ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೩

–ಅಬ್ದುಲ್ಲಾಹಿ ಮದುವೆ–

ನನಗೆ ಅಬ್ದುಲ್ಲಾಹಿ ಪರಿಚಯ ಯಾರಿಂದ ಆಯಿತೋ ಅಥವ ಹೇಗಾಯಿತೋ ಈಗ ನೆನಪಿಲ್ಲ. ಆತನಿಗೆ ಭಾರತೀಯರ ಎಲ್ಲ ಥರದ ನಡವಳಿಕೆಗಳ ಬಗ್ಗೆ ಬಹಳ ಆಸಕ್ತಿ ಹಾಗೂ ಗೌರವ. ಅವನು ಎಲ್ಲಿ ತನಕ ಓದಿದ್ದನೋ ನಾನರಿಯೆನಾದರೂ, ಹೆಚ್ಚಾಗಿ ಓದಿಕೊಂಡಿದ್ದವನು; ಹಾಗಾಗಿ ಒಬ್ಬ ಸಾಮಾನ್ಯ ಸೋಮಾಲಿಗಿಂತ ಹೆಚ್ಚು ತಿಳಿದವನು. ಹಿಂದಿನ ವಾರದ ಲೇಖನದಲ್ಲಿ ‘ಪ್ಲೇ ಬಾಯ್’ ಥರ ಎಂದು ಅವನ ದೈನಂದಿನ ನಡೆಯ ಬಗ್ಗೆ ಹೇಳಿದ್ದರೂ, ಅದು ಹೌದು ಮತ್ತು ಇಲ್ಲ ಎಂದರೇನೆ ಸಮುಚಿತ! ಒಮ್ಮೆ ಇದ್ದಕ್ಕಿದ್ದಂತೆ, ಈತನೊಬ್ಬ ಕೇವಲ ವಿಲಾಸೀ ಬದುಕಿನ ಪೂಜಾರಿ ಅಂದುಕೊಳ್ಳುವಷ್ಟರಲ್ಲಿ, ಅವನ ಮುಂದಿನ ಹೆಜ್ಜೆಯಲ್ಲೇ ಆ ಅಭಿಪ್ರಾಯವನ್ನು ನಾವೇ ನಮ್ಮ ತಪ್ಪೊಪ್ಪಿಕೊಂಡಂತೆ ಬದಲಾಯಿಸುವ ಸಂದರ್ಭ ಸಹ ಬಂದೇ ಬಿಡುತ್ತದೆ.

