ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೧೯

ಮಹಿಳಾ ಜನನಾಂಗ – ಛೇದನ!

ಬಹಳ ದಿನಗಳಿಂದ ಬರದಿದ್ದ ತಿಮಹಾ ಹಾದ್ದೆ (ಮಹಮ್ಮದ್), ಆ ಒಂದು ದಿನ ಸಂಜೆ ಹೊತ್ತಿನಲ್ಲಿ ಪ್ರತ್ಯಕ್ಷನಾದ. ಆಗ ತಾನೇ ಮಡದಿ ಮಕ್ಕಳೊಡನೆ ಹೊರಹೋಗಿದ್ದ ನಾನು, ಅವನೊಡನೆ ಎಂದಿನಂತೆ ಶಾಯ್ ರಿಂಜಿ (ಬ್ಲ್ಯಾಕ್ ಟೀ) ಕುಡಿದ ನಂತರ, ಪೇಷಂಟ್ ಒಬ್ಬರನ್ನು ನೋಡಲು ಹೋಗಬೇಕೆಂದ. ಸರಿ ಎಂದು ತಯಾರಾಗಿ ಹೊರಟೆ. “ಮೇಡಮ್, ಸ್ವಲ್ಪ ತಡ ಆಗುತ್ತೆ; ಸಿಟಿ ಬಿಟ್ಟು ದೂರ ಹೋಗಬೇಕು” ಎಂದು ತಾನೇ ನನ್ನ ಮಡದಿಗೆ ತಿಳಿಸಿದ.

ಮೊಗದಿಶು ನಗರದ ಆಚೆಗೆ, ನಾನು ಅದುವರೆಗೂ ಸುಳಿಯದೇ ಇದ್ದಂಥ ಪರಿಸರದಲ್ಲಿ, ಒಂದು ಹಳೆಯ ಬಂಗಲೆಯ ಗೇಟಿನೆದುರು ಕಾರು ನಿಂತಿತು. ಗೇಟ್ ಬಡಿದು ತಾನೆ ನೂಕಿ ತೆರೆದ ಡ್ರೈವರ್ ನೇರ ಒಳನಡೆದ. ಒಳಗೂ ಸಾಕಷ್ಟು ಮನೆಯ ಸುತ್ತಲೂ ಜಾಗ ಇದ್ದು, ನಡುವೆ ಮಜಬೂತಾದ ಬಂಗಲೆಯ ಸುಣ್ಣ ಬಣ್ಣ ಮಾಸಿದ್ದು, ಅಲ್ಲಲ್ಲಿ ಎದ್ದಿದ್ದ ಲಕ್ಷಣ. ಹಜಾರದಲ್ಲಿ ನನ್ನನ್ನು ಕೂರಿಸಿದ ಮಹಮ್ಮದ್, ತಾನೂ ಒಳನಡೆದ. ಆ ಜನರೇ ಹಾಗೆ; ಶಿಷ್ಟಾಚಾರ ಅದೂ ಇದು ಅಂತೆಲ್ಲ ನೋಡುವವರಲ್ಲ. ಅಕಸ್ಮಾತ್ ನಾನೂ ಅವರನ್ನು ಹಿಂಬಾಲಿಸಿದ್ದರೂ, ಯಾರೂ ಏನೂ ಅಂದುಕೊಳ್ಳದ ಜನ!

