ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೭

A close up shot of several people gathered around a table playing cards

–ಬ್ರಿಜ್ (Bridge) ಎಂಬ ಇಸ್ಪೀಟ್ ಆಟ!–

ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಅನೇಕರ ಮೈಕೈಗಳಿಗೆ ಅಂಟಿಕೊಂಡೇ ಇರುತ್ತವೆ. ಕೆಲವು ಉತ್ತಮ, ಇನ್ನು ಕೆಲವು ಉತ್ತಮ ಅಲ್ಲದವು – ಸಮಾಜದ ಕಣ್ಣಲ್ಲಿ! ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ವೃತ್ತಿಯ ಜೊತೆಗೆ, ಹಾಡುವಂಥ ಕಂಠ ಹೊಂದಿದ್ದು ಅದನ್ನು ಕೆಲವು ಕಾರ್ಯಕ್ರಮಗಳಲ್ಲಿ ಉಪಯೋಗ ಮಾಡುತ್ತಿದ್ದರೆ ಅದು ಆತನ ಉತ್ತಮ ಹವ್ಯಾಸ. ಹಾಗೆಯೇ ಕಥೆ, ಕವನ ಮತ್ತು ಇನ್ನಿತರ ಬರವಣಿಗೆಯ ಹವ್ಯಾಸ ಇರಬಹುದು. ಮೈದಾನಗಳಲ್ಲಿ ಆಡುವಂತಹ ಆಟಗಳಿರಬಹುದು; ಇವು ಉತ್ತಮ.


ಅದೇ ಮಾದರಿಯಲ್ಲಿ ಇಸ್ಪೀಟ್ ಆಟ ಸಹ ಒಂದು ಹವ್ಯಾಸ – ಆದರೆ ಎಲ್ಲ ಇಸ್ಪೀಟ್ ಆಟಗಳೂ ಉತ್ತಮ ಅಲ್ಲ. ಗಡಂಗಿನಲ್ಲಿ ಆಗಾಗ ಹಿಗ್ಗಿ ಬರುವುದೂ ಹವ್ಯಾಸ – ಕೆಲವರ ದೃಷ್ಟಿಯಲ್ಲಿ ಅದು ಕೆಟ್ಟ ಚಾಳಿಯೇ ಇರಬಹುದು. ಧೂಮಪಾನ ಸಹ ಉತ್ತಮವಲ್ಲದ ಹವ್ಯಾಸ, ಹೀಗೆ.ಮೊದಲ ಗುಂಪಿಗೆ ಪ್ರತಿಕ್ರಿಯೆ ಉತ್ತಮ ಇದ್ದರೂ, ಆ ಹವ್ಯಾಸ ಇರುವ ವ್ಯಕ್ತಿ ಅದನ್ನು ಒಬ್ಬನೇ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಮೇಲಾಗಿ ಆ ಅಭ್ಯಾಸಗಳು ಓದುಗರಿಗೆ, ಕೇಳುಗರಿಗೆ ಆನಂದ ಕೊಡಬಹುದು ಮತ್ತು ಅಂತಹವರು ಇದ್ದರೆ ಮಾತ್ರ ಆ ಹವ್ಯಾಸಗಳಿಗೆ ಘನತೆ ದೊರಕುವುದು; ಪ್ರಚಾರ, ಹೆಸರು, ಸ್ನೇಹ ಎಲ್ಲ ಸಿಗುವುದು.
ಎರಡನೇ ಗುಂಪು ಹಾಗಲ್ಲ. ಇಸ್ಪೀಟ್ ಆಟಕ್ಕೆ, ಸಾಲಿಟೇರ್ ಎಂಬ ಆಟ ಹೊರತುಪಡಿಸಿ, ಜೊತೆಗಾರರು ಬೇಕೇ ಬೇಕು. ಆದ್ದರಿಂದ ಕ್ರಮೇಣ ಸ್ನೇಹಕ್ಕೂ ದಾರಿಯಾಗುತ್ತದೆ; ಕಲವೊಮ್ಮೆ ಅತ್ಯಂತ ಗಾಢ ಸ್ನೇಹ ಕೂಡ – ಮೊದಲ ಗುಂಪಿಗಿಂತ ಸುಲಭವಾಗಿ ಹಾಗೂ ತ್ವರಿತವಾಗಿ! ಹಾಗೆಯೇ ಗಡಂಗಿಗೆ ಹೋಗುವವರಲ್ಲೂ ಸಹ. ಆದರೆ, ಎರಡನ್ನೂ ನೋಡುವ ದೃಷ್ಟಿ, ಕಾಣುವವರ ವಿವೇಚನೆಯ ಮೇಲೆ ಅವಲಂಬಿತ.

