— ೮ —
ಕೆಂಪು ಸಮುದ್ರದ ತೀರ
ಹಾರ್ಗೀಸಾದಲ್ಲಿ ಶಾಬ್ ಬಡಾವಣೆಗೆ
ತಲಪುವುದೇ ಒಂದು ಆನಂದಮಯ ಅನುಭಾವ. ಅದೊಂದು ಮಿನಿ ಅರಣ್ಯದ ಹಸಿರ ರಾಶಿಯೊಳಗೆ ಹೊಕ್ಕಂತೆ. ಎಲ್ಲೆಲ್ಲೂ ಗಿಡಮರಗಳು. ದೂರದೂರದಲ್ಲಿರುವ, ಕಲ್ಲಿನಲ್ಲಿ ನಿರ್ಮಿಸಿದ ಒಂದೊಂದೇ ಚಿಕ್ಕಚಿಕ್ಕ ಬಂಗಲೆ ಥರದ ಮನೆಗಳು. ಅಲ್ಲದೆ ಮನೆಗಳು ಮುಗಿದ ನಂತರದ ಸರಹದ್ದಿನ ಆಚೆಗೆ ಇರುವುದೆಲ್ಲ ಕಾಡು; ದಟ್ಟವಾದುದಲ್ಲ. ಬಹುಶಃ ಆ ಕಾಡೊಳಗೆ ಕೆಲ ಬುಡಕಟ್ಟುಗಳ ಜನ ವಾಸಿಸುವ ಕಿರಿದಾದ ಹಳ್ಳಿಗಳು ಇದ್ದಿರಬೇಕು. ಏಕೆಂದರೆ ಅನೇಕ ಬಾರಿ, ಅಂಥವರ ಓಡಾಟ ಅಲ್ಲೆಲ್ಲ ಇದ್ದೇ ಇರುತ್ತದೆ. ರಾತ್ರಿಯ ಹೊತ್ತು ಕತ್ತೆಕಿರುಬಗಳ ಕಿರುಚು ಮನೆಗಳ ಹತ್ತಿರವೇ ಕೇಳಿಸುತ್ತಿತ್ತು. ಹಗಲಲ್ಲಿ ಸುತ್ತಮುತ್ತೆಲ್ಲ ಸಣ್ಣಸಣ್ಣ ಜಿಂಕೆಗಳ, ಮೊಲಗಳ ಓಡಾಟ ಸಾಮಾನ್ಯ, ಅಲ್ಲಿನ ಹಸಿರು ಆಹಾರಕ್ಕಾಗಿ. ಇವಲ್ಲದೆ ಚೇಳುಗಳು ಎಲ್ಲೆಲ್ಲೂ ಹರಿದಾಡುವುದರಿಂದ ಎಚ್ಚರಿಕೆಯ ನಡೆ ಅಗತ್ಯ ಇತ್ತು. ರಾತ್ರಿ ಹೊತ್ತು, ಆ ಕಾಲಕ್ಕೆ ಅಲ್ಲಿ ಬೀದಿದೀಪ ದೂರದೂರ ಇದ್ದಿದುರಿಂದ, ಪ್ರತಿ ಒಬ್ಬರ ಕೈಲಿ ಟಾರ್ಚ್ ಇರುತ್ತಿತ್ತು. ಎಷ್ಟೋ ಬಾರಿ ಸೋಮಾಲಿಗಳು, ಮುಖ್ಯವಾಗಿ ಮೇಲೆ ಹೇಳಿದ ಬುಡಕಟ್ಟು ಜನ, ರಸ್ತೆಯಲ್ಲಿ ಚೇಳು ಹರಿದರೆ, ಅದನ್ನು ಚಪ್ಪಲಿಯಲ್ಲಿ ಹೊಸಕಿ ಉಳಿಸಿದ್ದ ಅವಶೇಷ ಕಾಣುವುದೂ ಸಾಮಾನ್ಯವಾಗಿತ್ತು.

