ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-3

-ಮತ್ತೊಂದು ವೀಸಾ ಪ್ರಹಸನ-

ಅಂತೂ ಇಂತೂ ಏಡನ್ ತಲಪಿದ್ದಾಗಿತ್ತು. ವಿಮಾನದ ಏಣಿ ಇಳಿದು ನಿಲ್ದಾಣದತ್ತ ನಡೆವ ಇತರ ಪ್ರಯಾಣಿಕರ ಜೊತೆಗೆ ನಾವೂ ಹೆಜ್ಜೆ ಇಟ್ಟೆವು. ಪ್ರಪ್ರಥಮವಾಗಿ ಹೊರದೇಶವೊಂದರ ನೆಲದ ಮೇಲೆ ದಂಪತಿ ಇಬ್ಬರೂ ಒಟ್ಟಾಗಿ ಹೆಜ್ಜೆ ಊರಿದ್ದು ನನಗೆ ಖುಷಿ ನೀಡಿತ್ತು. ಇವಳಿಗೆ? ಇಲ್ಲ ಅಂತ ಹೇಗೆ ಹೇಳಲಿ; ಗಂಡನೊಡನೆ ಪ್ರಯಾಣ ಮಾಡಿದ್ದಾದರೂ ಖಂಡಿತ ಖುಷಿಯಾಗಿರುತ್ತೆ. ಏಡನ್ನಿನ ವಿಮಾನ ನಿಲ್ದಾಣ ಅಂಥ ದೊಡ್ಡದೇನೂ ಆಗ ಆಗಿರಲಿಲ್ಲ. ನಮ್ಮ ಬೆಂಗಳೂರಿನದ್ದೇ ಸಾಮಾನ್ಯ ಅಂದ ಮೇಲೆ, ಏಡನ್ನಿನದ್ದು ಅತೀ ಸಾಮಾನ್ಯ. ಬಹುಶಃ ದಿನವಿಡೀ ಒಂದರ್ಧ ಡಜನ್ ವಿಮಾನಗಳ ಓಡಾಟ ಇದ್ದಿದ್ದಿರಬಹುದು!

ಟರ್ಮಿನಲ್ ಕಟ್ಟಡದೊಳಗೆ ಸೇರಿ, ಪಾಸ್ ಪೋರ್ಟ್ ಹೊರತೆಗೆದು, ಆ ನಿಲ್ದಾಣ ತಲುಪಿದ್ದರ ಕುರುಹಾಗಿ ‘ಎಂಟ್ರಿ’ ಮುದ್ರೆಗಳಿಗಾಗಿ, ಇತರರ ಸಾಲು ಸೇರಿಕೊಂಡೆವು. ಜಗತ್ತಿನ ಪ್ರತಿ ವಿಮಾನ ನಿಲ್ದಾಣ ತಲುಪಿದಾಗ ಹಾಗೂ ಬಿಟ್ಟು ಹೋಗುವಾಗ, ಈ ರೀತಿಯ ‘ಏಂಟ್ರಿ’ ಮತ್ತು ‘ಏಗ್ಸಿಟ್’ ಸ್ಟ್ಯಾಂಪ್ ಹಾಕಲಾಗುತ್ತದೆ. ಹಾಗಾಗಿ ಯಾರು ಯಾವ ಯಾವಾಗ ಯಾವ ಯಾವ ದೇಶಕ್ಕೆ ಹೋಗಿದ್ದರು ಎಂಬುದು ಅಧಿಕಾರಿಗಳಿಗೆ ತಿಳಿದುಹೋಗುತ್ತದೆ.
ಏಡನ್ನಿನ ಇಮ್ಮಿಗ್ರೇಶನ್ ಅಧಿಕಾರಿಗಳ ಭಾಷೆ ನನಗೇ ‘ಗ್ರೀಕ್ ಮತ್ತು,ಲ್ಯಾಟಿನ್’ ಅನ್ನಿಸಿತ್ತು; ಇನ್ನು ನನ್ನ ಅರ್ಧಾಂಗಿಗೆ? ನನ್ನ ಹಿಂದೆ ‘ಕುರಿ’ಯ ಥರ ಅನುಸರಿಸುತ್ತಿದ್ದಳು, ಅಂದರೂ ಆದೀತು – ಹಾಗೆ ಅನ್ನಬಾರದಾದರೂ! ಆ ಕ್ಷಣ ನಾನೇ ಅಕಸ್ಮಾತ್ ಅವಳ ಸ್ಥಾನದಲ್ಲಿ ಇದ್ದಿದ್ದರೆ, ಅನ್ನಿಸಿ ನೋವಾಯಿತು. ವಿದ್ಯೆ ಮತ್ತು ಚಾಕಚಕ್ಯತೆ ಹೆಣ್ಣು ಗಂಡು ಯಾರಿಗಾದರೂ ಎಷ್ಟು ಅತ್ಯವಶ್ಯ ಅನ್ನಿಸಿ, ಅವಳ ಮುಖ ನೋಡಿದೆ. ಗಂಡನ ಹಿಂದೆ ಅದಮ್ಯ ವಿಶ್ವಾಸದಿಂದ ಎಂಬಂತೆ ನಿಂತು ಸುತ್ತಮುತ್ತ ತನ್ನ ಕಣ್ಣಾಡಿಸುತ್ತಿದ್ದಳು! ಮುಗ್ಧ ಮಗುವಿನ ಹಾಗೆ.