ಇಸ್ಪೀಟ್ ಆಟಗಳಲ್ಲಿ ಅನೇಕ ವಿಧ. ಅಂತರರಾಷ್ಟ್ರೀಯವಾಗಿ ಆಡುವ, ರಮ್ಮಿ, ಬ್ರಿಜ್, ಪೋಕರ್, ಜಿನ್ ರಮ್ಮಿ, ಬ್ಲ್ಯಾಕ್ ಜಾಕ್, ಸಾಲಿಟೇರ್, ತ್ರೀ ಲೀವ್ಸ್ (ಮೂರೆಲೆ), ಊನೋ (Uno), 28 (ಇಪ್ಪತ್ತೆಂಟು) ಮುಂತಾಗಿ. ಕೆಲವು ದೇಶಗಳಲ್ಲೂ ತಮ್ಮವೇ ಆದ ಬೇರೆಬೇರೆ ವಿಧದ ಆಟಗಳು ಚಾಲನೆಯಲ್ಲಿವೆಯಂತೆ. ಭಾರತದಲ್ಲಿ ಮುಖ್ಯವಾಗಿರುವ ಆಟಗಳೆಂದರೆ, ರಮ್ಮಿ, ಇಪ್ಪತ್ತೆಂಟು, ಪೋಕರ್, ಸಾಲಿಟೇರ್ ಮತ್ತು ಸತ್ತೆ-ಪೆ-ಸತ್ತಾ. ಇವಲ್ಲದೆ, ಇಂಡಿಯನ್ ರಮ್ಮಿ, ಗಂಜೀಫಾ, ಬುಖಾರೋ ರಮ್ಮಿ, ಮೆಂಡಿಕೂಟ್, ಸೀಕ್ವೆನ್ಸ್, ಡಾಂಕಿ, ತ್ರೀ ಹಂಡ್ರೆಡ್ ಅಂಡ್ ಫೋರ್ (304) ಮುಂತಾಗಿ. ಅನೇಕ ಕ್ಲಬ್ ಗಳು ಬ್ರಿಜ್ ಆಟವನ್ನೂ ಪ್ರೋತ್ಸಾಹಿಸುತ್ತವೆ.

ಮೊಗದಿಶುವಿನಲ್ಲಿ ಮಕ್ಕಳು ಮಲಗಿದ ನಂತರ, ನಾನು ಮತ್ತು ಕಮಲ ಹಳೆಯ ಕನ್ನಡ ಹಾಡುಗಳನ್ನು ಆಲಿಸುತ್ತಾ, ರಮ್ಮಿ ಅಥವ ಚೆಸ್ ಮುಂತಾಗಿ ಯಾವುದಾದರೊಂದು, ಆಟ ಆಡುವುದು ರೂಢಿಯಾಗಿತ್ತು – ನಿದ್ದೆ ಹತ್ತುವವರೆಗೆ. ಕ್ರಮೇಣ ಬೆಳ್ಳಿಯಪ್ಪ ಮತ್ತವರ ಗೆಳೆಯರು, ಮೊಗದಿಶು ಕಡೆ ಒಮ್ಮೊಮ್ಮೆ ಬಂದಾಗ, ಅವರೊಡನೆ ರಮ್ಮಿ ಆಡುತ್ತಿದ್ದೆವು. ಅದಕ್ಕೂ ಮುನ್ನ ಡಾ. ಜಾರ್ಜ್ ವರ್ಗೀಸ್ ಇದ್ದಾಗ, ಅಣ್ಣ ಮತ್ತು ನಾನು ಸೇರಿ ಅವರೊಡನೆ ಆಡುತ್ತಿದ್ದೆವು. ಆದರೆ ನನಗೊಂದು ಆಸೆಯಿತ್ತು. ಅನೇಕರಿಂದ ಬ್ರಿಜ್ ಆಟದ ಬಗ್ಗೆ ಕೇಳಿದ್ದರಿಂದ, ಯಾರಿಂದಲಾದರೂ ಅದನ್ನು ಹೇಳಿಸಿಕೊಂಡು ಕಲಿವ ಹಂಬಲ ಇತ್ತು. ಅಂತಹ ಗುರುವಿಗಾಗಿ ಏಕಲವ್ಯನಾಗಿದ್ದೆ ಅಂದರೂ ಅದು ತಪ್ಪಲ್ಲ.

