ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೧

–ಬೈಸಾಖಿ ಲಂಗರ್–

ದೇಶದೇಶಗಳಲೂ ಈಗ ಭಾರತೀಯ ಜನಗಳ ಒಕ್ಕೂಟಗಳಿವೆ. ಹಾಗೆಯೇ ವಿವಿಧ ರಾಜ್ಯಗಳ ಬೇರೆ ಬೇರೆ ಭಾಷೆಗಳ ಒಕ್ಕೂಟಗಳೂ ಸಹ ಸ್ಥಾಪಿತಗೂಂಡಿವೆ. ಉದಾಹರಣೆಗೆ ಅಮೇರಿಕದ ‘ಅಕ್ಕ’ – ಅಮೇರಿಕ ಕನ್ನಡ ಕೂಟಗಳ ಆಗರ (Association of Kannada Kootas of America – AKKA). ಈ ಎಲ್ಲ ಸಂಘ-ಸಂಸ್ಥೆಗಳ ಪ್ರಥಮ ಉದ್ದೇಶವೇ ತಮ್ಮ ಜನರನ್ನು ಸಂಚಯಿಸಿ, ಹಬ್ಬ ಮುಂತಾಗಿ ಒಟ್ಟಾಗಿ ಆಚರಿಸುವುದು ಮತ್ತು ತಮ್ಮ ಜನಕ್ಕೆ ಯಾವ ಥರದ ಅನ್ಯಾಯ, ಧಕ್ಕೆ ಸಂಭವಿಸಿದರೆ, ಅದಕ್ಕೆ ಒಂದಾಗಿ ಹೋರಾಡುವುದು ಮುಂತಾಗಿ. ತಮ್ಮ ದೇಶ ಭಾಷೆಗಳ ರಾಷ್ಟ್ರೀಯ ಹಾಗೂ ರಾಜ್ಯ ದಿನಗಳನ್ನೂ ಆಚರಿಸುವುದು.

ಆದರೆ ಸೋಮಾಲಿಯಾದಂತಹ ದೇಶದಲ್ಲಿ ನಮ್ಮ ಜನರ ಸಂಖ್ಯೆಯೇ ಬೆರಳೆಣಿಕೆಯಷ್ಟು; ಹಾಗಾಗಿ ಸಂಘ, ಒಕ್ಕೂಟ ಅಸಾಧ್ಯ. ಆದ್ದರಿಂದ ಮೊಗದಿಶುವಿನಲ್ಲಿ ಭಾರತೀಯರು ಒಟ್ಟಾಗಿ ಸೇರುವ ಅವಕಾಶಗಳು ಬಹಳ ವಿರಳ. ನಮ್ಮ ರಾಯಭಾರಿ ಕಛೇರಿಯ ದೀಪಾವಳಿ ಮತ್ತು ದಸರ ಆಚರಣೆಗಳಲ್ಲದೆ, ರಾಯಭಾರಿ ಕಛೇರಿ ನಡೆಸುತ್ತಿದ್ದ ಭಾರತೀಯ ಶಾಲೆಯ ವಾರ್ಷಿಕೋತ್ಸವ; ಇವಿಷ್ಟೂ ಅಧಿಕೃತ. ಆದರೆ ಇವಲ್ಲದೆ, ನಮ್ಮ ಜನಕ್ಕೆ ಮತ್ತೊಂದು ಖಾಸಗಿ ಹಬ್ಬದ ಆಚರಣೆ ವರ್ಷಕ್ಕೊಮ್ಮೆ ಕೈ ಬೀಸಿ ಕರೆಯುತ್ತಿತ್ತು. ಅದೇ ಬೈಸಾಖಿ ಹಬ್ಬದ ಲಂಗರ್!

