ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೦

–ಹೈವಾನ್ ಕಾ ದವಾ!–

ಮೊಗದಿಶು ಅಥವ ಹಾರ್ಗೀಸಾ ಅಥವ ಸೋಮಾಲಿಯಾದ ಇನ್ನಾವ ನಗರ ಅಥವ ಊರೇ ಆಗಲಿ, ಹೃತ್ಪೂರ್ವಕವಾಗಿ ಮನಸ್ಸಿಟ್ಟು ಕೆಲಸ ಮಾಡುವ ವೈದ್ಯರಿಗೆ ಎಂದೆಂದಿಗೂ ಬೆಲೆ ಮತ್ತು ಮನ್ನಣೆ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನಾನು ಬಹಳ ಬೇಗ ಅರಿತುಕೊಂಡಿದ್ದೆ. ಹಾಗಾಗಿ ಎಲ್ಲ ವೈದ್ಯರಂತೆ, ನನಗೂ ಅನೇಕ ಸೋಮಾಲಿ ನಾಗರಿಕರ ಸ್ನೇಹ ಹಾಗೂ ಸಾಮೀಪ್ಯ ದೊರಕಿತ್ತು. ಅದರಿಂದ ಅನೇಕ ರೀತಿಯಲ್ಲಿ ಅನುಕೂಲ ಯಥೇಚ್ಛವಾಗಿ ನನಗೂ ಇತರ ವೈದ್ಯರಂತೆ ಆಗಿದೆ. ನನ್ನ ಮೂಲಕ ನನ್ನ ಪರಿಚಯದ ಭಾರತೀಯರಿಗೆ ಸಹ ಆಗಿದೆ. ಆದರೆ, ಹಾಗೆಯೇ ಅದೇ ನಮ್ಮ ಭಾರತೀಯರಿಂದಲೇ ನಾನು ಅದೇ ಪರದೇಶದಲ್ಲಿ ತೊಂದರೆ ಕೂಡ ಅನುಭವಿಸಿದ ಸಂದರ್ಭಗಳುಂಟು!

ಅಲ್ಲಿನ ಒಂದು ದಂತ ಚಿಕಿತ್ಸಾಲಯ

ನಾನು ನಮ್ಮ ಡಿಜಿ ಅವರಿಗೆ ಪ್ರಾಥಮಿಕ ಇಂಗ್ಲಿಷ್ ಪಾಠ ಹೇಳುತಿದ್ದೆ ಎಂದು ಈಗಾಗಲೇ ತಿಳಿಸಿದ್ದೇನೆ. ನನ್ನ ಅನೇಕ ವರ್ಷದ ಕೆಲಸದ ನಂತರ, ಒಂದು ದಿನ ಇದ್ದಕ್ಕಿದ್ದಂತೆ ಅವರೇ ನನ್ನನ್ನು ಕರೆಸಿ, ನನ್ನ ಸಂಬಳವನ್ನು ಹೆಚ್ಚಿಸಿರುವ ಖುಷಿಯ ವಿಷಯ ತಿಳಿಸಿದರು. ನಾನು ವಾಸ್ತವವಾಗಿ “ಮೆಹತ್ಸನೀದ್” ಅಂದರೆ ಥ್ಯಾಂಕ್ಸ್ ಹೇಳಿ ಬಂದಿದ್ದೆ. ಅರ್ಜೆಂಟಾಗಿ ಈ ವಿಷಯ ನನ್ನ ಮಡದಿಗೆ ತಿಳಿಯಬೇಡವೇ?

ಶ್ರೀಮತಿ ಶಾಂತ ಮೆನನ್ ಎಂಬ ಸ್ತ್ರೀರೋಗಗಳ ಅನುಭವವಿದ್ದ ವೈದ್ಯೆಯೊಬ್ಬರು ನಮ್ಮ ವೈದ್ಯ ತಂಡ ಸೇರಿ ಕೆಲ ವರ್ಷ ಆಗಿತ್ತು. ಕೆಲಸ ಮುಗಿಸಿದ ನಂತರ ಮಧ್ಯಾಹ್ನ ಮನೆಯತ್ತ ಹೋಗುವಾಗ ಇಬ್ಬರನ್ನೂ ಒಟ್ಟಿಗೆ ಒಂದೇ ಸಲ ಕರೆದೊಯ್ಯುತ್ತಿದ್ದ ಡ್ರೈವರ್. ಅಕಸ್ಮಾತ್ ನಾನು ಅಥವ ಅವರು ಒಮ್ಮೊಮ್ಮೆ ಕೆಲಸದ ಒತ್ತಡದಿಂದ ತಡವಾದರೆ, ಆಗ ಬೇರೆ-ಬೇರೆಯಾಗಿ ಹೋಗುವ ವಾಡಿಕೆ. ಈ ವೈದ್ಯೆಯ ಪತಿ ಮೊಗದಿಶು ಕಾಲೇಜಿಗೆ ಪ್ರಾಚಾರ್ಯ ವೃತ್ತಿಗೆ ಬಂದಿದ್ದ ಕೇರಳದವರು. ಮುಂದೆ ಮೊಗದಿಶು ಬಿಟ್ಟ ನಂತರ, ಪ್ರೊಫೆಸರ್ ಮೆನನ್ ರವರು ಮೈಸೂರು ವಿಶ್ವವಿದ್ಯಾಲಯ ಸೇರಿದ್ದರಿಂದ, ಅವರ ಶ್ರೀಮತಿ ಸಹ ಮೈಸೂರಲ್ಲೇ ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿದ್ದರು.

ಆ ಒಂದು ದಿನ ಕೆಲಸ ಮುಗಿಸಿ ಇಬ್ಬರೂ ಎಲ್ಲೋ ಹೋಗಿದ್ದ ನಮ್ಮ ಚಾಲಕನನ್ನು ಕಾಯುತ್ತಾ ಮಾತನಾಡುವ ವೇಳೆ, ನನ್ನ ಹಾಗೇ ಇವರಿಗೂ ಸಹಾಯ ಆಗಲೆಂದು, ನನಗೆ ಸಂಬಳ ಹೆಚ್ಚಾದ ವಿಷಯ ಅವರಿಗೆ ತಿಳಿಸಿ, “ನೀವೂ ಸಹ ಕೇಳಿ, ಆದರೆ ಈ ತಕ್ಷಣ ಅಲ್ಲ; ಕೆಲವು ದಿನ ಕಳೆಯಲಿ” ಎಂದು ಹೇಳಿ, ಯಾವುದೇ ಪರಿಸ್ಥಿತಿಯಲ್ಲೂ ನನ್ನ ವಿಚಾರ ಮತ್ತು ಹೆಸರು ಯಾವ ರೀತಿಯಲ್ಲೂ ಎತ್ತಬೇಡಿ ಎಂದೂ ಮನವಿ ಮಾಡಿಕೊಂಡೆ. ನನ್ನಿಂದ ವಿಷಯ ತಿಳಿದ ಅವರಿಗೆ ಸಹಾಯವಾದರೆ ಆಗಲಿ ಎಂಬ ಸಂತೋಷ ನನಗೆ. ಆದರೆ ಆದದ್ದೇ ಬೇರೆ. ಯಾವ ಕ್ಷಣ ಹಾವು ಹೆಡೆ ಎತ್ತಿ ಕಚ್ಚುವ ಕೃತ್ರಿಮ ಎಸಗೇ ಬಿಡುವುದೋ ಯಾರು ಬಲ್ಲರು? ಮಾರನೇ ದಿನವೇ ಡಿಜಿ ಸಾಹೇಬರು ನನ್ನನ್ನು ಕರೆಸಿ, ಖಾರವಾದ ದನಿಯಲ್ಲಿ, “ಸಂಬಳದ ವಿಷಯ ಆ ಲೇಡಿ ವೈದ್ಯರಿಗೇಕೆ ಹೇಳಿದಿರಿ?” ಎಂದು ನೇರಾನೇರ ಕೇಳಿದರು! ಆ ಕ್ಷಣ ಆಕೆ ಬೆನ್ನಿಗೆ ಚುಚ್ಚಿದ್ದು ಬೆಂಕಿಯ ಥರ ಉರಿಯತೊಡಗಿತ್ತು. ನಾನು ಏನಾದರೂ ಹೇಳಲಾದೀತು? ನನ್ನಂತೆ ಇನ್ನೊಬ್ಬರಿಗೂ ಸಹಾಯ ಆಗಲೆಂದು ಯೋಚಿಸಿದ್ದು ನನ್ನ ಕುತ್ತಿಗೆಗೇ ಹಗ್ಗವಾಗಿತ್ತು. ತಕ್ಷಣ ನನ್ನ ತಪ್ಪನ್ನು ಮನ್ನಿಸಿ ಎಂದು ಮನವಿ ಮಾಡಿದ್ದಲ್ಲದೆ, ಈ ತಪ್ಪಿಗೆ ಶಿಕ್ಷಯಾಗಿ ನನಗೆ ಹೆಚ್ಚಿಸಿರುವ ಸಂಬಳ ವಾಪಸ್ಸು ಪಡೆದುಕೊಳ್ಳಿ ಎಂದೂ ಕೇಳಿಕೊಂಡೆ. ಅವರಿಗೆ ನನ್ನ ಪರಿಸ್ಥಿತಿ ಮತ್ತು ನಿಷ್ಕಪಟತೆ ಬಹುಶಃ ಅರಿವಾಗಿ, “ನೋ ನೋ, ನಾನು ಆ ಕೆಲಸ ಮಾಡಲಾರೆ. ಒಮ್ಮೆ ಆಡಿದ ಮಾತಿಗೆ ನಾನು ಬದ್ಧ. ಆದರೆ, ನಿಮಗಿಂತ ಹಿರಿಯನಾಗಿ ಒಂದು ಮಾತು. ಜೀವನದಲ್ಲಿ ಯಾರನ್ನೂ ಸುಲಭವಾಗಿ ನಂಬಬೇಡಿ ಎಂಬುದು ನನ್ನ ಸಣ್ಣ ಹಿತವಚನ” ಎಂದರಲ್ಲದೆ, ನೀವು ನನಗೆ ಇಂಗ್ಲೀಷ್ ಕಲಿಸಿದ ಗುರು ಎಂತಲೂ ಸೇರಿಸಿ, ಎದ್ದು ನನ್ನ ಸಂಗಡವೇ ಕೆಳಕ್ಕಿಳಿದರು.
ಅಂದು ನನಗೊಂದು ಕೆಟ್ಟ ಕಹಿ ನುಂಗಿದ ಅನುಭವ ಆಯಿತು!

