–ಶಬೆಲ್ಲಿ ತೊರೆದು–
ಮುಂದೇನು ಹಾಗಾದರೆ! ಮುಸ್ತಫಾ,
ಘಂಟೆ ಕಳಚಿ ಕಾಲ ಮೇಲೆ ಬಿದ್ದಂತೆ ಕೊಟ್ಟಿದ್ದ ಖಡಕ್ ಏಟು, ಅದರಿಂದ ಮುಖದಮೇಲೆ ಆವರಿಸಿದ್ದ ಕಟುಸತ್ಯದ ಗಂಟುಗಳಿದ್ದ ಹಾಗೆಯೇ, ಚಾಲಕನಿಗೆ ಥ್ಯಾಂಕ್ಸ್ ಹೇಳಿ, ಪೆಟ್ಟು ತಿಂದ ಪ್ರಾಣಿಯ ಥರ ಹೋಟೆಲ್ ರೂಮ್ ಸೇರಿದವನೇ, ಹಸಿವಾಗುವವರೆಗೂ ರೂಮಲ್ಲಿ ಬಿದ್ದುಕೊಂಡಿದ್ದು, ಊಟ ಎಂಬ ಮತ್ತೊಂದು ‘ಸಂಭ್ರಮ’ ಕ್ಕಾಗಿ ಮೇಲೆ ಹೋಗಿ ಕೂತೆ.
‘ಹೌದು, ಅಣ್ಣ ಹೇಳಿದ್ದ ಆ ಡಾ. ಜಾರ್ಜ್ ಬಗ್ಗೆ, ಯಾರನ್ನ ಕೇಳಲಿ?
ನನಗೆ ಪರಿಚಯಗಳಾದರೂ ಎಲ್ಲಿ, ಈ ಊರಲ್ಲಿ? ಅಕಸ್ಮಾತ್ ಅವರು ಬರಲೇ ಇಲ್ಲ; ಆಗ! ಕೈಲಿ ಕಾಸಿದ್ದರೆ ಅದು ಬೇರೆ ಮಾತು. ಸಂಬಳ ಮುಂಗಡ ಕೇಳಿದರೆ? ಇಂಥವೇ ಚಿಂತೆಗಳ, ಅರಿವಿರದ ಕಾನನದ ಕತ್ತಲೆಯಲ್ಲಿ ಒಂಟಿ ನಡೆ!
ಸಂಜೆ ಎಂದಿನ ನನ್ನ ನಗರ ತಿರುಗಾಟದ ಹೊತ್ತು. ಅದೂ ಗೊತ್ತಿದ್ದ ರಸ್ತೆಗಳಲ್ಲಿ ಮಾತ್ರ.
ದೂರ ಹೋಗಲು ಇನ್ನೂ ವಿಶ್ವಾಸ ಇರಲಿಲ್ಲ. ಎದುರುಗಡೆ ಅನತಿ ಅಂತರದಲ್ಲೇ ಒಬ್ಬ ಭಾರತೀಯನ ಹಾಗೆ ನಡೆದು ಬರುತ್ತಿದ್ದ. ಹಾಗಂತ ಇದುವರೆಗೆ ಯಾರೂ ಅಂಥವರು ನನ್ನ ಸುತ್ತಮುತ್ತ ಹೋದವರಿಲ್ಲ ಅಂತಲ್ಲ. ಆದರೆ, ಅಂಥ ಒಬ್ಬನನ್ನು ಕಂಡು ಮಾತನಾಡುವ ದರ್ದು ಇಂದು ತುಂಬಾ ಇತ್ತು. ಆತ ಹತ್ತಿರ ಬಂದಾಗ, “ಎಕ್ಸ್ ಕ್ಯೂಸ್ ಮಿ, ಆರ್ ಯು ಇಂಡಿಯನ್?” ಎಂದೆ.
ಆತ ತಬ್ಬಿಬ್ಬಾದ ಹಾಗೆ, ಕ್ಷಣ ಬೆಚ್ಚಿ, “ನೈ ನೈ, ಮೈ ತೋ ಪಾಕಿಸ್ತಾನಿ. ಇಧರ್ ಹಮ್ ಗೋಲ್ಡ್ ಸ್ಮಿತ್ ಹೈ” (ಇಲ್ಲ, ನಾನು ಪಾಕಿಸ್ತಾನಿ; ಇಲ್ಲಿ ಚಿನ್ನದ ಕಲಸ) ಎಂದ. ಅಲ್ಲಿಗೆ ನನ್ನ ಭಾರತೀಯನೊಬ್ಬನ ಹುಡುಕಾಟ ಅಂತ್ಯ ಸದ್ಯಕ್ಕೆ.
ಆ ಘಟನೆ ನನ್ನಲ್ಲಿ ಅಚ್ಚಳಿಯದೆ ಉಳಿಯಿತು.
