–ಕಚ್ಚಿ ಕೊಟ್ಟ ಮಾಂಸ–
ಅಂದು ಕರ್ನಲ್ ಅಬ್ಷೀರ್ ಮನೆಯಿಂದ ಬಂದು, ನನ್ನ ಮಡದಿ, ಕಮಲಳಿಗೆ ವಿಷಯ ತಿಳಿಸಿದ ಮೇಲೆ ಸಹ ನನಗೇಕೋ ಮನಸ್ಸಿನಲ್ಲಿ ಒಂದು ರೀತಿಯ ಕಲ್ಲೋಲ. ಸದ್ಯ ಶಿಲ್ಲಿಂಗ್ ಮೌಲ್ಯ ಅತೀವವಾಗಿ ಕುಸಿದಿಲ್ಲ. ಅಲ್ಲದೆ, ನನಗೆ ಬರುವ ಸಂಬಳದ ಅರ್ಧದ ಜೊತೆಗೆ, ಅಬ್ದುಲ್ ಕಾದಿರ್ ಫಾರ್ಮಸಿಯಲ್ಲಿ ಕನ್ಸಲ್ಟೇಶನ್ನಿನಿಂದ ಬರುತ್ತಿದ್ದ ಹಣವನ್ನೂ ಸೇರಿಸಿಯೇ ಭಾರತಕ್ಕೆ ಡಾಲರ್ ಆಗಿ ಪರಿವರ್ತಿಸಿ ಕಳಿಸಲು ಸಾಧ್ಯ ಇತ್ತು. ಹಾಗಂತ ಸೆಂಟ್ರಲ್ ಬ್ಯಾಂಕಿನಲ್ಲಿದ್ದ ನನ್ನ ಆಪ್ತರೊಬ್ಬರು ಆಶ್ವಾಸನೆ ಕೊಟ್ಟಿದ್ದಲ್ಲದೆ, ಅಬ್ದುಲ್ ಕಾದಿರ್ ಸಹ ತನ್ನ ಪ್ರಭಾವದಿಂದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದ. ಆದರೂ, ಅಕಸ್ಮಾತ್ ಸೋಮಾಲಿ ಶಿಲ್ಲಿಂಗ್ ಪಾತಾಳ ತಲಪಿ, ತನ್ನ ಸಂಗಡ ನನ್ನಂತಹ ವಿದೇಶಿ ಜನರನ್ನೂ ತನ್ನೊಡನೆ ಎಳೆದೊಯ್ದರೆ ಅನ್ನುವ ಹೆದರಿಕೆ ಬೇರೆ. ಈ ರೀತಿಯ ದೈತ್ಯ ಚಕ್ರದ ತೊಟ್ಟಿಲೊಳು ಕೂತು ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಹತ್ತಿ ಇಳಿವಂತಾಗಿತ್ತು ನನ್ನ ಮನಸ್ಸು. ತಕ್ಷಣಕ್ಕೆ ಒಪ್ಪಿಗೆ ಕೊಡದೆ ಸರಿಸುಮಾರು ಒಂದು ತಿಂಗಳೇ ಉರುಳಿ ಹೋಯಿತು.
ಕೊನೆಗೆ ನಾನಿನ್ನೂ ದೃಢ ತೀರ್ಮಾನ ತೆಗೆದುಕೊಂಡೇ ಇರದಿದ್ದಾಗ, ಅದೇ ಕರ್ನಲ್ ಅಬ್ಷೀರ್ ಫಾರ್ಮಸಿ ಕಡೆಗೆ ನನ್ನನ್ನು ಕಾಣಲೆಂದೇ ಬಂದು, “ಏನು ನಿರ್ಣಯ ಮಾಡಿದಿರಿ? ನಮ್ಮಲ್ಲಿಗೆ ಬರುವಿರೋ ಹೇಗೆ” ? ಎಂದು ಕೇಳಿದಾಗ, ನಾನು ಮತ್ತೆ ಉತ್ತರಕ್ಕೆ ತಡಕಾಡುವಂತಾಯಿತು.
ನಾನದಕ್ಕೆ ಇನ್ನೊಂದು ವಾರ ಕಾಲಾವಕಾಶ ಕೇಳಿದೆ. ಮತ್ತು ಅವರ ಮನೆಯವರ ಆರೋಗ್ಯ ವಿಚಾರಿಸಿ, ಅದೇ ಸಂದರ್ಭ ಉಪಯೋಗಿಸಿ, “ನಾನು ನಿಮ್ಮಲ್ಲಿಗೆ ಬಂದರೆ, ಸದ್ಯದ ಕೆಲಸಕ್ಕೆ ರಾಜೀನಾಮೆಯಿತ್ತು ಬರಬೇಕು. ನಿಮ್ಮಲ್ಲಿಯ ಕರಾರು ಮತ್ತು ವೇತನ ಮುಂತಾಗಿ ನನಗೆ ತಿಳಿಸಿದ್ದರೆ ಅನುಕೂಲ ಆಗುತ್ತಿತ್ತು” ಎಂದೆ. ಅದಕ್ಕೆ ಕರ್ನಲ್ “ಡೋಂಟ್ ವರಿ; ದೆ ವಿಲ್ ನಾಟ್ ಬಿ ಬ್ಯಾಡ್” ಎಂದು ಅಡ್ಡಗೋಡೆಮೇಲೆ ದೀಪ ಇಟ್ಟ. ಅಬ್ದುಲ್ ಕಾದಿರ್ ಸಂಗಡ ವಿವರ ಕೇಳಿದರಾಯಿತು ಎಂದು, ಮತ್ತೆ ಮುಂದುವರಿಸದೆ ಸುಮ್ಮನಾಗಿಬಿಟ್ಟೆ.