ಈ ನಡುವೆ ನಾನು ಸೋಮಾಲಿ ರೋಗಿಗಳ ಮನೆಗೆ ಹೋದ ಹಾಗೆ, ನಮ್ಮ ಭಾರತೀಯರ ಮನೆಗಳಿಗೂ ಸಹ ಚಿಕಿತ್ಸೆಗಾಗಿ ಕಾಯಿಲೆಯ ಸಂದರ್ಭಗಳಲ್ಲಿ ಹೋಗಿಬರುತ್ತಿದ್ದೆ. ಹಾಗೆಯೇ ಅವರೂ ಸಹ, ನಮ್ಮ ಮನೆಗೆ ಸೌಹಾರ್ದ ಭೇಟಿಗಷ್ಟೇ ಅಲ್ಲದೆ, ಕಾಯಿಲೆ ಬಂದಾಗಲೂ ಬರುತ್ತಿದ್ದರು. ಆದರೆ, ಒಂದು ವ್ಯತ್ಯಾಸವೆಂದರೆ, ಸೋಮಾಲಿಗಳು ಬಲವಂತದಿಂದ ಫೀಸ್ ಕೊಟ್ಟೇ ಕೊಡುತ್ತಿದ್ದರಾದರೂ, ನಮ್ಮವರು ಸೌಜನ್ಯಕ್ಕಾದರೂ ‘ಫೀಸು’ ಎಂಬ ಒಂದು ಕಿರುದನಿಯನ್ನೂ ಹೊರಗೆ ಬಿಡುತ್ತಿರಲಿಲ್ಲ. ಅವರನ್ನು ನಾವು ಬಿಟ್ಟಿ ಪರೀಕ್ಷಿಸುವುದು ಅವರ ಆಜನ್ಮ ಹಕ್ಕು ಎಂಬ ‘ಸೊಕ್ಕೋ’ ಏನೋ. ಹಾಗಂತ ಅವರು ಕೊಟ್ಟಿದ್ದರೂ ನಾನೇ ಅಲ್ಲ, ಯಾವ ಭಾರತೀಯ ವೈದ್ಯರೂ ಖಂಡಿತ ಆ ದುಡ್ಡನ್ನು ಮುಟ್ಟುತ್ತಿರಲಿಲ್ಲ.

ಹಾಗೆ ನಾರಾಯಣನ್, ಕೇಶವನ್, ಪ್ರಸಾದ್ ಮುಂತಾದ, ವಿಶ್ವಸಂಸ್ಥೆ ವತಿಯಿಂದ ಆ ದೇಶದಲ್ಲಿದ್ದ, ಕೆಲವು ತಮಿಳು ಮಂದಿಯೂ ಬರುತ್ತಿದ್ದುದುಂಟು. ಅವರಲ್ಲಿ ಕೆಲವರು ಬ್ರಿಜ್ ಆಟ ಆಡುತ್ತಿದ್ದುದು ನನಗೆ ತಿಳಿದಿತ್ತು. ಆದ್ದರಿಂದ ನನಗೂ ಆ ಆಟ ಕಲಿಸುವಿರಾ ಎಂದು ಎಷ್ಟೋ ಬಾರಿ ಅವರನ್ನು ಕೇಳಿದ್ದುಂಟು. ಆ ಸಂದರ್ಭಗಳಲ್ಲಿ ಅವರು, “ನೀವು ವೈದ್ಯರು, ಯಾವಾಗಲೂ ಪುರಸೊತ್ತಿಲ್ಲದವರು” (ಆ ದೇಶದಲ್ಲಿ ಕೆಲಸ ಮಧ್ಯಾಹ್ನ ಎರಡು ಘಂಟೆಗೇ ಮುಗಿಯುವುದು ಗೊತ್ತಿದ್ದೂ ಸಹ) ಎಂತಲೋ, ಅಥವ, “ಅದು ರಮ್ಮಿ ಆಡಿದಂತಲ್ಲ; ಬಹಳ ಕಷ್ಟಕರ ಕಲಿಕೆ” ಎಂತಲೋ ಅಥವ ಇನ್ನೊಂದೋ ಸಬೂಬು ಹೇಳಿ, ಚಿಕಿತ್ಸೆ ಆದ ನಂತರ ಒಂದು ದೊಡ್ಡ ತೇಗು ತೇಗಿದಂತಹ ಥ್ಯಾಂಕ್ಸ್ ಎಂಬ ಹಸಿ ಹುಸಿಯನ್ನು ಬಾಯಿಂದ ರವಾನಿಸಿ, ಕೈಕುಲುಕಿ ಅಂತರ್ಧಾನರಾಗುತ್ತಿದ್ದರು! ನನಗೆ ಅವರ ನಟನಾಶೈಲಿ ನಗು ತರಿಸಿದರೂ, ಒಂದು ಮೂಲೆಯಲ್ಲಿ ನೋವಿನ ಹೊಡೆತ ಖಂಡಿತ ಆಗುತ್ತಿತ್ತು. ಎಂಥ ‘ಆರೋಗ್ಯವಂತ’ ಜನ, ಇಸ್ತ್ರೀ ಮಾಡಿದ ಬಟ್ಟೆ ತೊಟ್ಟ ಆಧುನಿಕ ಖದೀಮರು!