ಮಾರನೆ ದಿನ, ನನ್ನ ಕ್ಲಿನಿಕ್, ಯಥಾಪ್ರಕಾರ ತುಂಬಿತ್ತು. ಆ ಹೊತ್ತಲ್ಲಿ, ಮುಸ್ತಾಫಾ ನನಗೆ ಕರೆ ಕಳಿಸಿದ. ನನ್ನ ತರ್ಜುಮೆದಾರ ರೋಗಿಗಳಿಗೆ ಹಾಗಂತ ತಿಳಿಸಿದ. ಸ್ವಲ್ಪ ಸಮಯ ಎಂದು ಹೇಳಿ ಮೇಲಿದ್ದ ಕಛೇರಿಯತ್ತ ಹೊರಟೆ.
ಅಲ್ಲಿ ಮುಸ್ತಾಫಾನ ಎದುರು ಕುರ್ಚಿಯಲ್ಲಿ ಒಬ್ಬ ಭಾರತೀಯ ಕೂತಿದ್ದು ಕಂಡು ಹಿಗ್ಗಿಹೋದೆ. ಸದ್ಯ ಈತನನ್ನಾದರೂ ಆ ಜಾರ್ಜ್ ಬಗ್ಗೆ ಕೇಳಬಹುದು ಅನ್ನಿಸಿ, ಒಳಹೋದೆ. “ದತೋರೆ ಮೂರ್ತಿ, ಇಸಗ ಹೈವಾನ್ಕ ದತೋರೆ ವಾಯ್” (ಡಾ. ಮೂರ್ತಿ, ಈತ ಪಶುವೈದ್ಯ) ಎಂದ, ಮುಸ್ತಾಫಾ. ಅಷ್ಟರಲ್ಲಿ ಅವರೇ, “ಐ ಆಮ್ ಡಾ. ಜಾರ್ಜ್. ಯುವರ್ ಬ್ರದರ್ ಟೋಲ್ಡ್ ಮಿ ಅಬೌಟ್ ಯು” ಎನ್ನುತ್ತಾ ಎದ್ದರು. ಅಲ್ಲಿಗೆ ನಾನು ಶೋಧಿಸುತ್ತಿದ್ದ ದೇವದೂತ ದೊರೆತಂತಾಯಿತು! “ಐ ಆಮ್ ಅವೇರ್ ಯೂ ಆರ್ ನೌ ಬಿಜಿ; ಐ ಜಸ್ಟ್ ವಾಂಟೆಡ್ ಟು ಮೀಟ್ ಯು ಅಂಡ್ ಸೇ ಹಲೋ” ಎಂದು ಹೇಳಿ, ಹಾಗೆಯೇ ಮಾತಾಡುತ್ತಾ ಜೊತೆಗೇ ಕೆಳಗಿಳಿದು ಹೋದರು. ನಾನು ನನ್ನ ಕೆಲಸದಲ್ಲಿ ಈಗ ನಿರಾಳವಾಗಿ ಮಗ್ನನಾದೆ.
ಆ ದಿನ ಸಂಜೆಗೇ ಡಾ. ಜಾರ್ಜ್ ರೂಮಿಗೆ ಹಾಜರ್. ಸ್ವಲ್ಪ ಅದೂ ಇದೂ ಮಾತಾದನಂತರ, “ಕಮ್ ಐ ವಿಲ್ ಟೇಕ್ ಯು ಟು ದ ಹೌಸ್ ಆಫ್ ಅನದರ್ ಡಾ. ಜಾರ್ಜ್. ಹಿ ಈಸ್ ಆಲ್ಸೊ ಎ ವೆಟ್ ಲೈಕ್ ಮಿ” (ಬನ್ನಿ, ಇನ್ನೊಬ್ಬ ಡಾ. ಜಾರ್ಜ್ ಅವರ ಮನೆಗೆ ಹೋಗೋಣ, ಅವರೂ ನನ್ನಂತೆ ಪಶುವೈದ್ಯರೇ) ಎಂದರು.
ಪ್ರಾಣಿಸಂಗ್ರಹಾಲಯದ ಬೋನೊಂದರಲ್ಲಿ ಕೂಡಿದ್ದಂತೆ ಇದ್ದ ನನ್ನ ಒಂಟಿ ಬದುಕು ಸದ್ಯ ಅಂತ್ಯ ಅನಿಸುತ್ತೆ, ಅಂದುಕೊಂಡು ಅವರ ಸಂಗಡ ಹೊರಟೆ. ಈ ಡಾ. ಜಾರ್ಜ್ ಹೆಚ್ಚೂಕಮ್ಮಿ ಆರಡಿ ಎತ್ತರ. ಬಿಳಿ ಬಣ್ಣ.