ಆ ಅಧಿಕಾರಿಗಳ ಅರೇಬಿಕ್ ಮಾತು ನನಗೆ ತಿಳಿಯದ ಭಾಷೆ. ಅಂತೂ ನಮ್ಮ ಸರದಿ ಬಂತು. ಎರಡೂ ಪಾಸ್‌ಪೋರ್ಟ್ ಗಳನ್ನೂ ಆತನ ಕೈಲಿಟ್ಟೆ. ಪುಟಗಳನ್ನೆಲ್ಲ ಶೋಧಿಸಿದ ನಂತರ, ಯೆಮನ್ ವೀಸಾ ಎಲ್ಲಿ ಎಂದು ಅವನ ಭಾಷೆಯಲ್ಲೇ ಕೇಳಿದ. ನಾನು ಇಂಗ್ಲೀಷಿನಲ್ಲಿ, ಬಾಂಬೆಯಲ್ಲಿ ನಡೆದದ್ದನ್ನು ಹೇಳಿದೆ. ಆತನಿಗೆ ನನ್ನ ಮಾತುಗಳು ಅರ್ಥ ಆದಂತೆ ಅನ್ನಿಸಲಿಲ್ಲ. ಅವನ ಹಿಂದೆ ಇಡೀ ದೃಶ್ಯಕ್ಕೆ ಸಾಕ್ಷಿಯಾದಂತೆ ನೋಡುತ್ತಿದ್ದ ಭಾರತೀಯರೊಬ್ಬರತ್ತ ತಿರುಗಿ, ಸ್ವಲ್ಪ ಏರುದನಿಯಲ್ಲಿ ಏನೋ ಹೇಳಲಾರಂಭಿಸಿದ. ಬಹುಶಃ ಏರ್ ಇಂಡಿಯಾದ ಏಡನ್ ಸ್ಟೇಷನ್ ಮ್ಯಾನೇಜರ್ ಅನ್ನಿಸಿತು (ಅವರ ಹೆಸರನ್ನೂ ನಮ್ಮಣ್ಣ ಬರೆದು ತಿಳಿಸಿದ್ದರು – ಬಹುಶಃ ರಾಮನ್ ಎಂದು ಆಗಿದ್ದಿರಬಹುದು. ತಮಿಳು ಮಾತೃಭಾಷೆಯವರು). ನನ್ನ ಬದಲಿಗೆ ಅವರಿಗೆ ಅರೇಬಿಕ್ ಕ್ಲಾಸ್ ತೆಗೆದುಕೊಂಡ ಆ ಅಧಿಕಾರಿ ಅಂದುಕೊಂಡೆ. ಅಷ್ಟೇ ಅಲ್ಲದೆ, ನಮ್ಮನ್ನು ಸಾಲು ಬಿಟ್ಟು ಪಕ್ಕ ನಿಲ್ಲಲು ಹೇಳಿ, ನಮ್ಮ ಪ್ರಹಸನದ ತೀರ್ಮಾನ ಆಗುವವರೆಗೆ ವಿಮಾನ ತಡೆಹಿಡಿಯುವಂತೆ ಫರ್ಮಾನು ಹೊರಡಿಸಿದ!

ನನ್ನ ಪರಿಸ್ಥಿತಿ ಊಹಿಸಿಕೊಳ್ಳಿ – ನಿಜ ಅರ್ಥದಲ್ಲಿ ‘ಪರದೇಶವೋ ಪರದಾಟವೋ’ ಆಗಿತ್ತು. ಏನಾಗುತ್ತಿದೆ ಹಾಗೂ ಇನ್ನೂ ಏನೇನಾಗಬಹುದು ಎಂಬ ಪರಿವೆ ಇಲ್ಲದೆ, ನನ್ನ ಸಂಕಷ್ಟದ ಮಡುವಲ್ಲಿ ಒದ್ದಾಡುತ್ತಿದ್ದಾಗ, ಯಾರೋ ಒಬ್ಬ ಪಾಶ್ಚಿಮಾತ್ಯ ಪ್ರಜೆ, ನನ್ನ ಪಕ್ಕಕ್ಕೆ ಸರಿದು, ಆಂಗ್ಲ ಭಾಷೆಯಲ್ಲಿ, “ಯೂ ಡೋಂಟ್ ವರಿ ಮಿಸ್ಟರ್; ಐ ವಿಲ್ ಟೇಕ್ ಯೂ ಬೋತ್ ಟು ಮೈ ಕಂಟ್ರಿ, ಅಂಡ್ ಮೇಕ್ ಫರ್ದರ್ ಪ್ಲ್ಯಾನ್ಸ್” ಎಂದ. ನಾನು ಸಭ್ಯವಾಗಿ, “ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್, ಬಟ್ ಡೋಂಟ್ ಬಾದರ್” ಅಂದೆ. ಆಗ ಆತನಿಂದ ನಾವು ಸ್ವಲ್ಪ ದೂರ ಸರಿದು ನಿಂತೆವು. ಯಾವ ಹುತ್ತದಲ್ಲಿ ಅದೆಂಥೆಂಥ ಹಾವೋ ಯಾರಿಗೆ ಗೊತ್ತು! ಇಂಥ ಆಗಂತುಕ ಸಹಾಯ ಹಸ್ತಗಳ ಹಿಂದೆ ಏನೇನು ಕೃತ್ರಿಮ ವ್ಯೂಹಗಳೋ ಏನೋ? ಸುಮ್ಮ ಸುಮ್ಮನೆ ಯಾರಾದರೂ ಏಕೆ ಸಹಾಯ ಮಾಡುವರು? ಅದೂ ಅಲ್ಲದೆ ಪರದೇಶ ಬೇರೆ!

ಕ್ಯೂ ಖಾಲಿಯಾದ ನಂತರ, ಸಾಕಷ್ಟು ಬಿಸಿಬಿಸಿ ಚರ್ಚೆಯೇ ಜರುಗಿದ ತರುವಾಯ ರಾಮನ್ ಅವರು ‘ಗೆದ್ದು’ ನಮಗೆ ಒಳಗೆ ಬಿಡಿಸಿದರು. ಸ್ವಲ್ಪ ಸಮಯ ಕಳೆದಮೇಲೆ ನಮ್ಮ ವಿಮಾನವೂ ಮುಂದಿನ ಗಮ್ಯದತ್ತ ಹಾರಿತು. ಅಷ್ಟರಲ್ಲಿ ಸುಮಾರು ಒಂದರ್ಧ ಗಂಟೆ ತಡವಾಗಿತ್ತು.
ಏರ್‌ಪೋರ್ಟ್ ಹೊರಗಿದ್ದ ತಮ್ಮ ಕಛೇರಿಗೆ ರಾಮನ್ ನಮ್ಮನ್ನು ಕರೆದೊಯ್ದರು. ಬಹುಷಃ ನನಗೂ ಆಗ ‘ಕ್ಲಾಸ್’ ಶುರು ಆಗಬಹುದು ಅಂದುಕೊಂಡೆ. “ಏಕೆ ಡಾಕ್ಟರ್, ಹೀಗೆ ವೀಸಾ ಇಲ್ಲದೆ ಬಂದಿರಿ?” ಎಂದಷ್ಟೇ ಕೇಳಿದರು, ನನ್ನ ಪುಣ್ಯಕ್ಕೆ. ಮತ್ತೊಮ್ಮೆ ಬಾಂಬೆಯ ಎಮನ್ ಕಛೇರಿಗೆ ಹೊಗಿದ್ದ ‘ಪ್ಲೇಟ್’ ಹರಿಬಿಟ್ಟೆ. ಅಷ್ಟಕ್ಕೇ ತೃಪ್ತಿ ಹೊಂದಿದಂತೆ, ನಮ್ಮಣ್ಣನ ಬಗ್ಗೆ ವಿಚಾರಿಸಿದರು. ಅವರು ಹಾರ್ಗೀಸಾಕ್ಕೆ ಹೋಗಿದ್ದು, ಅಲ್ಲಿ ಅಣ್ಣ ಮೊದಲ್ಗೊಂಡು ಬಾಕಿ ಭಾರತೀಯರನ್ನೆಲ್ಲ ಸಂಧಿಸಿದ್ದು, ಊಟ ಮಾಡಿದ್ದರ ವಿವರ ಇತ್ತರು. ನಾನು, “ನಿಮಗೆ ತೊಂದರೆಕೊಟ್ಟೆ, ದಯಮಾಡಿ ಕ್ಷಮಿಸಿ” ಅಂದೆ. “ನೋ ಡೋಂಟ್ ವರಿ; ದಿಸ್ ಈಸ್ ಪಾರ್ಟ್ ಆಫ್ ದಿ ಗೇಮ್… ದೀಸ್ ಪೀಪಲ್ ಆರ್ ವೆರಿ ಆರೊಗೆಂಟ್” ಎನ್ನುತ್ತಾ, ತಕ್ಷಣ ತಮಿಳಿಗೆ ಬದಲಾಯಿಸಿ, “ತಿನ್ನಲು ಸರಿಯಾಗಿ ಅನ್ನ ಇಲ್ಲದಿದ್ದರೂ ಕುಂಡಿ ತುಂಬ ಕೊಬ್ಬು”, ಅಂತ ಹೇಳಿ ನಕ್ಕು, ನಮ್ಮನ್ನು ಹೊರಗಿನವರೆಗೆ ಬಂದು ಬೀಳ್ಕೊಟ್ಟರು.
ತಮ್ಮ ಸಹಾಯಕನಿಗೆ, ನಮ್ಮನ್ನು ಟ್ಯಾಕ್ಸಿಯಲ್ಲಿ ಹೋಟೆಲ್ ವೌಚರ್ ಇತ್ತು ಕಳಿಸವ ವ್ಯವಸ್ಥೆ ಮಾಡಿ, ಸಂಜೆಗೆ ನಗರದ ಕಛೇರಿ ಕಡೆ ಬರ ಹೇಳಿದರು.
ರೂಮಲ್ಲೇ ಊಟ ಮಾಡಿ, ರೆಸ್ಟ್ ನಂತರ, ಏರ್ ಇಂಡಿಯ ಆಫೀಸಿನತ್ತ ನಡೆದೇ ಹೊರೆಟಿವು. ಏಳೆಂಟು ನಿಮಿಷಕ್ಕೆ ನಡೆದೇ ಹೋಗಬಹುದೆಂದೂ, ನೇರ ದಾರಿ ಎಂದೂ ಮೊದಲೇ ತಿಳಿಸಿದ್ದರು.

ಸಂಕ್ಷಿಪ್ತವಾಗಿ ಆ ದೇಶದ ಇತಿಹಾಸ ಹೇಳುವುದಾದರೆ, ಎಮನ್ ಎಂಬ ಒಟ್ಟು ದೇಶ ಆ ಸಮಯದಲ್ಲಿ ದಕ್ಷಿಣ ಹಾಗೂ ಉತ್ತರ ಭಾಗಗಳಾಗಿ ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿದ್ದವು. ದಕ್ಷಿಣಕ್ಕೆ, ಅಂದರೆ ‘ಪೀಪಲ್ಸ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಎಮನ್’ ಭಾಗಕ್ಕೆ ‘ಏಡನ್’ ರಾಜಧಾನಿ, ಹಾಗೂ ಉತ್ತರಕ್ಕೆ , ಅಂದರೆ ‘ಎಮನ್ ಅರಬ್ ರಿಪಬ್ಲಿಕ್’ ಭಾಗಕ್ಕೆ ‘ಸನಾ’ ರಾಜಧಾನಿ ಆಗಿದ್ದವು. ಮುಂದೆ, ಎರಡೂ ವಿಭಾಗಗಳ ಏಕೀಕರಣ, 1990ರಲ್ಲಿ ಆಗಿ, ಒಟ್ಟಾದ ರಾಜ್ಯ ‘ರಿಪಬ್ಲಿಕ್ ಆಫ್ ಎಮನ್’ ಅಥವ ಸಂಕ್ಷಿಪ್ತವಾಗಿ ‘ಎಮನ್’ ಎಂದು ಕರೆಯಲ್ಪಟ್ಟು, ಒಕ್ಕೂಟದ ರಾಜಧಾನಿಯಾಗಿ ‘ಸನಾ’ ಆಯ್ಕೆ ಆಯಿತು. ಪೂರ್ವಕಥೆಯ ಪ್ರಕಾರ, ಇಸ್ಲಾಮಿಕ್ ರಾಜ್ಯಗಳಾಗುವುದಕ್ಕೂ ಬಹಳ ಹಿಂದೆ, ಎಮನ್ ಒಟ್ಟು ದೇಶ “ಅರೇಬಿಕ್ ಫೆಲಿಕ್ಸ್” – ಅಂದರೆ ‘ಸಂತೋಷ ಹಾಗೂ ಉಚ್ಛ್ರಾಯ ಅರೇಬಿಯ’ ಎಂದು ಕರೆಯಲ್ಪಟ್ಟಿತ್ತು
ಎಂಬ ಉಲ್ಲೇಖವಿದೆಯಂತೆ. ಅಲ್ಲದೆ ಇಸ್ರೇಲ್ ರಾಜ ಸೋಲೊಮನ್ ಅವರ ರಾಣಿ ಶೀಬಾ ಎಮನ್ ದೇಶದವಳು ಎಂಬುದು ಐತಿಹ್ಯ.