ನಾನು ಹೆಬ್ಬೆರಳನ್ನೇ ಗುರುದಕ್ಷಿಣೆ ಕೊಟ್ಟು ಬಂದಿದ್ದವನ ಥರ, ಕ್ರಮೇಣ ಬ್ರಿಜ್ ಆಸೆ ಒಳಗೇ ಅದುಮಿ ಸುಮ್ಮನಾಗಿದ್ದೆ. ಅಷ್ಟರಲ್ಲಿ ನಮ್ಮ ಬೆಂಗಳೂರಿನವರಾದ, ಸೀತಾರಾಂ ಎಂಬ ಸಜ್ಜನರೊಬ್ಬರು ಮೊಗದಿಶುಗೆ, ವಿಶ್ವಸಂಸ್ಥೆ ವತಿಯಿಂದಲೇ ಬಂದರು. ಬಂದ ಕೆಲವೇ ದಿನಗಳಲ್ಲಿ ನಮ್ಮ ಮನೆಯನ್ನು ಹುಡುಕಿಕೊಂಡು ಬಂದರು. ಕನ್ನಡಿಗರು ಹೊರದೇಶಕ್ಕೆ ಹೋದಾಗ, ಅಲ್ಲಿ ಕನ್ನಡಿಗರಿರುವ ಬಗ್ಗೆ ಕುತೂಹಲದಿಂದ ತಿಳಿದು ಅರಸುವುದು ಸಾಮಾನ್ಯ ಅಲ್ಲವೇ, ಹಾಗೆ.
ಕೆಲವಾರು ವಾರಗಳಲ್ಲೇ ನಾವು ರಜೆಗೆ ಭಾರತದತ್ತ ಹೋಗುವುದು ಕೇಳಿದ ಸೀತಾರಾಮರು, ತಮ್ಮ ಮನೆಯ ವಿಳಾಸಕ್ಕೆ ಊರು ತಲಪಿದ ನಂತರ ಕಳಿಸಲು ಒಂದು ಪಾರ್ಸಲ್ ತಂದು ಕೊಟ್ಟರು. ಅಷ್ಟರಲ್ಲಾಗಲೇ ಅವರು ಬ್ರಿಜ್ ಆಡುವ ವಿಷಯ ತಿಳಿದು, ಅವರನ್ನು ಕೇಳಿಯೂ ಇದ್ದೆ. ಹಾಗಾಗಿ ಬ್ರಿಜ್ ಆಟದ ಬಗ್ಗೆ ಕೊಂಡು ತರಲು ಮೂರು ಪುಸ್ತಕಗಳ ಹೆಸರು ಬರೆದುಕೊಟ್ಟು, ಅವುಗಳನ್ನು ಓದುವಂತೆ ಹೇಳಿದ್ದಲ್ಲದೆ, ಅವರು ‘ಗುರುಸ್ಥಾನ’ ವಹಿಸುವ ಆಶ್ವಾಸನೆ ಸಹ ಇತ್ತರು!