ಅವರ ಇಂಗ್ಲೀಷ್ ಭಾಷೆ ಇವರು ಒಬ್ಬ ಮಲಯಾಳಿ ಎಂದು ಡಂಗುರ ಹೊಡೆದಂತಿತ್ತು. ಬಹುಶಃ ನನ್ನದೂ ಸಹ ಅವರಿಗೆ ಹಾಗೇಯೇ ಕನ್ನಡದವನು ಅನಿಸಿದ್ದರೆ ಆಶ್ಚರ್ಯ ಇಲ್ಲ. ಆ ಇನ್ನೊಬ್ಬ ಮಲಯಾಳಿ ಪಶುವೈದ್ಯರ ಮನೆ ಹೋಟೆಲಿಂದ ತುಂಬ ದೂರ ಇರಲಿಲ್ಲ. ಮಹಡಿಮೇಲೆ ಅವರ ವಾಸ. “ಹಿ ಈಸ್ ಡಾ. ಜಾರ್ಜ್ ವರ್ಗೀಸ್” ಎಂದು ಪರಿಚಯಿಸಿದರು. ಅವರಿಬ್ಬರೂ ತಮ್ಮೊಳಗೇ ಸ್ವಲ್ಪ ಮಲಯಾಳಿ ಮಾತಾಡಿಕೊಂಡು ನಂತರ, ಇಂಗ್ಲೀಷಿನಲ್ಲಿ ನನಗೆ, “ವೆನ್ ಯು ಹ್ಯಾವ್ ಟು ವೆಕೇಟ್ ದ ಹೋಟೆಲ್?” ಎಂದರು ಎತ್ತರದ ಜಾರ್ಜ್.
ನಾನು ಇನ್ನೂ ಮೂರು ದಿನ ಇರಬಹುದು ಎಂದಾಗ, ಆ ಇನ್ನೊಬ್ಬ ಜಾರ್ಜ್ (ನನಗೆ ಅವರು ಈಗ ಕೂಡ ಡಾ. ವರ್ಗೀಸ್, ಹಾಗೆ ಕರೆದೇ ಮುಂದೆ ರೂಢಿಯಾಯಿತು),” ಡಾ. ಮೂರ್ತಿ, ದ ಡೇ ಯು ವೆಕೇಟ್ ದಿ ಹೋಟೆಲ್, ಕಮ್ ಸ್ಟ್ರೇಟ್ ಹಿಯರ್. ಐ ಆಮ್ ಆಲ್ಸೊ ಅಲೋನ್, ಹೌ ಮೆನಿ ಡೇಸ್ ಯು ವಾಂಟ್, ಯು ಕೆನ್ ಸ್ಟೆ ವಿತ್ ಮಿ” (ಡಾ. ಮೂರ್ತಿ, ನೀವು ಹೋಟೆಲ್ ಖಾಲಿ ಮಾಡಿದ ದಿನ, ನೇರ ಇಲ್ಲಿಗೆ ಬನ್ನಿ. ನಾನು ಒಬ್ಬಂಟಿಗ, ಇಷ್ಟ ಇದ್ದಷ್ಟು ದಿನ ನನ್ನೊಂದಿಗಿರಿ) ಎಂದರು. ಆ ಸಮಯ ನನ್ನ ಎಲ್ಲ ಸಂಕಷ್ಟ ಪರಿಹಾರ ಆದಂತೆ ತುಂಬಾ ನಿರಾಳವಾಯಿತು.
ಸೋಮಾಲಿಯಾ ಇಸ್ಲಾಂ ಮತ ಪಾಲಿಸುವ ರಾಷ್ಟ್ರ ಆದ್ದರಿಂದ, ವಾರದ ರಜ ಶುಕ್ರವಾರ. ಅಂಥ ಒಂದು ಶುಕ್ರವಾರ, ತಿಂಡಿಯ ನಂತರ ಮಾರುಕಟ್ಟೆಗೆ ಹೋಗೋಣ ಬನ್ನಿ ಎಂದರು, ಡಾ. ವರ್ಗೀಸ್. ನಾನು ಇದೂ ಸಹ ಒಳ್ಳೆಯ ಅವಕಾಶ ಊರಿನ ದೃಶ್ಯಗಳನ್ನು ಕಣ್ಣಿಗೆ ತುಂಬಲು ಅಂದುಕೊಂಡು ಹೊರಟೆ. ಆ ಸರಹದ್ದು ಮೊಗದಿಶುವಿನ ಹೃದಯ ಭಾಗ ಇದ್ದಂತೆ, ಎಲ್ಲ ನಡೆದೇ ಸೇರುವಷ್ಟು ಹತ್ತಿರ. ಮೊದಲು ತರಕಾರಿ ಕೊಂಡರು. ಎಲ್ಲ ವಾರಕ್ಕೆ ಪೂರ್ತಿ ಆಗುವ ಹಾಗೆ. ತಂದದ್ದನ್ನು ಸಂಸ್ಕರಿಸಿ ಫ್ರಿಜ್ಜಿಗೆ ಒಟ್ಟಿದರಾಯಿತು. ಮುಂದೆ ಮಾಂಸದ ಮಾರುಕಟ್ಟೆ. ಅದು ಮಾತ್ರ ಶಿಸ್ತಾಗಿ ಉದ್ದ ಶೆಡ್ಡಿನಂತಹ ಕಟ್ಟಡದೊಳಗೆ, ಎರಡೂ ಬದಿ ಆಳೆತ್ತರದ ಕಟ್ಟೆಗಳಿರುವ ಅಂಗಡಿಗಳು. ಒಂದು ಕಡೆ ಕುರಿ ಮಾಂಸ, ಮತ್ತೊಂದು ಕಡೆ ದನದ ಹಾಗೂ ಒಂಟೆ ಮಾಂಸ ಮಾರುವುದು. ಇನ್ನೊಂದು ಬದಿ ಹಣ್ಣು ಮತ್ತು ತರಕಾರಿ. ಹಣ್ಣು ಹಾಗು ತರಕಾರಿ ಹೊರಗೆ ರಸ್ತೆಯ ಅಕ್ಕಪಕ್ಕ ಕೂಡ ದೊರಕುತ್ತದೆ. ಕೋಳಿಗೆ ಬೇರೆ ಮಾರುಕಟ್ಟೆ ಬೇರೆಡೆ ಇದೆ. ಮೀನು ಮಾರುವುದು ಸಮುದ್ರತೀರದ ಹತ್ತಿರ ಎಂದರು ಡಾ. ವರ್ಗೀಸ್. ಹಾಗೆ ಎಲ್ಲ ತೋರಿಸಿ ವಿವರಿಸುತ್ತಾ ತಮಗೆ ಬೇಕಾದನ್ನು ಕೊಂಡುಕೊಂಡರು. ಆದರೆ ಒಮ್ಮೆಯು ಸಹ, ನಾನು ಕಛೇರಿಯಲ್ಲಿ ಐದು ಸಾವಿರ ಶಿಲ್ಲಿಂಗನ್ನು (ಸೋಮಾಲಿ ಹಣ) ಮುಂಗಡ ಪಡೆದಿದ್ದನ್ನು, ಹೊರ ತೆಗೆಯಲು ಬಿಡಲೇ ಇಲ್ಲ. ನೀವು ಅತಿಥಿ ಅಂತ ಹೇಳುತ್ತಾ ನನ್ನ ಕೈಕಟ್ಟಿದ್ದರು! ಅಂತೂ, ಹೀಗೆ ಮಾರುಕಟ್ಟೆಯ ‘ಶೂಟಿಂಗ್’ ಮುಗಿಸಿ, ‘ಪ್ಯಾಕಪ್’ ಮಾಡಿ ಆ ದಿನ ಕಳೆದಿದ್ದೆ.
ಅಂತು ಇಂತೂ ವಾರಕ್ಕೂ ಮಿಕ್ಕಿ ಅವರ ಮನೆ ಆತಿಥ್ಯ ಜರುಗಿದ್ದರೂ, ಪ್ರವಾಸಕ್ಕೆ ತೆರಳಿದ್ದ ‘ಹರೇದ್ ಫಾರಾ ನೂರ್’ ಎಂಬ ಹೆಸರಿನ ನಿಜವಾದ ಡಿ.ಜಿ. ಅವರ ನೆರಳನ್ನೂ ಇನ್ನೂ ಕಾಣದೆ ಕಂಗಾಲಾಗತೊಡಗಿದೆ. ಕಾರಣ, ನನ್ನ ಮುಗ್ಧ ಮತ್ತು ಹೆಂಡತಿಯ ಹಂಬಲ ಎಷ್ಟು ಆಳ ಇಳಿದಿರಬಹುದು ಎಂದು, ಆ ಯೋಚನೆಯೇ ನನ್ನನ್ನು ಹಿಂಡಿ ಅಧೀರನನ್ನಾಗಿಸಿತು. ಅವಳಿಗೆ ಅಣ್ಣ ಅತ್ತಿಗೆ ಇಬ್ಬರೂ ಆಗಂತುಕರೇ ಹೌದಲ್ಲವೇ. ಪಾಪ ಅನ್ನಿಸಿ ಇನ್ನೂ ಕುಸಿಯುತ್ತಿದ್ದೆ.
ಡಾ. ವರ್ಗೀಸ್ ನನ್ನ ಮುಖದ ಗೀರುಗಳನ್ನು ಅಳೆದವರಂತೆ ಸಾಂತ್ವನದ ಮಾತನ್ನಾಡಿದಾಗ, ನನಗೆ ಅತ್ಯಾಶ್ಚರ್ಯ. ಎಂಥ ಮನುಷ್ಯ! ಅವರು ಕೇರಳದ ಮನ್ನೂತಿ ಪಶುವೈದ್ಯ ಕಾಲೇಜಿನ ಪ್ಯಾರಾಸೈಟಾಲಜಿ ಪ್ರಾಧ್ಯಾಪಕರು. ಭಾರತ ಸರಕಾರದ ನಿಯೋಜನೆ ಮೂಲಕ ಇಲ್ಲಿ ಪಾಠ ಹೇಳಲು ಬಂದಿದ್ದರು. ಬಹುಶಃ ಮೂರು ವರ್ಷದ ಅವಧಿಗೆ . ನಂತರ ಎರಡೂ ಸರಕಾರ ಒಪ್ಪಿ ಮುಂದುವರಿಸಲೂಬಹುದು. ಸ್ವಲ್ಪ ಸಮಯದಲ್ಲೇ ಅವರ ಪತ್ನಿ ಮತ್ತು ಮಗಳು ಬರುವವರಿದ್ದರು. ಅಂದಮೇಲೆ ಅಲ್ಲಿಯೂ ನನಗಷ್ಟೆ ಕಾಲಾವಕಾಶ!
