ಆಗಿರದೆ, ಅದರ ನಂತರ ಮತ್ತೊಂದು ಪ್ಯಾರ ಸಹ ಇತ್ತು. ಅದನ್ನು ಸರಿಪಡಿಸವ ಹೊತ್ತಿಗೆ ಆಗಲೇ ತಡವಾಗಿತ್ತು. ಆದ್ದರಿಂದ ಅದರಿಂದಲೇ ಇಂದಿನ ಲೇಖನ ಆರಂಭಿಸುತ್ತೇನೆ.
“ಅಣ್ಣನಿಗೂ ಏಕೋ ಸೋಮಾಲಿಯಾ ಬೇಸರವಾಗಿ, ಇಲ್ಲಿಯ ಕೆಲಸಕ್ಕೆ ತಿಲಾಂಜಲಿ ಹೇಳಿ,ಇತರೆ ದೇಶಗಳನ್ನು ಸುತ್ತಿ ನೋಡಿ, ಬೇರೆಡೆ ಕೆಲಸ ಮಾಡುವ ಖಯಾಲಿ ಆರಂಭ ಆಗಿತ್ತು. ಅದೇ ನನಗೆ, ಗಯಾನ ಭ್ರಮನಿರಸನದ ನಂತರ, ಹಳೇ ಗಂಡನ ಪಾದವೇ ಗತಿ ಅನ್ನುವ ಹಾಗೆ, ಸೋಮಾಲಿಯಾವೇ ನನ್ನ ಕಾಯಕದ ಅಂತಿಮ ವಿದೇಶ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೆ. ಅದೂ ಅಲ್ಲದೆ, ವರ್ಷಕ್ಕೊಮ್ಮೆ ನನ್ನ ತಾಯಿಯ ದರ್ಶನ ಮಾಡಬಹುದಲ್ಲ ಎಂಬಾಸೆ! ಅತ್ತಿಗೆ ಮತ್ತು ಮಗಳನ್ನು ಭಾರತಕ್ಕೆ ಕಳಿಸಿ, ಅಣ್ಣ ತಮಗಾಗಿ ಭಾರತದ ಬದಲಿಗೆ ಕೆನ್ಯ, ನೈಜೀರಿಯ, ಜಿಂಬಾಬ್ವೆ, ಮುಂತಾದ ದೇಶಗಳಿಗೆ ರೌಂಡ್ ಟ್ರಿಪ್ ಟಿಕೆಟ್ ಪಡೆದು, ಸೋಮಾಲಿಯಾ ದೇಶಕ್ಕೆ ಬೈಬೈ ಹೇಳಿ ಹೊರಟರು. ನನ್ನ ಅದೃಷ್ಟಕ್ಕೆ ಈಗಾಗಲೇ ತಿಳಿಸಿದ್ದಂತೆ, ಮುದ್ದಪ್ಪನವರು ಹತ್ತಿರವಾಗಿದ್ದರು. ಅಣ್ಣ ಮತ್ತು ವರ್ಗೀಸರು ಹೊರಟುಹೋದ ನಂತರದ ಶೂನ್ಯತೆಯನ್ನು ಭರ್ತಿ ಮಾಡಲು!”
ಅಣ್ಣ ಇದ್ದಾಗಲೇ “ಮಹಮ್ಮದ್” ನ ಪರಿಚಯವಾಗಿತ್ತು. ಆತ ಆರೋಗ್ಯ ಇಲಾಖೆಯಲ್ಲಿ ಮೊದಲು ವಾಹನ ಚಾಲಕನಾಗಿ ಕೆಲಸಕ್ಕಿದ್ದು, ನಂತರ ಆ ಕೆಲಸ ಬಿಟ್ಟು, ಖಾಸಗಿಯಾಗಿ ರೋಗಿಗಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ, ತಪಾಸಣೆ ಮತ್ತು ಬೇಕಾದ ಪರೀಕ್ಷೆಗಳನ್ನೂ ಮಾಡಿಸಿ, ರೋಗಿಗಳ ಮನೆಗೇ ಹೋಗಿ ಇಂಜಕ್ಷನ್ ಕೊಡುವುದು, ಡ್ರಿಪ್ ಹಾಕುವುದು ಮುಂತಾದ ಸೇವೆಗಳನ್ನು ಸಲ್ಲಿಸಿ, ನಾಲ್ಕಾರು ಕಾಸು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿ. ಅಂತಹ ರೋಗಿಗಳು ಸರ್ಕಾರಿ ಆಸ್ಪತ್ರೆಯ ಜಂಗುಳಿಯ ತಾಪತ್ರಯ ಇಲ್ಲದೆ, ಖಾಸಗಿಯಾಗಿ ಮತ್ತು ಸಾವಧಾನವಾಗಿ ವೈದ್ಯರನ್ನು ಕಾಣಬಯಸುವಂಥವರು. ಹಾಗೆ ಅನಧಿಕೃತ ಖಾಸಗಿ ತಪಾಸಣೆಗೆ ಅಲ್ಲಿ ಯಾವ ತಕರಾರೂ ಇರಲಿಲ್ಲ. ಈ ತರಹ ಸೇವೆ ಸಲ್ಲಿಸುವುದರಿಂದ, ಮಹಮ್ಮದನ ಪರಿಚಯಸ್ಥರಲ್ಲಿ ಮಂತ್ರಿಗಳಿದ್ದಾರೆ, ರಾಯಭಾರಿ ಕಛೇರಿಗಳಲ್ಲಿ ಕೆಲಸ ಮಾಡುವವರು ಮುಂತಾಗಿದ್ದಾರೆ. ಹಾಗಾಗಿ ಯಾರನ್ನು ಎಲ್ಲಿ ಬೇಕಾದರೂ ಮಾತನಾಡಿಸುವ ದಾರ್ಢ್ಯ ಇದ್ದಂಥ ವೈಶಿಷ್ಟ್ಯ ಅವನಿಗೆ. ಇಲ್ಲಿ ಇನ್ನೊಂದು ವಿಷಯ ತಿಳಸಲೇಬೇಕು. ಯಾವೊಬ್ಬ ಸೋಮಾಲಿ ರೋಗಿ ಸಹ ಎಂದೂ ಖಾಸಗಿಯಾಗಿ ನೋಡಿದ ವೈದ್ಯರಿಗೆ ದುಡ್ಡು ಕೊಡದೆ ಹೋಗುತ್ತಿರಲಿಲ್ಲ! ಒಂದೋ, ಹಾಗೆ ಹೋದರೆ, ಅವರ ರೋಗ ಖಂಡಿತ ಗುಣವಾಗದು ಎಂಬ ನಂಬಿಕೆ; ಎರಡನೆಯದಾಗಿ, ವೈದ್ಯರಿಗೆ ಫೀಸು ಕೊಡದೆ ಹೋದರೆ, ‘ಅಲ್ಲಾ’ ಒಪ್ಪುವುದಿಲ್ಲ ಎಂಬ ಅಚಲ ನಂಬಿಕೆ! ಅದೇ ನಮ್ಮ ದೇಶದಲ್ಲಿ, ಹಾಗೆ ಮೋಸ ಮಾಡುವುದೇ ಕಾಯಕ ಅನೇಕರಿಗೆ. ನನ್ನ ಮೈಸೂರಿನ ಕ್ಲಿನಿಕ್ಕಿನಲ್ಲೇ, ಚಿಲ್ಲರೆ ತರುವ ನೆಪ ಹೇಳಿ ಮಾಯವಾದ ಅನೇಕ ಚೋರರಿದ್ದಾರೆ.
ಮಹಮ್ಮದ್ ಕ್ರಮೇಣ ಅಣ್ಣನಿಗೇ ಅಲ್ಲದೆ, ನನಗೂ ರೋಗಿಗಳನ್ನು ಕರೆದು ತರುತ್ತಿದ್ದ. ಅಷ್ಟಲ್ಲದೆ, ಅನೇಕರ ಮನೆಗೆ ರೋಗ ತಪಾಸಣೆಗೆ ಅವನ ಸಂಗಡ ಹೋಗುತ್ತಿದ್ದೆ. ಈ ಮಹಮ್ಮದನಿಗೆ ‘ತಿಮಹ ಹಾದ್ದೆ‘ ಅಂತ ಅಡ್ಡ ಹೆಸರು. ಅಂದರೆ ಬಿಳಿ ಕೂದಲಿನವ ಎಂದು. ವಿಶೇಷ ಎಂದರೆ ಆ ಬಿಳಿ ಕೂದಲು ಹಣೆಯ ಹಿಂದೆ ಮಾತ್ರ ಇದ್ದದ್ದು. ಆ ದೇಶದಲ್ಲಿ ಎಲ್ಲರಿಗೂ ಅಡ್ಡ ಹೆಸರುಗಳಿರುವುದು ಮತ್ತು ಅದೇ ಹೆಸರಿಂದ ಅವರನ್ನು ಸೋಮಾಲಿ ಜನ ಕರೆಯುವುದು ಸಾಮಾನ್ಯ. ಒಬ್ಬೊಬ್ಬರ ಅಭ್ಯಾಸ, ಮುಖ ಚಹರೆ, ಅಥವ ಗುರುತು ಹಿಡಿದು ಹೆಸರಿಟ್ಟುಬಿಡುವ ವಾಡಿಕೆ ಮತ್ತು ಅದರಲ್ಲವರು ನಿಸ್ಸೀಮರು! ಹೀಗೆ, ‘ಲಂಗಡೆ’ – ಕುಂಟ, ‘ಆನೋಗೆ’ – ಒಂಟೆ ಹಾಲಲ್ಲೇ ಬದುಕಿದವ, ‘ಹಬ್ಸದೆ’ – ಸಿಕ್ಕಿದ್ದೆಲ್ಲ ತನಗೇ ಇರಲೆಂದು ದೋಚುವವನು, ಮುಂತಾಗಿ… ಈ ಅಡ್ಡ ಹೆಸರಿಂದ ಆ ದೇಶದ ಅಧ್ಯಕ್ಷ, “ಸಿಯಾದ್ ಬರ್ರೆ “ಸಹ ಹೊರತಲ್ಲ. ಆತನಿಗೆ, ‘ಅಫ್ ವೈನ್’ ಎಂಬ ಅಡ್ಡ ಹೆಸರುಂಟು. ಅಂದರೆ, ದೊಡ್ಡ ಬಾಯಿ ಎಂದರ್ಥ! ಒಳಗಿನ ಅರ್ಥ ವಿವರಿಸುವ ಅಗತ್ಯವಿಲ್ಲ, ಅಲ್ಲವೇ?
