–ಇಂಥ ಸಾವು ನ್ಯಾಯವೇ?–
“ಖಂಡಿತ ಕೂಡದು” ಎಂಬ ಕಾನೂನು ಎಲ್ಲಿ, ಯಾವ ದೇಶದಲ್ಲಿ ಬಂದರೂ ಅದು ಬಹಳ ಬೇಗ ತನ್ನ ಸಾವನ್ನಪ್ಪುತ್ತದೆ ಅಥವ ಅತಿಕ್ರಮಣವಾಗುತ್ತದೆ! ಅದು ಮಾನವ ಸಹಜ ಕುತೂಹಲವನ್ನು ಕೆದಕುವುದರಿಂದ, ಅದರ ಉಲ್ಲಂಘನೆಯ ದಾರಿಯಲ್ಲಿ, ಅದು ಎಷ್ಟೇ ಕಠಿಣವಿರಲಿ, ಪ್ರತಿಯೊಬ್ಬರೂ ತುದಿಗಾಲಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ. ಒಂದು ಮಗು ಸಹ ಬೇಡ ಎಂದ ಕೂಡಲೇ ಅದಕ್ಕೇ ಕೈ ಇಡುತ್ತದೆ. ಅಂತೆಯೇ ಈ “ಡೆತ್ ಆಫ್ ಎ ಪ್ರಿನ್ಸೆಸ್” ಕಥೆ ಕೂಡ. ಸೋಮಾಲಿಯಾ ದೇಶಕ್ಕೆ ಸೌದಿ ದೇಶದಿಂದ ಸಾಕಷ್ಟು ಹಣಕಾಸಿನ ನೆರವು ದೊರೆಯುತ್ತಿತ್ತು. ಹಾಗಿದ್ದೂ ಸಹ, ಆ ದೇಶದ ಅಧ್ಯಕ್ಷರ ಪಂಗಡದ ಜನರ ಮನೆಯಲ್ಲೇ ಏನನ್ನು ನೋಡಕೂಡದೋ ಅದರ ಉಲ್ಲಂಘನೆಯೇ ಆಗಿ, ಅದನ್ನೇ ನೋಡುತ್ತಿದ್ದ ಸತ್ಯ ವಿಪರ್ಯಾಸಕ್ಕೆ ನಿದರ್ಶನ ಅಲ್ಲವೇ? ಇದು ಕೇವಲ ಒಂದು ದೇಶಕ್ಕೆ ಮೀಸಲಾದ ದೃಷ್ಟಾಂತ ಖಂಡಿತ ಅಲ್ಲ. ಆದರೆ, ಅಂತಹ ಕಾನೂನು ಕಟ್ಟಳೆಗಳೆಲ್ಲ ಸಾಮಾನ್ಯ ಜನರಿಗಷ್ಟೆ ಅನ್ನುವುದೂ ಕಟುಸತ್ಯ. ಬೆಟ್ಟದಮೇಲೆ ಹತ್ತಿ ಕೂತವರು ತಾನೆ ವಿಹಂಗಮನೋಟ ನೋಡುವ ‘ಪುಣ್ಯವಂತರು’.
ಅಂತಹ ಪುಣ್ಯವಂತರ ಲೆಕ್ಕದಲ್ಲಿ ಆ ಕ್ಷಣಕ್ಕೆ, ಆ ಕ್ಯಾಸೆಟ್ ವಿಷಯದಲ್ಲಿ ನಾನೂ ಒಬ್ಬ. ಅದನ್ನು ನೋಡಿ ಖುಷಿ ಮತ್ತು ವಿಶಾದ ಎರಡನ್ನೂ ಅನುಭವಿಸಿದವನು ಎಂದರೇ ಸರಿ. ಅಂತೂ ಮನೆಗೆ ತಂದು ನನ್ನ ಮಡದಿ, ಕಮಲಳಿಗೆ ರಾತ್ರಿ ಮಕ್ಕಳು ಮಲಗಿದ ನಂತರ ನೋಡೋಣ ಎಂದೆ.