ಕೊನೆಗೂ ಆ ವಾರದ ಗಡುವೂ ಖತಂ ಆಗಿಯೂ ನಾನಿನ್ನೂ ಅರ್ಧ ಮನಸ್ಸಿನಲ್ಲಿದ್ದಾಗ, ನನ್ನ ಮಡದಿಯ ಪ್ರೋತ್ಸಾಹದಿಂದ ಒಪ್ಪಿಕೊಂಡೇ ಬಿಟ್ಟೆ! ವಾಸ್ತವವಾಗಿ, ಕಮಲ ಈ ವಿಷಯವಾಗಿ ನನಗೆ ಹೇಳಿದ ರೀತಿ ನನ್ನನ್ನು ಆಶ್ಚರ್ಯಚಕಿತನಾಗಿಸಿ, ‘ಹೌದು ಇಷ್ಟು ಪ್ರಬುದ್ಧತೆ ಇವಳಿಗೆ ಹೇಗೆ ಬಂದಿತು’ ಅನ್ನಿಸಿತ್ತು. “ಅಲ್ಲಾ ರೀ, ನಾವು ಈ ದೇಶಕ್ಕೆ ಕೆಲಸಕ್ಕಾಗಿ ತಾನೆ ಬಂದದ್ದು; ಅದೂ ನಿಮ್ಮಣ್ಣ ಮೊದಲು ಬಂದಿದ್ದರಿಂದ. ಇಲ್ಲದಿದ್ದರೆ, ಆ ಹಾರ್ಗೀಸ, ಈ ಮೊಗದಿಶು ಊರುಗಳನ್ನ ನಾವು ಕನಸಲ್ಲೂ ಕಾಣಲು ಸಾಧ್ಯ ಇರಲಿಲ್ಲ. ಅದೂ ಅಲ್ಲದೆ, ಇದೇನು ನಾವು ಹುಟ್ಟಿ ಬೆಳೆದ ದೇಶ ಅಲ್ಲವಲ್ಲ. ಇವತ್ತಲ್ಲಾ ನಾಳೆ ನಮ್ಮೂರಿಗೆ ಹೋಗಲೇಬೇಕು, ಅಲ್ಲಿ ನೀವು ಕ್ಲಿನಿಕ್ ತೆರೆದು ನಮ್ಮ ಜನಗಳ ಸೇವೆ ಮಾಡಲೇಬೇಕು; ನಮ್ಮ ಹೊಟ್ಟೆ ತುಂಬಿಸಿಕೊಳ್ಳಲೇಬೇಕು. ನೀವೀಗ ಈ ಕೆಲಸ ಸುಮ್ಮನೆ ಓಪ್ಪಿಕೊಳ್ಳಿ. ನಿಮಗೆ ಇಷ್ಟ ಆಗಲಿಲ್ಲವೋ, ಕೆಲಸ ಬಿಟ್ಟು ಪ್ಲೇನ್ ಹತ್ತೋದು ಇದ್ದೇ ಇದೆ. ಇದಾಗಲೀ ಇನ್ನೊಂದು ದೇಶವಾಗಲೀ ನಮಗೆ ಫಾರಿನ್ನೇ ಅಲ್ಲವ. ಹೋಗೋಣಂತೆ, ಸದ್ಯ ಆ ಯೋಚನೆ ಬಿಟ್ಟುಬಿಡಿ” ಅಂದು ನನ್ನ ತೀರ್ಮಾನಕ್ಕೆ ನಾಂದಿ ಹಾಡಿದ್ದಳು! ಹಾಗಾಗಿ ಅಂತೂ ನನ್ನನ್ನು ಆ ದೇಶಕ್ಕೆ ಕೆಲಸ ಕೊಟ್ಟು ಕರೆತಂದಿದ್ದ ಮೂಲ ಇಲಾಖೆಯನ್ನು, ವಿಧಿಯಿಲ್ಲದೆ ತೊರೆದೂಬಿಟ್ಟೆ.
