ಜನರಲ್ ಜಾಮಾ ಸ್ನೇಹ
ನಮಲ್ಲಿ ಒಬ್ಬ ರಾಜಕಾರಿಣಿಯ ಯಕಃಶ್ಚಿತ್ ಚೇಲನನ್ನೂ ಸಹ ಮಾತನಾಡಿಸಲು ಹಿಂದುಮುಂದು ನೋಡಬೇಕಾದ ಪರಿಸ್ಥಿತಿಯಿದೆ ಎಂದರೆ ಅತಿಶಯ ಅಲ್ಲ. ಇನ್ನು ಆ ರಾಜಕಾರಿಣಿಯು ಅದೆಷ್ಟೇ ಸಣ್ಣ ಹಂತದವನಿದ್ದರೂ, ಅದರಲ್ಲೂ ದಬಾಯಿಸಿ ಹಣವಂತನಾಗಿದ್ದರಂತು ಮುಗಿದೇ ಹೋಯಿತು. ಅಂಥ ವ್ಯಕ್ತಿಯ ಕಣ್ಣುಗಳಿಗೆ ನೆಲದಕಡೆ ಇಣುಕಲಾರದ ಕಾಯಿಲೆ! ‘ಅಂತಹ ವಿಲಕ್ಷಣ ಸ್ಥಿತಿ’. ಬಸವಣ್ಣನವರು ಅವರ ಕಾಲದಲ್ಲಿ ಇಂತಹ ‘ಮಹಾತ್ಮ’ರನ್ನು ಕಂಡೇ ತಮ್ಮ ವಚನದಲ್ಲಿ “ಸಿರಿಗರ ಹೊಡೆದವರ ನುಡಿಸಲುಬಾರದು ನೋಡಯ್ಯ” ಎಂದು ಹಾಡಿದ್ದಿರಬೇಕು. ಅವರ ಸಂದರ್ಭದಲ್ಲಿ ಈ ಮಟ್ಟದ ರಾಜಕಾರಿಣಿಗಳು ಬಹುಶಃ ಇರಲಿಲ್ಲವೇನೋ. ಇದ್ದಿದ್ದರೆ ಅವರನ್ನು ಇನ್ನೆಷ್ಟು ‘ಹೊಗಳಿ’ ಹಾಡುತ್ತಿದ್ದರೋ ಏನೋ! ‘ರಾಜಕೀಯ ಗರ ಮೆಟ್ಟಿದವರ ಮುಟ್ಟಬಾರದು, ಸನಿಹ ಸುಳಿಯಬಾರದು ನೋಡಯ್ಯ’ ಅಂತ ಇರಬಹುದು. ಬಹುಶಃ ಈ ವಿಶಿಷ್ಟ ತಳಿ ನಮ್ಮಲ್ಲಿಯ ‘ಸ್ಪೆಶ್ಯಾಲಿಟಿ’ ಅಂದುಕೊಳ್ಳಬಹುದು. “ಭರತವಿಶೇಷ!”
ಸೋಮಾಲಿಯಾ ದೇಶದ ರಾಜಕಾರಿಣಿಗಳು ನಮ್ಮ ದೇಶದ ‘ತಳಿ’ (ಸ್ಪೀಶೀಜ್) ಥರ ಖಂಡಿತ ಅಲ್ಲ ಎಂಬುದು ನನಗೆ ಗ್ಯಾರಂಟಿ. ಇವರು ಗರ್ವದ ನಂಜು ಹತ್ತದ ಸರಳ ಜನ; ಇತರ ಸಾಮಾನ್ಯರಂತೆ, ಎಲ್ಲರೊಡನೆ ಒಂದಾಗಿ ಬದುಕುವ ಜನ. ತಮ್ಮನ್ನೇ ತಾವು ಗಾಜಿನ ಮನೆಯೊಳಗೆ ಕೂಡಿ ಹಾಕಿಕೊಂಡಂತೆ ಬದುಕುವವರಲ್ಲ.
