ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೨

–ಅಬ್ದೋ ತಂದೆಯ ಮನೆ–

ನಾವು ಮೊಗದಿಶುವಿನಲ್ಲಿ ಇದ್ದ ಹನ್ನೆರಡು ವರ್ಷದಲ್ಲಿ ಒಟ್ಟು ಐದು ವಿವಿಧ ಬಾಡಿಗೆ ಮನೆಗಳಲ್ಲಿ ಭಿನ್ನ ಭಿನ್ನ ಸಮಯಗಳಲ್ಲಿ ವಾಸ ಇದ್ದೆವು. ಒಂದೊಂದು ಮನೆಯನ್ನೂ ಒಂದೊಂದು ಕಾರಣಕ್ಕೆ ಬಿಡಬೇಕಾಗಿತ್ತು. ಮೊದಲನೆಯ ‘ಹಾವೇಸ್’ ಮನೆಯನ್ನು ಸರಣಿ ಕಳ್ಳತನಗಳಿಂದ, ಎರಡನೆಯ ಮಾರ್ಕೆಟ್ ಸಾಮೀಪ್ಯದ ಹಳೆಯ ಸಂಕೀರ್ಣದ ಮನೆಯನ್ನು ಹಗಲು ಮತ್ತು ರಾತ್ರಿಯ ಗಲಾಟೆಯಿಂದ ಹೀಗೆ.

ನಾವು ಇದ್ದ ಐದನೆಯ ಮತ್ತು ನಮ್ಮ ಮೊಗದಿಶು ವಾಸದ ಕೊನೆಯ ಮನೆ ಕೂಡ, ಹಾವೇಸ್ ಮನೆಯ ರೀತಿ ವಿಶಾಲವಾದ ಹಾಲ್ ಅಲ್ಲದೆ ಎರಡು ಮಲಗುವ ಕೊಠಡಿಗಳ ಮತ್ತು ಅಡಿಗೆ ಮನೆ ಉಳ್ಳದ್ದಾಗಿತ್ತು. ಎಲ್ಲ ಕಡೆ ದೊಡ್ಡ ದೊಡ್ಡ ಕಿಟಕಿಗಳಿದ್ದುದರಿಂದ ಗಾಳಿ ಬೆಳಕಿನ ಜಿಪುಣತನ ಇರಲಿಲ್ಲ. ಆದರೆ, ನಾವಿದ್ದದ್ದು ಮಹಡಿ ಮೇಲೆ. ಹಾಗಾಗಿ, ಯಾರಾದರೂ ಬೆಲ್ ಗುಂಡಿ ಒತ್ತಿದಾಗಲೆಲ್ಲ ಅಷ್ಟೂ ಮೆಟ್ಟಿಲ ಕೆಳಗೆ ಇಳಿದು ಬಾಗಿಲು ತೆಗೆವ ಬದಲು, ಅಷ್ಟುದ್ದದ ದಾರಕ್ಕೆ ಒಂದು ಬೀಗದ ಕೈ ಕಟ್ಟಿ, ಕಿಟಕಿಯಿಂದ ಯಾರೆಂದು ನೋಡಿ ದಾರ ಎಸೆದರಾಯಿತು; ಬಂದವರೇ ಬಾಗಿಲ ಬೀಗ ತೆಗೆದು ಒಳಗೆ ಬರಬಹುದಾಗಿತ್ತು. ಬಾಗಿಲ ಪಕ್ಕದ ನೇರಕ್ಕೇ ಕಿಟಕಿ ಇದ್ದುದರಿಂದ ಇಂಥ ಕಲ್ಪನೆ ಸಾಧ್ಯ ಆಗಿತ್ತು.

