— ೯ —
ಅಂಚೆಯಂಟಿಗೆ ನಾಲಗೆ!
ಹಾರ್ಗೀಸಾದಲ್ಲಿ ಶರತ್ಕಾಲದ ಮಳೆ ಅಕ್ಟೋಬರ್ ಮತ್ತು ನವೆಂಬರಿನಲ್ಲಿ ಸುರಿಯುತ್ತದೆ. ನಮ್ಮ ಜಂಜಾಟದಲ್ಲಿ ಅಂತಹ ಮಳೆಗಾಲ ಕಳೆದುದೇ ನನಗೆ ಗೊತ್ತಾಗಲಿಲ್ಲ. ನನಗೆ ಅಲ್ಲಿ ಸ್ಥಿರವಾಗಿ ನೆಲೆಗೊಳ್ಳುವ ಹೊತ್ತಿಗೆ, ಶುಷ್ಕ ಚಳಿಗಾಲ ಆರಂಭ ಆಗಿತ್ತು.
ನಾನು ಕೆಲಸಕ್ಕೂ ಅಷ್ಟರಲ್ಲಿ ಹಳಬನಾಗಿದ್ದೆ. ಮೊಗದಿಶುವಲ್ಲಿ ಇದ್ದಷ್ಟು ರೋಗಿಗಳ ಸಂದಣಿ ಇಲ್ಲಿ ಇರಲಿಲ್ಲ. ಹಾಗಾಗಿ ಅಲ್ಪಸ್ವಲ್ಪ ವಿರಾಮ ದೊರಕುತ್ತಿತ್ತು. ನನ್ನ ತಪಾಸಣಾ ಕೊಠಡಿಗೆ, ಅಲ್ಲಿನ ಔಷಧ ವಿಭಾಗದ ಮುಖ್ಯಸ್ಥನ ಮೇಜಿನ ಪಕ್ಕದಲ್ಲೇ ಹಾಯ್ದು ಹೋಗಬೇಕಿತ್ತು. ಒಂದು ದಿನ ಆತನ ಟೇಬಲ್ ಮೇಲೆ ಸುಮಾರು ದೊಡ್ಡ ತಾಂಬಾಳೆಯಂಥ ಪಾತ್ರೆಯಲ್ಲಿ ಸಾಕಷ್ಟು ಹಾಲನ್ನು ಇಟ್ಟಿದ್ದ. ಆ ಪಾತ್ರೆ ಹೊರಮೈ ಮುಟ್ಟಿದೆ, ತಣ್ಣಗಿತ್ತು ಕುದಿಸೇ ಇರಲಿಲ್ಲ. ಇದು ಯಾವ ರೋಗದ ಔಷಧಿ, ಬಿಸಿ ಕೂಡ ಇಲ್ಲ ಯೂಸುಫ್ ಅಂದೆ. “ನೋನೋ, ದಿಸ್ ಈಸ್ ಕ್ಯಾಮಲ್ ಮಿಲ್ಕ್, ವಿ ಡೋಂಟ್ ಬಾಯಿಲ್ ಇಟ್ ಬ್ಲೀಸ್ ಡ್ರಿಂಕ್” ಎಂದ. ನನಗೆ ಹಾಲನ್ನೇ ಕುಡಿದು ಅಭ್ಯಾಸ ಇರಲಿಲ್ಲ. ಹಾಗಂತ ಹೇಳಿದೆ. ಆದರೆ ಆತ ಬಿಡಲೊಲ್ಲ. ಕೈ ಹಿಡಿದು ಎಳೆಯುತ್ತಾ, ಆರೋಗ್ಯಕ್ಕೆ ಬಹಳ ಒಳ್ಳೆಯದು, ನಮ್ಮನ್ನೆಲ್ಲ ನೋಡಿ ಹೇಗಿದ್ದೇವೆ ಎನ್ನುತ್ತಾ, ತನ್ನ ರಟ್ಟೆಯ ಗಟ್ಟಿ ಸ್ನಾಯುವನ್ನು ನನ್ನ ಕೈಯಿಂದ ಬಲವಂತ ಮುಟ್ಟಿಸಿ, ಕುಡಿಯಲು ಮತ್ತೆ ಒತ್ತಾಯ ಮಾಡಿದ. ಹಾಲೇ ಅಲರ್ಜಿ ಆದವನಿಗೆ, ಕ್ಯಾಮಲ್ ಮಿಲ್ಕ್ ಅಂತ ಕೊಟ್ಟರೆ! ಕುಡಿಯಲು ಸಾಧ್ಯವೇ? ಸೋಮಾಲಿಯಾದಲ್ಲಿ ಸಹ, ಅರಬ್ ದೇಶಗಳ ಮಾದರಿ, ಒಂಟೆ ಹಾಲು ಹೆಚ್ಚು ಹೆಚ್ಚಾಗಿ ಉಪಯೋಗವಾಗುತ್ತದೆ, ಹಾಗೂ ಒಂಟೆಗಳನ್ನು ಸಾಕುವುದಲ್ಲದೆ ಇಲ್ಲಿ, ಅದರ ಮಾಂಸ ತಿನ್ನುವುದೆಲ್ಲ ಸಾಮಾನ್ಯ. ಹೌದು, ಅಂದು ಯೂಸುಫ್ ಬಲವಂತ ಮಾಡಿ ಕುಡಿಯಲು ಕೊಡಬಂದದ್ದು ಹಾಗಾದರೆ, ಆ ಜನರ ಪ್ರೀತಿ ಮತ್ತು ಎಲ್ಲರಿಗೂ ಹಂಚುತ್ತಾ ತಾವೂ ಉಣ್ಣುವಂಥ ಮನಸ್ಸಿಗೆ ಸಾಕ್ಷಿ ಆಗಿತ್ತು! ಅಂತೂ ಕಷ್ಟದಿಂದ ಕೈ ಬಿಡಿಸಿಕೊಂಡು ಹೊರಟೆ.
ಮನೆಗೆ ಬಂದಾಗ ಪ್ರತಿದಿನ ಒಂದೆರಡು ಗಂಟೆ ಟೈಪಿಂಗ್ ಪಾಠದಲ್ಲಿ ಏಕಲವ್ಯನ ಥರ, ನಿರತನಾಗುತ್ತಿದ್ದೆ! ಒಂದೆರಡು ತಿಂಗಳಲ್ಲಿ ಚೆನ್ನಾಗಿ ಕಲಿತದ್ದೂ ಆಯಿತು. ಮುಂದೇನು? ಸ್ನೇಹಿತರಿಗೆ ಮತ್ತು ಇಂಗ್ಲೀಷ್ ತಿಳಿದ ಬಂಧು ಬಾಂಧವರಿಗೆ ಕೈಯ್ಯಲ್ಲಿ ಕಾಗದ ಬರೆವ ಬದಲು ಟೈಪ್ ಮಾಡೇ ರವಾನಿಸಲು ಆರಂಭಿಸಿದೆ. ಅಲ್ಲದೆ, ಇಂಗ್ಲೆಂಡಿನ ಜನರಲ್ ಮೆಡಿಕಲ್ ಕೌನ್ಸಿಲ್ಲಿನಲ್ಲಿ ಆಗ, 1976ರ ಒಳಗೆ ಮೆಡಿಕಲ್ ಡಿಗ್ರಿ ಮಾಡಿದವರಿಗೆ, ಈಗಿನ ಹಾಗೆ ಇಂಗ್ಲೀಷ್ ಹಾಗೂ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣ ಆದರೆ ಮಾತ್ರ ಹೋಗುವಂತಹ ನಿರ್ಬಂಧ ಇರಲಿಲ್ಲ. ಯಾವ ಪರೀಕ್ಷೆಯೂ ಇಲ್ಲದೆ ಅರ್ಜಿ ಹಾಕಿ ಹೋಗಬಹುದಿತ್ತು. ಆದ್ದರಿಂದ ಅದನ್ನಾದರೂ ಪ್ರಯತ್ನ ಮಾಡಲು ತೀರ್ಮಾನಿಸಿದೆ. ಅಕಸ್ಮಾತ್ ಎಲ್ಲ ಎಣಿಸಿದ ಹಾಗಾದರೆ, ಇಂಗ್ಲೆಂಡಿನತ್ತ ಹೋದರೆ ಇನ್ನೂ ಹೆಚ್ಚು ಓದಬಹುದು ಅಲ್ಲವೇ ಅನ್ನಿಸಿತ್ತು.