ಸ್ವಲ್ಪ ಹೊತ್ತಿನ ನಂತರ ಒಳಗಿಂದಲೇ ನನ್ನನ್ನೂ ಕರೆದ. ಆ ಬಂಗಲೆಯಿಂದ ಹೊರಗೆ, ಅನತಿ ದೂರದಲ್ಲೇ ಅದೇ ಕಾಂಪೌಂಡ್ ಒಳಗೆ ಒಂದು ಸಣ್ಣ ಮನೆಯಿತ್ತು. ಬಹುಶಃ ಕೆಲಸದವರ ಮನೆ ಅನ್ನಿಸಿತು. ಒಳಗೆ, ಸುಮಾರು ಹತ್ತು ವರ್ಷದ ಹುಡುಗಿಯೊಬ್ಬಳು ಮಲಗಿದ್ದು, ಪಕ್ಕದಲ್ಲಿ ಒಬ್ಬ ಹೆಂಗಸು ಕೂತಿದ್ದಳು; ಆ ಹುಡುಗಿಯ ತಾಯಿ. ತಿಮಹ ಹಾದ್ದೆ ಆ ಮಹಿಳೆಯೊಡನೆ ಏನೋ ಸಣ್ಣ ದನಿಯಲ್ಲಿ ಮಾತಾಡಿ, ನನ್ನತ್ತ ತಿರುಗಿ, ” ಈ ಹುಡುಗಿಯ ಗುಪ್ತಾಂಗದಲ್ಲಿ ಕೀವು ಸೋರುತ್ತಿದೆ, ನೀವು ನೋಡಿ ಔಷಧ ಮಾಡಿ” ಎಂದ. ಹುಡುಗಿಯ ಲಂಗ ಎತ್ತಿದಾಗ, ಯೋನಿಯ ಸುತ್ತ ಕೀವು ಸೋರುತ್ತಿತ್ತು. ಹತ್ತಿ ತರಿಸಿ ಒರೆಸಿ ನೋಡಿದಾಗ, ಅದೂ ಒಂದು ಸುನ್ನತಿ (ಮಹಿಳಾ ಜನನಾಂಗ ಛೇದನ) ಎಂಬ ಅನಿಷ್ಟ ಪದ್ದತಿಗೆ ಒಳಗಾದ ಮಗು ಅನ್ನಿಸಿ, ನೋವಿನ ಸಂಗಡ ಆ ಜನದ ಬಗ್ಗೆ ಜಿಗುಪ್ಸೆ ಕೂಡ ಆಯಿತು.

ಆ ಮಗುವಿಗೆ ಔಷಧ ಬರೆದು ಕಾರಲ್ಲಿ ಕೂತಾಗ, ನನ್ನ ಮನಸ್ಸಿನಲ್ಲಿ ಮಹಿಳಾ ಸುನ್ನತಿಯೆಂಬ ಕೆಟ್ಟ ಆಚಾರದ ಬಗ್ಗೆ ಇನ್ನೂ ಏಕೆ ಮಹಿಳೆಯರೇ ಚಳವಳಿ ಹೂಡದೆ, ತಾವೇ ಹರಕೆಯ ಕುರಿಗಳಾಗುವರು ಎಂಬ ಪ್ರಶ್ನೆ ಕಾಡತೊಡಗಿತು. ಮೇಲಾಗಿ ಒಬ್ಬ ಮಹಿಳೆಯ ಲಿಂಗ ಯೋಜಿತ ಸ್ವಾತಂತ್ರವನ್ನೇ ಇಲ್ಲವಾಗಿಸಿ, ಕಾಮಾಸಕ್ತಿಯನ್ನೇ ಹರಣಮಾಡಿ, ಇಡೀ ಜೀವನವನ್ನೇ ಲೈಂಗಿಕ ಆನಂದ, ತೃಪ್ತಿ ಇಲ್ಲದ ಹಾಗೆ ಬದುಕ ನೂಕುವಂತೆ ಮಾಡುವುದು ಯಾವ ನ್ಯಾಯ! ಅಕಸ್ಮಾತ್ ಒಬ್ಬ ಪುರುಷನ ಶಿಶ್ನವನ್ನೇ ಅದೇ ರೀತಿ ಇಲ್ಲವಾಗಿಸಿದರೆ ಆತ ಹೇಗೆ ಬದುಕಬಹುದು? ಅಂತಹ ಯೋಚನೆ ಪುರುಷರಿಗೇಕಿಲ್ಲ? ಹಾಗಾದರೆ, ತನ್ನ ಮಹಿಳೆಗೇ ಇಲ್ಲದ ಸುಖವನ್ನು ಒಬ್ಬ ಪುರುಷ ತಾನು ಹೇಗೆ ಅನುಭವಿಸುತ್ತಾನೆ? ಇಂತಹ ಅನೇಕ ಕ್ಲಿಷ್ಟ ಮತ್ತು ಸದ್ಯಕ್ಕೆ ಉತ್ತರ ಸಿಗದ ಗೋಜಲುಗಳ ತಲೆಯಲ್ಲೇ ಕಾರಿಂದ ಇಳಿದು, ತಿಮಹ ಹಾದ್ದೆಗೆ ಬೈ ಹೇಳಿ ಮನೆಯತ್ತ ಹೆಜ್ಜೆ ಹಾಕಿದೆ.
ವಾಸ್ತವವಾಗಿ ನಾನು ನನ್ನ ಸೋಮಾಲಿಯ ಬದುಕಿನಲ್ಲಿ ಅದೇ ಮೊದಲು ಜನನಾಂಗವನ್ನು ಕತ್ತರಿಸಿದ ಮಗು ಅಥವ ಮಹಿಳೆಯನ್ನು ನೋಡಿದ್ದಲ್ಲ. ಹಾರ್ಗೀಸಾದಲ್ಲೂ ನೋಡಿದ್ದೆ. ಮೊಗದಿಶು ಕ್ಲಿನಿಕ್ಕಿನಲ್ಲೂ ಆಗಾಗ ನೋಡಿ, ಔಷಧೋಪಚಾರ ಮಾಡುವ ಅವಕಾಶ ಯಥೇಚ್ಛ ಒದಗಿದೆ. ಪ್ರತಿ ಬಾರಿ ಕಂಡಾಗಲೂ, ಸದ್ಯ ನಮ್ಮಲ್ಲಿ ಈ ಅನಿಷ್ಟ ಪದ್ಧತಿ ಇಲ್ಲವಲ್ಲ ಎಂಬ ಸಮಾಧಾನ ಆಗುತ್ತಿತ್ತಾದರೂ, ಪ್ರತಿ ಬಾರಿಯೂ ಹಿಂಸೆಯಂತೂ ಆಗಿದೆ. ಅರಿವಳಿಕೆ ಇಲ್ಲದೆ, ಹಾಗೆ ಕಚ್ಚಾ ಕತ್ತರಿ ಪ್ರಯೋಗ, ಮತ್ತದರಿಂದಾಗುವ ಘನಘೋರ ನೋವು, ಯಾರಿಗೆ ತಾನೆ ತಡೆಯಲಾದೀತು. ಇನ್ನು ಆ ಹಸುಳೆಗಳ ಪಾಡು ಮತ್ತು ಅವುಗಳ ಕಿರುಚು! ಯಾವ ದೇಶದ ಎಂತಹ ಜನ ಆದರೇನು, ನೋವು-ನಲಿವುಗಳೆಲ್ಲ ಎಲ್ಲರಿಗೂ ಸಮಭಾವ ಅಲ್ಲವೇ!


