ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-2

-ಎರಡು –

ಏಡನ್ ತಲುಪಿದೆವು!

ಲಕೋಟೆಯಿಂದ ಏರ್ ಟಿಕೆಟ್ ತೆರೆದು ತೋರಿಸಿದ್ದೇ ತಡ ನನ್ನ ತಾಯಿಯ ಕಣ್ಣುಗಳು ನೀರು ತುಂಬಿಕೊಂಡವು. ‘ದೊಡ್ಡವನೂ ಕಷ್ಟ ಸುಖಕ್ಕೆ ಇಲ್ಲದಷ್ಟು ದೂರ ಹೋದ; ಈಗ ನೀನೂ ಕೂಡ’ ಎಂಬ ದುಃಖ ಅವರಿಗೆ. ಮೇಲಾಗಿ ನಾನು ಕಿರಿಯ ಮಗ. ದಿನಕಳೆದಂತೆ ಅವರೊಡನೆ ಮಾತಿನ ಮಧ್ಯೆ, ನಮ್ಮ ಪ್ರಯಾಣದ ಬಗ್ಗೆಯೂ ಒಂದಿಷ್ಟಿಷ್ಟೇ ಹೇಳುತ್ತ ಧೈರ್ಯ ತುಂಬಿದೆ; ಅಥವಾ ಹಾಗೆ ನಾನೇ ಸಮಾಧಾನ ತಂದುಕೊಂಡೆ. ಎಷ್ಟೇ ಆದರೂ ತಾಯಿ; ಅವರು ನನಗೋಸ್ಕರ, ಮುಖದ ಮೇಲೆ ಗೆಲುವನ್ನು ಎಳೆದುಕೊಂಡ ಹಾಗೆ ಕಂಡರೂ, ಅವರ ಅಂತರಂಗ ಶೋಧಿಸುವ ಚೈತನ್ಯ ನನಗೆಲ್ಲಿ!

ಬರುವಾಗ ಮದುವೆ ಮಾಡಿಕೊಂಡೇ ಬರಬೇಕು ಎಂಬ ಅಣ್ಣನ ತಾಕೀತಿನಿಂದಾಗಿ, ನಮ್ಮ ಮದುವೆ ಜೂನ್ ತಿಂಗಳಲ್ಲಿ ಜರುಗಿತು. ತದನಂತರ, ಬೆಂಗಳೂರಿನ ನನ್ನ ಕ್ಲಿನಿಕ್ ಕೂಡ ಮುಚ್ಚಿದ್ದಾಗಿತ್ತು. ಅಂದಿನ ದಿನಗಳಲ್ಲಿ ಹೊರದೇಶದ ಪ್ರಯಾಣ ವಿರಳವಾಗಿದ್ದುದರಿಂದ, ನಮ್ಮಂತಹ ಕುಟುಂಬಗಳಲ್ಲಿ ಅದು ಅತೀ ವಿಶೇಷ ಎಂಬಂತೆ ತೋರುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ‘ಇಂದು ಹೀಗೆ ಹೋಗು ಹಾಗೆ ಬಾ’ ಅನಿಸುವಷ್ಟು ಸಾಧಾರಣವಾಗಿ, ಹಳ್ಳಿ ಹಳ್ಳಿಯ ಬಸ್ ಪ್ರಯಾಣದ ಹಾಗಾಗಿರುವುದೂ ವಿಶೇಷ ಅಲ್ಲ. ವಿಮಾನ ಸಂಸ್ಥೆಗಳೂ ಸಹ ದೇಶ ದೇಶಗಳಲ್ಲೂ ಹಲವು ಪಟ್ಟು ಹೆಚ್ಚಾಗಿ, ಆಕಾಶಮಾರ್ಗ ಜಾತ್ರೆಯ ಥರ ತಂಬಿಹೋಗಿರುತ್ತದೆ. ಉದಾಹರಣೆಗೆ, ಹೀತ್ರೂ ಲಂಡನ್, ಅಮೆರಿಕದ ಲಾಸ್ ಆಂಜಲೀಸ್, ಓ ಹೇರ್ ಚಿಕಾಗೋ, ಡಿ ಗಾಲ್ ಪ್ಯಾರಿಸ್, ದುಬೈ, ಸಿಂಗಪೂರ್ ಚಾಂಗಿ ಇನ್ನೂ ಮುಂತಾಗಿ. ಅನೇಕ ಬಾರಿ, ಒಂದು ನಿಲ್ದಾಣ ತಲುಪಿದ ನಂತರ ಇಳಿಯಲು ಅಸಾಧ್ಯವಾಗಿ, ಟವರಿನಿಂದ ಅನುಮತಿ ಸಿಕ್ಕುವವರೆಗೂ ಮೇಲೆಯೇ ಗಸ್ತು ಹೊಡೆವ ಪರಿಸ್ಥಿತಿ ತೀರ ಸಾಮಾನ್ಯ.
ಅಂದಿನ ಕಾಲದ ಆ ವಿರಳತೆಯಿಂದಾಗಿ, ಹಾಗೂ ಎಲ್ಲ ಕುಟುಂಬಗಳ ಎಲ್ಲ ಹಿರಿಯರೂ ಹಾಗೆ ಕಳಿಸುವ ಧೈರ್ಯ ಮಾಡದೆ ಇದ್ದುದರಿಂದ, ಅದಕ್ಕಾಗಿ ಮಾನಸಿಕ ಹಾಗೂ ದೈಹಿಕ ಮತ್ತು ಇತರ ತಯಾರಿಗಳ ಅಗತ್ಯತೆ ಖಂಡಿತ ಇರಬೇಕಿತ್ತು.