ಈ ಶಾಬ್ ಏರಿಯಾದ ಮನೆಗಳು ವಾಸ್ತವವಾಗಿ, ಆಂಗ್ಲರು ವಾಯುವ್ಯ ಭಾಗದ (ಉತ್ತರ ಮತ್ತು ಪಶ್ಚಿಮ) ಸೋಮಾಲಿಯಾ ಪ್ರದೇಶ ಆಳುತ್ತಿದ್ದಾಗ, ಇಂಗ್ಲೀಷ್ ಅಧಿಕಾರಿಗಳ ವಾಸಕ್ಕಾಗಿ ನಿರ್ಮಿಸಿ ಹಾಗೇ ಬಿಟ್ಟು ಹೋಗಿದ್ದವು. ನಮ್ಮ ಕಾಲಕ್ಕೆ ಭಾರತೀಯ ವೈದ್ಯರ ಮತ್ತು ಇನ್ನಿತರ ವಿದೇಶಿ ಉನ್ನತ ಅಧಿಕಾರಿಗಳ ವಾಸಕ್ಕಾಗಿ ನೇಮಕಗೊಂಡಿದ್ದವು. ಅಂದಿನ ಆಂಗ್ಲ ಅಧಿಕಾರಿಗಳು ಸ್ಥಳೀಯರಿಗೆ ‘ಸಾಹೇಬ’ರುಗಳಾಗಿದ್ದರು.. ಹಾಗಾಗಿ ಅದು ‘ಸಾಹೇಬ್’ ಏರಿಯಾ ಎಂದೇ ಆಗಿತ್ತು. ಕ್ರಮೇಣ ಜನಸಾಮಾನ್ಯರ ನಾಲಿಗೆ ಅದನ್ನು ‘ಶಾಬ್’ ಎಂದು ಪರಿವರ್ತಿಸಿದೆ. ಅಂತೂ ನಾನು ಆ ದಿನ, ಅಂಥದ್ದರಲ್ಲಿ ಒಂದಾಗಿದ್ದ ನಮ್ಮಣ್ಣನ ಮನೆ ಸೇರಿಕೊಂಡೆ.
ಮಾರನೆ ದಿನದಿಂದಲೇ ಕೆಲಸಕ್ಕೆ ಹಾಜರಾದೆ. ಮತ್ತೊಮ್ಮೆ ಅಂದಿನ ಡೈರೆಕ್ಟರ್ ನನ್ನನ್ನು ಎಲ್ಲರಿಗೂ ಪರಿಚಯಿಸಿ, ನನಗಾಗಿ ಆಲಿ ಮುಹ್ಮದ್ ಎಂಬ ತರ್ಜುಮೆ ಆಸಾಮಿಯನ್ನೂ ಕೊಟ್ಟರು. ಆ ಆಲಿ, ನನಗೆ ಸಮಯವನ್ನೇ ಕೊಡದೆ, ನೇರವಾಗಿ ಮುಂದಿನ ನನ್ನ ಕಾಯಕದ ಕೊಠಡಿಯಲ್ಲಿ ಕೂರಿಸಿ, ಮೊದಲ ರೋಗಿಯನ್ನು ಒಳಗೆ ಕರೆದೇಬಿಟ್ಟ.
ಹಾರ್ಗೀಸಾ ಹವಾಮಾನ ಕರಾವಳಿ ಥರ ಅಲ್ಲದೆ ತಂಪಾದುದು. ನಮ್ಮ ಮಡಿಕೇರಿ ಸಮುದ್ರ ಮಟ್ಟದಿಂದ 3800 ಅಡಿ ಎತ್ತರವಾದರೆ, ಹಾರ್ಗೀಸಾ 4376 ಅಡಿ ಎತ್ತರ. ಆದರೂ, ಮಡಿಕೇರಿಯಲ್ಲಿ ವರ್ಷಕ್ಕೆ ಸರಾಸರಿ 1700 ಮಿ.ಮಿ ಸಮಕ್ಕೆ ಮಳೆಯಾದರೆ, ಇಲ್ಲಿ ಕೇವಲ 400 ಮಿ.ಮಿ. ಅಷ್ಟೆ. ಹಾಗಾಗಿ ಇಲ್ಲಿ ಕಾಫಿ ಅಥವ ಟೀ ಬೆಳೆಯನ್ನು ಆಳಿದ ಆಂಗ್ಲರೇ ವೃದ್ಧಿಪಡಿಸಿಲ್ಲ ಅನಿಸುತ್ತೆ.