‘ಡೆತ್ ಆಫ್ ಎ ಪ್ರಿನ್ಸೆಸ್’ ಎಂಬುದು ಯುನೈಟೆಡ್ ಕಿಂಗ್ಡಮ್ನಲ್ಲಿ 1980 ರಲ್ಲಿ ತಯಾರಿಸಲಾದ ಒಂದು ಡಾಕ್ಯೂ-ಡ್ರಾಮ (ನಾಟಕೀಯ ಅಥವ ಸಿನೆಮೀಯವಾದ ಸಾಕ್ಷ್ಯಚಿತ್ರ). ಅದರ ಕಥೆ ಮತ್ತು ನಿರ್ದೇಶನದ ಹೊಣೆ ಆಂಟೊನಿ ಥಾಮಸ್ ಅವರದ್ದು. ಪಾಲ್ ಫ್ರೀಮನ್, ಸಾಸನ್ ಬಾದ್ರ್, ಜೂಡಿ ಪರ್ಫಿಟ್ ಮುಂತಾದವರ ತಾರಾಗಣವಿತ್ತು. ಇಂಗ್ಲೀಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ತಯಾರಿಸಲಾಗಿತ್ತು. ಮಿಷಾಲ್ ಎಂಬ ಹೆಸರಿನ ಸೌದಿಯ ಕಿರಿವಯಸ್ಸಿನ ರಾಜಕುಮಾರಿ ಹಾಗೂ ಅವಳ ಪ್ರೇಮಿಯನ್ನು ವ್ಯಭಿಚಾರದ ದೂರು ಹೇರಿ, ಬಹಿರಂಗವಾಗಿ ಶಿರಚ್ಛೇದಿಸಿದ ನೈಜಕಥೆ ಆಧಾರದ ಮೇಲೆ ತಯಾರಾಗಿದ್ದ ರೋಮಾಂಚಕಾರಿ ಹಾಗೂ ದುರಂತಮಯ ಚಿತ್ರವಾಗಿತ್ತು.
ಈ ರೀತಿಯ ಒಂದು ಕಥೆಯನ್ನು ಕಲ್ಪಿಸಿಕೊಳ್ಳಿ; ಒಬ್ಬ ವ್ಯಕ್ತಿಯು ಕೆಲಸ ಮುಗಿದ ನಂತರ, ತನ್ನ ಹೋಟೆಲಿನತ್ತ ತೆರಳುತ್ತಿರುತ್ತಾನೆ. ಆಗ ಆಕಸ್ಮಿಕವಾಗಿ, ಯಾರೋ ಒಬ್ಬ ಇನ್ನೊಬ್ಬನೊಡನೆ, “ಈಗ ಓರ್ವ ಮನುಶ್ಯನ ಶಿರಚ್ಛೇದ” ಮಾಡುವ ದೃಶ್ಯ ನೋಡಲು ಕರೆಯುವುದನ್ನು ಕೇಳಿಸಿಕೊಂಡು ತಾನೂ ಅತ್ತ ಹೆಜ್ಜೆ ಹಾಕುತ್ತಾನೆ. ಆದರೆ ಹಾಗೆ ಮಾತನಾಡಿಕೊಂಡ ವ್ಯಕ್ತಿಗಳಿಗೂ, ಹೋಟೆಲಿನತ್ತ ಹೆಜ್ಜೆ ಹಾಕುತ್ತಿದ್ದ ಆ ವಿದೇಶೀಯನಿಗೂ ಒಂದು ವ್ಯತ್ಯಾಸ ಇತ್ತು. ಆ ಇಪ್ಪತ್ತೈದು ವಯಸ್ಸಿನ ವಿದೇಶೀಯನ ಕೈಲಿ ಒಂದು ಇನ್ಸ್ಟಾಮ್ಯಾಟಿಕ್ ಕ್ಯಾಮರಾ ಹುದುಗಿಸಿಟ್ಟಿದ್ದ ಸಿಗರೇಟ್ ಪೆಟ್ಟಿಗೆಯಿತ್ತು! ಅದು ಖಂಡಿತ ಆ ದೇಶದಲ್ಲಿ ಅಕಸ್ಮಾತ್ ಗೊತ್ತಾದರೆ, ಅಪಾಯಕ್ಕೆ ಗುರಿಯಾಗಿಸುವಂಥ ಹುಚ್ಚು ನಡೆ ಎಂದೇ ಹೇಳಬಹುದು.
ಅಲ್ಲಿಗೆ ತಲಪಿದಾಗ ಒಂದರ ಬದಲಿಗೆ ಇಬ್ಬರ ಮರಣದಂಡನೆ ನಡೆಯುವ ಪರಿಸ್ಥಿತಿ ಕಂಡಿತು. ಆಕೆ ಹತ್ತೊಂಭತ್ತರ ಎಳೆ ವಯಸ್ಸಿನ ಒಬ್ಬ ರಾಜಕುಮಾರಿ. ಆ ದೇಶದ ಮಹಾರಾಜನ ಸೋದರ ಸಂಬಂಧಿ ಮಗಳು. ಆಕೆಯನ್ನು ಮೂರು ಬಾರಿ ಗುಂಡಿಕ್ಕಿ ಹತಗೈಯ್ಯಲಾಯಿತು. ಇನ್ನು ಆಕೆಯ ಪ್ರೇಮಿಯನ್ನು ಐದಾರು ಬಾರಿ ಖಡ್ಗದಲ್ಲಿ ಹೊಡೆದು ಅವನ ಶಿರವನ್ನು ಕತ್ತರಿಸಲಾಯಿತು.
ಹಾಗೆ ಆ ಶಿರಚ್ಛೇದನಗಳನ್ನು ತನ್ನ ಕ್ಯಾಮರಾದಲ್ಲಿ ಇಳಿಸಿಕೊಂಡಿದ್ದ ಆ ವಿದೇಶೀಯ ಮನುಷ್ಯನ ಹೆಸರು ಮಿಲ್ನರ್. ಆ ಫೋಟೋ ತೆಗೆದು ಆರು ತಿಂಗಳ ನಂತರ ಮಿಲ್ನರ್ ಫೋಟೋ ಬ್ರಿಟಿಷ್ ಪತ್ರಿಕೆ, “ಡೈಲಿ ಎಕ್ಸ್ ಪ್ರೆಸ್” ನಲ್ಲಿ ಆತನ ಸಾಕ್ಷ್ಯ ಸಹಿತ ಪ್ರಕಟವಾಗಿತ್ತು! ಅದು, ಆಗ 37 ವರ್ಷ ವಯಸ್ಸಿನ, ಬ್ರಿಟಿಷ್ ಸಿನೆಮಾ ತಯಾರಕನಾದ ಆಂಟೊನಿ ಥಾಮಸ್ ಗಮನಕ್ಕೆ ಬಂದಿತ್ತು. ಅದಕ್ಕೆ ಮುನ್ನ ಆ ಕಥೆ ಹೊರಬಂದಿದ್ದ ರೀತಿ ಥಾಮಸ್ ತಿಳಿದದ್ದು ಹೀಗೆ – ಆ ರಾಜಕುಮಾರಿ ಜನಿಸಿದ್ದ ದೇಶದ, ಅರಮನೆಯ ವಿಚಾರಗಳಿಗೆ ಹತ್ತಿರವಾಗಿದ್ದ ಪ್ರಭಾವಶಾಲಿ ವ್ಯಕ್ತಿಯೊಬ್ಬ ಲಂಡನ್ನಿನಲ್ಲಿ ಆಯೋಜಿಸಿದ್ದ ಒಂದು ಪಾರ್ಟಿಯಲ್ಲಿ ಭಾಗಿಯಾಗಿದ್ದ ಒಬ್ಬ ಆಹ್ವಾನಿತರು, ಥಾಮಸ್ ಅವರ ಗೆಳೆಯರಾಗಿದ್ದರು. ಅಂದಿನ ಆತಿಥ್ಯದ ಆ ರೂವಾರಿಯು ತನ್ನ ಅತಿಥಿಗಳಿಗೆ ಈ ವಿಷಯ ಹೇಳಿದ್ದಂತೆ. ‘ಆ ರಾಜಕುಮಾರಿಯು ತನಗೆ ರಾಜಮನೆತನದ ಪ್ರಕಾರ ಗಂಡು ಗೊತ್ತಾಗಿದ್ದ ಒಪ್ಪಂದವಿದ್ದೂ ಸಹ, ತನ್ನ ದೊಡ್ಡ ತಾತ ಮುಂತಾದವರೊಡನೆ, ತಾನು ಬೈರೂತ್ ನಲ್ಲಿ ಓದಲು ಒಪ್ಪಿಗೆ ಕೊಡುವಂತೆ ದುಂಬಾಲು ಬಿದ್ದಿದ್ದರಿಂದ ಅವರು ಅದಕ್ಕೆ ಒಪ್ಪಿ ಕಳಿಸಿದ್ದರು ಮತ್ತು ಅವಳ ಭವಿಷ್ಯದ ಪತಿಯು ರಾಜಾಜ್ಞೆಯಂತೆ ಅದಕ್ಕೂ ಒಪ್ಪಿದ್ದನಂತೆ. ಆದರೆ, ಒಮ್ಮೆ ಬೈರೂತ್ ತಲಪಿದಮೇಲೆ, ಆಕೆ ಅಲ್ಲಿ ತನ್ನ ದೇಶದ ರಾಯಭಾರಿಯ ಸೋದರ ಒಬ್ಬನನ್ನು ಪ್ರೇಮಿಸತೊಡಗಿದ್ದಳು. ಅಲ್ಲದೆ ಅವರಿಬ್ಬರೂ ಎಗ್ಗಿಲ್ಲದೆ ಸಾರ್ವಜನಿಕವಾಗಿಯೇ ತೋರಿಸಿಕೊಂಡಿದ್ದರಿಂದ, ಕೂಡಲೇ ಅವರನ್ನು ತಮ್ಮ ದೇಶಕ್ಕೆ ಕರೆಸಿಕೊಳ್ಳಲಾಯಿತು. ಹಾಗೆ ಬಂದ ನಂತರ ಆಕೆ ಕೋರ್ಟಿನಲ್ಲಿ ಮೂರು ಬಾರಿ ತನ್ನ ಪ್ರೇಮಿಯ ಸಂಬಂಧ ಒಪ್ಪಿಕೊಂಡಾಗ, ಅವರಿಬ್ಬರಿಗೂ ಮರಣದಂಡನೆ ವಿಧಿಸಲಾಯಿತು.
ಆ ರಾಜಕುಮಾರಿಯ ಹೆಸರೇ ಮಿಶಾಲ್ ಎಂದು ಮತ್ತು ಆ ದೇಶ ಸೌದಿ ಅರೇಬಿಯ.
