— ಅಬ್ದುಲ್ ಖಾದಿರ್ ಫಾರ್ಮಸಿ —
ನಾವು ಸೋಮಾಲಿಯಾ ದೇಶಕ್ಕೆ ಹೋದಾಗ 1976 ರಲ್ಲಿ, ನನ್ನ ನೆನಪಿನ ಪ್ರಕಾರ, ಸುಮಾರು ಆರೂವರೆ ಸೋಮಾಲಿ ಶಿಲಿಂಗಿಗೆ (shilling) ಒಂದು ಅಮೇರಿಕನ್ ಡಾಲರ್ ಸಮ ಇತ್ತು. ಭಾರತದಲ್ಲೂ ಅಂದಾಜು ಏಳು ರೂಪಾಯಿಗೆ ಒಂದು ಡಾಲರ್ ಬೆಲೆ ಇತ್ತು. ನಮ್ಮ ಕಾಂಟ್ರ್ಯಾಕ್ಟ್ ಸೋಮಾಲಿ ಶಿಲಿಂಗ್ ನಲ್ಲಿದ್ದು, ಅದರ ಅರ್ಧ ಬೆಲೆಯಷ್ಟು ಡಾಲರ್ ವಿನಿಮಯ ಮಾಡಿ ನಮ್ಮ ಭಾರತದ ಅಕೌಂಟಿಗೆ ಕಳಿಸಲು ಅವಕಾಶ ಇತ್ತು. ಆದರೆ ಸರ್ಕಾರದ ಆರ್ಥಿಕ ಅವ್ಯವಸ್ಥೆ ಮತ್ತು ಕೆಟ್ಟ ನಿರ್ವಹಣೆ, ಅಲ್ಲದೆ ಸ್ವಜನ ಪ್ರೇಮ, ಭ್ರಷ್ಟಾಚಾರ ಎಲ್ಲ ಒಟ್ಟಾಗಿ ಕ್ರಮೇಣ ಹಣಕಾಸಿನ ಸ್ಥಿತಿ ಕುಸಿಯತೊಡಗಿ, ಅದರ ಪರಿಣಾಮ ಶಿಲ್ಲಿಂಗ್ ಮೇಲೂ ಗುಡುಗಿ, ಅಪಮೌಲ್ಯದ ತುಂತುರು ಉದುರತೊಡಗಿದ್ದು, ಕ್ರಮೇಣ ದೈತ್ಯಾಕಾರ ತಳೆಯಿತು. ಆದರೆ ನಮ್ಮ ಕಾಂಟ್ರ್ಯಾಕ್ಟ್ ಶಿಲ್ಲಿಂಗುಗಳಲ್ಲಿ ಬರೆದಿದ್ದರಿಂದ, ಶಿಲ್ಲಿಂಗಿನ ಅಪಮೌಲ್ಯಕ್ಕೆ ತಕ್ಕ ಹಾಗೆ, ಶಿಲ್ಲಿಂಗ್ ಸಂಬಳವೂ ಹೆಚ್ಚಾಗುತ್ತಾ ಹೋಗಬೇಕಾಗಿತ್ತು. ಆದರೆ ಅದು ಹಾಗಾಗದೆ, ಡಾಲರ್ ಲೆಕ್ಕದಲ್ಲಿ ನಮ್ಮ ಸಂಬಳದ ಮೌಲ್ಯ ಕುಸಿದು ತಳ ಹಿಡಿಯತೊಡಗಿತು. ಆ ಸಂದರ್ಭದಲ್ಲಿ ನಾನು ಕಳೆದುಕೊಂಡ ಗಯಾನ ಕೆಲಸ ಕುಹಕದಿಂದ ನಕ್ಕಂತೆ ತೋರತೊಡಗಿತ್ತಲ್ಲದೆ, ಇನ್ನು ಮುಂದೆ ಇಲ್ಲಿಯ ಈ ಕೆಲಸ ಅಪ್ರಯೋಜಕ ಅನ್ನಿಸತೊಡಗಿತ್ತು. ವಾಸ್ತವ ಅಲ್ಲವೇ? ಪರ್ವತದ ಮೇಲೆ ನಿಂತು ವಿಹಂಗಮ ದೃಶ್ಯ ವೀಕ್ಷಣೆಯ ಆನಂದದಲ್ಲಿದ್ದ ವ್ಯಕ್ತಿಯನ್ನು, ದಿಢೀರನೆ ನೀರಿಲ್ಲದ ನೆಲಬಾವಿಗೆ ಅನಾಮತ್ತು ಎಸೆದುಬಿಟ್ಟರೆ!