ಮದುವೆಯಲ್ಲಿ ನೆರೆಯ ಹೆಂಗಸರ ಸಾಂಸ್ಕೃತಿಕ ಸಂಭ್ರಮ

ಅದೇ ಮನೆಯಲ್ಲಿದ್ದಾಗಲೇ ಶೇಕ್ ಅಬ್ಬಾ ಮದುವೆ ಮಾಡಿಸಲು ಆಗಮಿಸಿ ನನಗೆ ಅಚ್ಚರಿ ಉಂಟುಮಾಡಿದ್ದು! ಅಲ್ಲಿದ್ದವರೆಲ್ಲ ಅರಬ್ ಸಂತತಿಯ ಅಥವ ಅರಬ್ ಮಿಶ್ರಣದ ಸೋಮಾಲಿಗಳು. ಎಲ್ಲರೂ ದಾಯಾದಿಗಳೇ ಆಗಿದ್ದು, ಮನೆಯ ಒಡೆಯನ ಸಂಬಂಧಿಗಳು. ಆದರೆ, ಒಮ್ಮೆ ಪರಿಚಯ ಆಯಿತೆಂದರೆ, ಅವರ ಎಲ್ಲ ಕಾರ್ಯಕ್ರಮಗಳಿಗೂ ಆದರದ ಆಹ್ವಾನ ಇದ್ದೇ ಇರುತ್ತಿತ್ತು. ವಾಸ್ತವವಾಗಿ ಮದುವೆ ಸಮಯದಲ್ಲಿ ಎಲ್ಲಾ ಹೆಂಗಸರ ಸಾಮೂಹಿಕ ಹಾಡು ಮುಂತಾದ ಕಾರ್ಯಕ್ರಮಗಳಲ್ಲಿ ನನ್ನ ಮಡದಿ ಮತ್ತು ಮುದ್ದಪ್ಪ (ನಿರ್ಮಲ ಮುದ್ದಪ್ಪ) ಆಂಟಿ ಸಹ ಪಾಲ್ಗೊಳ್ಳುತ್ತಿದ್ದರು. ಅವರ ಮನೆಯಲ್ಲಿ ಹಲ್ವ ಮುಂತಾಗಿ ಏನೇ ಮಾಡಿದರೆ ನಮ್ಮ ಮನೆಗೂ ಗ್ಯಾರಂಟಿ ಬರುತ್ತಿತ್ತು.

ಹಾಗೆಯೇ ಒಂದು ಹಬ್ಬದ ಸಮಯ. ಹಬ್ಬ ಆದ್ದರಿಂದ ನನಗೂ ರಜಾದಿನ. ಹಿಂದಿನ ದಿನವೇ ಹಬ್ಬಕ್ಕಾಗಿ ಒಂದು ಕುರಿಯನ್ನು ತಂದು ಕಟ್ಟಿದ್ದರು. ಆ ಸಂಜೆ ಹೊರಗೆ ಹೋಗುವಾಗ ಅದು ನಾಳೆಯ ಹಬ್ಬದ ಬಕ್ರೀದ್ ಬಲಿಗಾಗಿ ಎಂದು ತಿಳಿಯಿತು. ಬಹುಶಃ ಮಾರನೆ ದಿನ ಅದನ್ನು ಬೇರೆ ಕಡೆಗೆ ಸಾಗಿಸಿ ಬಲಿ ಕೊಡಬಹುದೇನೋ ಅಂದುಕೊಂಡಿದ್ದೆ. ಆದರೆ, ಮಾರನೆ ದಿನ ನಾವು ಎದ್ದು ಕಿಟಕಿಯ ಆಚೆ ಇಣುಕುವ ಹೊತ್ತಿಗೆ, ಮಾಂಸದ ಪಾಲನ್ನು ಆಯಾ ಮನೆಗಳಿಗೆ ಕಳಿಸುವ ಮತ್ತು ಚರ್ಮದ ವಿಲೇವಾರಿಯ ಕೆಲಸ ನಡೆಯುತ್ತಿತ್ತು. ನೆಲದ ಮೇಲೆ ರಕ್ತದ ಹರಡಿದ ಕಲೆ ಎದ್ದು ತೋರುತ್ತಿತ್ತು. ಸದ್ಯ ಅದನ್ನು ಸಾಯಿಸುವ ಸಮಯದಲ್ಲಿ ನಾವಿರದಿದ್ದುದು ಅಥವ ಅದರ ಕಿರುಚು ಕೇಳದ, ಒದ್ದಾಟ ನೋಡದ ನಮಗೆ ಒಳ್ಳೆಯದೇ ಅನಿಸಿತ್ತು. ಸ್ವಲ್ಪ ಸಮಯದ ನಂತರ ನಮ್ಮ ಮನೆಯ ಬೆಲ್ಲಾಯಿತು. ಆ ತಳಮನೆಗಳ ‘ಆಮಿನ’ ಎಂಬ ಮಹಿಳೆ ಮಹಡಿ ಏರಿ ಬಂದು, ಚೆನ್ನಾದ ಪ್ಲಾಸ್ಟಿಕ್ ಕಾಗದದಲ್ಲಿ ಪ್ಯಾಕ್ ಮಾಡಿದ್ದ ಒಂದು ಪೊಟ್ಟಣ ತಂದು ಮುದ್ದಪ್ಪ ಆಂಟಿಗೆ ಕೊಟ್ಟಳು. ಆಂಟಿ ತಮಾಷೆಗಾಗಿ “ಕನ್ ಮಹಾವಾಯ್? ಗೇಲ್ ಕಾ ಹಿಲೀಬ್ ಮಿಯಾ?” (ಇದೇನು? ಒಂಟೆಯ ಮಾಂಸ ಅಲ್ಲವೇ?) ಎಂದು ತಮಾಷೆಗಾಗಿ ಕೇಳಿದರು. ಆಮಿನ “ನಿಮಗೆಂದಾದರೂ ಒಂಟೆ ಮಾಂಸ ಕೊಟ್ಟಿದ್ದೇವಾ ಹೇಳಿ?” ಎಂದು ನಕ್ಕು, “ಇಲ್ಲ, ಬೆಳಿಗ್ಗೆ ತಾನೆ ಬಕ್ರೀದ್ ಬಲಿ ಕೊಟ್ಟ ಕುರಿ ಮಾಂಸ” ಎಂದಳು. ಆಂಟಿ ಅದಕ್ಕೆ, “ಮೆಹದ್ಸನೀತ್” (ಥ್ಯಾಂಕ್ಸ್) ಹೇಳಿದರು. ಹೀಗೆ ಯಾವೊಂದು ಹಬ್ಬ ಮುಂತಾಗಿ ಏನೇ ವಿಶೇಷದ ಅಡುಗೆ ಮಾಡಿದರೂ ಸಹ, ಸ್ವಲ್ಪ ನಮ್ಮ ಪಾಲಾಗುತ್ತಿತ್ತು. ನೆರೆಹೊರೆ ಎಂದರೆ ಹೀಗೆ ಇರಬೇಕು ಅಲ್ಲವೇ?

