ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-5

ಮೊಗದಿಶು ಕಂಡೆ

ಅಂತೂ ನನ್ನ ವೃತ್ತಿ ಬದುಕಿನ ಮುಂದಿನ ಕಾರ್ಯಕ್ಷೇತ್ರದ ಮಣ್ಣಿನಮೇಲೆ ಕಾಲಿಟ್ಟಿದ್ದಾಗಿತ್ತು. ಅಲ್ಲಿ ಇನ್ನು ಮುಂದೆ ಅದೆಷ್ಟು ಸಂವತ್ಸರಗಳ ಬದುಕೋ ಏನೋ; ಸದ್ಯಕ್ಕೆ ಯಾರ ಊಹೆಗೂ ನಿಲುಕದ್ದು. ನನ್ನನ್ನು ಹಾರ್ಗೀಸಾದ, ‘ಸರ್ಕಾರಿ ನೌಕರರ ವಿಮೆಯ ಔಷಧಾಲಯ’ದ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು. ಹಾಗಾದರೆ ಮೊಗದಿಶುಗೆ ಟಿಕೆಟ್ ಕಳಿಸಿದ್ದರೇಕೆ? ಅಣ್ಣನಿಂದ ಕೇಳಿದ ಮೇಲೆ ತಿಳಿಯಿತು. ಆ ಸಂಸ್ಥೆಯ ಕೇಂದ್ರ ಕಾರ್ಯಸ್ಥಾನ ಇರುವುದು, ರಾಜಧಾನಿ ಮೊಗದಿಶುವಲ್ಲಿ; ಆದ್ದರಿಂದ, ಅಲ್ಲಿಗೇ ಮೊದಲು ಹಾಜರಾಗಬೇಕೆಂದು (Duty Reporting Headquarters) ನಿಯಮ.

ಹಾರ್ಗೀಸಾ ತಲಪಿದ ಮೊದಲ ದಿನ ಅತ್ತಿಗೆಯವರು ಸಿಹಿ ಊಟ ರೆಡಿ ಮಾಡಿ, ಇಬ್ಬರೂ ಊಟಮಾಡದೆ ಕಾಯ್ದಿದ್ದರು – ನಾವು ಅಂದೇ ಬರುವ ಸಂಪೂರ್ಣ ಖಾತರಿ ಇಲ್ಲದಿದ್ದರೂ ಸಹ; ಭಾರತದಿಂದಲೇ ನಮ್ಮ ಪ್ರಯಾಣದ ವೇಳಾಪಟ್ಟಿ ಕಳಿಸಿದ್ದೆವಾದರೂ. ಮಧ್ಯಾಹ್ನದ ಊಟ ಮುಗಿದಮೇಲೆ, ಬರೀ ಮಾತುಕತೆಯಲ್ಲೇ ಉಳಿದಿದ್ದ ಅರ್ಧ ದಿನ ಕಳೆಯಿತು; ಅಣ್ಣನನ್ನು ನೋಡಿ ಎರಡು ವರ್ಷದ ಮೇಲೆ ಕಳೆದಿತ್ತು. ನಾನು ಮತ್ತು ನನ್ನ ಇನ್ನೊಬ್ಬ ಅಣ್ಣ, ಡಾ. ಶಿವಶೆಟ್ಟಿ ಬಾಂಬೆವರೆಗೆ, ಅವರಿಗಿಂತ ಮುಂಚಿತವಾಗಿ ರೈಲಿನಲ್ಲಿ ಹೋಗಿ ಬೀಳ್ಕೊಟ್ಟು ಬಂದಿದ್ದೆವು – ಅಣ್ಣನಿಗೆ ವಿಮಾನದ ಟಿಕೆಟ್ ಇತ್ತು. ಅಣ್ಣ ಆ ದೇಶದಲ್ಲಿ ನೆಲೆಗೊಂಡಮೇಲೆ, ಅತ್ತಿಗೆ ಮತ್ತು ಅವರ ಮಗಳು, ಪಾವನ, ಪ್ರಯಾಣ ಮಾಡಿದ್ದರು.

ಆ ರಾತ್ರಿ ಮಲಗುವ ಮುನ್ನ, ಮಾರನೆ ಬೆಳಿಗ್ಗೆ ಸೋಮಾಲಿ ಏರ್ ಲೈನ್ಸ್ ನತ್ತ ಹೋಗಿ ದಿನಾಂಕ ಬದಲಾವಣೆಗೆ ಪ್ರಯತ್ನ ಮಾಡೋಣ ಎಂದಿದ್ದರು.