ನಾವು ಕಾಲಿಡುವಾಗ ‘ಪೀಪಲ್ಸ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಎಮನ್’ ಎಂಬುದು ಮಿಲಿಟರಿ ಆಡಳಿತಕ್ಕೆ ಒಳಪಟ್ಟಿತ್ತು. ಈ ಜಗತ್ತಿನ ಬಹುಷಃ ಎಲ್ಲ ‘ಪೀಪಲ್ಸ್ ಡೆಮಾಕ್ರಸಿ’ಗಳೂ ನಿರಂಕುಶ ಪ್ರಭುತ್ವದ ದ್ಯೋತಕಗಳು! ಅದೇ ಕಾರಣ ಇದ್ದಿರಬಹುದು, ಇಡೀ ರಸ್ತೆ ಬಹುಮಟ್ಟಿಗೆ ನಿರ್ಜನವಾಗಿತ್ತು. ಆಗೊಮ್ಮೆ ಈಗೊಮ್ಮೆ ಒಂದೊಂದು ಕಾರು, ಮಿನಿಬಸ್ಸಿನ ಓಡಾಟ ಅಷ್ಟೆ. ನನ್ನ ಕಮಲಳಿಗೆ, ಆ ಜನರಿಲ್ಲದ ರಸ್ತೆ ನೋಡಿಯೇ ಭಯ ಉಕ್ಕಿರಬೇಕು; ಪಾಪ ನನ್ನ ತೋಳನ್ನು ಭದ್ರ ಹಿಡಿದು ಹೆಜ್ಜೆ ಹಾಕುತ್ತಿದ್ದಳು. ಅನತಿ ದೂರದಲ್ಲೇ ಏರ್ ಇಂಡಿಯಾ ಮಹಾರಾಜನ ಚಿತ್ರ ಹಾಗೂ ಫಲಕ ಕಣ್ಣಿಗೆ ಕಂಡವು. ಖುಷಿಯಿಂದ ಹತ್ತಿರ ಹೋಗಿ ನೋಡಿದರೆ ಒಳಗೆ ನರಪಿಳ್ಳೆಯೂ ಇಲ್ಲ! ಒಂದಿನಿತು ಅಂಜಿಕೆ ಆದರೂ, ಧೈರ್ಯ ಮಾಡಿ ಹೆಜ್ಜೆ ಒಳಗಿಟ್ಟೆವು. ಒಳಗೆ ಒಂದು ನೆಲಮಾಳಿಗೆಯತ್ತ ಏರ್ ಇಂಡಿಯಾ ಎಂಬ ಬಾಣದ ಗುರುತು. ಕೆಳಕ್ಕೆ, ಇನ್ನೂ ಹೆಚ್ಚು ಅಳುಕಿನಿಂದಲೇ, ನನ್ನವಳ ಕೈ ಭದ್ರ ಹಿಡಿದು ನಿಧಾನ ಇಳಿದೆ. ಅದೆಂಥ ನಿರಾಳ! ಹೌದು ಅದೇ ವೈಮಾನಿಕ ಕಛೇರಿ! ಒಳಗೆ ಒಬ್ಬ ಹೆಂಗಸು ಮತ್ತು ಗಂಡಸೊಬ್ಬ, ಅಷ್ಟೆ ಸಿಬ್ಬಂದಿ. ರಾಮನ್ ಇನ್ನೂ ಬಂದಿರಲಿಲ್ಲ. ನಮ್ಮ ಟಿಕೆಟ್ ಎಲ್ಲ ನೋಡಿ, ಹೋಟೆಲ್ ಬಗ್ಗೆ ವಿಚಾರಿಸಿ, ಸೋಮಾಲಿ ಕಛೇರಿಯಲ್ಲಿ ವೀಸಾ ಬಗ್ಗೆ ವಿಚಾರಿಸಲೂ ಹೇಳಿ, ಮಾರ್ಗ ಕೂಡ ಹೇಳಿ, ಸೌಜನ್ಯದಿಂದಲೇ ಕಳುಹಿಸಿದರು. ರಾಮನ್ ಅವರ ಬಗ್ಗೆ ವಿಚಾರಿಸಲು, ಆ ಹೊತ್ತಿನ ನಂತರ ಅವರು ಬರುವ ಗ್ಯಾರಂಟಿ ಇಲ್ಲ ಎಂದರು.
ಇಂಥ ‘ಡಂಜನ್’ ಒಳಗೂ ನಮ್ಮನ್ನು ತಿಂದು ತೇಗದ ಒಳ್ಳೆಯತನದ ‘ಹುಲಿ’ಗಳನ್ನು ಕಂಡು ಆನಂದಪಟ್ಟು ಹೊರಬಿದ್ದೆವು. ಏಡನ್ ನಗರ ಗಲ್ಫ್ ಆಫ್ ಏಡನ್ ಎಂಬ ಕೊಲ್ಲಿಗೆ ಹೊಂದಿಕೊಂಡಿದೆ (ಈ ಕೊಲ್ಲಿಯ ಉತ್ತರಕ್ಕೆ ಎಮನ್ ದೇಶ, ಪೂರ್ವಕ್ಕೆ ಅರಬ್ಬೀ ಸಮುದ್ರ, ಪಶ್ಚಿಮಕ್ಕೆ ಜಿಬೂತಿ ದೇಶ ಹಾಗೂ ದಕ್ಷಿಣಕ್ಕೆ ಸೋಮಾಲಿಯ ಇದೆ). ಅಂದರೆ ಅದು ಕರಾವಳಿ ಹವಾಮಾನ. ತುಂಬ ಸೆಕೆ ಹಾಗೂ ಬೆವರು ಅತೀ ಹೆಚ್ಚು.