ಭಾರತದಿಂದ ಬಂದ ಕೂಡಲೇ ಕೊಂಡು ತಂದಿದ್ದ ಬ್ರಿಜ್ ಆಟದ ಪುಸ್ತಕಗಳನ್ನು ಓದಲಾರಂಭಿಸಿದೆ. ಕೆಲವೇ ದಿನಗಳಲ್ಲಿ ಆಟದ ‘ಓನಾಮ’ದ ಮರ್ಮ ಅಲ್ಪಸ್ವಲ್ಪ ನನ್ನ ‘ವೈದ್ಯ ತಲೆಗೂ’ ಏರತೊಡಗಿತು! ಈ ಮಧ್ಯೆ ಸೀತಾರಾಂ ಅವರ ಆಗೀಗೊಮ್ಮೊಮ್ಮೆಯ ಉಪನ್ಯಾಸ ಮತ್ತು ಪ್ರಾಯೋಗಿಕ ಆಟದಿಂದ ಸಾಕಷ್ಟು ಪಳಗಿದೆ ಅನ್ನಿಸಿ, ಕ್ರಮೇಣ ಪರಿಚಿತರೊಡನೆ ಸಂಜೆ ಹೊತ್ತಿನಲ್ಲಿ ಆಟ ಆಡಲೂ ಆರಂಭಿಸಿದೆ. ಓದು ಮತ್ತು ಆಟ ಜೊತೆಜೊತೆಗೇ ಹಳಿಗಳ ಹಾಗೆ ಹರಿಯುತ್ತಿದ್ದು, ನನಗೆ ಆಟದ ಬಗ್ಗೆ ಸಾಕಷ್ಟು ವಿಶ್ವಾಸ ಆವರಿಸಿತು. ಬಹಳ ಮುಖ್ಯವಾಗಿ ಬ್ರಿಜ್ ಆಟಕ್ಕೆ ಎರಡು ಜೊತೆಯಾಟಗಾರರು, ಅಂದರೆ ನಾಲ್ಕು ಆಟಗಾರರು ಬೇಕು – ಎರಡು ಪಾಲುದಾರರು ಎದುರಾಳಿಗಳು. ಹಾಗಾಗಿ, ನನ್ನ ಮಡದಿಯೂ ಕಲಿಕೆಯ ವಿದ್ಯಾರ್ಥಿನಿ ಆದಳು. ಡಾ. ಸಿನ್ಹಾ ಅವರಿಗೆ ಸಾಮಾನ್ಯವಾಗಿ ಕಮಲ ಜೊತೆಯಾಟಗಾರ್ತಿ ಆಗುತ್ತಿದ್ದಳು. ನನಗೆ ಲೋಬೋ (ಜರ್ಮನ್ ಕಂಪನಿಯೊಂದರಲ್ಲಿ ಕೆಲಸ), ಇಲ್ಲ ಗುಜರಾತಿ ಶಾ ಅಥವ ಜೈನ್ ಮತ್ತು ತಮಿಳುನಾಡಿನ ಡೇವಿಡ್ ರಾಜ್. ಕ್ರಮೇಣ ಇನ್ನೂ ಕೆಲವಾರು ಮಂದಿ ಕೈ ಜೋಡಿಸುತ್ತಿದ್ದುದನ್ನು ಕಂಡು, ಇಷ್ಟೊಂದು ಮಂದಿಗೆ ತಿಳಿದಿರುವ ಈ ಆಟದಿಂದ ನಾನೇಕೆ ಅದುವರೆಗೆ ವಂಚಿತನಾಗಿದ್ದೆ ಎನಿಸುತ್ತಿತ್ತು.

ಈ ಮಧ್ಯೆ ಟೆನ್ನಿಸ್ ಆಟ ಆಡುವಾಗ, ಸೀತಾರಾಂ ಅವರು ಬಿದ್ದು ಮಂಡಿಗೆ ಜಖಂ ಆಗಿ, ಅದಕ್ಕಾಗಿ ಮೊದಲು ಭಾರತದಲ್ಲಿ, ನಂತರ ಅದು ಸರಿ ಬರದೆ ಮತ್ತೆ ಇಂಗ್ಲೆಂಡಿನಲ್ಲಿ, ಹೀಗೆ ಎರಡು ಬಾರಿ ಆಪರೇಶನ್ ಆಯಿತು. ಬಹುಶಃ ಅದೇ ಜಿಗುಪ್ಸೆ ಅವರನ್ನು ಸೋಮಾಲಿಯಾ ತೊರೆಯುವಂತೆ ಮಾಡಿತು. ಅದಾದ ನಂತರ ಅವರನ್ನು ಕಾಣಲಾಗಲೇ ಇಲ್ಲ.
ಈ ನಾರಾಯಣನ್ ಮುಂತಾದ ‘ಒಳಬಳಗ’ ದ ಮಂದಿಗೆ ನಾನೂ ಬ್ರಿಜ್ ಆಟ ಕಲಿತ ವಿಷಯ ತಿಳಿದಿದ್ದರೂ, ನಮ್ಮ ಮನೆಯ ಕಡೆ ಸುಳಿದಾಗಲೆಲ್ಲ ಅದರ ಬಗ್ಗೆ ಕಿಂಚಿತ್ತೂ ಉಸಿರೆತ್ತುತ್ತಿರಲಿಲ್ಲ. ಎತ್ತರದಲಿ ನಿಂತವರು ತಾವು ಅಂದುಕೊಂಡಿದ್ದ ಮಹಾನ್ ಡಿಪ್ಲೊಮ್ಯಾಟಿಕ್ ಜನ!