ಅಂಥವರಲ್ಲಿ ನನ್ನನ್ನು ಹೆಚ್ಚು ಇಷ್ಟಪಟ್ಟವರು ಮತ್ತು ನಾನೂ ಸಹ ಅವರ ಗೆಳೆತನ ಬಯಸಿದವರು, ಜನರಲ್ ಜಾಮಾ ಮಹಮ್ಮದ್ ಘಾಲಿಬ್ ಎಂಬ ವಿರಳ ಸಜ್ಜನರು. ಅವರಿಗೆ, ನಾನು ಮತ್ತು ಡೇವಿಡ್ ರಾಜ್ ಇಬ್ಬರೂ, ಬ್ರಿಜ್ ಆಟದಲ್ಲಿ ಪಾರಿತೋಷಕ ಜಯಿಸಿದ ವಿಷಯ ಯಾವ/ಯಾರ ಮೂಲಕ ತಿಳಿಯಿತೋ ನಾನರಿಯೆ. ಆದರೆ ಒಂದು ದಿನ ಸಂಜೆ, ಉತ್ತರ ಭಾರತದ ಹಸನ್ ಎಂಬುವವರ ಮನೆಯಲ್ಲಿ ಆಟ ಆಡುತ್ತಿದ್ದಾಗ, ಮತ್ತೊಬ್ಬ ಪರಿಚಯದವರೊಡನೆ ಒಳಬಂದರು. “ಐ ಆಮ್ ಜಾಮಾ” ಎಂದಷ್ಟೇ ಹೇಳಿಕೊಂಡು ಎಲ್ಲರ ಕೈ ಕುಲುಕಿ, ಆಟ ಮುಂದುವರಿಸಲು ಹೇಳಿ ತೀಕ್ಷ್ಣವಾಗಿ ನೋಡತೊಡಗಿ, ಮುಗಿದ ನಂತರ ತಾವೂ ಸಹ ನಮ್ಮ ಸಂಗಡ ಆಡಬಹುದೆ ಎಂದು ಕೇಳಿ, ಜೊತೆಯಾದರು. ಅದು ನನ್ನ ಮತ್ತು ಅವರ ಉತ್ತಮ ಸ್ನೇಹಕ್ಕೆ ಪೀಠಿಕೆ ಆಯಿತು. ಆದರೆ ನನ್ನ ಸೋಮಾಲಿಯಾ ಬದುಕಿನ ಅಂತಿಮ ದಿನಗಳಲ್ಲಿ ಅಂತಹ ಒಬ್ಬ ವ್ಯಕ್ತಿಯ ಪರಿಚಯ ಆದದ್ದು ಬೇಸರ ಎಂಬುದು ನಿಜ. ನಾಲ್ಕಾರು ವರ್ಷಗಳ ಮುಂಚೆಯೇ ಆಗಿದ್ದಿದ್ದರೆ ಅವರಿಂದ ಇನ್ನೂ ಏನೆಲ್ಲ ತಿಳಿಯಬಹುದಿತ್ತು ಎಂದು. ಮೇಲಾಗಿ ನನ್ನ ಓದುವ ಹವ್ಯಾಸದ ವಿಷಯ ತಿಳಿದು ಕೆಲವು ಉತ್ತಮ ಪುಸ್ತಕಗಳನ್ನು ಆಗಾಗ ಕೊಟ್ಟು ಸಹಕರಿಸಿದ್ದರು.