Photo Credit: IB Times

ಮೊಗದಿಶುವಲ್ಲಿ ಪ್ರೀತಮ್ ಸಿಂಗ್ ಎಂಬ ಒಬ್ಬ ಸರ್ದಾರ್ಜಿ ಮತ್ತವರ ಕುಟುಂಬ ದಶಕಗಳಿಂದ ನೆಲೆಸಿದ್ದರು. ಅವರು ವೃತ್ತಿಯಲ್ಲಿ ಮರಗೆಲಸದವರು. ಅದಕ್ಕಾಗಿ ಅವರ ವಿಶಾಲ ಕಾಂಪೌಂಡಿನೊಳಗೆ ತಮ್ಮದೇ ಒಂದು ದೊಡ್ಡ ಕಾರ್ಯಾಗಾರ (ವರ್ಕ್ ಶಾಪ್) ಸಹ ನೆಲೆಗೊಂಡಿತ್ತು. ಅದರೊಳಗೆ ಅವರ ವೃತ್ತಿಗೆ ಅಗತ್ಯವಿದ್ದ ಅನೇಕ ರೀತಿಯ ಯಾಂತ್ರಿಕ ಉಪಕರಣಗಳನ್ನೆಲ್ಲ ಸ್ಥಾಪಿಸಿದ್ದರು. ಅಂತಹ ದೊಡ್ಡ ಬಡಗಿ ಅವರು. ಅವರಿಗೆ ಬಲ್ಬೀರ್ ಹೆಸರಿನ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳು. ಪ್ರೀತಮ್ ಸಿಂಗ್ ಮತ್ತವರ ಮಡದಿ ತಮ್ಮ ಸಿಖ್ ಧರ್ಮವನ್ನು ಅಲ್ಲಿ ಸಹ ನಿಷ್ಠೆಯಿಂದ ಆಚರಿಸುತ್ತಿದ್ದರು. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರುಸ ಸುಗ್ಗಿ ಕಾಲದ ಸಿಖ್ಖರ ಹಬ್ಬವಾದ ಬೈಸಾಖಿಯನ್ನು ತಪ್ಪದೆ ಆಚರಿಸಿ, ಆ ಒಂದು ದಿನ ಮೊಗದಿಶುವಲ್ಲಿ ನೆಲೆಸಿದ್ದ ಎಲ್ಲ ಭಾರತೀಯ ಪ್ರಜೆಗಳನ್ನೂ, ರಾಯಭಾರಿ ಕಛೇರಿ ಸಿಬ್ಬಂದಿ ಸೇರಿದಂತೆ ಹಬ್ಬದೂಟಕ್ಕೆ ಆಹ್ವಾನಿಸುತ್ತಿದ್ದರು – ಅದೇ ಲಂಗರ್!
ಸಾಮಾನ್ಯವಾಗಿ ಯಾರೂ ಸಹ ಈ ಒಂದು ಊಟಕ್ಕೆ ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದರು. ಅಷ್ಟಲ್ಲದೆ, ಪ್ರೀತಂ ಅವರ ಕುಟುಂಬಕ್ಕೆ ಆಪ್ತರಾದ ಕೆಲ ಭಾರತೀಯರು ಅಡುಗೆಗೆ ಸಹಾಯಹಸ್ತ ನೀಡುವ ರೂಢಿಯಿತ್ತು. ಇಲ್ಲದಿದ್ದರೆ, ಅಷ್ಟು ಮಂದಿಗೆ ಉಣಬಡಿಸುವುದು ಹುಡುಗಾಟದ ಮಾತಲ್ಲ. ಭಾರತೀಯರಲ್ಲದೆ, ಪ್ರೀತಂ ಅವರ ಸೋಮಾಲಿ ಸ್ನೇಹಿತ ಬಳಗ ಮತ್ತು ಕೆಲಸಗಾರರು ಮುಂತಾಗಿ ಸೇರುತ್ತಿದ್ದರು.

