ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೯

–ಮೊಗದಿಶು ಟಿಟ್ ಬಿಟ್ಸ್–

ನನ್ನ ಮೊಗದಿಶು ಬದುಕಿನ ಸುದೀರ್ಘ ಹದಿಮೂರು ವರ್ಷಗಳಲ್ಲಿ ಸಾಕಷ್ಟು ವಿಶೇಷ ಸಂದರ್ಭಗಳನ್ನು, ಅನೇಕ ಥರ ಇಕ್ಕಟ್ಟಿನ ಪರಿಸ್ಥಿತಿಗಳನ್ನು ಹಾಗೂ ಉತ್ತಮ, ಹೃದಯಸ್ಪರ್ಶಿ ಘಟನೆ ಮತ್ತು ಸನ್ನಿವೇಶಗಳನ್ನೂ ಕಂಡಿದ್ದೇನೆ; ಉಂಡೂ ಇದ್ದೇನೆ. ಅಂತೆಯೇ ಅನೇಕ ವಿಧವಾದ ವ್ಯಕ್ತಿಗಳನ್ನೂ ಸಂಧಿಸಿದ್ದೇನೆ, ಮತ್ತು ಒಡನಾಡಿಗಳನ್ನಾಗಿ ಪಡೆದ ಭಾಗ್ಯವಂತನೂ ಆಗಿದ್ದೇನೆ ನಿಜ.
ನನ್ನ ಹಿಂದಿನ ಲೇಖನಗಳಲ್ಲಿ ಅಂತಹ ವಿಚಾರಗಳನ್ನು ಆಗಿಂದಾಗ್ಗೆ ತಿಳಿಸುತ್ತಾ ಬಂದಿದ್ದೇನೆ. ಭಾರತೀಯರಲ್ಲಿ ಹಾಗೂ ಸೋಮಾಲಿ ಜನರಲ್ಲಿ ವಿಶಿಷ್ಟ ಲಕ್ಷಣ ಉಳ್ಳವರೂ ಇಲ್ಲದಿರಲಿಲ್ಲ. ಅಂತಹವರಲ್ಲಿ ನಾನು ಕಂಡ ಕೆಲವು ಸನ್ನಿವೇಶಗಳ ಬಗ್ಗೆ.

1) ಡಾ. ನಾಯರ್ (ಪೂರ್ಣ ಹೆಸರು ಇಲ್ಲಿ ಪ್ರಮುಖವಲ್ಲ) ಕೇರಳದ ಪ್ರಾಧ್ಯಾಪಕರಲ್ಲೊಬ್ಬರು. ಅವರು ಶಿಶು ಮನೋವಿಜ್ಙಾನದಲ್ಲಿ ಡಾಕ್ಟರೇಟ್ ಪಡೆದಿದ್ದರು. ಮೊಗದಿಶುಗೆ ಬಂದದ್ದೂ ಒಬ್ಬರೇ, ಅಲ್ಲಿ ಇರುವವರೆಗೆ ಇದ್ದದ್ದೂ ಒಬ್ಬರೆ. ಹಾಗಾಗಿ ನನಗೆ ಅವರ ಕುಟುಂಬದ ಮಾಹಿತಿ ಇರಲಿಲ್ಲವೆಂದೇ ತಿಳಿಯಿರಿ.
ಡಾ. ನಾಯರ್ ನನಗೆ ಸಾಕಷ್ಟು ಆಪ್ತರಾಗಿದ್ದರು‌. ಇದಕ್ಕೆ ನಮ್ಮಿಬ್ಬರ ನಡುವಿನ ಅನೇಕ ವಿಷಯಗಳ ವಿಚಾರ ವಿನಿಮಯ ಎಷ್ಟು ಮುಖ್ಯವೋ ಹಾಗೆಯೇ, ನನ್ನ ಅಂದಿನ ಐದು ವಯಸ್ಸಿನ ಮಗ, ಅನಿರುದ್ಧ ಸಹ ಅಷ್ಟೇ ಕಾರಣನಾಗಿದ್ದ!
