ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-೧೬

ಮೊಗದಿಶು ಸಂತರು – 2

ಕಳೆದ ಸಂಚಿಕೆಯಲ್ಲಿ…

ಮೊಗದಿಶುವಿನಲ್ಲಿ ಹಾಗು ಹರ್ಗೀಸದಲ್ಲಿ ಆರಂಭದಿಂದ ನನ್ನ ಕಿವಿಗೆ ಆಗಾಗ ತಟ್ಟುತ್ತಿದ್ದ ಒಂದು ಹೆಸರೆಂದರೆ ‘ಶೇಕ್ ಅಬ್ಬಾ’! ಅಂತಹ ಮನುಷ್ಯನನ್ನು ನೋಡಲು ಕೊತುಹಲವಿದ್ದ ನನಗೆ ನಮ್ಮ ಮನೆಯ ಒಂದು ಭಾಗದಲ್ಲೇ ನೆಡೆದ ಮದುವೆಯೊಂದರಲ್ಲಿ ಜನರ ಗುಂಪಿನ ಗಲಾಟೆಯಿಂದ ನೋಡುವ ಅವಕಾಶ ತಪ್ಪಿಹೋಗಿತ್ತು“.

ಆ ಒಂದು ದಿನ, ತಿಮಹ ಹಾದ್ದೆ (ನಾನೆಂದೂ ಮಹಮ್ಮದನನ್ನು ಹಾಗೆ ಕರೆವ ಹಕ್ಕು ಚಲಾಯಿಸಿಲ್ಲ) ಮನೆಗೆ ಬಂದು ರೋಗಿಯೊಬ್ಬರನ್ನು ನೋಡಲು ಕರೆದ. ಬಹಳ ಮುಖ್ಯ ವ್ಯಕ್ತಿ ಎಂದ. ನಾನೆಂದೂ ಆತನಿಗೆ ಆಗಲ್ಲ ಎಂದವನಲ್ಲ. ಹೊರಡುವ ಮುನ್ನ ‘ಶಾಯ್ ರಿಂಜಿ’ (ಬ್ಲ್ಯಾಕ್ ಟೀ) ಕುಡಿಯುತ್ತ, ರೋಗಿಯ ಬಗ್ಗೆ ವಿಚಾರಿಸಿದೆ. ಆಶ್ಚರ್ಯ ಕಾದಿತ್ತು. ಶೇಕ್ ಅಬ್ಬಾನೇ ಅಂದಿನ ರೋಗಿ! ಅಷ್ಟೊಂದು ಪ್ರಸಿದ್ಧ ವ್ಯಕ್ತಿಯ ವಾಸ ಭವ್ಯ ಬಂಗಲೆಯಲ್ಲೇ ಇರಬೇಕೆಂಬ ಲೆಕ್ಕದಲ್ಲಿ ಮಹಮ್ಮದ್ ನನ್ನು ಕೇಳಿದೆ. ಆತ ‘ಹಮರ್ ವೇನ್’ ನಲ್ಲಿ ಎಂದು ಮಹಮ್ಮದ್ ತಿಳಿಸಿದಾಗ ನಿರಾಸೆ. ‘ಹಮರ್’ ಎಂಬುದು ಮೊಗದಿಶುವಿನ ಹಳೆಯ ಹೆಸರು. ‘ವೇನ್’ ಅಂದರೆ ದೊಡ್ಡದು. ಈಗ ಸಹ ಸೋಮಾಲಿ ಜನ ಹಮರ್ ಎಂದೇ ಕರೆಯುವುದು. ಅದು ದಶಕಗಳಿಂದ ಇದ್ದ, ಹಿಂದೂಮಹಾಸಾಗರದ ಅಂಚಿಗೇ ಇರುವ ಅಂದಿನ ಊರು. ಶತಮಾನಗಳ ಹಳೆಯ ಕಟ್ಟಡಗಳು, ಒಮ್ಮೆ ಭೂಕಂಪ ಆದರೆ ಇಡೀ ಹಮರ್ ವೇನ್ ದಿಢೀರ್ ಇಲ್ಲವಾಗುವಂತಹ ಶಿಥಿಲ ಕಟ್ಟಡಗಳ ‘ಹಾಫದ್ದ’ (ಬಡಾವಣೆ). ಬೆಂಗಳೂರಿನ ಚಿಕ್ಕಪೇಟೆಯ ಹಾಗೆ, ಸಣ್ಣ ಸಣ್ಣ ಗಲ್ಲಿಗಳು, ಭಾರಿ ತಿರುವು ಮುರುವು ಮತ್ತು ಗಿಜಿಗಿಜಿ ಜನ ಸಂದಣಿ ಸಗಟು ವ್ಯಾಪಾರದ ಅಂಗಡಿಗಳು, ಜೇನುಗೂಡಿನಂತೆ ಚಟುವಟಿಕೆ. ಅಂಥ ಕಡೆ ಶೇಕ್ ಅಬ್ಬಾ ವಾಸ! ನನಗೆ ಆಶ್ಚರ್ಯ.