ಹೊರಡುವ ದಿನ ಹತ್ತಿರ ಆದಂತೆ ನಮ್ಮ ದುಗುಡವೂ ಏರುತ್ತಿತ್ತು. ಅಣ್ಣ ಅತ್ತಿಗೆ ನಮ್ಮ ಸಂಗಡ ತರಲು ಬರೆದಿದ್ದ ಅವಶ್ಯಕ ಸಾಮಾನು-ಸರಂಜಾಮು, ಹಾಗೂ ನಮ್ಮಿಬ್ಬರಿಗೆ ಬೇಕಾದ ಇನ್ನಷ್ಟು ಬಟ್ಟೆ, ನನ್ನವಳ ಬಳೆ, ಬಿಂದಿ ಇನ್ನಿತರ ಅವಶ್ಯವಿದ್ದ ಸಾಮಗ್ರಿಗಳ ಖರೀದಿಯೂ ಮುಗಿದಿತ್ತು.
ಹೊರಡಲು ಇನ್ನು ಎರಡೇ ದಿನ ಇದ್ದಹಾಗೆ ಮಾವನ ಮನೆಯ ಜನ ಬಂದಿಳಿದರು. ಒಂದು ಥರದಲ್ಲಿ, ನಮ್ಮ ಮನೆಯಲ್ಲಿ ಯಾವುದೋ ಸಮಾರಂಭದ ಸಿದ್ಧತೆ ಇದ್ದಂತೆ ಹೊರಗಿನವರಿಗೆ ಅನಿಸಿದ್ದರೂ ಸಾಕು. ಪ್ಯಾಕಿಂಗ್ ಮಾಡಲು ಅಣಿಯಾದರು ಮಡದಿಯ ಅಣ್ಣ. ಶಿಸ್ತುಗಾರ ಪುಟ್ಟಸ್ವಾಮಿ ಅನ್ನುವ ಆಡುಮಾತಿನಂತೆ, ಈ ಪುಟ್ಟಸ್ವಾಮಿ ಶೆಟ್ಟಿ ಕೂಡ ಅಂತಹ ಕೆಲಸಗಳಲ್ಲಿ ಎತ್ತಿದ ಕೈ. ತಮ್ಮ ಕೆಲಸಕ್ಕೆ ರಜೆ ಬರೆದು ನಮ್ಮನ್ನು ಸೇರಿದ್ದರು.