ಡಾ. ನಾಯರ್ ಅವರು ಪ್ರತಿ ದಿನ ಅವರ ಕಾಲೇಜಿನ ಬಸ್ಸಿಗಾಗಿ ನಡೆದು ಹೋಗುತ್ತಿದ್ದ ವಿರುದ್ಧ ದಿಕ್ಕಿನಲ್ಲಿ, ನಮ್ಮ ಮನೆಯ ಸೋಮಾಲಿ ಕೆಲಸದವಳ ಸಂಗಡ ಭಾರತೀಯ ಶಾಲೆಗೆ ನನ್ನ ಮಗ ನಡೆದುಕೊಂಡು ಹೋಗುತ್ತಿದ್ದುದು ರೂಢಿ. ಡಾ. ನಾಯರ್ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ಇದನ್ನು ಕಂಡಿದ್ದ ನನ್ನ ಮಗ ತನ್ನೊಳಗೇ ನಾವಿಬ್ಬರೂ ಸ್ನೇಹಿತರು ಎಂದು ತೀರ್ಮಾನಿಸಿದ್ದಿರಬಹುದು‌. ಹಾಗಾಗಿ ಒಂದು ದಿನ ಶಾಲೆಗೆ ಹೋಗುವಾಗ ಎದುರಿನಿಂದ ನಾಯರ್ ಅವರು ಬರುತ್ತಿದ್ದುದನ್ನು ನೋಡಿ, ತಕ್ಷಣ ಕೆಲಸದಮ್ಮನ ಕೈಬಿಡಿಸಿಕೊಂಡು, ನಾಯರ್ ಹತ್ತಿರ ಓಡಿ, “ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಹೋಗಿ” ಎಂದು ದುಂಬಾಲು ಬಿದ್ದಿದ್ದಾನೆ. ವಿಧಿಯಿಲ್ಲದೆ ನಾಯರ್ ನಮ್ಮ ಮನೆಯತ್ತ ಬಂದು ನಡೆದದ್ದನ್ನು ತಿಳಿಸಿ ಹೋಗಿದ್ದರು. ಈ ಘಟನೆ ಒಮ್ಮೆಯಲ್ಲ, ಕೆಲವಾರು ಬಾರಿ ನಡೆದಿತ್ತು. ಇದಲ್ಲದೆ ಇನ್ನೊಂದು ಘಟನೆ, ಡಾ. ನಾಯರ್ ಅವರ ದಿಟ್ಟ ನೇರವಾದಿತನದ ಗುಣಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಡಾ‌. ನಾಯರ್ ವಾಸ ಇದ್ದ ಮನೆ ಅವರೊಬ್ಬರಿಗೆ ದೊಡ್ಡದೆ ಆಗಿತ್ತು. ಒಮ್ಮೆ ಡಾ‌.ಜಾರ್ಜ್ ಎಂಬುವವರು ತಮ್ಮೊಡನೆ ಕಿದ್ವಾಯ್ ಎಂಬ ಇನ್ನೊಬ್ಬ ಭಾರತೀಯರೊಡನೆ, ನಾಯರ್ ಅವರ ಮನೆಗೆ ಭೇಟಿಗಾಗಿ (ಸೋಶಿಯಲ್ ವಿಸಿಟ್) ಹೋಗಿದ್ದಾರೆ. ಕಿದ್ವಾಯ್ ಅವರು ಇಂಗ್ಲೀಷ್ ಭಾಷೆ ಬೋಧನೆಗೆಂದು ಆ ದೇಶಕ್ಕೆ ಬಂದಿದ್ದರು‌. ಅವರ ಭೇಟಿಯ ಸಂದರ್ಭದಲ್ಲಿ, ನಾಯರ್ ಸಂಗಡ ಒಬ್ಬ ಸೋಮಾಲಿ ಮನುಷ್ಯ ಇದ್ದರು. ಪರಸ್ಪರ ಪರಿಚಯಗಳಾದಾಗ, ಆ ವ್ಯಕ್ತಿ ನಾಯರ್ ಇದ್ದ ಮನೆಯ ಒಡೆಯ ಎಂಬ ವಿಷಯ ತಿಳಿದ ಡಾ. ಜಾರ್ಜ್ (ಬಹಳ ವರ್ಷ ಇದ್ದುದರಿಂದ ಸೋಮಾಲಿ ಭಾಷೆ ಚೆನ್ನಾಗಿಯೇ ಮಾತನಾಡುತ್ತಿದ್ದರು) ಆ ಸೋಮಾಲಿ ಮನುಷ್ಯನೊಡನೆ, ಏನೋ ಮಾತಾಡಿದ್ದಾರೆ. ಆತ ಅದನ್ನು ಕೇಳಿಸಿಕೊಂಡ ಸ್ವಲ್ಪ ಸಮಯದ ನಂತರ, ಹೊರಹೋಗುವಾಗ, ಡಾ. ನಾಯರ್ ಅವರನ್ನೂ ಹೊರಗೆ ಕರೆದಿದ್ದಾನೆ. ಆತನೊಡನೆ ಮಾತನಾಡಿ ಒಳಬಂದ ತಕ್ಷಣ, ನಾಯರ್ ಅವರು ಡಾ. ಜಾರ್ಜ್ ಅವರಿಗೆ, “ಗೆಟ್ ಔಟ್ ಆಫ್ ಮೈ ಹೌಸ್” ಎಂದು ನೇರವಾಗಿ ಹೇಳಿ, ಆ ಇಬ್ಬರನ್ನೂ ಮನೆಯಿಂದ ಆಚೆ ಕಳಿಸಿದ್ದಾರೆ. ತನ್ನ ತಪ್ಪು ಅರಿವಾದ ಜಾರ್ಜ್ ತಲೆ ತಗ್ಗಿಸಿ, ಮರುಮಾತಿಲ್ಲದೆ, ತಮ್ಮ ಸಂಗಡ ಬಂದ ಕಿದ್ವಾಯ್ ಜೊತೆ ಹೊರನಡೆದಿದ್ದಾರೆ. ಆಗಿದ್ದದ್ದು ಇಷ್ಟೆ: ಸೋಮಾಲಿ ಭಾಷೆಯ “ಪ್ರಾವೀಣ್ಯ” ತನಗಿದೆ ಎಂಬ ಅಹಂ ಇಂದ ಡಾ.ಜಾರ್ಜ್ ಆ ವ್ಯಕ್ತಿಯ ಸಂಗಡ, “ನೀವೂ ಮುಸ್ಲಿಂ ಮತ್ತು ಇವರೂ (ತಮ್ಮ ಜೊತೆ ಇದ್ದ ಕಿದ್ವಾಯ್) ಸಹ ಮುಸ್ಲಿಂ. ನಿಮ್ಮ ಮನೆಯನ್ನು ನಿಮ್ಮವರಲ್ಲದ ‘ಹಿಂದು’ ಮನುಷ್ಯರಿಗೆ ಬದಲಾಗಿ, ಈ ಕಿದ್ವಾಯ್ ಅವರಿಗೆ ಕೊಡಿ” ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ ಅದು ಸುತರಾಂ ಇಷ್ಟ ಆಗದೆ, ನಾಯರ್ ಅವರಿಗೆ “ಡಾ. ಜಾರ್ಜ್ ಎಂಬ ಆ ವ್ಯಕ್ತಿ ನಿಮ್ಮ ಸ್ನೇಹಕ್ಕೆ ಯೋಗ್ಯನಲ್ಲ” ಎಂದು ಎಚ್ಚರಿಸಿ, ನಡೆದದ್ದನ್ನು ತಿಳಿಸಿ ಹೋಗಿದ್ದರು. ಅಷ್ಟೆ; ಸಣ್ಣ ಪ್ರಮಾಣದ ವಿಷ! ನಾಯರ್ ಮೊದಲೇ ಅಖಂಡ ನೇರವಾದಿ; ಅನುಚಿತ ನಡತೆಗೆ ತಕ್ಕ ಚಿಕಿತ್ಸೆ! ಡಾ. ನಾಯರ್ ಮತ್ತು ಡಾ. ಜಾರ್ಜ್ ಇಬ್ಬರೂ ಕೇರಳದವರು. ಅದಲ್ಲದೆ, ನಾವೆಲ್ಲ ಭಾರತೀಯರು. ಕನಿಷ್ಟ ಹೊರದೇಶದಲ್ಲಾದರೂ ಮತ-ಜಾತಿ-ಭಾಷೆ ಮುಂತಾಗಿ ಮರೆತು, ನಾವು ನಮ್ಮ ದೇಶದ ಹೆಮ್ಮೆಯ ಬಂಧುಗಳೆಂಬ ನಡತೆಯಾದರೂ ಬೇಡವೇ? ಎಂಥ ದುರಂತ ಚಿತ್ರಣ!