ಹಮರ್ ವೇನ್

ರಸ್ತೆಯುದ್ದಕ್ಕೂ ತಿಮಹ ಹಾದ್ದೆಯ ಶೇಕ್ ಗುಣಗಾನ. ದೀರ್ಘ ತಪಾಸಣೆ ಮಾಡಿ ಎಂಬ ಸಲಹೆ ಬೇರೆ.

ಕಿರಿದಾದ ಮನೆ ತಲಪಿದೆವು. ಮಹಡಿ ಮೇಲೆ ಪುಟ್ಟ ಹಜಾರ, ಎರಡೇ ಸೋಫಾ. ಶೇಕ್ ಮಸೀದಿಯಿಂದ ಬರಬೇಕೆಂದು ತಿಳಿದು, ಕಾಯುತ್ತಾ ಕೂತೆ. ಆ ಕೊಠಡಿಯಲ್ಲೆ ಇನ್ನಿಬ್ಬರು ಮಜಬೂತಾದ ಸೋಮಾಲಿ ಹೆಂಗಸರು, ದೊಡ್ಡ ಗಂಟಲಲ್ಲಿ ಹರಟುತ್ತಾ ನಗುತ್ತಿದ್ದರು. ನನ್ನೆದುರು ಮತ್ತೊಂದು ಕೊಠಡಿಯ ಬಾಗಿಲು. ಅದು ಶಯ್ಯಾಕೋಣೆ ಎಂಬ ಪುರಾವೆಗಳಿದ್ದವು. ಆ ಬಾಗಿಲಿಗೆ ಐಶ್ವರ್ಯದ ಗುರುತಾಗಿದ್ದ ಬೆಲೆ ಬಾಳುವ ತೆಳು ಪರದೆ. ಆ ಕೊಠಡಿಯ ಮೂರನೆ ಎರಡರಷ್ಟು ಜಾಗ ಆಕ್ರಮಿಸಿದ್ದ ಎರಡು ಹಾಸಿಗೆ ಮಂಚ; ಮೇಲೆ ವಿಶಾಲ ಮೆದು ಹಾಸಿಗೆ; ಎಲ್ಲಕ್ಕೂ ಆಮದಾದ ಚಹರೆ. ಮೆಕ್ಕಾ ಮಸೀದಿ ಚಿತ್ರ, ‘ಕಾಬಾ’ ಕಲ್ಲಿನ ಚಿತ್ರ, ಪವಿತ್ರ ಕುರಾನ್ ಶ್ಲೋಕ ಮುದ್ರಿಸಿದ ಚಿತ್ರಗಳು, ಹೀಗೆ ಗೋಡೆಗಳಲ್ಲೆಲ್ಲ ಧರ್ಮದ ದರ್ಶನ. ನಾನು ಕೂತ ಕೊಠಡಿ ಹೊರಗೆ, ರಾಜೇಶ್ ಖನ್ನ ಮತ್ತು ಹೇಮ ಮಾಲಿನಿ ಕ್ಯಾಲೆಂಡರ್ – ಮನೆಯ ತರುಣರ ಅಭಿರುಚಿಯ ಸಂಕೇತ.