ನಾನು ನನ್ನ ಟೈಪಿಂಗ್ ಹವ್ಯಾಸದ ಜೂತೆಗೆ, ಬಿಬಿಸಿ ಕೇಳುವುದೂ ಅಭ್ಯಾಸ ಆಗಿತ್ತು. ಮೇಲಾಗಿ ಆಗ ಭಾರತದಲ್ಲಿ ತುರ್ತುಪರಿಸ್ಥಿತಿ ಇದ್ದದ್ದು. (1975 ರ ಜೂನ್ 25ರ ನಡುರಾತ್ರಿ ಅಂದಿನ ಅಧ್ಯಕ್ಷರಾಗಿದ್ದ ಫಕ್ರುದ್ದೀನ್ ಆಲಿ ಅಹ್ಮದ್ ಅವರ ಮೂಲಕ ಇಂದಿರಾ ಗಾಂಧಿ ಅವರು ಹೇರಿಸಿದ್ದು). ಮತ್ತು ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆ ಬೇರೆ ಘೋಷಣೆ ಆಗಿತ್ತು. ಆದ್ದರಿಂದ ರೇಡಿಯೋ ವಾರ್ತೆಗಳಿಗೆ ಚಿನ್ನದಷ್ಟು ಬೆಲೆ! ಎಲ್ಲಕ್ಕಿಂತ ಮಿಗಿಲಾಗಿ ಇಂದಿರಾ ಸೋಲನ್ನೇ ಇಡೀ ದೇಶ ಬಯಸಿದ್ದ ಹಾಗಿತ್ತು. ಅಂಥ ಅಲೆ ಇದ್ದೂ ಇಂದಿರಾ ಅವರಿಗೆ ಬಹುಶಃ ತಪ್ಪು ಸಂದೇಶ ಹೋಗಿ ಚುನಾವಣೆಗೆ ಕರೆ ಕೊಟ್ಟಿದ್ದರು! ನನಗೆ ಮತ್ತು ಅಣ್ಣನಿಗೆ ಈಗ ಪಾಶ್ಚಾತ್ಯ ಬಿಬಿಸಿಯ ವಾರ್ತೆ ಬಹಳ ಮುಖ್ಯವಾಗಿ ಪ್ರತಿ ದಿನವೂ ಕಾತರದಿಂದ ಕೇಳುತ್ತಿದ್ದೆವು. ಭಾರತದಿಂದ ಪ್ರಸಾರವಾಗುವ ರೇಡಿಯೋ ವಾರ್ತೆಗಳೆಲ್ಲ ಸೆನ್ಸಾರ್ ಆದವುಗಳಾದ್ದರಿಂದ ಸತ್ಯ ಬಿತ್ತರವಾಗುತ್ತಿರಲಿಲ್ಲ. ಅಂತೂ, ಇಡೀ ದೇಶಕ್ಕೆ ದೇಶವೇ ಹುಚ್ಚೆದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸುವ ಅಂಥ ಒಂದು ದಿನವೂ ಬಂದಿತ್ತು. 1977ರ ಮಾರ್ಚಿ 23ರಂದು ಜನತಾ ಪಾರ್ಟಿ ಇಂದಿರಾ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿ ಗೆದ್ದಿತ್ತು. ದೇಶದ ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿ ಆಗಿ ‘ಮೊರಾರ್ಜಿ ದೇಸಾಯಿ’ ಅವರು ಅಧಿಕಾರಕ್ಕೆ ಬಂದಿದ್ದರು! ಅಲ್ಲಿಗೆ ನನ್ನ ರೇಡೆಯೋ ಸಹ ಸ್ವಲ್ಪ ದಿನ ವಿರಾಮಕ್ಕೆ ಹೋಯಿತು…