ಡಾ. ಸಿನ್ಹಾ, ಅಬ್ದುಲ್ಲಾಹಿ, ಮುದ್ದಪ್ಪ ಆಂಟಿ ಮತ್ತು ಕಮಲ

ಒಮ್ಮೆ ಲೀಡೋ ಬೀಚ್ ಹತ್ತಿರ ಹೋಗಿದ್ದಾಗ, ಒಂದು ಹುಡುಗಿಯ ಪಕ್ಕ, ಅವಳಿಗೆ ಅಂಟಿದಂತೆ ಕೂತಿದ್ದ ಅಬ್ದುಲ್ಲಾಹಿಯನ್ನು ಸ್ವಲ್ಪ ದೂರದಲ್ಲೇ ಗಮನಿಸಿ, ನನ್ನ ಮಡದಿ ಹಾಗೂ ಮುದ್ದಪ್ಪ ಆಂಟಿಗೂ ತೋರಿಸಿ, ನಾವು ಆತನಿಗೆ ಕಾಣಿಸದ ಹಾಗೆ ಒಂದು ಪೊದೆಯ ಮರೆಯಾಗಿ ಕೂತಿದ್ದೆವು. ಹೊತ್ತು ಇಳಿವ ಮುನ್ನ, ಇನ್ನೇನು ಹೊರಡೋಣ ಎಂದುಕೊಂಡು, ಹತ್ತಿರದಲ್ಲೇ ಮರಳಲ್ಲಿ ಮನೆ ಮಾಡುತ್ತಿದ್ದ ಮಕ್ಕಳನ್ನು ಕರೆಯಲು ಎದ್ದಾಗ, ದಿಢೀರ್ ಪ್ರತ್ಯಕ್ಷನಾದ ಅಬ್ದುಲ್ಲಾಹಿ ಆ ಹುಡುಗಿಯ ಸಂಗಡ! “ಆಂಟಿ ನೋಡಿ, ಇವಳನ್ನು ಮದುವೆ ಆಗುವ ಯೋಚನೆ ಇದೆ; ನೀವು ಏನಂತೀರಿ?” ಎನ್ನುತ್ತಾ ಅವಳ ಮುಖ ನೋಡಿ ನಕ್ಕ. ಇನ್ನೆಲ್ಲಿ ಆಂಟಿ ಅವನ ಹಿಂದಿನ ಇಂತಹ ಪ್ರಸಂಗಗಳ ಇತಿಹಾಸದ ಬಗ್ಗೆ ತಮಾಷೆಗೆ ಕೇಳಿ ಮುಜುಗರ ತರುತ್ತಾರೋ ಎಂಬಂತೆ, ತಕ್ಷಣದಲ್ಲೇ, “ಹಾಗೇನೂ ಇಲ್ಲ ಆಂಟಿ; ಇವಳ ಅಮ್ಮನಿಗೆ ಆಪರೇಷನ್ ಆಗಬೇಕು. ಅದು ಮೊಗದಿಶುವಲ್ಲಿ ಅಸಾಧ್ಯವಾದ, ಬೆನ್ನುಮೂಳೆಯ ಸೂಕ್ಷ್ಮವಾದ ಸರ್ಜರಿ. ಇಟಲಿಗೆ ಹೋಗಬೇಕು. ಪಾಪ, ಕಷ್ಟದ ಪರಿಸ್ಥಿತಿ; ಅದಕ್ಕಾಗಿ ಸರ್ಕಾರದ ಮತ್ತು ಟ್ರೈಬಲ್ ಜನರ ಸಹಾಯಕ್ಕೆ ಪ್ರಯತ್ನ ಮಾಡುತ್ತಿದ್ದೇನೆ”, ಎಂದ. ನಾವು ಆತನೊಡನೆ ಹಿಂದೆಂದೂ ಆ ಹುಡುಗಿಯನ್ನು ನೋಡಿದ್ದ ನೆನಪಿಲ್ಲ. ಆದರೆ, ಈ ಥರದ ಸುಮಾರು ವೃತ್ತಾಂತ ಅವನಿಂದ ನಡೆದ ನೆನಪುಗಳು ಖಂಡಿತ ಇವೆ.

ಹೀಗೆ, ‘ಅಬ್ದುಲ್ಲಾಹಿ ಹೀಗೋ?’ ಎಂಬ ಅಭಿಪ್ರಾಯ ಬರುವ ಹೊತ್ತಿಗೆ, ಆ ದೃಶ್ಯವೇ ಕ್ಷಣಾರ್ಧದಲ್ಲಿ ಬದಲಾಗಿ, ‘ಹಾಗಲ್ಲ ಅದು ಹೀಗೆ’, ಅನಿಸಿಬಿಡುತ್ತದೆ. ಆದರೆ ಪರದೆಯ ಹಿಂದಿನ ಕಥೆ ಬಹುಶಃ ಬೇರೆ ಇರಲೂಬಹುದು ಅಥವ ಇಲ್ಲದೆ ಇರಲೂಬಹುದು. ಅದು ನಮಗೆ ಮುಖ್ಯ ಆಗಬಾರದು. ಏಕೆಂದರೆ ಆತ ಸಹಾಯದ ಹೊಣೆ ತಾನೇ ಹೊರುತ್ತಾನಲ್ಲ ಎಂಬುದು ಎಲ್ಲಕ್ಕಿಂತ ಮಿಗಿಲು, ಅಲ್ಲವೇ? ಇಂಗ್ಲೀಷಿನಲ್ಲಿ “ಬಿಟ್ವೀನ್ ದ ಲೈನ್ಸ್” ಎಂದು ಹೇಳುವ, ಆ ಸಾಲುಗಳ ನಡುವಿನ ಅರ್ಥ, ಆತನ ಸಹಾಯದ ಮುಂದೆ ಯಕಃಶ್ಟಿತ್!