ಒಂದೆರಡು ಬಾರಿ ಡೈರೆಕ್ಟರ್ ಜನರಲ್ ಅವರನ್ನು ಸಂಧಿಸಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ ಕೂಡ ಫಲಕಾರಿಯಾಗಿರಲಿಲ್ಲ. ಅವರಿಗೆ ಇಂಗ್ಲೀಷ್ ಕಲಿಸುವ ಕಾಲ ನಿಂತು ವರ್ಷಗಳೇ ಕಳೆದಿದ್ದವು. ಕೃತಜ್ಞತೆಯ ಆಯಸ್ಸು ಬಹಳ ಅಲ್ಪ! ಅಲ್ಲದೆ ಎಂಥ ಸಜ್ಜನರೇ ಆದರೂ, ಅವರ ನೆನಪಿನ ಕಣಜ ಶೀಘ್ರ ಖಾಲಿಯಾಗುವುದೂ ಸಹಜ ಮತ್ತದು ಅನುಕೂಲ ಸಿಂಧು ಸಹ! ಕೊನೆಗೊಂದು ದಿನ ಖಡಾಖಂಡಿತ ಎನ್ನುವ ಹಾಗೆ, “ಡಾಲರ್ ಲೆಕ್ಕಕ್ಕೆ ನಿಮ್ಮ ಸಂಬಳ ಸಮವಾಗುವಂತೆ ಶಿಲ್ಲಿಂಗ್ ಪ್ರಮಾಣ ಹೆಚ್ಚು ಮಾಡಲು ಸಾಧ್ಯವೇ ಇಲ್ಲ. ನಿಮಗೆ ಅನುಕೂಲ ಇಲ್ಲದಿದ್ದರೆ ಇಲ್ಲಿಯ ಕೆಲಸ ಬಿಟ್ಟು ಬೇರೆ ಹುಡುಕಿಕೊಳ್ಳಬಹುದು” ಅಂದುಬಿಟ್ಟರು. ನಾನು ಇಂತಹ ಒಂದು ದಿನವನ್ನು ನಿರೀಕ್ಷಿಸದೇ ಇರಲಿಲ್ಲ. ಆದರೆ ಈ ವ್ಯಕ್ತಿಯಿಂದ ಹೀಗೆ ಅಲ್ಲ; ಬದಲಿಗೆ ನಾನೇ ಬಿಟ್ಟು, ಒಂದೋ ವಾಪಸ್ಸು ಭಾರತದತ್ತ ಪ್ರಯಾಣ ಬೆಳೆಸುವುದು ಅಥವ ಈಗಿನ ಸಂಬಳದಲ್ಲೇ ಅಲ್ಲೇ ಕೆಲಸ ಮಾಡುತ್ತಿದ್ದು, ಬೇರೆಡೆ ಪ್ರಯತ್ನ ಮಾಡುವುದು ಎಂದಷ್ಟೆ ಎಣಿಸಿದ್ದೆ. ಬೇರೆ ದೇಶದ ಕೆಲಸ ಅಂತೂ ಅಸಾಧ್ಯ ಎಂದು ಖಂಡಿತ ಗೊತ್ತಿತ್ತು. ಇಂತಹ ಅನೂಹ್ಯ ವಿಷಮ ಸಮಯದಲ್ಲೇ, ನಾವು ಮೊದಲು ತಪ್ಪೆಸಗಿದ್ದಂಥ ಕೆಲ ಸಂದರ್ಭಗಳು ನೆನಪಾಗಿ, ಮನಸ್ಸಿಗೆ ಘಾಸಿ ಆಗುವುದು. ಉದಾಹರಣೆಗೆ, ಡಾ. ಜಗನ್ನಾಥನ ತಂದೆ ನನಗೆ ಕರ್ನಾಟಕ ಪಿ.ಎಸ್.ಸಿ ಅರ್ಜಿ ಹಾಕುವಂತೆ, ಮತ್ತು ಅವರಿಗಿರುವ ಪ್ರಾಬಲ್ಯದಿಂದ ಖಂಡಿತ ಕೆಲಸ ಕೊಡಿಸುವುದಾಗಿ ಒತ್ತಾಯಿಸಿದ್ದರೂ ನಾನದಕ್ಕೆ ಒಪ್ಪಿರಲಿಲ್ಲ; ಅವರಿಗೆ ಅದು ಸಾಧ್ಯ ಇತ್ತು ಕೂಡ. ಅದಲ್ಲದೆ, ವರ್ಷಕ್ಕೊಮ್ಮೆ ರಜೆಯಲ್ಲಿ ಭಾರತಕ್ಕೆ ಹೋಗುವಂಥ ಇಲ್ಲಿಯ ಕೆಲಸ ಬಿಟ್ಟು, ನಾಲ್ಕು ವರ್ಷಗಳ ಸುದೀರ್ಘ ಕಾಲಕ್ಕೊಮ್ಮೆ ಫ್ಯಾಮಿಲಿ ಟಿಕೆಟ್ ಕೊಡುವುದು ಎಂದಿದ್ದ ಗಯಾನ ಕೆಲಸ ಒಪ್ಪದಿದ್ದದ್ದು. ಸಿನಿಮೀಯವಾಗಿ ಹೀಗೆ ಇಂತಹ ಸಮಯದಲ್ಲೇ ಅವುಗಳೂ ನೆನಪಲ್ಲಿ ಪ್ರತ್ಯಕ್ಷ ಆಗಿ ಚುಚ್ಚುತ್ತವೆ. ನೆನಪೂ ಒಮ್ಮೊಮ್ಮೆ ಎಷ್ಟು ಕಠೋರ ಅಲ್ಲವೇ?
ವೈದ್ಯರು ಕೆಲಸ ಮಾಡುವಲ್ಲೆಲ್ಲ, ಅವರ ಕೆಲಸಕ್ಕೆ ಒತ್ತುಗಲ್ಲುಗಳಾಗಿ ನಿಲ್ಲುವವರೆಂದರೆ, ದಾದಿ, ಔಷಧ ವಿತರಕ (ಫಾರ್ಮಸಿಸ್ಟ್), ಪ್ರಯೋಗ ಶಾಲೆಯ ತಂತ್ರಜ್ಞ ಮುಂತಾಗಿ. ಹಾಗೆ ಅಬ್ದುಲ್ ಖಾದಿರ್ ಎಂಬ ದುಂಡನೆ ಮತ್ತು ಗರ್ಭಾವಸ್ಥೆ ನೆನಪಿಸುವ ಹೊಟ್ಟೆಯ ವ್ಯಕ್ತಿ ಅಲ್ಲಿಯ ಔಷಧ ವಿತರಕ. ತುಂಬ ಸರಳ ಮತ್ತು ಅತಿ ವಿನಯವಂತ – ಹಾಗಂತ ಧೂರ್ತ ಲಕ್ಷಣದವನಲ್ಲ. “ಅತೀ ವಿನಯಂ ಧೂರ್ತ ಲಕ್ಷಣಂ” ಎಂಬಂತಹ ನಾಣ್ಣುಡಿಗಳಿಗೂ ವಿನಾಯಿತಿ ಇದ್ದ ಹಾಗೆ. ಈತನಲ್ಲಿ ನಾನು ಆಗಾಗ ಕೆಲವು ವಿಷಯ ಹಂಚಿಕೊಳ್ಳುವ ವಾಡಿಕೆ ಇತ್ತು. ನಮ್ಮ ಇಲಾಖೆಯ ಸರ್ಕಾರಿ ಕೆಲಸ ಅಲ್ಲದೆ, ಪ್ರತ್ಯೇಕ ಒಂದು ಔಷಧಾಲಯವನ್ನೂ ಇವನು ಖಾಸಗಿಯಾಗಿ ನಡೆಸುತ್ತಿದ್ದ. ಆ ದಿನ ಸಹ ಅಬ್ದುಲ್ ಖಾದಿರ್ ಹತ್ತಿರ ನಡೆದಿದ್ದ ಎಲ್ಲವನ್ನೂ ತಿಳಿಸಿ, ಬಹುಶಃ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಂಡಿಯಾಕ್ಕೆ ವಾಪಸ್ಸು ಹೋಗುವ ಮನಸ್ಸಿದೆ ಎಂದು ಹೇಳಿದೆ. ಅದಕ್ಕವನು, “ಹಣ ಸಾಲದಿದ್ದರೆ ಸಂಜೆಯ ಹೊತ್ತು ನನ್ನ ಔಷಧಾಲಯದಲ್ಲಿ ಕನ್ಸಲ್ಟೇಶನ್ ಆರಂಭಿಸಿ. ನನ್ನದೇ ಕಾರು ಕಳಿಸುವೆ. ಅಲ್ಲಿ ಬಂದ ಹಣ ಪೂರ್ತಿ ನೀವೇ ಇಟ್ಟುಕೊಳ್ಳಿ” ಎಂದು ಹೇಳಿ, “ಆದರೆ ನಮ್ಮ ದೇಶ ಬಿಡುವ ಮಾತು ಬೇಡ. ನಾನೂ ಬೇರೆ ಕಡೆ ಪ್ರಯತ್ನ ಮಾಡುವೆ” ಎಂದ. ನನಗೆ ಅಂದು ಆತನ ಮೇಲಿನ ಗೌರವ ಮೊದಲಿಗಿಂತ ಹೆಚ್ಚಾಯಿತು. ತಕ್ಷಣ ಒಪ್ಪಿದೆ. ಆಕಾಶದಿಂದ ಬೀಳುವ ಒಬ್ಬ ವ್ಯಕ್ತಿಗೆ ಆತನಲ್ಲಿ ಇಲ್ಲದ ಪ್ಯಾರಾಶೂಟ್ ಇದ್ದಕ್ಕಿದ್ದಂತೆ ತೆರೆದುಕೊಂಡು ಹಿಡಿದಂತೆ!