ಮತ್ತೆ ಕೈ ಹಿಡಿದೇ ಬೆವರು ಸುರಿಸುತ್ತಾ ಮೆರವಣಿಗೆ ಹೊರಟು, ಸೋಮಾಲಿ ದೂತಾವಾಸ ತಲಪಿದೆವು. ಅದೂ ಸಹ ಇತರೆ ಕಛೇರಿಗಳು ಇದ್ದ ಹಾಗೆ, ತೀರ ಸಾಮಾನ್ಯ ಕಟ್ಟಡದಲ್ಲಿದ್ದು, ಒಳಗೆ ಕೆಲಸ ಇಲ್ಲದೆ ಹರಟೆಯಲ್ಲಿ ತಲ್ಲೀನವಾಗಿದ್ದ ಎರಡೋ ಮೂರೋ ಮಂದಿ ಇದ್ದರು. ಅಂದರೆ ಅಲ್ಲಿಯ ದಿನನಿತ್ಯದ ವಹಿವಾಟು ಹೇಗಿತ್ತೆಂದು ಅರಿತಂತಾಯ್ತು. ಅವರೆಲ್ಲರೂ ಆಫ್ರಿಕ ಜನ ಎಂದು ಮೇಲ್ನೋಟಕ್ಕೇ ಎದ್ದು ಕಾಣುವಂತಿದ್ದರು. ಆದರೆ ಆಫ್ರಿಕಾದ ದಕ್ಷಿಣದ ದೇಶಗಳತ್ತ ಹೋದ ಹಾಗೆ, ಕಾಣಿಸುವ ಪೈಪೋಟಿಯ ದಪ್ಪದಪ್ಪ ತುಟಿ ಹಾಗೂ ದಪ್ಪ ನಿತಂಬಗಳಾಗಿರಲಿಲ್ಲ. ನೋಡುವಂಥ ಲಕ್ಷಣಗಳಿದ್ದವರು.
ಒಬ್ಬರಿಗೆ ನನ್ನ ಸೋಮಾಲಿ ಕೆಲಸದ ಪತ್ರ ಮತ್ತು ಟಿಕೆಟ್ಟುಗಳನ್ನು ತೋರಿಸಿದೆ. ಆ ಹೆಣ್ಣು “ವಾಟ್ ಅಬೌಟ್ ವಿಸಾ?” ಅಂತ ಇಂಗ್ಲೀಷಿನಲ್ಲೇ ಕೇಳಿ ನನ್ನ ಆಶ್ಚರ್ಯಕ್ಕೆ ಕಾರಣಳಾದಳು. ನಾನು ವಿವರಿಸಿ ಹಾರ್ಗೀಸಾ ತಲಪಿದಾಗ ಅಲ್ಲಿಯೇ ನಿಲ್ದಾಣದಲ್ಲೇ ಕೊಡುವರಂತೆ ಎಂದು ಹೇಳಿದರೂ, ವೀಸಾ ಬೇಕು ಮತ್ತು ಅದಕ್ಕೆ ಇಬ್ಬರಿಂದ ಇಪ್ಪತ್ತು ಡಾಲರ್ ಫೀಸು ಎಂದಳು. ಅಲ್ಲದೆ, ಆಗಲೇ ಆಫೀಸಿನ ವ್ಯವಹಾರ ಮುಗಿದಿದೆ ಹಾಗೂ ಮುಖ್ಯಸ್ಥರೂ ಹೋಗಿ ಆಗಿದೆ, ಆದ್ದರಿಂದ ನಾಳೆ ಬೆಳಿಗ್ಗೆ ಬನ್ನಿ ಎಂದು ಸಾಗಹಾಕಿದಳು. ಮೇಲಾಗಿ ನಾಳೆಯ ಹಾರ್ಗೀಸಾ ಫ್ಲೈಟ್ ಇದ್ದದ್ದು ಮಧ್ಯಾಹ್ನದ ಹೊತ್ತಿಗೆ. ಹಾಗಾಗಿ ‘ಖಾಲಿ ಕೈಲಿ’ ಹೋಟೇಲಿನತ್ತ ಹೆಜ್ಜೆ ಹಾಕಿದೆವು.