ಸೋಮಾಲಿಯಾದಲ್ಲಿ ನಾಗರಿಕ ದಂಗೆಯ (1991 ರಲ್ಲಿ ಆರಂಭ) ಮತ್ತು ಮೊಗದಿಶು ಸುತ್ತಮುತ್ತಲ ಪ್ರದೇಶ ಭಯೋತ್ಪಾದನೆಗೆ ತುತ್ತಾದ ನಂತರ, ದೈನಂದಿನ ಪರಿಸ್ಥಿತಿ ಬಿಗಡಾಯಿಸಿದ ಈಗಿನ ವಿಷಮ ಸ್ಥಿತಿಯಲ್ಲಿ, ಸಾಮಾಜಿಕ ನಡವಳಿಕೆ ಹೇಗಿದೆಯೋ ನನಗೆ ತಿಳಿಯದು; ಅಲ್ಲಿಗೆ ಹೋಗಿ ಬರುವ ಭಾರತೀಯ ಕೆಲಸಗಾರರೂ ಈಗ ಇಲ್ಲವೇ ಇಲ್ಲವಾಗಿ, ಏನಿದ್ದರೂ ಆಗೀಗ ಪತ್ರಿಕೆಗಳನ್ನು ತುಂಬುವಂಥ ಕಾಲಮ್ಮುಗಳಲ್ಲಿ ಬರುವ ಕೆಲ ಸಾಲುಗಳ ಸುದ್ದಿಗಷ್ಟೇ ನಾನು ಸೀಮಿತ. ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತಹ ಪ್ರದೇಶಕ್ಕೆ ಯಾರು ತಾನೇ ಹೋಗುವರು – ಭಾರತ ಸರ್ಕಾರದ ಮುಖಾಂತರ ಆದರೂ ಸಹ?

ನಾವಿದ್ದ ಸಮಯವೇ ಆ ದೇಶದಲ್ಲಿ, ಮಿಲಿಟರಿ ಆಡಳಿತ ಇದ್ದರೂ, ಅತ್ಯಂತ ಉತ್ತಮ ಕಾಲ ಎನ್ನಲು ಅಡ್ಡಿಯಿಲ್ಲ. ಅಲ್ಲಿಯವರೆಗೆ ಆ ದೇಶದಲ್ಲಿ, ನನಗೆ ತಿಳಿದ ಹಾಗೆ, ಹೆಣ್ಣಿನ ಮೇಲಿನ ಬಲಾತ್ಕಾರದ ಘಟನೆ ಒಂದೇ ಒಂದೂ ಸಹ ಜರುಗಿರಲಿಲ್ಲ! ಹಾಗಾಗಿ ಸಾಮಾನ್ಯ ಜನರು ಅತ್ಯಂತ ಸುರಕ್ಷಿತವಾಗಿದ್ದರು ಎನ್ನಬಹುದು. ಸರಕಾರದ ಎದುರು ನಿಂತವರ ಕಥೆಯೇ ಬೇರೆ. ಅಲ್ಲದೆ ದೊಡ್ಡ ದೊಡ್ಡ ಮಟ್ಟದಲ್ಲಿ ಹೇಗಿತ್ತೋ ಅದು ಹೊರಗೇ ಬರುತ್ತಿರಲಿಲ್ಲ, ಅನ್ನುವ ವಿಚಾರ ಬೇರೆ. ಆದರೆ ಒಬ್ಬ ಸಾಮಾನ್ಯ ಮಹಿಳೆ ನಡುರಾತ್ರಿಯಲ್ಲಿ ಕೂಡ ಧೈರ್ಯದಿಂದ ಒಬ್ಬಳೇ ಓಡಾಡಬಹುದಾದ ಪರಿಸ್ಥಿತಿ ಅಂತೂ ಖಂಡಿತ ಇತ್ತು! ಎಷ್ಟು ದೇಶಗಳನ್ನು, ಅದರಲ್ಲೂ ಎಲ್ಲ ಸ್ತರಗಳಲ್ಲೂ ಉತ್ತುಂಗಕ್ಕೇರಿದ ರಾಷ್ಟ್ರಗಳನ್ನು, ಇಂತಹ ಒಂದು ಅತ್ಯಂತ ಸೂಕ್ಷ್ಮ ವಿಚಾರದಲ್ಲಿ, ಸೋಮಾಲಿಯಾದ ಕನ್ನಡಿ ಮುಂದೆ ಹಿಡಿಯುವ ಧೈರ್ಯ ಮಾಡಲು ಯಾರಿಗಾದರೂ ಸಾಧ್ಯ!
ಅಷ್ಟೇ ಅಲ್ಲ. ಯಾವ ತರುಣ ಬೇಕಾದರೂ ತನಗೆ ಇಷ್ಟವಾದ ತರುಣಿಗೆ ತನ್ನ ಇಚ್ಛೆಯನ್ನು ನೇರ ಹೇಳಬಹುದಿತ್ತು; ಅದಕ್ಕೆ ಅವರವರ ಮನೆಯವರ ತಕರಾರು ಸಹ ಇರುತ್ತಿರಲಿಲ್ಲ. ಬಹಿರಂಗವಾಗಿ ಒಬ್ಬ ಯುವಕ ತನ್ನ ಗೆಳತಿಯೊಡನೆ ಎಲ್ಲ ಕಡೆ ಓಡಾಡಿ, ಸಿನಿಮಾಕ್ಕೂ ಸಹ ಹೋಗಬಹುದು ಎನ್ನುವಂತಹ ಮುಕ್ತ (ಲಿಬರಲ್) ಸಾಮಾಜಿಕ ಸ್ಥಿತಿ ಖಂಡಿತ ಇತ್ತು. ಮದುವೆಯ ಬಗ್ಗೆ ಕೂಡ ಹುಡುಗ ಹುಡುಗಿ ಪ್ರಸ್ತಾಪ ಮಾಡಿ, ಇಬ್ಬರಿಗೂ ಒಪ್ಪಿಗೆಯಾದರೆ, ನಂತರ ‘ನ್ಯಾಯಾಧೀಶ’ರ ಮುಂದೆ, ಅಂದರೆ ಪರಸ್ಪರ ಹಿರಿಯರ ಸಮ್ಮುಖ ತಿಳಿಸಿ, ಅವರೆಲ್ಲರ ‘ಹಸ್ತಾಕ್ಷರ’ ಬಿದ್ದ ಮೇಲೆ ಮದುವೆ ಮುಂತಾಗಿ!