ಚಳಿಗಾಲದ ಅಂತ್ಯದೊಂದಿಗೆ ನಮ್ಮ ಮಗ, ಅನಿರುದ್ಧನ ಜನನ ಕೂಡ ಆಯಿತು. ಹಾರ್ಗೀಸಾದಲ್ಲಿದ್ದ ನಮ್ಮ ಭಾರತೀಯ ಉದ್ಯೋಗಸ್ಥರಲ್ಲಿ ಒಂದು ಒಗ್ಗಟ್ಟಿನ ಪದ್ಧತಿ ಇತ್ತು. ಯಾರೇ ಹೊಸಬರು ದೇಶದಿಂದ ಬಂದರೂ, ಅವರನ್ನು ಸರದಿಯಲ್ಲಿ ಒಬ್ಬೊಬ್ಬರಾಗಿ ಊಟಕ್ಕೆ ಆಹ್ವಾನಿಸುತ್ತಿದ್ದರು. ಅದನ್ನೇ ಆ ಹೊಸಬರೂ ಸಹ ಹಾಗೆ ಕರೆದವರನ್ನೆಲ್ಲ ಒಮ್ಮೊಮ್ಮೆ ತಾವೂ ಆಹ್ವಾನಿಸುತ್ತಿದ್ದರು. ಅಷ್ಚೇ ಅಲ್ಲದೆ, ರಜೆಗೆ ಹೊಗುವಾಗ ಹಾಗೂ ರಜೆ ಮುಗಿಸಿ ಬಂದಾಗ ಸಹ ಒಮ್ಮೊಮ್ಮೆ ಕರೆಯುವುದೂ ರೂಢಿ ಆಗಿತ್ತು. ಊಟಕ್ಕಿಂತ ಮೊದಲು ಹೆಂಗಸರು ಮಕ್ಕಳಿಗೆ ತಂಪು ಪಾನೀಯ ಹಾಗೂ ಗಂಡಸರಲ್ಲಿ ಅಭ್ಯಾಸ ಇದ್ದವರಿಗೆ ಒಂದೆರಡು ತಣ್ಣನೆಯ ಬಿಯರ್ ಕ್ಯಾನ್ ಕೊಡುವುದು ಎಲ್ಲರ ಮನೆಯಲ್ಲೂ ರೂಢಿಯಿತ್ತು. ಅಭ್ಯಾಸ ಇಲ್ಲದಂತಹ ‘ಅತಿ ವಿರಳರು’ ಹೆಂಗಸರ ಸರತಿಗೆ ಸೇರಿದಂತೆ ತಂಪನ್ನೇ ಹೀರುತ್ತಿದ್ದರು! ಈಗ, ಉತ್ತರದ ಸೋಮಾಲಿಲ್ಯಾಂಡ್ ಹಾಗೂ ದಕ್ಷಿಣದ ಸೋಮಾಲಿಯಾ ಎರಡರಲ್ಲೂ, ಮದ್ಯಸೇವನೆಯನ್ನು ನಿಷೇಧ ಮಾಡಲಾಗಿದೆಯಂತೆ.
ಅದೇ ಮಾದರಿಯಲ್ಲಿ, ನಮ್ಮ ಮಗನನ್ನು ನೋಡಲೂ ಸಹ ಒಂದೊಂದೇ ಕುಟುಂಬಗಳು ಸರದಿಯಲ್ಲಿ, ಕೆಲವೊಮ್ಮೆ ಎರಡು ಮೂರು ಕುಟುಂಬಳು ಜೊತೆಯಾಗಿ ಬಂದು ಹೋಗತೊಡಗಿದರು.