ನಾನು ರಾಜೀನಾಮೆ ಪತ್ರ ಕೊಟ್ಟಾಗ, ಡೈರೆಕ್ಟರ್ ಜನರಲ್ ಹಸನ್ ಅವರ ಮುಖದಲ್ಲಿ ಆಶ್ಚರ್ಯದ ಒಂದೇ ಒಂದು ಗೀರೂ ಕಾಣಲಿಲ್ಲ. ಒಂದು ರೀತಿಯ ನಿರ್ಲಿಪ್ತ ಭಾವ ಎದ್ದು ತೋರುತ್ತಿತ್ತು. ಮುಂದಿನ ನನ್ನ ದಾರಿ ಅಥವ ಕೆಲಸದ ಬಗ್ಗೆ ತುಟಿ ಪಿಟಕ್ ಎನ್ನಲಿಲ್ಲ; ಮತ್ತು ಭಾರತಕ್ಕೆ ವಾಪಸ್ ಹೋಗುವುದೋ ಹೇಗೆ ವಿಚಾರಿಸಿ, ವಿದಾಯ ಹೇಳಲೂ ಇಲ್ಲ. ‘ಓಕೆ’ ಎಂದಷ್ಟೇ ಉಸುರಿ, ಟೆಲಿಫೋನ್ ರಿಂಗ್ ಬಂದದ್ದರಿಂದ ರಿಸೀವರ್ ಎತ್ತಿ ಕಿವಿಗಿಟ್ಟು ಗಹನ ಮಾತಿನಲ್ಲಿ ಲೀನರಾದರು. ನನಗಲ್ಲಿ ಇನ್ನು ಜಾಗ ಇಲ್ಲದ್ದು ಖಾತ್ರಿಯಾಗಿ, ಹೊರಗೆ ಬರುವಾಗ, ಈ ವ್ಯಕ್ತಿಗೇ ಏನು ನಾನು ಅಷ್ಟು ಆಸ್ಥೆಯಿಂದ ಇಂಗ್ಲೀಷ್ ಪಾಠ ಹೇಳುತ್ತಿದ್ದುದು ಅನ್ನಿಸಿ, ಕ್ಷಣದಲ್ಲಿ ಮೋಡ ಕವಿದಂತಾಯಿತು. ಇದೂ ಒಂದು ಥರದಲ್ಲಿ ‘ವ್ಯಕ್ತಿತ್ವ ವ್ಯತ್ಯಾಸ’ದ ಅರಿವೋ ಏನೋ ಅಂದುಕೊಂಡು, ಅಲ್ಲಿನ ಇತರರನ್ನು ಒಬ್ಬೊಬ್ಬರಾಗಿ ಸಂಧಿಸಿ ವಿದಾಯ ಹೇಳಿ, ಕನಿಷ್ಠ ಡಿಜಿಯವರಿಂದ ಆಗತಾನೆ ಕಂಡು ಉಂಡು ಬಂದಿದ್ದ ನಿಕೃಷ್ಟ ಮನೋಭಾವ ಎದುರಿಸದೆ, ಬದಲಿಗೆ ಹೃದಯ ತುಂಬಿದ ಬೀಳ್ಕೊಡುಗೆಗೆ ಭಾಜನನಾಗಿ, ನೆಮ್ಮದಿಯಿಂದ ಹೊರಬಿದ್ದಿದ್ದೆ! ಆಗ, ಮುಸ್ತಾಫಾ, ನನಗಾಗಿದ್ದ ‘ವ್ಯಕ್ತಿತ್ವ’ ಪಾಠದ ಅರಿವು ಇಲ್ಲದೆ, ಹಸನ್ ಅವರು ಇನ್ನೇನು ಸ್ವಲ್ಪ ಕಾಲದಲ್ಲಿ ರಿಟೈರ್ ಆಗಿ ಮನೆಗೆ ಮರಳುವ ಸುದ್ದಿ ತಿಳಿಸಿದ್ದ. ಆ ಕ್ಷಣ ನನಗೆ ಏಕೆ ‘ಆ ವ್ಯಕ್ತಿ’ ಹಾಗೆ ನನ್ನನ್ನು ಕಂಡದ್ದು ಅನ್ನುವ ಗೂಢಾರ್ಥ ತಿಳಿದು, ಸ್ವಲ್ಪ ಹಗುರಾಗಿದ್ದೆ.
ಮಿಲಿಟರಿ ಲಾಂಛನದ ಮುದ್ರೆ ಎರಡೂ ಪಕ್ಕ ಮುದ್ರಿಸಿದ್ದ ವಾಹನ ಏಳೂವರೆಗೆ ಸರಿಯಾಗಿ ಮನೆಯ ಮುಂದೆ ನಿಂತಿದ್ದು ಕಿಟಕಿಯಿಂದಲೇ ಕಾಣಿಸಿತು. ಕಮಲ ಮಧ್ಯದಲ್ಲಿ ಕುಡಿಯಲೆಂದು ಕಾಫಿ ಫ್ಲಾಸ್ಕ್ ಒಂದು ಚೀಲಕ್ಕೆ ಸೇರಿಸಿ ಇಟ್ಟಿದ್ದಳು. ಜೊತೆಗೆ ಒಂದು ಬಾಟಲ್ ಥಣ್ಣನೆ ನೀರನ್ನು ನನ್ನ ಜೋಳಿಗೆಗೆ ಸೇರಿಸಿ, ಒಂದು ಪುಸ್ತಕ ಕೂಡ ಹೊತ್ತು ಹೊರಟೆ. ಭಾರತದ ರಾಯಭಾರಿ ಕಛೇರಿ ಕೃಪಾಪೋಷಿತ ಶಾಲೆಯತ್ತ ಮಕ್ಕಳು ಎಂಟು ಘಂಟೆಗೆ ಹೊರಡಲು ತಯಾರಿ ನಡೆಸಿದ್ದರು.