2) ನಾನು ಹಾರ್ಗೀಸಾದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಒಮ್ಮೆ ಅಂದಿನ ಆರೋಗ್ಯ ಮಂತ್ರಿಯವರು ದಿಢೀರ್ ಹಾಜರಾಗಿ, ನನ್ನ ಬಗ್ಗೆ ಮಾಹಿತಿ ನನ್ನಿಂದಲೇ ತಿಳಿದು, ಆದಷ್ಟು ಜಾಗ್ರತೆ ಸೋಮಾಲಿ ಭಾಷೆ ಕಲಿಯಲು ತಾಕೀತು ಮಾಡಿ ಹೋಗಿದ್ದರು. ನಾನು ಆರು ತಿಂಗಳಲ್ಲೇ ಕಲಿತೂ ಇದ್ದೆ.
ಹಾಗಾಗಿ ಮೊಗದಿಶು ಕ್ಲಿನಿಕ್ಕಿನಲ್ಲಿ ನನಗೆ ತರ್ಜುಮೆ ಬೇಕಾಗಿರಲಿಲ್ಲ. ಎಷ್ಟೇ ಮಂದಿ ರೋಗಿಗಳಿದ್ದರೂ ಸಾವಕಾಶ ಒಬ್ಬನೇ ನಿರ್ವಹಿಸುತ್ತಿದ್ದೆ. ಒಮ್ಮೆ ಆಂಗ್ಲ ಭಾಷೆಯಲ್ಲಿ ಅಭ್ಯಸಿಸಿದ್ದ ಇನ್ನೊಬ್ಬರು, ಹಸನ್ ಆದನ್ ಗುದಾಲ್ ಎಂಬ ಹೆಸರಿನವರು ಬಂದರು. (ಉತ್ತರ ಭಾಗದ ಸೋಮಾಲಿಯಾದ ವಿದ್ಯಾವಂತರೆಲ್ಲ ಇಂಗ್ಲೀಷ್ ಭಾಷೆಯಲ್ಲೇ ಓದಿದವರು). ಅಲ್ಲದೆ ಸಾಮಾನ್ಯವಾಗಿ ಅವರೆಲ್ಲ ತಾವು ಯಾರು ಎಂದು ಹೇಳಿಕೊಳ್ಳುತ್ತಿರಲಿಲ್ಲ. ನಾವೇ ಕೇಳಬೇಕು. ಅವರ ತಪಾಸಣೆ ನಂತರ ತಾವು ಯಾರೆಂದು ವಿಚಾರಿಸಲಾಗಿ, ‘ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ’ ದ (ಯು. ಎನ್. ಇ. ಪಿ) ಆಫ್ರಿಕಾ ಖಂಡದ ಮುಖ್ಯಸ್ಥರು ಎಂದೂ, ನೈರೋಬಿಯಲ್ಲಿ ಪ್ರಧಾನ ಕಛೇರಿ ಎಂಬ ವಿವರ ಇದ್ದ ತಮ್ಮ ಕಾರ್ಡ್ ಕೊಟ್ಟು, ‘ನೈರೋಬಿಗೆ ಬಂದಾಗ ಕಾಲ್ ಮಾಡಿ, ನಾನೇ ಬಂದು ಮನೆಗೆ ಕರೆದುಕೊಂಡು ಹೋಗುವೆ’ ಎಂದು ಹೇಳಿ ಹೋಗಿದ್ದರು. ಅವರು ಮೊಗದಿಶುಗೆ ಬಂದಾಗಲೆಲ್ಲ ಕ್ಲಿನಿಕ್ಕಿಗೆ ಬಂದು ಹೋಗುವ ರೂಢಿಯಿತ್ತು. ಇಲ್ಲಾ ಸಣ್ಣಪುಟ್ಟ ಕಾಯಿಲೆ ತಪಾಸಣೆಗೆ ಅಥವಾ ಹಲೋ ಹೇಳಿ ಮಾತಾಡಿ ಹೋಗಲು. ನನ್ನ ಮಡದಿಯನ್ನು ಎರಡನೇ ಹೆರಿಗೆಗೆ ಭಾರತಕ್ಕೆ ಕಳಿಸುವ ಉದ್ದೇಶದಿಂದ, ನೈರೋಬಿಯಲ್ಲಿ ಹಂಡತಿ ಮತ್ತು ಮಗನನ್ನು ಏರ್ ಇಂಡಿಯ ವಿಮಾನ ಹತ್ತಿಸಿ, ನನಗೆ ಮೊಗದಿಶುಗೆ ಹಿಂತಿರುಗಲು ಮತ್ತೆ ಮಾರನೆ ದಿನವೇ ಫ್ಲೈಟ್ ಇದ್ದುದರಿಂದ, ಹಸನ್ ಆದನ್ ಗುದಾಲ್ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸಲೇ ಎಂದು ಅಳೆದು-ಸುರಿದು, ಕೊನೆಗೆ ಕಾಲ್ ಮಾಡಿಯೇಬಿಟ್ಟೆ. ಸುಮಾರು ಹತ್ತು ಕಿಲೋಮೀಟರ್ ಮೇಲಿನ ದೂರದ ನೈರೋಬಿ ನಗರದಿಂದ ತಡಮಾಡದೇ ತಾವೇ ಸ್ವತಃ ಡ್ರೈವ್ ಮಾಡಿಕೊಂಡು ಬಂದಿದ್ದರು. ಅಂಥ ಹುದ್ದೆಯಲ್ಲಿದ್ದೂ ಸೋಮಾಲಿ ಜನ ಹಾಗೆ. ಮಾತಿಗೆ ತಕ್ಕ ನಡತೆ ಮತ್ತು ಸೌಜನ್ಯ! ಎಲ್ಲರೂ ಅಲ್ಲದೆ ಇರಬಹುದು. ಇಂಥ ಕೆಲವು ಮಹನೀಯರ ಸಂಘ-ಸಂಪರ್ಕ ನನ್ನ ಬದುಕಿನ ಮರೆಯಲಾಗದ ಅನುಭವ.

ಮುದ್ದಪ್ಪ ಆಂಟಿ,‌ ಅಲ್ ಬೆರೂನಿ ಮತ್ತು ಸಿತಾರ (ಹಿಂದೆ ಮುಂದೆ), ನಾನು, ಕಮಲ, ಅನಿರುದ್ಧ, ಆರಾಧನ

3) ಒಂದು ಸಂಜೆ ನಾನು ಮಡದಿ ಮಕ್ಕಳೊಡನೆ ಹೊರಗೆ ಸುತ್ತಾಡಿ, ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿ, ಹಾಗೇ ಯಾರಾದರೂ ಒಬ್ಬರ ಮನೆಯತ್ತ ಸುಮ್ಮನೆ ಹೋಗಿಬರುವ ಉದ್ದೇಶದಿಂದ ತಯಾರಾಗುತ್ತಿರುವ ಸಮಯಕ್ಕೆ ಸರಿಯಾಗಿ, ಕಾಲಿಂಗ್ ಬೆಲ್ ಸದ್ದು. ಬಾಗಿಲು ತೆಗೆದರೆ, ಆಚೆ ನಿಂತಿದ್ದ ವ್ಯಕ್ತಿ, “ನನ್ನ ಹೆಸರು ರಾಮಣ್ಣ” ಎನ್ನುತ್ತಾ “ಒಳಗೆ ಬರಬಹುದೇ” ಎಂದರು.