ಅದಾಗಲೇ ಗುರುವಾರವಾದ್ದರಿಂದ, ವಾರದ ರಜಾದಿನ ಶುಕ್ರವಾರ ಬಿಟ್ಟು ಶನಿವಾರದಿಂದ ನನ್ನ ಫಾರ್ಮಸಿಗೆ ಬನ್ನಿ, ಎಂದು ಅಬ್ದುಲ್ ಖಾದಿರ್ ತಾನೇ ಹೇಳಿ ಹೋಗಿದ್ದ. ಮನೆಯಲ್ಲಿ ವಿಷಯ ವರದಿ ಮಾಡಿ, ಚರ್ಚಿಸಿ, ಹಸಿರು ನಿಶಾನೆ ಪಡೆದದ್ದಾಯಿತು. ಪ್ರತಿ ಶುಕ್ರವಾರ ವಾರಕ್ಕೆ ಬೇಕಾಗುವ ಎಲ್ಲ ಸಾಮಾನು ಸರಂಜಾಮು ತರುವ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ, ಆ ದಿನ ಬೇರೆ ಯಾವ ಕೆಲಸಕ್ಕೂ ನಾಲಾಯಕ್ಕು ಅನಿಸುವಷ್ಟು, ಮೊಗದಿಶು ಕರಾವಳಿ ಬಿಸಿಲಿಂದ, ಮತ್ತದು ಉಕ್ಕಿಸುವ ಯಥೇಚ್ಛ ಬೆವರಿನಿಂದ ಹೈರಾಣಾಗಿ, ಮಧ್ಯಾಹ್ನ ಊಟದ ನಂತರ ಮಲಗುವುದೇ ರೂಢಿ. ಹಾಗಂತ ಬೇರೆ ದಿನಗಳಲ್ಲಿ ಮಧ್ಯಾಹ್ನದ ಹೊತ್ತು ಪಾದರಸದ ಥರ ಹರಿದಾಡುತ್ತೇವೆ ಎಂದಲ್ಲ. ಪ್ರತಿ ಮಧ್ಯಾಹ್ನ ಹಾಗೆ ಅಲ್ಲಿ ನಿದ್ದೆಗೆ ತೊಡಗಿ, ಅದು ಕೆಟ್ಟ ಹವ್ಯಾಸವಾಗಿ, ಇಲ್ಲೂ ಮಧ್ಯಾಹ್ನದ ಹೊತ್ತು ಕಣ್ಣು ಉಯ್ಯಾಲೆ!
ಶನಿವಾರ ಸಂಜೆ ನಾಲ್ಕೂವರೆಗೆ ಸರಿಯಾಗಿ, ಅಬ್ದುಲ್ ಖಾದಿರ್ ಕಾರಿನ ಹಾರನ್ನು ಉಲಿಯಿತು. ಹೇಗಾದರು ಇರಲೆಂದು ಕಮಲ ಕೊಟ್ಟ ಟೀ ಇದ್ದ ಫ್ಲಾಸ್ಕಿನ ಬೆಲ್ಟನ್ನು ಹೆಗಲಿಗೇರಿಸಿ, ಸ್ಟೆತ್ ಮತ್ತು ಟಾರ್ಚ್ ಮುಂತಾದ ವೈದ್ಯಕೀಯ ಪರಿಕರಣಗಳ ಚೀಲವನ್ನೂ ಹಿಡಿದು ಕಾರು ಏರಿದೆ. ಹೋಗುತ್ತಾ ಬರುತ್ತಾ ಒಟ್ಟು ಹತ್ತು ಕಿಲೋಮೀಟರಿನ ದಾರಿ. ಮೊದಲ ದಿನ ಇನ್ನೂ ಪ್ರಚಾರ ಇಲ್ಲದೆ ಬೆರಳ ಎಣಿಕೆಯಷ್ಟು ರೋಗಿಗಳು ಬಂದರು; ಬಹುಶಃ ಔಷಧ ಕೇಳಿ ಬಂದಿದ್ದ ಒಬ್ಬಿಬ್ಬರು, ವೈದ್ಯರೂ ಇದ್ದಾರೆ ಎಂದು ಗೊತ್ತಾಗಿ ಒಳಗೆ ಬಂದವರು ಅನಿಸುತ್ತೆ. ಅಲ್ಲದೆ, ಬಿಳಿ ಬಟ್ಟೆಯ ಮೇಲೆ “ಲಾ ತಾಲಿಂತ ದಖ್ತರ್ಕಾ ಹಿಂದಿಗಾ” ಎಂದು ಬರೆದು ಹೊರಗೆ ಗೋಡೆಗೆ ನೇತು ಹಾಕಿದ್ದು ನೋಡಿದ್ದೆ. ಅಂದರೆ, “ಕನ್ಸಲ್ಟೇಶನ್ ಇಂಡಿಯನ್ ಡಾಕ್ಟರ್” ಎಂದು. ಸರಿಯಾಗಿ ಎಂಟು ಘಂಟೆ ಹೊತ್ತಿಗೆ ವಾಪಸ್ಸು ಮನೆಗೆ ಬಿಟ್ಟು ಹೋದ ಡ್ರೈವರ್ ರಹೀಂ.
ಕ್ರಮೇಣ ಒಬ್ಬರಿಂದೊಬ್ಬರಿಗೆ ಬಾಯಿ ಮಾತಲ್ಲೇ ಪ್ರಚಾರವಾಗಿ, ಅಲ್ಲಿ ಕೂಡ ರೋಗಿಗಳ ಸಾಂದ್ರತೆ ಹೆಚ್ಚಾಗತೊಡಗಿತ್ತು.