ಬೆಳಿಗ್ಗೆ ಅಣ್ಣನಿಗೆ ಆಸ್ಪತ್ರೆ ಕಾರ್ಯ ಎಂಟು ಗಂಟೆಯಿಂದ ಆರಂಭ. ಆದರೆ, ನನ್ನ ಕೆಲಸ ಇದ್ದುದರಿಂದ, ಇಬ್ಬರೂ ತಿಂಡಿ ತಿಂದು ಹೊರಟೆವು. ಹಿಂದಿನ ರಾತ್ರಿಯೇ ಟೆಲಿಫೋನಿನಲ್ಲಿ ಡಾ. ಶೆಟ್ಟಿ ಎಂಬುವವರ ಸಹಾಯ ಕೇಳಿದ್ದರು. ಹಾಗಾಗಿ, ನೇರವಾಗಿ ಗ್ರೂಪ್ ಆಸ್ಪತ್ರೆಯಲ್ಲಿ ಡಾ. ಶೆಟ್ಟಿ ಅವರನ್ನೂ ಕೂಡಿಕೊಂಡು, ಅನತಿ ದೂರದಲ್ಲೇ ಇದ್ದ ಸೋಮಾಲಿ ಏರ್ ಲೈನ್ಸಿನತ್ತ ನಡೆದೆವು. ಡಾ. ಶೆಟ್ಟಿ ಮಂಗಳೂರಿನವರು. ಆ ದೇಶದಲ್ಲಿ ಸಾಕಷ್ಟು ವರ್ಷ, ದಶಕಗಳೇ ಅನ್ನಬಹುದು, ಮುಖ್ಯ ಫಿಸಿಷಿಯನ್ ಆಗಿ ಕೆಲಸ ಮಾಡಿದ್ದವರು. (ಮೇಲಾಗಿ ಅವರೊಮ್ಮೆ ರಜೆಗೆ ಭಾರತಕ್ಕೆ ಬಂದಿದ್ದಾಗ, ಅವರ ಮೂಲಕವೇ ಆಂಗ್ಲ ದಿನಪತ್ರಿಕೆಯಲ್ಲಿ, ಕಣ್ಣಿನ ವೈದ್ಯರಿಗಾಗಿ ಜಾಹಿರಾತು ಹಾಕಿಸಲಾಗಿತ್ತು; ಅದನ್ನು ಕಂಡೇ ನಮ್ಮಣ್ಣ ಆ ದೇಶಕ್ಕೆ ಅರ್ಜಿ ಹಾಕಿ, ಬಂದದ್ದು). ಹಾಗಾಗಿ ಅಲ್ಲಿ ಎಲ್ಲರ ಆಪ್ತ ಪರಿಚಯ ಉಳ್ಳವರು. ಅನ್ಯೋನ್ಯತೆ ಇದ್ದರೆ, ಅದರಲ್ಲೂ ವೈದ್ಯರಿಗೆ, ಸೋಮಾಲಿ ಜನರು ಏನು ಸಹಾಯ ಬೇಕಿದ್ದರೂ ಇಲ್ಲ ಎನ್ನದವರೆಂದು ನನಗೇ ಕ್ರಮೇಣ ಅರಿವಾಯಿತು. ಏರ್ ಲೈನ್ಸ್ ಕಛೇರಿಯಲ್ಲಿ ಯಾರನ್ನೋ ಸಂಧಿಸಿ, ನನ್ನ ಪ್ರಯಾಣದ ದಿನಾಂಕವನ್ನು ಇನ್ನೂ ಎರಡು ದಿನ ಅಲ್ಲೇ ಇರುವ ಹಾಗೆ ಬದಲು ಮಾಡಿಸಿದ್ದಲ್ಲದೆ, ನನ್ನ ಹೆಂಡತಿಯ ಟಿಕೆಟ್ಟನ್ನು ‘ಓಪನ್’ ಅಂದರೆ, ದಿನಾಂಕವನ್ನು ಮುಂದಿನ ಯಾವುದಾದರೂ ದಿನದ ಪ್ರಯಾಣದ ಸಮಯಕ್ಕಾಗಿ ಖಾಲಿ ಇರಿಸಿದರು! ನನಗೆ ಆ ಸಮಯಕ್ಕೆ, ಇನ್ನೂ ಎರಡು ದಿನ ಇರಬಹುದೆಂಬ ಖುಷಿ ಆಗಿದ್ದರೂ, ನಂತರದಲ್ಲಿ ನಾನೊಬ್ಬನೇ ಹೋಗಬೇಕಾದುದು ಕಲಕತೊಡಗಿತ್ತು. ಆದರೆ ನಡೆಯಲೇ ಬೇಕಾದುದು ಜರುಗಲೇಬೇಕಲ್ಲ. ಏರ್ ಲೈನ್ಸ್ ನಿಂದ ನೇರವಾಗಿ, ನಾನು ಮುಂದೆ ಕೆಲಸ ಮಾಡಬೇಕಿದ್ದ ಕಛೇರಿ ಕಡೆಗೆ ಇಬ್ಬರೂ ಕರೆದೊಯ್ದರು. ಅಲ್ಲಿಯ ನಿರ್ದೇಶಕರು, ಇಬ್ಬರೂ ವೈದ್ಯರನ್ನು ಕಂಡವರೇ ಎದ್ದು ಕೈಕುಲುಕಿ, ಕುರ್ಚಿಗಳತ್ತ ತೋರಿಸಿ, ಪ್ಲೀಸ್ ಎಂದರು. ಮಾತಿನ ಮಧ್ಯೆ ನನ್ನ ಪರಿಚಯ ಮಾಡಿ, ಎರಡು ದಿನಗಳ ನಂತರ ಮೊಗದಿಶುಗೆ ಹೋಗಲು ಅನುಮತಿ ಕೋರಿದರು. ಆ ನಿರ್ದೇಶಕರು ಒಪ್ಪಿದ್ದಲ್ಲದೆ, ಕಛೇರಿ ತೋರಿಸಲು ನನ್ನನ್ನು ಕರೆದರು. ಅಣ್ಣ, ಶೆಟ್ಟಿ ಸಹ ಜೊತೆಯಾದರು. ಅವರು ಪ್ರಪ್ರಥಮ ಒಂದು ಬಾಗಿಲು ತೆರೆದು, “ದಿಸ್ ಈಸ್ ದ ಟಾಯ್ಲೆಟ್” ಎಂದು ಆರಂಭಿಸಿದರು. ಅದನ್ನು ಕೇಳಿ ಇವರಿಬ್ಬರೂ ಮುಖ ನೋಡಿಕೊಂಡು ನಕ್ಕರು. ಈ ಟಾಯ್ಲೆಟ್ ಪರಿಚಯದ ವಿಶೇಷ ಮುಂದೆ, ಭಾರತೀಯರು ಆಗಾಗ ಒಟ್ಟುಗೂಡುವ ಸಂದರ್ಭಗಳಲ್ಲಿ ತಮಾಷೆಯ ವಿಶೇಷವಾಗಿ ಸ್ವಲ್ಪ ಕಾಲ ಉಳಿದಿತ್ತು.

