ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ-10

— ೧೦ —

ಒಗಾದನ್ ಯುದ್ಧ! – 1

ನನ್ನ ಮಗ ಈ ಜಗತ್ತನ್ನು ಬೇಗ ಕಾಣುವ ಹಂಬಲದಿಂದಲೋ ಎಂಬಂತೆ, ಆತುರದಿಂದ ಸ್ವಲ್ಪ ಬೇಗ ಹುಟ್ಟಿದ್ದ – ಎಂಟೂವರೆ ತಿಂಗಳಿಗೆ. ಅಥವ ಚೊಚ್ಚಲ ಗರ್ಭಿಣಿಯಾಗಿ, ತಾಯಿಯ ಹಾರೈಕೆ ಇಲ್ಲದ ಕಾರಣ ಮತ್ತು ಗೊತ್ತಿಲ್ಲದ ನಾಡಲ್ಲಿ, ಗೊತ್ತಿಲ್ಲದ ಜನರ ಮಧ್ಯೆ ಹೇಗೆ ಎಂಬ ಮನದೊಳಗಿನ ನಿಗೂಢ ಆತಂಕ ಕೂಡ ಇದ್ದಿರಬಹುದು. ಒಟ್ಟಿನಲ್ಲಿ ಬಲಿಯುವ ಮುನ್ನವೇ ಹುಟ್ಟಿದ್ದರಿಂದ ತೂಕ ಕಮ್ಮಿ ಹಾಗೂ ನೋಡಲೂ ಮೈತುಂಬಿಕೊಂಡು ಹೊರ ಬಂದಿರಲಿಲ್ಲ. ಹಾಗಾಗಿ, ಅವನ ಆರೈಕೆಯತ್ತ ಎಚ್ಚರಿಕೆಯ ಅಗತ್ಯ ಇತ್ತು. ಮೇಲಾಗಿ, ಆ ದೇಶದಲ್ಲಿ ಆಗಿನ್ನೂ ನವಜಾತಶಿಶುಗಳ ತೀವ್ರನಿಗಾ ಘಟಕಗಳ ಪರಿಕಲ್ಪನೆಯೇ ಇರಲಿಲ್ಲ. ಮಗುವಿನ ಎಲ್ಲ ತರದ ಬೆಳವಣಿಗೆ ಮನೆಯಲ್ಲೇ ಆಗಬೇಕಿತ್ತು. ನನ್ನ ಮಡದಿಗೆ ಆಗಿನ್ನೂ ಅಂಥ ವಿಷಯಗಳ ಬಗ್ಗೆ ಅರಿವು ಅಷ್ಟಾಗಿ ಇರಲಿಲ್ಲ. ಅದೃಷ್ಟಕ್ಕೆ ಅತ್ತಿಗೆ ಇದ್ದರು ಮತ್ತು ಅವರಿವರ ಮನೆಗಳಿಗೆ ಊಟಕ್ಕೋ ಅಥವ ಭೇಟಿಗೋ ಹೋದಾಗ ಅವರೂ ಸಹ ಅಲ್ಪಸ್ವಲ್ಪ ಹೇಳಿಕೊಡುತ್ತಿದ್ದರು. ಹಾಗಾಗಿ ಮೂರು ತಿಂಗಳ ಹೊತ್ತಿಗೆ ಮಗು ನೋಡುವ ಹಾಗಾಗಿತ್ತು.