ಹೀಗೆ ರೋಗಿಗಳಿದ್ದ ಕಡೆಗೇ ಹೋಗಿ ಬರುತ್ತಿದ್ದಂತಹ ಸಂದರ್ಭಗಳಲ್ಲಿ ನಾನು ಎದುರುಗೊಂಡ ಕೆಲವು ಘಟನೆಗಳು ಈಗಲೂ ಅಚ್ಚಳಿಯದೆ ನೆನಪಿನಲ್ಲಿದೆ.
ಒಮ್ಮೆ ಇದೇ ಮಹಮ್ಮದ್ ಸಂಗಡ ರೋಗಿ ಒಬ್ಬನನ್ನು ನೋಡಲು ಒಂದು ದೊಡ್ಡ ಕಟ್ಟಡದೊಳಕ್ಕೆ ಹೋದೆ. (ಇಲ್ಲಿ ಇನ್ನೊಂದು ವಿಷಯ. ಮೊಗದಿಶುವಲ್ಲಿ ಐಶ್ವರ್ಯವಂತರ ಮನೆಗಳಲ್ಲಿ ಬಹುತೇಕ ಚಾವಣಿ ಎತ್ತರದ ಕಾಂಪೌಂಡ್ ಗೋಡೆಗಳು ಮತ್ತು ಅಷ್ಟೇ ಎತ್ತರದ ಗೇಟುಗಳೂ ಸಾಮಾನ್ಯ. ಆದರೆ, ಹಾರ್ಗೀಸಾದಲ್ಲಿ ಹಾಗಿದ್ದದ್ದನ್ನು ನಾನು ಕಂಡಿಲ್ಲ). ಆ ಮನೆಯ ಹಾಲ್ ಒಳಗೆ ಸಾಕಷ್ಟು ಜನರು ಕಾಯುತ್ತಾ ಕುಳಿತಿದ್ದರು. ಒಳಗಿದ್ದ ವ್ಯಕ್ತಿಯ ದರ್ಶನಕ್ಕೆ ಅಂತ ಅಂದುಕೊಂಡೆ. ನಮ್ಮ ಮಹಮ್ಮದ್ ಸೋಮಾಲಿ ಭಾಷೆಯಲ್ಲಿ ಅವರಿಗೆ, ‘ಈತ ವೈದ್ಯ ಮತ್ತು ನಿಮ್ಮ ಶೇಕ್ ನ ತಪಾಸಣೆಗೆ ಬಂದಿದ್ದಾರೆ’ ಎಂದು ಪ್ರಕಟಣೆ ಮಾದರಿಯಲ್ಲಿ ಎಲ್ಲರಿಗೂ ಕೇಳುವ ಹಾಗೆ ಹೇಳಿ, ನನ್ನನ್ನು ನೇರ ಒಳಗೆ ಕರೆದೊಯ್ದ, ಒಳಗೆ ಮತ್ತೊಂದು ಹಾಲ್; ಅಲ್ಲಿ ಒಬ್ಬ ಬಿಳಿ ಉಡುಪಿನ ಗುರು ಮತ್ತು ಆತನ ಎದುರು ಅನೇಕ ವಿದ್ಯಾರ್ಥಿ ಸಮೂಹ. ಮೊಹಮ್ಮದ್ ಆ ಗುರುವಿನ ಕಿವಿಯಲ್ಲಿ ಏನೋ ಹೇಳಿ, ಆತನೊಡನೆ ಬೇರೊಂದು ಕೊಠಡಿಗೆ ನನ್ನನ್ನೂ ಬರುವಂತೆ ಸನ್ನೆ ಮಾಡಿ ಹೋದ. ಆತ ತನಗೆ ಬಹಳ ದಿನಗಳ ಕೆಮ್ಮು ವಾಸಿಯಾಗುತ್ತಿಲ್ಲ, ಪರೀಕ್ಷಿಸಿ ನೋಡಿ ಎಂದು ಮಂಚದಲ್ಲಿ ಕೂತ. ಆತನ ಬಿಳಿ ನಿಲುವಂಗಿ ತೆಗೆಸಿ, ಸ್ಟೆತಾಸ್ಕೋಪ್ ಇಟ್ಟರೆ, ಆಶ್ಚರ್ಯ; ಆತನಿಗೆ ಕ್ಷಯರೋಗ! ಆದರೆ ಅಷ್ಟು ಮಂದಿ ಅವನಿಗಾಗಿ ಹೊರಗೆ ಕಾಯುತ್ತಿದ್ದಾರೆ, ಹಾಗೂ ಒಳಗೆ ಈ ವಿದ್ಯಾರ್ಥಿಗಳ ಗುಂಪು ಬೇರೆ! ಸಾಕಲ್ಲವೇ ಕ್ಷಯದಂತಹ ಮಹಾಮಾರಿ ರೋಗ ಹರಡಲು. ನನ್ನ ಮೊಗದಿಶು ಕ್ಲಿನಿಕ್ಕಿನಲ್ಲಿ ಸಹ ಪ್ರತಿದಿನ ಕನಿಷ್ಠ ಅರ್ಧ ಡಜನ್ ಓಪನ್ ಟಿ ಬಿ ರೋಗಿಗಳನ್ನು ನೋಡುತ್ತಿದ್ದೆ. ಸೋಮಾಲಿಯಾದಲ್ಲಿ ನನ್ನ ಹದಿಮೂರು ವರ್ಷದ ಸೇವೆ ಅವಧಿಯಲ್ಲಿ, ಕಂಡಷ್ಟು ಟಿಬಿ ರೋಗಿಗಳನ್ನು, ಭಾರತದಲ್ಲಿ ನನ್ನ ಇಡೀ ಜೀವನದಲ್ಲಿ ಕನಸಲ್ಲೂ ಕಾಣಲು ಸಾಧ್ಯ ಇಲ್ಲ. ಸಾವಿರಗಟ್ಟಲೆ ಲೆಕ್ಕದಲ್ಲಿ ನೋಡಿದ್ದೇನೆ. ನನಗೂ ಟಿ ಬಿ ಅಂಟಿಬಿಡುವ ಭಯವಿದ್ದರೂ ಸಹ; ಸದ್ಯ ಹಾಗಾಗದೆ ಬಚಾವಾಗಿ ಬಂದೆ. ನನ್ನ ಅದೃಷ್ಟಕ್ಕೆ ಆ ಗುರುವಿಗೆ ಇಂಗ್ಲೀಷ್ ತಿಳಿಯದು. ಹಾಗಾಗಿ ಮಹಮ್ಮದ್ ಕಿವಿಯಲ್ಲಿ ಸ್ವಲ್ಪ ಜೋರು ದನಿಯಲ್ಲಿ ಆತನ ಕಾಯಿಲೆಯ ವಿಷಯ ತಿಳಿಸಿದೆ. ಮಹಮ್ಮದ್ ನನಗೆ ಸನ್ನೆ ಮಾಡಿ, ಕೆಮ್ಮಿಗೆ ಔಷಧಿ ಬರೆದುಕೊಟ್ಟು ಬನ್ನಿ ಎಂದ. ಹಾಗೇ ಮಾಡಿದೆ, ವಿಧಿಯಿಲ್ಲದೆ. ಹೊರಗೆ ಬಂದು ಕಾರಲ್ಲಿ ಕೂತಾಗ, ಆತ ಒಬ್ಬ ದೊಡ್ಡ ಶೇಕ್ ಎಂದೂ, ಅಕಸ್ಮಾತ್ ಟಿ ಬಿ ಎಂದು ತಿಳಿಸಿದರೂ ತನ್ನ ಪಾಠ ಪ್ರವಚನ ಬಿಡುವವನಲ್ಲ; ಮೇಲಾಗಿ, ಎಲ್ಲ ಹಂತದಲ್ಲೂ ಆತ ಬಹಳ ಪ್ರಭಾವಶಾಲಿ ಎಂದ. ನನಗೆ ಕಾರಲ್ಲಿ ಕೂತು ಆಕಾಶದತ್ತ ನೋಡುತ್ತ, ಅಯ್ಯೋ ಪಾಪ, ಎಂಥ ಮುಗ್ಧ ಜನ ಅನ್ನಿಸಿ ನೋವಾಯಿತು.