ಆ ಕಹಿ ಘಟನೆಯ ನಂತರ, ಎಂದಿನಂತೆ ಪ್ರತಿ ಮಧ್ಯಾಹ್ನ ಡಾ. ಶಾಂತ ಹಾಗೂ ನಾನು ಜೊತೆಯಲ್ಲೇ ಪ್ರಯಾಣ ಮಾಡಿದರೂ ಸಹ, ಮಾತು ಅಷ್ಟಾಗಿ ಇರಲಿಲ್ಲ. ಎಷ್ಟು ಬೇಕೋ ಅಷ್ಟೆ; ಪ್ರಶ್ನೆಗೆ ಗರಿಯಾದ ಉತ್ತರ! ಅವರಿಗೆ ತಾವು ಮಾಡಿದ್ದು ತಪ್ಪು ಎಂಬ ಅರಿವಿನ ಭಾವ ಖಂಡಿತ ಎದ್ದು ತೋರುತ್ತಿತ್ತು. ನನಗೆ ತಪ್ಪು ಒಪ್ಪಿಕೊಂಡ ಧನ್ಯತಾಭಾವ!

ಮೊಗದಿಶು ನಗರದ ಒಂದು ಬೀದಿ

ಭಾರತ ಸರಕಾರದ ಮೂಲಕ ಅನೇಕ ವಿದ್ವಾಂಸರುಗಳು, ಉಪಾಧ್ಯಾಯ ಹಾಗೂ ಇತರ ಕೆಲಸಗಾರರು, ಉಭಯ ದೇಶಗಳ ಕರಾರಿನಲ್ಲಿ ಸೋಮಾಲಿಯಾಕ್ಕೆ ಬಂದಿದ್ದರು. ಅವರಲ್ಲಿ “ಗುಲಾಟಿ” ಎಂಬ ಹೆಸರಿನ ದೆಹಲಿಯವರೊಬ್ಬರು (ಹಾರ್ಗೀಸಾದ ಗುಲಾಟಿ ಬೇರೆ). ಈ ಉತ್ತರ ಭಾರತದ ಅನೇಕರು ಬಹಳ “ಸಿಹಿಯಾದ ನಾಲಗೆ”ಯವರು. ಇತರರಿಗೂ ರುಚಿ ತಟ್ಟಿಸುವಷ್ಟು ಸವಿಮಾತಿನ ಜನ. ಈ ಗುಲಾಟಿ ಅವರು ಒಬ್ಬರೇ ಇದ್ದು, ಸಾಕಷ್ಟು ವೈದ್ಯಕೀಯ ಸಮಸ್ಯೆಗಳ ಹೊತ್ತು ಬಂದಿದ್ದರು. ಹಾಗಾಗಿ ಬಹು ಬೇಗ ನನ್ನ ಹಿಂದೆಮುಂದೆಯೇ ಹರಿದಾಡುವ ಇರುವೆಯಾಗಿದ್ದರು. ನಮ್ಮ ಮನೆಗೂ ಆಗಾಗ ಬರುತ್ತಾ, ಊಟಕ್ಕೆ ಕೂಡ ಜೊತೆಯಾಗುವ ರೂಢಿ ಇತ್ತು. ಅವರ ಕರಾರು ಮುಗಿದು ಭಾರತಕ್ಕೆ ಹೋಗಿ, ಕಲಸ ಆರಂಭಿಸುವ ದಿನ ಕೂಡ ಬಂದು, ಹೋಗುವ ಮುನ್ನ ಅವರಿಗೆ ಇನ್ನೂ ಬರಬೇಕಿದ್ದ ಹಣವನ್ನು ಅವರ ಹೆಸರಿಗೆ ಡ್ರಾಫ್ಟ್ ತೆಗೆದು ಕಳಿಸುವ ಜವಾಬ್ದಾರಿಯನ್ನು ನನ್ನ ಬೆನ್ನಿಗೆ ಕಟ್ಟಿ ಹೋಗಿದ್ದಲ್ಲದೆ, ವಾರಕ್ಕೆ ಕನಿಷ್ಠ ಎರಡಾದರೂ ಪತ್ರ ಹಾರಿ ಬಿಡುತ್ತಿದ್ದ ಪರಿ ನನಗೆ, ಈತ ನಿಜವಾಗಿ ಒಳ್ಳೆಯ ಮನಷ್ಯ ಅನ್ನಿಸಿತ್ತು. ಮೊಗದಿಶು ಸೆಂಟ್ರಲ್ ಬ್ಯಾಂಕಿನಲ್ಲಿ ನನಗೆ ತುಂಬಾ ಪರಿಚಯವಿದ್ದ ಯೂಸುಫ್ ಜಾಮಾ ಎಂಬ ಒಬ್ಬರು, ಇಂತಹವರ ಕಡತಗಳ ಜವಾಬ್ದಾರಿಯಲ್ಲಿದ್ದರು. ಆದರೆ ಗುಲಾಟಿ ಕೆಲಸ ಮಾಡುತ್ತಿದ್ದ ಅವರ ಶಾಖೆಯಿಂದಲೇ ಹಣ ಬಿಡುಗಡೆ ತುಂಬಾ ತಡವಾಗಿತ್ತು. ಅವರ ಪತ್ರ- ಬಾಣಗಳೇ ಬಿರುಸು ಮಳೆಯಾಗಿ, ನನಗೋ ದುಗುಡ. ಅಂತೂ, ಸುಮಾರು ಎರಡು ತಿಂಗಳ ನಂತರ ಗುಲಾಟಿಯವರ ಅಡ್ರೆಸ್ಸಿಗೆ ರೆಜಿಸ್ಟರ್ಡ್ ಪೋಸ್ಟ್ ವಿತ್ ಅಕ್ನಾಲೆಜ್ಮೆಂಟ್ ಮೂಲಕ ಅವರ ಹಣ ಕಳಿಸಿದ್ದಾಯ್ತು. ವಾಸ್ತವವಾಗಿ ಬ್ಯಾಂಕಿನ ಯೂಸುಫ್ ನನ್ನ ಹೆಸರಿಗೇ ಬೇಕಾದರೆ ಡ್ರ್ಯಾಫ್ಟ್ ಕೊಡುವುದಾಗಿಯೂ ಹೇಳಿದ. ನಾನು ಖಂಡಿತ ಬೇಡ ಎಂದಿದ್ದೆ. ಅಕ್ನಾಲೆಜ್ಮೆಂಟ್ ಅಂತೂ ಬಂತು; ಅಷ್ಟೆ! ಗುಲಾಟಿ ಎಂಬ ಆ “ಸಿಹಿ-ನಾಲಗೆ” ವ್ಯಕ್ತಿಯಿಂದ ಈ ಘಳಿಗೆವರೆಗೂ ಒಂದಕ್ಷರದ ಪತ್ರ ಬಂದಿಲ್ಲ! ಎಂಥೆಂಥ ‘ಅದ್ಭುತ’ ಜನ, ಅಲ್ಲವೇ?