ಥಾಮಸ್ ರವರಿಗೆ ಪರಿಚಯವಿದ್ದ ಅರಬ್ ಜಗತ್ತಿನ ಹೆಂಗಸರ ದನಿಯಲ್ಲಿ ಪ್ರತಿಧ್ವನಿಸಿದ್ದ ಕಥೆಯಲ್ಲಿ, ರಾಜಕುಮಾರಿಗೆ ತನ್ನ ವಂಶದೊಳಗೇ ಆಜೀವ ಕೈದಿಯ ಬದುಕ ಬಾಳುವ ಬದಲು, ಸಾವೇ ಉತ್ತಮ ಎನಿಸಿದ್ದು ಸತ್ಯ ಎಂಬುದು. ಆದರೆ ಥಾಮಸ್ ಇನ್ನೂ ಆಳವಾಗಿ ಶೋಧಿಸಿದಾಗ, ಬೈರೂತ್ ವಿಶ್ವವಿದ್ಯಾಲಯದಲ್ಲಿ ಆಕೆಯ ಹೆಸರೂ ಸಹ ಇರಲಿಲ್ಲ ಮತ್ತು ಆಕೆಗೆ ಪರಿಚಯ ಇದ್ದ ಯಾವೊಬ್ಬರನ್ನೂ ಎಷ್ಟು ಪ್ರಯತ್ನಿಸಿಯೂ ಹುಡುಕಲೂ ಆಗಲಿಲ್ಲ. ಅಷ್ಟರಮಟ್ಟಿಗೆ ಅಲ್ಲಿ ಗುಡಿಸಿ ಅಳಿಸುವ ಕೈವಾಡದ ಕರಾಮತ್ತು ಜರುಗಿತ್ತು!
ದುರಂತವೆಂದರೆ, ಥಾಮಸ್ ಇನ್ನೂ ಆಳ ಇಳಿದಾಗ, ಆ ರಾಜಮನೆತನದ ಮತ್ತೊಬ್ಬ ರಾಜಕುಮಾರಿ ಆತನನ್ನು ರಹಸ್ಯವಾಗಿ ಸಂಧಿಸಿ, ಅರಮನೆಯ ಅನೇಕ ರಾಜಕುಮಾರಿಯರು ಈ ರೀತಿಯ ಸ್ವೇಚ್ಛಾಚಾರಿಗಳಾಗಿದ್ದರೂ, ಯಾರೂ ಸಹ ಮಿಶಾಲ್ ಮಾಡಿದ ಹಾಗೆ ಪ್ರೇಮಕ್ಕೆ ಬೀಳುವ ತಪ್ಪು ಮಾಡಿಲ್ಲ ಎಂದು! ಅನೇಕ ಮಾಹಿತಿಗಳ ಪ್ರಕಾರ ಮಿಶಾಲ್ ಪ್ರೀತಿಸಿದ್ದು ಯಾರಿಗೂ ಹೆಚ್ಚು ಗೊತ್ತಿರದ, ಇಪ್ಪತ್ತರ ಹರೆಯದ ಖಾಲೇದ್ ಅಲ್ ಶಾಯೆರ್ ಎಂಬುವನನ್ನು. ಥಾಮಸ್ ಸಂಶೋಧನೆಯ ಪ್ರಕಾರ, ಮಿಶಾಲ್ ತನ್ನ ಹದಿಹರೆಯದಲ್ಲೇ ಮದುವೆಯಾಗಿದ್ದರೂ, ಈ ಶಾಯೆರ್ ಜೊತೆ ರಜೆಯಲ್ಲಿ ಲಂಡನ್ನಿನತ್ತ ಓಡಿ ಹೋಗುವ ಯೋಚನೆಯಲ್ಲಿ ಇದ್ದಳು ಎಂದು. ಹಾಗಾಗಿ, ಒಮ್ಮೆ ಮಿಶಾಲ್ ಸಮುದ್ರದಲ್ಲಿ ಮುಳುಗಿ ಸತ್ತಳೆಂಬ ಭಾವನೆ ಬರುವಂತೆ, ತನ್ನ ಕೆಲವು ಬಟ್ಟೆಗಳನ್ನು ಸಮುದ್ರಕ್ಕೆಸೆದು, ತಾನು ಹುಡುಗನ ವೇಷಧಾರಿಯಾಗಿ, ವಿಮಾನ ಏರಿ ಹಾರುವವಳಿದ್ದಳು. ಅದೇ ವಿಮಾನದಲ್ಲಿ ಅವಳ ಪ್ರೇಮಿ ಸಹ ಹೊರಡಲು ಅನುವಾಗಿದ್ದ. ಆ ಸಂದರ್ಭದಲ್ಲಿ ಅವರ ಬಂಧನ ಆಗಿತ್ತು!
ಆಂಟೊನಿ ಥಾಮಸ್ ಒಬ್ಬ ಪತ್ರಿಕೋದ್ಯಮಿಯಾಗಿದ್ದು, ಬಹಳಷ್ಟು ಸಂದರ್ಶನಗಳನ್ನು ಮಾಡಿ ತಿಳಿದ ನಂತರ, ಕುತೂಹಲದಿಂದ ಅದರ ಸತ್ಯಾಸತ್ಯತೆ ಅರಿಯಲು, ತನಗೆ ತಿಳಿದಿದ್ದ ಅನೇಕ ಅರಬ್ ಮೂಲಗಳ ಅಭಿಮತದಿಂದ ಮತ್ತು ಸಲಹೆಗಳ ಆಧಾರದಿಂದ ಅಂಥ ಚಿತ್ರ ತಯಾರಿಸಿದ. ಆದರೆ ಬ್ರಿಟನ್ನಿನ ಎಟಿವಿ ಕಾರ್ಯನಿರ್ವಾಹಕರ ಸಲಹೆ ಮೇರೆಗೆ, ಹಾಗೂ ತನ್ನದೇ ಮನದ ಇಚ್ಛೆಯಿಂದ, ಒಂದು ಸಾಕ್ಷ್ಯಚಿತ್ರದ ಬದಲು, ಅದನ್ನೇ ನಟ ನಟಿಯರ ಆರಿಸಿ ಸಿನಿಮೀಯ ಮಾಡಿ ಬಿಡುಗಡೆ ಮಾಡಿದ. ಥಾಮಸ್ ಪಾತ್ರವನ್ನು ಪಾಲ್ ನ್ಯೂಮನ್ ಅವರು ವಹಿಸಿ “ಕ್ರಿಸ್ಟೊಫರ್ ರೈಡರ್” ಎಂಬ ಹೆಸರಿನವರಾದರು. ರೋಸ್ ಮೇರಿ ಬಶ್ಚಾವ್ ಎಂಬ ಜರ್ಮನ್ ಮಹಿಳೆ ಸೌದಿ ಅರಮನೆಯಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು; ಆ ಪಾತ್ರವನ್ನು ಜೂಡಿ ಪಾರ್ಫಿಟ್ ಅವರು “ಎಲ್ಸಾ ಗ್ರೂಬರ್” ಆಗಿ ನಟಿಸಿದರು. ಈ ಎಲ್ಲ ತಾರಾಗಣದ ಮಧ್ಯೆ ಒಂದು ಅರಬ್ ಕುಟುಂಬದವರು ಮಾತ್ರ ಅಪವಾದ ಎಂಬಂತೆ ತಾವೇ ಚಿತ್ರದಲ್ಲಿ ನಟಿಸಿದ್ದರು. ಸೌದಿ ಬದಲಿಗೆ ಒಂದು ಕಾಲ್ಪನಿಕ, “ಅರೇಬಿಯ” ಎಂಬ ದೇಶ ಕಥೆಯ ಕೇಂದ್ರ ಬಿಂದುವಾಯಿತು.