ಆ ದಿನವೂ, ಅಂದರೆ ನಾನು ಹೊರಡುವ ದಿನ ಕೂಡ ಬಂದಿತು. ಅಷ್ಟರಲ್ಲಿ ಹಿಂದಿನ ದಿನವೇ, ಡಾ. ಶೆಟ್ಟರ ಮನೆ ಊಟಕ್ಕೆ ಆಹ್ವಾನಿಸಿದ್ದು, ಆಗ ಅವರ ಶ್ರೀಮತಿ, ಅವರ ತಂಗಿ ಮತ್ತವರ ಪತಿ, ಡಾ. ನಾಯಕ್ ಅಲ್ಲದೆ, ಇನ್ನೂ ಕೆಲವಾರು ಭಾರತೀಯರ ಪರಿಚಯ ಆಯಿತು. ಆಗ ನನ್ನ ಮನಸ್ಸಿನಲ್ಲಿ, ಅಣ್ಣ ಭಾರತ ಬಿಡುವ ಮುನ್ನ ಅವರ ಕೆಲ ಸಹೋದ್ಯೋಗಿ ಮಿತ್ರರು, “ಆ ಕಗ್ಗತ್ತಲೆಯ ಖಂಡಕ್ಕೆ ಹೋದರೆ, ನಿಮ್ಮನ್ನೇ ಹುರಿದು ಊಟಕ್ಕೆ ಬಡಿಸಿ ತಿಂದುಬಿಡುತ್ತಾರೆ” ಎಂದೆಲ್ಲ ಹೆದರಿಸಿ ಮಾತಾಡಿದ್ದರೆಂಬ ವಿಷಯ ನೆನಪಾಗಿ, ಅವರೆಲ್ಲರ ಮಾಹಿತಿಯ ಕೊರತೆ ಬಗ್ಗೆ ಅಯ್ಯೋ ಅನ್ನಿಸಿತ್ತು. ಅದು ನಿಜವಾಗಿ ಅಲ್ಲದೆ, ತಮಾಷೆಗಾಗಿ ಕೂಡ ಆಡಿದ್ದರೂ ಸಾಕು. ಅಂದಹಾಗೆ, ನಮಗಷ್ಟೇ ಎಲ್ಲದರ ಮಾಹಿತಿ ಇತ್ತು ಎಂದೂ ಖಂಡಿತ ಅಲ್ಲ. ಆದರೆ, ಒಂದೇ ಒಂದು ಕ್ಷಣ ಹೀಗೆ ಯೋಚಿಸಿ: ಯೂರೋಪಿಯನ್ನರಾದ ಕ್ರಿಸ್ಟೊಫರ್ ಕೊಲಂಬಸ್ ಅಥವ ಅವನಿಗೂ ಐನೂರು ವರ್ಷ ಮುಂಚೆ ಅಮೆರಿಕದ ನೆಲದಲ್ಲಿ ಕಾಲಿಟ್ಟಿದ್ದವನು ಎನ್ನಲಾದ ಲೀಫ್ ಎರಿಕ್ಸನ್, ಮತ್ತು ಭಾರತದತ್ತ ಬಂದಿದ್ದ ವಾಸ್ಕೊ ಡ ಗಾಮ ಮೊದಲಾದವರು ಅಕಸ್ಮಾತ್ ಸಾಹಸಿಗರಾಗದೆ ಇದ್ದಿದ್ದರೆ, ಹೊಸಹೊಸ ಖಂಡಗಳ ಶೋಧಿಸದೆ ಹೇಡಿಗಳಾಗಿದ್ದರೆ, ಹಾಗೂ ಅವರಂತೆ ಧೈರ್ಯ ತೋರಿದ ಇನ್ನೂ ಅನೇಕರು ಹಾಗೆ, ತಮ್ಮತಮ್ಮ ಆರಾಮವಲಯ ಬಿಟ್ಟು ಹೊರಡದೇ ಜಡ ಇದ್ದಿದ್ದರೆ, ಜಗತ್ತು ಈಗ ಇರುವ ಹಾಗಿರುತ್ತಿತ್ತೆ? ಹೇಡಿ ಎಂದೂ ಏನನ್ನೂ ಸಾಧಿಸಿಲ್ಲ ಮತ್ತು ಜಯಿಸಿಲ್ಲ, ಅಲ್ಲವೇ?