ಗುಲಾಟಿಯ ಹಾಗೇ, ಡಾ. ಗುಪ್ತ ಎಂಬ ಒಬ್ಬ ಕಣ್ಣಿನ ವೈದ್ಯ ಉತ್ತರ ಭಾರತದಿಂದ ನಮ್ಮ ವಿಭಾಗಕ್ಕೇ ಬಂದಿದ್ದ. ಮೊದಲ ದಿನದಿಂದಲೂ ಬಂದು ತಪ್ಪು ಮಾಡಿದೆ ಎಂದೇ ಶೋಕ ಗೀತೆ ಹಾಡಿಕೊಳ್ಳುತ್ತಾ, ನನ್ನೊಡನೆ ಸ್ನೇಹದಿಂದಲೇ ಇದ್ದ. ರಜೆಗೆ ಹೋಗುವಾಗ, ಭಾರತದ ಬದಲು ಜಾಂಬಿಯಾಕ್ಕೆ ಹೋಗಿ ಬರುವುದಾಗಿ, ನನ್ನ ಸಹಾಯದಿಂದ ಸೋಮಾಲಿ ಏರ್ಲೈನ್ಸಿನಲ್ಲಿ ಟಿಕೆಟ್ಟನ್ನು ಮುನಿಯನ ಮೂಲಕ ಬದಲಾಯಿಸಿಕೊಂಡು ಕುಟುಂಬ ಸಹಿತ ಹಾರಿದ್ದಷ್ಟೆ, ಆಮೇಲೆ ಯಾವ ಥರದ ಸುದ್ದಿ ಸಹ ಇಲ್ಲ! ಹೊರಗೆ ಹೋಗಿ ಕೂಡ ನಮ್ಮ ಜನರಿಂದಲೇ ಪಾಠ ಕಲಿಯುವ ಇಂತಹ ವಿಪುಲ ಸಂದರ್ಭಗಳು ಯಾರಿಗೆ ಬೇಡ ಅಲ್ಲವೇ? ನರಿಗಳು ಕಾನನಗಳ ನಡುವೆ ಭೇದ ಮಾಡವು – ಇದು ನಮ್ಮ ಕಾನನ, ಅದು ನಿಮ್ಮ ಕಾನನ (ಹೊರದೇಶದ ರೀತಿ) ಎಂದು.