ಮುದ್ದಪ್ಪ ಆಂಟಿ, ಅಬ್ದುಲ್ಲಾಹಿ ತಾಯಿ, ನಾನು ಮತ್ತು ನನ್ನ ಮಗಳ ಸಂಗಡ ಅಬ್ದುಲ್ಲಾಹಿ

ಇಲ್ಲಿ ಇನ್ನೊಂದು ವಿಷಯ. ಯಾವ ಹುಡುಗಿಯೂ ಒಬ್ಬ ಹುಡುಗನನ್ನು ಸುಖಾಸುಮ್ಮನೆ ಒಪ್ಪುತ್ತಿರಲಿಲ್ಲ. ಆತನ ಪಂಗಡ ಮುಂತಾಗಿ ಗೊತ್ತಾದ ಮೇಲೆ, ಅವನು ಹಣಕಾಸಿನಲ್ಲಿ ಸ್ವಾವಲಂಬಿಯೋ ಹೇಗೆ, ಏನು ಕೆಲಸ, ತನಗಾಗಿ ಮನೆ ಮಾಡುವ, ಅದಕ್ಕೆ ಬೇಕಾದ ಪೀಠೋಪಕರಣ ಮುಂತಾಗಿ ಕೊಳ್ಳಲು ಶಕ್ತನೆ ಎಂಬೆಲ್ಲ ವಿಷಯ ವಿಶದವಾಗಿ ತಿಳಿದಮೇಲೆ ಮಾತ್ರ ಮದುವೆ! ಏನೂ ಅರಿಯದೆ ಓಮ್ಮೆಲೇ ಹಳ್ಳಕ್ಕೆ ಇಳಿಯುವ ಹಂತ ಅಲ್ಲಿ ಸುತರಾಂ ಇರಲಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ, ವಧು ದಕ್ಷಿಣೆಯಾಗಿ, ಒಂಟೆಗಳನ್ನು, ಜಾನುವಾರು ಅಥವ ಕುರಿಗಳನ್ನು ಇಂತಿಷ್ಟು ಎಂದು ಹಣದ ಜೊತೆ ಕೊಡುವ ಪ್ರವೃತ್ತಿ ಸಹ ಇದೆ.
ಸಾಮಾನ್ಯವಾಗಿ ಸೋಮಾಲಿ ಮಹಿಳೆಯರು ತಲೆಯ ಮೇಲಿನ ಒಂದು ತೆಳು ಹೊದಿಕೆ ಬಿಟ್ಟರೆ, ಬುರ್ಖಾ ಧರಿಸುವುದು ಅತ್ಯಂತ ಅಸಾಮಾನ್ಯ – ಅರಬ್ ಸಂತತಿಯ ಮಹಿಳೆಯರನ್ನು ಬಿಟ್ಟು. ಪುರುಷರೂ ಸಹ ಅರಬ್ಬರ ರೀತಿ ಉದ್ದ ನಿಲುವಂಗಿ ತೊಡುತ್ತಿದ್ದವರು ಕೇವಲ ಅರಬ್ ಸಂತತಿಯವರು. ಉಳಿದಂತೆ ಪಾಶ್ಚಿಮಾತ್ಯ ಉಡುಪೇ ಹೆಚ್ಟು. ಇಲ್ಲದಿದ್ದರೆ ಬಣ್ಣಬಣ್ಣದ ಜುಬ್ಬ ಮತ್ತು ಪ್ಯಾಂಟ್ ಧರಿಸುತ್ತಾರೆ. ಕೆಲವು ಹುಡುಗಿಯರೂ ಸಹ.