ಮೇಲಾಗಿ ಆ ದೇಶದಲ್ಲಿ ಬೇರ ವ್ಯಾಪಾರಸ್ಥ ಭಾರತೀಯರು ಇದ್ದರಾದರೂ, ಅವರುಗಳು ಅವರ ವ್ಯಾಪಾರಕ್ಕಷ್ಟೇ ಸೀಮಿತಗೊಂಡು ತಮ್ಮತಮ್ಮ ಜನರ ನಡುವೆ ಮಾತ್ರ ಬೆರೆಯುತ್ತಿದ್ದರು. ಉದ್ಯೋಗಸ್ಥರೆಲ್ಲ ಅವರ ಎಣಿಕೆಯಲ್ಲಿ ಇಂದು ಬಂದು ನಾಳೆ ಹೊರಟುಹೋಗುವವರು! ಅಷ್ಟೇ ಅಲ್ಲದೆ, ಸೋಮಾಲಿಗಳಿಗೂ ಸಹ ಅವರನ್ನು ಕಂಡರೆ ಅಷ್ಟಕ್ಕಷ್ಟೆ. ಇಲ್ಲಿ ಹಣ ಕೊಳ್ಳೆ ಹೊಡೆದು ತಮ್ಮತಮ್ಮ ದೇಶಗಳಿಗೆ (ಪಾಕಿಸ್ತಾನಿಗಳೂ ಇದ್ದರು) ಕಳಿಸುವ ಜಿಗಣೆಗಳು ಎಂದು ಮತ್ತು ಇದೇ ದೇಶದಲ್ಲಿ ತಮ್ಮ ಬದುಕು ಕಟ್ಟಿಕೊಂಡರೂ ಸಹ, ತಮ್ಮೊಡನೆ ಬೆರೆಯುವುದು, ಮದುವೆಯಾಗುವುದು ಮುಂತಾಗಿ ಯಾವುದೂ ಇಲ್ಲ ಎಂಬ ಅಪವಾದ ಅವರಮೇಲೆ!
ನಾನೊಂದು ದಿನ ನನ್ನ ಕೊನೆಯ ರೋಗಿ ನೋಡಿ, ಇನ್ನೂ ಸ್ವಲ್ಪ ಸಮಯ ಇದ್ದುದರಿಂದ ಹಾಗೇ ಸುಮ್ಮನೆ ಕೂತು ಸಮಯ ನೂಕುತ್ತಿದ್ದೆ. ಆ ಹೊತ್ತಿಗೆ ಕೇರಳದ ಒಬ್ಬ ಉಪಾಧ್ಯಾಯರು ತಮ್ಮ ಮಗಳನ್ನು ಕರೆದುಕೊಂಡು ಬಂದು, ಇಲ್ಲಿ ಹಲ್ಲಿನ ವೈದ್ಯರೂ ಇದ್ದಾರೆಯೇ ಎಂದರು. ನನಗೆ ಗ್ರೂಪ್ ಆಸ್ಪತ್ರೆಯ ಒಬ್ಬ ಹಲ್ಲಿನ ವೈದ್ಯ ಪರಿಚಯ ಇದ್ದುದರಿಂದ, ನಾನೇ ಖುದ್ದು ಜೊತೆಯಾಗಿ ಹೋದೆ. ಅಲ್ಲಿ ಕೂಡ ಯಾವ ರೋಗಿಯೂ ಹೊರಗೆ ಕಾಯುತ್ತಿರಲಿಲ್ಲವಾಗಿ, ಬಾಗಿಲು ಕುಟ್ಟಿದೆ. “ಸೋಗ್ಗಲ್” (ಬನ್ನಿ) ಎಂದರು. ಒಳಗೆ ಒಬ್ಬ ರೋಗಿಯ ಬಾಯಲ್ಲಿ ಅವರು ತಮ್ಮ ಕೈಗವಸಿನ ಬೆರಳುಗಳಲ್ಲಿ ಪರೀಕ್ಷೆ ಮಾಡುತ್ತಿದ್ದರು. ನನ್ನನ್ನು ನೋಡಿದಾಕ್ಷಣ, “ಹಲೋ ದತೋರೆ” ಎನ್ನುತ್ತಾ ಅದೇ ಕೈ ಹೊರ ತೆಗೆದು ನನ್ನ ಕೈ ಹಿಡಿದು ಆ ಮಹಾವೈದ್ಯ ಕುಲುಕಿಬಿಟ್ಟರು! ನನಗೆ ಮೈಯ್ಯೆಲ್ಲ ಗಟಾರದ ಕೊಚ್ಚೆ ಎರಚಿದಂತಾಗಿ, ಹೊರ ಬರುವವರೆಗೂ ಬಹಳ ಎಚ್ಚರದಿಂದ ಎಲ್ಲೂ ತಾಕಿಸದ ಹಾಗೆ, ಮುಖ್ಯವಾಗಿ ನನ್ನ ಬಟ್ಟೆಯ ಬಗ್ಗೆ ಎಚ್ಚರ ವಹಿಸಿ ಬಂದು, ನನ್ನ ಕೊಠಡಿಯಲ್ಲಿ ಚೆನ್ನಾಗಿ ಕೈತೊಳೆದು ಮನೆಯತ್ತ ಹೊರಟೆ. ಎಂಜಿಲೆಂದರೆ ಅವರಿಗೆ, ವೈದ್ಯರುಗಳಾದರೂ ಅಷ್ಟೊಂದು ಅಸಡ್ಡೆ! ಆ ದಂತವೈದ್ಯನ ಹೆಸರು “ಸುಗುಲ್ಲೆ”.