ಆ ಚಿತ್ರ, 9 – 4 – 1980 ರಲ್ಲಿ ಯು.ಕೆ ಯಲ್ಲಿ ಐಟಿವಿ ಮೂಲಕ ಪ್ರಸಾರವಾಗಿ, ವಿಮರ್ಶಕರಿಂದ ಅದ್ಭುತ ಎನಿಸಿಕೊಂಡರೂ, ಸೌದಿ ಸರ್ಕಾರದ ಕೋಪಕ್ಕೆ ತುತ್ತಾದ ಎಟಿವಿ ಒಡೆತನದವರು, ಚಿತ್ರದ ಆರಂಭಕ್ಕೆ, ಈ ಕೆಳಗಿನಂತೆ ವ್ಯಾಖ್ಯಾನ ತೋರಿಸಿದ್ದರು: “ನೀವೀಗ ವೀಕ್ಷಿಸುವ ಕಾರ್ಯಕ್ರಮವು, 1976 ಮತ್ತು 1978 ರ ಅಂತರದಲ್ಲಿ, ಅರಬ್ ಜಗತ್ತಿನಲ್ಲಿ ಜರುಗಿದ ಕೆಲವು ಘಟನೆಗಳನ್ನು ಸಿನಿಮೀಯವಾಗಿ, ಮರುನಿರ್ಮಿಸಿದ್ದಾಗಿದೆ. ಮತ್ತು ಮುಸ್ಲಿಂ ಜಗತ್ತಿನ ಕಾನೂನಿನಲ್ಲಿ ಎಲ್ಲರೂ ಸಮಾನರೆಂಬುದನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣನೆ ಮಾಡಲಾಗಿದೆ” ಎಂದು.
ಇಷ್ಟೇ ಅಲ್ಲದೆ, ಸೌದಿಯ ರಿಯಾಧ್ ರಾಯಭಾರಿ ಕಛೇರಿಯ ಜೇಮ್ಸ್ ಕ್ರೇಗ್ ಎಂಬ ಬ್ರಿಟಿಷ್ ರಾಯಭಾರಿಗೆ ದೇಶ ತೊರೆಯಲು ತಿಳಿಸಲಾಯಿತು ಮತ್ತು ಬ್ರಿಟಿಷ್ ವ್ಯಾಪಾರಿಗಳ ವೀಸಾಗಳಿಗೆ ನಿರ್ಬಂಧ ಹೇರಿದರು. ಬ್ರಿಟಿಷ್ ಏರ್ವೇಸ್ ಕಾನ್ಕಾರ್ಡ್ ವಿಮಾನಗಳನ್ನು ಸೌದಿ ವಾಯುಪ್ರದೇಶದ ಮೇಲೆ ಹಾರಾಡದಂತೆ ತಡೆಯಲಾಯಿತು! ಹಾಗಾಗಿ ಲಂಡನ್ ಸಿಂಗಪುರ್ ನಡುವಿನ ಫ್ಲೈಟ್ ಲಾಭದಾಯಕ ಆಗದಂತಾಗಿತ್ತು.
ಆರಂಭದಲ್ಲಿ ಸೌದಿಯ ಪ್ರತಿಕ್ರಿಯೆ ಇದ್ದೂ, ಯು.ಕೆ. ಮಾಧ್ಯಮದಲ್ಲಿ ಚಿತ್ರದ ಸೆನ್ಸಾರ್ಶಿಪ್ ವಿಷಯದಲ್ಲಿ ವ್ಯತಿರಿಕ್ತ ಆಗಿತ್ತು. ಆದರೆ, ರಫ್ತಿನ ಆದೇಶಗಳು ರದ್ದಾಗತೊಡಗಿದಾಗ, ಅದೇ ಮಾಧ್ಯಮಗಳು, ಆ ಚಿತ್ರದ ಪ್ರದರ್ಶನದ ಬಗ್ಗೆಯೇ ಪ್ರಶ್ನಿಸಲು ಆರಂಭಿಸಿದ್ದವು. ಅಲ್ಲದೆ, ಬ್ರಿಟಿಷ್ ವಿದೇಶಿ ಕಾರ್ಯದರ್ಶಿಯಾಗಿದ್ದ ಲಾರ್ಡ್ ಕ್ಯಾರಿಂಗ್ಟನ್ ಅವರೂ ಸಹ “ಆ ಚಿತ್ರ ಪ್ರದರ್ಶನವಾಗದಿದ್ದರೇ ಒಳಿತಾಗಿತ್ತು; ಆದರೆ, ನಮಗೆ ಇಷ್ಟ ಇಲ್ಲವೆಂದಾಗಲೀ ಅಥವ ನಮ್ಮ ಸ್ನೇಹಿತರಿಗೆ ಘಾಸಿಯಾಗುವುದು ಎಂದಾಗಲೀ, ಅದಕ್ಕೆ ನಿಷೇಧ ಹೇರುವುದು ನಮ್ಮ ಸರಕಾರದ ನೀತಿಯ ಆಯ್ಕೆಯಾಗದು, ಎಂದು ಹೇಳಿಕೆ ಕೊಟ್ಟಿದ್ದರು!