ಮದುವೆ ಸಂದರ್ಭದ ಸಮೂಹ ಗೀತೆ – ನನ್ನ ಮಡದಿ ಮತ್ತು ಮುದ್ದಪ್ಪ ಆಂಟಿ ಕೂರ್ಗಿ ಸೀರೆಯುಟ್ಟು.

ನಮ್ಮ ಮನೆಯಿಂದ ಅನತಿ ದೂರದಲ್ಲಿ, ಮೊಗದಿಶುವಿನ ‘ಸೌದಿ ಏರ್ ಲೈನ್ಸ್’ ಕಛೇರಿ ಇತ್ತು. ಅಲ್ಲಿ ನನ್ನ ಇಬ್ಬರು ಸೋಮಾಲಿ ಮಿತ್ರರು ಉದ್ಯೋಗ ಮಾಡುತ್ತಿದ್ದರು. ಒಬ್ಬ ‘ಅಬ್ದೋ’ ಎಂಬ ಹೆಸರಿನವನು, ಮತ್ತೊಬ್ಬನ ಹೆಸರು ‘ಅಬ್ದುಲ್ಲಾಹಿ’. ಪೂರ್ಣ ಹೆಸರುಗಳು ಇಲ್ಲಿ ಮುಖ್ಯ ಅಲ್ಲ.

ಅಬ್ದೋನನ್ನು ನಾನು ಪ್ರಥಮ ಬಾರಿಗೆ ಸಂಧಿಸಿದ್ದು ನನ್ನ ಕ್ಲಿನಿಕ್ಕಿನಲ್ಲೆ. ನಂತರ ಆಗಾಗ ತನ್ನ ಹೆಂಡತಿ, ಇಬ್ಬರು (ಸದ್ಯಕ್ಕೆ) ಮಕ್ಕಳ, ತಂದೆತಾಯಿ ಮುಂತಾದವರ ಆರೋಗ್ಯ ಹದಗೆಟ್ಟಾಗಲೆಲ್ಲ ಕ್ಲಿನಿಕ್ಕಿಗೆ ಅಥವ, ಚೆನ್ನಾಗಿ ಪರಿಚಯ ಆದಮೇಲೆ ಮನೆಗೇ ಬರುವ ವಾಡಿಕೆ ಇತ್ತು. ಆತ ಸೌದಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಆಗಾಗ ಉಚಿತ ಟಿಕೆಟ್ಟಿನಲ್ಲಿ ಸೌದಿಗೆ ಹೋಗಿ ಬರುತ್ತಿದ್ದ. ಪ್ರತಿ ಬಾರಿಯೂ ಏನು ಬೇಕು ಎಂದು ಕೇಳಿ, ಬೇಡ ಎಂದರೂ ಯಾವುದಾದರು ಒಂದು ವಸ್ತುವನ್ನು, ನೆನಪಿಗಾಗಿ ಎಂದು ಹೇಳಿ ತಂದುಕೊಡುತ್ತಿದ್ದ. ದುಡ್ಡು ಎಂದೂ ಮುಟ್ಟಲಿಲ್ಲ. ಆದ್ದರಿಂದ ನನಗೆ ಮುಜುಗರ; ಹಾಗಂತ ಅವನು ಬಿಡಬೇಕಲ್ಲ. ನಾನು ನನ್ನ ಅಸಾಹಿ ಪೆಂಟಾಕ್ಸ್ ಕ್ಯಾಮರಾದಲ್ಲಿ ಕ್ಲಿಕ್ ಮಾಡಿದ್ದ ಫೋಟೋಗಳನ್ನೆಲ್ಲ, ಅವನು ಸೌದಿಯ ಜಿದ್ದಾ ನಗರಕ್ಕೆ ಹೋದಾಗಲೆಲ್ಲ ಪ್ರಿಂಟ್ ಹಾಕಿಸಿ ತಂದು ಕೊಡುವ ರೂಢಿಯಿತ್ತು. ಅಲ್ಲಿಯ ಪ್ರಿಂಟ್ ಗುಣ ಬಹಳ ಸುಂದರ ಮತ್ತು ಮೊಗದಿಶು ನಗರದಲ್ಲಿ ಅದು ಅಸಾಧ್ಯವಿತ್ತು.