ಆಗಿನ ದಿನಗಳಲ್ಲಿ, ಒಬ್ಬೊಬ್ಬ ಪ್ರಯಾಣಿಕರಿಗೆ 20ಕೆಜಿ ಬ್ಯಾಗೇಜ್ ಹಾಗೂ 8ಕೆಜಿ ಕ್ಯಾಬಿನ್ ಕೈ ಬ್ಯಾಗ್ ಅನುಮತಿ ಇತ್ತು. ಆದರೆ ಅಮೆರಿಕಕ್ಕೆ ಇತ್ತೀಚಿನವರೆಗೂ 23ಕಿಜಿಯ ಮೂರು ಸೂಟ್ ಕೇಸುಗಳು ಹಾಗೂ ಕ್ಯಾಬಿನ್ ಚೀಲ ತೆಗೆದುಕೊಂಡು ಹೋಗಬಹುದಿತ್ತು; ಈಗ ಅದೂ ಕಮ್ಮಿಯಾಗಿದೆ ಕೆಲವುಕಡೆ. ಹಾಗಾಗಿ ನಮ್ಮಿಬ್ಬರಿಂದ ಒಟ್ಟು 56ಕೆಜಿ (ಕ್ಯಾಬಿನ್ ಚೀಲಗಳೂ ಸೇರಿ) ಇತ್ತು.
ಸೂಟ್ಕೇಸುಗಳೂ ರೆಡಿಯಾದವು. ನಮ್ಮ ಸಂಗಡ ಬಾಂಬೆವರೆಗೆ ಬಂದು ಅಲ್ಲಿ ಮತ್ತೆ ಟಾಟಾ ಮಾಡುವ ಸಲುವಾಗಿ, ಭಾವ ಪುಟ್ಟಸ್ವಾಮಿ ಹೊರಟಿದ್ದರು. ಇನ್ನು ಬೀಳ್ಕೊಡುಗೆ ಬಾಕಿ. ಅಂದಿನ ಸಮಯವೇ ಹಾಗಿದ್ದುದರಿಂದ, ನಮ್ಮಿಬ್ಬರಿಗೂ ಹಾರ ಹಾಕಿ ಅರಕಲಗೂಡಿನ ಬಸ್ ನಿಲ್ದಾಣಕ್ಕೆ ನಮ್ಮ ಹಾಗೂ ಮಾವನವರ ಮನೆಯ ಜನರೆಲ್ಲರೂ ಬಂದರು ಮದುವೆ ದಿಬ್ಬಣದಂತೆ!

ನಾನು, ಕಮಲ ಅರಕಲಗೂಡಿನಿಂದ ಏರ್‌ಪೋರ್ಟಿಗೆ ಹೊರಡುವಾಗಿನ ಚಿತ್ರ

ಆ ದಿನಕ್ಕೆ, ಅಂದರೆ ನಾವು ನಮ್ಮೂರು ಬಿಡುವುದಕ್ಕೂ (02.10.1976) ಮತ್ತು ಕ್ಲಿನಿಕ್ಕಿನಲ್ಲಿ ನನ್ನ ಕೈಗೆ ಕೆಲಸದ ಪತ್ರ ಬರುವುದಕ್ಕೂ ಸರಿಸುಮಾರು ಹತ್ತು ತಿಂಗಳೇ ಕಳೆದಿದ್ದವು. ಹಾಗಿತ್ತು ಅಂದಿನ ವೇಗದ ಗತಿ! ಇಂದಾಗಿದ್ದರೆ, ಅಷ್ಟೂ ಸಮಯ ಕೆಲವೇ ದಿನಗಳಿಗೆ ಅಮುಕಿ ಸಂಕುಚಿತವಾಗುತ್ತಿತ್ತು.