ಈ ಪದ್ಧತಿಯನ್ನು ಯಥೇಚ್ಛವಾಗಿ, ಹೆರಿಗೆ ಮಾಡಿಸುವ ಸಾಂಪ್ರದಾಯಿಕ ಸೂಲಗಿತ್ತಿಯರೇ ಮಾಡಿ ಮುಗಿಸುತ್ತಾರೆ. ಇದು ಹೆಣ್ಣು-ಗಂಡಿನ ನಡುವೆ ಆಳವಾಗಿ ಬೇರಿಳಿಸಿರುವ ಅನಿಷ್ಟ ತಾರತಮ್ಯ ಮತ್ತು, ಸ್ತ್ರೀ ಕುಲದ ಮೇಲಿನ ಅತಿ ಹೀನ ಭೇದಭಾವ ಎಂದು ಪರಿಗಣಿಸಲಾಗಿದೆ! ಮಕ್ಕಳ ಮೇಲೇ ಹೆಚ್ಚು ಹೆಚ್ಚು ಪ್ರಯೋಗ ಆಗುವುದರಿಂದ ಇದನ್ನು ಶಿಶು ಹಕ್ಕಿನ ಕೆಟ್ಟ ಉಲ್ಲಂಘನೆ ಎಂದೂ ತೀರ್ಮಾನಿಸಲಾಗಿದೆ! ಇಷ್ಟೇ ಅಲ್ಲದೆ, ಆರೋಗ್ಯ ಹಕ್ಕು, ರಕ್ಷಣೆ ಹಾಗೂ ದೈಹಿಕ ಪೂರ್ಣತೆಯ ಹಕ್ಕು, ಪೀಡನೆ ಮತ್ತು ಕ್ರೌರ್ಯಗಳಿಂದ ಸ್ವತಂತ್ರತೆಯ ಹಕ್ಕು, ಅಮಾನವೀಯತೆ ಮತ್ತು ಕಳಂಕರಹಿತ ನಡತೆಗಳ ಹಕ್ಕುಗಳೇ ಅಲ್ಲದೆ, ಅಂತಹ ಪದ್ಧತಿಯಿಂದ ಅಕಸ್ಮಾತ್ ಮರಣ ಸಂಭವಿಸಿದರೆ, ಬದುಕಿನ ಹಕ್ಕಿನ ಉಲ್ಲಂಘನೆ ಎಂದೂ ಪರಿಗಣಿಸಲಾಗಿದೆ.