ಅಂತೂ ಶೇಕ್ ಅಬ್ಬಾ ಬಂದ, ಆತನ ಸಂಗಡವೇ ಮೂಗಿಗಪ್ಪಳಿಸಿದ ವಿದೇಶೀ ಸೆಂಟ್ ಘಾಟು, ಆ ಸೋಮಾಲಿ ಹೆಂಗಸರ ಸೆಂಟಿನ ಸುವಾಸನೆಯನ್ನೂ ನುಂಗಿತ್ತು! ಶೇಕ್ ಬಂದಾಗ, ಹೆಂಗಸರಾಗಲೀ, ನಾನಾಗಲೀ ಎದ್ದೇಳಲಿಲ್ಲ; ಅದು ಅವರ ಸಂಪ್ರದಾಯವಲ್ಲ. ಮಂತ್ರಿ ಕಛೇರಿಯಲ್ಲೂ ಕೂತವರು ಎದ್ದು ನಿಲ್ಲದ ಜನ.

ಇಕ್ಕಟಾದ ಗಲ್ಲಿಗಳಲ್ಲಿ ಮನೆಗಳು

“ದತೋರ್ (ಡಾಕ್ಟರ್) ಮೂರ್ತಿ” ಎಂದು ಭಯಭಕ್ತಿಯಿಂದ ಮಹಮ್ಮದ್ ನನ್ನನ್ನು ಪರಿಚಯಿಸಿದಾಗ, “ಅಹಲನ್ ವಾ ಸಹಲನ್”, ಎನ್ನುತ್ತಾ, ಏಳಲು ಆರಂಭಿಸಿದ ನನ್ನನ್ನು ತಡೆದು, “ಅಸ್ಸಲಾಮಾಲೇಕುಂ” ಎಂದು ಹೇಳಿ, ಆ ಹೆಂಗಸರ ಕೈ ಕುಲುಕಿ, ಅವರಿಗೂ ಸಲಾಂ ಹೇಳಿದ. ಗಂಡಸು, ಹೆಂಗಸೆಂಬ ಭೇದವಿಲ್ಲದೆ, ಕೈ ಕುಲುಕಿ ಮಾತಾಡುವ ಸಂಸ್ಕೃತಿ ಅಲ್ಲಿ. ಆಶ್ಚರ್ಯವೆಂದರೆ, ನಮ್ಮ ಭಾರತೀಯ ಮಹಿಳೆಯರು ಇತರೆ ವಿದೇಶೀಯರೊಡನೆ ಧಾರಾಳ ಕೈ ಕುಲುಕಿ ಮಾತಾಡುವಂತೆ, ತಮ್ಮದೇ ದೇಶದ ಗಂಡಸರಿಗೆ ಕೈ ಮುಗಿವುದು, ಇಲ್ಲ ಹಲೋ ಹೇಳುವ ರೂಢಿ! ಸೋಮಾಲಿಗಳಲ್ಲಿ ಕೈ ಕುಲುಕಿದ ನಂತರ, ಪ್ರಥಮ ವೈಯಕ್ತಿಕ ಆರೋಗ್ಯ ವಿಚಾರಿಸಿ, ಕ್ರಮೇಣ ಹೆಂಡತಿ / ಗಂಡ, ಮಕ್ಕಳು, ತಂದೆ, ತಾಯಿ, ‘ರೇರ್’ (ಪಂಗಡ), ಮತ್ತವರ ಸಾಕಿದ ಒಂಟೆ, ದನಕರುಗಳು ಹೀಗೆ ಹಂತಹಂತವಾಗಿ ಸುದೀರ್ಘವಾಗಿ ಎಲ್ಲದರ ಆರೋಗ್ಯ ಮುಂತಾಗಿ ವಿಚಾರಿಸದ ನಂತರ, ಮುಖ್ಯ ವಿಷಯಕ್ಕೆ ಬರುವುದು ಎಲ್ಲರ ವಾಡಿಕೆ!