ಮೊಗದಿಶು ಕಾಣುವ ಆ ದಿನ ಕೂಡ ಬಂದೇಬಿಟ್ಟಿತು. ಅಣ್ಣ ಎಂದಿನಂತೆ ಆಸ್ಪತ್ರೆಯತ್ತ ಹೊರಡುವ ಮುನ್ನ, “ಹನ್ನೆರಡರ ಹೊತ್ತಿಗೆ ನಿಮ್ಮ ಡಿಸ್ಪೆನ್ಸರಿಯಿಂದ ವೆಹಿಕಲ್ ಬರುತ್ತೆ. ರೆಡಿಯಾಗಿರು. ಮೊಗದಿಶುವಲ್ಲಿ ಡಾ. ಜಾರ್ಜ್ ಎಂಬುವವರು ಸ್ವಲ್ಪ ಕಾಲದ ನಂತರ ಬಂದು ನಿನ್ನನ್ನು ಕಾಣುತ್ತಾರೆ” ಎಂದು ಹೇಳಿ, ಅವರಿಗೆ ಎಲ್ಲ ತಿಳಿಸಿರುವುದಾಗಿಯೂ ಮಾಹಿತಿ ಇತ್ತರು. “ಹ್ಯಾಪಿ ಜರ್ನಿ” ಅಂದವರು, “ಬೇಗ ಹಾರ್ಗೀಸಾಕ್ಕೆ ವಾಪಸ್ಸು ಬಾ” ಎಂದು ಆಸ್ಪತ್ರೆಗೆ ಹೋದರು.