ಡಾ. ವರ್ಗೀಸರ ಕುಟುಂಬದ ಪ್ರಯಾಣದ ಯೋಜನೆ ನನ್ನ ಅದೃಷ್ಟಕ್ಕೆ ಇನ್ನೂ ವ್ಯವಸ್ಥೆ ಆಗಿರಲಿಲ್ಲ. ಈ ವ್ಯಕ್ತಿ ಎಂಥವರು ಎಂದರೆ, ಪತ್ನಿ ಬಂದಮೇಲೆ ಸಹ ನನ್ನನ್ನು ಆಚೆ ಕಳಿಸದೆ ಅಲ್ಲೇ ಇರು ಎಂದರೂ ಅಚ್ಚರಿಯಲ್ಲ! ಇಷ್ಟೆಲ್ಲ ಆದರೂ ನನ್ನಿಂದ ಚಿಕ್ಕಾಸನ್ನೂ ಯಕಃಶ್ಚಿತ್ ವಸ್ತು ಕೊಳ್ಳಲೂ ಖರ್ಚು ಮಾಡಿಸದೆ, ಅಂಥ ಸಂದರ್ಭಗಳಲ್ಲಿ “ಯೂ ಆರ್ ಮೈ ಗೆಸ್ಟ್. ಪ್ಲೀಸ್ ಬಿ ಲೈಕ್ ದಟ್” (ನೀನು ನನ್ನ ಅತಿಥಿ, ಹಾಗೇ ಇರಬೇಕು) ಎಂದು ಎದೆ ತುಂಬಿದ ತಾಕೀತು ಮಾಡುತ್ತಿದ್ದರು. ಮತ್ತು ನಾನು ಹಾರ್ಗೀಸಾ ನೋಡಲು ಬಂದಾಗ ‘ಎಲ್ಲ ಖರ್ಚೂ ನಿಮ್ಮದೇ’ ಎಂದೂ ಏಣಿ ಹತ್ತಿಸುತ್ತಿದ್ದರು, ಇನ್ನೇನು ಬಂದೇ ಬಿಟ್ಟರು ಅನ್ನುವ ಥರ.
ಕೊನೆಗೂ ಒಂದು ದಿನ ಶಬೆಲ್ಲಿ ಋಣ ತೀರಿಸಿದಂತೆ ಅಲ್ಲಿಂದ ಹೊರನಡೆದು, ಡಾ. ಜಾರ್ಜ್ ವರ್ಗೀಸ್ ಮನೆ ತುಂಬಿ ಕೊಂಡೆ. ನನಗೆ ಪ್ರತ್ಯೇಕ ಕೊಠಡಿ ಬಿಟ್ಟುಕೊಟ್ಟು, ನೀವು ಇಲ್ಲಿ ನಿಮ್ಮದೇ ಮನೆಯ ಹಾಗೆ ಇರಬೇಕು ಎಂಬ ಆತ್ಮೀಯ ಮನವಿ ಕೂಡ ಮಾಡಿ, ನನ್ನ ಮನಸ್ಸನ್ನು ಮೊದಲದಿನವೇ ಗೆದ್ದಿದ್ದರು. ಈ ಜಾರ್ಜ್ ವರ್ಗೀಸ್ ಅವರು ಸುಮಾರು ಐದಡಿ ಆರು ಅಥವ ಏಳಿಂಚು ಎತ್ತರ. ನನ್ನ ಭುಜದ ಮೇಲೆದ್ದು ನಿಂತ ಭುಜ ಅವರದ್ದು. ಬಿಳೀ ಬಣ್ಣ ಕೂಡ. ಮೃದು ಸ್ವಭಾವ ಮತ್ತು ಕಮ್ಮಿ ಮಾತಿನ ಮತ್ತು ಶಿಸ್ತಿನ ವ್ಯಕ್ತಿ.
ನನಗೆ ಅಡಿಗೆಯೆಂಬ “ಗಂಧ ತೇಯುವ” ಅಭ್ಯಾಸ ಎಂದೆಂದೂ ಇರಲಿಲ್ಲ. ಕಾಫಿ, ಟೀ ಮಾಡಲೂ ಅರಿಯದ ಅಮಾಯಕ! ಎಡವಟ್ಟ ಅಂದರೇ ಸರಿಯಾದೀತು. ಹಾಗಾಗಿ, ಇಬ್ಬರಿಗೂ ಬೆಳಿಗ್ಗೆ ಮತ್ತೆ ಇಲ್ಲಿಯೂ “ಬ್ರೆಡ್ಡಾಮ್ಲೆಟ್” ಪ್ರತಿ ರಾತ್ರಿ ಅವರೇ ಖುದ್ದು ಅಡಿಗೆಯನ್ನು ಆ ಹೊತ್ತಿಗೆ ಆಗುವಷ್ಟು ಮತ್ತು ಮಾರನೆ ಮಧ್ಯಾಹ್ನಕ್ಕೂ ಆಗುವಷ್ಟು ಮಾಡಿ, ಫ್ರಿಜ್ಜಲ್ಲಿಟ್ಟು ಮತ್ತೆ ಬಿಸಿ ಮಾಡಿ ತಿನ್ನುವುದನ್ನು ನನಗೂ ರೂಢಿ ಮಾಡಿಸಿದರು. ನನ್ನನ್ನು ಮೂರು ಹೊತ್ತೂ ಬ್ರೆಡ್ಡಾಮ್ಲೆಟ್ಟನ್ನು ‘ದನ ಹುಲ್ಲು’ ಮೆಯ್ದಂತೆ ಮೇಯುವ ಹಾಗೆ ಮಾಡಿದ್ದ ಶಬೆಲ್ಲಿಗೆ ಹೋಲಿಸಿ, ಇದು ಸ್ವರ್ಗಸಮಾನ ಅನ್ನಿಸಿತು. ಆದರೂ ಕೆಲವು ದಿನ ನನಗೆ ಅನ್ನ ಇಟ್ಟು ಸತ್ಕರಿಸಿದ ಶಬೆಲ್ಲಿಗೂ ಒಂದು ದೊಡ್ಡ ನಮನ ಸಲ್ಲಿಸಿದೆ. ತಲೆಯ ಮೇಲಿನ ‘ಕಿರೀಟ’ ಆದಂತಹ ಆ ಋಣ ಸುಮ್ಮನೆ ಯಾರಿಗೂ ಲಭಿಸದು, ಅಲ್ಲವೇ!