ಅಬ್ದೋ (ನನ್ನ ಮಗಳ ಹಿಂದಿರುವ ವ್ಯಕ್ತಿ), ಆತನ ತಮ್ಮ ಮತ್ತು ನನ್ನ ಮಕ್ಕಳು

ನಾನೂ ಸಹ ಕೆಲವು ಬಾರಿ ಅಬ್ದೋ ಮನೆಗೆ ಹೋಗಿ ಕಾಯಿಲೆ ಬಿದ್ದವರಿಗೆ ಔಷಧ ಮಾಡಿ ಬರುತ್ತಿದ್ದೆ. ಆದರೆ, ನಾನು ಎಷ್ಟೇ ಬೇಡ ಎಂದರೂ ನನಗೆ ಫೀಸು ಕೊಡದೆ ಬಿಡದ ಗುಣ
(ಎಲ್ಲ ಸೋಮಾಲಿಗಳ ರೀತಿ). ಹೀಗೆ ಹೋಗುವಾಗ, ಯಾರಿಗೆ ಗುಣ ಇಲ್ಲ ಎಂದು ಕೇಳುತ್ತಿದ್ದೆ – ದಾರಿ ಕಳೆವ ಮಾತುಗಳಾಗಿ ಇಂತಹ ಬೇರೆ ಬೇರೆ ಪ್ರಶ್ನೆ ಬೇಕಲ್ಲವೇ. ಒಮ್ಮೆ ಹೀಗೆ ಕೇಳಿದಾಗ, “ಈಗ ನಮ್ಮ ಮನೆಗೆ ಹೋಗುತ್ತಿಲ್ಲ; ನನ್ನ ತಂದೆಯ ಮನೆಗೆ” ಎಂದ. ಈ ರೀತಿಯ ವಿಚಾರ, ಭಾರತದ ಸಾಮಾಜಿಕ ಚೌಕಟ್ಟಿನಲ್ಲಿ ಬದುಕಿದಂಥ ನಮಗೆ ವಿಚಿತ್ರ ಅನ್ನಿಸುತ್ತದೆ ಅಲ್ಲವೇ? ಅದೇ ಮೊದಲಾದ್ದರಿಂದ ನನಗೂ ಹಾಗೆ ಅನ್ನಿಸಿದ್ದು ಹೌದು. ಆದರೆ, ವಾಸ್ತವವಾಗಿ ಸಂಬಂಧಗಳು ಗಟ್ಟಿಯಾಗಿರಲು, ಆ ರೀತಿ ಬೇರೆ ಬೇರೆ ಇದ್ದರೇ ಉತ್ತಮವೇನೋ ಎಂದು ಎಷ್ಟೋ ಬಾರಿ, ಹೊಸ ತಲೆಮಾರಿನ ಅನೇಕರಿಗಾದರೂ ಅನ್ನಿಸುವುದೂ ಸಹಜ. “ಅಂದರೆ”, ಎಂದೆ. “ನನ್ನ ತಂದೆ ಬೇರೆ ಇದ್ದಾರೆ. ಅವರ ಇನ್ನಿಬ್ಬರು ಹೆಂಡತಿಯರ ಸಂಗಡ, ನನ್ನ ಚಿಕ್ಕಮ್ಮಂದಿರ ಸಂಗಡ” ಎಂದ. “ನಿನ್ನ ತಾಯಿ?” ಎಂದೆ. “ಅವರೂ ತಂದೆಯ ಜೊತೆಯಲ್ಲಿಯೇ ಅಲ್ಲೇ ಇದ್ದಾರೆ” ಎಂದ; “ಮದುವೆಯ ನಂತರ, ಹೊಸ ದಂಪತಿಗಳು ತಮ್ಮದೇ ಆದ ಮನೆ ಮಾಡಿ ವಾಸ ಮಾಡುವುದೂ ಸಹ ನಮ್ಮಲ್ಲಿ ಪದ್ಧತಿ” ಎಂದೂ ಸೇರಿಸಿದ. “ಆ ಒಂದು