ಗಾಡಿ ಬಂದಾಗ ಹನ್ನೆರಡೂವರೆ ಮೇಲಾಗಿತ್ತು. ಅಷ್ಟರಲ್ಲಿ, ನಾವಿಬ್ಬರೇ ಕೊಠಡಿಯಲ್ಲಿದ್ದಾಗ, ಕಮಲ ಸಾಕಷ್ಟು ಝರಿ ಹರಿಸಿದ್ದಾಗಿತ್ತು. ಅವಳಿಗೆ ನಾನೇ ಹೊಸಬ; ಇನ್ನು ನಮ್ಮಣ್ಣ, ಅತ್ತಿಗೆ? ಅವರನ್ನು ನೋಡಿದ್ದೇ ಇದೀಗ. ವಾಸ್ತವವಾಗಿ ಅವಳು ಹೊರಜಗತ್ತಿಗೆ ಕಣ್ಣು ಬಿಡುತ್ತಿದ್ದುದೇ ಈಗ! ಪುಟ್ಟ ಪಾವನಳ ಸಂಗಡವೇ, ನಾನು ಬರುವವರೆಗೂ ಬಹುಶಃ ಅವಳ ಸಖ್ಯ, ಒಡನಾಟ ಅಂದುಕೊಂಡೆ.
ವಿದಾಯ ಹೇಳಿ ವಾಹನ ಏರುವಾಗ ನನ್ನವಳ ಕಣ್ಣು ನೋಡುವುದು ಸ್ವಲ್ಪ ಕಷ್ಟವಾಯಿತು. ಅತ್ತಿಗೆ ಅವಳ ಮುಖವನ್ನೇ ನೋಡುತ್ತಿದ್ದಂತಿತ್ತು. ಕಛೇರಿಯಲ್ಲಿ ಡೈರೆಕ್ಟರರಿಗೆ ಹೇಳಿದ ಮೇಲೆ, ಆ ಬಾಬುರ್ (ವಾಹನಕ್ಕೆ ಸೋಮಾಲಿ ಭಾಷೆ) ಸೀದ ಏರ್ಪೋರ್ಟಿನತ್ತ ದೌಡಾಯಿಸಿತು. ದಾರಿಯ ನಡುವೆ ಒಂದೊಂದು ಇಂಗ್ಲೀಷ್ ಪದದಲ್ಲಿ ಅದುಇದು ಆಡುತ್ತಾ, ನನ್ನನ್ನು ಕೇಳುತ್ತಾ ಸಾಗಿದ ಚಾಲಕ ತಲಪಿದ್ದೇ ಗೊತ್ತಾಗಲಿಲ್ಲ. ಒಳಕ್ಕೆ ನನ್ನ ಮಿನಿ ಸೂಟ್ಕೇಸ್ ಮತ್ತು ಕೈಚೀಲವನ್ನು, ಬೇಡವೆಂದರೂ ಅವನೇ ತಂದಿಟ್ಟ. ಆಗ ಹೆಸರು ಕೇಳಿದೆ. ಮಹಮೂದ್ ಮಹಮದ್ ಎಂದ. ಒಂದು ಆತನ, ಮತ್ತೊಂದು ಅವನಪ್ಪನ ಹೆಸರು! ಹಾಗೆಯೇ ಅವರು ಸಾಮಾನ್ಯ ಹೆಸರು ಹೇಳುವುದು ಅಂತ ನಂತರ ತಿಳಿಯಿತು. ಏಡನ್ನಿನಿಂದ ನಾವು ಬಂದಿದ್ದ ಫಾಕರ್ ವಿಮಾನವೇ ಈಗಲೂ ಬಂದಿಳಿದದ್ದು. ಅಲ್ಲಿಯ ಅಂತಹ ಮಾಹಿತಿ ವಿಚಾರ ವಿವರಗಳೆಲ್ಲ ನನಗಿನ್ನೂ ಹೊಸದು. ಸದ್ಯ ಇಂದೂ ಕೂಡ ಅಂದಿನ ಹಾಗೆ ಆಗದೆ, ಅನತಿ ಸಮಯದಲ್ಲೇ ಬೋರ್ಡಿಂಗ್ ಆರಂಭ ಆದಾಗ, ನಾನು ಮಹಮೂದ್ ನತ್ತ ಸ್ವಲ್ಪ ಹಣ ಹಿಡಿದು “ಟೇಕ್ ಮಹಮೂದ್” ಎಂದಾಗ, “ವಲ್ಲಾಹಿ ಬಿಲ್ಲಾಹಿ ಮರಬ” ಅಂದು, “ಮಹದ್ಸನೀತ್” ಸಹ ಹೇಳಿ ಹೊರಕ್ಕೆ ಹೊರಟೇಬಿಟ್ಟ. (ಮರಬ=ಬೇಡ; ಮಹದ್ಸನೀತ್=ಥ್ಯಾಂಕ್ಸ್). ಕಿಟಕಿ ಸೀಟಿನಲ್ಲಿ ಆಸೀನನಾದೆ. ಹೆಂಡತಿ ಬಿಟ್ಟು ಬಂದದ್ದು ನನಗೇ ಹಿಂಸೆ ಅಂದಮೇಲೆ, ಗಂಡನನ್ನು ಬಿಟ್ಟು ಗೊತ್ತಿಲ್ಲದವರ ಮಧ್ಯೆ ಈಗ ಬಾಳಲೇಬೇಕಾದ ಅವಳಿಗೆ? ಈ ಯೋಚನೆ ನನ್ನನ್ನು ಕಲಕಿದಂತೆ ಹಿಂಸೆ ಆಗಿ, ಈಗಲೇ ಹೀಗಾದರೆ, ಅಲ್ಲಿ ಮೊಗದಿಶುವಿನಲ್ಲಿ ಇನ್ನೆಷ್ಟು ದಿನವೋ ಏನೋ, ಆಗ! ‘ನೋನೋ ಇದು ತಪ್ಪು’, ತಕ್ಷಣ ಅನ್ನಿಸಿತು. ಟೇಕಾಫ್ ಆಯಿತು. ನನ್ನ ಯೋಚನೆ ಈಗ ಮುಂದೆ ಮೊಗದಿಶು ತಲಪಿದಮೇಲೆ ಏನು? ಹೇಗೆ? ಒಟ್ಟಾಗಿ ಅತ್ತಕಡೆಗೆ ಒಮ್ಮೆಲೇ ಸ್ಥಳಾಂತರವಾದಂತೆ.