ಮಾರನೆದಿನ ಮತ್ತೆ ವಿಮಾನ ನಿಲ್ದಾಣದಲ್ಲಿ ಹೆಚ್ಚೂಕಮ್ಮಿ ಎಲ್ಲರ ಕಣ್ಣುಗಳೂ ತುಳುಕುವ ಕೊಡಗಳು ಎಂದರೆ ಅತಿಶಯ ಅಲ್ಲ. ನನ್ನ ಜೊತೆಗೆ ಇಬ್ಬರು ಆತ್ಮೀಯ ಗೆಳೆಯರಿದ್ದರು – ಡಾ. ಜಗನ್ನಾಥ ಹಾಗೂ ಡಾ. ಪ್ರಸನ್ನ (ಈಗವನು ಮಲೇಶಿಯ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯಾಲಜಿ ಪ್ರಾಧ್ಯಾಪಕ) – ಹಾಗಾಗಿ ನನ್ನ ಕಣ್ಣುಗಳು ವಿಶ್ರಾಂತವಾಗಿದ್ದವು! ಆದರೂ, ಬೋರ್ಡಿಂಗ್ ಆರಂಭ ಆದ ಸಮಯ ನನಗೂ ಸ್ವಲ್ಪ ಕಣ್ಣೀರು ಬಂದದ್ದು ನಿಜ. ಇನ್ನು ಕಮಲ! ಪ್ರಥಮ ಬಾರಿ ಮನೆಯವರನ್ನೆಲ್ಲ ಬಿಟ್ಟು ಆಗ ತಾನೆ ಮದುವೆ ಆಗಿದ್ದ ಗಂಡನ ಸಂಗಡ ಸಂಪೂರ್ಣ ನಂಬಿ ಹೋಗುವುದು ಅಂದಿಗೆ, ಅದೂ ಪ್ರಬುದ್ಧ ಶಿಕ್ಷಣ ಕೂಡ ಇಲ್ಲದ ಮುಗ್ಧ ಹೆಣ್ಣಿಗೆ ಸುಲಭ ಆಗಿರಲಿಲ್ಲ. ಆ ದಿನಕ್ಕೆ ಅವಳು ಅಮಾಯಕಳು ಅಂದರೂ ಆದೀತು.
ಹಾಗಾಗಿ ಅವಳ ಕಣ್ಣು ಧಾರಾಕಾರ.

ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ಈಗಿನಂತೆ ಅಂತರರಾಷ್ಟ್ರೀಯ ಮಟ್ಟದ್ದಾಗಿರಲಿಲ್ಲ. ಮೇಲಾಗಿ ಇಂದಿನ ಹಾಗೆ ನಿರ್ಬಂಧಗಳೂ ಇರಲಿಲ್ಲ. ಮಹಡಿ ಮೇಲೆ ಏರಿ ಪ್ರಯಾಣಿಕರಿಗೆ ಕೈ ಬೀಸುತ್ತಾ ಬೀಳ್ಕೊಡಬಹುದಿತ್ತು. ಅಂದಿನ ದಿನಗಳಲ್ಲಿ ನಮ್ಮ ವಿಮಾನ ನಿಲ್ದಾಣದಲ್ಲಿ ‘ಏರೋಬ್ರಿಡ್ಜ್’ ಇರಲಿಲ್ಲ. ಇದ್ದಿದ್ದರೆ ವಿಮಾನದ ಬಾಗಿಲವರೆಗೆ ಏರೋಬ್ರಿಡ್ಜ್ ಒಳಗೆ ನಡೆದು ಹೋಗಬಹುದಿತ್ತು. ಎಲ್ಲರನ್ನೂ ಇನ್ನೊಮ್ಮೆ ವಿಮಾನದತ್ತ ನಡೆದು ಹೋಗುವಾಗ ಹಾಗೂ ಮೆಟ್ಟಿಲು ಮೇಲೇರಿ ಮತ್ತೊಮ್ಮೆ ಕೈ ಬೀಸಿ ವಿದಾಯ ಹೇಳಿ ನಮ್ಮ ಸೀಟುಗಳತ್ತ ನಡೆದೆವು. ಈ ದಿನಗಳಲ್ಲಿ ಭದ್ರತೆ ಹಾಗೂ ರಕ್ಷಣೆಯ ದೃಷ್ಟಿಯಿಂದ ನಿಲ್ದಾಣದ ಒಳಗೆ ಯಾರೂ ಹೋಗುವಂತಿಲ್ಲ – ಪ್ರಯಾಣಿಕರು ಮಾತ್ರ ಟಿಕೆಟ್ ತೋರಿಸಿ ಹೋಗುವ ಪದ್ಧತಿ – ಇಡೀ ಜಗತ್ತಿನಲ್ಲಿ.