ಒಂದು ದಿನ ಕ್ಲಿನಿಕ್ಕಿನಲ್ಲಿ ಕೆಲಸ ಮುಗಿಸಿ ಇನ್ನೇನು ಹೊರಡಬೇಕು, ಆಗ ಒಬ್ಬ ವ್ಯಕ್ತಿ ಒಳಬಂದು ಒಂದು ಲಕೋಟೆ ಕೊಟ್ಟ. ಏನಿದು ಎಂದು ಕೇಳಿದಾಗ, ಇಮ್ಮಿಗ್ರೇಷನ್ನಿಂದ ಬಂದಿರುವುದಾಗಿ ಹೇಳಿ, ತಕ್ಷಣ ಬಂದು ನಮ್ಮ ಮುಖ್ಯಸ್ಥರನ್ನು ನೋಡಬೇಕೆಂದ. ನಾನು ಮುಸ್ತಾಫಾನಿಗೆ ವಿಷಯ ಹೇಳಿ, ಡ್ರೈವರಿಗೆ ಕಾರನ್ನು ಆ ಕಡೆಗೆ ತಿರುಗಿಸಲು ಹೇಳಿದೆ. ಇಮ್ಮಿಗ್ರೇಷನ್ ಕಛೇರಿಯತ್ತ ಹೋಗುವಾಗ ನನ್ನ ಮನಸ್ಸಿನಲ್ಲಿ, ನನ್ನನ್ನು ಕರೆಸಿರುವ ಕಾರಣದ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡರೂ ಏನೂ ಹೊಳೆಯದಾಯಿತು. ಇರಲಿ, ಅಲ್ಲಿಗೆ ಹೋದಾಗಲೇ ತಿಳಿಯಲಿ ಅನ್ನಿಸಿ, ಮನೆಗೆ ತಿಳಿಸದೆ ಬಂದೆನಲ್ಲಾ, ಅಕಸ್ಮಾತ್ ತುಂಬಾ ಹೊತ್ತಾದರೆ ಕಮಲ ಭಯಪಡಬಹುದೇ? ಸಾಮಾನ್ಯ ನಾನು ಕೆಲಸದಿಂದ ತಡವಾಗಿ ಮನೆಗೆ ಹೋಗುವುದು ಅತೀ ವಿರಳ. ಈ ಯೋಚನೆಗಳ ನಡುವೆಯೇ ಕಛೇರಿಯ ಕಾಂಪೌಂಡ್ ಒಳಗೆ ಕಾರು ನಿಂತಿತು.

ಸುಮಾರು ಎರಡು ವರ್ಷಗಳ ಹಿಂದೆ ನಡೆದ ಒಂದು ಸಣ್ಣ ಪ್ರಸಂಗ ಈ ಕಛೇರಿಗೆ ಬಂದಾಗ ನೆನಪಾಯಿತು. ಕ್ಲಿನಿಕ್ಕಿನಲ್ಲಿ ಜನ ತುಂಬಿದ್ದ ಒಂದು ದಿನ, ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಎಲ್ಲರ ನಡುವೆ ನುಸುಳಿ ಒಳಬಂದರು. ಹೊರಗೆ ಜನಕ್ಕೆ ಏನು ಹೇಳಿ ಬಂದರೋ ತಿಳಿಯದು. ಚಪ್ಪಲಿ ತೊಟ್ಟಿದ್ದ ಒಂದು ಕಾಲಿಂದ ಪ್ಯಾಂಟನ್ನು ಮಂಡಿಯವರೆಗೆ ಎತ್ತಿ ಹಿಡಿದುಕೊಂಡೇ ನುಗ್ಗಿದ್ದರು. ನಾನು ಏನಾಯಿತೆಂದು ಕೇಳಿದಾಗ, ಮನೆಯ ಹೊರಗೆ ಕಲ್ಲು ಎಡವಿದ್ದು ಎಂಬ ಉತ್ತರ. ಏನೋ ಔಷಧ ಬಳಿದಿದ್ದರು. ಅದೇನು ಎಂದಾಗ, “ಹೈವಾನ್ ಕಾ ದವಾ” ಎಂದರು! ಅಂದರೆ ದನದ ಗಾಯಕ್ಕೆ ಹಾಕುವ ಔಷಧ. ನಾನದನ್ನು ಹಚ್ಚಬಾರದು ಎಂದು ಹೇಳಿ, ಗಾಯ ಸಾಕಷ್ಟು ದೊಡ್ಡದಾಗೇ ಆಗಿದೆ ಎನ್ನುತ್ತಾ, ಮಾತ್ರೆ ಚೀಟಿ ಬರೆಯುವಾಗ, ಏನು ಕೆಲಸ ಅಂದೆ. “”ನಾನು ಇಮಿಗ್ರೇಶನ್ ಮುಖ್ಯಸ್ಥ” ಎಂದು ಬಹಳ ಸರಳವಾಗಿ ಹೇಳಿ, “ನಿಮಗೇನಾದರೂ ಬೇಕಾದರೆ ನನ್ನ ಆಫೀಸಿನತ್ತ ಬನ್ನಿ” ಎಂದೂ ಹೇಳಿ, ತಮ್ಮ ಚಿಕಿತ್ಸೆ ಮುಗಿದ ನಂತರ ಹೊರಟು ಹೋದರು. ನಂತರದ ದಿನಗಳಲ್ಲಿ ಕೂಡ ಕೆಲವು ಸಲ ತಮ್ಮ ತಪಾಸಣೆಗಾಗಿ ಬಂದಿದ್ದಾರೆ. ಹಾಗಾಗಿ ನನಗೆ ಚೆನ್ನಾಗಿಯೇ ಗೊತ್ತಿದೆ. ವಾಸ್ತವವಾಗಿ, ಅವರೂ ಸಹ ಅಧ್ಯಕ್ಷರಾದ ಮೊಹಮ್ಮದ್ ಸೈಯ್ಯದ್ ಬರ್ರೆಯವರ ಮಾರೆಹಾನ್ ಪಂಗಡದವರೇ. ದೇಶದ ಬಹುಮುಖ್ಯ ಪದವಿಗೆ ಅವರ ಜಾತಿಯವರನ್ನಲ್ಲದೆ ಬೇರೆ ಯಾರನ್ನೋ ನೇಮಿಸಲು ಸಾಧ್ಯವೇ? ಇಲ್ಲಿ ಅವರ ವಿದ್ಯಾರ್ಹತೆ ಸಹ ಗೌಣ! ಇಂತಹ ಆಡಳಿತ ಇರುವ ಎಲ್ಲ ದೇಶಗಳಲ್ಲೂ ಹೀಗೆಯೇ ಅಂದರೆ ಅದು ಸುಳ್ಳಾಗದು.