ಇಂತಹ ವ್ಯಕ್ತಿಯ ಜೊತೆ ಇದ್ದೂ, ಒಮ್ಮೊಮ್ಮೆ ಒಬ್ಬಂಟಿಯಾದಂಥ ಹತಾಶೆ ನನ್ನ ಮನದ ಆಗಸದಲ್ಲಿ ಕಪ್ಪಿಡುತ್ತಿತ್ತು! ಹೀಗೆ, ಕ್ಯಾಲೆಂಡರಿನಲ್ಲಿ ದಿನದಿನವೂ ಆಯಾಯ ತಾರೀಕಿಗೆ ಗೀಟೆಳೆದು ಕಾಯ್ದಂತೆ, ಒಟ್ಟು ಹದಿನೆಂಟು ದಿನಗಳನ್ನು ದೂಡಿದ ನಂತರ, ಇನ್ನೂ ಇನ್ನೆಷ್ಟು ದಿನವೋ ಪ್ರಭು ಎಂಬ ಆರ್ತತೆ ತುಂಬಿ, ಮಾರನೆ ದಿನ ಏನೋ ಎಂತೋ ಅಂದುಕೊಂಡು ಮಲಗಿದರೆ ಆ ರಾತ್ರಿ ನಿದ್ದೆಗಾಗಿ ಹೊರಳಾಡಿ ಸುಸ್ತು.
ಆ ಹತ್ತೊಂಭತ್ತನೆ ದಿನ ನಾನು ಯಥಾಪ್ರಕಾರ ಕಿಕ್ಕಿರಿದ ರೋಗಿಗಳ ತಪಾಸಣೆಯಲ್ಲಿ ತೊಡಗಿದ್ದಾಗ, ಕ್ಲಿನಿಕ್ಕಿಗೆ ನೇರವಾಗಿ ಬಂದ ಎತ್ತರದ ವ್ಯಕ್ತಿಯೊಬ್ಬರು “ದತೊರೇ, ಐ ಆಮ್ ಹರೇದ್ ಫಾರಾ ನೂರ್” ಎನ್ನುತ್ತಾ ಕೈ ನೀಡಿದರು. ನನಗೆ ಹೇಗಾಗಿರಬೇಡ ಯೋಚಿಸಿ.
ಪ್ರವಾಸದಿಂದ ಬಂದಿದ್ದ ಡಿ.ಜಿ. ಸ್ವತಃ ನನ್ನಲ್ಲಿಗೇ ಬಂದು ತಮ್ಮ ಪರಿಚಯ ಮಾಡಿಕೊಳ್ಳುವುದು ಅಂದರೆ ಸುಮ್ಮನೇನಾ?
ನಮ್ಮ ದೇಶದಲ್ಲಿ ಅಂಥದ್ದು ಸಾಧ್ಯಾನಾ? ದಢಕ್ಕನೆದ್ದು ಕೈಕುಲುಕಿದೆ. ಲೋಕಾಭಿರಾಮ ಎರಡು ಮಾತಾಡಿ, ಕೆಲಸ ಮುಗಿಸಿದ ಮೇಲೆ ಆಫೀಸಿಗೆ ಬಂದು ಹೋಗುವಂತೆ ಹೇಳಿ ನಿರ್ಗಮಿಸಿದರು.
ಅಲ್ಲಿಯ ಆಚಾರವೇ ಅಂಥದ್ದು ಎಂದು ಕ್ರಮೇಣ ಅರ್ಥ ಆಯಿತು. ವಾಸ್ತವವಾಗಿ ಸೋಮಾಲಿಯ ಜನ ಎಲ್ಲರ ಜೊತೆ ಕಲೆಯುವವರು ಹಾಗೂ ಸರ್ವಸ್ವತಂತ್ರ್ಯರು. ಅಂಥವರ ನಾಡಲ್ಲಿ ಮಿಲಿಟರಿ ಸರ್ಕಾರ ಎಂಬುದೇ ವಿಪರ್ಯಾಸ!