ಅದೃಷ್ಟಕ್ಕೆ, ಆ ಹುಡುಗಿಯನ್ನು ಡೆಂಟಲ್ ಕುರ್ಚಿಯಲ್ಲೂ ಕೂರಿಸದೆ, ಕೇವಲ ಬೆಳಕಿನಲ್ಲಿ ಅವಳ ಹಲ್ಲನ್ನು ನೋಡಿ, ಔಷಧಿ ಬರೆವ ಮುನ್ನ “ಮಗಾಆ” ಎಂದ. ನಾನು “ಹಿ ಈಸ್ ಆಸ್ಕಿಂಗ್ ಹರ್ ನೇಮ್” ಎಂದು ನನ್ನ ಜೊತೆ ಬಂದವರಿಗೆ ಹೇಳಿದ. “ಹರ್ ನೇಮ್ ಈಸ್ ಕವಿತ” ಎಂದವರು ಹೇಳಿದಾಗ, ಡಾ. ಸುಗುಲ್ಲೆ, ತಮ್ಮ ಔಷಧ ಚೀಟಿಯಲ್ಲಿ ಅವಳ ಹೆಸರನ್ನು “ಹರೆ ನೇಮೀಸ್ ಕಾವೀತ” ಎಂದು ಬರೆದು, ಕೆಳಗೆ ಔಷಧ ಗೀಚಿದ! ಆತ ಓದಿದ್ದು ಇಟಲಿಯಲ್ಲಿ ಮತ್ತು ಆ ದೇಶದ ಭಾಷೆಯಲ್ಲಾದರೂ, ಇಟಾಲಿಯನ್ನರು ಕೆಲವು ಹೊರ ದೇಶಗಳ ವಿದ್ಯಾರ್ಥಿಗಳಿಗಾಗಿಯೇ ಕಡಿಮೆ ಗುಣಮಟ್ಟದ ಶಿಕ್ಷಣ ಹಾಗೂ ಡಿಗ್ರಿಗಳನ್ನು ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ ಎಂದು ಕೇಳಿದ್ದೇನೆ. ಹಾಗಾಗಿ, ಅಂದಿನ ಸೋಮಾಲಿಯಾ ದೇಶದ ಕಾರ್ಯಕ್ಷಮತೆಯ ಗುಣಮಟ್ಟ ಹಾಗಿತ್ತು – ಎಲ್ಲ ಸ್ತರಗಳಲ್ಲೂ ಸಹ! ಹೊರದೇಶದ ತಜ್ಞರುಗಳನ್ನು ಅದೇ ಕಾರಣದಿಂದ ಕರೆಸಿಕೊಳ್ಳುತ್ತಿದ್ದರು. ಮೇಲಾಗಿ ಮೊಗದಶು ಈಗ ತನ್ನದೇ ಆದ, ಇಟಾಲಿಯನ್ ಮೀಡಿಯಮ್ ವೈದ್ಯಕೀಯ ಕಾಲೇಜೊಂದನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸಹ – ಅಲ್ಲಿಯ ಪಾಠ ಪ್ರವಚನಗಳು ಹೇಗಿವೆಯೋ ನಾನರಿಯೆ!