ವರ್ಷಕ್ಕೊಮ್ಮೆ ಮೊಗದಿಷು ಇಟಾಲಿಯನ್ ಕ್ಲಬ್ ವತಿಯಿಂದ ಬ್ರಿಜ್ ಟೂರ್ನಮೆಂಟ್ ನಡೆಸುವ ಪರಿಪಾಠವಿತ್ತು. ಆ ವರ್ಷಕ್ಕೆ ನಾವೂ ಭಾಗಿಯಾಗೋಣ ಎಂದು ಡೇವಿಡ್ ರಾಜ್ ಪ್ರಸ್ತಾವನೆ ತಂದಾಗ ಸ್ವಲ್ಪ ದಿಗಿಲಾಗಿದ್ದರೂ, ಒಪ್ಪಿಕೊಂಡೆ. ಆಟದ ದಿನ ಎದೆಯೊಳಗೆ ನಡುಕ ಇದ್ದರೂ, ಇದು ಕೇವಲ ಒಂದು ಆಟ. ನನ್ನ ಜೀವನ ಬದಲಿಸದು, ಅಥವ ಅದರಿಂದ ನಾವು ಅನ್ನ ತಿನ್ನುತ್ತಿಲ್ಲ ಅಂದುಕೊಂಡು ಹೋಗಿದ್ದೆ.

ಇಟಾಲಿಯನ್ ರಾಯಭಾರಿ ಕಛೇರಿಯ ಆಡಳಿತಕ್ಕೆ ಬಹುಶಃ ಒಳಪಟ್ಟಿದ್ದ ಆ ಸಭಾಂಗಣ ಮೊಗದಿಶು ನಗರದ ಹೃದಯ ಭಾಗದಲ್ಲಿದೆ. ಒಳಗೆ ಹತ್ತರಿಂದ ಹನ್ನೆರಡು ಟೇಬಲ್ಲುಗಳು ಮತ್ತು ಪ್ರತಿ ಮೇಜಿನ ನಾಲ್ಕೂ ಕಡೆ ಒಂದೊಂದು ಕುರ್ಚಿ. ಸಭಾಂಗಣದ ಒಂದು ಕಡೆ ಆಡಳಿತ ಹಾಗೂ ತೀರ್ಪುಗಾರ ಮಂದಿಯ ಮೇಜುಗಳು. ಡೇವಿಡ್ ರಾಜ್ ನನ್ನೆದುರು ಕೂತ ನನ್ನ ಜೊತೆಯಾಟಗಾರ. ನಮ್ಮ ವಿರುದ್ಧದ ಆಟಗಾರರು ಇಟಲಿ ದೇಶದವರು – ಎಡಕ್ಕೊಬ್ಬ ಮತ್ತು ಬಲಕ್ಕೊಬ್ಬ. ಆಟದ ಆರಂಭಕ್ಕೆ ಮುನ್ನ ಒಬ್ಬ ವ್ಯಕ್ತಿ, ನಿಯಮ ಹಾಗೂ ಅವಧಿಗಳ ಬಗ್ಗೆ ಹೇಳಿದ. ನಂತರ ಘಂಟೆಯ ಸದ್ದು. ಆಟ ಶುರು.