ಇಂತಹ ಹವಾಮಾನ ಇದ್ದೂ ಸಹ, ಮೊಗದಿಶು ರೀತಿ ಇಲ್ಲೂ ಕೂಡ ಮಧ್ಯಾಹ್ನ ಎರಡು ಘಂಟೆಗೇ ಎಲ್ಲ ಕಛೇರಿಗಳೂ ಬಂದ್! ಅದು ಅಲ್ಲಿಯ ರಾಷ್ಟೀಯ ನೀತಿ ಆಗಿತ್ತು – ಅರಬ್ಬರ ಅನುಕರಣೆ, ಎಲ್ಲ ಅವರ ಆರ್ಥಿಕ ನೆರವಿಗಾಗಿ! ಹಾಗಾಗಿ ಮಧ್ಯಾಹ್ನದ ಊಟದ ನಂತರ ಕಾಲ ಹೇಗೆ ಕಳೆಯುವುದು ಎಂಬ ಸಮಸ್ಯೆ ಕಾಡತೊಡಗಿತ್ತು; ಹೊಸದಾಗಿ ಮದುವೆಯಾದ ಹೆಂಡತಿ ಇದ್ದೂ ಸಹ! ಒಂದು ತಿಂಗಳು ಇಂಥ ಹೊಯ್ದಾಟದಲ್ಲೇ ಕಳೆಯಿತು. ಭಾರತದಿಂದ ಬರುವಾಗ ಪುಸ್ತಕಗಳನ್ನು ತರುವಷ್ಟು ಲಗ್ಗೇಜ್ ಮಂಜೂರಾತಿ ಏರ್ಲೈನ್ಸಿಂದ ಎಲ್ಲಿ? ಕೊನೆಗೆ, ಮೊದಲ ತಿಂಗಳ ಸಂಬಳದಲ್ಲಿ ಅಂದಿನ ಕಾಲದ ಚಿಕ್ಕ ಟ್ರಾನ್ಸಿಸ್ಟರ್ ಮತ್ತು ಸಣ್ಣ ಟೈಪ್ರೈಟರ್ ಗಳನ್ನು ಕೊಂಡುಕೊಂಡೆ; ಮೊದಲನೆಯದು ಬಿಬಿಸಿ ಕೇಳುತ್ತಾ ನನ್ನ ಆಂಗ್ಲ ಉಚ್ಛಾರ ಇದ್ದುದರಲ್ಲಿ ಸ್ವಲ್ಪ ಉತ್ತಮಗೊಳಿಸಲು, ಇನ್ನೊಂದು ನನ್ನ ಬಹುದಿನದ ಆಸೆಯಾದ ಟೈಪಿಂಗ್ ಕಲಿಯಲು. ಭಾರತ ಸರ್ಕಾರದ ವತಿಯಿಂದ ಅಲ್ಲಿಗೂ ಒಬ್ಬ ಟೈಪಿಂಗ್ ಉಪಾಧ್ಯಾಯರೂ ಬಂದಿದ್ದರು. ಅವರನ್ನು ಕೇಳಿ ಅದಕ್ಕಾಗಿ ಒಂದು ಪುಸ್ತಕ ಕೂಡ ಕೊಂಡು ತಂದೆ. ಹೀಗೆ ನನ್ನ ಟೈಪಿಂಗ್ ಸ್ವಂತಕಲಿಕೆಯ ಶಕೆ ಆರಂಭವಾಯಿತು!