ಆಗ ಎಲ್ಲ ವಿಮಾನಗಳಲ್ಲೂ ತಿಂಡಿ ಊಟ ಕೊಡುವ ರೂಢಿ ಇತ್ತು. ಈಗ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅಲ್ಲದೆ, ಅಂತಹ ‘ಹೆಚ್ಚು ಖರ್ಚು’ ಗಳನ್ನು ಉಳಿತಾಯ ಮಾಡುವಷ್ಟು ಕೃಪಣತೆಯತ್ತ ಹೊರಳಿವೆ ಎಲ್ಲ ವಿಮಾನಸಂಸ್ಥೆಗಳು!
ಬೆಂಗಳೂರು-ಬೊಂಬಾಯಿಯ ಪ್ರಯಾಣ ಒಂದು ಗಂಟೆ ಇಪ್ಪತ್ತೈದು ನಿಮಿಷ. ನಮಗೆ ಒಳಗೆ ಮೆಲುವಾಗಿ ಹೊಮ್ಮುವ ಸಂಗೀತ, ಒಳಾಂಗಣದ ಪರಿಸರ ಎಲ್ಲ ಹೊಸದು. ಮೇಲಾಗಿ ಫೋರ್ಕ್ ಮತ್ತು ಸ್ಪೂನ್ ಅಭ್ಯಾಸ ಇಲ್ಲದ ಕೈಗಳು. ಅಂತೂ ನಮ್ಮ ತಿಂಡಿ ಸಮಾರಂಭ ಅಂತ್ಯ ಆಗುವಷ್ಟರಲ್ಲಿ ವಿಮಾನ ಇಳಿವ ಸುದ್ದಿ ಮೈಕಿನಲ್ಲಿ ಬಿತ್ತರವಾಯ್ತು. ಇಳಿದು ಸೆಂಟಾರ್ ಹೋಟೇಲಿಗೆ ಬಸ್ಸಿನಲ್ಲಿ ಬಂದಿಳಿದೆವು. ಈ ಸೌಲಭ್ಯಗಳೆಲ್ಲ ಸಹ ಆಗ ಪ್ರಯಾಣಿಕರಿಗೆ ಉಚಿತ. ಇಷ್ಟೇ ಅಲ್ಲದೆ, ಮುಂದಿನ ಪ್ರಯಾಣದ ತನಕ ಸ್ಟಾರ್ ಹೋಟೆಲಲ್ಲಿ ತಂಗುವ ವ್ಯವಸ್ಥೆ, ಊಟ ತಿಂಡಿ ಎಲ್ಲ ಉಚಿತ. ಕಾರಣ, ಯಥಾಪ್ರಕಾರ ಒಂದೊಂದು ಮಾರ್ಗದಲ್ಲೂ ವಿರಳವಾಗಿದ್ದ ವಿಮಾನ ಹಾರಾಟ. ಹಾಗಾಗಿ, ತಕ್ಷಣಕ್ಕೆ ಮುಂದಿನ ಮಾರ್ಗದ ಸಂಪರ್ಕ ವಿಮಾನ ಇರುತ್ತಿರಲಿಲ್ಲ. ಒಮ್ಮೊಮ್ಮೆ ದಿನವೆಲ್ಲ ಕಾಯಬೇಕಾಗಿತ್ತು!