ಆದರೆ ಹೀಗೆ ಎಲ್ಲರೂ ಒಟ್ಟು ಕೂಡುವಿಕೆಯ ಹಬ್ಬ ಅಥವ ರಾಷ್ಟ್ರ ದಿನಗಳ ಆಚರಣೆ ಹಾರ್ಗೀಸಾ, ಕಿಸ್ಮಾಯೋ ಅಥವ ಇನ್ನಾವ ಬೇರೆ ಸ್ಥಳಗಳಲ್ಲಿ ಇರಲಿಲ್ಲ; ಅಥವ ಸಾಧ್ಯ ಇರಲಿಲ್ಲ – ಅಲ್ಲಿರುವವರೇ / ಇದ್ದವರೇ ಒಂದೋ ಎರಡೋ ಮಂದಿ ಅಥವ ಕುಟುಂಬಗಳು. ಅಲ್ಲದೆ, ಹಾಗೆ ಆಚರಿಸಲು ರಾಯಭಾರಿ ಕಛೇರಿಯ ಶಾಖೆಗಳೂ (consular office) ಸಹ ಅಂತಹ ಸ್ಥಳಗಳಲ್ಲಿ ಇರುವಷ್ಟು ಮುಖ್ಯ ಊರುಗಳೂ ಅವು ಆಗಿರಲಿಲ್ಲ. ಮತ್ತು ಅದು ಭಾರತಕ್ಕೆ ಅಂಥ ಪ್ರಾಮುಖ್ಯ ದೇಶವೂ ಆಗಿರಲಿಲ್ಲ.

ಗುರು ಗೋಬಿಂದ್ ಸಿಂಗ್

ಈ ಹಬ್ಬದ ಬಗ್ಗೆ ಮಾಹಿತಿ ಇಲ್ಲದವರ ಅರಿವಿಗಾಗಿ, ಮುಖ್ಯ ಸಾರಾಂಶ:
ವೈಸಾಖಿ ಅಥವ ಬೈಸಾಖಿ ಎಂದು ಉಚ್ಛಾರ ಮಾಡುವ, ವೈಶಾಖ ತಿಂಗಳ ಮೊದಲ ದಿನವಾದ ಏಪ್ರಿಲ್ 13 ಅಥವ 14 ರಂದು ಆಚರಿಸುವ ಈ ಹಬ್ಬ ಹಿಂದೂ ಮತ್ತು ಸಿಖ್ಖರ ಸೌರಮಾನ ಹೊಸ ವರ್ಷ. ಅದಲ್ಲದೆ ಅನೇಕ ಭಾರತೀಯರಿಗೆ, ಸಿಖ್ಖರ ಹಾಗೆ ಅದು ವಸಂತ ಋತುವಿನ ಸುಗ್ಗಿ ಹಬ್ಬ ಸಹ.
ಸಿಖ್ ಜನಾಂಗಕ್ಕೆ ಅದು ಹೊಸ ವರ್ಷ ಮತ್ತು ಅವರ ಕ್ಯಾಲೆಂಡರಿನ ಅತ್ಯಂತ ವರ್ಣರಂಜಿತ ದಿನವೂ ಆಗಿದ್ದು, ಸಿಖ್ ಜನ ಅಂದು ತಮ್ಮ ತಮ್ಮ ಸ್ಥಳೀಯ ಗುರುದ್ವಾರಗಳಿಗೆ ಮತ್ತು ಜಾತ್ರೆಗಳಿಗೆ ಭೇಟಿನೀಡಿ, ‘ನಗರ ಕೀರ್ತನೆ’ ಯ ಮೆರವಣಿಗಳಲ್ಲಿ ಭಾಗಿಯಾಗಿ, ‘ನಿಶಾನ್ ಸಾಹಿಬ್’ ಬಾವುಟ ಏರಿಸುವ ರೂಢಿ. ಮತ್ತು ಪರಸ್ಪರ ಹಬ್ಬದ ಆಹಾರವನ್ನು ಹಂಚಿಕೊಂಡು ಸೇವಿಸಿ ಖುಷಿ ಪಡುತ್ತಾರೆ.