ಡಾ. ಸುಗುಲ್ಲೆ ರೋಗಿಯ ಬಾಯಿಂದ ತೆಗೆದ ಕೈನಲ್ಲೇ ತೊಳೆಯದೆ ನನ್ನ ಕೈ ಕುಲುಕಿದ್ದು ಹಾಗೂ “ಹರೆ ನೇಮೀಸ್ ಕಾವಿತ” ಎಂದು ಬರೆದದ್ದು, ಬಹಳ ತಿಂಗಳು ಭಾರತೀಯರ ನಗೆಪಾಟಲಿನ ಕಿಡಿಯಾಗಿತ್ತು!
ಹಾರ್ಗೀಸಾದಲ್ಲಿ ನಾವು ತಳವೂರಿ ತಿಂಗಳಿಗೂ ಮಿಕ್ಕಿ ಕಳೆದಿದ್ದರೂ, ಅಲ್ಲಿಗೆ ಬಂದು ಸೇರಿದ್ದ ವಿಷಯ ತಿಳಿಸಲು ಮನೆಗೆ ಒಂದೇ ಒಂದು ತಂತಿವಾರ್ತೆ ಕಳಿಸಿದ್ದಲ್ಲದೆ ಪತ್ರಗಳನ್ನೇ ಬರೆದಿರಲಿಲ್ಲ. ಆ ಕಾರಣ, ನಾವು ದಂಪತಿಗಳಿಬ್ಬರೂ ಕೆಲವಾರು ಪತ್ರಗಳನ್ನು ಬರೆದು, ಅಂಚೆ ಕಛೇರಿಯತ್ತ ಮೆಲ್ಲನೆ ನಡೆದು ಹೊರಟೆವು. ಅದೇ ಮೊದಲು ನಾವು ಇಬ್ಬರೇ ಆ ರೀತಿಯ ಸಾಹಸ ಅಲ್ಲಿ ಕೈಗೊಂಡದ್ದು, ಹಾಗಂತ ಅದು ವಿಶೇಷ ಅಂತೇನೂ ಅಲ್ಲ. ಆದರದು ನನ್ನ ಮಡದಿಗೆ ವಿಶೇಷವಾಗಿ ಪತಿಯ ಜೊತೆಯ ಖುಷಿಯ ಹೊರಗಿನ ನಡಿಗೆಯಾಗಿತ್ತು.
ಅಂಚೆ ಕಛೇರಿಯಲ್ಲಿ ಅಲ್ಲಿಯ ಒಬ್ಬ ಸಿಬ್ಬಂದಿ ಬಿಟ್ಟು ಬೇರಾರೂ ಇರಲಿಲ್ಲ. ಅದೇನೂ ಅಂಥ ದೊಡ್ಡದಾದ ಕಟ್ಟಡವಾಗಿರಲಿಲ್ಲ. ಬಹುಶಃ ಅಲ್ಲಿ ಹೆಚ್ಚು ವ್ಯವಹಾರ ನಡೆಯುತ್ತಿರಲಿಲ್ಲ ಅನ್ನಿಸಿತು. ಆ ನಂತರದ ದಿನಗಳಲ್ಲಿ ಸಹ ಯಾವಾಗಲೂ ಅಲ್ಲಿ ಜನರು ವಿರಳ. ನಾವು ನೇರ ಕೌಂಟರ್ ಮುಂದೆ ಹೋಗಿ, ಒಂದಷ್ಟು ಪತ್ರಗಳಗನ್ನು ಆ ವ್ಯಕ್ತಿಯ ಮುಂದೆ ಇಟ್ಟಾಗ, ಆತ ಅಷ್ಟನ್ನೂ ಒಳಗೆ ಎಳೆದು ಲೆಕ್ಕಹಾಕಿ ದುಡ್ಡೆಷ್ಟು ಎಂದು ಹೇಳಿದವನೇ, ಎಲ್ಲ ಸ್ಟ್ಯಾಂಪ್ ಗಳನ್ನೂ ಹರಿದು, ತನ್ನ ಎಡ ಅಂಗೈಗೆ ಕ್ಯಾಕರಿಸಿ ಒಂದಷ್ಟು ಲಾಲಾರಸವನ್ನು ಉಗಿದುಕೊಂಡು ಎಲ್ಲವಕ್ಕೂ ತಾನೇ ಅಂಟಿಸಿ, ಹೊರಗಿನ ಡಬ್ಬಕ್ಕೆ ಹಾಕಿ ಎಂದು ನಮಗೇ ಕೊಟ್ಟ! ಅಸಹ್ಯ ಅನ್ನಿಸಿದ್ದು ನಿಜ. ನನ್ನ ಹೆಂಡತಿ ಅವನ್ನು ಮುಟ್ಟುವ ಸ್ಥಿತಿಯಲ್ಲೇ ಇರಲಿಲ್ಲ; ಹಾಗಿತ್ತು ಅವಳ ಮುಖ ಚಹರೆಯ ಹೇಸಿಗೆಯ ನೋಟದ ಪರಿ! ನಾನೇ ಜಾಗರೂಕತೆಯಿಂದ ಅವನ್ನು ಅಂಚೆ ಪೆಟ್ಟಿಗೆಗೆ ತೂರಿಸಿದೆ. ಊರಲ್ಲಿ ಅವುಗಳನ್ನು ಒಡೆದು ಓದುವವರ ಬಗ್ಗೆ ಕನಿಕರವಾಯಿತು! ಆತ ತಕ್ಷಣ ನೋಡಲು ಬಹಳ ಗಂಭೀರ; ಮುಗುಳುನಗೆಯ ಒಂದೇ ಒಂದು ಗೀರಾದರೂ ಇಲ್ಲವೇ ಇಲ್ಲ. ಒಬ್ಬನೇ ಹಾಗೆ ಜೈಲು ಸರಳುಗಳ ಒಳಗೆ ಇದ್ದಂತೆ ಇರುವುದು ಅವನಿಗೆ ಅಂಥ ಗಡುಸು ನೋಟ ತಂದಿದೆ ಅನ್ನಿಸಿ, ಅಯ್ಯೋ ಪಾಪ ಅಂದೆ ಪತ್ನಿಗೆ. ಆದರೆ ಅಷ್ಟೊಂದು ರಸವನ್ನು ಎಲ್ಲಿಂದ ಉತ್ಪತ್ತಿ ಮಾಡುತ್ತಾನೋ ಮತ್ತು ಅಷ್ಟು ಗ್ರಂಥಿಗಳ ಪಡೆದ ಅವನು ಧನ್ಯ, ಎಂದು ಅಚ್ಚರಿಪಟ್ಟೆ. ಆದರೂ ಯಾವ ಕಾರಣ ಹೀಗೆ ಮಾಡುವನೋ ತಿಳಿಯದಾಯಿತು. ಏಕೆಂದರೆ ಆತ ಬಿಡುವಿದ್ದರೆ, ಎಲ್ಲರ ಪತ್ರಗಳಿಗೂ ಹಾಗೆಯೇ ತಾನೇ ಅಂಟಿಸುತ್ತಾನೆಂದು ಬೇರೆಯವರೂ ಅನೇಕ ಬಾರಿ ಹೇಳಿದ್ದರು!
ಈ ಘಟನೆಯಿಂದ ನನಗೆ ನಮ್ಮ ದೂರ ಸಂಬಂಧಿಯೊಬ್ಬ ಅಣಕಕ್ಕಾಗಿ ಹೇಳುತ್ತಿದ್ದುದು ನೆನಪಾಯಿತು. ಭಾರತದಲ್ಲಿರುವ ಅಂದಾಜು ಒಂದೂವರೆ ಲಕ್ಷ ಅಂಚೆಕಛೇರಿಗಳಿಗೂ ಒಬ್ಬೊಬ್ಬನಂತೆ, ಕೇವಲ ಅಂಚೆಚೀಟಿ ಅಂಟಿಸಲು ನಾಲಗೆ ಮುಂದೆಮಾಡಿ ಶಿಸ್ತಿಂದ ನಿಲ್ಲುವಂತಾದರೆ, ಅಂಟೂ ಆಯ್ತು ಮತ್ತು ಅಷ್ಟೂ ಜನಕ್ಕೆ ಕೆಲಸ ಕೊಟ್ಟ ಭಾಗ್ಯ ಕೂಡ ಅಲ್ಲವೇ!
ಮುಂದುವರೆಯುವುದು…
ಡಾ. ಅರಕಲಗೂಡು ನೀಲಕಂಠ ಮೂರ್ತಿ