ಒಂದು ದಿನ ಒಬ್ಬ ಮಿಲಿಟರಿ ಅಧಿಕಾರಿ, ತನ್ನ ಸಮವಸ್ತ್ರದಲ್ಲಿ ಅಂಗಡಿ ಹೊರಗೆ ಅಬ್ದುಲ್ ಖಾದಿರ್ ಸಂಗಡ ಮಾತನಾಡುತ್ತಾ ನಿಂತಿದ್ದು ಕಾಣಿಸಿತು. ಫಾರ್ಮಸಿಯ ಬಲಕ್ಕೆ ಗೋಡೆಗೆ ತಾಕಿದಂತೆ ನನ್ನ ಕೊಠಡಿ ಪ್ಲೈವುಡ್ ನಲ್ಲಿ ಮಾಡಲಾಗಿತ್ತು. ಒಂದು ತೆಳು ಪರದೆ ಬಾಗಿಲನ್ನು ಪೂರ್ತಿ ಮುಚ್ಚದೆ ಗಾಳಿಯಲ್ಲಿ ‘ಹೋರಾಡುತ್ತಿತ್ತು’. ಹಾಗಾಗಿ ಹೊರಗೆ ಎಲ್ಲವೂ ಚೆನ್ನಾಗಿಯೇ ಕಾಣುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ನನ್ನನ್ನು ಕರೆದು, ಆ ಅಧಿಕಾರಿಯನ್ನು “ಇಸಗ (ಈತ), ಕರ್ನಲ್ ಅಬ್ಷಿರ್” ಎಂದು ಪರಿಚಯಿಸಿ, “ಅವರ ಮನೆಗೆ ಹೋಗಿ ಬರಲಾದೀತೆ, ತಂದೆಗೆ ಕಾಯಿಲೆಯಂತೆ” ಎಂದು ಅಬ್ದುಲ್ ಕಾದಿರ್ ಕೇಳಿದ. ನಾನು ಒಪ್ಪಿ ಹೊರಟೆ.
ಅದೊಂದು ದೊಡ್ಡ ಬಂಗಲೆ. ಬಹುಶಃ ಎಕರೆಯಷ್ಟು ವಿಶಾಲ ನೆಲದ ಮಧ್ಯೆ ನೆಲೆಸಿತ್ತು. ಒಳಗೆ ಐಶ್ವರ್ಯದ ಎಲ್ಲ ಪುರಾವೆಗಳೂ ಕಣ್ಣಿಗೆ ರಾಚುವ ಹಾಗಿದ್ದವು. ಒಬ್ಬ ದಢೂತಿ ಹೆಂಗಸು ಸೋಫಾ ಮೇಲೆ ಕಾಲಿನ ಮೇಲೆ ಕಾಲಿಟ್ಟು ಟಿವಿ ಎದುರು ಕೂತು ಆರಾಮ ನೋಡುತ್ತಿದ್ದಳು. ಕರ್ನಲ್ ಮಡದಿ ಇರಬಹುದು ಅನ್ನಿಸಿತು. ಆ ಹಜಾರದಲ್ಲಿ, ಅಧ್ಯಕ್ಷ ಸೈಯ್ಯದ್ ಬರ್ರೆಯ ದೊಡ್ಡದೊಂದು ಫೋಟೋ ರಾರಾಜಿಸಿತ್ತು. ಅದನ್ನು ನೋಡಿದ ನನಗೆ ಈತ ಖಂಡಿತ ಅಧ್ಯಕ್ಷನ ಮಾರೇಹಾನ್ ಪಂಗಡಕ್ಕೆ ಸೇರಿದವ ಅನ್ನಿಸಿತು. ಕರ್ನಲ್ ತಾನೇ ಒಳ ಹೋಗುತ್ತಾ, “ಹಯ್ಯೆ, ಆಬ ಸೇ ವಾಯ್” (ಅಪ್ಪ ಹೇಗಿದ್ದಾರೆ) ಎಂದು ಆಕೆಯನ್ನು ಕೇಳಿಯೂ, ಉತ್ತರಕ್ಕೆ ನಿಲ್ಲದೆ, ನನ್ನನ್ನು ಒಂದು ವಿಸ್ತಾರವಾದ ಬೆಡ್ ರೂಮಿನೊಳಕ್ಕೆ ಕರೆದೊಯ್ದ. ಭಾರಿ ಮಂಚದಲ್ಲಿ ಒಬ್ಬ ವಯೋವೃದ್ಧರು ನರಳುತ್ತಾ ಕಣ್ಣು ಮುಚ್ಚಿದ್ದರು. ಕರ್ನಲ್ ಅವರನ್ನು ಏಳಿಸಿ, “ದತೋರೆ ವಾಯ್” (ಡಾಕ್ಟರ್), ಎಂದನು. ಸೋಮಾಲಿ ಭಾಷೆಯಲ್ಲಿ ಹೆಚ್ಚೂಕಮ್ಮಿ ಎಲ್ಲದರ ಜೊತೆಗೆ ‘ವಾಯ್’ ಎಂದು ಸೇರಿಸುತ್ತಾರೆ. ಹೇಗಿದ್ದೀರಾ ಅನ್ನಲೂ ಸಹ” ಸೇ ವಾಯ್” ಎಂದು. ಬಹುಶಃ ಅದು ಆ ಭಾಷೆಯ ಸೊಗಸು.