ವಿಚಾರದಲ್ಲಿ ಮಾತ್ರ ನಾವು ಸ್ವಾತಂತ್ರರು!” ಎನ್ನುತ್ತಾ ಮಾರ್ಮಿಕ ನೋಟದಲ್ಲಿ ನನ್ನ ಕಡೆ ನೋಡಿ ನಕ್ಕ. “ನಿನ್ನ ತಂದೆ, ನಿನ್ನ ತಾಯಿ ಮತ್ತು ಪ್ರತಿಯೊಬ್ಬ ಚಿಕ್ಕಮ್ಮನಿಗೂ ಬೇರೆ ಬೇರೆ ಮನೆ ಮಾಡಬೇಕಾದುದೂ ಇಲ್ಲಿಯ ಪದ್ಧತಿ ಅಲ್ಲವೇ?” ಎಂದೆ. “ಹೌದು, ಆದರೆ ಅದು ಐಶ್ವರ್ಯವಂತರಿಗೆ” ಎಂದ. ಈ ವಿಷಯ ಇಷ್ಟಕ್ಕೇ ಸಾಕೆನಿಸಿ, “ಹಾಗಾದರೆ ಈಗ ಯಾರಿಗೆ ಕಾಯಿಲೆ?” ಎಂದೆ. ನನ್ನ ತಂದೆಯ ಮೂರನೇ ಹಂಡತಿಯ ಕೊನೇ ಮಗನಿಗೆ, ನನ್ನ ಕೊನೇ ತಮ್ಮನಿಗೆ” ಎಂದ. ನಾನು ಮತ್ತೇನೂ ಮಾತನಾಡಲಿಲ್ಲ. ಮನೆ ಬಂತು. ಅದು ನಮ್ಮ ತೊಟ್ಟಿ ಮನೆಯ ಥರ ವಿಶಾಲವಾಗಿತ್ತು. ಸಾಕಷ್ಟು ಕೊಠಡಿಗಳಿದ್ದ ಹಾಗೆ ಕಾಣಿಸಿತು. ಹೋದ ಕೂಡಲೆ, ಒಂದಿಬ್ಬರು ಮಕ್ಕಳು, “ವಲಾಲೋ ವಲಾಲೋ” (ವಲಾಲ್ ಅಂದರೆ, ಸಹೋದರ) ಎನ್ನುತ್ತಾ ಬಂದು ಅಬ್ದೋನನ್ನು ತಬ್ಬಿದವು. ದೊಡ್ಡ ಮಕ್ಕಳು ತಮ್ಮ ತಮ್ಮ ಆಟ, ಪಾಠ, ಕೆಲಸಗಳಲ್ಲಿ ನಿರತರಾಗಿದ್ದರು. ಹೆಂಗಸರು ಮತ್ತು ವಯಸ್ಸಿನ ಹೆಣ್ಣು ಮಕ್ಕಳಿಗೆ ದೊಡ್ಡ ಚಟುವಟಿಕೆಗಳು, ಹೀಗೆ. ಹೊಸಬರು ಮನೆಗೆ ಬಂದಾಗ, ನಮ್ಮಲ್ಲಿಯ ಪದ್ಧತಿಯ ಹಾಗೆ, ಹೆಂಗಸರು ಮನೆಯ ಒಳಕ್ಕೆ ಹೋಗುವ ರೂಢಿ ಇಲ್ಲಿಲ್ಲ.
ಒಂದು ಮೂಲೆಯ ಮಂಚದ ಮೇಲೆ ಒಬ್ಬ ವಯೋವೃದ್ಧರು, ಬಹುಶಃ ಅಬ್ದೋ ತಂದೆ, ಮಲಗಿದ್ದರು. ನಾನು ಹೋದ ಕೆಲಸ ಮುಗಿಸಿ ಕಾರು ಹತ್ತುವಾಗ, ಇನ್ನೊಂದು ಸೋಮಾಲಿ ಸಂಪ್ರದಾಯದ ಪರಿಚಯ ಆದಂತಾಯಿತು ಅಂದುಕೊಂಡೆ.