ಈ ಅಬ್ದುಲ್ಲಾಹಿ ಬಗ್ಗೆ ಇನ್ನೊಂದು ರಹಸ್ಯ ಸಮಾಚಾರವೂ ನನ್ನ ಕಿವಿಗೆ ಬಿದ್ದಿತ್ತು. ಆತ ಸರಕಾರದ ಗುಪ್ತಚರ ಕಾರ್ಯಕರ್ತ ಎಂದು. ಗೂಢಾಚಾರ ದಳಕ್ಕೆ ಅದು ಇದು ವಿಷಯ ತಲಪಿಸುವ ಸಮವಸ್ತ್ರರಹಿತ ಏಜೆಂಟ್ ಎಂಬ ಗುಮಾನಿ. ಆದರೆ, ಅಬ್ದುಲ್ಲಾಹಿ ಮಾರೆಹಾನ್ ಪಂಗಡಕ್ಕೆ ಸೇರಿದವನಲ್ಲ ಎಂದು ಆತನ ಬಾಯಿಂದಲೇ ಕೇಳಿದ್ದೆ. ನನಗೆ ತಿಳಿದ ಹಾಗೆ, ಸರ್ವಾಧಿಕಾರೀ ಸರ್ಕಾರ ಇರುವಂತಹ ಕಡೆ, ನಂಬಿಕಸ್ತ ಸೈನಿಕ (ರಕ್ಷಣಾವ್ಯವಸ್ಥೆಯ) ಅಥವ ಗೂಢಚಾರಿ ಮುಂತಾಗಿ ಎಲ್ಲರೂ ಆ ದೇಶದ ಆಡಳಿತದ ಮುಖ್ಯಸ್ಥನ ಜಾತಿಯ ಜನರೇ ತುಂಬಿರುತ್ತಾರೆ ಎಂದು. ಆ ಮುಖಂಡ ಇದ್ದರೆ ತಾನೆ, ಆತನನ್ನು ರಕ್ಷಿಸುವ ಇವರ ‘ಉನ್ನತ’ ಬದುಕು? ಹಾಗಾಗಿ ಅಬ್ದುಲ್ಲಾಹಿ ಅಂತಹ ವರದಿಗಾರ ಅಲ್ಲ ಎಂಬ ತರ್ಕ ನನ್ನೊಳಗೆ. ಅದರ ವಿಚಾರ ಆತನಲ್ಲಿ ಕೇಳಿ ದೃಢಪಡಿಸಿಕೊಂಡರೆ, ಅವನು ಏನು ಯೋಚಿಸಬಹುದು? ಆದರೂ, ಆತ ಹೌದು ಎಂಬುದಕ್ಕೆ ಪುಷ್ಟೀಕರಿಸಿದ ಹಾಗೆ, ಅವನ ಕೆಲಸ ಸಹ ವಿಮಾನಸಂಸ್ಥೆಯಲ್ಲಿ ಬೇಕಾಬಿಟ್ಟಿ. ಕೊನೆಗೆ ಆ ದೇಶ ಬಿಟ್ಟರೂ ಅವನನ್ನು ಕೇಳಿ ತಿಳಿಯಲು ಆಗಲೇ ಇಲ್ಲ.