ಆ ವೃದ್ಧರಿಗೆ ಜ್ವರ, ಕೆಮ್ಮು. ಪರೀಕ್ಷಿಸಿ ಔಷಧ ಬರೆದುಕೊಟ್ಟೆ. ಕರ್ನಲ್ ಬಲವಂತದಿಂದ ನನಗೆ ಬ್ಲ್ಯಾಕ್ ಟೀ ಕುಡಿಸಿದ. ಅಲ್ಲೇ ನನ್ನ ಫೀಸ್ ಸಹ ಕೊಟ್ಟು ವಾಪಸ್ಸು ಮತ್ತೆ ತನ್ನ ಬೆಂಝ್ (Benz) ಕಾರಿನಲ್ಲಿ ಡ್ರಾಪ್ ಮಾಡಿದ. ನಂತರ ಅಬ್ದುಲ್ ಖಾದಿರ್ ಹೇಳಿದ್ದು, ಇಬ್ಬರೂ ಶಾಲೆಯಿಂದ ಸಹಪಾಠಿಗಳು ಮತ್ತು, ಆತ ಮಾರೇಹಾನ್ ಆದರೂ ಸಹ, ಬಹಳ ಆತ್ಮೀಯ ಸ್ನೇಹಿತ ಎಂದು. ಹಾಗಾಗಿ ಕರ್ನಲ್ ಆಗಾಗ ಫಾರ್ಮಸಿ ಕಡೆ ಬಂದು ತನ್ನ ಗೆಳೆಯನೊಡನೆ ಮಾತನಾಡಿ ಹೋಗುತ್ತಿದ್ದ.
ಒಂದು ದಿನ ಅಬ್ದುಲ್ ಖಾದಿರ್ ನನ್ನ ಕೆಲಸದ ನಂತರ, ಡ್ರೈವರ್ ಬದಲಿಗೆ ತಾನೇ ಮನೆಯತ್ತ ಬಿಡಲು ಹೊರಟ. ಆದರೆ, ಹೋಗುವಾಗ ಬೇರೆ ದಾರಿ ಹಿಡಿದು, ಈಗ ಆ ದಿನ ಪರಿಚಯ ಮಾಡಿದ ಕರ್ನಲ್ ಅಬ್ಷೀರ್ ಮನೆಗೆ ಸ್ವಲ್ಪ ಹೊತ್ತು ಹೋಗೋಣ ಎಂದ.
ಮನೆಯೊಳಗೆ ಕೂತು, ಅವರಿಬ್ಬರ ಮಾತಿನ ವಿನಿಮಯವಾದ ಮೇಲೆ, ನನ್ನತ್ತ ತಿರುಗಿದ ಅಬ್ದುಲ್ ಖಾದಿರ್, “ಕರ್ನಲ್ ರವರ ಅರೆ ಸೈನಿಕ ಪಡೆಗೆ ಒಬ್ಬ ಡಾಕ್ಟರ್ ಬೇಕಂತೆ. ಉತ್ತಮ ಕಾಂಟ್ರ್ಯಾಕ್ಟ್ ಕೊಟ್ಟರೆ ನಿಮಗೆ ಆದೀತೆ?” ಎಂದು ಕೇಳಿದ. ನಾನು ಒಳಗೆ ಖುಷಿಯಾದರೂ, ತಕ್ಷಣಕ್ಕೆ “ಸ್ವಲ್ಪ ಯೋಚನೆ ಮಾಡಲು ಸಮಯ ಬೇಕು” ಎಂದೆ. ಆಗ ಕರ್ನಲ್ ತಾನೇ “ಓಕೆ ಟೇಕ್ ಸಮ್ ಟೈಂ” ಎಂದ. ಮತ್ತೆ ಬ್ಲ್ಯಾಕ್ ಟೀ ಆದ ನಂತರ, ವಿದಾಯ ಹೇಳಿ ಹೊರಟೆವು.
ಕರ್ನಲ್ ಅಬ್ಷೀರ್ ಮನೆಯಲ್ಲಿ ಕಂಡ ದೃಶ್ಯ, ಅಲ್ಲಿ ಟಿವಿ ಮುಂದೆ ಆರಾಮ, ಯಾರ / ಯಾವ ತಂಟೆಯೂ ಇಲ್ಲದ ಹಾಗೆ, ಶ್ರೀಮಂತ ಧಾಟಿಯಲ್ಲಿ ಕುಳಿತಿದ್ದ ಆ ಮಹಿಳೆ (ಬಹುಶಃ ಆತನ ಹೆಂಡತಿ), ಕೇವಲ ಒಬ್ಬಳ ಉದಾಹರಣೆ. ಆ ದೇಶದಲ್ಲಿ ಕೆಲವು ಐಶ್ವರ್ಯವಂತ ಸಂಸಾರಗಳೇ ಹಾಗೆ ಅನಿಸುತ್ತದೆ. ಎಲ್ಲದಕ್ಕೂ ಕೈಗೊಬ್ಬ, ಕಾಲಿಗೊಬ್ಬ ಎಂಬಂತೆ ಕೆಲಸಗಾರರು ಇರುವುದರಿಂದ, ಎಲ್ಲರದೂ ಒಂದು