ರಾತ್ರಿ ಊಟಕ್ಕೆ ರೆಸ್ಟಾರಂಟ್ ಅನುಭವ ಇಲ್ಲಿಯೂ ಪಡೆವ ಆಸೆ. ಅಲ್ಲೇ ಹೋಗಿ ಟೇಬಲ್ ಹಿಡಿದೆವು. ಅದು ನಮ್ಮ ಕಡೆಯ ತಾರಾ ಹೋಟೆಲ್ ಸಮಾನಕ್ಕೆ ಬರುವಷ್ಟು ಪೈಪೋಟಿ ನೀಡುವಂತಿತ್ತು, ಅಷ್ಟೆ; ಆದರೆ ಅಲ್ಲ. ಆ ನಾಡಲ್ಲಿ ಅರಬ್ ಸಂಸ್ಕೃತಿಯಾದ್ದರಿಂದ ಮಾಂಸ ಭಕ್ಷ್ಯಗಳ ಬಗ್ಗೆ ದಿಗಿಲಿತ್ತು. ಮೇಲಾಗಿ ಅಂಥ ವಾತಾವರಣವೇ ನಮಗೆ ನವನವೀನ! ಹಾಗಾಗಿ ಬ್ರೆಡ್ ಬಟರ್, ಮೊಟ್ಟೆ ಮತ್ತು ಸಲಾಡ್ ಆರ್ಡರ್ ಮಾಡಿದೆವು. ಆತ “ಯೂ ವಾಂಟ್ ಎಗ್ ಸಾಫ್ಟ್ ಆರ್ ಹಾರ್ಡ್?” ಎಂದ. ತಕ್ಷಣಕ್ಕೆ ವಿವರ ಕೇಳದೆ, ಹಾರ್ಡ್ ಎಂದೆ. ಊಟ ಆರಂಭಿಸಿ, ಮೊಟ್ಟೆ ಶೆಲ್ ಸಹಿತ ಇದ್ದದ್ದು ಕಂಡು, ಒಳಗೆ ಬಾಯಲ್ಡ್ ಆದದ್ದು ಇರಬಹುದೆಂದು ಕುಟ್ಟಿದೆ. ಮೇಜಿನ ಬಟ್ಟೆಯೆಲ್ಲ ಸುರಿದ ಹಸಿ ಮೊಟ್ಟೆ! ಹಾರ್ಡ್ ಅಂದರೆ ಹಾಗೆ ಅಂತ ಆಗ ಜ್ಞಾನೋದಯ ಆಯ್ತು. ಮುಜುಗರದಲ್ಲೂ ಊಟ ಮಾಡಿದ್ದು ವಿನೂತನ ಅನುಭವ!

ಮಾರನೆ ದಿನ ಕಛೇರಿಗಳು ಕೆಲಸ ಆರಂಭಿಸುವುದು ಬಹುಶಃ ಎಂಟಕ್ಕೆ ಅಂತ ತಿಳಿಸಿದ್ದರು – ಈಗ ಸರಿ ಜ್ಞಾಪಕ ಇಲ್ಲ. ನಮಗೆ ಇನ್ನೊಂದು ಮುಖ್ಯ ತೊಡಕಿತ್ತು. ವೀಸಾಕ್ಕಾಗಿ ಇಪ್ಪತ್ತು ಡಾಲರ್! ಅಂದಿನ ದಿನಗಳಲ್ಲಿ ಭಾರತ ಬಿಡುವಾಗ, ಪ್ರತಿ ಪ್ರಯಾಣಿಕರಿಗೆ ಅಧಿಕೃತವಾಗಿ ಏಳು ಡಾಲರ್ ಮಾತ್ರ ವಿದೇಶಿ ಹಣದ ವಿನಿಮಯಕ್ಕೆ ಅವಕಾಶವಿತ್ತು. ಅಂಥದ್ದರಲ್ಲಿ ಈ ವೀಸಾ ಥರ ವಿಷಮ ಪರಿಸ್ಥಿತಿ ಎದುರಾದರೆ ಹಾಗಾಗಿ ಅನೇಕರು ಕಪ್ಪುಮಾರುಕಟ್ಟೆಯ ಮೊರೆ ಹೋಗುತ್ತಿದ್ದರು – ಇಂದಿರಾ ಗಾಂಧಿ ಕೃಪಾಪೋಷಿತ ಎಮರ್ಜೆನ್ಸಿ ಇದ್ದರೂ ಸಹ. ಎಲ್ಲರಿಗೂ ಅವರವರದ್ದೇ ಆದ ಸಮಯ ಸಂದರ್ಭಗಳು ಅಂತ ಇರುವುದಿಲ್ಲವೇ? ಅಣ್ಣ ಮೊದಲೇ ಇಂಥ ಪರಿಸ್ಥಿತಿಗೂ ರೆಡಿ ಇರುವಂತೆ ತಿಳಿಸಿದ್ದರು. ನನ್ನ ಒಬ್ಬ ಗೆಳೆಯನ ಮೂಲಕ ನೂರು ಡಾಲರ್ ಕಳ್ಳಸಂತೆ ಹುಡುಕಿಸಿ ತರಿಸಿದ್ದೆ. ಒಂದು ಪ್ಯಾಂಟಿನ ಬೈಂಡ್ ಒಳಗೆ ನನ್ನ ಇನ್ನೊಬ್ಬ ಭಾವ, ಡಾ. ರವಿ ಅವರು ತರಾತುರಿಯಲ್ಲಿ ಹೊಲೆದು ಕೊಟ್ಟಿದ್ದರು. ಈಗ ಆ ಹಣ ಅತಿ ಮುಖ್ಯ ಬ್ಯಾಂಕ್ ಅಕೌಂಟ್ ಥರ ಆಗಿತ್ತು, ನಮ್ಮ ಆ ಸ್ಥಿತಿಯಲ್ಲಿ. ಅಕಸ್ಮಾತ್ ಅದಿಲ್ಲದ ಸಂದರ್ಭವನ್ನು ಇಂದು ನೆನೆದರೂ ನಡುಕ ಹುಟ್ಟುವುದು. ಇದು ನಾಣ್ಯದ ಒಂದು ಮುಖ ಅಂತ ಆದರೆ, ಅದೇ ನಾಣ್ಯದ ಮತ್ತೊಂದು ಕ್ಲಿಷ್ಟ ಮುಖ ಎದುರಾಗಿ, ಅಕಸ್ಮಾತ್ ಏರ್‌ಪೋರ್ಟ್ ನಲ್ಲಿ ಸಿಕ್ಕಿ ಬಿದ್ದಿದ್ದರೆ? ಮೇಲಾಗಿ, ಆಗ ಅನೇಕ ಕತೆಗಳು ಪ್ರಚಲಿತದಲ್ಲಿದ್ದವು. ವಿಮಾನ ನಿಲ್ದಾಣದಿಂದಲೆ ಮಾಯ ಆದಂಥ ಅನೇಕರ ಬಣ್ಣನೆಗಳು; ಇನ್ನೂ ವಿಧವಿಧ ಕರುಳು ಹಿಂಡುವ ಪ್ರಸಂಗಗಳು. ಹಾಗಿತ್ತು ಆ ‘ತುರ್ತು’ ಭಯಗ್ರಸ್ಥ ಕಾಲ!