ಮಹಿಳಾ ಸುನ್ನತಿ ಎಂದೂ ಕೆಲವು ಕಡೆ ತಪ್ಪಾಗಿ ಕರೆವ ಈ ಅನಿಷ್ಟ ಪದ್ಧತಿಯಲ್ಲಿ, ಮಹಿಳೆಯ ಜನನಾಂಗಕ್ಕೆ ಕತ್ತರಿ ಪ್ರಯೋಗ ಅಥವ ಛೇದನ ಮಾಡಲಾಗುವುದು. ಅದರಲ್ಲಿ, ಹೊರ ಜನನಾಂಗವನ್ನು ಭಾಗಷಃ ಅಥವ ಸಂಪೂರ್ಣ ಕತ್ತರಿಸುವುದು ಅಥವ ಇದೇ ರೀತಿಯಲ್ಲಿ, ವೈದ್ಯಕೀಯ ಕಾರಣಗಳಿಗಾಗಿ ಅಲ್ಲದೆ, ಬೇರೆ ಬೇರೆ ವಿಧಗಳಲ್ಲಿ ಘಾಸಿಗೊಳಿಸಲಾಗುವುದು. ಈ ಆಚರಣೆಯಿಂದ ಹಾಗೆ ಘಾಸಿಗೆ ಒಳಗಾದ ಬಾಲಕಿಗಾಗಲಿ ಅಥವ ಅಂತಹ ಮಹಿಳೆಗಾಗಲಿ ವೈದ್ಯಕೀಯ ಅನುಕೂಲ ಖಂಡಿತ ಆಗುವುದಿಲ್ಲ. ಮೇಲಾಗಿ ಅದರಿಂದ ಅತಿಯಾದ ರಕ್ತಸ್ರಾವ ಅಥವ ಮೂತ್ರ ಮಾಡುವಾಗ ತೊಂದರೆ ಆಗಬಹುದು. ಅಲ್ಲದೆ, ನಂತರದ ಕಾಲದಲ್ಲಿ ಉರಿಯೂತ ಮತ್ತು ನೀರುಗುಳ್ಳೆಗಳಾಗಹುದು. ಇಷ್ಟೇ ಅಲ್ಲದೆ, ಶಿಶು ಜನನದಲ್ಲಿ ತೊಡಕುಗಳು, ಶಿಶುಮರಣಗಳೂ ಸಹ ಆಗಬಹುದು. ಈ ಪದ್ಧತಿ ಚಾಲ್ತಿ ಇರುವ ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾ ಮುಂತಾದ ಜಗತ್ತಿನ ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ, ಅಂದಾಜು ಇಪ್ಪತ್ತು ಕೋಟಿ ಬಾಲಕಿಯರು ಮತ್ತು ಮಹಿಳೆಯರು ಈ ಅನಿಷ್ಟಕ್ಕೆ ಒಳಗಾದ ನತದೃಷ್ಟರು ಸದ್ಯ ಬದುಕಿದ್ದಾರೆ! ಸಾಮಾನ್ಯವಾಗಿ, ಈ ಪದ್ಧತಿಯನ್ನು ಹಸುಳೆಗಳಿಂದ ಹಿಡಿದು ಹದಿನೈದು ವರ್ಷದೊಳಗಿನ ಬಾಲಕಿಯರಿಗೆ ಮಾಡಲಾಗುತ್ತದೆ. ಇದೊಂದು ಮಹಿಳೆಯರ ಮಾನವ ಹಕ್ಕಿನ ಉಲ್ಲಂಘನೆ ಎಂದು ಸಂಯುಕ್ತ ರಾಷ್ಟಗಳ ಒಕ್ಕೂಟದಿಂದಲ್ಲೇ ತೀರ್ಮಾನಿಲಾಗಿದೆ.