ಸಿಖ್ಖರ ಅತಿ ಮುಖ್ಯ ಹಬ್ಬವಾದ ಬೈಸಾಖಿಯು ಸಿಖ್ ಇತಿಹಾಸದ ಮುಖ್ಯ ಘಟನೆಗಳ ದಾಖಲೆಯಾಗಿ ಸಹ ಆಚರಿಸಲ್ಪಡುತ್ತದೆ. ಗುರು ತೇಜ್ ಬಹದ್ದೂರ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದ ಕಾರಣ ಔರಂಗಜೇಬನು ಅವರ ಕೊಲೆ ಮಾಡಿಸಿದ ನಂತರ, ಸಿಖ್ಖರ ಹತ್ತನೇ ಗುರುವಾದ, ಗುರು ಗೋಬಿಂದ್ ಸಿಂಗ್ ರವರು 1699ರ ಮಾರ್ಚಿ 30ರಂದು, ಖಾಸ್ಲಾ ಪಂಥ ಹುಟ್ಟುಹಾಕಿದ ದಿನ ಎಂದೂ ಬೈಸಾಖಿ ಸಾಕ್ಷಿಯಾಗಿದೆ. ಮುಂದೆ, 1801ರ ಏಪ್ರಿಲ್ 12ರಂದು, ಬೈಸಾಖಿಯಂದೇ ರಣ್ ಜೀತ್ ಸಿಂಗ್ ಅವರನ್ನು ಸಿಖ್ ಸಾಮ್ರಾಜ್ಯದ ಮಹಾರಾಜನನ್ನಾಗಿ ಘೋಷಿಸಿದ ದಿನ ಕೂಡ. ಅಲ್ಲದೆ, ಬೈಸಾಖಿಯಂದೇ ಬ್ರಿಟಿಷ್ ನರಹಂತಕ, ರೆಜಿನಾಲ್ಡ್ ಡೈಯರ್, ತನ್ನ ಸೈನಿಕರಿಂದ ಹರತಾಳದಲ್ಲಿದ್ದ ಜನರ ಮೇಲೆ ಗುಂಡಿನ ಮಳೆಗರೆಸಿದ್ದು; ಅದೇ ‘ಜಲಿಯನ್ ವಾಲಾಬಾಗ್ ಸಾಮೂಹಿಕ ಕಗ್ಗೊಲೆ’ ಎಂದು ಪ್ರಖ್ಯಾತಿ ಪಡೆದದ್ದು.

ಪವಿತ್ರ ಸ್ನಾನ – ಗೋಲ್ಡನ್ ಟೆಂಪಲ್

ವೈಶಾಖ ಸಂಕ್ರಾಂತಿ ಎಂದೂ ಕರೆಯಲ್ಪಡುವ ಆ ದಿನಕ್ಕೆ ಭಾರತದ ಇತರ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಪವಿತ್ರ ನದಿಗಳಾದ ಗಂಗಾ, ಝೀಲಮ್ ಮತ್ತು ಕಾವೇರಿ ಮುಂತಾದ ನದಿಗಳಲ್ಲಿ ಸ್ನಾನವಾದ ನಂತರ ದೇವಸ್ಥಾನಗಳಿಗೆ ಭೇಟಿ ಕೊಡುವ ವಾಡಿಕೆ ಇದೆ.
ಪಂಜಾಬಿನಲ್ಲಿ ಖಾಸ್ಲಾ ಆರಂಭದ ದಿನದ ಆಚರಣೆಯಾಗಿ ಅನೇಕ ಸ್ಥಳಗಳಲ್ಲಿ ಜಾತ್ರೆಗಳು ಜರುಗುತ್ತವೆ. ಗುರು ಗೋವಿಂದ ಸಿಂಗರು ಒಂಭತ್ತು ತಿಂಗಳು ಇದ್ದು, ‘ಗುರು ಗ್ರಂಥ ಸಾಹಾಬ್’ ಅನ್ನು ಮರುಸಂಕಲನ ಮಾಡಿ ಮುಗಿಸಿದ ‘ತಾಲ್ವಂಡಿ ಸಾಬೋ’ ಎಂಬಲ್ಲಿ, ಖಾಸ್ಲಾ ಜನನ ಸ್ಥಳವಾದ ಆನಂದ್ ಪುರ್ ಸಾಹಿಬ್ ಮತ್ತು ಅಮೃತಸರದ ಗೋಲ್ಡನ್ ಟೆಂಪಲ್ ಗಳಲ್ಲಿ ವಿಶೇಷವಾದ ಆಚರಣೆಗಳು ಜರುಗುತ್ತವೆ. ಅಂದು ಖಡ್ಗ, ಕಠಾರಿ ಹಾಗೂ ದೊಣ್ಣೆಗಳಿಂದ ಸಮರಕಲೆ ಮುಂತಾದ ಅಭ್ಯಾಸಗಳು ಜರುಗುತ್ತವೆ.