ವಿಮಾನನಿಲ್ದಾಣದ ಹತ್ತಿರ ಇದ್ದ ಸೆಂಟಾರ್ ಹೋಟೆಲ್, ಏರ್ ಇಂಡಿಯ ಅಂಗಸಂಸ್ಥೆಯಾಗಿದ್ದ ‘ಹೋಟೆಲ್ ಕಾರ್ಪೊರೇಷನ್ ಆಫ್ ಇಂಡಿಯ’ ಒಡೆತನದಲ್ಲಿತ್ತು. ಕ್ರಮೇಣ ಬಾಂಬೆಯಲ್ಲೇ ಜುಹು ಸೆಂಟಾರ್ ಎಂಬ ಇನ್ನೊಂದು ಹೋಟೆಲ್ ಸ್ಥಾಪನೆಯಾಯ್ತು. ಹಾಗೆಯೇ ದೆಹಲಿಯಲ್ಲಿ ಸಹ. ಕ್ರಮೇಣ ಅವುಗಳನ್ನೂ ಏರ್ ಇಂಡಿಯಾ ಸಂಸ್ಥೆ ಮಾರಿಬಿಟ್ಟಿತು.
ಏರ್ ಪೋರ್ಟ್ ಸೆಂಟಾರ್ ಒಳಗೆ ಹೋಗಿ, ಆ ಲೌಂಜ್ ನೋಡಿಯೇ ನಮಗೆ ಸುಸ್ತು ಹಾಗೂ ಆನಂದ. ನಾನು ವೈದ್ಯ ಆಗಿದ್ದೆನಾದರೂ ಇಂಥದ್ದೆಲ್ಲ ಆಗ ನೋಡಿರಲಿಲ್ಲ. ಈ ದಿನಗಳಲ್ಲಾದರೆ ಔಷಧಿ ಸಂಸ್ಥೆಗಳು ‘ಮುಂದುವರಿದ ವೈದ್ಯಕೀಯ ಶಿಕ್ಷಣ’ದ ಅಂಗವಾಗಿ ಉಪನ್ಯಾಸಗಳನ್ನು ತಾರಾ ಹೋಟೆಲುಗಳಲ್ಲೇ ವ್ಯವಸ್ಥೆ ಮಾಡುವುದರಿಂದ ಎಲ್ಲ ವೈದ್ಯರಿಗೂ ಅನುಭವವಾಗಿರುತ್ತದೆ.
ಅಂತೂ ನಮ್ಮ ಕೊಠಡಿ ತಲುಪಿ, ಸ್ವಲ್ಪ ವಿಶ್ರಮದ ನಂತರ, ರೂಮಿಗೇ ತರಿಸಿ ಮೂವರೂ ಊಟ ಮಾಡಿದೆವು. ತಕ್ಷಣಕ್ಕೆ ಒಂದು ಕೆಲಸ ಇತ್ತು. ಏಡನ್ ವೀಸ. ಅಂತೂ ಸೌತ್ ಎಮನ್ ದೇಶದ ದೂತಾವಾಸ ಹುಡುಕಿ ಒಳಹೊಕ್ಕು, ನಮ್ಮಣ್ಣ ಕಳಿಸಿದ್ದ ಏಡನ್ನಿನ ಏರ್ ಇಂಡಿಯ ಮ್ಯನೇಜರ್ ಅವರ ಪತ್ರ ಕೊಟ್ಟೆ. ಅಲ್ಲಿದ್ದವ ಯಮನಿ ಅಲ್ಲ; ಬದಲಿಗೆ ನಮ್ಮ ದೇಶದ ಪ್ರಜೆ. ಆ ಕಾಗದ ನೋಡಿದ್ದೇ, ತಾನೂ ಯಾವ ಅರಬ್ಬನಿಗೂ ಕಮ್ಮಿ ಇಲ್ಲ’ ಎಂಬಂಥ ಸೊಕ್ಕಿನಲ್ಲಿ, ಅದನ್ನು ಅತ್ತಿಂದ ನನ್ನತ್ತ ಎಸೆದು, ಇಲ್ಲಿ ಇದಕ್ಕೆಲ್ಲ ಮನ್ನಣೆ ಇಲ್ಲ ಎಂದವನೇ ಒಳಗೆ ಹೊರಟುಹೋದ! ಅಲ್ಲಿಗೆ ನನ್ನ ವೀಸಾ ಪ್ರಸಂಗ ಮುಕ್ತಾಯ. ಮತ್ತೊಮ್ಮೆ ಮನಸ್ಸಿನಲ್ಲೆ, ‘ಬಂದದ್ದು ಬರಲಿ’ ಅಂದುಕೊಂಡು ಹೊರಬಿದ್ದೆ.