ಒಬ್ಬ ಮಂತ್ರಿಯ ಕಾರಕೂನ ಅಥವ ವಾಹನ ಚಾಲಕನಿಂದ ಹಿಡಿದು ಎಲ್ಲ ಥರದ ಸಹೋದ್ಯೋಗಿಗಳೂ ಅವರ ಎದುರೇ ಕುರ್ಚಿಯಲ್ಲಿ ಕೂರುವಂಥ ಜನ! ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬನಿಗಿಂತ ಕೀಳಲ್ಲ ಎಂಬ ಮನೋಭಾವ ಅವರವರ ಹುಟ್ಟಿಂದ ಬಂದಂಥ ಗುಣ!
ಮುಗಿದ ಕೂಡಲೇ ದಢದಢ ಮೆಟ್ಟಿಲನ್ನು, ದುಗುಡ ತುಂಬಿದ ಎದೆ ಹೊತ್ತು ಹತ್ತಿದೆ. ಆಗವರು ಫೋನಿನ ಸಂಭಾಷಣೆಯಲ್ಲಿದ್ದರೂ, ನನಗೆ ಕುರ್ಚಿ ತೋರಿಸಿದರು. ಮುಗಿದ ಕೂಡಲೇ ನನ್ನ ಮತ್ತು ನನ್ನ ಪತ್ನಿಯ ಬಗ್ಗೆ ವಿಚಾರಿಸಿದರು. ನಾನು ವಿವರವಾಗಿ ಅಣ್ಣನಿಂದ ತೊಡಗಿ ಎಲ್ಲ ಹೇಳಿದ್ದನ್ನು ಸಾವಧಾನದಿಂದ ಕೇಳಿ, ಮುಸ್ತಾಫಾನಿಗೆ ಕರೆಸಿ, ಸೋಮಾಲಿ ಭಾಷೆಯಲ್ಲಿ ಏನನ್ನೋ ವಿವರಿಸಿ, “ಯೂ ಕೆನ್ ಗೋ ಅಂಡ್ ಮೀಟ್ ಯುವರ್ ವೈಫ್ ನೌ” ಅಂದು, ಕೈಕುಲುಕಿ ಕಳಿಸಿದರು. ಮುಸ್ತಾಫಾ ತನ್ನ ಕಛೇರಿಯಲ್ಲಿ ಏರ್ ಲೈನ್ಸ್ ಟಿಕೆಟ್ಟಿಗಾಗಿ ಕಾಗದ ಟೈಪ್ ಮಾಡಿ ನನ್ನ ಕೈಗೆ ಕೊಟ್ಟು, “ಓಕೆ ದತೋರೆ” ಎಂದು, ಹೇಳಿ ಮಾರನೇ ದಿನ ನೀವು ಇರುವ ಸ್ಥಳಕ್ಕೇ ಚಾಲಕ ಬಂದು ಏರ್ಪೋರ್ಟಿಗೆ ಡ್ರಾಪ್ ಮಾಡುವನೆಂದು ಮತ್ತು ಆತನಿಗೆ ನಿಗದಿತ ವೇಳೆ ಏರ್ ಲೈನ್ಸ್ ಕಛೇರಿಗೆ ಹೋದಾಗ ತಿಳಿಸಿ ಎಂದು ಹೇಳಿ ಬೀಳ್ಕೊಟ್ಟ.
ಡಾ. ವರ್ಗೀಸ್ ಅವರಿಗೆ ವಿಷಯ ತಿಳಿದು ಖುಷಿ ಮತ್ತು ಬೇಸರ ಎರಡೂ. ಕೊನೆಗೂ ನನಗೆ ಹಾರ್ಗೀಸಾಕ್ಕೇ ವರ್ಗ ಆಯಿತಲ್ಲ ಎಂಬ ಆನಂದ ಮತ್ತು ಅವರನ್ನು ಬಿಟ್ಟು ಹೋಗುತ್ತಿರುವ ನೋವು. ಬೆಳಿಗ್ಗಿನ ಫ್ಲೈಟ್ ಆದ್ದರಿಂದ ಐದು ಘಂಟೆಗೇ ಎದ್ದು ತಯಾರಾದೆ. ಅಷ್ಟು ಹೊತ್ತಿಗೆ ನಮ್ಮ “ಬ್ರೆಡ್ ಜಾಮ್ ಆಮ್ಲೆಟ್” ರೆಡಿ ಮಾಡಿದ್ದರು ವರ್ಗೀಸ್. ತಿನ್ನುವ ಹೊತ್ತಿಗೆ ಡ್ರೈವರ್ ಘಂಟೆ ಬಾರಿಸಿದ.
ಅದೆಂಥ ಅನುಬಂಧವೋ ಕಾಣೆ, ನಮ್ಮಿಬ್ಬರಲ್ಲಿ ಅಷ್ಟೇ ದಿನಗಳಲ್ಲಿ ನಾವು ದಶಕಗಳ ಗೆಳೆಯರಂತಿದ್ದೆವು! ನನ್ನನ್ನು ತಬ್ಬಿ ಬೀಳ್ಕೊಟ್ಟರು.