ಸೋಮಾಲಿಗಳಿಗೆ ಕುಟುಂಬ ಎಂಬುದು ಬಹಳ ಆಪ್ತವಾದ ವಿಷಯ. ಪರಸ್ಪರ ನಂಬಿಕೆ, ಅವಲಂಬನೆ ಮತ್ತು ಸಹಕಾರಗಳ ಚೌಕಟ್ಟಿನಲ್ಲಿ ಕುಟುಂಬ ಕೆಲಸ ಮಾಡುತ್ತದೆ. ಕುಟುಂಬವು ಎಲ್ಲ ದಾಯಾದಿ ಬಾಂಧವರ ಒಗ್ಗಟ್ಟು, ಸ್ಥಿರತೆಯ ದ್ಯೋತಕ. ಆಯಾ ವಿಶಿಷ್ಟ ವಂಶಗಳ ಪಂಗಡ ಮತ್ತು ಉಪಪಂಗಡಗಳೆಲ್ಲ ಒಟ್ಟು ಸೇರಿ ಕುಟುಂಬದ ಬಂಧುತ್ವವಾಗುತ್ತದೆ. ಅಲ್ಲದೆ, ಪ್ರತಿ ಕುಟುಂಬವೂ ಆಯಾ ಸಮುದಾಯದ ಸಾಂಘಿಕ ಜವಾಬ್ದಾರಿಗಳ ಘಟಕವಾಗುತ್ತದೆ. ಉದಾಹರಣೆಗೆ ಒಂದು ಮಗುವಿನ ಪಾಲನೆ ಹಾಗೂ ಬೆಳವಣಿಗೆಯು ಆಯಾ ಕುಟುಂಬದ ತಂದೆ ತಾಯಿಯ ಹೊಣೆ ಮಾತ್ರ ಅಲ್ಲದೆ, ಇಡೀ ಸಮುದಾಯದ ಜವಾಬ್ದಾರಿಯಾಗುತ್ತದೆ. ಹಾಗಾಗಿ, ಮಗುವಿನ ಶಿಸ್ತು ನಿಯಂತ್ರಣ ಕೂಡ, ಕೇವಲ ಆ ಕುಟುಂಬದ ವ್ಯಕ್ತಿಗಳಿಗೇ ಅಲ್ಲದೆ, ಆ ಸಮುದಾಯದ ಪ್ರತಿಯೊಬ್ಬ ಮನುಷ್ಯನದ್ದೂ ಸಹ ಎಂಬುದು ಸೋಮಾಲಿಗಳಿಗೆ ಒಪ್ಪಿತವಾದ ನಂಬಿಕೆ! ಆದ್ದರಿಂದ ಆಯಾ ಸಮುದಾಯದ ಎಲ್ಲ ಕುಟುಂಬಗಳೂ ತಮ್ಮ ತಮ್ಮ ಗಳಿಕೆಯನ್ನು ಒಟ್ಟುಗೂಡಿಸಿ ಬದುಕುವುದೂ ಸಹ ರೂಢಿ. ಹಣವಂತರು ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೋರಿಸುವುದೂ ಸಾಮಾನ್ಯ. ಹಾಗಾಗಿ, ಹೊರದೇಶದಲ್ಲಿ ಕೆಲಸ ಮಾಡುವ ಸೋಮಾಲಿಗಳು ಈ ರೀತಿಯ ಸಮುದಾಯದ ಹಿತಕ್ಕಾಗಿ ಹಣ ಕಳಿಸುವುದೂ ಉಂಟು! ಇಷ್ಟೇ ಅಲ್ಲದೆ, ಸೋಮಾಲಿ ಜನರಲ್ಲಿ ಇನ್ನೊಂದು ರೀತಿಯ, ಹೃದಯ ತಟ್ಟುವ ನಂಬಿಕೆ ಅಥವ ಪದ್ಧತಿ ಇದೆ. ಸಮುದಾಯದವರೇ ಅಲ್ಲದೆ, ಗೊತ್ತಿರುವ ಯಾರ ಮರಣವಾದರೂ ಸಹ, ಸಂಸ್ಕಾರ ಕಾರ್ಯ ಮುಂತಾಗಿ ಬೇಕಾಗುವ ಎಲ್ಲ ಖರ್ಚು ವೆಚ್ಚದ ವ್ಯವಸ್ಥೆಯನ್ನೂ ಎಲ್ಲ ಕೂಡಿಸಿ ಕೊಡುತ್ತಾರೆ; ಸತ್ತವರ ಮನೆಗೆ ಹಣಕಾಸಿನ ಹೊರೆ ಆಗಬಾರದೆಂದು ಒಟ್ಟಿನ ಆಶಯ. ಮದುವಗಳಲ್ಲೂ ಹಾಗೆ ಸಹಾಯ ಹಸ್ತ ನೀಡುತ್ತಾರೆ!
ಸೋಮಾಲಿಯಾದ ಸಮಾಜಗಳಲ್ಲಿ, ದೊಡ್ಡವರಿಗೆ ಬಹಳ ಮರ್ಯಾದೆ ನೀಡುವ ಪದ್ಧತಿ ಇದೆ. ಮಕ್ಕಳು ಹಿರಿಯರೊಡನೆ ಮಾತಿಗೆ ಮಾತು ಕೊಡುವುದು ಅತ್ಯಂತ ಕೆಟ್ಟ ವಿಚಾರ. ಅಲ್ಲದೆ, ವಯೋವೃದ್ಧರನ್ನು ಸಾಕುವ ಜವಾಬ್ದಾರಿ ಸಹ ಮಕ್ಕಳು ಮತ್ತು ಮೊಮ್ಮಕ್ಕಳ ಆದ್ಯ ಕರ್ತವ್ಯ! ಎಂಥ ಅದ್ಭುತ ಅಲ್ಲವೇ?