ಸುಮಾರು ದೂರವಿದ್ದ ಆ ಜಾಗಕ್ಕೆ ನಾನು ತಲಪಲು ಅರ್ಧ ಘಂಟೆಯೇ ಆಯಿತು. ಇಳಿದು ಡ್ರೈವರ್ ಜೊತೆ, ಅಲ್ಲಿಯ ಮುಖ್ಯಸ್ಥರ ಕಛೇರಿ ಮೆಟ್ಟಿಲೇರಿದೆ. ಅಷ್ಟರಲ್ಲಾಗಲೇ ಅಲ್ಲಿ ಕರ್ನಲ್ ಅಬ್ಷೀರ್ ಕೂತಿದ್ದ. ಎರಡೂ ಕಡೆ ಅರ್ಧರ್ಧ ಡಜನ್ ಕುರ್ಚಿಗಳಿದ್ದ ಉದ್ದ ಮೇಜಿನ ಮಧ್ಯದ ಕುರ್ಚಿಯಲ್ಲಿ ಆಸೀನರಾಗಿದ್ದ ಮುಖ್ಯಸ್ಥನನ್ನು “ಆದಿಲ್ ಗೂಲೇದ್ ಮೊಹಮ್ಮದ್” ಎಂದು ಪರಿಚಯ ಮಾಡಿಸಿದ. ಮೇಜರ್ ಜನರಲ್ ಎಂದು ಹೇಳಿದಂತಿತ್ತು. ಸದ್ಯ ನೆನಪಿಲ್ಲ. ಆತ ‘ವೆಲ್ಕಮ್’ ಎಂದು ಇಂಗ್ಲೀಷಿನಲ್ಲೇ ಹೇಳುತ್ತಾ ಕೈಕುಲುಕಿ, “ಹ್ಯಾವ್ ಎ ಸೀಟ್” ಎಂದ. ಆರಡಿ ಆಜಾನುಬಾಹು ಮೈಕಟ್ಟಿನ ಮನುಷ್ಯ. ಆದರೆ ಆತನ ಸ್ವರ ಅದಕ್ಕೆ ತಕ್ಕ ಹಾಗೆ ಎತ್ತರ ಏರುತ್ತಿರಲಿಲ್ಲ; ಸ್ವಲ್ಪ ಹೆಣ್ಣು ಧ್ವನಿ ಮಿಶ್ರಿತ! ಹುಟ್ಟಿನಲ್ಲೇ ಎಂಥೆಂಥ ‘ವಂಚನೆ’ಗಳು ಮನುಷ್ಯನನ್ನು ಆವರಿಸಿ ಕುಬ್ಜನ್ನಾಗಿಸಿಬಿಡುವುವು ಎಂಬುದೇ ಈ ಬದುಕಿನ ವಿಪರ್ಯಾಸ.
ಮೊದಲ ದಿನ ಬಹುವಾಗಿ ನೊಣಗಳ ಬೇಟೆಯ ಕಾರ್ಯದಲ್ಲಿ ಯಶಸ್ಸು ಕಂಡೆ. ಬಹುಶಃ ನನ್ನ ಬರುವಿಕೆಯ ಪ್ರಚಾರ ನಡೆದಿರಲಿಲ್ಲ. ಒಂದಿಬ್ಬರು ಬಂದು ಸಣ್ಣಪುಟ್ಟ ವಿಚಾರಕ್ಕೆ ತಪಾಸಣೆ ಮಾಡಿಸಿಕೊಂಡರು. ಮಧ್ಯೆ ಮಧ್ಯೆ ತೂಕಡಿಕೆಯ ಜೊತೆ ಗುದ್ದಾಟ ಆಡುವಾಗ, ಒಂದಿಬ್ಬರು ಜ್ವರದ ರೋಗಿಗಳು ಬಂದು, ನನ್ನ ಆ ಹಿಂಸೆಗೆ ಕತ್ತರಿ ಹಾಕಿದ್ದರು. ಎರಡು ಘಂಟೆಗೆ ಸರಿಯಾಗಿ ಚಾಲಕ ಬಂದು ಆ ದಿನದ ಕೆಲಸಕ್ಕೆ ಪೂರ್ಣವಿರಾಮದ ಹಾರನ್ ಬಾರಿಸಿದ್ದ.
ಹೊಸ ಜಾಗದ ಹೊಸ ಕ್ಲಿನಿಕ್ಕಿನ ಅಂದಿನ ವಿದ್ಯಮಾನವನ್ನೆಲ್ಲ ಮಡದಿಗೆ ವರದಿ ಒಪ್ಪಿಸಿ, ಈಗಲೇ ಏಕೋ ತಪ್ಪು ಮಾಡಿದೆನೇನೋ ಅನ್ನುವ ಭಾವ ಎಂದಾಗ, “ಸ್ವಲ್ಪ ತಾಳ್ಮೆ ಇರಲಿ; ನಾನು ಮೊದಲೇ ಹೇಳಿದ ಹಾಗೆ, ಎಲ್ಲೂ ಸರಿಬರಲಿಲ್ಲ ಅಂದರೆ, ಹ್ಯಾಗಿದ್ದರೂ ವಾಪಸ್ಸು ಹೋಗಲು ನಮ್ಮ ನಾಲ್ಕೂ ಜನಕ್ಕೂ ಓಪನ್ ಟಿಕೆಟ್ಟಿವೆ. ಬೇಸರ ಬೇಡ” ಅಂದು ನನ್ನ ಭುಜದ ಮೇಲೆ ಕೈಯ್ಯಿಟ್ಟಳು ಸಾಂತ್ವನಕ್ಕೆ.