ಜನರಲ್ ಜಾಮಾ ಎಂದು ನಾವು ಅವರನ್ನು ಸಂಬೋಧಿಸುತ್ತಿದ್ದುದು ರೂಢಿ. ಅವರು, “ನೋ ನೋ, ಜಸ್ಟ್ ಕಾಲ್ ಮಿ ಜಾಮಾ” ಎಂದು ಅನೇಕ ಬಾರಿ ಹೇಳಿದ್ದರೂ, ನಮಲ್ಲಿ ಯಾರಿಗೂ ಹಾಗೆ ಕರೆಯುವ ಮನಸ್ಸಿರಲಿಲ್ಲ. ಅಂತೂ ಸಂಜೆ ಹೊತ್ತಿನಲ್ಲಿ ಯಾರದರೂ ಒಬ್ಬರ ಮನೆಯಲ್ಲಿ ಸರದಿಯಂತೆ, ವಾರಕ್ಕೆ ಕನಿಷ್ಠ ಮೂರು-ನಾಲ್ಕು ದಿನವಾದರೂ ನಮ್ಮ ‘ಬ್ರಿಜ್ ಗ್ಯಾಂಗ್’ ಕಲೆತು ಆಟ ಆಡುವುದು ಅಭ್ಯಾಸಬಲವಾಗಿತ್ತು. ಜಾಮಾ ಅವರು ಒಬ್ಬ ಉತ್ತಮ ಇಸ್ಲಾಂ ಧರ್ಮ ಪಾಲಕರಾಗಿದ್ದರು. ಕುಡಿಯುವ ಅಭ್ಯಾಸ ಇರಲಿಲ್ಲ. ತಲೆಯ ಮೇಲೆ ಟೋಪಿ ಸಾಮಾನ್ಯ ಇರುತ್ತಿತ್ತು. ಆದರೆ, ಸಂಜೆಯ ಹೊತ್ತು, ಆಟದ ಸಮಯದಲ್ಲಿ ನಮ್ಮಲ್ಲಿ ಯಾರಾದರೂ ಒಮ್ಮೊಮ್ಮೆ ಕುಡಿವ ಹಂಬಲ ವ್ಯಕ್ತಪಡಿಸಿದರೆ, ಅದಕ್ಕವರು ಖಂಡಿತ ಅಡ್ಡಿ ಬರುತ್ತಿರಲಿಲ್ಲ. “ದಟ್ ಈಸ್ ಸಮ್ ಒನ್ಸ್ ಹ್ಯಾಬಿಟ್” ಅಂದುಬಿಟ್ಟು, ತಮ್ಮ ಪಾಡಿಗೆ ಆಟದಲ್ಲಿ ಮಗ್ನ ಆಗುವಂತಹ ವ್ಯಕ್ತಿತ್ವ. ಆಟ ಕೂಡ ಬಹಳ ಚೆನ್ನಾಗಿಯೇ ಆಡುತ್ತಿದ್ದರು.
ಅಂತಹ ವಿಶಿಷ್ಟ ಮನುಷ್ಯರೊಬ್ಬರ ಪರಿಚಯ ನನಗಾದಮೇಲೆ ಓದುಗರಿಗೂ ಅವರ ಬಗ್ಗೆ ತಿಳಿಸಬೇಕಾದುದು ನನ್ನ ಆದ್ಯ ಕರ್ತವ್ಯ.
“ಜಾಮ ಮೊಹಮ್ಮದ್ ಘಾಲಿಬ್” ಅವರೊಬ್ಬ ಸೋಮಾಲಿ ಬರಹಗಾರ, ಪೂರ್ವಕಾಲದ ಸೈನ್ಯದ ಮುಖ್ಯಸ್ಥ ಮತ್ತು ಪೋಲೀಸ್ ಪಡೆಯ ನಾಯಕ ಹಾಗೂ ನಿಸ್ಸೀಮ ರಾಜಕಾರಿಣಿ. ಇಂದಿನ ಉತ್ತರ ಸೋಮಾಲಿಯಾ ಅಥವಾ ಸೋಮಾಲಿ ಲ್ಯಾಂಡ್ ರಾಜಧಾನಿ, ಹಾರ್ಗೀಸಾ ಕಡೆ ಅವರ ಜನನ. ಸದ್ಯ ಅವರು ಮೊಗದಿಶು ವಿಶ್ವವಿದ್ಯಾನಿಲಯದಲ್ಲಿ (ನಗರ ವಿಶ್ವವಿದ್ಯಾನಿಲಯವೂ ಸೇರಿದಂತೆ), ಇತಿಹಾಸ, ರಾಜ್ಯಾಡಳಿತ ವಿಜ್ಙಾನ ಮತ್ತು ಸಾರ್ವಜನಿಕ ಆಡಳಿತಗಳ ವಿಷಯಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂರ್ವದಲ್ಲಿ ಅವರೊಬ್ಬ ಸೋಮಾಲಿ ಗಣರಾಜ್ಯದ ಸೈನ್ಯದಲ್ಲಿ ಮೇಜರ್ ಜನರಲ್ ಆಗಿದ್ದರು. ಆನಂತರ ಸೋಮಾಲಿ ಪ್ರಜಾಪ್ರಭುತ್ವ ಗಣರಾಜ್ಯದ ಆರಕ್ಷಕ ಪಡೆಯ ಆಯುಕ್ತರಾಗಿದ್ದರು (ಪೋಲೀಸ್ ಕಮೀಶನರ್). ತದನಂತರ ಅವರನ್ನು ಸೋಮಾಲಿ ರಾಷ್ಟ್ರದ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಾಯಿತು. ಆ ಅಧಿಕಾರದಲ್ಲಿ ಅವರು ವಿವಿಧ ಸಚಿವಾಲಯಗಳಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ: ಪ್ರಥಮವಾಗಿ ಗೃಹ ಕಾರ್ಯದರ್ಶಿಯಾಗಿದ್ದರು, ತರುವಾಯ ಕಾರ್ಮಿಕ ಹಾಗೂ ಸಾಮಾಜಿಕ ವ್ಯವಹಾರಗಳ ಮಂತ್ರಿಯಾಗಿ, ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸರಕಾರಗಳ ಮಂತ್ರಿ, ಸಾರಿಗೆ ಮಂತ್ರಿ ಮತ್ತು ಗೃಹಮಂತ್ರಿಗಳಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ.
ನಾನು ಮತ್ತೊಮ್ಮೆ ಸೋಮಾಲಿಯಾಕ್ಕೆ ಹಿಂತಿರುಗದ ಹಾಗೆ ಭಾರತಕ್ಕೆ ವಾಪಸ್ಸು ಬಂದು, ನನ್ನ ಕ್ಲಿನಿಕ್ ಆರಂಭಿಸಿದ ಕೆಲವು ವರ್ಷಗಳಲ್ಲಿ, ಆಗೊಮ್ಮೆ ಈಗೊಮ್ಮೆ ನೆನಪಾಗುತ್ತಿದ್ದುದಲ್ಲದೆ, ಸೋಮಾಲೀ ಬದುಕಿನ ದಿನಗಳು ಸ್ಮೃತಿಯ ಕೊನೇ ಬೆಂಚಿಗೆ ಸರಿದು ಕೂತುಬಿಟ್ಟಿದ್ದವು. ಬಂದು ಆರೇಳು ವರ್ಷಗಳ ನಂತರ, ದಿಢೀರನೆ ವಿದೇಶದಿಂದ ನನಗೊಂದು ಪಾರ್ಸೆಲ್ ಬಂದಿತು. ಅದು ಕೆನ್ಯಾ ದೇಶದ ರಾಜಧಾನಿ ನೈರೋಬಿಯಿಂದ ಬಂದಿತ್ತು. ನನಗೆ ನೈರೋಬಿಯಿಂದ ಯಾರು ಕಳಿಸಲು ಸಾಧ್ಯ? ಅಣ್ಣ, ಡಾ. ಮೈಲಾರ ಶೆಟ್ಟಿಯವರು, ಮತ್ತವರ ಮಗ, ಡಾ. ಅರುಣ್ ಇಬ್ಬರೂ ಕೆನ್ಯ ದೇಶದಲ್ಲೇ ಆಗ ಕೆಲಸ ಮಾಡತ್ತಿದ್ದರು – ದಂಗೆಯಿಂದ ಸೋಮಾಲಿಯಾ ತೊರೆದಮೇಲೆ. ಆದರೆ ಅವರಿಂದ ಇಂತಹ ಪಾರ್ಸೆಲ್? ಸಾಧ್ಯತೆ ಇಲ್ಲ. ಮೇಲಿನ ಕವರ್ ತೆಗೆದರೆ, ಆಶ್ಚರ್ಯ! “ದಿ ಕಾಸ್ಟ್ ಆಫ್ ಡಿಕ್ಟೇಟರ್ ಶಿಪ್: ದಿ ಸೋಮಾಲಿ ಎಕ್ಸ್ಪೀರಿಯೆನ್ಸ್” ಎಂಬ ದಪ್ಪ ಅಕ್ಷರಗಳ ಶೀರ್ಷಿಕೆ ಹೊತ್ತಿದ್ದ ಪುಸ್ತಕ. ಆದರೆ ಅದರ ಲೇಖಕರ ಹೆಸರು ಓದಿ ಅತ್ಯಂತ ಸಂತೋಷವೂ, ವಿಸ್ಮಯವೂ ಒಟ್ಟಿಗೆ ನನಗೆ. ಸೋಮಾಲಿಯಾ ದೇಶ ಬಿಟ್ಟು, ಅಲ್ಲಿನ ಸ್ನೇಹಿತರ ಒಡನಾಟಗಳೂ ನೆನಪಿನಿಂದ ದೂರಾಗಿ ಎಷ್ಟೋ ವರ್ಷಗಳ ನಂತರ ಅವರ ಹೆಸರನ್ನು, ಅದೂ ಒಂದು ವಿಶೇಷ ಹೊತ್ತಗೆಯ ಲೇಖಕರ ಹೆಸರಿನ ಸಾಲಿನಲ್ಲಿ ಕಂಡು ಮಹದಾನಂದವಾಯಿತು. ಆ ಹೆಸರು “ಜಾಮ ಮೊಹಮ್ಮದ್ ಗಾಲಿಬ್”!
ಸುಮಾರು ಮುನ್ನೂರು ಪುಟಗಳ, ಹಾರ್ಡ್ ಕವರ್ ಉಳ್ಳ ಆ ಪುಸ್ತಕದ ಒಳಗೆ, ಜಾಮ ಅವರ ಮಗಳು “ಈ ಪುಸ್ತಕವನ್ನು ನನ್ನ ತಂದೆಯವರು ನಿಮಗೆ ಕಳಿಸಲು ಹೇಳಿದ್ದಾರೆ” ಎಂದಷ್ಟೇ ಬರೆದು ಪಾರ್ಸೆಲ್ ಕಳಿಸಿದ್ದರು. ನನಗೆ ಸ್ವತಃ ಜಾಮ ಅವರೇ ನಮ್ಮ ಮನೆಗೆ ಬಂದಷ್ಟು ಆನಂದ ಆಗಿತ್ತು.
೧೯೯೧ ರ ಜನವರಿಯಲ್ಲಿ ಸೋಮಾಲಿ ಸರ್ವಾಧಿಕಾರಿ ಮೊಹಮ್ಮದ್ ಸೈಯ್ಯದ್ ಬರ್ರೆಯ ಸರ್ಕಾರ ಶಸ್ತ್ರಾಸ್ತ್ರ ಬಂಡಾಯಗಾರರಿಂದ ಉರುಳಿಬಿದ್ದ ನಂತರ, ಆತ ಬಿಟ್ಟು ಹೋದದ್ದು ಒಂದು ಅರಾಜಕತೆಯ ಮತ್ತು ಕುಸಿತ ಕಂಡ ಸೋಮಾಲಿ ಸಮಾಜವನ್ನು. ಇಂಥ ಸಂದರ್ಭದಲ್ಲಿ, ಪಂಗಡ ಮತ್ತು ವಿವಿಧ ಪಾಕ್ಷಿಕ ಶಸ್ತ್ರಸಜ್ಜಿತ ಹೋರಾಟಗಳಿಂದ ಉತ್ತರ ಸೋಮಾಲಿ ನಾಡು ನಾಗರಿಕ ಕ್ರಾಂತಿಗೆ ತುತ್ತಾಗಿ ಬೇರ್ಪಡುವ ಹಂತ ತಲುಪಿದ್ದು, ದಕ್ಷಿಣದಲ್ಲಿ ಸಹ ಅದಕ್ಕಿಂತ ಕೆಟ್ಟ ಪರಿಸ್ಥಿತಿಯಿಂದ ಎಲ್ಲೆಲ್ಲೂ ಹಸಿವು ಆ ನಿರ್ಭಾಗ್ಯ ಜನತೆಯಲ್ಲಿ ತಾಂಡವವಾಡತೊಡಗಿತ್ತು. ಲೂಟಿಕೋರರು ಎಲ್ಲೆಲ್ಲೂ ದಂಧೆಯಲ್ಲಿದ್ದಂಥ ಪರಿಸ್ಥಿತಿ.