ನಮ್ಮ ನೆರೆಯ ಹೆಣ್ಣು ಮಕ್ಕಳು ಭಾರತೀಯ ಉಡುಗೆಯಲ್ಲಿ

ಸೋಮಾಲಿ ಜನಸಂಖ್ಯೆಯಲ್ಲಿ ಸುಮಾರು ಐದರಲ್ಲಿ ಒಂದು ಭಾಗದಷ್ಟು ಜನ ಬಹುಪತ್ನಿತ್ವ ಪಾಲನೆಯಲ್ಲಿ ಬದುಕುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ಪ್ರತಿ ಹೆಂಡತಿಗೂ ಬೇರೆ ಬೇರೆ ಮನೆ ಮಾಡಿಕೊಡುವುದು ಪದ್ಧತಿ – ಅಬ್ದೋ ತಂದೆಯವರ ಹಾಗೆ ಹಣದ ತೊಂದರೆ ಇದ್ದವರನ್ನು ಬಿಟ್ಟು. ಒಂದು ಅಂದಾಜಿನ ಪ್ರಕಾರ ಒಬ್ಬ ಸೋಮಾಲಿ ಮಹಿಳೆಯು ತನ್ನ ಜೀವನದಲ್ಲಿ ಸರಾಸರಿ ಆರು ಮಕ್ಕಳಿಗೆ ಜನ್ಮ ನೀಡುವಳಂತೆ! ನಗರದಲ್ಲಿ ವಾಸಿಸುವ ಕೆಲವು ಗಂಡು ಮಕ್ಕಳನ್ನು ಬಿಟ್ಟು, ಮದುವೆಗೆ ಮುಂಚೆ ತಂದೆಯ ಮನೆಯಿಂದ ಹೊರಹೋಗಿ ಬೇರೆ ಮನೆಗಳಲ್ಲಿ ವಾಸ ಇರುವುದು ಈ ಜನಾಂಗದಲ್ಲಿ ಅತಿ ವಿರಳ. ಮದುವೆಯ ನಂತರ ಅನೇಕರು, ಅದರಲ್ಲೂ ಐಶ್ವರ್ಯವಂತರ ಮಕ್ಕಳು ಖಂಡಿತ ಬೇರೆ ಮನೆ ಮಾಡಿ ವಾಸಿಸುವುದು ಸಾಮಾನ್ಯ. ಇಲ್ಲಿ, ಗಂಡಸರಿಗೆ ಸಾಂಪ್ರದಾಯಿಕವಾಗಿ, ಎಲ್ಲ ರೀತಿಯಲ್ಲಿ ತೀರ್ಮಾನಿಸುವ ಅಧಿಕಾರವಿದೆ. ಅಲ್ಲದೆ, ಹಣಕಾಸಿನ ವ್ಯವಸ್ಥೆಯ ಹಾಗೂ ಕುಟುಂಬದ ರಕ್ಷಣೆಯ ಹೊಣೆ ಗಂಡಸರದ್ದು. ಮಕ್ಕಳ ಬೆಳವಣಿಗೆ, ದವಸ ಧಾನ್ಯ ತರುವ ಮತ್ತು ಅಡಿಗೆ ಮಾಡುವ ಮತ್ತು ಮನೆಯ ಕೆಲಸ ಕಾರ್ಯಗಳೆಲ್ಲ ಹೆಂಗಸರ ಜವಾಬ್ದಾರಿ. ಸೋಮಾಲಿ ಜನರಲ್ಲಿ, “ಗಂಡಸು ಕುಟುಂಬದ ತಲೆಯಾದರೆ, ಅದನ್ನು ಅತ್ತಿತ್ತ ತಿರುಗಿಸಿ ಸಹಕರಿಸುವ ಕುತ್ತಿಗೆ ಹೆಂಗಸು” ಎಂಬ ನಾಣ್ಣುಡಿ ಇದೆ. ಹಾಗಾದರೂ ಸಹ, ಕೆಲವು ಕ್ಷೇತ್ರದ ಚಟುವಟಿಕೆಗಲ್ಲಿ ಹೆಂಗಸರ ಪಾತ್ರಕ್ಕೆ ಮಿತಿಯಿದೆ. ಅದು ಈ ಸಮಾಜದ ಮಾದರಿ. ಉದಾಹರಣೆಗೆ, ಲೈಂಗಕ ವಿಚಾರದಲ್ಲಿ ಮರ್ಯಾದೆಯ ಗೆರೆ ದಾಟದಿರುವುದು ಮುಖ್ಯ. ಮದುವೆ ವಿಷಯದಲ್ಲಿ, ಒಂದು ಹೆಣ್ಣಿನ ಕನ್ಯತ್ವ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೋ, ಅವಳ ಮಹಿಳಾ ಜನನಾಂಗ ಛೇದನವೂ ಸಹ ಅಷ್ಟೇ ಅಪೇಕ್ಷಣೀಯ ಆಗುತ್ತದೆ!