ತೋಗ್ಧೀರ್ ನದಿಯ ಮರಳು ರಾಶಿ

ಜೋಸ್ ಎಂಬ ಕೇರಳದ ಒಬ್ಬ ಉಪಾಧ್ಯಾಯರಿದ್ದರು. ಅವರ ಮನೆ ತೋಗ್ಧೀರ್ ಎಂಬ ಮರಳುರಾಶಿ ನದಿಯ ಇನ್ನೊಂದು ತೀರದಲ್ಲಿತ್ತು. ಒಮ್ಮೆ ಅವರ ಮನೆಗೆ ಊಟಕ್ಕೆ ಹೋಗಿದ್ದಾಗ ಅಲ್ಲಿ ನೀರಿರಲಿಲ್ಲ. ನಾವು ಊಟ ಮಾಡುವ ಹೊತ್ತಿಗೆ ಸರಿಯಾಗಿ ಜೋರು ಮಳೆ ಸುರಿದು ತೋಗ್ಧೀರ್ ತುಂಬಿ ಹರಿದಾಗ ನೋಡಿ ಖುಷಿಪಟ್ಠಿದ್ದು ಚೆನ್ನಾಗಿ ಜ್ಞಾಪಕ ಇದೆ. ಅದೃಷ್ಟಕ್ಕೆ ಅಷ್ಟರಲ್ಲಿ ಸೇತುವೆ ನಿರ್ಮಾಣವಾಗಿತ್ತು. ಮಳೆಗಾಲದಲ್ಲಿ ಹಾರ್ಗೀಸಾ ಬಹಳ ಆನಂದ ಕೊಡುತ್ತಿತ್ತು – ಈಗ ಹೇಗೋ ಅರಿಯೆ. ನಾನು ಮಳೆ ಬಂದಾಗ ಮಗನನ್ನೂ ಎತ್ತಿಕೊಂಡು ಬಾಗಿಲ ಹೊರಗೆ ನಿಂತು ಖುಷಿಪಡುತ್ತಿದ್ದೆ. ಮಗುವಿಗೆ ಅದು ಹೇಗೆ ಕಾಣುತ್ತಿತ್ತೋ ನಾ ಕಾಣೆ!

ಈಗ ಹಾರ್ಗೀಸಾ ಬಹಳ ಮುಂದುವರಿದು ಸಾಕಷ್ಟು ದೊಡ್ಡ ನಗರವಾಗಿದೆ; ಅಂದು ಇದ್ದ ಒಂದುಲಕ್ಷ ಹನ್ನೆರಡು ಸಾವಿರ ಜನಸಂಖ್ಯೆ, ಈಗ ಹತ್ತು ಲಕ್ಷ ಮುವತ್ಮೂರು ಸಾವಿರಕ್ಕೆ ಬೆಳೆದಿದೆ! ಶಾಬ್ ಏರಿಯಾ ಕೂಡ ಬಹುಶಃ ಅಂದಿನ ನಿರ್ಮಲ ಸೌಂದರ್ಯದ ಹಸಿರರಾಶಿ ಕಳೆದುಕೊಂಡು ಕಾಂಕ್ರೀಟ್ ಕಾಡಿನ ಥರ ಆಗಿರಲೂಬಹುದು. ಏಕೆಂದರೆ, ಉತ್ತರ ಸೋಮಾಲಿಲ್ಯಾಂಡ್ ತನ್ನ ಸ್ವಾತಂತ್ರ ಘೋಷಿಸಿಕೊಂಡ ನಂತರ, ಈಗ ಅದರ ರಾಜಧಾನಿ ಹಾರ್ಗೀಸಾ.

ಹಳೆಯ ಹಾರ್ಗೀಸಾ ಹಾಗು ಇಂದಿನ ಹಾರ್ಗೀಸಾ

ನನ್ನ ಕೆಲಸದ ಒಪ್ಪಂದದ ಪ್ರಕಾರ, ಪ್ರತಿ ಹತ್ತೂವರೆ ತಿಂಗಳ ನಂತರ, ಒಂದೂವರೆ ತಿಂಗಳ ಸಂಬಳದ ಜೊತೆಗೆ, ನನಗೆ ಮತ್ತು ಹೆಂಡತಿ, ಇಬ್ಬರು ಹದಿನೆಂಟು ವರ್ಷ ಮೀರದ ಮಕ್ಕಳಿಗೆ ಭಾರತಕ್ಕೆ ರಜೆಗೆ ಬಂದು ವಾಪಸ್ಸು ಹೋಗಲು ವಿಮಾನ ಪ್ರಯಾಣದ ಟಿಕೆಟ್ಟುಗಳನ್ನು ಕೊಡುವಂತಿತ್ತು. ಆದರೆ, ಅಣ್ಣನ ಒಪ್ಪಂದದಲ್ಲಿ ಎರಡು ವರುಷಕ್ಕೆ ಒಮ್ಮೆ ಮಾತ್ರ. ಅಕ್ಟೋಬರ್ ಮೊದಲ ವಾರ ಇಬ್ಬರೂ ರಜೆಗೆ ಹೋಗಬಹುದಾಗಿತ್ತು. ಹಾಗಾಗಿ ನಾವು ಜೂಲೈ ತಿಂಗಳಲ್ಲೇ ಅದಕ್ಕಾಗಿ ಮನವಿಗಳನ್ನು ಕೊಟ್ಟು ಆರಂಭ ಮಾಡಿದ್ದವು. ಎಲ್ಲವೂ ಮೊಗದಿಷುಗೆ ಹೋಗಿ, ಅಲ್ಲಿ ಪರಿಷ್ಕರಣೆಯಾಗಿ ಬರಬೇಕು. ಅದೇನೂ ತಕ್ಷಣ ಆಗುವಂಥದ್ದಲ್ಲ. ನಿಧಾನವಾಗಿ ಅದರ ಪ್ರಕ್ರಿಯೆ ನಡೆಯಲೆಂದು ಅರ್ಜಿ ಕೊಟ್ಟು ನಂತರ, ಊರಿನತ್ತ ಹೋಗುವಾಗ ಏನೇನು ಖರೀದಿ ಮಾಡಬೇಕು ಇತ್ಯಾದಿ ಸಾವಕಾಶ ಕೈಗೊಳ್ಳಲು ಆರಂಭಿಸಿದೆವು.

ಜೂಲೈ ಅಂತ್ಯದ ಸಮಯ. ಒಂದು ದಿನ ಕ್ಲಿನಿಕ್ಕಿನಲ್ಲಿದ್ದಾಗ, ಇದ್ದಕ್ಕಿದ್ದಂತೆ ನಗರದ ಹೃದಯದೊಳಕ್ಕೆ ನೇರ ನುಗ್ಗಿ ಆರ್ಭಟಿಸಿದಂತೆ, ಭಾರಿ ಸದ್ದು ಮಾಡುತ್ತಾ ಸೈನಿಕ ವಿಮಾನಗಳ ಹಾರಾಟ ಆದ ಹಾಗಾಯಿತು. ರೋಗಿಗಳು ಅವುಗಳನ್ನು ನೋಡಲು ಹೊರಗೆ ಓಡಿದರು. ನಾನು ಅವರ ಬರುವಿಗಾಗಿ ಕಾಯುತ್ತಾ ಕೊಠಡಿಯಲ್ಲೇ ಕೂತಿದ್ದೆ. ಸ್ವಲ್ಪ ಹೊತ್ತು ಅಷ್ಟೇ, ಎಲ್ಲ ಸದ್ದೂ ಬಂದಿದ್ದ ರಭಸದಲ್ಲಿಯೇ ಅಡಗಿತು. ಮನೆಯತ್ತ ಹೊರಡುವ ಮುನ್ನ, “ಯೂಸುಫ್, ಏನದು ಶಬ್ದ” ಎಂದು ಕೇಳಿದೆ.

ಯುದ್ಧದ ಪೂರ್ವ ತಯಾರಿ

ಅವನು ಎದ್ದು ನಿಂತು, ನನ್ನ ಕಿವಿಯ ಹತ್ತಿರ, “ಬಹುಶಃ ನಮ್ಮ ಸೈನ್ಯ ಇಥಿಯೋಪಿಯಾದ ಮೇಲೆ ಯುದ್ಧ ಸಾರಿರಬಹುದು” ಅಂತ ಹೇಳಿದ. ಆದರೆ, ನನಗೆ ಕುತೂಹಲ, ಕೇಳಬಹುದೋ ಇಲ್ಲವೋ ಎಂಬ ಅನುಮಾನ ಬೇರೆ. ಮೊದಲೇ ಸೈನ್ಯದ ಆಡಳಿತ. ಹೇಗಾದರೂ ಇರಲಿ ಎಂದು, “ಏತಕ್ಕಾಗಿ” ಎಂದೆ. “ಒಗಾದನ್ ಎಂಬ ಪ್ರದೇಶವನ್ನು ಅವರು ಸ್ವಾಧೀನಪಡಿಸಿಕೊಂಡು ಆಟ ಆಡುತ್ತಿದ್ದಾರೆ. ಅದನ್ನು ಮತ್ತೆ ನಮ್ಮದಾಗಿಸಿಕೊಳ್ಳಲು” ಎಂದಷ್ಟೇ ಹೇಳಿ ಕೂತುಬಿಟ್ಟ. ಅಲ್ಲಿಗೆ ಅದಕ್ಕಿಂತ ಹೆಚ್ಚು ಕೇಳಬಾರದೆಂದು ಅರ್ಥ ಮಾಡಿಕೊಂಡು ಮನೆಯತ್ತ ಹೊರಟೆ. ವಾಹನ ಚಲಿಸಿದ ಸ್ವಲ್ಪ ದೂರಕ್ಕೇ ಮತ್ತೆ ಅವೇ ವಿಮಾನ, ಅದೇ ಕರ್ಕಶ ಸದ್ದು. ಶಾಬ್ ಸರಹದ್ದು ತಲಪಿ, ನಮ್ಮ ಮನೆಯ ತಿರುವಿಗೆ ಬಂದಾಗ, ಆಶ್ಚರ್ಯ! ಅತ್ತಿಗೆ, ನನ್ನ ಮಡದಿ ಮತ್ತು ಮಗು, ಹಾಗೂ ಅಣ್ಣನ ಮಗಳು ಎಲ್ಲರೂ ಮನೆಯ ಹೊರಗೆ ಓಡುತ್ತಾ ಬಂದು, ಆಕಾಶದತ್ತ ನೋಡುನೋಡುತ್ತಲೇ ವಾಹನದತ್ತ ಬಂದರು. ಮನೆಯೊಳಗೆ ಅವರ ಸಂಗಡವೇ ಹೋಗಿ ವಿಚಾರಿಸಲು, ಭಯದಿಂದ ಎಂದರು! ಅವರಿಗೂ ನನ್ನಂತೆಯೇ ಇದೆಲ್ಲ ಹೊಸದು. ಹಾಗಾಗಿ ಭಯ ಸಹಜ ಅಲ್ಲವೇ?