ಘಂಟೆಯ ಜೊತೆ ನನ್ನ ಹೃದಯ ಕೂಡ ಕ್ಷಣ ಹೊತ್ತು ಬಾರಿಸಿ, ಅಂತೂ ಹತೋಟಿಗೆ ಸಿಕ್ಕಿದ್ದೇ ತಡ, ಒಮ್ಮೆ ಡೇವಿಡ್ ಅವರ ಮುಖವನ್ನು ವಿಶ್ವಾಸಕ್ಕಾಗಿ ನೋಡಿ, ಆಟ ಶುರು ಮಾಡಿದೆ. ಡೇವಿಡ್ ರವರು ಸಿಕ್ಸ್ ನೋ ಟ್ರಂಪ್ ಬಿಡ್ ಮಾಡಿ ಅವರ ಕಾರ್ಡುಗಳನ್ನು ಮೇಜಿನ ಮೇಲೆ ತೆರೆದಿಟ್ಟರು – ಅಂದರೆ ಅವರು ಡಮ್ಮಿ ಆಗಿದ್ದರು – ಡಮ್ಮಿ ಆದವರನ್ನು ಬಿಟ್ಟು ಉಳಿದ ಮೂವರು ಆಡುವುದು ಈ ಆಟದ ವಿಶೇಷ. ಆರು ನೋ ಟ್ರಂಪ್; ಇಬ್ಬರಿಂದ ಕೂಡಿ ಮೂವತ್ಮೂರು ಪಾಯಿಂಟುಗಳೇ ಇದ್ದರೂ ಸಹ ಗೆಲುವು ಸುಲಭ ಇರಲಿಲ್ಲ. ಆದರೆ ಆರಂಭದಲ್ಲೇ ಲೀಡ್ ಮಾಡುವಲ್ಲಿ ನನ್ನ ಎಡಕ್ಕೆ ಕೂತ ಎದುರಾಳಿ ತಪ್ಪು ಮಾಡಿದ್ದು ನಮಗೆ ಅನುಕೂಲ ಆಯಿತು. ಒಟ್ಟು ಫಲಿತಾಂಶ ಪ್ರಕಟಿಸಿದಾಗ, ನನಗಿಂತ ಎತ್ತರದ ಡೇವಿಡ್ ರವರು ನನ್ನನ್ನು ತಬ್ಬಿ ಮೇಲೆತ್ತಿದಾಗಲೇ ಗೊತ್ತು, ಟ್ರೋಫಿ ನಮ್ಮದೇ ಎಂದು! ಕ್ಷಣಾರ್ಧದಲ್ಲಿ ಮೊಗದಿಶು ಭಾರತೀಯ ಜನರಲ್ಲಿ ನಾನು ಮತ್ತು ಡೇವಿಡ್ ರಾಜ್ ಇಬ್ಬರೂ ತಾತ್ಕಾಲಿಕ ಹೀರೋಗಳೋ ಏನೋ ಅನ್ನಿಸಿದ್ದು ಸಹಜ.

“ರಮ್ಮಿ ಆಡಿದಂತಲ್ಲ, ಕಷ್ಟಕರ ಕಲಿಕೆ!” ಎಂದು ಒಮ್ಮೆ ಮೂದಲಿಸಿಕೊಂಡೂ ಸಹ, ಅಂಥ ಆಟವನ್ನೇ, ಯಾವುದೇ ‘ಒಳಕೂಟ’ದ, ಸಹಕಾರ ಇಲ್ಲದೆಯೇ ಕಲಿತು, ವಿದೇಶೀಯ ಸಂಸ್ಥೆ ಒಂದರ ಟೂರ್ನಮೆಂಟಿನಲ್ಲಿ ಪಾರಿತೋಷಕ ಪಡೆದ ಸುದ್ದಿಯಿಂದ ‘ಅಂಥವರಿಗೆ’ ಹೇಗೆಲ್ಲ ಆಗಿರಬೇಡ. ಅವರಿಗೇ ಅಂಥ ಸಾಧನೆ ಅದುವರೆಗೂ ಆಗದೇ ಇದ್ದದ್ದು ಅಲ್ಲವೇ? ಅಲ್ಲಿಂದ ಮುಂದೆ ಅವರು ಯಾರೂ ನಮ್ಮ ಮನೆಯತ್ತ ಯಾತಕ್ಕೂ ಸುಳಿಯಲೇ ಇಲ್ಲ.
ಆದರೆ, ನನ್ನಲ್ಲಿ ಇದುವರೆಗೂ ಉಳಿದಿರುವ ನೋವು ಎಂದರೆ, ತಮ್ಮ ಶಿಷ್ಯನ ಗೆಲುವನ್ನು ಗುರು ಕಾಣಲಿಲ್ಲವಲ್ಲ ಎಂದು. ಎಷ್ಟಾದರೂ, “ವರ್ಣಮಾತ್ರಂ ಕಲಿಸಿದಾತಂ ಗುರು” ಹೌದಲ್ಲವೇ.

