—ಕಿಸ್ಮಾಯೋ ಪ್ರಯಾಣ – 1—
ಡಾ. ಜಗನ್ನಾಥ ಕಿಸ್ಮಾಯೋಗೆ ಹೋಗಿ ತನ್ನ ವೃತ್ತಿ ಆರಂಭಿಸಿದ ನಂತರ, ಅತ್ತ ಕಡೆಯಿಂದ ಸುದ್ದಿಯೇ ಇರಲಿಲ್ಲ. ನನಗೂ ಸಹ ಅವನನ್ನು ಸಂಪರ್ಕಿಸಲು ಆಗಿರಲಿಲ್ಲ. ಹಾಗಾಗಿ, ಒಮ್ಮೆ ಅವನಿಗೆ ತಿಳಿಸದ ಹಾಗೆ, ನಾವೇ ಖುದ್ದಾಗಿ ಹೋಗಿ, ಆ ಇಬ್ಬರನ್ನೂ ಅಚ್ಚರಿಯ ಮಡುವಿನಲ್ಲಿ ಅನಾಮತ್ತು ಇಳಿಸಿ ನೋಡಬೇಕೆಂಬ ಚಪಲ ನನ್ನಲ್ಲಿತ್ತು. ನನ್ನ ಹೆಂಡತಿಗೂ ತನ್ನ ಹೊಸ ಗೆಳತಿಯ ಕಾಣುವ ಹಂಬಲ ಹಾಗೂ ಅವರಿರುವ ಹೂಸ ಸ್ಥಳ ನೋಡುವ ಕುತೂಹಲ ಇತ್ತು. ಹಾಗಾದರೆ ಹೋಗುವುದು ಎಂದು, ಯಾವ ಮೂಲಕ, ರಸ್ತೆ ಅಥವ ವಿಮಾದಲ್ಲೋ ಎಂಬ ಬಗ್ಗೆ ಅಂತಿಮ ತೀರ್ಮಾನ ಇನ್ನೂ ಗೋಜಲಾಗೇ ಇತ್ತು. ಅಲ್ಲದೆ ಕನಿಷ್ಠ ಎರಡು ಮೂರು ದಿನವಾದರೂ ರಜೆ ಬೇರೆ ಬೇಕಲ್ಲ. ಇಂತಹ ಗೊಂದಲ ಕಾಡುತ್ತಿತ್ತು.
ಈ ನಡುವೆ ಮೊಗದಿಶುಗೆ ಕೆಲವು ಹೊಸಬರು ಭಾರತದಿಂದ, ಅಮೆರಿಕನ್ ಕೇರ್ ಎಂಬ ಕಂಪೆನಿ ಮುಖಾಂತರ ನಿರಾಶ್ರಿತರ ಸಹಾಯಾರ್ಥದ ಕಾರ್ಯಕ್ರಮದಲ್ಲಿ (ರೆಫ್ಯೂಜಿ ಪ್ರೋಗ್ರಾಂ) ಕೆಲಸಕ್ಕಾಗಿ ಬಂದಿದ್ದರು. ಅವರಲ್ಲಿ ಪ್ರಪ್ರಥಮ ಪರಿಚಯವಾಗಿ, ಕ್ರಮೇಣ ಹತ್ತಿರ ಆದವರು ಬೆಳ್ಳಿಯಪ್ಪ ಎಂಬ ಕೊಡಗಿನವರು. ನಂತರದಲ್ಲಿ ಜಾನ್ ಸಾಲೋಮನ್ ಎಂಬ ಇನ್ನೊಬ್ಬರು ಆತ್ಮೀಯರಾದರು. ಇಬ್ಬರೂ ಇಂದಿಗೂ ಸಹ ಎಲ್ಲಿದ್ದರೂ ನನ್ನ ಸಂಪರ್ಕದಲ್ಲಿದ್ದಾರೆ. ಬೆಳ್ಳಿಯಪ್ಪ ಮತ್ತವರ ರಾಜ್ ಎಂಬ ಸಹೋದ್ಯೋಗಿ ಇಬ್ಬರೂ ಮೊಗದಿಶುವಿನಿಂದ ಸುಮಾರು ಒಂದೂವರೆ ಗಂಟೆ ಪ್ರಯಾಣದ ‘ಕುರ್ಯೋಲೆ’ ಎಂಬ ಊರಲ್ಲಿ ಕೆಲಸ ಮಾಡುತ್ತಿದ್ದರು. ಮುದ್ದಪ್ಪ ದಂಪತಿ ಕೊಡಗಿನವರಾದ್ದರಿಂದ, ಮೊಗದಿಶುಗೆ ಬಂದಾಗಲೆಲ್ಲ ಬೆಳ್ಳಿಯಪ್ಪ ಅವರನ್ನು ನೋಡಿಯೇ ಹೋಗುತ್ತಿದ್ದರು. ಹಾಗಾಗಿ ನಮಗೂ ಬೇಕಾದವರಂತೆಯೇ ಆಗಿದ್ದರು.