ಒಳಬಂದು ಕೂತ ನಂತರ, ಅವರು ಬೆಂಗಳೂರಿನವರು ಮತ್ತು ವಿಶ್ವಸಂಸ್ಥೆಯ ವತಿಯಿಂದ ಸೋಮಾಲಿಯಾ ದೇಶದ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದರು. ಸದ್ಯ ಹೋಟೆಲ್ ವಾಸ; ಮನೆಯ ಹುಡುಕಾಟ ಸಾಗಿದೆ ಎಂದರು. ರಾಮಣ್ಣ ಅಂದಿನಿಂದ ನಮಗೆ ಹತ್ತಿರದವರಾಗುತ್ತಾ ಹೋದರು. ಒಮ್ಮೊಮ್ಮೆ ಜೊತೆಯಾಗಿ ಊಟ ಮಾಡುವುದು, ರಮ್ಮಿ ಆಡುವುದು, ನಾವೂ ಅವರ ಮನೆಗೆ ಹೋಗುವುದು ಎಲ್ಲ ಜರುಗುತ್ತಿತ್ತು. ಅವರಿಗೆ ಕಾಫಿ ಬಹಳ ಇಷ್ಟ. ಒಮ್ಮೆ, ಕಮಲ “ಕಾಫಿ ಮಾಡಲ ರಾಮಣ್ಣೋರೆ?” ಎಂದಾಗ, “ಕಾಫಿ ಮಾಡಲ ಅಂತ ಕೇಳಬಾರದು; ಕಾಫಿ ಎಷ್ಟು ಬೇಕು ಅಂತ ಕೇಳಬೇಕು” ಅಂದಿದ್ದರು. ಹಾಗೆಯೇ ಅವರಿಗೆ ತೆಂಗಿನಕಾಯಿ ಮತ್ತು ತೆಂಗಿನ ಚಟ್ನಿ ಅಂದರೆ ಬಲು ಇಷ್ಟ. ತಮ್ಮ ಮನೆಯಲ್ಲಿ ಅಡಿಗೆ ಮಾಡುತ್ತಿದ್ದ ಸೋಮಾಲಿ ಕೆಲಸದಾಕೆಗೆ, “ಕಾಫಿಯೊಂದಕ್ಕೆ ಬಿಟ್ಟು ಬಾಕಿ ಎಲ್ಲದಕ್ಕೂ ಕಾಯಿ ತುರಿದು ಹಾಕಲು ಹೇಳಿದ್ದರಂತೆ! ಒಮ್ಮೆ ಮನೆಗೆ ಅತಿಥಿಯೊಬ್ಬರು ಬಂದಿದ್ದಾಗ, ಊಟದ ನಂತರ, ಐಸ್ ಕ್ರೀಂ ತಂದಾಗ, ಅದೂ ಮೈ ತುಂಬಾ ತೆಂಗಿನ ತುರಿ ಹೊದ್ದುಕೊಂಡೇ ಬಂದಿತ್ತಂತೆ!
ಸ್ವತಃ ತಾವೇ ಅಡಿಗೆ ಪ್ರವೀಣ ಆಗಿದ್ದು, ರಾಮಣ್ಣ ಅವರ ಮನೆಯಲ್ಲಿ ಒಮ್ಮೆ ಬಿಸಿಬೇಳೆ ಬಾತ್ ಮಾಡಿ ನಮಗೆ ತಿನ್ನಿಸಿದ್ದ ರುಚಿ ಇನ್ನೂ ಮೆದುಳಿನಲ್ಲಿದೆ! ಅವರ ಇನ್ನೊಂದು ‘ಚಟ’ ಎಂದರೆ, ಮೊಸರಿನದ್ದು. ಅವರ ಊಟ ಸಾಕಷ್ಟು ಮೊಸರಿಲ್ಲದೆ ಮುಗಿಯುತ್ತಿರಲಿಲ್ಲ. ಆದ್ದರಿಂದ ಅವರಿಗೆ “ಮೊಸರು ರಾಮಣ್ಣ” ಎಂಬ ಅನ್ವರ್ಥ ನಾಮ ನಮ್ಮ ಸುತ್ತಮುತ್ತ ಇತ್ತು!.

ತಿಮ್ಮೇಗೌಡ ಎಂಬ ಸರಸ ಸ್ವಭಾವದ, ಹುಡುಗಾಟಿಕೆ ವ್ಯಕ್ತಿ ನಮ್ಮ ಬೆಂಗಳೂರಿನಿಂದಲೇ ಬಂದಿದ್ದರು – ವಿಶ್ವಸಂಸ್ಥೆಯ ಸ್ವಯಂ ಸೇವಕ (volunteer) ವೃತ್ತಿ ಮಾಡಲು. ರಾಮಣ್ಣ, ಅವರೊಡನೆ ಕೂಡ ಸಲುಗೆ ಬೆಳೆಸಿದ್ದರು. ಆಗಾಗ ತಿಮ್ಮೇಗೌಡರು ‘ಅಲ್ ಅರೂಬ’ ಹೋಟೆಲಿನಲ್ಲಿ ಕ್ಲಬ್ ಡಾನ್ಸ್ ನಲ್ಲಿ ಪಾಲ್ಗೊಳ್ಳಲು ಹೋಗುವಾಗ, ಒಮ್ಮೊಮ್ಮೆ ರಾಮಣ್ಣ ಸಹ ಜೊತೆಯಾಗಿ ಹೋಗುವ ರೂಢಿ ಇದ್ದುದು ನನಗೆ ತಿಳಿದಿತ್ತು. ಆದರೆ ರಾಮಣ್ಣನವರಂಥ ಗಂಭೀರ ವ್ಯಕ್ತಿತ್ವ, ಅವರ ಅಪಾರ ಜ್ಞಾನ ಸಂಪತ್ತನ್ನು ಕಂಡಿದ್ದ ನನಗೆ, ರಾಮಣ್ಣ ಎಂಬ ತೂಕದ (ನಿಜ ದಢೂತಿ ಶರೀರದ, ದಪ್ಪ ಮೀಸೆಯ, ಗೌರವಾನ್ವಿತ) ವ್ಯಕ್ತಿಗೆ ಈ ಚಟ ಸಾಧ್ಯವೇ; ಅಥವ ಇದು ತಿಮ್ಮೇಗೌಡರ ರೈಲೋ ಅನ್ನಿಸಿತ್ತು. ಒಮ್ಮೆ ಅವರನ್ನೇ ಕೇಳಿದ್ದೆ. “ಹೌದು ಒಬ್ಬನೇ ಮನೆಯಲ್ಲಿ ಕೂತು ಏನು ಮಾಡುವುದು. ಗೌಡ್ರು ಕರೀತಾರೆ; ನಾ ಹೋಗ್ತೀನಿ. ಅಲ್ಲಿ ಅವರು, ಯಾಕೆ ಗೋಡೆ ಕಡೆ ಮುಖ ಹಾಕ್ತೀರ? ಈ ಕಡೆ ತಿರುಗಿ, ಡಾನ್ಸ್ ನೋಡಿ ಅಂತಾರೆ. ನಾನು, ಡಾನ್ಸನ್ನ ನೋಡ್ಲಿಕ್ಕಲ್ಲ. ಮ್ಯೂಸಿಕ್ ಕೇಳಲು ಬಂದಿರೋದು. ಯಾವ ಕಡೆ ತಿರುಗಿ ಕೂತ್ರೂ ಕೇಳುತ್ತೆ ಅಂತೀನಿ” ಅಂದರು. ಭಾರತಕ್ಕೆ ವಾಪಸ್ ಬಂದ ನಂತರ, ರಾಮಣ್ಣ ಮೈಸೂರಿನ ಜೆ.ಸಿ ಎಂಜಿನೀಯರಿಂಗ್ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಗಾಗ ಬರುತ್ತಿದ್ದರು, ಆಗ ನಮ್ಮ ಮನೆಗೂ ಒಮ್ಮೊಮ್ಮೆ ಬರುವುದಿತ್ತು. ಕ್ರಮೇಣ ಅದೂ ನಿಂತು, ನಮ್ಮ ಭೇಟಿಗಳೂ ನಿಂತಾಯಿತು. ತಿಮ್ಮೇಗೌಡರೂ ಕೆಲವು ಬಾರಿ ನಮ್ಮ ಮನೆಗೆ ಬಂದಿದ್ದರು. ಅವರ ಶ್ರೀಮತಿ, ಪಾರ್ವತಮ್ಮನವರು, 1984ರಲ್ಲಿ, ನಮ್ಮ ಮನೆಯ ಗೃಹ ಪ್ರವೇಶದಲ್ಲೂ ಪಾಲ್ಗೊಂಡಿದ್ದರು. “ಕಾಲ ಎಂಥ ಹರಿತ ಕತ್ತರಿ ಪ್ರಯೋಗದಿಂದ ಸ್ನೇಹ-ಸಂಬಂಧಗಳನ್ನು ತುಂಡರಿಸುವುದೋ ಏನೋ” ಯಾರು ಬಲ್ಲರು?