ಈಗ ಅಂದಿನಂತಿಲ್ಲ. ಸಾಕಷ್ಟು ವಿದೇಶಿ ಹಣ ಯಾವ ಬ್ಯಾಂಕಲ್ಲಾದರೂ ದೊರಕುತ್ತದೆ; ವೀಸಾ ಇರುವ ಪಾಸ್‌ಪೋರ್ಟ್ ಮತ್ತು ಪ್ರಯಾಣ ಖಾತ್ರಿ ಆದ ಟಿಕೆಟ್ ತೋರಿಸಬೇಕಷ್ಟೆ. ಏರ್ಪೋರ್ಟಲ್ಲೇ ವಿನಿಮಯ ಮಾಡಿಸುವ ಸ್ಥಿತಿಯೂ ಸದ್ಯ ಇಲ್ಲ. ನಾನು ನನ್ನ ಪತ್ನಿ ಅಮೆರಿಕಕ್ಕೆ ಎರಡು ಸಲ ಹೋಗಿದ್ದಾಗಲೂ, ಮಗಳು ಬೇಡ ಎಂದಿದ್ದರೂ, ಖರ್ಚಿಗಿರಲಿ ಎಂದು ಸಾವಿರ ಡಾಲರ್ ಪ್ರತಿ ಸಲ ಕೊಂಡು ಹೋಗಿದ್ದೆವು.

ಬೆಳಿಗ್ಗೆ ಬೇಗ ಎದ್ದು, ಆತುರಾತುರ ತಿಂಡಿ ತಿಂದದ್ದೇ, ಟ್ಯಾಕ್ಸಿ ಹಿಡಿದು ಏರ್‌ಪೋರ್ಟಿನತ್ತ ಹೊರಟೆವು. ಎಲ್ಲರ ಮನಸ್ಸಿನಲ್ಲೂ ಸದಾ ಏನಾದರೂ ವಿಚಾರಗಳ ಕಾರ್ಖಾನೆಯ ಯಂತ್ರ ದೌಡಾಯಿಸುತ್ತಿರುವ ಹಾಗೆ, ಆ ಸಮಯ ನನ್ನಲ್ಲೂ ಜರುಗುತ್ತಿತ್ತು; ನನ್ನ ಪತ್ನಿಯ ಮನದಲ್ಲೂ ಬಹುಶಃ.
ನನ್ನ ಅಣ್ಣ ಅತ್ತಿಗೆ ದುಗುಡದಿಂದ ನಮ್ಮ ಬರುವಿಕೆಯ ಎದುರು ನೋಡುತ್ತಿರುವ, ಬಿಟ್ಟುಬಂದ ಭಾರತದಲ್ಲಿ ಭಾವ ಮುಂತಾದವರು ಇನ್ನೇನು ನಾವು ತಲಪುವರು ಎಂಬ ಲೆಕ್ಕಾಚಾರದಲ್ಲಿ, ಈಗ ವಿಮಾನ ನಿಲ್ದಾಣದಲ್ಲಿ ಎಂತಹ ನಾಟಕವೋ ಎಂದು ತಕ್ಷಣಕ್ಕೆ, ಹೀಗೆ…! ಇನ್ನೂ ಅನೇಕ, ವೈವಿಧ್ಯಮಯ.

ಟ್ಯಾಕ್ಸಿಗೆ ಕಾಯಲು ತಿಳಿಸಿ, ಒಳಹೊಕ್ಕು, ನನ್ನ ಸೂಟ್ ಕೇಸ್ ಒಂದನ್ನು ಹೋಟೇಲಿಗೆ ಒಯ್ಯಬೇಕು ಎಂದಾಗ, ಅಲ್ಲಿಯ ಸಿಬ್ಬಂದಿ ಕಾರಣ ಕೇಳಿ, ಮಧ್ಯಾಹ್ನ ಫ್ಲೈಟ್ ಇರುವುದರಿಂದ, ಈಗದು ಅಸಾಧ್ಯ; ಬದಲಿಗೆ ಅದರೊಳಗಿಂದ ಏನು ಬೇಕಿದ್ದರೂ ತೆಗೆದುಕೊಳ್ಳಿ ಎಂಬಂತೆ ನಾನು ಅರ್ಥೈಸಿಕೊಂಡೆ. ಸರಿ ನನ್ನ ಜೇಬಲ್ಲಿ ಅದರ ಚಾವಿ ತಡಕಿದರೆ, ಅದೆಲ್ಲಿರಬೀಕು ಇಲ್ಲಿ. ಇನ್ನೊಂದು ಪ್ಯಾಂಟಿನಲ್ಲಿ ಹೋಟೇಲಲ್ಲಿದೆ! ಸಮಯದ ಮಾಂತ್ರಿಕ ಆಟ ಹೆಜ್ಜೆಹೆಜ್ಜೆಗೂ ನಮ್ಮನ್ನು ತೊಡಕಿಗೆ ಒಡ್ಡುತ್ತಲೇ ನಮಗೆ ಪಾಠ ಹೇಳುತ್ತಾ ಹೇಳುತ್ತಾ ಓಡುವುದು! ಸರಿ, ಮತ್ತೆ ಬರುವುದಾಗಿ ಹೇಳಿ, ಅದೇ ಟ್ಯಾಕ್ಸಿಯಲ್ಲಿ ದೌಡು. ಸದ್ಯ ಆ ಕಾಲದಲ್ಲಿ ಅಷ್ಟಾದರೂ ಆ ದೇಶದ ಏರ್ಪೋರ್ಟಿನಲ್ಲೂ ಅಂಥ ಸಹಕಾರ ಇತ್ತು. ಅದೇ ನಮ್ಮ ದೇಶ ಆಗಿದ್ದರೆ! ಅದು ಊಹೆಗೂ ಅಸಾಧ್ಯ ಅಲ್ಲವೇ? ಈ ದಿನಮಾನದ ಏರ್‌ಪೋರ್ಟ್ ಗಳಲ್ಲಂತೂ ಅಂಥ ಒಂದು ಕಲ್ಪನೆಯ ಎಳೆಯೂ ಅಸಾಧ್ಯ! ಇದು ಕಾಲದ ಬದಲಾವಣೆಯೋ ಅಥವ ಮನುಷ್ಯ ತನ್ನ ಕೃತ್ರಿಮ ಕೈಯಿಂದ ಕಾಲದ ಚಕ್ರವನ್ನೇ ಕ್ರೂರವಾಗಿ ಸುತ್ತಿ ಬದಲಾಯಿಸಿದ್ದಾನೋ? ಯಾರು ಬಲ್ಲರು?