ರೀತಿಯ ಕದಲದ ಮನಸ್ಸು ಮತ್ತು ದೇಹ. ಮನೆಯ ಒಡೆಯನಿಗೆ ಏನು ಬೇಕೋ ಅದು ಹೆಂಡತಿಯ ಜವಾಬ್ದಾರಿ ಅಲ್ಲವೇನೋ ಅನಿಸುವ ಹಾಗೆ. ಅಂತೆಯೇ ಆ ಮಹಿಳೆಯರದ್ದೂ ಸಹ. ಅದೊಂದು ಎಲ್ಲ ರೀತಿಯಲ್ಲೂ ಲಿಬರಲ್ ಅಥವಾ ಮುಕ್ತಗೊಂಡ ಸಂಸಾರವೇನೋ ಎಂಬ ಶಂಕೆ ಕಾಡುವವರೆಗೆ. ಹಾಗಂತ, ನಾನು ಮೊದಲೇ ಒಂದು ಕಡೆ ಹೇಳಿರುವ ಹಾಗೆ, ಆಳಾಗಲೀ, ಕೆಲಸದವರು ಅಥವ ಕಛೇರಿಗಳಲ್ಲಿನ ಅಧೀನ ಕಾರಕೂನರಾಗಲೀ ಅಲ್ಲಿ ಯಾರೂ ಗುಲಾಮ ಮನಸ್ಥಿತಿಯವರಲ್ಲ. ಅವರೂ ಸಹ ಒಂದಲ್ಲ ಒಂದು ರೀತಿ ಲಿಬರೇಟೆಡ್ ಜನ. ಯಾರೂ ಯಾರ ಮೇಲೂ ಸವಾರಿ ಮಾಡುವಂತಿಲ್ಲ! ಕರ್ನಲ್ ಮನೆಯ ಡ್ರೈವರ್ ಅಥವಾ ಅಡುಗೆ ಮಾಡುವವಳು / ವವನು, ಇತರ ಕೆಲಸಗಾರ ಎಲ್ಲರೂ ಆತನನ್ನು ಸಂಬೋಧಿಸುವುದು, ಅಬ್ಷೀರ್ ಎಂಬ ಹೆಸರಿನಲ್ಲೇ; ಅಂತೆಯೇ ಆತನ ಮಡದಿ ಸಹ ಎಲ್ಲರಿಗೂ, ಆಕೆಯ ಹೆಸರಾದ ‘ಫೌಸಿಯೋ’ ಎಂತಲೇ. ಅದು ಆ ಸಮಾಜದ ಅನನ್ಯತೆ ಎಂದೇ ಹೇಳಬಹುದು. ಆದರೂ ಆ ಮುಕ್ತ ಸಮಾಜವನ್ನು ಆಳುವವರು ಸರ್ವಾಧಿಕಾರದ ಮಿಲಿಟರಿ ಮಂದಿ ಎಂಬುದೊಂದು ವಿಪರ್ಯಾಸ!
ಅದೇ ರೀತಿಯಲ್ಲಿ ತಪಾಸಣೆಗೆಂದು ಆಗಾಗ ಮನೆಗಳಿಗೆ ಹೋಗುತ್ತಿದ್ದ ನನಗೆ, ಗೆಳೆಯ ಅಬ್ದೋ ತಂದೆಯ ಮನೆಯ ಹಾಗೇ ಅಲ್ಲದೆ, ಇನ್ನೂ ಕೆಳ ಹಂತದ ಮನೆಗಳನ್ನೂ, ಈ ಕರ್ನಲ್ ಅಬ್ಷೀರ್ ಮನೆಯ ಹಾಗೆ ಐಷಾರಾಮಿ ಬಂಗಲೆಗಳನ್ನೂ ಕಂಡು ಕಣ್ತುಂಬಿಸಿಕೊಂಡಿದ್ದೇನೆ. ಆಡಳಿತ ಹಿಡಿದ ಮಾರೇಹಾನ್ ಪಂಗಡದಲ್ಲೆ ಇವು ಹೆಚ್ಚು. ಎಲ್ಲರಿಗಾಗಿ ಮತ್ತು ಸಮಾನತೆಗಾಗಿ ಎಂಬ ಕಟ್ಟುನಿಟ್ಟು ವಾದಗಳನ್ನೇ ಪ್ರತಿಪಾದಿಸಿಕೊಂಡು, ‘ಕ್ರಾಂತಿ’, ‘ಬಿಡುಗಡೆ’ ಮುಂತಾದ ಕಣ್ಣು ಮಂಜಾಗಿಸುವ ಧ್ಯೇಯೋಕ್ತಿಗಳಿಂದ, ಹಿಂದಿನ ಆಳುವ ಸರಕಾರ ಬೀಳಿಸಿ ಆಡಳಿತವನ್ನು ತಂತಮ್ಮ ಮುಷ್ಟಿಗೆ ತೆಗೆದುಕೊಂಡಂತಹವರ ಕಥೆ ಇದೇ ಇರಬೇಕು. ಮಾನವ ಇತಿಹಾಸದ ಕರಾಳ ಪುಸ್ತಕದ ಪುಟಗಳು!