ಕಛೇರಿಯ ಸುತ್ತ ಜನ ತುಂಬಿದ್ದು ನನ್ನ ಸರದಿ ಬರಲು ಎಷ್ಟು ಹೊತ್ತು ಕಾಯಬೇಕೋ ದೇವರೇ ಅಂತಲೇ, ಕಛೇರಿಯ ಹೊರಗೆ ಕುಳಿತೆ. ನನ್ನ ಅದೃಷ್ಟಕ್ಕೆ ನನ್ನನ್ನು ಕರೆಯಲು ಬಂದಿದ್ದ ವ್ಯಕ್ತಿ ಆ ಕಡೆ ಸುಳಿದ. ಆತನೇ ನನ್ನತ್ತ ನೋಡಿ ಮತ್ತೆ ಒಳಹೋದ. ಕ್ಷಣದಲ್ಲೇ ಬಂದು ನನ್ನನ್ನೂ ಒಳಕ್ಕೆ ಕರೆದ. ಒಳಗೂ ಸಾಕಷ್ಟು ಜನರಿದ್ದರು. ಮುಖ್ಯಸ್ಥರು ಒಮ್ಮೆ ನನ್ನತ್ತ ನೋಡಿ, “ನಬದ್ ಸೋಮ” (ಚೆನ್ನಾಗಿದ್ದೀರ) ಎಂದು ಕೇಳಿ, ಕೂರಲು ಹೇಳಿ ತಮ್ಮ ಕೆಲಸದಲ್ಲಿ ಮಗ್ನರಾದರು. ಅವರ ಹೆಸರು “ಹಸನ್”.

ಏಕೆ ಕರೆದಿರಬಹುದೆಂಬ ಜಿಜ್ಞಾಸೆ ಕಾಡತೊಡಗಿತು. ನನ್ನ ಬಗ್ಗೆ ಯಾರಾದರೂ ದೂರು ಕೊಟ್ಟರೇ? ಹಾಗಾದರೆ ಅವರು ಯಾರು ಮತ್ತು ಏತಕ್ಕಾಗಿ. ಹೀಗೆ ಎಲ್ಲ ರೀತಿಯ ಗೊಂದಲದ ಮೊಳೆಗಳು ಒಂದಾಗಿ ಚುಚ್ಚತೊಡಗಿದ್ದವು. ಮೊಗದಿಶುವಲ್ಲಿ ನನ್ನನ್ನು ಕಂಡರೆ ಆಗದವರು ಯಾರಿರಬಹುದು. ಊಹುಂ, ಯಾರೂ ಇಲ್ಲ. ಒಂದೇ ಕ್ಷಣದಲ್ಲಿ, ನಮ್ಮ ದೇಶದ ಆಗಿನ ರಾಯಭಾರಿ, ಚೌಧರಿಗೆ ನನ್ನನ್ನು ಕಂಡರೆ ಆಗದು. ಹೌದು. ಆತನನ್ನು ಬಿಟ್ಟರೆ ಇನ್ನಾರು?
ಚೌಧರಿಗಿಂತ ಹಿಂದೆ ಇದ್ದ “ತಂಬಿ ಶ್ರೀನಿವಾಸ್” ಎಂಬುವವರು, ನನ್ನಿಂದ ರಾಯಭಾರಿ ಕಛೇರಿಯಲ್ಲಿನ ದೀಪಾವಳಿ ಹಬ್ಬದ ಕಾರ್ಯಕ್ರಮದ ಮುಖ್ಯ ಸಂಚಾಲಕನನ್ನಾಗಿ ಕೆಲಸ ಮಾಡಿಸಿಕೊಂಡಿದ್ದರು. ನನ್ನ ಜೊತೆಗೆ ಕಪೂರ್ ಎಂಬ ಇನ್ನೊಬ್ಬರಿದ್ದರು. ಸಮಾರಂಭ ಯಶಸ್ವಿಯಾದಾಗ, ನಮ್ಮಿಬ್ಬರಿಗೂ ಪ್ರಮಾಣಪತ್ರಗಳನ್ನು ಅಧಿಕೃತವಾಗಿ ಕೊಟ್ಟಿದ್ದರು. ಅವರು ಇರುವವರೆಗೂ ನಮಗೆ ಭಾರತೀಯ ಶಾಲೆಯ ಕೆಲ ಜವಾಬ್ದಾರಿ ಕೂಡ ನೀಡಿ, ನಮ್ಮ ಕಾರ್ಯವೈಖರಿಯಿಂದ ಬಹಳ ಖುಷಿಪಟ್ಟಿದ್ದರು. ಅವರ ತರುವಾಯ ಬಂದ ಈ ಚೌಧರಿಗೆ ಅದೇಕೋ ನನ್ನ ಬಗ್ಗೆ ತಾತ್ಸಾರ. ಹಾಗಾಗಿ ಕೆಲವು ಬಾರಿ ನಮ್ಮಿಬ್ಬರ ನಡುವೆ ವಾದವಿವಾದ ನಡೆದಿತ್ತು. ಇದನ್ನು ಬಿಟ್ಟು ನನಗೆ ಇನ್ನಾರ ಬಗ್ಗೆಯೂ ಸಂಶಯ ಇರಲಿಲ್ಲ. ಆದರೆ, ಸದ್ಯ ಆ ಯೋಚನೆ ಏಕೆ ಎಂದು ನನಗೇ ಅನ್ನಿಸಿತು.