ನಾವು ಯಾರೂ ಬಾಂಬೆ ನೋಡಿದ್ದಿಲ್ಲ. ಹಾಗಾಗಿ ಸ್ವಲ್ಪ ಹೊತ್ತು ಸುತ್ತಾಡಿ, ಸಂಜೆಯ ಸಮಯಕ್ಕೆ ಹೋಟೆಲ್ ತಲುಪಿದೆವು. ರಾತ್ರಿ ಊಟ ಕೂಡ ರೂಮಿಗೇ ತರಿಸಿದೆವು. ತಾರಾ ವ್ಯವಸ್ಥೆಯಲ್ಲಿ, ಊಟಕ್ಕೆ ಕೂಡ ತಾರಾಬೆಲೆ. ಆದ್ದರಿಂದ ಮೂವರಿಗೂ ನಮ್ಮಿಬ್ಬರ ಊಟವೇ ಬೇಕಾದಷ್ಟು. ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ನಮ್ಮ ಫ್ಲೈಟ್ ಟೈಂ. ಈಗಿನ ಹಾಗೆ ರಕ್ಷಣಾವ್ಯವಸ್ಥೆಯಿಂದಾಗಿ, ಅಂತರರಾಷ್ಟ್ರೀಯ ಫ್ಲೈಟಿಗೆ ಮೂರ್ನಾಲ್ಕು ಗಂಟೆಗೂ ಮುನ್ನ ಏರ್‌ಪೋರ್ಟ್ ತಲುಪುವ ಅವಶ್ಯಕತೆ ಇರಲಿಲ್ಲ; ಕೇವಲ ಎರಡು ಗಂಟೆ ಒಳಗೆ (ಅಂತರ್ದೇಶೀಯ ಆದರೆ ಒಂದು ಗಂಟೆ) ಇದ್ದರಾಗಿತ್ತು. ನಮ್ಮ
ಅಂದಿನ ಆ ಫ್ಲೈಟ್ ಬಾಂಬೆಯಿಂದ ಹೊರಟು, ಮೊದಲು ಏಡನ್, ನಂತರ ಅಡಿಸ್ ಅಬಾಬ (ಇಥಿಯೋಪಿಯ ರಾಜಧಾನಿ) ಹಾಗೂ ನೈರೋಬಿ (ಕೆನ್ಯ ರಾಜಧಾನಿ)ಗಳಲ್ಲಿ ನಿಂತು ಮತ್ತೆ ವಾಪಸ್ ಬಾಂಬೆ ತಲುಪುವುದಿತ್ತು.
ಕಮಲ, ನಮ್ಮ ಮದುವೆಯಲ್ಲಿ ಉಟ್ಟಿದ್ದ ರೇಷ್ಮೆ ಸೀರೆಯನ್ನೇ ಈಗಲೂ ಉಟ್ಟಿದ್ದಳು. ಆದರೂ, ಮತ್ತೊಮ್ಮೆ ಅವಳಣ್ಣನ ಭುಜದ ಮೇಲೆ ಕಣ್ಣೀರು ಹಾಕಿದಳು. ಅಂತಹ ವಿದಾಯದ ಘಳಿಗೆಯಲ್ಲಿ, ಬಟ್ಟೆಯ ಬಗ್ಗೆ ಗಮನ ಹೇಗೆ ಬಂದೀತು! ನನಗೆ ಕರುಳು ಹಿಂಡಿದಂತಾಗಿ, ಇವಳು ಮುಂದೆ ಹೇಗಿರಬಹುದು ಅನಿಸದೇ ಇರಲಿಲ್ಲ. ಆಗಷ್ಟೇ ಅಮ್ಮನ ಗೂಡು ಬಿಟ್ಟು ಹಾರುತ್ತಿದ್ದ ಹಕ್ಕಿಯ ಹಾಗಿದ್ದಳು ಆಗವಳು. ನನಗೂ ಸಹ ಭಾವನನ್ನು ಆಲಂಗಿಸಿ ಹೊರಡುವಾಗ ತುಸು ಕಷ್ಟ ಆಯಿತು. ಆದರೆ ನಾವು ಹೋಗುತ್ತಿದ್ದ ಸಂಕಲ್ಪ ಮುಖ್ಯ ಆಗಿತ್ತು. ಅಂತೂ ವಿಮಾನ ಏರುವ ಹೊತ್ತಿಗೆ ಕಮಲ ಸರಿಯಾಗಿದ್ದಳು.