ಮುಂದಿನ ಕೆಲವಾರು ದಿನಗಳು ಹಾಗೆಯೇ, ಕೆಲಸ ಹೆಚ್ಚಿಲ್ಲದೆ ಮನೆಯಿಂದ ತಂದ ಪುಸ್ತಕ ಓದುವ ವಿಧಿಯಿಲ್ಲದ ಸಂಭ್ರಮದಲ್ಲಿ ಕಾಲ ಹರಣವಾಯ್ತು. ಕ್ರಮೇಣ, ಎಲ್ಲರಿಗೂ ಅವರ ಬುಡದಲ್ಲೇ ಒಂದು ಕ್ಲಿನಿಕ್ ಇರುವ ವಿಷಯ ಗೊತ್ತಾಗಿ, ಜನ ಬರಲು ಆರಂಭ ಆಗಿದ್ದರೂ, ಅದೂ ಅಂತಹ ಬೆನ್ನು ತಟ್ಟಿಕೊಳ್ಳುವಂತಾಗಿರಲಿಲ್ಲ. ಅಲ್ಲದೆ, ಅನೇಕ ಸಿಪಾಯಿಗಳು ರಜೆಗಾಗಿ ಅಂತಲೇ ಕಾಯಿಲೆ ಕಂಡುಕೊಳ್ಳಲು ತೊಡಗಿ, ನನಗೆ ಇರುಸುಮುರುಸು. ಕೊಟ್ಟರೆ ಡಾಕ್ಟರು ರಜ ಸಿಕ್ಕವರ ದೃಷ್ಟಿಯಲ್ಲಿ ಒಳ್ಳೆಯವರು, ಮತ್ತು ಹಾಗಂತ ಪ್ರಚಾರವೂ ಸಿಗಬಹುದು. ಆದರೆ, ಕೆಲಸ ಕೊಟ್ಟವರಿಗೆ ವಿಷಯ ತಿಳಿದರೆ!
ಹೀಗಿದ್ದಾಗ ಒಮ್ಮೆ ಕರ್ನಲ್ ಅಬ್ಷೀರ್, ಅಬ್ದುಲ್ ಕಾದಿರ್ ಫಾರ್ಮಸಿಯತ್ತ ಬಂದ. ನಾನು ಹೊಸ ಕೆಲಸ ಸಿಕ್ಕಮೇಲೂ ಸಂಜೆಯ ಹೊತ್ತು ಅಲ್ಲಿಯೂ ವೃತ್ತಿ ಮುಂದುವರಿಸಿದ್ದೆ. “ಸಿಪಾಯಿ ಹಾಗೂ ಇನ್ನಿತರರು ಕೇವಲ ರಜೆಗಾಗಿಯೇ ಬರುತ್ತಿದ್ದ ವಿಷಯ ಯಾವಾಗಲೂ ಇದ್ದದ್ದೆ, ಆದ್ದರಿಂದ ಸ್ವಲ್ಪ ವಿವೇಚನೆ ಇರಲಿ. ಈಗಾಗಲೇ ಬಾಸ್ ನನ್ನನ್ನು ಕರೆದು ಇದರ ಬಗ್ಗೆ ಹೇಳಿದ್ದಾರೆ. ಸುಮ್ಮ ಸುಮ್ಮನೆ ನಟನೆಯ ಕಾಯಿಲೆ ಹೊತ್ತು ಬಂದವರನ್ನು ಮುಲಾಜಿಲ್ಲದೆ ಕಳಿಸಿಬಿಡಿ” ಎಂದ. “ನನಗೂ ಅದೇ ಬೇಕಿತ್ತು; ಮೇಲಿನ ವಿಶ್ವಾಸವಿದ್ದರೆ ಖಂಡಿತ ಹಾಗೆಯೇ ಇರುವೆ” ಎಂದೆ.
ಮುಂದಿನ ದಿನಗಳಲ್ಲಿ ಮೇಲಿನ ಅಧಿಕಾರಿಗಳ ಇಚ್ಛೆಯಂತೆ, ರಜೆಯ ಬಗ್ಗೆ ನಾನು ಮೊದಲಿಗಿಂತ ಹೆಚ್ಚು ಖಡಕ್ಕಾದ ಮೇಲೆ ‘ರೋಗದ ರಂಗಪ್ರದರ್ಶನ’ಗಳೂ ದಿಢೀರ್ ತಳ ಸೇರಿದವು. ಆದರೆ, ಅದಕ್ಕನುಸಾರ ರೋಗಿಗಳ ಹಾಜರಿಯೂ ಕುಸಿದು, ಮತ್ತೆ ನೊಣ, ಸೊಳ್ಳೆ ಶಿಕಾರಿಯತ್ತ ಗಮನ ಹರಿಸಿದೆ. ಊರಿಂದ ಹೊರಗೆ, ಯಥೇಚ್ಛ ಪೊದೆಗಳ ಮಧ್ಯೆ ಇದ್ದ ಕಛೇರಿಯು ಸೊಳ್ಳೆಗಳ ಆಗರವಾಗಿತ್ತು. ಐದಾರು ತಿಂಗಳು ಹೀಗೆಯೇ ಕಳೆದು ನನಗೂ ಜಿಗುಪ್ಸೆ ಆವರಿಸತೊಡಗಿತ್ತು. ರಾಜೀನಾಮೆ ಕೊಟ್ಟು ಊರಿನತ್ತ ಹಾರುವ ಯೋಚನೆ ಬರುತ್ತಿತ್ತು; ಅದರೊಡನೆಯೇ, ಕನಿಷ್ಠ ಸಂಬಳವಾದರೂ ಸಮಯಕ್ಕೆ ಬರುತ್ತಿರುವಾಗ, ಅದರ ಯೋಚನೆ ಖಂಡಿತ ಕೂಡದು ಎಂದು ಕಮಲ ಬಿರುಸಾಗಿ ಓಲಗ ಊದಿ ಸುಮ್ಮನೆ ಇರಿಸಿದ್ದಳು.
ವರ್ಷ ಕಳೆವ ಹೊತ್ತಿಗೆ, ಸೈನಿಕರ ಕುಟುಂಬದ ಮಂದಿಯೂ ಬರಲು ಆರಂಭಿಸಿ ಸ್ವಲ್ಪ ‘ಕೆಲಸವಂತನಾದೆ!’ ಹಾಗಾಗಿ, ನೆಮ್ಮದಿಯೂ ಸಹ. ವ್ಯಾಧಿ ಉಲ್ಬಣವಾದಾಗ ಮನೆಗಳಿಗೆ ಸಹ ಹೋಗುತ್ತಿದ್ದೆ. ಸಮಯ ಜಾರಿ ಹೋಗುತ್ತಿದ್ದು, ಬೇಸರ ಜಿಗುಪ್ಸೆ ಎಲ್ಲ ಭೂತಕಾಲವಾದಂತಾಯಿತು. ಸದ್ಯ ಇಲ್ಲಾದರೂ ಸ್ವಲ್ಪ ವರುಷ ಗೂಟ ಭದ್ರ ಊರಬಹುದು ಅನ್ನಿಸಿತ್ತು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ತಿಂಗಳ ಮೊದಲ ವಾರ ಬರುತ್ತಿದ್ದ ಸಂಬಳ ನಾಲ್ಕು ತಿಂಗಳಾದರೂ ಬರದೆ, ವಿಚಾರಿಸಿದಾಗ ಇನ್ನೂ ಸರಕಾರದಿಂದಲೇ ಬಂದಿಲ್ಲ ಎಂಬ ಉತ್ತರಕ್ಕೆ ತೊಡಗಿತ್ತು. ಕೊನೆಗೆ ಸಾಕೆನಿಸಿ ಅಲ್ಲಿ ಸಹ ರಾಜೀನಾಮೆ ಇತ್ತು ಬಂದೆ.
ಆ ದೇಶದ ಪೋಸ್ಟಲ್ ಮಂತ್ರಿಗಳು ನನಗೆ ಆಪ್ತರಾಗಿದ್ದರು. ಅವರ ಮನೆಗೆ ಸಹ ತಪಾಸಣೆಗೆ ಹೋಗಿ ಬರುತ್ತಿದ್ದೆ. ಒಮ್ಮೆ ಅವರೇ ಕೇಳಿದ್ದರಿಂದ ಎಲ್ಲ ವಿವರ ತಿಳಿಸಿದೆ. ನನ್ನ ಕೆಲಸದ ಆರಂಭದ ಸ್ಥಳದಲ್ಲಿ ಈಗ ಡೈರೆಕ್ಟರ್ ಜನರಲ್ ಬದಲಾಗಿ, ಆ ಜಾಗಕ್ಕೆ ಈ ಮಂತ್ರಿಯವರ ಪೈಕಿ ವ್ಯಕ್ತಿ ಬಂದಿದ್ದನಂತೆ. ಆತನೊಡನೆ ನನ್ನ ಸಮ್ಮುಖವೇ ಮಾತನಾಡಿ, ಅದೇ ಕೆಲಸಕ್ಕೆ ಮತ್ತೆ ಸೇರುವಂತೆ ನೋಡಿಕೊಂಡರು. ಸಂಬಳ ಮೊದಲಿಗಿಂತ ಸ್ವಲ್ಪ ಕಮ್ಮಿ. ಅಂತೂ ಒಪ್ಪಿದೆ. ಯಥಾಪ್ರಕಾರ, ಅಬ್ದುಲ್ ಕಾದಿರ್ ಫಾರ್ಮಸಿಗೂ ಹೋಗಿ ಬರುತ್ತಿದ್ದೆ.