‘ಡೆವಿಲ್ಸ್ ಹೌಸ್’ ಎಂದು ಪ್ರಥಮ ಬಾರಿಗೆ ಪ್ರಯೋಗವನ್ನು ಸುಖಾಸುಮ್ಮನೆ ಮಾಡಲಿಲ್ಲ. ಖಂಡಿತವಾಗಿ, ಯಾವುದೇ ಕಸುಬು ಅಥವ ಚಿಂತನಾಲಹರಿ ಇಲ್ಲದ ಮನಸ್ಸು ಭೂತ ಬಂಗಲೆಗೆ ಸಮಾನ! ಭಾರತ ಬಿಟ್ಟು ಬಂದದ್ದು, ಈಗ ಹಾರ್ಗೀಸಾದಲ್ಲಿ ಕಮಲಳನ್ನು ಬಿಟ್ಟು ಹೊರಡಬೇಕಾದದ್ದು ಮತ್ತು ಮುಂದೆ ಮೊಗದಿಶುವಲ್ಲಿ ಏನೇನನ್ನು ಎದುರಿಸಲು ಇದೆಯೋ, ಹೀಗೆ ಒಟ್ಟೊಟ್ಟಿಗೆ ಪ್ರವಾಹದೋಪಾದಿ ಕಲಸುಮೇಲೋಗರ ವಿಚಾರಗಳು ನುಗ್ಗಿ ಬಂದಾಗ ಯಾರಿಗಾದರೂ ಸಹಿಸುವುದು ಕಷ್ಟ. ಹಾಗಾಗಿ ತದೇಕ ಕಿಟಕಿಯಿಂದ ಆಚೆ ಅಗಾಧ ನೀಲಿ ರಾಶಿಯತ್ತ, ಕೆಳಗೆ ಅಳೆಯಲಾರದ ತಳ ಕಾಣದ ಪ್ರಪಾತದತ್ತ, ಒಮ್ಮೊಮ್ಮೆ ವಿಮಾನದೊಳಗಿನ ವೈವಿಧ್ಯ ಮುಖಚಹರೆಗಳತ್ತ, ಹೀಗೆ ಗಮನಿಸುತ್ತಾ ಸುಮಾರು ಒಂದೂವರೆ ಘಂಟೆ ಪ್ರಯಾಣ ಮುಗಿಸಿದೆ. ಇಳಿದು ನಿಲ್ದಾಣದಿಂದ ಹೊರಗೆ ಬಂದಾಗ, ಆಂಗ್ಲ ಭಾಷೆಯ ದಪ್ಪ ಅಕ್ಷರಗಳಲ್ಲಿ ಡಾ. ಮೂರ್ತಿ ಎಂದು ಗೀಚಿದ್ದ ಒಂದು ರಟ್ಟು ಎದ್ದು ತೋರಿತು. ಆ ವ್ಯಕ್ತಿಯ ಹತ್ತಿರ ಹೋಗಿ ಪರಿಚಯ ಮಾಡಿಕೊಂಡೆ. “ಓಕೆ, ಕಮ್ ವಿತ್ ಮಿ” ಎಂದು ಸರಸರ ಒಂದು ಹಳೆಯ ವಾಹನದತ್ತ ಹೆಜ್ಜೆ ಹಾಕಿದ. ನನ್ನನ್ನೂ ಆ ಪಳೆಯುಳಿಕೆಯ ಲ್ಯಾಂಡ್ ರೋವರ್ ಮುಂದಿನ ಸೀಟಿನಲ್ಲೇ ಕೂರಿಸಿ, ಏರ್ಪೋರ್ಟ್ ಬಿಟ್ಟು ಹೊರಟ.