ಇಮಿಗ್ರೇಷನ್ ಆಫೀಸ್ ನ ನಾಮ ಫಲಕ

ಅದೇನೋ ಕಾಣೆ, ಇದ್ದಕ್ಕಿದ್ದಂತೆ ಎಲ್ಲರನ್ನೂ ಆಚೆ ಇರುವಂತೆ ಹೇಳಿ, ನನ್ನತ್ತ ತಿರುಗಿದ ಹಸನ್ ಸಾಮಾನ್ಯ ಸಮಾಚಾರದ ನಂತರ, ಆರೋಗ್ಯದ ಒಂದೆರಡು ಮಾತಾಡಿ, “ನಿಮ್ಮ ವೀಸಾ ರದ್ದು ಮಾಡಿದೀನಿ” ಎಂದು ದಿಢೀರನೆ ಹೇಳಿ ನನ್ನ ಮುಖ ನೋಡಿದರು. ತಕ್ಷಣ ಮತ್ತೆ, “ಇನ್ನೂ ಮಾಡಿಲ್ಲ. ಆದರೆ ಹಾಗೆ ಮಾಡಿ ನಿಮ್ಮನ್ನು ನಿಮ್ಮ ದೇಶಕ್ಕೆ ಕಳಿಸಬೇಕೆಂದು ಯಾರೋ ಬರೆದಿದ್ದಾರೆ” ಅಂದು, “ಅಕಸ್ಮಾತ್ ಹಾಗೆ ಬರೆದಿದ್ದರೆ, ನಿಮ್ಮ ಪ್ರಕಾರ ಯಾರಿರಬಹುದು” ಎಂದು ನನ್ನನ್ನೇ ಪ್ರಶ್ನಿಸಿದರು. ಅವರ ಮುಖದಲ್ಲಿ, ಇದು ಅಸಾಧ್ಯವಾದ ಪ್ರಶ್ನೆ ಎಂಬಂತೆ, ಹುಸಿನಗೆಯೊಂದು ನನ್ನನ್ನು ಛೇಡಿಸಿದಂತಿತ್ತು. ಆದರೆ, ನಾನು ಕ್ಷಣವೂ ಯೋಚಿಸದೆ, “ಇಂಡಿಯನ್ ಅಂಬ್ಯಾಸಡರ್” ಎಂದೆ. ಹಸನ್ ಕ್ಷಣ ಅವಾಕ್ಕಾಗಿ, ಮತ್ತೆ ಸರಿಯಾಗಿ, “ಹೌದು, ಯಾರಿಗೂ ಹೇಳಬೇಡಿ. ಇಂತಹ ವಿಷಯ ಹೊರ ಬರಬಾರದು. ನಮ್ಮ ಸರಕಾರದ ಮೇಲೆ ಪ್ರಭಾವವಾಗುತ್ತೆ” ಎಂದು ಹೇಳಿ, ಸ್ವಲ್ಪ ತಡೆದರು. ನಂತರ, “ದತೋರೆ (ಡಾಕ್ಟರ್), ನಮಗೆ ನೀವು ಮುಖ್ಯ. ನಿಮ್ಮ ಸೇವೆ ನಮ್ಮ ದೇಶಕ್ಕೆ, ನಮ್ಮ ಜನಕ್ಕೆ ಮುಖ್ಯ. ಇಂತಹ ಅಂಬ್ಯಾಸಡರುಗಳು ಬರುತ್ತಾರೆ ಹೋಗುತ್ತಾರೆ. ಡೋಂಟ್ ವರಿ. ಆರಾಮ ಮನೆಗೆ ಹೋಗಿ” ಎಂದು ಎದ್ದು ನನ್ನ ಕೈ ಕುಲುಕಿ, ಕರೆಸಿದ್ದಕ್ಕೆ ಕ್ಷಮಿಸಿ. ಆದರೆ ನಿಮ್ಮ ಜನರ ಬಗ್ಗೆಯೇ ಎಚ್ಚರ” ಎಂದರು.