ರನ್ ವೇ ತಲಪುವವರೆಗೆ ಕಿಟಕಿಯ ಹೊರಗೆ ತದೇಕ ನೋಡುತ್ತಿದ್ದಳು. ಬಹುಶಃ ಅಣ್ಣ ಕಣ್ಣಿಗೆ ಎಲ್ಲಾದರು ಬೀಳಬಹುದೋ ಎಂದಿರಬಹುದು. ಟೇಕಾಫ್ ಆಗಿ, ಸೀಟ್ ಬೆಲ್ಟ್ ಬಿಚ್ಚಿದ ತರುವಾಯ ಸರಿಯಾದಳು.

ಸರಿಸುಮಾರು ಮೂರೂವರೆ ಗಂಟೆ ಪ್ರಯಾಣ. ಕರಾರುವಾಕ್ಕಾಗಿ ಜ್ಞಾಪಕ ಈಗಿಲ್ಲ. ಊಟ ಬಂತು. ನಂತರ ಸ್ವಲ್ಪ ಮಂಪರಿನ ಹಾಗೆ ನಿದ್ದೆ. ಮಡದಿ ನನ್ನ ಭುಜ ಒರಗಿ ಹಾಯಾಗಿ ಕಣ್ಮುಚ್ಚಿದ್ದಳು. ನನಗೆ, ನಿದ್ದೆಯ ಒಳಹೋಗುವುದು ಮತ್ತೆ ಹೊರಬರುವುದು ಹೀಗೆ ಮತ್ತೆಮತ್ತೆ, ಪ್ರಯಾಣದ ಉದ್ದಕ್ಕೂ. ಕೊನೆಗೂ ದಕ್ಷಿಣ ಎಮನ್ನಿನ ಅಂದಿನ ರಾಜಧಾನಿ ಏಡನ್ ಏರ್‌ಪೋರ್ಟ್ ನಲ್ಲಿ ಇನ್ನೇನು ಇಳಿಯುವುದಾಗಿ ಮೈಕ್ ಬಿತ್ತರಿಸುವ ಹೊತ್ತಿಗೆ, ಸಂಪೂರ್ಣ ಎಚ್ಚರಗೊಂಡಿದ್ದೆವು.

ಅಂತೂ ಪ್ರಪ್ರಥಮ ಬಾರಿ ತಾಯ್ನಾಡು ತೊರೆದು ಬಹಳ ದೂರ ಬಂದಿದ್ದೆವು. ಮುಂದೆ ಹೇಗೋ ಏನೋ… ಇಂಥ ಯೋಚನೆಗಳು ಅಂಥ ಆಗಂತುಕ ಪರಿಸ್ಥಿತಿಯಲ್ಲಿ ಯಾರಿಗಾದರೂ ದಿಗಿಲು ಹುಟ್ಟಿಸುವುದೂ ಸಹಜ. ನನಗೆ ಅಣ್ಣ ಇರುವ ಧೈರ್ಯ. ಹಾಗಾದರೆ ಅಣ್ಣನಿಗೆ ಹೇಗನ್ನಿಸಿರಬಹುದು? ಅವರಿಗೆ ಯಾರೂ ಕಾಯುತ್ತಿರಲಿಲ್ಲ ಆಗ ಅಲ್ಲವೇ…?

ಏಡನ್ನಿನಲ್ಲಿ ಇಳಿದವರು ನಾವಿಬ್ಬರಲ್ಲದೆ, ಇನ್ನು ಕೆಲವೇ ಜನ. ಅಡಿಸ್ ಹಾಗೂ ನೈರೋಬಿ ಪ್ರಯಾಣಿಕರು ದಯಮಾಡಿ ಕುಳಿತಿರಿ ಎಂಬ ನಿವೇದನೆ ಬಿತ್ತರವಾಗುತ್ತಿತ್ತು… ನಾವಿಬ್ಬರೂ ಸಾವಕಾಶ ಇಳಿದು ಏರ್ ಪೋರ್ಟ್ ಟರ್ಮಿನಲ್ ಕಡೆಗೆ ಹೆಜ್ಜೆ ಹಾಕಿದೆವು.
ಅಂತೂ ನಮ್ಮ ಮೊದಲ ಹೆಜ್ಜೆಯಾಗಿ ಏಡನ್ ತಲಪಿದ್ದೆವು…

ಮುಂದುವರಿಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

Leave a Reply

Your email address will not be published. Required fields are marked *