ಮುದ್ದಪ್ಪನವರೂ ಕೂಡ ನನ್ನೊಡನೆ ಎಷ್ಟು ಆತ್ಮೀಯರಾಗಿದ್ದರೆಂದರೆ, ಪ್ರತಿ ದಿನ ಅವರ ಕಛೇರಿಯಿಂದ, ಹನ್ನೆರಡರ ಆಸುಪಾಸಿಗೆ ಆ ಬಿಸಿಲಲ್ಲೂ ನಡೆದು ಬಂದು, ನನ್ನ ಕ್ಲಿನಿಕ್ಕಿನ ಕಿಟಕಿಯ ಹೊರಗೆ ನಿಂತು, ಸ್ವಲ್ಪ ಹೊತ್ತು ಮಾತನಾಡಿ ಹಿಂದಕ್ಕೆ ತಮ್ಮ ಆಫೀಸಿಗೆ ಹೋಗುತ್ತಿದ್ದರು. ಇದು ಒಂದು ಥರ ಮಿಲಿಟರಿ ಕವಾಯತಿನ ಹಾಗೆ ದಿನಂಪ್ರತಿ ನಡೆಯಲೇಬೇಕಾದ ರೂಢಿ. ಅಲ್ಲದೆ, ಕನಿಷ್ಠ ವಾರಕ್ಕೊಮ್ಮೆ ಮುದ್ದಪ್ಪ ದಂಪತಿ ಹಾಗೂ ನಾನು, ಕಮಲ ಮತ್ತು ನಮ್ಮ ಮಕ್ಕಳು ಎಲ್ಲ ಒಟ್ಟಿಗೆ ಕೂಡಿ ಶ್ರೀಮತಿ ಮುದ್ದಪ್ಪನವರ ಫಿಯೆಟ್ 600 ಎಂಬ ಅಂದಿನ ‘ಬೃಹತ್’ ಕಾರಿನಲ್ಲಿ, ಮೊಗದಿಶುವಿನ ಪ್ರಸಿದ್ಧ ‘ಲೀಡೋ ಬೀಚ್’ ಕಡೆಗೆ, ಸಂಜೆಯ ಹೊತ್ತಿನಲ್ಲಿ ಹೋಗುವುದು ಸಾಮಾನ್ಯವಾಗಿತ್ತು. ಅಲ್ಲಿ ನಾನು ಮತ್ತು ಮುದ್ದಪ್ಪನವರು ಪಳೆಯುಳಿಕೆಯಂತೆ ತ್ಯಾಜ್ಯವಾಗಿದ್ದ ಯಾವುದಾದರೊಂದು ದೋಣಿಯಲ್ಲಿ ಕೂತು, ವಿಸ್ಕಿ ಕುಡಿಯುತ್ತ ರಾತ್ರಿ ಎಂಟೊಂಭತ್ತರ ತನಕ ಇದ್ದು, ಸಾಕಷ್ಟು ಮಾತನ್ನೂ ಮುಗಿಸಿ ಬರುತ್ತಿದ್ದೆವು. ಮಕ್ಕಳು ಸಮುದ್ರ ದಂಡೆಯಲ್ಲಿ ಹೊಟ್ಟೆ ತುಂಬ ಆಟ ಆಡಿ ದಣಿಯುತ್ತಿದ್ದರು. ಕಮಲ ಮತ್ತು ಶ್ರೀಮತಿ ನಿರ್ಮಲ ಮುದ್ದಪ್ಪನವರು ಮಾತಿನ ಆಳದ ಈಜಿನಲ್ಲಿ ತಲ್ಲೀನ. ಹೀಗೂ ನಾವು ನಮ್ಮನ್ನು ಭದ್ರ ಬಿಗಿಯುತ್ತಿದ್ದೆವು!