ಹೀಗೆಯೆ ಒಮ್ಮೆ ಇನ್ನೊಬ್ಬ ಉನ್ನತ ಅಧಿಕಾರಿಯ ಮನೆಗೆ ಹೋಗಿದ್ದೆ. ಆತನ ಹೆಸರು ಮತ್ತು ಯಾವ ಹುದ್ದೆ ಎಂದು ಸದ್ಯ ನೆನಪಿಲ್ಲ. ಅದು ಇಲ್ಲಿ ಮುಖ್ಯವೂ ಅಲ್ಲ. ಆತನ ಹೆಂಡತಿಯ ತಂಗಿಗೆ ಜ್ವರ. ಹಜಾರದಲ್ಲಿ ನನ್ನನ್ನು ಕೂರಿಸಿ, ಅಲ್ಲಿ ಕೂತು ಟಿವಿ ನೋಡುತ್ತಿದ್ದ ತನ್ನ ಪತ್ನಿಗೆ “ದತೋರೆ ವಾಯ್” ಎಂದು ಹೇಳಿ ಒಳನಡೆದಿದ್ದ. ನಾನು ಟಿವಿ ಕಡೆ ಸುಮ್ಮನೆ ನೋಡಿದೆ. ಆಶ್ಚರ್ಯ ಕಾದಿತ್ತು. “ಡೆತ್ ಆಫ್ ಎ ಪ್ರಿನ್ಸೆಸ್” ಎಂಬ ಸಿನೆಮಾ ನೋಡುತ್ತಿದ್ದರು ಆ ಮಹಿಳೆ. ಆ ಸಿನೆಮಾ ನನಗೆ ತಿಳಿದಿದ್ದ ಪ್ರಕಾರ, ಕೆಲವು ಮುಸ್ಲಿಂ ರಾಷ್ಟ್ರಗಳಂತೆ, ಸೋಮಾಲಿಯಾ ದೇಶದಲ್ಲೂ ನಿಷೇಧಿಸಲಾಗಿತ್ತು. ಆದರೆ ಮಾರೆಹಾನ್ ಪಂಗಡದ ಆಳುವ ಅಧ್ಯಕ್ಷರ ಜಾತಿಯ ಒಬ್ಬ ಅಧಿಕಾರಿಯ ಹೆಂಡತಿ, ಮನೆಯಲ್ಲಿ ಕೂತು ಕುತೂಹಲದಿಂದ ನೋಡುತ್ತಾ ವಿಶ್ರಮಿಸುತ್ತಿದ್ದಳು!
ಈಗ ನನ್ನ ಕುತೂಹಲ ಹೆಚ್ಚಾಯಿತು. ಏಕೆಂದರೆ ಆ ಸಿನೆಮಾ ಬಗ್ಗೆ “ನ್ಯೂಸ್ ವೀಕ್” ನಂತಹ ಯಾವುದೋ ಒಂದು ನಿಯತಕಾಲಿಕದಲ್ಲಿ ಓದಿ ತಿಳಿದಿದ್ದೆ. ರಜೆಯಲ್ಲಿ ಭಾರತಕ್ಕೆ ಹೋದಾಗ ನೋಡೋಣ ಎಂಬ ಮನಸ್ಸಿತ್ತು. ರೋಗಿಯನ್ನು ಪರೀಕ್ಷೆ ಮಾಡಿ, ರೂಮಿಂದ ಹೊರಡುವ ಮುನ್ನ, ಕೇಳಿ ನೋಡೋಣ ಎನ್ನಿಸಿ, ಆ ಅಧಿಕಾರಿಗೆ “ನಿಮ್ಮ ಮಡದಿ ನೋಡುತ್ತಿರುವ ಆ ಸಿನೆಮಾವನ್ನು ಒಂದೇ ಒಂದು ದಿನದ ಮಟ್ಟಿಗೆ, ನನಗೆ ಕೊಡಿಸುವಿರಾ?” ಎಂದೆ. ಅದು ಅಸಾಧ್ಯ ಎಂದು ತಿಳಿದು ಒಂದು ದಾರ ಕಟ್ಟಿದೆ. “ವೈ ಅನದರ್ ಡೇ; ಟೇಕ್ ಇಟ್ ನೌ!” ಎಂದ ಆ ಮಹಾರಾಯ. ನಾನು “ನಿಮ್ಮ ಮಡದಿ ನೋಡುತ್ತಿದ್ದಾರೆ, ಬೇಡ” ಎಂದೆ. ಅದಕ್ಕೆ ಆತ, ಅವರು ಇನ್ನೊಂದು ದಿನ ನೋಡುವರು. ಆ ಕ್ಯಾಸೆಟ್ ನಮ್ಮದೇ, ಡೋಂಟ್ ವರಿ ಎಂದು, ತನ್ನ ಮಡದಿಗೆ ಇಟ್ಯಾಲಿಯನ್ ಭಾಷೆಯಲ್ಲಿ ಏನೋ ಹೇಳಿದ. ಆಕೆ, ಎದ್ದವಳೇ ತಾನೇ ಖುಷಿಯಿಂದ ಅದನ್ನು ನನ್ನ ಕೈಲೇ ಇಟ್ಟು, “ನಾನು ಇನ್ನೊಮ್ಮೆ ನೋಡುವೆ” ಎನ್ನುತ್ತಾ ನಕ್ಕಳು. ನನಗೆ ಮುಜುಗರ ಆದರೂ, ಅಂತಹ ಒಂದು ಸಿನಿಮಾ ನನ್ನ ಮಡದಿಗೂ ತೋರಿಸಬಹುದಲ್ಲ ಎಂದುಕೊಂಡು ಎಲ್ಲರಿಗೂ ಥ್ಯಾಂಕ್ಸ್ ಹೇಳಿ ಗಾಡಿ ಹತ್ತಿದೆ.
ಮುಂದುವರಿಯುವುದು….
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊ.ನಂ.9844645459