ಸೈಯ್ಯದ್ ಬರ್ರೆಯ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ, ಎಲ್ಲವನ್ನೂ ಹತ್ತಿರದಿಂದ ಕಂಡಿದ್ದ ಜಾಮ ಅವರು ಈ ಪುಸ್ತಕದಲ್ಲಿ ಸೈಯ್ಯದ್ ಬರ್ರೆಯ ಪತನಕ್ಕೆ ಕಾರಣಗಳನ್ನು, ಅದರಿಂದಾಗಿ ಸೋಮಾಲಿಯಾ ಕುಸಿತವನ್ನು ಸವಿವರವಾಗಿ ತಿಳಿಸುತ್ತಾರೆ. ಬರ್ರೆಯ ಕಪಟ ಹಾಗೂ ಅಸಮರ್ಥ ಮತ್ತು ದುಷ್ಟನಡತೆಗಳ ನಾಯಕತ್ವ ಈ ಕುಸಿತಕ್ಕೆ ಕಾರಣೀಭೂತವಾಯಿತು
ಎನ್ನುತ್ತಾರೆ ಜಾಮ ಅವರು.
ಈ ಪುಸ್ತಕದ ನಂತರ ಜಾಮ ಮಹಮ್ಮದ್ ಘಾಲಿಬ್ ಅವರು,
“ದಿ ಒಗಾಡೆನ್ ವರ್ಸಸ್ ದಿ ಮಿಥಿಕಲ್ ಇಥಿಯೋಪಿಯನ್ ಕ್ಲೇಂ” ಮತ್ತು “ಸೋಮಾಲಿ ಫೀನಿಕ್ಸ್” ಎಂಬ ಶೀರ್ಷಿಕೆಗಳ ಇನ್ನೆರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
“ದಿ ಕಾಸ್ಟ್ ಆಫ್ ಡಿಕ್ಟೇಟರ್ಶಿಪ್: ದಿ ಸೋಮಾಲಿ ಎಕ್ಸ್ಪೀರಿಯನ್ಸ್” ಪುಸ್ತಕ ೨೬೭ ಪುಟಗಳಿದ್ದು, ನ್ಯೂ ಯಾರ್ಕ್ ನ ಲಿಲಿಯನ್ ಬಾರ್ಬರ್ ಪ್ರೆಸ್ ನಿಂದ ೧೯೯೫ ರಲ್ಲಿ ಪ್ರಕಟವಾಗಿದೆ. ಬೆಲೆ: ೨೯.೫೦ ಡಾಲರ್.
“ದಿ ಒಗಾಡೆನ್: ವರ್ಸಸ್ ದಿ ಮಿಥಿಕಲ್ ಇಥಿಯೋಪಿಯನ್ ಕ್ಲೇಂ” ಪುಸ್ತಕ ೮೬ ಪುಟಗಳಿದ್ದು, ಪೇಪರ್ ಬ್ಯಾಕ್ ನಲ್ಲಿ ಲುಲು ಪ್ರೆಸ್ ನಿಂದು ಪ್ರಕಟವಾಗಿದೆ. ಬೆಲೆ: ೧೬.೪೬ ಡಾಲರ್.