ಹೌದು, ಎಂಥ ಎಚ್ಚರಿಕೆ? “ನಿಮ್ಮ ಜನರ ಬಗ್ಗೆಯೇ ಎಚ್ಚರ!” ಅದೂ ಒಬ್ಬ ವಿದೇಶಿ ಪ್ರಜೆಯಿಂದ. ಒಬ್ಬ ರಾಯಭಾರಿ ಇರುವುದು ಉಭಯ ದೇಶಗಳ ರಾಜಕಾರ್ಯದ ಜೊತೆಗೆ, ತಾನು ಹೋದ ಪರದೇಶದಲ್ಲಿರುವ ತನ್ನದೇ ನಾಗರಿಕ ಬಾಂಧವರಿಗೆ ಸಮಯದಲ್ಲಿ ಸಹಾಯಹಸ್ತ ನೀಡಲೂ ಸಹ ಅಲ್ಲವೇ? ಅದು ಬಿಟ್ಟು ತಾನೇ ತನ್ನ ದೇಶದ ಪ್ರಜೆಗಳ ಕತ್ತು ಹಿಸುಕುವ ಕೆಲಸಕ್ಕೆ ಕೈ ಹಾಕಿದ ಖಳನಾದರೆ!
ಇಡೀ ಒಂದು ದೇಶದ ವಲಸೆಯನ್ನು (ಇಮಿಗ್ರೇಶನ್) ನೋಡಿಕೊಳ್ಳುವ ಮುಖ್ಯಸ್ಥನಾಗಿಯೂ, ಗಾಯಕ್ಕೆ ಏನು ಹಚ್ಚಿದ್ದೀರಿ ಎಂದಾಗ, ‘ಹೈವಾನ್ ಕಾ ದವಾ’ ಎಂದು ನೇರವಾಗಿ ಮತ್ತು ಮುಗ್ಧವಾಗಿ ಹೇಳುವಂಥ, ಬಹುಶಃ ಹೆಚ್ಚಿನ ವಿದ್ಯೆ ಇಲ್ಲದ ಈ ವ್ಯಕ್ತಿಯ ನಡವಳಿಕೆಗೂ (ಅದೂ ಒಬ್ಬ ವಿದೇಶೀಯನ ಬಗೆಗೆ) ಮತ್ತು, ನಮ್ಮ ದೇಶದ ರಾಯಭಾರಿ ಹುದ್ದೆಗೆ ಏರಬೇಕಾದರೆ ಇರಬೇಕಾದ ‘ಭಾರತೀಯ ವಿದೇಶೀ ಸೇವೆ’ ಎಂಬ ಐಎಎಸ್ ಸಮನಾದ ವಿದ್ಯಾರ್ಹತೆ ಇರಬಹುದಾದ ಚೌಧರಿ ಅಂಥ ವ್ಯಕ್ತಿಯ, ತನ್ನದೇ ದೇಶದ ಪ್ರಜೆಗೆ ತೋರಿದ ನೀಚತನಕ್ಕೂ ಯಾರಾದರೂ ತಾಳೆ ಹಾಕಿ ತೂಗಿಸಬಹುದು!
ಇದು ಸೋಮಾಲಿಯಾ ದೇಶದಲ್ಲಿದ್ದ ನಮ್ಮ ಭಾರತೀಯ ರಾಯಭಾರಿ ಕಛೇರಿಯೊಂದರ ಸ್ಥಿತಿ ಖಂಡಿತ ಅಲ್ಲ. ಎಲ್ಲ ಕಡೆ ನಮ್ಮ ದೇಶದ ಮಾನ ಹರಾಜಿಗಿಡುವವರೇ ಹೆಚ್ಚು. ತಂಬಿ ಶ್ರೀನಿವಾಸ್ ಅಂತಹ ಸಜ್ಜನ (ನನ್ನನ್ನು ಪುರಸ್ಕರಿಸುತ್ತಿದ್ದರು ಎಂದಲ್ಲ; ಬದಲಿಗೆ ಅವರು ಎಲ್ಲರ ಆದರಕ್ಕೆ ಪಾತ್ರರಾದ ಸಂಭಾವಿತರು) ಸಿಕ್ಕುವುದೂ ಕಷ್ಟ ಮತ್ತು ಅತೀ ವಿರಳ!

ನಾವು ಮುಗ್ಧವಾಗಿ ನಮ್ಮವರು ಅಂದುಕೊಂಡಿದ್ದ ಜನರಿಂದಲೇ ಕಷ್ಟ ಅನುಭವಿಸುವಂಥ ತುಚ್ಛ ಸಮಯ ಬಂದಾಗ, ಅದು ಬಹಳ ಸಂಕಟಕ್ಕೆ ಕಾರಣವಾಗುವುದು. ಪರಸ್ಪರ ಭಿನ್ನಾಭಿಪ್ರಾಯ ಅಥವ ವೈಮನಸ್ಸು ಇದ್ದಾಗ ಒಬ್ಬರನ್ನೊಬ್ಬರು ಮಾತನಾಡಿಸದೆ ದೂರದೂರ ಇದ್ದುಬಿಡಬಹುದು. ಅದು ಸಹಜ ಕೂಡ. ಬದಲಿಗೆ ಪರಸ್ಪರರ ಇರುವನ್ನೇ ಎಲ್ಲ ರೀತಿಯಲ್ಲೂ ನಾಶ ಮಾಡಲು ಮುಂದಾಗುವುದು ಅಥವ ಮಾನಸಿಕ ಹತ್ಯೆಗೇ ಯತ್ನಿಸುವುದು ಪೈಶಾಚಿಕ ಗುಣ. ಅಥವ ಅದಕ್ಕೂ ಭೀಕರ!

ಮುಂದುವರಿಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ. 98446 45459

Related post

Leave a Reply

Your email address will not be published. Required fields are marked *