ಆಫ್ರಿಕಾ ಖಂಡದ ಸುಮಾರು 27 ದೇಶಗಳಲ್ಲದೆ, ಇಂಡೋನೇಷ್ಯ, ಇರಾಕಿ, ಕುರ್ದಿಸ್ತಾನ್, ಎಮೆನ್ ಮುಂತಾದಂತಹ ಕಡೆಗಳಲ್ಲಿ, ಆಚರಣೆಯಲ್ಲಿರುವ ಈ ಜನನಾಂಗ ಛೇದನವನ್ನು, ಸಾಮಾನ್ಯವಾಗಿ ಸಾಂಪ್ರದಾಯಿಕ ಸುನ್ನತಿಗಾರರೇ (ಛೇದನಕಾರರೇ) ಕೇವಲ ಬ್ಲೇಡ್ ಅಥವ ಚಾಕು ಅಥವ ಹರಿತವಾದ ಯಾವುದೇ ಒಂದು ಕಚ್ಚಾ ವಸ್ತು ಉಪಯೋಗದಿಂದ ಕುಯ್ದು ಮುಗಿಸುತ್ತಾರೆ. ರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ, ಇಂತಹ ಪದ್ಧತಿ ಇರುವ ಅರ್ಧ ದೇಶಗಳಲ್ಲಿ ಹೆಚ್ಚಾಗಿ ಎಲ್ಲ ಹೆಣ್ಣುಮಕ್ಕಳೂ ಐದು ವರ್ಷ ತಲಪುವ ಮುನ್ನವೇ ಈ ರೀತಿಯ ಕತ್ತರಿ ಪ್ರಯೋಗಕ್ಕೆ ಒಳಗಾಗಿರುತ್ತಾರೆ. ಸುನ್ನತಿಯ ಕಾರ್ಯವಿಧಾನ ದೇಶ ದೇಶ ಹಾಗೂ ಜನಾಂಗಗಳ ಮೇಲೆ ಬದಲಾಗುತ್ತದೆ. ಅವುಗಳಲ್ಲಿ ಮುಖ್ಯ ವಿಧಾನಗಳೆಂದರೆ, ಯೋನಿಯ ಮೇಲ್ಭಾಗದಲ್ಲಿರುವ ಚಂದ್ರನಾಡಿಯ ಮುಡಿಗೆ (ಕ್ಲೈಟಾರಿಸ್ ಹುಡ್) ಯನ್ನು ಕತ್ತರಿಸುವುದು, ಅಥವ ಇಡೀ ಚಂದ್ರನಾಡಿ ಅಥವ ಯೋನಿಶಿಶ್ನಿಕೆಯನ್ನೇ ಕತ್ತರಿಸುವುದು ಮೊದಲನೆಯದು, ಅಥವ ಅದರ ಜೊತೆಗೆ ಯೋನಿಯ ಒಳತುಟಿಗಳನ್ನು ತೆಗೆಯುವುದು ಎರಡನೆಯದು, ಅಥವ ಯೋನಿಯ ಒಳ ಮತ್ತು ಹೂರತುಟಿ (labia minora and labia majora) ಎರಡನ್ನೂ ಕತ್ತರಿಸಿ ಯೋನಿಯನ್ನು ಕೂಡಿಸಿ ಹೊಲೆದುಬಿಡುವುದು, ಮೂರನೆ ವಿಧಾನ. ಇಷ್ಟು ವಿಧಗಳಲ್ಲಿ, ಈ ಅಂತ್ಯದ ಮೂರನೇ ನಮೂನೆಯಲ್ಲಿ ಮೂತ್ರಕ್ಕೆ ಮತ್ತು ಮುಟ್ಟಿನಸ್ರಾವಕ್ಕೆ ಎಂದು ಒಂದು ಸಣ್ಣ ತೂತು ಬಿಡಲಾಗುತ್ತದೆ. ಮುಂದೆ ಸಂಭೋಗಕ್ಕಾಗಿ ಮತ್ತು ಹೆರಿಗೆಗಾಗಿ, ಯೋನಿಯನ್ನು ಮತ್ತೆ ತೆರೆಯಲಾಗುತ್ತದೆ.