ಅಂತಹ ಒಂದು ಸಂಜೆ, ನಾವೆಲ್ಲ ಒಟ್ಟಿಗೇ ಕೂಡಿ ಕಿಸ್ಮಾಯೋಗೆ ಏಕೆ ಹೋಗಿಬರಬಾರದು ಎಂಬ ಸಣ್ಣ ಕಿಡಿ ಹೊತ್ತಿಕೊಂಡಿತು. ಕಿಡಿ ಕ್ರಮೇಣ ಹೊಗೆಯಾಡುತ್ತಾ, ಯೋಜನೆಯ ಕಡೆ ತಿರುಗಿತು. ಭಾರತೀಯ ರಾಯಭಾರಿ ಕಛೇರಿಯಲ್ಲಿ ಕಾರ್ಯದರ್ಶಿ ಆಗಿದ್ದ, ಕೇರಳದ ಡೇವಿಸ್ ಎಂಬುವವರು ಬಹಳ ಹತ್ತಿರವಾಗಿದ್ದರು. ಅವರಲ್ಲಿ ಒಂದು ಸಂಜೆ ಮಾತನಾಡುವಾಗ ಈ ವಿಷಯ ಬಂತು. ಅದಕ್ಕೆ ಅವರು ಡ್ಯೂಟಿ ಫ್ರೀ ಲಿಕ್ಕರ್ ಬೇಕಾದರೆ ಹೇಳಿ ಎಂದರು. ಅಲ್ಲಿಗೆ ಅದೂ ವ್ಯವಸ್ಥೆ ಆಯಿತು.
ಬೆಳ್ಳಿಯಪ್ಪ ತಮಗೆ ಕೆಲಸ ಇರುವುದರಿಂದ ಈ ಬಾರಿ ಅಸಾಧ್ಯ ಎಂದೂ, ಮುಂದೆ ನೋಡೋಣ ಎಂದರು. ಆದ್ದರಿಂದ ನಮಗೆ ಉಳಿದ ಒಂದೇ ಆಯ್ಕೆ ವಿಮಾನ ಪ್ರಯಾಣ.
ಸೋಮಾಲಿ ಏರ್ಲೈನ್ಸ್ ನಲ್ಲಿ ಟಿಕೆಟಿಂಗ್ ಮ್ಯಾನೇಜರ್ ಆಗಿದ್ದ ಮುನಿಯ ನನಗೆ ವರ್ಷಗಳ ಮಿತ್ರ. ಅವರ ಹೆಸರಿಗೆ ಬರುತ್ತಿದ್ದ ‘ನ್ಯೂಸ್ ವೀಕ್’ ಹಾಗೂ ‘ಟೈಂ’ ನಿಯತಕಾಲಿಕೆಗಳು ನೇರ ನಮ್ಮ ಮನೆಗೇ ಬರುತ್ತಿದ್ದವು. ಅಷ್ಟೊಂದು ವಾಂಛೆ ಓದಿನಲ್ಲಿ ಅಲ್ಲಿ ಕೂಡ. ಮುನಿಯನಿಗಾದರೋ ಸಮಯದ ಅಭಾವ. ಅಂತೂ ಹಣ ಕೊಡದೆ ಓದುವುದು ನನ್ನ ಭಾಗ್ಯ!
ಆ ಕಾಲದಲ್ಲಿ ಎರಡು ವರ್ಷದೊಳಗಿನ ಹಸುಳೆಗೆ ವಯಸ್ಕರ ಟಿಕೆಟ್ಟಿನ ಶೇಕಡ ಹತ್ತರಷ್ಟು ಬೆಲೆ. ಎರಡು ವರ್ಷದಿಂದ ಹನ್ನೆರಡರ ತನಕ ಅರ್ಧ ಚಾರ್ಜು. ಅಲ್ಲಿಗೆ ಮುದ್ದಪ್ಪನವರ ಎರಡು ಮತ್ತು ನಮ್ಮ ಎರಡು ಪೂರ್ತಿ ಅಲ್ಲದೆ ಎರಡು ಅರ್ಧ ಟಿಕೆಟ್ಟುಗಳು. ಅದಕ್ಕೆ ಮುನಿಯನ ಸಲಹೆ ಎಂದರೆ, ನನ್ನ ಮಗಳಿಗೆ ಇನ್ನೂ ಮೂರು ವರ್ಷ ಆದ್ದರಿಂದ, ಅರ್ಧದ ಬದಲು ಶೇಕಡ ಹತ್ತರ ಬೆಲೆಯ ಟಿಕೆಟ್ಟು ಕೊಡುವುದಿಗಿಯೂ, ಅಕಸ್ಮಾತ್ ಇನ್ನೊಬ್ಬ ಪ್ರಯಾಣಿಕ ಬಂದರೆ, ಮಗಳನ್ನು ತೊಡೆಯ ಮೇಲೆ ಕೂರಿಸಿಕೊಳ್ಳಿ ಎಂದು. ಪ್ರಯಾಣದ ದಿನಾಂಕ ನಿಗದಿ ಆಯಿತು.
ಮೊಗದಿಶು ಮತ್ತು ಕಿಸ್ಮಾಯೋಗೆ ಎರಡು ರೀತಿಯ ವಿಮಾನಗಳ ಹಾರಾಟವಿತ್ತು. ಪ್ರತಿದಿನ ಒಂದು ಫೋಕರ್ ಫ್ರೆಂಡ್ಶಿಪ್, ಮತ್ತೊಂದು ಸೆಸ್ನಾ. ಫೋಕರ್ ಬಗ್ಗೆ ಏಡನ್ – ಹಾರ್ಗೀಸಾ – ಮೊಗದಿಶು ಪ್ರಯಾಣದ ಸಮಯದಲ್ಲೇ ತಿಳಿಸಿದ್ದೇನೆ. ಈಗ ಸೆಸ್ನಾ ಎಂಬ ಆರು ಸೀಟುಗಳ ಸಣ್ಣ ಹಕ್ಕಿಯ ಬಗ್ಗೆ.
ಸೆಸ್ನಾ (Cessna) ಎಂಬ ವಿಮಾನ ತಯಾರಿಕಾ ಕಂಪೆನಿಯು ಅಮೆರಿಕಾದ ಕೆನ್ಸಸ್ ರಾಜ್ಯದ ವಿಚಿಟಾ ಎಂಬ ನಗರದಲ್ಲಿದೆ. ಅದನ್ನು 1927 ರಲ್ಲಿ ಕ್ಲೈಡ್ ಸೆಸ್ನಾ ಎಂಬುವವರು ಪ್ರಾರಂಭಿಸಿದರು. ಸೆಸ್ನಾ ವಿಮಾನಗಳಲ್ಲಿ ಸುಮಾರು ವಿಧ. 1956 ರಲ್ಲಿ ತಯಾರಾದ, ಸೆಸ್ನಾ 172 ಎಂಬ ತರಬೇತು ವಿಮಾನ, 60 ವರ್ಷಗಳ ನಂತರ ಈಗಲೂ ತಯಾರಿಕೆಯಲ್ಲಿದೆ. ಜಗತ್ತಿನ ಅತ್ಯಂತ ಅಚ್ಚುಮೆಚ್ಚಿನ ಮಾದರಿ ರಚನೆಯಲ್ಲಿ ತಯಾರಾದ ವಿಮಾನವೆಂದರೆ ಅದು ಸೆಸ್ನಾ 172 ಎಂಬುದಂತೆ. ನಾವು ಪ್ರಯಾಣ ಮಾಡಬೇಕಿದ್ದ ಸೋಮಾಲಿ ಏರ್ ಲೈನ್ಸ್ ಹೊಂದಿದ್ದಕ್ಕೆ ಆರು ಆಸನ ಇದ್ದವು.