ಅಬ್ದುಲ್ಲಾಹಿ ಅಂತೂ ಕೊನೆಗೆ ಒಂದು ಹುಡುಗಿಯನ್ನು ಪ್ರೀತಿಸುವ ಸಮಾಚಾರ ನನ್ನ ಕಿವಿ ತಾಕಿತು. ಒಮ್ಮೆ ಡಾ. ಸಿನ್ಹಾ ಅವರನ್ನು ಊಟಕ್ಕೆ ಆಹ್ವಾನಿಸಿದ್ದಾಗ, ಅವನು ಅಕಸ್ಮಾತ್ ಬಂದಿದ್ದರಿಂದ, ಆತ ಸಹ ಊಟಕ್ಕೆ ಕೂತ. ಈ ಡಾಕ್ಟರ್ ಸಿನ್ಹಾ ಅವರು ಕೋಲ್ಕತ್ತಾದವರು. ವಿಶ್ವಸಂಸ್ಥೆ ವತಿಯಿಂದ ಸೋಮಾಲಿಯಾಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನಾನು ಹಾಸ್ಯ ಮಾಡುವ ಥರ, ಅಬ್ದುಲ್ಲಾಹಿಯ ಹೊಸ ಪ್ರೇಮಿಯ ವಿಷಯ ಪ್ರಸ್ತಾಪಿಸಿದಾಗ, ಹೌದೆಂದು ಒಪ್ಪಿ ಮುಂದೊಂದು ದಿನ ನಮ್ಮ ಮನೆಗೆ ಕರೆತರುವುದಾಗಿ ಹೇಳಿದ್ದ.
ಒಮ್ಮೆ ಆ ದಿನ ಕೂಡ ಬೇಗ ಬಂದಿತು. ಈ ಸಲ ಆತ ಒಳ್ಳೆ ಲಕ್ಷಣವಾದ, ಅರಬ್ ಮಿಶ್ರಣದಂತೆ ಬೆಳ್ಳಗಿದ್ದ ಹುಡುಗಿಯ ಪ್ರೇಮಕ್ಕೆ ಮಾರುಹೋಗಿದ್ದ. ಪ್ರಥಮ ಬಾರಿಗೆ ಅವನಲ್ಲಿ ಮೊದಲು ಕಾಣುತ್ತಿದ್ದ ಆ ವಿಲಾಸೀ ಮುಖ ಚಹರೆ ಈಗ ಮಾಯವಾಗಿತ್ತು. ಈಗ ಒಬ್ಬ ನೈಜ ಪ್ರೇಮಿಯ ಲಕ್ಷಣಗಳು ಅವನ ನಡೆ, ನುಡಿ ಹಾಗೂ ಭಾವ ಎಲ್ಲದರಲ್ಲಿ ಎದ್ದು ತೋರುತ್ತಿತ್ತು.

ಅಬ್ದೋ ಮನೆಯ ಬಗ್ಗೆ ಅಷ್ಟಿಷ್ಟು ನನಗೆ ತಿಳಿದಿದ್ದಂತೆ, ಅಬ್ದುಲ್ಲಾಹಿ ಮನೆಯ ವಿಚಾರ ರವಷ್ಟೂ ಗೊತ್ತಿರಲಿಲ್ಲ – ಅಂತಹ ಗೆಳೆಯ ಆಗಿ ಕೂಡ. ಅವನ ಹಣಕಾಸಿನ ಸ್ಥಿತಿಯಾಗಲೀ, ತಂದೆ ಇದ್ದಾರೋ ಇಲ್ಲವೋ ಯಾವುದೂ ತಿಳಿಯದು.
ಆದರೆ ಅವನ ಈ ಹೊಸ ಹುಡುಗಿ ನೋಡಿದಾಕ್ಷಣ ಉತ್ತಮ ಸ್ಥಿತಿವಂತ ಮನೆಯಿಂದ ಬಂದಂತೆ ತೋರುತ್ತಿತ್ತು. ಅವಳ ಹೆಸರು ಖದೀಜ.
ಒಮ್ಮೆ ತನ್ನ ತಾಯಿಯ ಸಂಗಡವೇ ಖದೀಜಳನ್ನೂ ಕರೆತಂದ. ಅವನ ತಾಯಿಯ ಪರಿಚಯ ಮೊದಲೇ ಆಗಿತ್ತು. ಅವರೇನೂ ಅಂತಹ ಉತ್ತಮ ಐಶ್ವರ್ಯದಾರೋಗ್ಯ ತುಂಬಿದ ಮನೆಯಿಂದ ಬಂದಂತೆ ಕಾಣಲಿಲ್ಲ. ಅಬ್ದುಲ್ಲಾಹಿ ನೀಟಾಗಿ ಉಡುಪು ಧರಿಸುತ್ತಿದ್ದನಾದರೂ, ಬಹಳ ಹಣ ಇದ್ದಂತೆ ತೋರಲಿಲ್ಲ. ಆದರೆ ಹೃದಯದಲ್ಲಿ ಯಾವ ದ್ರವ್ಯದ ಕೊರತೆ ಇರಲಿಲ್ಲ. ಆದರೆ, ಇದ್ದಷ್ಟರಲ್ಲೇ ಕೈಯ್ಯನ್ನು ಧಾರಾಳ ಚಾಚುತ್ತಿದ್ದ! ನಮಗೆ ಇವರಿಬ್ಬರ ಓಡಾಟದಿಂದ ಮದುವೆ ಗ್ಯಾರಂಟಿ ಅನ್ನಿಸಿದಾಗ, ಇಬ್ಬರನ್ನೂ ಮನೆಗೆ ಊಟಕ್ಕೆ ಸಹ ಆಹ್ವಾನಿಸಿದ್ದೆವು. ಆಗ ಅವಳಿಗೂ ಭಾರತೀಯ ಭೋಜನ ಬಹಳ ಇಷ್ಟ ಎಂಬುದು ತಿಳಿಯಿತು. ಸೋಮಾಲಿಯಾದಲ್ಲಿ ಭಾರತೀಯ ಆಹಾರದ ಹೋಟೆಲ್ ಒಂದೂ ಇರದಿದ್ದರೂ, ಅಕಸ್ಮಾತ್ ಯಾರಾದರೂ ಆರಂಭಿಸಿದರೆ ಭರ್ಜರಿ ವ್ಯಾಪಾರವಂತೂ ಗ್ಯಾರಂಟಿ ಎಂದು ಎಷ್ಟೋ ಬಾರಿ ಅನ್ನಿಸಿದೆ. ಹಿಂದಿ ಸಿನಿಮಾದ ಗೀಳು ಆ ಹುಡುಗಿಗೂ ಇತ್ತು. ಮೇಲಾಗಿ ಸಂಕೋಚವಿಲ್ಲದೆ ಮುದ್ದಪ್ಪ ಆಂಟಿ, ಕಮಲಳ ಸಂಗಡ, ತನ್ನವರೇ ಏನೋ ಅನ್ನುವ ಥರ ಖುಷಿಯಾಗಿ ಬೆರೆತು ಮಾತಾಡಿದ್ದಲ್ಲದೆ, ಮಕ್ಕಳ ಸಂಗಡ ಕೂಡ ಲೆಗೋ ಆಟ ಆಡಿ ಅವರಿಗೂ ಖುಷಿ ಕೊಟ್ಟಳು.