ಒಂದು ಸಂಜೆ ಕರ್ನಲ್ ಅಬ್ಷೀರ್ ಆ ಕಡೆ ಬಂದಾಗ, ನಾನು ಮೊದಲೇ ತಿಳಿಸಿದ್ದುದರಿಂದ, ಅಬ್ದುಲ್ ಕಾದಿರ್ ಆತನ ಸಂಗಡ ನನಗೆ ನಾಲ್ಕು ತಿಂಗಳ ಸಂಬಳ ಇನ್ನೂ ಬಂದಿರದ ವಿಷಯ ಮಾತನಾಡಿ, ಅದಕ್ಕಾಗಿ ಕರ್ನಲ್ ಅಬ್ಷೀರ್ ಅವರ ಹಿರಿಯ ಅಧಿಕಾರಿ, ಆದಿಲ್ ಗೂಲೇದ್ ಮೊಹಮ್ಮದ್ ಸೇರಿ ಇನ್ನೂ ಕೆಲವು ಮಿಲಿಟರಿ ಅಧಿಕಾರಿಗಳ ಔತಣ ಕೂಟ ಏರ್ಪಡಿಸಿದ್ದ. ಅದಕ್ಕೆ ನನ್ನನ್ನೂ ಕರೆದುಕೊಂಡು ಹೋದ. ಅದು ಅದೇ ಮಿಲಿಟರಿ ಕ್ಯಾಂಪಸ್ ಒಳಗೇ ಇದ್ದ ಒಂದು ವಿಶಾಲ ಡೈನಿಂಗ್ ಹಾಲ್.
ಸ್ವಲ್ಪ ಹೊತ್ತು ಅವರವರಲ್ಲೇ ನನಗೆ ಸ್ವಲ್ಪ ಕ್ಲಿಷ್ಟ ಅನಿಸಿದ ಸೋಮಾಲಿ ಮಿಶ್ರಿತ ಇಟ್ಯಾಲಿಯನ್ ಭಾಷೆಯಲ್ಲಿ ಮಾತನಾಡಿಕೊಂಡರು. ಅದು ನನ್ನ ವಿಚಾರವಾಗಿಯೇ ಎಂಬುದು ಖಚಿತವಾಗಿತ್ತು. ಒಂದರ್ಧ ಘಂಟೆ ನಂತರ ಊಟದ ತಟ್ಟೆಗಳು ಮತ್ತು ಬ್ರೆಡ್, ಅನ್ನ, ಕುರಿಯ ಮಾಂಸ ಮುಂತಾಗಿ ಒಂದೊಂದೇ ಒಳಗಿಂದ ಬಂದು ಟೇಬಲ್ ಮೇಲೆ ಅಕ್ಕಪಕ್ಕ ‘ಆಸೀನವಾದವು’. ಊಟ ಆರಂಭ ಆಯ್ತು. ನಡುನಡುವೆ ಆಗೀಗ ಒಂದೋ ಎರಡೋ ಮಾತು ಅಷ್ಟೇ. ನಾನು ಎಲ್ಲರ ಕಡೆ ಗಮನ ಹರಿಸುತ್ತ ತಿನ್ನುತ್ತಿದ್ದೆ. ಆ ಮಧ್ಯೆ, ಇದ್ದಕ್ಕಿದ್ದಂತೆ, ಅಬ್ದುಲ್ ಕಾದಿರ್ ಒಂದು ದಪ್ಪ ಮಾಂಸದ ತುಂಡನ್ನು ಆರಿಸಿ, ಒಂದು ಕಡೆ ಕಚ್ಚಿ, “ದತೋರೆ, ಕನ್ನ ಫಿಯಾನ್ ವಾಯ್, ಕಾದೋ” (ಡಾಕ್ಟರ್, ಇದು ಚೆನ್ನಾಗಿದೆ, ತಗೊಳ್ಳಿ) ಎಂದು ನನ್ನ ತಟ್ಟೆಗಿಟ್ಟೇಬಿಟ್ಟ! ನನಗೆ ಸಂದಿಗ್ಧ ಸ್ಥಿತಿ. ಎಂಜಲು ನಿಜ; ಆದರೆ ಅದನ್ನು ಕೊಟ್ಟಿದ್ದ ಮನಸ್ಸು? ತಕ್ಷಣ ಶಬರಿಯ ದೃಷ್ಟಾಂತ ಜ್ಞಾಪಕಕ್ಕೆ ಬಂತು.