ಅಂತೂ ಹೊರಡುವ ದಿನ ಬಂದೇ ಬಿಟ್ಟಿತು. ಮಕ್ಕಳಿಗೆ ಪರಮಾನಂದ. ನನ್ನ ಹೆಂಡತಿಗಿನ್ನು ಕೇಳಬೇಕೆ; ತನ್ನ ಅಚ್ಚುಮೆಚ್ಚಿನ, ಈ ಹೊತ್ತಿಗೂ ಸಹ, ಗಳತಿಯ ಮನೆಗೆ ಹೋಗುವ ಖುಷಿ. ನನಗೆ ನನ್ನ ಜೀವನದ ಗೆಳೆಯನೊಬ್ಬನ ಮನೆಗೆ ಹೋಗುವ ಮತ್ತು ಕಿಸ್ಮಾಯೋ ಎಂಬ ಇನ್ನೊಂದು ಹೊಸ ಸ್ಥಳ ನೋಡಿದ ಅನುಭವ ಜೇಬಿಗಿಳಿಸುವ ಕಾತರ! ಅದೂ ಅಲ್ಲದೆ ಮುದ್ದಪ್ಪನವರ ಆತ್ಮೀಯ ಒಡನಾಟ – ಅವರು ಹಿರಿಯರಾದರೂ ಸಹ!
ನನ್ನನ್ನು ದಿನವೂ ಕೆಲಸಕ್ಕೆ ಕರೆದೊಯ್ಯುತ್ತಿದ್ದ ಚಾಲಕನೇ ಅದೇ ವಾಹನದಲ್ಲಿ ನಮ್ಮೆಲ್ಲರನ್ನೂ ವಿಮಾನ ನಿಲ್ದಾಣಕ್ಕೆ ಬಿಟ್ಟುಕೊಟ್ಟ. ರಜೆ ಕೇಳುವಾಗ, ಮುಸ್ತಾಫನನ್ನು ಗಾಡಿಯನ್ನೂ ಕಳಿಸುವಂತೆ ಹೇಳಿದ್ದೆ.
ಮೊಗದಿಶುವಿಂದ ಕಿಸ್ಮಾಯೋಗೆ ವಿಮಾನದಲ್ಲಿ ಒಂದು ಘಂಟೆ ಸುಮಾರಿನ ಪ್ರಯಾಣ. ಸೆಸ್ನಾ ಪುಟ್ಟ ವಿಮಾನ ಆದ್ದರಿಂದ ಅದು ಹಾರುವ ಎತ್ತರ ಹಾಗೂ ವೇಗ ಕೂಡ ಕಡಿಮೆ. ದೊಡ್ಡ ದೊಡ್ಡ ವಾಣಿಜ್ಯ ಜೆಟ್ ವಿಮಾನಗಳು 36,000 ಸಾವಿರ ಅಡಿಯಷ್ಟು ಎತ್ತರದಲ್ಲಿ, ಗಂಟೆಗೆ ಸುಮಾರು 750 ಕಿ.ಮಿ. ವೇಗದಲ್ಲಿ ಪ್ರಯಾಣಿಸಿದರೆ, ಸೆಸ್ನಾ ವಿಮಾನವು ಹೆಚ್ಚೆಂದರೆ 14,000 ಸಾವಿರ ಅಡಿ ಎತ್ತರದಲ್ಲಿ, ಗಂಟೆಗೆ 230 ಕಿ.ಮಿ. ವೇಗ ತಲಪುತ್ತದೆ. ಹಾಗಾಗಿ ನೆಲವನ್ನು ಅಸ್ಪಷ್ಟವಾಗಿ ಸೆಸ್ನಾದಲ್ಲಿ ಕೂತವರು ಕಾಣಬಹುದು.