ಹೋಟೇಲಿನತ್ತ ಮತ್ತೆ ಮಿಂಚಿನ ಓಟ! ಪ್ಯಾಂಟ್ ಸಹಿತ ಮತ್ತೆ ರೂಮಿನ ಕಡೆಗೆ. ಹೊಲಿಗೆ ಬಿಚ್ಚಿದರೆ ತಾನೆ, ಕೈಗೆ ನೋಟು, ಅದರೊಡನೆ ವೀಸಾ ಮುಂತಾಗಿ. ಇಷ್ಟೆಲ್ಲಾ ರಾದ್ಧಾಂತ ಆಗುವಷ್ಟರಲ್ಲಿ, ಟೈಂ ಕೂಡ ಓಟ ಕಿತ್ತಿತ್ತು. ಫ್ಲೈಟ್ ಒಂದು ಗಂಟೆಗೆ, ಆಗಲೇ ಗಡಿಯಾರ ಹನ್ನೊಂದೂವರೆ ಸುತ್ತಿತ್ತು. ಸರಿ ರೂಂ ಸಹ ಖಾಲಿಮಾಡಿ ಮತ್ತೊಮ್ಮೆ ಲಾಳಿಯ ಸಮ ದೌಡು. ಸದ್ಯಕ್ಕೆ ಸೊಮಾಲಿ ಕಛೇರಿಯಲ್ಲಿ ತಡ ಮಾಡಲಿಲ್ಲ. ಎರಡೂ ಪಾಸ್‌ಪೋರ್ಟ್ ಗಳಿಗೂ ವೀಸಾ ಮುದ್ರೆ ಆದ ನಂತರ, ಅವರಲ್ಲೇ ಇನ್ನೊಂದು ಹತ್ತು ಡಾಲರಿಗೆ ಅಲ್ಲಿಯ ಹಣವಾದ ಎಮನಿ ರಿಯಾಲ್ ಗಳಿಗೆ ಬದಲಾಯಿಸಿಕೊಂಡೆ. ಟ್ಯಾಕ್ಸಿ ದುಡ್ಡು ಕೊಡಬೇಕಿತ್ತಲ್ಲ. ಎಲ್ಲ ಮುಗಿಸಿ ಏರ್‌ಪೋರ್ಟ್ ತಲಪಿದಾಗ ಫ್ಲೈಟಿಗೆ ಕೇವಲ ನಲವತ್ತು ನಿಮಿಷ ಬಾಕಿ. ಅದೃಷ್ಟಕ್ಕೆ ದೊಡ್ಡ ವಿಮಾನ ಅಲ್ಲ ಅಂತ ಮೊದಲೇ ತಿಳಿದಿತ್ತು. ಆದ್ದರಿಂದ ಪ್ರಯಾಣಿಕರೂ ಕಮ್ಮಿ ಮತ್ತು ಇಮ್ಮಿಗ್ರೇಶನ್ ಶಿಷ್ಟಾಚಾರ ಕೂಡ ಹೆಚ್ಚು ಸಮಯ ಆಗದು. ಟ್ಯಾಕ್ಸಿಯವನ ಹಣ ಸಂದಾಯ ಮಾಡಿ, ಒಳಗೆ ಓಡಿದ್ದೇ. ಸದ್ಯ ಇನ್ನೂ ಸ್ವಲ್ಪ ಜನ ಕ್ಯೂನಲ್ಲಿದ್ದರು. ನಾವೂ ಸೇರಿ, ನಮ್ಮ ಸರದಿಯಲ್ಲಿ ಬೋರ್ಡಿಂಗ್ ಪಾಸ್ ಸಿಕ್ಕಿದಮೇಲೆ,
ಇಮ್ಮಿಗ್ರೇಶನ್ನಿನಲ್ಲಿ ಆ ದೇಶ ಬಿಟ್ಟ ಗುರುತು (stamp) ಒತ್ತಿದ ನಂತರ ವಿಮಾನ ಏರುವ ಫರ್ಮಾನು ಬರುವವರೆಗೆ ನೆಮ್ಮದಿಯಲ್ಲಿ ಕಾಯುತ್ತಾ ಕೂತೆವು.

ಮುಂದಿನ ಸಂಚಿಕೆಗೆ…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post