ಶಬರಿ ಶ್ರೀರಾಮನ ಪರಮ ಭಕ್ತೆ. ಆಕೆ ತನ್ನ ರಾಮನಿಗಾಗಿ ಪ್ರತಿ ಹಣ್ಣನ್ನೂ ಕಚ್ಚಿ ನೋಡಿ ಉತ್ತಮ ಅನಿಸಿದವುಗಳನ್ನು ಮಾತ್ರ ಆರಿಸಿ ಜೋಪಾನ ಮಾಡಿಕೊಂಡು ತನ್ನ ದೇವರ ಬರುವಿಗಾಗಿ ಎದುರು ನೋಡುತ್ತಿದ್ದಳು. ಶ್ರೀರಾಮನಿಗೆ ತನ್ನ ಭಕ್ತೆ ಕೊಟ್ಟ ಹಣ್ಣುಗಳಲ್ಲಿ ಭಕ್ತಿ ಬಿಟ್ಟು ಬೇರೇನೂ ಕಾಣಲಿಲ್ಲ. ಅಕಸ್ಮಾತ್ ಅವು ಎಂಜಲಾದ ಹಣ್ಣುಗಳು ಅನಿಸಿದ್ದರೂ ರಾಮ ಅವುಗಳನ್ನು ಖಂಡಿತ ಭಕ್ಷಣೆ ಮಾಡುತ್ತಿದ್ದ ಅಥವ ತನ್ನ ದೈವಶಕ್ತಿಯಿಂದ ಆ ಎಂಜಲನ್ನು ಅಳಿಸಿ ತಿಂದೂ ಇದ್ದಿರಬಹುದು. ಆದರೆ ಇಲ್ಲಿ ನನಗೆ ಅಂತಹ ಯಾವ ಶಕ್ತಿಯೂ ಇರಲಿಲ್ಲ. ಆದಾಗ್ಯೂ ತಿನ್ನಲೇಬೇಕು. ನನಗಾಗಿಯೇ ಅಲ್ಲವೇ ಅಬ್ದುಲ್ ಕಾದಿರ್ ಈ ಔತಣಕೂಟ ಏರ್ಪಡಿಸಿದ್ದು. ಅಲ್ಲದೆ ಆತ ಕಚ್ಚಿ ಕೊಟ್ಟ ಆ ಮಾಂಸದ ತುಂಡು ಎಂಜಲೆಂಬ ಅಳುಕು ಕಿಂಚಿತ್ತೂ ಆತನಲ್ಲಿ ಕಾಣಲಿಲ್ಲ. ಉತ್ತಮವಾದದ್ದನ್ನು ನನಗೆ ಕೊಡುವ ಒಂದೇ ಉದ್ದೇಶ ಅವನಿಗೆ ಅಲ್ಲವೇ? ಅಕಸ್ಮಾತ್ ನಾನದನ್ನು ತನ್ನದಿದ್ದರೆ ಆತನ ಆತ್ಮೀಯತೆಯನ್ನು ಶಂಕಿಸಿದ ಹಾಗಲ್ಲವೇ? ಇಲ್ಲಿ ಅವನ ಮತ್ತು ನನ್ನ ಬೇರೆ ಮತೀಯ ಭಾವನೆ ಮುಖ್ಯ ಅಲ್ಲ. ಎಂಜಲು ಎಂಬುದಷ್ಟೆ. ಆದರೆ ಒಬ್ಬ ವೈದ್ಯನಾಗಿ ಆತನ ಮತ್ತು ನನ್ನ ಜೊಲ್ಲಿನಲ್ಲಿರುವ ರಾಸಾಯನಿಕಗಳು ಒಂದೇ ಮಾದರಿ ತಾನೆ ಅಂದುಕೊಂಡರೂ ಅದು ಎಂಜಲು, ಆದ್ದರಿಂದ ಕೂಡದು ಎಂಬುದೂ ವೈಜ್ಞಾನಿಕ ಸತ್ಯ. ಇಷ್ಟೂ ಯೋಚನೆಗಳು ಆತನ ಸ್ನೇಹದ ಎದುರು ನಗಣ್ಯ! ಆದರೆ ಆ ಘಳಿಗೆಯಲ್ಲಿ ಇದಾವುದೂ ನನಗೆ ಅನಿಸಲೇ ಇಲ್ಲ. ಅವನ ಆತ್ಮೀಯತೆಗೆ ಮಾರು ಹೋಗಿ ಬಾಯಿಗಿಟ್ಟೆ!
ಅಬ್ದುಲ್ ಕಾದಿರ್ ಔತಣದ ನಂತರ ಎರಡು ತಿಂಗಳಾದರೂ ನನಗೆ ಬರಬೇಕಾದ ಬಾಕಿ ಬರಲಿಲ್ಲ. ಅಷ್ಟರಲ್ಲಿ ಕರ್ನಲ್ ಅಬ್ಷೀರ್ ಬಡ್ತಿ ಹೊಂದಿ ಬೇರೆಕಡೆ ವರ್ಗವಾಗಿ ಹೋಗಿಬಿಟ್ಟ. ಆತ ಮಾರೆಹಾನ್ ಪಂಗಡದವ ಆದ್ದರಿಂದ, ಆತನ ಮಾತಿಗೆ ಬೆಲೆಕೊಟ್ಟು ನನಗೆ ಕೆಲಸ ಕೊಟ್ಟಿದ್ದರು. ಈಗ ಆತನೇ ಇಲ್ಲ. ಅಲ್ಲಿಗೆ ನನಗೆ ಬರಬೇಕಾದದ್ದರ ಗತಿ, ಹೊಳೆಯ ಬದಲು ಮಹಾಸಾಗರದಲ್ಲೇ ಹುಣಿಸೇ ಹಿಂಡಿದಂತಾಗಿತ್ತು!
ಮುಂದುವರಿಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ: 98446 45459