ಸೆಸ್ನಾ ಪ್ರಯಾಣವನ್ನು ನಿಜವಾಗಿ ಖುಷಿಪಟ್ಟು ಅನುಭವಿಸಿದವನು ನಮ್ಮ ಮಗ, ಐದು ವರ್ಷದ ಅನಿರುದ್ಧ – ಕಿಟಕಿಯ ಪಕ್ಕ ಕೂತು. ಪುಟ್ಟ ಆರಾಧನ ಒಮ್ಮೆ ಅಮ್ಮನ, ಮತ್ತೊಮ್ಮೆ ಅಪ್ಪನ ತೊಡೆ ಏರಿದ್ದಳು; ಅವಳ ಸೀಟಿಗೆ ಮುನಿಯ ಹೇಳಿದ್ದ ಹಾಗೆ, ಪರಿಚಯ ಇಲ್ಲದ ಸೋಮಾಲಿಯೊಬ್ಬರು ಬಂದಿದ್ದರು. ಎಲ್ಲ ಸ್ತರದಲ್ಲೂ ವ್ಯಾಪಾರ ಮೊದಲು ಅಲ್ಲವೇ?
ಮುದ್ದಪ್ಪನವರ ಮತ್ತು ನನ್ನ ನಡುವೆ ಆಗಾಗ ಮಾತು. ಆದರೆ, ಸೆಸ್ನಾ ತುಂಬಾ ಮಾತು ಭರ್ಜರಿ ತುಂಬಿದವರು ಶ್ರೀಮತಿ ಮುದ್ದಪ್ಪ ಮತ್ತು ನನ್ನ ಮಡದಿ!
ಅಂತೂ ಕಿಸ್ಮಾಯೋ ತಲಪಿದ್ದಾಯಿತು. ಮೊದಲು ಅನಿರೀಕ್ಷಿತವಾಗಿ ಹೋಗುವ ಮನಸ್ಸಿದ್ದರೂ, ಕೊನೆ ಘಳಿಗೆಗೆ ನಮ್ಮ ಕಛೇರಿಯ ಮೂಲಕವೇ ಡಾ. ಜಗನ್ನಾಥನಿಗೆ ತಿಳಿಸಿದ್ದರಿಂದ, ವಿಮಾನ ನಿಲ್ದಾಣದಲ್ಲಿ ದಂಪತಿಗಳು ಕಾಯುತ್ತಿದ್ದರು. ಕಿಸ್ಮಾಯೋ ಬಂದರಿನ ಹತ್ತಿರ ಇದ್ದ ಅವರ ಬಾಡಿಗೆ ಮನೆ ತಲಪಿದ್ದಾಯಿತು. ಅಧಿಕೃತ ವೈದ್ಯ ವಸತಿ ಆಸ್ಪತ್ರೆ ಕಾಂಪೌಂಡಿನಲ್ಲೇ ಇದ್ದರೂ, ಅದರಲ್ಲಿ ‘ಮಾರೇಹಾನ್’ ಪಂಗಡಕ್ಕೆ ಸೇರಿದ್ದ ಅಧಿಕಾರಿಯೊಬ್ಬರು ಅನಧಿಕೃತ ಇದ್ದುದರಿಂದ ಅದು ಖಾಲಿ ಇರಲಿಲ್ಲ. ಅಧ್ಯಕ್ಷರ ಪಂಗಡ ಎಂದಾಗ ಯಾರು ತಾನೆ ಪ್ರಶ್ನೆಮಾಡಲು ಸಾಧ್ಯ!
ಊಟ, ವಿಶ್ರಾಂತಿ ನಂತರ, ಜಗನ್ನಾಥನ ಸಂಗಡ, ನಾನೂ ಮಾರುಕಟ್ಟೆ ಕಡೆಗೆ ತೆರಳಿದೆ. ಹಣ್ಣು ಮಾರುವ ಸೋಮಾಲಿ ಮಹಿಳೆಗೆ, ಒಂದು ಕೆಜಿ ಶರ್ಮೂತೋ ಕೊಡಲು ಕೇಳಿದ. ಆಕೆ ಜಗನ್ನಾಥನ ಮುಖವನ್ನು ಅಚ್ಚರಿ ತಂಬಿದ ಭಯಂಕರ ಕಣ್ಣಲ್ಲಿ ನೋಡುತ್ತಿದ್ದಾಗ, ಇನ್ನೊಬ್ಬ ವ್ಯಕ್ತಿ ಏನು ಬೇಕು ಎಂದು ಇಂಗ್ಲೀಷಿನಲ್ಲಿ ಕೇಳಿದ. ಜಗನ್ನಾಥ ಗ್ರೇಪ್ ಫ್ರೂಟ್ ಎಂದಾಗ, ಆತ ಪಕ್ಕಕ್ಕೆ ಕರೆದು ಸ್ಪರ್ಮೂತೋ ಅನ್ನಬೇಕು; ನೀವು ಕೇಳಿದ ಶರ್ಮೂತೋ ಕೆಟ್ಟ ಅರ್ಥದ್ದು ಎಂದು ವಿವರಿಸಿದ. ಆತನೇ ನಂತರ ಅದರ ಅರ್ಥ ವೇಶ್ಯೆ ಎಂದಾಗ, ಜಗನ್ನಾಥ ಬೆವೆತು, ಆತನ ಮೂಲಕವೇ ಆ ಮಹಿಳೆಯಿಂದ ಕ್ಷಮೆ ಯಾಚಿಸಿದ. ಗ್ರೇಪ್ ಫ್ರೂಟ್ ಚಕೋತ ಜಾತಿಯ ಹಣ್ಣು; ಅದನ್ನು ಆ ದೇಶದಲ್ಲಿ ಯಥೇಚ್ಛ ಜ್ಯೂಸ್ ಮಾಡಲು ಉಪಯೋಗಿಸುತ್ತಾರೆ. ನಾವೂ ಸಹ ಅಲ್ಲಿದ್ದಾಗ ಗ್ರೇಪ್ ಫ್ರೂಟಿನ ದುರ್ವ್ಯಸನಿಗಳೇ ಆಗಿದ್ದೆವು ಎಂದರೆ ತಪ್ಪಲ್ಲ. ಅಷ್ಟು ರುಚಿ. ಭಾಷೆ ಏನೆಲ್ಲ ಮ್ಯಾಜಿಕ್ ಮಾಡುತ್ತದೆ ಅಲ್ಲವೇ? ಇಲ್ಲಿ ಇನ್ನೊಬ್ಬರ ಇನ್ನೊಂದು ಭಾಷಾ ಅನಭವ ಹೇಳಬೇಕು: ಆ ಮನುಷ್ಯ ತನ್ನ ಕೆಲಸದಾಕೆಗೆ ಬಟ್ಟೆ ಒಗೆಯಲು ಹೇಳಬೇಕು; ಇನ್ನೂ ದೇಶ ಭಾಷೆ ಹೊಸದು; ಡರ್ಕ ಬೀಹಿ ಎಂದು ಹೇಳಿದಾಗ ಆ ಮಹಿಳೆಗೆ ಕೋಪ. ಸೋಮಾಲಿಯಲ್ಲಿ ಡರ್ಕ ಬೀಹಿ ಅಂದರೆ ಬಟ್ಟೆ ಬಿಚ್ಚು ಅಂತಲೂ, ಡರ್ಕ ಮೈಡ್ ಅಂದರೆ ಬಟ್ಟೆ ಒಗೆ ಎಂದರ್ಥ! ಅಂತೂ ಕಿಸ್ಮಾಯೋ ಮಾರುಕಟ್ಟೆ ಅನುಭವ ನನಗೂ ಆಯಿತು.