ನಮ್ಮ ಆಟ ಮುಂದುವರೆಯಿತು. ಅವರ ಪೂರ್ಣ ಹೆಸರು ನನಗೆ ಈಗ ಜ್ಞಾಪಕ ಇಲ್ಲವಾದರೂ, ಗುಜರಾತಿನ ಶಾ ಅವರು ಕೊನೆಯವರೆಗೂ, ಅಂದರೆ ಇನ್ನೇನು ಆ ದೇಶದಲ್ಲಿ ದಂಗೆ ಆಗುವುದಕ್ಕೂ ಮುನ್ನವೇ ನಾನು ಮೊಗದಿಶು ಬಿಡುವವರೆಗೂ, ಆಟಕ್ಕೆ ಬರುತ್ತಿದ್ದರು. ಅಷ್ಟೇ ಅಲ್ಲ, ದಂಗೆಯ ನಂತರ ಅಮೆರಿಕಕ್ಕೆ ವೀಸಾ ಇಲ್ಲದೆ, ಕೆನಡಾ ಮೂಲಕ ಟ್ರಕ್ ಒಂದರಲ್ಲಿ ಅವಿತುಕೊಂಡು ಹೋಗಿ, ಅಲ್ಲಿ ಗುಜರಾತಿ ಜನರು ನಡೆಸುವ ಮೋಟೆಲ್ (Motel) ಗಳಲ್ಲಿ ತಲೆ ಮರೆಸಿಕೊಂಡು ಕೆಲಸ ಮಾಡುವಾಗಲೂ, ಅಲ್ಲಿಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಬ್ರಿಜ್ ಕಾಲಮ್ಮುಗಳನ್ನು ಕತ್ತರಿಸಿ, ಎರಡು-ಮೂರು ತಿಂಗಳಿಗೊಮ್ಮೆ ಸಂಗ್ರಹವಾದ ಅಷ್ಟನ್ನೂ ಅಂಚೆಯ ಮೂಲಕ ಮೈಸೂರಿಗೆ, ನನ್ನ ಓದಿಗಾಗಿ ಕಳಿಸುತ್ತಿದ್ದಂತಹ ವ್ಯಕ್ತಿ! ಭಾರತಕ್ಕೆ ಬಂದಾಗ, ಮೈಸೂರಿಗೂ ಬಂದು ನಮ್ಮಲ್ಲೆ ಇದ್ದು ಹೋಗಿದ್ದ ಶಾ ಈಗ ಬದುಕಿಲ್ಲ ಎಂದಾಗ ದುಃಖ ಸಹಜ!

ಹೀಗೆ ಬ್ರಿಜ್ ಎಂಬ ಆಟ ಮೊಗದಿಶುವಿನಲ್ಲಿ ಹೇಗೆ ಕೆಲವು ಉತ್ತಮ ವ್ಯಕ್ತಿಗಳನ್ನು ಪರಿಚಯಿಸಿ, ನನಗೆ ಸ್ನೇಹ ಬೆಳೆಸುವಷ್ಟು ಸಲಿಗೆ ನೀಡೀತೋ, ಹಾಗೆಯೇ ಮೈಸೂರಿಗೆ ಮರಳಿ ನನ್ನ ಕ್ಲಿನಿಕ್ ಆರಂಭಿಸಿದ ನಂತರವೂ, ಒಂದು ಪ್ರತಿಷ್ಠಿತ ಕ್ಲಬ್ ಒಬ್ಬ ಸ್ನೇಹಿತರ ಮೂಲಕ, ಕ್ಲಬ್ಬಿಗೆ ಬಂದು ಆಟ ಆಡುವಂತೆ ಆಹ್ವಾನ ಕಳಿಸಿದ್ದರು. ಆದರೆ ನನ್ನ ಇಲ್ಲಿಯ ವೃತ್ತಿ ಮತ್ತು ವೇಳೆ ಅದಕ್ಕೆ ಆಸ್ಪದ ನೀಡಲಿಲ್ಲ. ಸದ್ಯ ನನ್ನ ಮತ್ತು ಬ್ರಿಜ್ ಸಂಬಂಧ ಇರುವುದು ಟೈಂಸ್ ಆಫ್ ಇಂಡಿಯಾದಲ್ಲಿ ಅಚ್ಚಾಗುವ ಕಾಲಂ ಮೂಲಕ ಮಾತ್ರ!

ಮೊಗದಿಶುವವಿನ ನನ್ನ ಅಂತಿಮ ವರ್ಷಗಳ ಇರುವಿನ ಕಾಲದಲ್ಲಿ, ಬ್ರಿಜ್ ಸಂಬಂಧದಿಂದ ಸ್ನೇಹಿತರಾದ ಇನ್ನೊಬ್ಬ ಮಹನೀಯರೆಂದರೆ, ಜನರಲ್ ಜಾಮಾ ಮಹಮ್ಮದ್ ಗಾಲಿಬ್. ಅವರು ಸೋಮಾಲಿಯಾ ಗೃಹಮಂತ್ರಿಯಾಗಿದ್ದವರು. ಅವರ ವಿಚಾರ ಮುಂದಿನ ಲೇಖನದಲ್ಲಿ.

ಮುಂದುವರೆಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊ.ನಂ. 98446 45459

Related post

Leave a Reply

Your email address will not be published. Required fields are marked *