ಮುದ್ದಪ್ಪ ಆಂಟಿ, ಅಬ್ದುಲ್ಲಾಹಿ ತಾಯಿ, ನನ್ನ ಮಗಳೊಡನೆ ನಾನು

ನಮ್ಮ ನೆರೆಯಲ್ಲಿ ನಡೆದ, ಮನೆಯ ಒಡೆಯನ ಸಂಬಂಧಿ ಮದುವೆಗೆ ನಾವಂತೂ ಅಷ್ಟಾಗಿ ಭಾಗಿ ಆಗಲಿಲ್ಲ. ಆದ್ದರಿಂದ, ನಮ್ಮ ಬದುಕಿನಲ್ಲಿ ಪ್ರಥಮ ಬಾರಿಗೆ, ನಮ್ಮ ಸೋಮಾಲಿ ಗೆಳೆಯನ ಮದುವೆಯಲ್ಲಿ ಪ್ರತಿ ಹಂತದಲ್ಲಿ ಸಂಪೂರ್ಣ ಭಾಗಿಗಳಾಗಿ ಆ ಹೊಸ ಅನುಭವ ಪಡೆವ ಆತುರ ನಮ್ಮಲ್ಲಿ ತುಂಬಿತ್ತು. ಹಾಗಾಗಿ ನಮ್ಮ ಆಸೆಯ ಕಾರಂಜಿ ಸದಾ ಚಿಮ್ಮುತ್ತಿತ್ತು.