ಸಮರ ಕಲೆ

ಲಂಗರ್ ಅಥವ ಸಮಾಜದ ಸಾಮೂಹಿಕ ಭೋಜನ ಎಂಬುದು ಸಿಖ್ ಧರ್ಮದ ಚಿತ್ತಾಕರ್ಷಕ ವೈಶಿಷ್ಟ್ಯ. ಗುರುದ್ವಾರಗಳಲ್ಲಿ ಇಂಥ ಲಂಗರ್ ಗಳು ದಿನಂಪ್ರತಿ ನಡೆದರೂ, ಗುರುಪೂರಬ್ ಸಂದರ್ಭಗಳಲ್ಲಿ ಅವು ವಿಶೇಷವಾಗುತ್ತವೆ. ಆದರೆ ಬೈಸಾಖಿಯಲ್ಲಿ ಅದು ಅತ್ಯಂತ ಮುಖ್ಯ ಹಾಗೂ ಎಲ್ಲರಿಗೂ ಪ್ರಿಯ ಮತ್ತು ಆಕರ್ಷಕವಾಗುತ್ತದೆ. ಸಿಖ್ ಧರ್ಮದಲ್ಲಿ ‘ಗುರು ಕಾ ಲಂಗರ್’ ಎಂದೇ ಗೊತ್ತಾದ ಈ ಭೋಜನವನ್ನು, ಗುರುದ್ವಾರಕ್ಕೆ ಸೇರಿದಂತೆ ಇರುವ ಸಾಮೂಹಿಕ ಪಾಕಶಾಲೆಯಲ್ಲಿ ತಯಾರಿಸಲಾಗುತ್ತದೆ. ಇದೊಂದು ಗುರುದ್ವಾರದಲ್ಲಿ ನಡೆವ ಉಚಿತ ಮತ್ತು ಸಸ್ಯಾಹಾರ. 13 ಮತ್ತು 14ನೇ ಶತಮಾನಗಳಲ್ಲಿ ಇದ್ದಂಥ ಜಾತಿಪದ್ಧತಿಯನ್ನು ತೊಡೆಯಲು, ಗುರು ನಾನಕ್ ದೇವ್ ಜೀ ಅವರು ಈ ರೀತಿಯ ಸಾಮೂಹಿಕ ಭೋಜನ ವ್ಯವಸ್ಥೆಯೆಂಬ ಲಂಗರ್ ಅನ್ನು ಆರಂಭಿಸಿದರು. ಹಾಗಾಗಿ ಈ ಲಂಗರ್ ಪಾಕಶಾಲೆ ಮತ್ತು ಭೋಜನ ಪ್ರತಿ ದಿನ ಎರಡು ಬಾರಿ ವರ್ಷವಿಡೀ ಯಾವ ಥರದ ಜಾತಿ, ಮತ, ಬಣ್ಣ, ವಯಸ್ಸು, ಲಿಂಗ ಹಾಗೂ ಸಾಮಾಜಿಕ ಸ್ಥಾನಮಾನ ಪರಿಗಣಿಸದೆ ಎಲ್ಲರಿಗೂ ತೆರೆದಿರುತ್ತದೆ. ಎಲ್ಲರೂ ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡುವ ರೂಢಿ. ಇದಕ್ಕಾಗಿ ಸಮಾಜದ ಹಣವಂತರು ತಮ್ಮ ಸಂಪಾದನೆಯಲ್ಲಿ ಶೇಕಡ ಹತ್ತರಷ್ಟನ್ನು ದಾನ ಮಾಡಬೇಕೆಂಬ ಕಟ್ಟಳೆ ಸಹ ಇದೆ. ಗುರು ನಾನಕರ ಪ್ರಕಾರ ಯಾರೂ ಸಹ ಹಸಿವಿನಿಂದ ಇರಬಾರದು ಎಂಬ ಸಂದೇಶ!