ಮೊಗದಿಶು ಬದುಕು ಆರಂಭದಿಂದ ನನ್ನ ಕಿವಿಗೆ ಆಗಾಗ ತಟ್ಟುತ್ತಿದ್ದ ಒಂದು ಹೆಸರೆಂದರೆ ‘ಶೇಕ್ ಅಬ್ಬಾ’! ವಾಸ್ತವವಾಗಿ ಹರ್ಗೀಸಾದಲ್ಲಿ ಕೂಡ, ಸೋಮಾಲಿ ಜನರು ಭಯ ಭಕ್ತಿಯಿಂದ ಉಚ್ಛರಿಸುತ್ತಿದ್ದ ಶೇಕ್ ಅಬ್ಬಾ ಎಂಬ ಆ ಎರಡು ಪದಗಳು ನನ್ನ ಕಿವಿಗೆ ಆಗೊಮ್ಮೆ ಈಗೊಮ್ಮೆ ಬಿದ್ದಿದ್ದವು. ಕ್ಲಿನಿಕ್ಕಿನಲ್ಲಿಯ ಕೆಲಸದ ಮಧ್ಯೆ ಸಹ ದಿನಂಪ್ರತಿ ಅನೇಕ ಬಾರಿ ಕೇಳುತ್ತಿದ್ದೆ. ಕೆಲವೊಮ್ಮೆ ನನ್ನೆದುರಿಗೇ ಶೇಕ್ ಅಬ್ಬಾ ಹತ್ತಿರ ಒಮ್ಮೆ ಹೋಗಿ ನೋಡಿ ಎಂಬ ‘ಅಮೂಲ್ಯ ಸಲಹೆ’ಯನ್ನು ರೋಗಿಗಳಿಗೆ ದಯಪಾಲಿಸುವವರೂ ಇದ್ದರು. ಆದರೂ ಆ ಹೆಸರಿನ ಬಗ್ಗೆ ನನಗಂತೂ ಕುತೂಹಲ ಕೆರಳಿರಲಿಲ್ಲ.
ಮೊಗದಿಶುವಿನಲ್ಲಿ ಮುಖ್ಯವಾಗಿ ಎರಡು ಪ್ರಮುಖ ಶೇಕ್ ತಾಣಗಳಿದ್ದುದು ನನಗೆ ರೋಗಿ ಒಬ್ಬರಿಂದ ತಿಳಿಯಿತು. ಪ್ರಥಮ ಶೇಕ್ ಸೂಫಿಯವರದ್ದು. ಈಗ ಅವರಿಲ್ಲ; ಸಮಾಧಿಯಿದೆ. ಅದು ಅಲ್ಲಿಯವರ ಆರಾಧನಾ ತಾಣ. ಮುಸಲ್ಮಾನರು ಮಾತ್ರ ಅಲ್ಲದೆ, ಹಿಂದಿನಿಂದ ನೆಲಸಿರುವ ಜೈನರು, ಹಿಂದಗಳು ಮತ್ತು ಗುಜರಾತಿ ವ್ಯಾಪಾರಿಗಳೂ ಸಹ ಭಕ್ತಿಯಿಂದ ಆ ಸಮಾಧಿಗೆ ಹೋಗುವುದುಂಟು. ಮುಖ್ಯ ಕೆಲಸ ಆಗಬೇಕಾದಾಗ, ಅಥವ ಕಾಯಿಲೆಗಳು ಗುಣವಾಗಲು ಮುಂತಾಗಿ ಎಲ್ಲದಕ್ಕೂ ಆ ಸಮಾಧಿಯ ಮುಂದೆ ಪ್ರಾರ್ಥನೆ ಮಾಡುವ ರೂಢಿ.
ಶೇಕ್ ಸೂಫಿ ಸಮಾಧಿಯಲ್ಲದೆ, ಜೀವಂತ ಇರುವ ಶೇಕ್ ಅಬ್ಬಾನದ್ದೇ ಬಹುಮುಖ್ಯ ಹಾಗೂ ದೇಗುಲದ ಹಾಗಿರುವ ಇನ್ನೊಂದು ತಾಣ. ಅನೇಕರ ಪ್ರತಿ ಕಾರ್ಯಕ್ಕೂ ಶೇಕ್ ಅಬ್ಬಾ ಅನಿವಾರ್ಯ – ಮದುವೆಗೆ, ನಿಶ್ಚಿತಾರ್ಥಕ್ಕೆ, ಸಾವಿಗೆ, ಕಾಯಿಲೆ ಗುಣಪಡಿಸಲು, ಮಕ್ಕಳಿಲ್ಲದವರಿಗೆ ಹೀಗೆ! ಶೇಕ್ ಅಬ್ಬಾ ಅಲ್ಲಾನ ನಾಮ ಜಪಿಸಿ ಏನೇ ಕೊಟ್ಟರೂ ಅದು ಮಹಾಪ್ರಸಾದ, ಸಿದ್ಧೌಷಧ. ಆತನ ಉಗುಳೂ ಶ್ರೇಷ್ಠ! ನಮ್ಮಲ್ಲಿ ಶನಿಚರಿತ್ರೆ, ಪುರಾಣ, ರಾಮಾಯಣ, ಭಾರತ ಪಠಣ ಮಾಡಿಸುವ ಹಾಗೆ, ಸೋಮಾಲಿ ಮನೆಗಳಲ್ಲಿ ಒಳ್ಳೆ ಕಾರ್ಯದ ಆರಂಭದ ಮುನ್ನ, ಕಷ್ಟ ಪರಿಹಾರಾರ್ಥ, ಅನಾರೋಗ್ಯ ಸಂದರ್ಭಗಳಲ್ಲಿ ಪವಿತ್ರ ಕುರಾನ್ ಪಠಣ ಮಾಡಿಸುವ ರೂಢಿ. ಅದಕ್ಕೆ ಅನೇಕ ಶೇಕರಿದ್ದಾರೆ. ಆದರೆ, ಶೇಕ್ ಅಬ್ಬಾನ ಬಾಯಿಂದ ಓದಿಸುವುದು ಮಹಾಪುಣ್ಯ. ಆದರದು ಎಲ್ಲರಿಗೂ ಎಟುಕದ ಸ್ಥಿತಿ – ಅಥವ ಎಟುಕದ ಸಿರಿವಂತಿಕೆ ಅಂದರೂ ಆದೀತು. ಮೇಲಾಗಿ, ಶೇಕ್ ಅಬ್ಬಾ ಅಧ್ಯಕ್ಷರ ನಿಕಟವರ್ತಿ ಕೂಡ!