ನಮ್ಮ ಮನೆ ಗೃಹಪ್ರವೇಶದಲ್ಲಿ ಶ್ರೀಮತಿ ಪಾರ್ವತಮ್ಮ ತಿಮ್ಮೇಗೌಡ

೪) ಒಂದು ಸಂಜೆ ನಾವು ಲೀಡೋ ಬೀಚಿನಲ್ಲಿ ವಿಹರಿಸುತ್ತಿದ್ದಾಗ, ಪ್ರಥಮ ಬಾರಿಗೆ ಒಬ್ಬ ಕುಳ್ಳಗಿದ್ದ ಹಾಗೂ ಆ ಎತ್ತರಕ್ಕೆ ಸ್ವಲ್ಪ ದಪ್ಪವೇ ಆಗಿದ್ದ, ಅದುವರೆಗೂ ಕಂಡಿರದ ಮಹಿಳೆಯೊಬ್ಬರನ್ನು ನೋಡಿ, ನಮ್ಮನಮ್ಮಲ್ಲೇ ಅವರು ಯಾರಿರಬಹುದು ಎಂಬ ಯೋಚನೆಯಲ್ಲಿದ್ದಾಗ, ಸ್ವಲ್ಪ ಸಮಯದ ನಂತರ ಆಕೆಯೇ ಬಂದು, “ಐ ಆಮ್ ಸಿತಾರ. ಐ ಟೀಚ್ ಇಂಗ್ಲಿಷ್ ಇನ್ ದಿ ಊನಿವರ್ಸಿಟಿ” ಎಂದು ನಮ್ಮೆಲ್ಲರ ಕೈ ಕುಲುಕಿ ತಮ್ಮ ಪರಿಚಯ ಮಾಡಿಕೊಂಡಿದ್ದರು. ಕ್ರಮೇಣ ಆಕೆ ಪಾಕೀಸ್ತಾನಿ ಎಂದು ಕಿದ್ವಾಯ್ ಮಗ ಅಲ್ ಬೆರೂನಿಯಿಂದ ತಿಳಿಯಿತು. ಅಲ್ ಬೆರೂನಿ ಸಹ ಅಪ್ಪ ಮತ್ತು ತಂಗಿಯ ರೀತಿ ಆಂಗ್ಲ ಭಾಷೆಯ ಉಪನ್ಯಾಸಕರಾಗಿದ್ದರು. ಇಲ್ಲಿ ಇನ್ನೊಂದು ವಿಷಯ ತಿಳಿಸಬೇಕು: ಅಲ್ ಬೆರೂನಿ, ಸಿತಾರ ಮತ್ತು ಮುದ್ದಪ್ಪ ಆಂಟಿ, ಮೂವರೂ ಮೊಗದಿಶು ವಿಶ್ವವಿದ್ಯಾಲಯದಲ್ಲಿ ಸಹೋದ್ಯೋಗಿಗಳಾಗಿ ಪಾಠ ಮಾಡುತ್ತಿದ್ದರು. ಕಿದ್ವಾಯ್ ಅವರು ಭಾರತದತ್ತ ಹೋದ ಮೇಲೆ, ಅಲ್ ಬೆರೂನಿ ಮತ್ತು ಸಿತಾರ ಒಟ್ಟಿಗೇ ವಾಸಿಸುತ್ತಿದ್ದರು. ಸಿತಾರ ಸುಮಾರು ನಾಲ್ಕೂವರೆಯಷ್ಟು ಅಥವ ಸ್ವಲ್ಪ ಹೆಚ್ಚಿನ ಎತ್ತರ. ಆದರೆ ಅಲ್ ಬೆರೂನಿ ಆರಡಿ ಸಮೀಪ. ನಾವು ಅವರಿಗೆ ಕ್ರಮೇಣ ಆತ್ಮೀಯರಾಗಿದ್ದೆವು. ಡಾ. ಜಗನ್ನಾಥ ಅವರಿಗೆ “ಕುಂಬಳಕಾಯ್ ಸಿತಾರ” ಎಂದು ಹೆಸರಿಟ್ಟಿದ್ದ. ಸೋಮಾಲಿಯಾ ಆಂತರಿಕ ಯುದ್ಧದ ಸಮಯದಲ್ಲಿ ಅವರಿಬ್ಬರೂ ಅಮೇರಿಕದತ್ತ ವಲಸೆ ಹೋಗಿ, ಮದೂವೆಯೂ ಆಗಿ, ವಾಶಿಂಗ್ಟನ್ ಹತ್ತಿರ ಒಂದು ಸ್ಟೋರ್ ನಡೆಸಿಕೊಂಡು ಬದುಕುತ್ತಿದ್ದಾರೆ. ಅಮೇರಿಕದಲ್ಲಿದ್ದಾಗ, ನಾನು ಮತ್ತು ಕಮಲ ಅವರಿಬ್ಬರೊಡನೆ ಸಾಕಷ್ಟು ಮಾತಾಡಿದ್ದೆವು. ಆದರೆ, ಅವರು ಆಹ್ವಾನಿಸಿದರೂ ಸಮಯದ ಅಭಾವದಿಂದ ಹೋಗಲಾಗಲಿಲ್ಲ.

ಮುಂದಿನವಾರ ಮುಂದುವರೆಯುವುದು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ನಂ: 98446 45459

Related post

Leave a Reply

Your email address will not be published. Required fields are marked *