ಅಂದಿನ ಮೊಗದಿಶು ವಿಮಾನ ನಿಲ್ದಾಣ ಸಹ ಸೋಮಾಲಿಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಹಾಗೆ ಇರಲಿಲ್ಲ. ಒಂದೇ ರನ್ ವೇ, ಹಾಗೆಯೇ ಒಂದು ಸಾಮಾನ್ಯವಾದ ಕಟ್ಟಡ, ಅಷ್ಟೆ. ಆದರೆ, ಹಿಂದೂ ಮಹಾಸಾಗರದ ತೀರದಲ್ಲಿ ಓಡುತ್ತಿದ್ದ ರನ್ ವೇ ಮೇಲೆ ವಿಮಾನ ಓಡುವಾಗ, ಆ ಕಡೆ ಕಿಟಕಿಯಲ್ಲಿ ಕೂತವರ ಕಣ್ಣುಗಳಿಗೆ ಹಬ್ಬದೂಟ! ಸೋಮಾಲಿ ಏರ್ ವೇಸ್ ಅಲ್ಲದೆ, ಆಲಿಟಾಲಿಯಾ, ಲುಫ್ತಾನ್ಸ ಮತ್ತು ಸೌದಿ ಏರ್ ಲೈನ್ಸ್ ಫ್ಲೈಟ್ ಗಳು ಮಾತ್ರ ಅಲ್ಲಿಯ ಹಾರಾಟ ಆಗ ಇದ್ದದ್ದು. ‘ಆದನ್ ಅದ್ದೆ ಇಂಟರ್ನ್ಯಾಷನಲ್ ಏರ್ಪೋರ್ಟ್’ ಎಂಬ ಈಗಿನ ಹೆಸರೇ ಆಗಲೂ ಇದ್ದಿರಬಹುದು – ಮರೆತಿದ್ದೀನಿ.
ನಗರಕ್ಕೆ ವಿಮಾನ ನಿಲ್ದಾಣದಿಂದ ಸುಮಾರು ಹತ್ತು ಕಿ.ಮಿ.ದೂರ. ದಾರಿಯುದ್ದಕ್ಕೂ, ಆ ಸಮಯದಲ್ಲಿ, ಅಲ್ಲಲ್ಲಿ ಎದ್ದು ಕಾಣುವ ಸಣ್ಣಸಣ್ಣ ಹಳ್ಳಿಗಳನ್ನುಳಿದು, ನಮಗೆ ಕಂಡಿದ್ದು ಯಥೇಚ್ಛ ಕುರುಚಲು ಗಿಡ. ‘ಯೆಹೇಬ್’ (ಸೋಮಾಲಿ ಭಾಷೆಯಲ್ಲಿ ‘ಇಚಿಬ್’) ಎಂದು ಅವುಗಳ ಹೆಸರು ಮತ್ತು ಸೋಮಾಲಿಯಾ ಮತ್ತು ಇಥಿಯೋಪಿಯಾ ದೇಶಗಳಲ್ಲಿ ಮಾತ್ರ ಆ ನಮೂನೆ ಪೊದೆಯ ರೀತಿ ಗಿಡಗಳು ಇದ್ದದ್ದು, ಬಹುಶಃ ಈಗಲೂ. ಅವುಗಳ ಕಾಯಿಗಳನ್ನು (ನಟ್ಸ್) ಪ್ರಾಣಿಗಳಲ್ಲದೆ ಮನುಷ್ಯರು ಸಹ ತಿನ್ನುವುದಿದೆಯಂತೆ.