ಹಾಗಾದರೆ ಈ ಸೋಮಾಲಿ ಜನ ಮಧ್ಯಾಹ್ನ ಮತ್ತು ಸಂಜೆ ಹೇಗೆ ಕಾಲ ನೂಕುವುದು? ಅದನ್ನೂ ಅರಿವ ಕುತೂಹಲ ಇದ್ದೇ ಇತ್ತು. ಕ್ರಮೇಣ, ಬಿಡುವಿನ ಸಮಯಗಳಲ್ಲಿ ತರ್ಜುಮೆಗಾಗಿದ್ದ ಆಲಿ ಅಹ್ಮದ್ ನನಗೆ ಇಂಥ ಅಲ್ಲಿಯ ವಿಚಾರಗಳ ಮಾಸ್ತರ ಕೂಡ ಆದ! ಹಾಗಾಗಿ ಆತನಿಂದ ಅದೂ ಗೊತ್ತಾಯಿತು: ಸಾಮಾನ್ಯವಾಗಿ ಸ್ನೇಹಿತರ ಸಣ್ಣಸಣ್ಣ ಗುಂಪುಗಳು ಯಾರಾದರೂ ಒಬ್ಬೊಬ್ಬರ ಮನೆ ಸೇರಿಕೊಂಡು, ‘ಖಾತ್’ (khat – catha edulis) ಎಂಬ ಗಿಡದ ಎಲೆಗಳನ್ನು ಹಾಗೂ ಅದರ ಎಳೆಯ ಕಾಂಡದ ತುಂಡು ತುಂಡುಗಳನ್ನು ಅಗಿದು ಅದರ ರಸದ ಆಸ್ವಾದದಲ್ಲಿ ತೇಲಾಡುವುದು ಅಲ್ಲಿಯ ಕಾಲಕ್ಷೇಪ! ಖಾತ್ ಗಿಡ ಅಲ್ಲದೆ ಮರ ಕೂಡ ಇರುತ್ತದೆ.

ಸೋಮಾಲಿ ಜನ ಖಾತ್ ಗಿಡದ ಎಲೆಗಳನ್ನು ಚಾತ್ ಎಂತಲೂ ಹೇಳುವುದುಂಟು. ಇದರ ಸೇವನೆ ಸೋಮಾಲಿಯ ಮಾತ್ರ ಅಲ್ಲದೆ, ಇಥಿಯೋಪಿಯ, ಎಮನ್, ಕೆನ್ಯಾ, ಟಾನ್ಜೇನಿಯ, ಮಡಗಾಸ್ಕರ್ ಮತ್ತು ಜಿಬೂತಿ ಮುಂತಾಗಿ ಪೂರ್ವ ಆಫ್ರಿಕ ಹಾಗೂ ಅರೇಬಿಯನ್ ಪರ್ಯಾಯ ದ್ವೀಪದ ಸುತ್ತಲ ದೇಶಗಳಲ್ಲೂ ಚಾಲ್ತಿಯಲ್ಲಿದೆ. ಹಾಗಾಗಿ ಅದನ್ನು ಅಬಿಸ್ಸೀನಿಯನ್ ಟೀ ಮತ್ತು ಅರೇಬಿಯನ್ ಟೀ ಚಾತ್ ಎಂತಲೂ ಕರೆಯುವುದುಂಟು. ಈ ಖಾತ್ ಅಗಿಯುವುದು ಆನಂದದಾಯಕ, ಉತ್ತೇಜಕಮಯವಾದ ಅನುಭವ ಕೊಡುವುದು ಮಾತ್ರ ಅಲ್ಲದೆ ಕಾಮೋತ್ತೇಜಕ ಕೂಡ ಎಂಬ ನಂಬಿಕೆ. ಇದೇ ಕಾರಣಕ್ಕೆ ಇದು ಕೆಲವರಲ್ಲಿ ನಿರಂತರ ಚಟ ಆಗಿರುವುದೂ ಸಾಮಾನ್ಯ – ಮಾದಕ ದ್ರವ್ಯ ಮತ್ತು ಮದ್ಯಸೇವನೆ ರೀತಿ. ವೈಜ್ಞಾನಿಕವಾಗಿ ಸಹ ಅದಕ್ಕೆ ಪುರಾವೆ ಇದೆ, ಉತ್ತೇಜನಜನಕ ಹಾಗೂ ಆನಂದನ ವಸ್ತು ಎಂದು. ಆದ ಕಾರಣ ಡ್ರಗ್ಸ್ ಮಾದರಿಯಲ್ಲಿ, ಇದರ ಉಪಯೋಗವನ್ನೂ ಭಾರತ, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ನಿಷೇಧಿಸಲಾಗಿದೆ.