ಅಂತೆಯೇ, ಅಮೇರಕ ಸರ್ಕಾರಕ್ಕೆ ಕೂಡ ಸೌದಿಯಿಂದ, ಆ ಚಿತ್ರವನ್ನು ಪ್ರದರ್ಶಿಸದಂತೆ ಅಗಾಧ ಒತ್ತಡ ಬಂದಿತ್ತಂತೆ.
ಇಂತಹ ಒಂದು ಚಲನಚಿತ್ರ ಸದ್ಯ ನನ್ನ ಕೈ ಸೇರಿತ್ತು ಮತ್ತು ಆ ಸಿನೇಮಾ ಹೇಗಾದರೂ ಸರಿ, ಈ ದೇಶದಲ್ಲೋ ಅಥವ ನಿಷೇಧಿಸದಿದ್ದರೆ ನಮ್ಮ ದೇಶದಲ್ಲೋ ನೋಡಲೇಬೇಕೆಂಬ ಹಠದ ಹಂಬಲದಲ್ಲಿದ್ದ ನನಗೆ ಅದು ಸಿಕ್ಕಿದಾಗ ನಿಜವಾಗಿ ಆಶ್ಚರ್ಯ ಮತ್ತು ಖುಷಿ ಆಗಿತ್ತು. ಕೊನೆಗೂ ನೋಡಿ ನನ್ನ ಆಸೆ ಪೂರೈಸಿದ್ದೂ ಸಹ ಆಗಿತ್ತು. ಆದರೆ ನನ್ನ ಅಂತರಾಳದಲ್ಲಿ ಇದೆಂಥಾ ಕಾಯಿದೆ ಮತ್ತು ಎಂತಹ ಕ್ರೌರ್ಯ ಅನ್ನಿಸಿ ನೋವಾದದ್ದಂತೂ ಸಹಜ. ಇಂಥ ಬೇಕಿಲ್ಲದ ಸಾವುಗಳು ಈ ಜಗತ್ತಿನಾದ್ಯಂತ ಜನಸಾಮಾನ್ಯರ ಅರಿವಿಗೇ ಬರದಂತೆ ಅದೆಷ್ಟು ಜರುಗಿ ಹೋಗುತ್ತವೋ, ಹಾಗೆ ಅನ್ಯತಾ ಅಳಿಯುವವರಲ್ಲಿ ಅದೆಷ್ಟು ಮುಗ್ಧ ಜೀವಿಗಳೋ ಏನೋ ಅನ್ನಿಸಿ, “ಇಂತಹ ಸಾವುಗಳು ನ್ಯಾಯವೇ ತಂದೆ” ಎಂದು ಎದುರಿಗಿಲ್ಲದ ಭಗವಂತನನ್ನು ಮನಸ್ಸಿನಲ್ಲೇ ಪ್ರಶ್ನಿಸುತ್ತಾ ಆ ಕ್ಯಾಸೆಟ್ಟನ್ನು ಹಿಂತಿರುಗಿಸಿ ಅವರಿಗೆ ಕೃತಜ್ಞತೆ ಹೇಳಲು ಹೊರಟೆ.
ಮುಂದುವರಿಯುತ್ತದೆ…
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ: 98446 45459