ಅಬ್ದುಲ್ಲಾಹಿಗೆ ಖದೀಜ ಹೆಣ್ಣಾಗುವ ಗ್ಯಾರಂಟಿ ಸುದ್ದಿ ಹರಿದು ನಾಲ್ಕೈದು ತಿಂಗಳು ಉರುಳಿದರೂ, ಮುಂದಿನ ಯಾವ ಕಾರ್ಯದ ಬಗ್ಗೆಯೂ ಸುದ್ದಿ ಇಲ್ಲದೆ, ನಮಗೆ ಏನಾಗಿರಬಹುದು ಎಂಬ ಅನುಮಾನ ಕಾಡತೊಡಗಿತ್ತು. ಅಲ್ಲದೆ ಅವನೂ ಮನೆಯತ್ತ ಸುಳಿದು ಎರಡು ತಿಂಗಳ ಮೇಲಾಗಿತ್ತು.
ಅಂತೂ ಒಂದು ದಿನ ಸಂಜೆ ನಾವೆಲ್ಲ ಮನೆಯಲ್ಲೇ ಇದ್ದಾಗ, ಅಬ್ದುಲ್ಲಾಹಿ ಒಬ್ಬನೇ ಬಂದ. ಕಳೆಗುಂದಿದ ಮುಖ ಹೊತ್ತು ಬಂದಿದ್ದ. ಆ ತಕ್ಷಣಕ್ಕೆ ನಾವು ಏನನ್ನೂ ಕೇಳದೆ, ಬ್ಲ್ಯಾಕ್ ಕಾಫಿ ಕುಡಿಯುವಾಗ, ಆತನೇ “ಆಂಟಿ ಮದುವೆ ಬೇಡ ಎಂದು ಖದೀಜ ಹೇಳಿ ನನ್ನಿಂದ ದೂರವಾದಳು” ಎಂದ. ಸ್ವಲ್ಪ ಸಮಾಧಾನಕ್ಕೆ ಸಮಯ ಕೊಟ್ಟ ನಂತರ, ಮತ್ತೆ ಅವನೇ “ಐ ಆಮ್ ನಾಟ್ ಎ ರಿಚ್ ಮ್ಯಾನ್ ಯು ಸೀ” ಎಂದ. ಈ ಹುಡುಗಿಯರಿಗೆ ಹಣ, ಬರೀ ಹಣ ಮುಖ್ಯ ಎಂದು ಹೇಳುತ್ತಾ ಎದ್ದ. “ನಿಮಗೆ ವಿಷಯ ತಿಳಿಸಿ ಹೋಗಲು ಬಂದೆ. ಹೊರಗೆ ಯಾರೋ ಕಾಯುತ್ತಿದ್ದಾರೆ; ಇನ್ನೊಮ್ಮೆ ಬಂದು ವಿವರವಾಗಿ ಹೇಳುವೆ” ಎನ್ನುತ್ತಾ ಹೊರಟು ಹೋದ.
ಸೋಮಾಲಿ ಜನ ಅಳುವುದನ್ನಾಗಲಿ ಅಥವ ಕಣ್ಣೀರು ಸುರಿಸುವುದನ್ನೂ ಸಹ ನನ್ನ ಅಷ್ಟು ವರ್ಷಗಳ ಸೇವಾ ಅವಧಿಯಲ್ಲಿ ಕಂಡಿಲ್ಲ. ಹೆಂಗಸರೂ ಹಾಗೆಯೇ! ಏನೇ ಬರಲಿ, ಏನೇ ಆಗಲಿ ಅದು ಅಲ್ಲಾನ ಇಷ್ಟ ಅಂದರೆ ಮುಗಿಯಿತು!

ಅಂತೂ ಅಬ್ದುಲ್ಲಾಹಿ ಮದುವೆಯಲ್ಲಿ ಭಾಗಿಯಾಗುವ ನಮ್ಮ ಅಭಿಲಾಷೆಗೆ ಮಂಜಿನ ತಣ್ಣೀರೆರಚಿದ ಭಾವ ನಮ್ಮೆಲ್ಲರನ್ನೂ ಆವರಿಸಿತು. ಇನ್ನು ಅವನಿಗೆ, ಅದರಲ್ಲೂ ಅರಬ್ ಮಿಶ್ರಣದ ಬಿಳೀ ಹೆಣ್ಣನ್ನು ಮದುವೆ ಆಗುವ ಆಸೆ ಮತ್ತು ಆತ್ಮವಿಶ್ವಾಸ ತುಂಬಿದ್ದ ಅಬ್ದುಲ್ಲಾಹಿಗೆ ಹೇಗೆ ಹಿಂಸೆ ಆಗಿರಬೇಡ – ಅದಲ್ಲದೆ ಸುಮಾರು ತಿಂಗಳು ಜೊತೆಯಾಗಿಯೇ ಇದ್ದು, ಇನ್ನೇನು ಖಂಡಿತ ಮದುವೆ ಆದಂತೆ ಅಂದುಕೊಂಡಿದ್ದು ಹೀಗಾದಾಗ?
ಒಂದೇ ಒಂದು ಕ್ಷಣ ಅಂತಹದ್ದೇ ಘಟನೆ ನಮ್ಮಲ್ಲಾಗಿದ್ದರೆ? ಏನೆಲ್ಲ ಸಾಧ್ಯವಾಗುತ್ತಿತ್ತೋ ಏನೋ?
ಅಂತೂ ನಾವು ಸೋಮಾಲಿಯಾ ಬಿಟ್ಟು ಬರುವವರೆಗೂ ಅಬ್ದುಲ್ಲಾಹಿ ಮದುವೆ ಆಗಿರಲಿಲ್ಲ. ಅಕಸ್ಮಾತ್ ಅವನ ಅಮ್ಮ ಒಬ್ಬ ಭಾರತೀಯ ನಾರಿಯಾಗಿದ್ದರೆ, ಆಗಿನ ಪರಿಸ್ಥಿತಿ?

ಮುಂದುವರಿಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊ. ನಂ. 98446 45459

Related post

Leave a Reply

Your email address will not be published. Required fields are marked *