ಇದುವರೆಗೂ ವಿವರಿಸಿದ ಸೋಮಾಲಿಯಾದ ಸಮಾಜಿಕ ವ್ಯವಸ್ಥೆಗೆ ಅಬ್ದೋ ನಿಶ್ಚಲವಾಗಿ ಹೊಂದಿಕೊಳ್ಳುವ ವ್ಯಕ್ತಿ – ಎಲ್ಲ ಕೋನಗಳಲ್ಲೂ. ಹಾಗಾದರೆ ಈ ಅಬ್ದುಲ್ಲಾಹಿ?
ಒಂದೇ ಕಛೇರಿಯ ಕೆಲಸವಾದರೂ ಅಬ್ದೋ ಮತ್ತು ಅಬ್ದುಲ್ಲಾಹಿ ನಡುವೆ ಅಗಾಧ ಅಂತರವಿತ್ತು. ಅಬ್ದೋ ತನ್ನ ಕೆಲಸವನ್ನು ಎಷ್ಟು ಆಸ್ಥೆಯಿಂದ ಕುಳಿತು ಮಾಡುತ್ತಿದ್ದನೋ, ಅಬ್ದುಲ್ಲಾಹಿ ಅದಕ್ಕೆ ತದ್ವಿರುದ್ಧ – ಎಷ್ಟೋ ಬಾರಿ ಘಂಟೆಗಟ್ಟಲೆ ಕಛೇರಿಯಲ್ಲೇ ಇರುತ್ತಿರಲಿಲ್ಲ. ಹಾಗಾದರೆ ಅಬ್ದುಲ್ಲಾಹಿ ಎಂಬ ಒಬ್ಬ ವ್ಯಕ್ತಿಯನ್ನು ಒಂದು ವಿಮಾನಯಾನ ಸಂಸ್ಥೆ ಏತಕ್ಕೆ ನೇಮಿಸಿಕೊಂಡಿತ್ತು ಅನ್ನುವುದೇ ಆಶ್ಚರ್ಯ. ಮತ್ತು, ಅಬ್ದೋ ಒಬ್ಬ ಕುಟುಂಬಿ ಅಷ್ಟೇ ಅಲ್ಲದೆ, ಒಳ್ಳೆಯ ಗೃಹಸ್ಥ ಕೂಡ ಆಗಿದ್ದ. ಆದರೆ ಈ ಅಬ್ದುಲ್ಲಾಹಿ? ಇಂಗ್ಲೀಷಿನ ‘ಪ್ಲೇ ಬಾಯ್’ ಥರದ, ಒಬ್ಬ ವಿಲಾಸೀ ಬದುಕಿನ ಬೇಜವಾಬ್ದಾರಿ ವ್ಯಕ್ತಿ ಅಂದರೂ ಆತನಿಗದು ಸಲ್ಲುತ್ತಿತ್ತು.
ಆದರೆ, ಮಿತ್ರತ್ವದ ಮಾತು ಬಂದಾಗ ಅಬ್ದೋನೇ ಬೇರೆ, ಅಬ್ದುಲ್ಲಾಹಿಯೇ ಬೇರೆ…

ಮುಂದುವರಿಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊ. ನಂ. 98446 45459

Related post

Leave a Reply

Your email address will not be published. Required fields are marked *