ಪ್ರಥಮವಾಗಿ ಶೇಕ್ ತನ್ನ ಗಿರಾಕಿಗಳ ಕಡೆ ಗಮನವಿತ್ತ. ನನ್ನನ್ನು ಸ್ವಲ್ಪ ಹೊತ್ತು ಕೊರಲು ನಯವಾಗಿ ಹೇಳಿದ; ಬಹುಶಃ ಅವರೆದುರು ತನ್ನನ್ನು ಒಬ್ಬ ವೈದ್ಯರಿಗೆ ತೋರಿಸಲು ಇಷ್ಟವಿಲ್ಲದೆ. (ಅವರಿಗೆ ತಾನೇ ವೈದ್ಯ ಅಲ್ಲವೇ, ಹಾಗಾಗಿ!) ಆ ಹಂಗಸರಲ್ಲಿ ಒಬ್ಬಳು, ಸೋಫಾದಿಂದ ಕಷ್ಟಪಟ್ಟು ತನ್ನ ಬೊಜ್ಜನ್ನು ಎತ್ತಿ, ಶೇಕ್ ಹಿಂದೆಯೇ ಕೊಠಡಿಯೊಳಕ್ಕೆ ಶರೀರ ನುಗ್ಗಿಸಿದಳು. ಶೇಕ್ ಆ ಕೋಣೆಯ ಬಾಗಿಲು ಮುಚ್ಚಲಿಲ್ಲ. ಹಾಗಾಗಿ, ಎದುರಿಗೇ ಕುಳಿತಿದ್ದ ನನಗೆ, ಗಾಜಿನಂತಿದ್ದ ಬಿಳಿ ತೆರೆಯ ಮೂಲಕ ಅಲ್ಲಿ ಜರುಗುತ್ತಿದ್ದ ಎಲ್ಲವೂ ತೆರೆದಿಟ್ಟ ಪುಸ್ತಕವಾಗಿತ್ತು. ಅಬ್ಬಾ ಆಕೆಯೊಡನೆ ಸ್ವಲ್ಪ ಮಾತನಾಡಿ, ಪಕ್ಕದ ಮೇಜಿಂದ ಏನೋ ತೆಗೆದು ಮಂತ್ರಿಸಿದಂತೆ ಮಾಡಿ, ಥೂ..ಥೂ..ಥೂ..ಎಂದು ಮೂರು ಬಾರಿ ಉಗಿದು, ಅದನ್ನಾಕೆಯ ಹಸ್ತದೊಳಿಟ್ಟು, ತಕ್ಷಣ ತನ್ನ ಮಣಿಸರ ಕೈಗೆತ್ತಿಕೊಂಡು ಪ್ರಾರ್ಥಿಸಿ, ಎಣಿಸತೊಡಗಿದ. ಆ ಮಹಿಳೆ ಎಲ್ಲ ಮುಗಿದಮೇಲೆ, ತನ್ನ ಜಂಭದ ಚೀಲದಿಂದ ಹಣ ತೆಗೆದು ಮೇಜಿನ ಮೇಲಿಟ್ಟು, ತನ್ನ ಗೆಳತಿಯೊಡನೆ ಹೊರಹೋದಳು.