ಈ ಶೇಕ್ ಅಬ್ಬಾ ಆಗಿಂದಾಗ್ಗೆ ಸೌದಿ ಅರೇಬಿಯಾಕ್ಕೆ ಹೋಗಿ ಬರುವುದುಂಟು. ಇಸ್ಲಾಂ ಧರ್ಮದ ಪ್ರಚಾರ ಕಾರ್ಯದಂತಹ ಪುಣ್ಯದ ಕೆಲಸವನ್ನು ತನ್ನ ಹೆಗಲ ಮೇಲೆ ಹೊತ್ತ ಈತನಿಗೆ, ಸೌದಿಯ ಆಳುವ ರಾಜವಂಶವೇ ವಿಶೇಷವಾಗಿ ಟಿಕೆಟ್ಟುಗಳನ್ನು ನೀಡಿ ಕರೆಸಿಕೊಳ್ಳುತ್ತಾರೆ ಎಂಬ ಪ್ರತೀತಿ ಸಹ ಇದೆ.
ಇನ್ನೊಂದು ಉಪಕತೆ ಇಲ್ಲಿ ಅಪ್ರಸ್ತುತ ಆಗದು. ಭಾರತೀಯ ಮೂಲದ ಹುಸೇನ್ ಎಂಬ ಅಕ್ಕಸಾಲಿಗನ ತಂದೆ, ತಾಯ್ನಾಡಿಂದ ವ್ಯಾಪಾರಕ್ಕೆಂದು ಹೋಗಿದ್ದ ಹಿಂದು. ಆತ ಅಲ್ಲಿಯೇ ‘ಶೇಕಾಲ್’ ಎಂಬ ಪಂಗಡದ ಹೆಣ್ಣನ್ನು ಮದುವೆಯಾಗಿ, ಮುಸಲ್ಮಾನನಾಗಿದ್ದ. ಈಗ ಆತನಿಲ್ಲ; ಆದರೆ ಸಾಕಷ್ಟು ಮಕ್ಕಳನ್ನು ಮಾಡಿ ಭಾರೀ ದೊಡ್ಡ ವಂಶವನ್ನೇ ಬೇರಿಳಿಸಿ ತೆರಳಿದ್ದಾನೆ. ಹುಸೇನನಿಗೆ, ತನ್ನ ಸಹೋದರರ ರೀತಿ ಡಜನ್ನುಗಟ್ಟಲೆ ಇಲ್ಲದೆ, ಒಬ್ಬನೇ ಒಬ್ಬ ಮಗ ಒಂದು ಕಾಲದಲ್ಲಿ ಇದ್ದವನು. ಆದ್ದರಿಂದ, ಆತನ ಮಡದಿ ಬಹಳ ಮೂದಲಿಕೆಗೆ ಒಳಗಾಗಿ, ಅನೇಕ ವೇಳೆ ಗಂಡನ ತಾತ್ಸಾರದಿಂದಲೂ ಜರ್ಜರಿತವಾದ ಹೆಣ್ಣು, ‘ಕುಸುಮ್’. ಇನ್ನೂ ಹೆಚ್ಚು ಪುತ್ರ ಸಂಪತ್ತಿಗಾಗಿ, ಗಂಡನ ಎರಡನೇ ಮದುವೆಯ ತದೇಕ ಭಯದಿಂದ, ಆಕೆ ಕಾಣದ ಪಂಡಿತರಿಲ್ಲ, ವೈದ್ಯರಿಲ್ಲ. ‘ಅಲ್ಲಾ’ನ ‘ದುವಾ’ಕ್ಕಾಗಿ ಮೊರೆ ಹೋದ ಲೆಕ್ಕವಿಲ್ಲ. ಆದ್ದರಿಂದ ಕುಸುಮ್ ಶೇಕ್ ಅಬ್ಬಾನ ಮನೆಗೆ ಎಡೆತಾಕುತ್ತಿದ್ದಳು. ಆಕೆಗೆ ಮತ್ತು ಅವಳಂತಹ ಅನೇಕ ದಿಕ್ಕು ತೋಚದ ಇನ್ನಿತರ ಮಹಿಳೆಯರಿಗೆ, ಶೇಕ್ ಅಬ್ಬಾ ಮೇಲೆ ಅತ್ಯಂತ ಭಯಭಕ್ತಿ. ಎಷ್ಟೋ ತಿಂಗಳುಗಳು ಹೀಗೆ ಉರುಳಿದ ನಂತರ, ಮೊದಲ ಮಗನನ್ನು ಹೆತ್ತು ಹದಿನಾರು ವರ್ಷಗಳಾದ ಮೇಲೆ, ಗರ್ಭಿಣಿಯಾದ ಹುಸೇನನ ಹಂಡತಿ, ಕುಸುಮ್ ಹಡೆಯಬೇಕೆಂಬ ತನ್ನ ಮಹದಾಸೆಯನ್ನು ಇನ್ನೊಂದು ಗಂಡು ಮಗುವಿಗೆ ಜನನವಿತ್ತು ಪೂರೈಸಿದ್ದಳು! ಮತ್ತು ತಾನು ಬಂಜೆ ಅಲ್ಲವೆಂದು ತನ್ನ ವಠಾರದ ಎಲ್ಲ ರಕ್ತ ಸಂಬಂಧಿಗಳಿಗೂ ಹೆರಿಗೆ ನೋವಿನಲ್ಲಿ ಸ್ವಲ್ಪ ಬಲವಾಗಿಯೇ ಚೀರಿ ಸಾಬೀತುಪಡಿಸಿದ್ದಳು. ಹಾಗಾದರೆ ಶೇಕ್ ಮೇಲಿನ ಭಕ್ತಿ ಅವಳಿಗೆ ಫಲವಿತ್ತಿತ್ತೇ?
ಹೀಗಾಗಿ ನನಗೆ ಒಂದು ರೀತಿಯ ಕುತೂಹಲ ಉಂಟಾಗಿ, ಕ್ರಮೇಣ ಶೇಕ್ ಅಬ್ಬಾ ಬಗ್ಗೆ ಯಾರು ಏನು ಹೇಳಿದರೂ ಗಮನವಿಟ್ಟು ಕೇಳತೊಡಗಿದ್ದೆ. ಆತ ದೈವಾಂಶಸಂಭೂತನೇ ಇರಬಹುದೇ ಎಂದು! ನನ್ನ ಕಲ್ಪನೆಯಲ್ಲಿ, ಆತ ಒಬ್ಬ ವಯೋವೃದ್ಧ; ಅನೇಕ ಸೋಮಾಲಿಗಳಂತೆ ಆರಡಿ ಎತ್ತರ; ಬಹುಶಃ ಕಪ್ಪು ಬಣ್ಣ; ಬಿಳಿಯ ನಿಲುವಂಗಿ; ಬೋಳುತಲೆಯ ಮೇಲೆ ಇಸ್ಲಾಂ ಧರ್ಮದ ಟೋಪಿ; ಹುಲುಸಾದ ಗಡ್ಡ, ಮೀಸೆಗಳು ಬೆಳ್ಳಿಯಂತೆ ಹೊಳೆವ ಬಿಳಿ ಬಣ್ಣದ್ದು; ಅಥವ ‘ಹೆನ್ನಾ’ ಹಚ್ಚಿ ಕೆಂಚು; ಹೊದೆಯಲು ಶಾಲು; ಹೀಗೆ ಆತನ ನಿಲುವು, ಆಕಾರ ಮುಂತಾಗಿ ಮನದೊಳಗೆ ಚಿತ್ರಿಸಿದ್ದೆ.