“ಸೋಮಾಲಿ ಫೀನಿಕ್ಸ್” ಪುಸ್ತಕ ೨೭೨ ಪುಟಗಳದ್ದು. ೨೦೧೨ ರಲ್ಲಿ ಜಾಮ ಮೊಹಮ್ಮದ್ ಘಾಲಿಬ್ ಅವರೇ ಪ್ರಕಟಿಸಿದ್ದಾರೆ. ಬೆಲೆ ತಿಳಿಯದು.
ನಾನು ಸೋಮಾಲಿಯಾ ದೇಶ ಬಿಟ್ಟು ಬಂದದ್ದು ೧೯೮೯ ರ ಫೆಬ್ರವರಿ ತಿಂಗಳಲ್ಲಿ. ನಾನು ಬಂದ ಎರಡು ವರ್ಷಕ್ಕೆ ೧೯೯೧ ರಲ್ಲಿ ಆಂತರಿಕ ದಂಗೆ ಆರಂಭವಾಗಿ, ೧೯೬೯ ರಿಂದ ೧೯೯೧ ರ ವರೆಗೆ ಸುದೀರ್ಘ ದುರಾಡಳಿತ ನಡೆಸಿದ್ದ ಸೈಯ್ಯದ್ ಬರ್ರೆ ಕೆಳಕ್ಕೆ ಇಳಿಸಿದ ನಂತರ ಆರಂಭಗೊಂಡ ದಂಗೆಗಳಿಂದ ತತ್ತರಿಸಿದ ಆ ದೇಶ ಇನ್ನೂ ಸಂಪೂರ್ಣವಾಗಿ ಉತ್ತಮತೆಗೆ ತಲುಪಿಲ್ಲ. ಆ ಕಾಲದಲ್ಲಿ ಮೊಬೈಲ್ ಫೋನ್ ಇರಲಿಲ್ಲವಾಗಿ, ಲ್ಯಾಂಡ್ ಲೈನ್ ಫೋನಲ್ಲದೆ, ಪೋಸ್ಟ್ ಬಾಕ್ಸ್ ಗಳಿದ್ದವು. ಬರುವಾಗ ಬರೆದು ತಂದಿದ್ದ ನನ್ನ ಒಂದು ಪುಟ್ಟ ದಿನಚರಿ ಪುಸ್ತಕ ಸಹ ಕಾಣದೆ, ಕೈ ಮರ ಇಲ್ಲದ ಅನೇಕ ಕೂಡುದಾರಿಗಳ ನಡುವೆ ನಿಸ್ಸಹಾಯಕನಾಗಿ ನಿಂತಂತೆ, ಸಂಪರ್ಕ ಕಡಿದಂತಾಗಿ ನನಗೆ ಅನೇಕ ಸೋಮಾಲಿ ಸ್ನೇಹಿತರ ಸಹವಾಸವೇ ಎಲ್ಲಾ ಥರದಲ್ಲೂ ಇಲ್ಲವಾಗಿಹೋಗಿದೆ. ಹಾಗಾಗಿ, ಜಾಮಾ ಅವರದ್ದೂ ಸಹ. ಆದರೆ, ಯಾವುದು ಅಸಾಧ್ಯವೋ ಅದರ ಬಗ್ಗೆ ಯೋಚಿಸಿದರೆ ಸಮಯ ವ್ಯರ್ಥ. ಒಂದಂತೂ ನನಗೆ ಇಂದಿಗೂ ಖುಷಿ ಇರುವ ವಿಚಾರ ಎಂದರೆ, ಅಂತಹ ಮಹನೀಯರ ಒಡನಾಟ ನನಗೆ ಲಭ್ಯ ಆದದ್ದು! ಅದಕ್ಕಾದರೂ ನಾನು ಇಸ್ಪೀಟ್ ಎಲೆಗೆ ಮತ್ತು ಬ್ರಿಜ್ (bridge) ಆಟಕ್ಕೆ ಖಂಡಿತ ಋಣಿ.
ಮುಂದಿನವಾರ ಮುಂದುವರಿಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ. 9844645459