ಸಾಮೂಹಿಕ ಭೋಜನ

ಖಾಸ್ಲಾ ಎಂದರೆ ಪಂಜಾಬಿ ಭಾಷೆಯಲ್ಲಿ ಪರಿಶುದ್ಧ ಎಂದು. ಶುದ್ಧ, ಸ್ಪಷ್ಟ, ನಿರ್ಬಂಧರಹಿತ, ಮುಕ್ತ ಎಂದರ್ಥ. ಸಿಕ್ಕಿಸಂ ತಮ್ಮ ಧರ್ಮ ಎಂದು ಪರಿಗಣಿಸಿದ ಸಮಾಜದ ಎಲ್ಲರೂ ಅಲ್ಲದೆ, ದೀಕ್ಷೆ ಪಡೆದ ವಿಶೇಷ ಸಿಖ್ ಸಮೂಹವೂ ಕೂಡಿಕೊಂಡು ಖಾಸ್ಲಾ ಎಂಬ ಸಮುದಾಯವಾಗಿದೆ. ಸಿಖ್ ಐತಿಹ್ಯದಲ್ಲಿ ಖಾಸ್ಲಾ ಆರಂಭ ಆದದ್ದು ಒಂದು ವಿಶಿಷ್ಟ ಘಟನೆ.

ಪ್ರೀತಂ ಸಿಂಗ್ ಕುಟುಂಬ ಬೈಸಾಕಿಯಂದು ವಿಶೇಷ ಭೋಜನಕ್ಕೆ ಹಾಜರಾದ ಎಲ್ಲ ಅಥಿತಿಗಳನ್ನೂ ಸ್ವತಃ ಮಾತನಾಡಿಸಿ ಉಪಚರಿಸುತ್ತಿದ್ದರು. ಅವರ ಗ್ಯಾರೇಜ್ ರೀತಿಯ ದೊಡ್ಡ ಬಡಿಗಿ ಕಾರ್ಯಾಗಾರದಲ್ಲಿ, ಯಂತ್ರಗಳನ್ನು ಒಂದೆಡೆಗೆ ಸರಿಸಿ ಅಡುಗೆಗೆ ಜಾಗ ಮತ್ತು ಊಟದ ಟೇಬಲ್ಲುಗಳನ್ನು ಜೋಡಿಸಲೂ ಸಹ ಸ್ಥಳಾವಕಾಶ ಮಾಡುತ್ತಿದ್ದರು. ಅಷ್ಟಲ್ಲದೆ, ಅದರ ಹೊರಗೆ ಮನೆಯ ಸುತ್ತ ಇದ್ದ ವಿಶಾಲ ಕಾಂಪೌಂಡ್ ಒಳಗೂ ಗುಂಪಾಗಿ ನಿಂತು ಭೋಜನ ಸ್ವೀಕಾರ ನಡೆಯುತ್ತಿತ್ತು. ಕುಟುಂಬಕ್ಕೆ ಪರಿಚಯ ಇರಲಿ ಬಿಡಲಿ, ಹೆಂಗಸರ ಗುಂಪಿನತ್ತ ಸ್ತ್ರೀಯರು, ಗಂಡಸರ ಗುಂಪಿನತ್ತ ಪುರುಷರು ಹೀಗೆ ಆಗಾಗ ಹತ್ತಿರ ಹೋಗಿ ಉಪಚರಿಸುತ್ತಿದ್ದರು. ಅದು ಅವರ ಸಂಸ್ಕೃತಿ-ಸಂಸ್ಕಾರದ ದ್ಯೋತಕವಾಗಿತ್ತು. ಅಂಥವರಿಗೆ ಮಾತ್ರ ಅಲ್ಲದೆ, ಸುಮ್ಮಸುಮ್ಮನೆ ಯಾರಾದರೂ, ಅದೆಂಥ ಮಹತ್ವದ ಸಂದರ್ಭವೇ ಆದರೂ, ಇಡೀ ನಗರದಲ್ಲಿ ನೆಲೆಸಿದ ತಮ್ಮ ದೇಶದ ಬಂಧುಗಳಿಗೆಲ್ಲ ಊಟದ ಆತಿಥ್ಯ ಮಾಡುವುದು ಸುಲಭ ಸಾಧ್ಯವೇ!