ನಾವಿದ್ದ ನಾಲ್ಕನೇ ಬಾಡಿಗೆ ಮನೆಯ ಒಡೆಯ ಮಿಸ್ಟರ್ ‘ಆಲಿ’. ನಮ್ಮದು ಮಹಡಿ ಮೇಲೆ. ಕೆಳಗೆ ಆಲಿಯ ತಂದೆ, ಮಲತಾಯಿಯ ವಾಸ. ಅಕ್ಕಪಕ್ಕ ಎಲ್ಲ ಆಲಿಯ ರಕ್ತ ಸಂಬಂಧಿಗಳೆ. ಶೇಕ್ ಅಬ್ಬಾ ನನ್ನ ಮರೆವಿನ ಗುಡಾರ ತಲಪುವ ಸಮಯವಾಗಿತ್ತು. ಅದೇ ಹೊತ್ತಿಗೆ ಆಲಿಯ ಮೊಮ್ಮಗಳ, ಅಂದರೆ ಆತನ ಮಗಳ ಕುಡಿಯ, ‘ನಿಕಾ’ ನಿಶ್ಚಯವಾಗಿ, ಆಲಿ ನನ್ನಲ್ಲಿ ಬಂದು ‘ಆ ಶುಭ ಕಾರ್ಯವನ್ನು ನಿಮ್ಮ ಮನೆಯ ಮಾಳಿಗೆಯ ಮೇಲೆ ಮಾಡಲು ನಿಮ್ಮ ಅಭ್ಯಂತರ ಇಲ್ಲದಿದ್ದರೆ ಒಪ್ಪಗೆ ಕೊಡಿ’ ಎಂದು ಕೇಳಿದ. ಅವನ ಮನೆಗೆ ನನ್ನ ಅಭ್ಯಂತರ! ಎಂಥ ನಾಗರಿಕತೆ ಅನ್ನಿಸಿತು. ‘ನಿಕಾ’ ದಿನ ನಮ್ಮ ಮನೆಯಲ್ಲೇ ಮದುವೆ ಸಂಭ್ರಮ. ನಮಗೇ ಕೂರಲೂ ತಾವಿರಲಿಲ್ಲ. ರಾಶಿ ರಾಶಿ ಹಲ್ವ, ಬಿಸ್ಕತ್ತು, ಕೊಕಾಕೋಲ, ಫ್ಯಾಂಟ ಸೀಸೆಗಳು ನಮ್ಮ ವಿಶಾಲ ಹಜಾರದಲ್ಲೇ ಶೇಖರಣೆಯಾಗಿದ್ದು. ಜೊತೆಗೆ ಎಲ್ಲೆಲ್ಲೂ ಧೂಪ. ಈ ಮಧ್ಯೆ ಸಂಜೆ ಹೊತ್ತಿಗೆ ‘ನಿಕಾ’ ಮಾಡಲು ಸ್ವತಃ ಶೇಕ್ ಅಬ್ಬಾ ಬರುವ ಸುದ್ದಿ!
ನನ್ನನ್ನು ಶೇಕ್ ಅಬ್ಬಾ ಬರುವ ಸುದ್ದಿ ಬಹಳ ಕುತೂಹಲಿಯನ್ನಾಗಿಸಿ, ಅದಕ್ಕಾಗಿ ಕಾಯುತ್ತಿದ್ದೆ. ಸಂಜೆ ಶೇಕ್ ಅಬ್ಬಾ ಬಂದಾಗ ರಾಜ ಯೋಗಿಯ ಮರ್ಯಾದೆ. ಆತನ ಸುತ್ತಲೂ ಬೃಹತ್ ಕೋಟೆಯಂತೆ ಜನ. ಆತನಿಗೆ ಮುತ್ತಿಟ್ಟುಕೊಳ್ಳುವ, ಯಾವುದಾದರೊಂದು ಮೈ ಭಾಗ ತಮ್ಮ ಶರೀರ ಮುಟ್ಟಿದರೆ, ತಟ್ಟಿದರೆ ಕೃತಾರ್ಥರೆಂಬ ಆಶಾಭಾವುಕರು ನೂರಾರುಗಟ್ಟಲೆ ನೆರೆದಿದ್ದ ಸಂದಣಿ ಶೇಕ್ ಅಬ್ಬಾನನ್ನು ನುಂಗಿ, ದೂರದಿಂದಲಾದರೂ ನೋಡುವ ಇಚ್ಛೆಯಿದ್ದ ನನಗೆ ಸಂಪೂರ್ಣ ನಿರಾಸೆ. ಮಹಡಿಮೇಲೆ ಹೋಗಿ ಸಹ ಪ್ರಯತ್ನಿಸಿದೆ. ಸುತ್ತ ಗೋಡೆಯಾಗಿದ್ದ ಜನರ ಸಂತೆಯ ನಡುವೆ, ದೀಪದ ಬೆಳಕು, ಮೋಡವಾಗಿದ್ದ ಧೂಪ ಎಲ್ಲ ಸೇರಿ ಆತನ ಕ್ಷಣ ದರ್ಶನವನ್ನೂ ಅಸಾಧ್ಯವಾಗಿಸಿ, ನಿರಾಸೆಯಾಗಿತ್ತು. ಆ ಘಟನೆಯನ್ನೇ ಮರೆತೆ – ದಿನಂಪ್ರತಿ ಆತನನ್ನು ನೆನಪಿಗೆ ತರುವ ಝರಿಯೇ ಸುತ್ತ ಹರಿದಿದ್ದೂ ಸಹ.
ಮುಂದಿನ ವಾರ… “ಶೇಕ್ ಅಬ್ಬಾ ನ ಭೇಟಿ “
ಅರಕಲಗೂಡು ನೀಲಕಂಠ ಮೂರ್ತಿ