ತದನಂತರ ನನಗೆ ಕರೆ ಬಂತು. ಶೇಕ್ ಅಬ್ಬಾ ನನ್ನ ಕಲ್ಪನೆಯ ವ್ಯಕ್ತಿ ಆಗಿರಲಿಲ್ಲ. ಆತನ ಮುಖದಲ್ಲಿ ಗಡ್ಡ ಇರದೆ, ಮುಖ ಮತ್ತು ತಲೆ ಎಲ್ಲೂ ಕೂದಲೇ ಇರಲಿಲ್ಲ. ಸಂಪೂರ್ಣ ಕ್ಷೌರ ಮಾಡಿಸಿದ್ದ. ವಯಸ್ಸು ಅಂದಾಜು ಐವತ್ತು.ಆತನೇ ಹೇಳಿದ್ದು ನಲವತ್ತೈದೆಂದು. ಆರಕ್ಕೆ ಸ್ವಲ್ಪ ಕಮ್ಮಿ ಎತ್ತರದ, ಅರಬ್ಬೀ ಜನದಂತೆ ಬೆಳ್ಳಗೆ ಹೊಳೆವ ಬಣ್ಣದ, ಮುಖ ಮತ್ತು ಕಣ್ಣುಗಳಲ್ಲಿ ಎದ್ದು ತೋರುವ ಹೊಳಹು, ಮತ್ತು ಆಳವಾದ, ನಿಜದಲ್ಲಿ ಒಬ್ಬ ಧರ್ಮಾಧಿಕಾರಿಯ ವರ್ಚಸ್ಸು! ನೋಡಿದಾಕ್ಷಣ ಆತನ ಕಟ್ಟುಮಸ್ತು ಮೈಯ್ಯಿಗೂ, ಪೌರೋಹಿತ್ಯ ಕಾಂತಿಗೂ ಮಾರುಹೋಗದೆ, ನಂಬಿದವರಿಗೆ ಭಕ್ತಿ ಉಕ್ಕಿ ಬರದೆ ಇರದಂಥ ವ್ಯಕ್ತಿ. ನಾನೂ, ನನ್ನ ಕಲ್ಪನೆ ತಪ್ಪಾಗಿಯೂ, ನಿರಾಶನಾಗದೆ ಅವಾಕ್ಕಾದೆ. ಒಂದು ಕ್ಷಣ ಈತನಲ್ಲಿಗೆ ಬರುವ ಮಹಿಳೆಯರ ಗತಿ ಏನು ಅನ್ನಿಸಿಬಿಟ್ಟಿತು! ಆತನಿಗೆ ಸೋಮಾಲಿ, ಅರಬ್ಬೀ ಭಾಷೆಗಳಲ್ಲದೆ, ಇಟಾಲಿಯನ್ ಸಹ ನಿರರ್ಗಳ. ಆದರೆ ಇಂಗ್ಲೀಷ್ ಅಷ್ಟಕ್ಕಷ್ಟೆ. ಆರಂಭದಲ್ಲಿ ಮಹಮ್ಮದ್ ಕಡೆ ತರ್ಜುಮೆಗೆ ತಿರುಗದ ಆತನಿಗೆ, ನನ್ನ ಸೋಮಾಲಿ ಕೇಳಿ ಆನಂದ. ನಾನು ಆತನ ರೋಗದ ಇತಿಹಾಸ ಬಗೆದ ನಂತರ, ತಪಾಸಣೆ ಮಾಡಿದೆ. ವಾಸ್ತವವಾಗಿ, ಯಾವ ದೃಢೀಕೃತ ರೋಗವೂ ಇಲ್ಲದೆ, ಸ್ವಲ್ಪ ರಕ್ತದ ಒತ್ತಡದ ಏರಿಕೆ ಇತ್ತು. ಅದಕ್ಕೂ ಆತ ಆಗಾಗ ಸೌದಿಗೆ ಹೋದಾಗ, ಔಷಧೋಪಚಾರ ಆಗಿತ್ತು. ನಾನು ಅದನ್ನೇ ಮುಂದುವರಿಸಲು ಹೇಳಿದೆ. ನನಗೆ ಶೆಕ್ ಅಬ್ಬಾ ಕೂಡ ‘ಫೀಸು’ ಕೊಟ್ಟ; ಐನೂರು ಶಿಲ್ಲಿಂಗು! ( ಆಗ ಸುಮಾರು ನಲವತ್ತು ಡಾಲರ್!). ಹೊರಡುವ ಮುನ್ನ, ಹಾಗೇ ಮಾತು ಮುಂದುವರಿಸಿ, ಮಹಮ್ಮದನ ಕಡೆ ಮಾರ್ಮಿಕ ನೋಟ ಹರಿಸಿದ್ದಕ್ಕೆ, ಅವನು ಹೇಳಿ ಹೇಳಿ ಪರವಾಗಿಲ್ಲ ಎಂದು ಹುರಿದುಂಬಿಸಿದ.