ಬೈಸಾಕಿ ಹಬ್ಬದಂದು ಹಣತೆ ಹಚ್ಚುತ್ತಿರುವುದು

ಪ್ರತಿ ವರ್ಷ ತಪ್ಪದೆ ನಡೆಯುತ್ತಿದ್ದ ಈ ಬೈಸಾಕಿ ಲಂಗರ್ ದಿಢೀರನೆ ನಿಂತಿತು. ಕಾರಣ ಸೋಮಾಲಿಯಾದಲ್ಲಿ ಬಂಡಾಯ ಆರಂಭವಾಗಿ, ಸೈಯ್ಯದ್ ಬರ್ರೇ ಸರಕಾರ ಉರುಳಿ ಬಿದ್ದ ನಂತರ, ಮೊಗದಿಶು ಮತ್ತು ಸುತ್ತಮುತ್ತಲ ಪ್ರದೇಶ ಬಹುಬೇಗ ಭಯೋತ್ಪಾದನೆ ಕೃತ್ಯಗಳಿಗೆ ಒಳಗಾಗಿ, ಭಾರತ ಹಾಗೂ ಇತರ ದೇಶಗಳ ಪ್ರಜೆಗಳೆಲ್ಲ ಸೋಮಾಲಿಯ ಬಿಟ್ಟು ಹೊರಟರು. ಪ್ರೀತಂ ಸಿಂಗ್ ಕುಟುಂಬ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಅವರೆಲ್ಲ ಮುಂದೆ ಇಂಗ್ಲೆಂಡ್ ಪ್ರಜೆಗಳಾದರು. ಪ್ರೀತಂ ಅವರ ಮಗ, ಬಲ್ಬೀರ್ ಸಿಂಗ್ ಅವರ ಅತ್ತೆ ಬೆಂಗಳೂರಿನಲ್ಲಿ ನೆಲೆಸಿದ್ದಾರಂತೆ. ಹಾಗಾಗಿ ಬಲ್ಬೀರ್ ಬೆಂಗಳೂರಿನತ್ತ ಬಂದಾಗ, ಮುದ್ದಪ್ಪ ಆಂಟಿ ಅವರ ಮನೆಗೆ ಬಂದು ಮಾತನಾಡಿಸಿ ಹೋಗುತ್ತಾನಂತೆ.

ದಶಕಗಳ ನಂತರ ಈಗಲೂ ಕೂಡ ಪ್ರೀತಂ ಸಿಂಗ್ ಅವರ ಮನೆಯ ಊಟ, ಆತಿಥ್ಯ ಒಂದು ರೀತಿಯಲ್ಲಿ ಕಳೆದು ಹೋದ ಹಳೆಯ ಹಂಬಲದ (ನಾಸ್ಟಾಲಜಿಯ) ರೀತಿ ನೆನಪಿನಲ್ಲಿ ಉಳಿಯಬೇಕೆಂದರೆ ಅದು ಸಾಮಾನ್ಯವಲ್ಲ. ಅದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ ಅಂದರೂ ಹೆಚ್ಚಲ್ಲ, ಅಲ್ಲವೇ? ನನಗೇ ಇದನ್ನು ಅಕ್ಷರ ರೂಪಕ್ಕೆ ಇಳಿಸುವಾಗ ಅಷ್ಟೊಂದು ಆ ಕುಟುಂಬದವರ ಮುಖಗಳೆಲ್ಲ ಸ್ಮೃತಿಪಟಲದ ಮೇಲೆ ಸಿನಿಮೀಯವಾಗಿ ಬಂದು ಹೋಗುತ್ತಿರುವಾಗ, ಅವರಲ್ಲಿ ಆ ಆತಿಥ್ಯ ದಶಕಗಟ್ಟಲೆ ಸ್ವೀಕರಿಸಿದ ಅಸಂಖ್ಯ ಜನರ ಮನದಲ್ಲಿ ಅವರೆಲ್ಲ ಹೇಗೆ ಬೀಡುಬಿಟ್ಟಿರಬೇಡ, ಅಲ್ಲವೇ? ಅದು ಅನ್ನದಾನಕ್ಕಿರುವ ಅಪಾರ ಶಕ್ತಿ ಮತ್ತು ವರ್ಚಸ್ಸು! ಅಂತೂ ಬೈಸಾಕಿ ಲಂಗರ್ ಈಗ ನಮ್ಮ ಬದುಕಿನ ಕನಸಿನ ಗಂಟಿನ ಊಟ!

ಮುಂದುವರಿಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459

Related post

Leave a Reply

Your email address will not be published. Required fields are marked *