ರಾತ್ರಿ ಗುಂಡು ಪಾರ್ಟಿಯಲ್ಲಿ, ನಾಳೆ ಎಲ್ಲೆಲ್ಲಿ ಹೋಗೋಣ ಎಂದೆಲ್ಲ ಎಲ್ಲರೂ ಸಾಮೂಹಿಕವಾಗಿ ನಿರ್ಧಾರ ಮಾಡಿ, ಪ್ರಥಮವಾಗಿ ‘ಗಂಧರ್ಷ’ ಎಂಬ ಸಮುದ್ರ ತೀರದ ಊರಿಗೆ ಹೋಗಿ, ಆಮೇಲೆ ವೇಳೆಯಿದ್ದರೆ ಬೇರೆ ಸ್ಥಳಗಳನ್ನು ನೋಡುವುದೆಂದು ತೀರ್ಮಾನಿಸಿದೆವು. ಆ ರಾತ್ರಿ, ಸಾಮಾನ್ಯವಾಗಿ ಮಕ್ಕಳೊಡನೆ ಸಲಿಗೆಯಿಂದ ಇರದ ಮುದ್ದಪ್ಪನವರು, ಪುಟ್ಟ ಆರಾಧನಳೊಡನೆ ಬಹಳವಾಗಿ ಆಟ ಆಡಿದಂತೆ, ಅವಳಿಂದ ಡಾನ್ಸ್ ಮಾಡಿಸಿ ಎಲ್ಲರಿಗೂ ಖುಷಿ ಕೊಟ್ಟರು. ಅಂತೂ ಅಂದಿಗೆ ಶುಭರಾತ್ರಿ ಹೇಳಿದ್ದಾಯಿತು.
ಮಾರನೇ ದಿನ ಎಂಟೂವರೆ ಆಗಿಯೂ ನಾನಿನ್ನೂ ಸುಖನಿದ್ರೆಯ ಕನಸಲ್ಲಿದ್ದೆ, ಬಹುಶಃ ಅಷ್ಟರಲ್ಲಿ ಯಾರೋ ಕೂಗಿ ಬಿದ್ದ ಸದ್ದನ್ನು ದಢಕ್ಕನೆ ಕೇಳಿ, ದಿಢೀರ್ ಎದ್ದೆ. ಅಷ್ಟರಲ್ಲಿ ಶ್ರೀಮತಿ ಮುದ್ದಪ್ಪನವರು ಎದ್ದು ಬಾತ್ ರೂಮಿನತ್ತ ಓಡಿದ್ದರು. ಅವರ ಹಿಂದೆಯೇ ನಾನು ಮತ್ತು ಜಗನ್ನಾಥ. ಮುದ್ದಪ್ಪನವರು ಜಾರಿ ಬಿದ್ದಿದ್ದರು. ಕೂಡಲೆ ಎತ್ತಿ ಹೊರಗೆ ಬಂದು ಕೂರಲು ಸಹಕರಿಸಿದೆವು.
ಮುಖ ತೊಳೆಯುತ್ತಲೇ ಬಿದ್ದಿದ್ದರು. ಕಷ್ಟಪಟ್ಟು ಸ್ವಲ್ಪ ತಿಂಡಿ ತಿನ್ನಿಸಿ, ಜಿಲ್ಲಾ ಆಸ್ಪತ್ರೆಯತ್ತ ಅವರೊಡನೆ ಹೋಗಿ, ಪ್ರಥಮ ಎಕ್ಸ್ರೇ ಮಾಡಿಸಿದಾಗ, ಪಕ್ಕೆಲುಬೊಂದು ಮುರಿದದ್ದು ತಿಳಿಯಿತು. ಜೊತೆಯಲ್ಲೇ ಇಸಿಜಿ ಮಾಡೆಸಿದೆವು. ಆಗ ನನಗೆ ಜಗನ್ನಾಥನಿಗೆ ಆಘಾತ.
ಅವರಿಗೆ ಭಾರಿ ಹೃದಯಾಘಾತವೇ ಆಗಿತ್ತು….
ಮುಂದುವರಿಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