ಮೊಗದಿಶು ಬೀದಿಗಳು

ಶೇಕ್ ಮುಂದುವರಿಸಿದ ಆತ ಮೊದಲು ಬಹಳ ಬಲಿಷ್ಠನಂತೆ. ಇನ್ನೂ ಕಟ್ಟುಮಸ್ತಾಗಿದ್ದನಂತೆ. ಸ್ವಲ್ಪ ಆದರೂ ಈ ರಕ್ತದೊತ್ತಡ ಶಕ್ತಿಯನ್ನು ಹೀರಿಬಿಟ್ಟಿದೆಯಂತೆ…ಮತ್ತೆ ಸ್ವಲ್ಪ ತಡೆದು, ನೇರ ವಿಷಯಕ್ಕೆ ಬಂದ. “ನೋಡಿ ಇಲ್ಲಿ ಭಕ್ತರಿಗೆ ನಂಬಿಕೆ ಅತಿ ದೊಡ್ಡದು. ಅದೂ ಕೂಡ ‘ಅಲ್ಲಾ’ನ ದಯೆ. ‘ಅಲ್ಲಾ’ ದಯಾಮಯ! ಹಾಗಾಗಿ ನಮ್ಮ ಮೇಲೆ ಭಕ್ತಿ ಹೇಗೋ ಹಾಗೆಯೇ, ನಾವು ಮಾಡಿದ್ದುದರಲ್ಲಿ, ಕೊಟ್ಟಿದ್ದುದರಲ್ಲಿ ಗಾಢ, ಪ್ರಶ್ನಾತೀತ ನಂಬಿಕೆ. ನಮ್ಮ ಪ್ರತಿ ಕಾರ್ಯವೂ, ಹೆಜ್ಜೆಯೂ ದೈವದತ್ತ ಎಂಬ ನಂಬಿಕೆ. ನಮ್ಮಿಂದ ಪ್ರತಿಯೊಂದನ್ನೂ ಬಯಸುತ್ತಾರೆ. ಆದ್ದರಿಂದ ನಾವು, ಬರುವ ಅನೇಕರ ಅನೇಕಾನೇಕ ಥರದ ಬಯಕೆಗಳನ್ನು ತೃಪ್ತಿ ಪಡಿಸಬೇಕಾಗುತ್ತದೆ. ಅದು ಮಹಿಳೆಯರ ಕಾಮತೃಪ್ತಿ, ಮಕ್ಕಳ ವರದಾನವೂ ಸೇರಿದಂತೆ!