ಹೌದು, ಅಂದಿನ ಆ ಸ್ನೇಹ ನಾವು ಮುಂದೆ ಮೊಗದಿಶುವಿಗೇ ವರ್ಗವಾಗಿ ಬಂದಾಗ ಹೆಚ್ಚು ಹೆಚ್ಚು ‘ಕಾಂಕ್ರೀಟ್’ ತುಂಬಿಕೊಂಡು, ಗಟ್ಟಿ ವಜ್ರವಾಯಿತು. ಆಜೀವ ಸ್ನೇಹ ಆಗಿ ಈಗಲೂ ಹಾಗೇ ಇದೆ. ನಾವು ಕುಟುಂಬ ಸಹಿತ ತ್ರಿಶೂರಿನ ಅವರ ಮನೆಯಲ್ಲಿ ಇದ್ದು ಬಂದಿದ್ದೇವೆ. ಅವರೂ ಸಹ, ಪತ್ನಿ ಆನ್(Ann) ಮತ್ತು ಮಗಳು ಮರಿಯಮ್ ಸಂಗಡ ನನ್ನ ಮಗಳ ಮದುವೆಗೂ ಬಂದು ಹೋಗಿದ್ದಾರೆ. ಈ ಲೇಖನದ ಆರಂಭದಲ್ಲಿ ಸಹ ಅವರು ಬಹಳ ಹೊತ್ತು ಮಾತಾಡಿದ್ದರು.
ನಾವು ಏಡನ್ನಿನಿಂದ ಹಾರ್ಗೀಸಾಕ್ಕೆ ಬಂದಿದ್ದ ಫ್ಲೈಟೇ ಈಗ ನನ್ನ ವಾಪಸ್ ಕರೆದೊಯ್ಯುವುದು. ಅದು ಮೊಗದಿಶು ಬಿಟ್ಟು, ಹಾರ್ಗೀಸಾದಲ್ಲಿ ಇಳಿದು ಏಡನ್ನಿಗೆ ಹೋಗಿ, ಮತ್ತದೇ ಮಾರ್ಗ ಹಿಂತಿರುಗಿ ಮೊಗದಿಶು ತಲಪುವ ಫಾಕರ್ ಫ್ರೆಂಡ್ ಶಿಪ್ ಮಾದರಿ ವಿಮಾನ. ಅಂದು ನಾವು ಏಡನ್ನಿನಿಂದ ಹಾರ್ಗೀಸಾ ತಲಪಿದಾಗ, ನಮ್ಮ ಅದೃಷ್ಟಕ್ಕೆ ಆ ಸಂಜೆ ಅಲ್ಲೇ ತಂಗಿದ್ದು ಮಾರನೆ ದಿನ ಮೊಗದಿಶುವತ್ತ ಹೊರಟ ವಿಮಾನ, ಈ ದಿನ ಹೊರಡುವ ಮುನ್ನವೇ ಒಂದು ಘಂಟೆ ತಡವಾಯಿತು. ಅದರ ಬಗ್ಗೆ ಏರ್ ಲೈನ್ಸಿನವರಿಂದ ಯಾವ ಥರದ ಧ್ವನಿವರ್ಧಕದ ಪ್ರಚಾರ ಸುತರಾಂ ಇಲ್ಲ! ಹಾಗೆಲ್ಲ ತಿಳಿಸಲೇಬೇಕೆಂಬ ದರ್ದೇನೂ ಆ ಜನಕ್ಕೆ ಇದ್ದಂತಿರಲಿಲ್ಲ. ಅಂತೂ, ತಡ ಆದರೂ ಗ್ಯಾರಂಟಿ ಹೊರಟಿತು. ಅದೃಷ್ಟಕ್ಕೆ ಬೋರ್ಡಿಂಗ್ ನಂತರ, ಒಳಗಿನ ಪಂಖರಹಿತ ಉಬ್ಬೆಯೊಳಗೆ ಮತ್ತೆ ತಡವಾಗಲಿಲ್ಲ ಎ.ಸಿ. ಆರಂಭ ಆಗುವುದೇ ಹೊರಡುವಾಗ.
ಸದ್ಯ ಕನಸು ಕಾಣಲೋ ಅಥವ ಆಗಸದ ಒಳ ಅಂತರಂಗ ಹೊಕ್ಕಿ ವೀಕ್ಷಿಸಲು ಕಿಟಕಿ ಸೀಟಾದ್ದರಿಂದ ಖುಷಿಯಾಯಿತು. ಹಾರ್ಗೀಸಾ ತಲಪುವವರೆಗೆ ನನ್ನ ನಾನೇ ಮರೆತು ಕೂತಿದ್ದೆ – ಕಲ್ಪನಾ ಲೋಕದಿ ಸಂಚರಿಸುತ್ತಾ…
ಮುಂದಿನ ವಾರಕ್ಕೆ…
ಡಾ. ಅರಕಲಗೂಡು ನೀಲಕಂಠ ಮೂರ್ತಿ