ಹಾರ್ಗೀಸಾದ ಗ್ರೂಪ್ ಆಸ್ಪತ್ರೆ ನಮ್ಮ ಒಂದು ಜಿಲ್ಲಾ ಜನರಲ್ ಆಸ್ಪತ್ರೆಯ ರೀತಿ. ಆದರೆ ಬ್ರಿಟಿಷರ ಕಾಲದ ಕಟ್ಟಡವಾದ್ದರಿಂದ ವಿಶಾಲವಾಗಿ, ಸದೃಢವಾಗಿ ಮತ್ತು ಆಗಲೂ ಸ್ವಲ್ಪ ಹೆಚ್ಚೂಕಮ್ಮಿ ಶುಚಿಯಾಗೇ ಇದ್ದ ಆಸ್ಪತ್ರೆ. ಮಂಗಳೂರಿನ ಡಾ. ಶೆಟ್ಟಿ ಅಲ್ಲಿ ಫಿಜೀಶಿಯನ್ ಆದರೆ, ನಮ್ಮಣ್ಣ ಕಣ್ಣಿನ ವೈದ್ಯರು. ಇನ್ನಿತರ ತಜ್ಞ ಶಾಖೆಗಳಲ್ಲಿ ಭಾರತೀಯರಲ್ಲದ ವೈದ್ಯರಿದ್ದರು. ಇದಲ್ಲದೆ ಕ್ಷಯರೋಗಕ್ಕಾಗಿಯೇ ಬೇರೊಂದು ಆಸ್ಪತ್ರೆಯಿತ್ತು; ಅಲ್ಲಿ ಡಾ. ಜೋಸೆಫ್ ಎಂಬ ಕೇರಳದ ವೈದ್ಯರಿದ್ದರು. ಇವೆರಡನ್ನುಳಿದು ನನ್ನ ಕೆಲಸದ ಡಿಸ್ಪೆನ್ಸರಿ ಮತ್ತು ಡಾ. ನಾಯಕ್ ಎಂಬ ಇನ್ನೊಬ್ಬ ಮಂಗಳೂರಿನ ವೈದ್ಯರಿದ್ಥ ಡಿಸ್ಪೆನ್ಸರಿಯೊಂದು ಅಷ್ಟೇ, ಅಲ್ಲಿಯ ಜನರ ಆರೋಗ್ಯಕ್ಕಾಗಿ ಇದ್ದ ಸೌಲಭ್ಯಗಳು.