ಸುಮ್ಮಸುಮ್ಮನೆ ಮಂತ್ರದಿಂದ ಮಕ್ಕಳಾಗುವುದುಂಟೆ?…ಒಂದು ಕಾಲಕ್ಕೆ ಸುಮಾರು ಎಪ್ಪತ್ತೆಂಭತ್ತು ಹೆಂಗಸರು ನನ್ನ ದಾರಿ ಕಾಯುವವರಿದ್ದರು! ನಾನೂ ನನ್ನ ಶಕ್ತಿಯನ್ನೆಲ್ಲಾ ವ್ಯಯಿಸಿ ಅವರನ್ನು ಸಂತೃಪ್ತಿಗೊಳಿಸುತ್ತಿದ್ದೆ. ಏನೋ ದೇವರ ದಯೆ. ಈಗಲೂ ಅನೇಕ ಮಹಿಳೆಯರು ನನ್ನಿಂದ ಅದನ್ನು ಬಯಸುತ್ತಾರೆ. ಹೊಸಹೊಸದಾಗಿ ಬಯಸುವವರೂ ಈ ಸಾಲಿಗೆ ತದೇಕ ಬಂದು ಸೇರುತ್ತಲೇ ಇರುತ್ತಾರೆ. ಹಾಗಂತ ಈ ಜವಾಬ್ದಾರಿ ಬೇರೆಯವರಿಗೆ ಒಪ್ಪಿಸಲಾದೀತೆ? ಆದ್ದರಿಂದ ಈಗಲೂ ಅವರಿಗೆ ಇಲ್ಲವೆನ್ನುವುದಿಲ್ಲ…ನಂಬಿ ಬಂದವರಿಗೆ ಹೇಗೆ ತಾನೆ ಇಲ್ಲ ಎನ್ನಲಾಗುತ್ತದೆ, ಅಲ್ಲವೇ? ಆದರೆ…
ವಯಸ್ಸೋ ಅಥವ ಕಾಯಿಲೆಯೋ ಕಾಣೆ, ಎಲ್ಲರನ್ನೂ ತೃಪ್ತಿ ಪಡಿಸುವ ಕಸುವು ಈಗ ನನ್ನಲ್ಲಿ ಕುಗ್ಗುತ್ತಿದೆ. ಅದಕ್ಕೇನಾದರೂ ಒಳ್ಳೆಯ ಔಷಧ, ವಿಟಮಿನ್ನು ಇದ್ದರೆ, ಅದೆಷ್ಟೇ ಬೆಲೆಯಾದರೂ, ಜಗತ್ತಿನ ಯಾವ ಮೂಲೆಯಲ್ಲಿ ಸಿಗುವುದಾದರೂ ಪರವಾಗಿಲ್ಲ, ಬರೆದುಕೊಡಿ!”

ಮನೆಯ ದಾರಿಯಲ್ಲಿ ಭಕ್ತಿಗೆ ಮತ್ತು ಭಕ್ತರಿಗೆ ಏನೆಲ್ಲಾ, ಎಂಥೆಂಥ ದಾರಿಗಳೋ ಶಿವನೇ, ಅಂದುಕೊಂಡು, ಜಗತ್ತಿನಾದ್ಯಂತ ಈ ಇಂಥವು ಇನ್ನೂ ಯಾವ ಯಾವ ರೂಪಗಳನ್ನು ತಳೆದು, ಹೊಳೆದಿಹವೋ ಅನ್ನಿಸಿತು. ಮತ್ತು, ಶೇಕ್ ಅಬ್ಬಾನ ಸ್ಪಷ್ಟ ಹಾಗೂ ನೇರವಾದಿತನಕ್ಕೆ ಬೆರಗುಗೊಂಡೆ!

ಮುಂದುವರಿಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಸೂಚನೆ: ಈ ಶೇಕ್ ಅಬ್ಬಾ ಬಗ್ಗೆ, 1990ನೇ ಇಸವಿಯ ಮಾರ್ಚ್ ತಿಂಗಳಲ್ಲಿ “ಶೇಕ್ ಅಬ್ಬಾ ನೋಡಿದೆ” ಎಂಬ ಶೀರ್ಷಿಕೆಯ ಸಂಪೂರ್ಣ ಲೇಖನ ‘ಕಸ್ತೂರಿ’ ಮಾಸಿಕದಲ್ಲಿ ಪ್ರಕಟವಾಗಿತ್ತು.

Related post

1 Comment

  • Very much interesting and surprising , please continue.

Leave a Reply

Your email address will not be published. Required fields are marked *