ಆಚೀಚೆ ಕಣ್ಣಾಡಿಸುವ ಹೊತ್ತಿಗೆ ಮೊಗದಿಷು ನಗರದ ಆರಂಭ ಕಂಡೇಬಿಟ್ಟೆ. ಗೊತ್ತು ಗುರಿ ಇಲ್ಲದ ಊರಿನಲ್ಲಿ ಆಗಂತುಕನಾಗಿದ್ದ ನನಗೆ ಆ ಚಾಲಕನೇ ಜೀವಂತ ಕೈಮರ! ಆದ್ದರಿಂದ ಎಲ್ಲೆಲ್ಲಿ ನುಗ್ಗಿದ, ಯಾವ ದಾರಿಗಳನ್ನು ಕ್ರಯಿಸಿದ, ಎಲ್ಲವೂ ನನಗೆ ಗೊತ್ತುಗುರಿ ಇಲ್ಲದವು – ಒಬ್ಬ ಆಗಂತುಕನ ಅನಿರೀಕ್ಷಿತಗಳು!
ಅಲ್ಲಿಯ ಫಲಕಗಳ ಅಕ್ಷರಗಳು ಆಂಗ್ಲರೂಪ ಹೊಂದಿದ್ದರೂ, ಓದಲು ತಕ್ಷಣಕ್ಕೆ ಅಸಾಧ್ಯವಾಗಿದ್ದವು. ಅದೇ ಸೋಮಾಲಿ ಭಾಷೆ ಇರಬಹುದು ಅಂದುಕೊಂಡೆ. ಅಂದರೆ ಅದರ ಲಿಪಿ ಕೂಡ ಆಂಗ್ಲ ಮಾದರಿ.

ಕೊನೆಗೆ ಒಂದು ದೊಡ್ಡ ಮೂರು ಅಂತಸ್ತಿನ (ಈಗ ಕರಾರುವಾಕ್ಕು ನೆನಪಿಲ್ಲ) ಸೌಧದ ಮುಂದೆ ವಾಹನ ನಿಲ್ಲಿಸಿ ತಾನೊಬ್ಬನೇ ಒಳನಡೆದ. ಅದು ಹೋಟೆಲ್ ಅನ್ನಿಸಿತು.
ಚಾಲಕನೇ ಹೋಟೆಲಿನ ಲಗ್ಗೇಜ್ ಸಿಬ್ಬಂದಿಯ ಜೊತೆ, ರೂಮಿನತನಕ ಬಂದು, ಮತ್ತೆ ನಾಳೆ ಎಂಟು ಗಂಟೆಗೆ ರೆಡಿ ಆಗಿರುವಂತೆ ಹೇಳಿ ಹೋದ. ಅಲ್ಲಿಗೆ ನನ್ನ ಮೊಗದಿಶು ಬದುಕು ಪ್ರಪ್ರಥಮ ಒಂಟಿಯಾಗಿ ಆರಂಭ!

ಮುಂದುವರೆಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

2 Comments

  • Very good description of the city. ….continue

  • Very good description of the city. ….continue .

Leave a Reply

Your email address will not be published. Required fields are marked *