ಲಿಂಗ ಅಸಮಾನತೆ, ಮಹಿಳೆಯ ಲೈಂಗಕತೆಯ ಮೇಲೆ ಅಧಿಕಾರಯುತ ಕಡಿವಾಣ ಹೇರುವಿಕೆ, ಮತ್ತು ಪರಿಶುದ್ಧತೆ, ಸೌಶೀಲ್ಯತೆ ಹಾಗೂ ಸೌಂದರ್ಯ ಮುಂತಾದ ಸೈದ್ಧಾಂತಿಕ ಸೋಗಿನ ಮನೋಭಾವಗಳೇ ಈ ಅನಿಷ್ಟ ಪದ್ಧತಿ ಬೇರೂರಲು ಮುಖ್ಯ ಕಾರಣ. ದುರಂತ ಎಂದರೆ, ಮರ್ಯಾದೆಯ ಮೂಲವೆಂದು ನಂಬಿದ ಆಯಾ ಸಮಾಜಗಳ ಹೆಂಗಸರೇ ಇದನ್ನು ಆರಂಭಿಸಿ, ಮುಂದುವರೆಸಿಕೊಂಡು ಹೋಗುವುದೂ ಕೂಡ. ತಮ್ಮ ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಇದರಿಂದ ವರ್ಜಿತವಾದರೆ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವ ಭಯ ಕೂಡ ಇದರಲ್ಲಿ ಬೇರೂರಿದೆ.

1970 ರಿಂದ ಅಂತರರಾಷ್ಟ್ರೀಯ ಪ್ರಯತ್ನಗಳು ಈ ಪದ್ಧತಿಯನ್ನು ತೊಡೆದುಹಾಕಲು ನಡೆಯುತ್ತಿವೆ ಮತ್ತು ಚಾಲ್ತಿಯಲ್ಲಿರುವ ಅಂತಹ ದೇಶಗಳಲ್ಲಿ ನಿಷೇಧ ಕೂಡ ಹೇರಲಾಗಿದೆ. ಆದರೂ, ಅಂತರಂಗದ ಆಳಕ್ಕಿಳಿದ ಬೇರನ್ನು ಕಿತ್ತೆಸೆವುದು ಸುಲಭವಲ್ಲ!

ಮಹಿಳಾ ಸುನ್ನತಿಯ (female circumcision) ಆರಂಭದ ಬಗ್ಗೆ ತಿಳಿವಳಿಕೆ ಅಸ್ಪಷ್ಟ. ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ಶಕೆ ಆರಂಭಿಕ ಕಾಲಕ್ಕಿಂತಲೂ ಹಿಂದೆ ಈ ಪದ್ಧತಿ ಇದ್ದಿತೆಂದೂ, ಕೆಲ ಸಂಶೋಧಕರ ಪ್ರಕಾರ, ಕ್ರಿ.ಪೂ. ಐದನೇ ಶತಮಾನದಲ್ಲಿ ಈಜಿಪ್ಟ್ ದೇಶದಲ್ಲಿತ್ತು ಎನ್ನಲಾಗಿದೆ. ಭೌಗೋಳಿಕವಾಗಿ ಇದರ ಮೂಲವನ್ನು ಕೆಂಪುಸಮುದ್ರದ ಪಶ್ಚಿಮ ಕರಾವಳಿ ಪ್ರದೇಶ ಎನ್ನಲಾಗಿದೆ.