ಅದೊಂದು ದಿನ ಕೆಲಸ ಮುಗಿಸಿ, ಮನೆಗೆ ಹೊರಡುವಾಗ ಡೈರೆಕ್ಟರ್ ನನ್ನನ್ನು ಕರೆಸಿ, ನಿಮ್ಮನ್ನು ಸ್ವಲ್ಪ ಸಮಯಕ್ಕಾಗಿ ಬರ್ಬರಾಕ್ಕೆ ಕಳಿಸಲು ಮೊಗದಿಶು ಕಛೇರಿಯಿಂದ ಸುದ್ದಿ ಬಂದಿದೆ; ಮುಂದಿನ ವಾರ ಹೊರಡಬೇಕು ಎಂದರು. ವಿಧಿಯಿಲ್ಲ ಒಪ್ಪಿದೆ. ಮೇಲಾಗಿ ಇದು ಬರ್ಬರಾ ನೋಡುವ ಸುಸಮಯ ಅನ್ನಿಸಿತು. ವಾರದ ರಜ ಶುಕ್ರವಾರ ಆದ್ದರಿಂದ, ಬಹುಶಃ ಶನಿವಾರ ಅಂದರೆ ಇನ್ನೈದು ದಿನದಲ್ಲಿ ಹೋಗಬೇಕಾದೀತು ಅಂದುಕೊಂಡು ಹಾಗೆ ಮನೆಯಲ್ಲೂ ತಿಳಿಸಿದೆ. ಆದರೆ ನಮ್ಮ ಔಷಧಾಲಯದಲ್ಲಿ ವೈದ್ಯ ಅಂತ ಇರುವುದೇ ನಾನೊಬ್ಬ. ಆದರೂ ಏಕೆ ಹೀಗೆ ಎಂಬ ‘ನಿಗೂಢ’ ಅರ್ಥ ಆಗಲಿಲ್ಲ. ಮನೆಯೊಳಗೆ ನನ್ನ ಮಡದಿಯ ದುಗುಡ, ಕೆನ್ನೆಗಳ ಮೇಲಿನ ಜಲಪಾತ ಆರಂಭ ಆಯಿತು. ಪ್ರತಿ ದಿನ ಅವಳಿಗೆ ಸಮಾಧಾನ ಹೇಳುತ್ತಾ, ಹೆಚ್ಚಿಗೆ ದಿನ ನನಗೂ ನಿನ್ನನ್ನು ಬಿಟ್ಟಿರುವುದು ಕಷ್ಟ ಆಗುತ್ತೆ; ಹೆಚ್ಚೆಂದರೆ ಎರಡೇ ವಾರ ಅಂತೆಲ್ಲ ಹೇಳಿ ಧೈರ್ಯ ತುಂಬಿ ಹೊರಟೆ.
ಬರ್ಬರಾಕ್ಕೆ ಹಾರ್ಗೀಸಾದಿಂದ ರಸ್ತೆಯಲ್ಲಿ 157 ಕಿ.ಮೀ. ದೂರ. ಪ್ರಯಾಣ ಸಮಾರು ಮೂರು ಘಂಟೆ. ಸಾಮಾನ್ಯ ನಾನು ಎಲ್ಲ ರೀತಿಯ ಪ್ರಯಾಣಗಳಲ್ಲಿಯೂ ಎಚ್ಚರವಾಗಿರುತ್ತೇನೆ. ಆದರೆ ಆ ದಿನ ಚಾಲಕನಿಗೂ ಅಷ್ಟಾಗಿ ಇಂಗ್ಲೀಷ್ ಬಾರದೆ, ಮಾತುಕತೆ ಇಲ್ಲದ್ದಕ್ಕೇ ನಿದ್ದೆ ಹೊಡೆದೆ. ಅಷ್ಟೇ ಅಲ್ಲದೆ, ನಿಸರ್ಗ ಅದ್ಭುತ, ನೋಡಲೇಬೇಕಾದುದು ಅನ್ನಿಸಲೂ ಇಲ್ಲ; ಬಹುಶಃ ನಿದ್ದೆ ಎಳೆತದಿಂದ ನೋಡುವ ಇಚ್ಛೆ ಇರಲಿಲ್ಲವೇನೋ. ಮಧ್ಯೆ ಒಮ್ಮೆ ನಿಲ್ಲಿಸಿ, “ದತೋರೆ, ಶಾಯ್ ರಿಂಜಿ” ಅಂದರೆ ‘ಡಾಕ್ಟರ್, ಕಪ್ಪು ಟೀ’, ಬೇಕಾ ಕೇಳಿ ನಾನು ಬೇಡ ಎಂದಾಗ, ಒಬ್ಬನೇ ಇಳಿದು ಕುಡಿದು ಬಂದ. ಬರ್ಬರಾ ತಲಪಿದಾಗ, ಸೀದಾ ಅಲ್ಲಿಯ ದವಾಖಾನೆಗೆ ಹೋದೆವು. ಆಗ ಅದೊಂದು ಸಣ್ಣ ಶಾಖೆ. ಅಲ್ಲಿಯ ಸಿಬ್ಬಂದಿ ಇಂದು ರೆಸ್ಟ್ ಮಾಡಿ ನಾಳೆ ಬರಲು ಹೇಳಿ ನನ್ನನ್ನು ವಾಸಸ್ಥಾನಕ್ಕೆ ಕಳಿಸಿದರು. ಹಿರಿಯ ಅಧಿಕಾರಿ ಯಾರೂ ಕಾಣಲಿಲ್ಲ. ಹತ್ತಿರದಲ್ಲೇ ಇದ್ದ ಹೋಟೆಲ್ ಸಹ ತೋರಿಸಿ ಚಾಲಕ ಅವನ ದಾರಿ ಹಿಡಿದ.

ಬರ್ಬರಾ ಹವಾಮಾನ ನನ್ನಂಥವನ ಮೈಗೆ ಸುತರಾಂ ಅಲ್ಲ. ಛಳಿಯಲ್ಲೂ ಪಂಖ ಬೇಕೇ ಬೇಕಾದ ನನಗೆ ಆಗಲೇ 45 ಡಿಗ್ರಿ ಉಷ್ಣ ಇದ್ದ ಆ ಊರು ಎಂಥ ಆನಂದಮಯ ನೀವೇ ಯೋಚಿಸಿ! ಮೊದಲ ರಾತ್ರಿ ಕಳೆಯುವುದೇ ನನ್ನ ಮೈಗೆ ತುಂಬಾ ಶೋಚನೀಯ ಅನ್ನಿಸಿತು. ಪಂಖ ಯಾವ ಮೂಲೆಗೆ? ಇನ್ನು ಬರಬರುತ್ತಾ ಅದು ಐವತ್ತು ಡಿಗ್ರಿ ಆಸುಪಾಸಿಗೆ ಏರಿಕೆ ಆದಾಗ ಗತಿ? ಕಾಪಾಡು ಪ್ರಭುವೇ, ಎಂದು ಕೈಮುಗಿದೆ.
ಬರ್ಬರಾ ಆ ದೇಶದ ಬಹಳ ಮುಖ್ಯ ಬಂದರಿರುವ ನಗರ. ಆಗ ರಷ್ಯದ ಜೊತೆ ಹೊಂದಾಣಿಕೆ ಇದ್ದುದರಿಂದ ಅಲ್ಲಿನ ಅಧ್ಯಕ್ಷ ಮಹಮ್ಮದ್ ಸೈಯದ್ (ಸಿಯಾದ್) ಬರ್ರೆ, ಆ ಬಂದರನ್ನೂ ಅವರ ಸುಪರ್ದಿಗೆ ಬಿಟ್ಟುಕೊಟ್ಟಿದ್ದರು. ಮೇಲಾಗಿ ಬರ್ಬರಾ ಕೆಂಪು ಸಮುದ್ರದ ತೀರದಲ್ಲಿದ್ದು, ಜಗತ್ತಿನ ಒಂದು ಅತಿ ಮುಖ್ಯ ಆಯಕಟ್ಟಿನ ಸ್ಥಾನವಾಗಿತ್ತು. ಹಾಗಾಗಿ ಅದರ ಮೇಲೆ ಅಮೆರಿಕಾ ಆಡಳಿತಕ್ಕೂ ನಿಗಾ ಇತ್ತು.
ಅಲ್ಲಿರಲೇಬೇಕಾದುದು ಖುಷಿಯ ಬದಲು ನನಗೆ ಅನಿವಾರ್ಯ ಅವಸ್ಥೆಯಂತಾಗಿತ್ತು. ಆದರೆ ಗತ್ಯಂತರವಿಲ್ಲದೆ ಇರುವುದನ್ನು ಅನುಭವಿಸಲೇಬೇಕು, ಅಲ್ಲವೇ! ಹಾಗಾಗಿ, ಸಂಜೆಯ ಹೊತ್ತು ಸಮುದ್ರತೀರದ ಕಡೆ ಹೋಗಿ ಕೂತು ಆನಂದದಿಂದ ಕಾಲ ಕಳೆಯುತ್ತಿದ್ದೆ. ನನಗೆ ಬುದ್ಧಿತಿಳಿದಾಗಿಂದಲೂ ಸಮುದ್ರ ಮತ್ತದರ ಅಲೆಗಳ ನರ್ತನ, ದಂಡೆಯ ಮೇಲಿನ ಮರಳು ಕಾಲ ಕೆಳಗೆ ಸರಿದೋಡುವುದು, ಕ್ಷತಿಜದ ಅಂತರಂಗಕ್ಕಿಳಿವ ನೇಸರನ ಚೆಲುವು ಇವೆಲ್ಲವನ್ನೂ ಕಣ್ತುಂಬಿಕೊಳ್ಳುವ ಗೀಳು. ಅದೊಂದೆ ಅಲ್ಲಿಂದ ನಾನು ಹೊತ್ತು ತಂದ ನಿಧಿ! ಹಗಲು ಕೂಡ ಅಂತಹ ಹೆಚ್ಚು ಕೆಲಸ ಇಲ್ಲದೆ ಒಬ್ಬಂಟಿತನದ ಹಿಂಸೆಯ ಜತೆ, ಬಲವಾದ ಸೆಖೆ ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಇವುಗಳ ತಲೆಗೆ ಕಿರೀಟ ಕೂರಿಸಿದ ಹಾಗೆ ಅಲ್ಲಿಯ ಊಟ! ನನ್ನದೇ ‘ಮೆನು’ ಆದರೂ ತಿನ್ನುವುದು ದುರ್ಲಭ. ಹೇಗೋ ಏನೋ ಎರಡು ವಾರ ಕಳೆಯುವುದರೊಳಗೇ, ನನ್ನ ಹೆಂಡತಿ ಗರ್ಭಿಣಿ, ನಾನು ಅವಳ ಸಂಗಡ ಇರಲೇಬೇಕೆಂದು ಹೇಳಿ, ಹಾರ್ಗೀಸಾದಿಂದ ಒಪ್ಪಿಗೆ ಬಂದ ಕೂಡಲೇ ಜಾಗ ಖಾಲಿ ಮಾಡಿದೆ. ಆ ದಿನಗಳಲ್ಲಿ ಬರ್ಬರಾ ಕೂಡ ಹಳೆಯ ಏಡನ್ನಿನ ನಕಲೋ ಎಂಬಂತಿತ್ತು. ಜನಗಳ ವಿರಳ ಓಡಾಟ, ಸೆಕೆಯಿಂದ. ಈಗ, ಉತ್ತರ ಸೋಮಾಲಿಯ ಬೇರೆ ದೇಶ ಆದನಂತರ ಹಾರ್ಗೀಸಾ ಹಾಗೂ ಬರ್ಬರಾ ಎರಡೂ ನೋಡಲು ಆನಂದ ಆಗುವಷ್ಟು ಸುಂದರವಾಗಿ ಬೆಳೆದ ನಗರಗಳು!
ಹಿಂತಿರುಗಿ ಬಂದಾಗ ನನ್ನ ಹೆಂಡತಿಯ ಆನಂದ ಉಕ್ಕಿ ಹರಿದಂತಾಯಿತು.
ನನಗೂ ಗರ್ಭಿಣಿ ಆದ್ದರಿಂದ ಅವಳ ಖುಷಿ ಅತೀ ಮುಖ್ಯವಾಗಿತ್ತು.
(ಮುಂದುವರಿಯುವುದು)

ಡಾ. ಅರಕಲಗೂಡು ನೀಲಕಂಠ ಮೂರ್ತಿ