ಸುನ್ನತಿ ಇರುವ ಆಫ್ರಿಕಾ ಖಂಡದ ದೇಶಗಳು

ಸೋಮಾಲಿಯಾ ದೇಶ ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ಸುನ್ನತಿ (ಜನನಾಂಗ ಛೇದನದ) ಪದ್ಧತಿ ಆಚರಿಸುತ್ತಿದ್ದು, 98 ಪ್ರತಿಶತ ಹೆಂಗಸರು ಇದಕ್ಕೆ ಒಳಗಾಗಿರುವ ಮಾಹಿತಿ ಇದೆಯಂತೆ. ಹಾಗೆಯೇ ಜಗತ್ತಿನ ಶೇಕಡ ಎಂಭತ್ತರಷ್ಟು ಆಫ್ರಿಕಾ ಖಂಡದಲ್ಲೇ ಇದರ ಆಚರಣೆ! ಜನಸಂಖ್ಯಾ ಶಾಸ್ತ್ರಜ್ಞರ ಪ್ರಕಾರ, ಸೋಮಾಲಿಯಾದಲ್ಲಿ ಹೆಚ್ಚು ಶಿಶುಮರಣಕ್ಕೆ ಕಾರಣ, ಕೇವಲ ಚಂದ್ರನಾಡಿಯ ಮುಡಿಗೆ ಮಾತ್ರ ಅಥವ ಇಡೀ ಚಂದ್ರನಾಡಿಯನ್ನೇ ಛೇದಿಸುವುದರಿಂದಾಗಲೀ ಅಲ್ಲ, ಬದಲಿಗೆ ಚಂದ್ರನಾಡಿಯ ಜೊತೆಗೆ ಯೋನಿಯ ಒಳ ಹಾಗೂ ಹೊರ ತುಟಿಗಳ ಛೇದನದಿಂದಲೇ ಹೆಚ್ಚು ಎಂದಿದ್ದಾರೆ. ಹಾಗೆಯೇ ಒಟ್ಟಾರೆ ಛೇದನಕ್ಕೆ ಒಳಗಾದ ತಾಯಂದಿರಿಗೆ ಜನಿಸಿದ ಶಿಶುಮರಣವೂ ಹೆಚ್ಚಂತೆ. ಮತ್ತು ಅಂತಹ ಹೆಂಗಸರಲ್ಲಿ, ಛೇದನದಿಂದಾದ ಉರಿಯೂತ, ಗರ್ಭದಲ್ಲೆ ಸತ್ತು ಜನಿಸುವ ಶಿಶುಗಳ (still birth) ಸಂಖ್ಯೆಯನ್ನೂ ಹೆಚ್ಚಿಸುತ್ತದೆ. ಆದರೆ, ಹಾಗೆ ಛೇಧನಕ್ಕೊಳಗಾದ ಹೆಣ್ಣು ಮಕ್ಕಳ ವಯಸ್ಸು ಹೆಚ್ಚಾದಂತೆ, ಮರಣ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂಬ ಎಚ್ಚರಿಕೆ ಸಹ ಉಂಟು.

ಹಮ್ದಾ ಆಲಿ, ಸೋಮಾಲಿಯ ದಾದಿ

ಸೋಮಾಲಿಯಾದ ಹಮ್ದಾ ಆಲಿ ಎಂಬ ದಾದಿ ಹಾಗೂ ಹೋರಾಟ ಕಾರ್ಯಕರ್ತೆ, ತನ್ನ 15 ವರ್ಷದ ತಂಗಿ ಹಾಗೂ ಚಿಕ್ಕಪ್ಪನ ಇಬ್ಬರು 13 ಮತ್ತು 15 ವರ್ಷದ ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ಒಳಗಾಗದ ಹಾಗೆ ತಡೆದಿದ್ದಾಳೆ; ತಾಯಿ ಮತ್ತು ಚಿಕ್ಕಮ್ಮನ ಬಲವಾದ ಸಾಂಪ್ರದಾಯಿಕ ಇಚ್ಛೆಯ ಎದುರು ಹೋರಾಡಿ ಮತ್ತು ತಿಳಿವಳಿಕೆ ನೀಡಿ!

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಹಾಗೂ ಮಹಿಳಾ ಸುನ್ನತಿ ಆಚರಣೆ ಇರುವ ದೇಶಗಳ ಹೋರಾಟದಿಂದ, ಹಮ್ದಾಳಂತಹ ಚಳವಳಿಗಾರರು ಎಲ್ಲಾ ಕಡೆ ಹೆಚ್ಚುತ್ತಿರುವುದು ಉತ್ತಮ ಸಂದೇಶ. ಆದರೆ, ಗಂಡಸರಿಂದ ಈ ವಿಷಯದ ಬಗ್ಗೆ ಹೆಚ್ಚು ಸಹಕಾರ ಇಲ್ಲದ್ದು ದುರಂತ. ಸೋಮಾಲಿಯಾದಲ್ಲೂ ಸಹ ಇದಕ್ಕೆ ಗಂಡಸರು ಹೊರತಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇದ್ದುಬಿಡುತ್ತಾರೆ. ಹಾಗಾಗಿ, ಏನೆಲ್ಲ ಕಟ್ಟಳೆಗಳಿದ್ದರೂ ಅಗೋಚರವಾಗಿ ಈ ಅನಿಷ್ಟದ ಆಚಾರ ಇನ್ನೂ ವಿಪುಲವಾಗಿದೆ ಎಂಬುದಂತೂ ಕಟುಸತ್ಯ!

ಮುಂದುವರಿಯುತ್ತದೆ…

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ: 98446 45459

Related post

1 Comment

  • Very informative and thought provoking story. Kudos to you, expected to read more about such-ignorant practice.

Leave a Reply

Your email address will not be published. Required fields are marked *