ಅಧ್ಯಕ್ಷ ಮಹಮದ್ ಸಿಯಾದ್ ಬರ್ರೆ

ಸೋಮಾಲಿ ಜನರು ಒಂದೇ ಭಾಷೆ ಮತ್ತು ಒಂದೇ ಮತದವರು. ಆದಾಗ್ಯೂ, ಸುಮಾರು ಐನೂರು ಬುಡಕಟ್ಟುಗಳಾಗಿ (ಟ್ರೈಬ್ ಅಥವ ಕ್ಲ್ಯಾನ್) ವಿಂಗಡಿಸಿ ಹೋಗಿದ್ದಾರೆ. ನಮ್ಮಲ್ಲಿಯ ಜಾತಿಗಳ ಹಾಗೆ ಅಲ್ಲೂ ಹೊಂದಾಣಿಕೆ ವಿರಳ. ಆಫ್ರಿಕಾದ ಎಲ್ಲ ದೇಶಗಳಲ್ಲೂ ಹೆಚ್ಚೂಕಮ್ಮಿ ಹಾಗೆಯೇ! ಆಗ ಸೈನಿಕ ಆಡಳಿತ ಹಿಡಿದಿದ್ದ ಅಧ್ಯಕ್ಷ, ಮಹಮದ್ ಸಿಯಾದ್ ಬರ್ರೆ, ಅತ್ಯಂತ ಪುಟ್ಟದಾದ ‘ಮಾರೆಹಾನ್’ ಎಂಬ ಪಂಗಡಕ್ಕೆ ಸೇರಿದ್ದವನು. ಮೇಲಾಗಿ ಆತನ ಸ್ವಜಾತಿಯ ಅತಿಪ್ರೇಮ ಜನರ ರೋಷಕ್ಕೆ ಕಾರಣವಾಗಿತ್ತು. ಎಲ್ಲ ಸಚಿವಾಲಯಗಳಲ್ಲೂ ಮತ್ತು ಪ್ರತಿ ಇಲಾಖೆಯಲ್ಲೂ ಒಬ್ಬೂಬ್ಬ ಮುಖ್ಯಸ್ಥ ಅವನ ಪಂಗಡಕ್ಕೆ ಸೇರಿದ್ದವನೇ ಆಗಿದ್ದ. ಹೊರ ದೇಶಗಳಿಂದ ಬರುತ್ತಿದ್ದ ಎಲ್ಲ ಹಣ ಮತ್ತಿತರ ನೆರವುಗಳೂ ಅವರವರಲ್ಲೇ ಹಂಚಿ ಹೋಗುತ್ತಿದ್ದವು. ಆದರೆ ಯಾರೂ ಬಂಡಾಯದ ಯೋಚನೆಗೂ ಇಳಿಯದೆ, ಗುಜುಗುಜು ಬಿಟ್ಟರೆ ಇನ್ನೇನೂ ಮಾಡಲಾರದೆ ಇದ್ದರು. ಇದರ ಅರಿವು ಅಧ್ಯಕ್ಷನಿಗೆ ಗೂಢಚಾರಿಗಳ ಮೂಲಕ ತಿಳಿದು, ಯುದ್ಧ ಸಾರಿದ್ದ. ಅಕಸ್ಮಾತ್ ಕೈಬಿಟ್ಟು ಹೋಗಿದ್ದ ಒಗಾದನ್ ಭಾಗವನ್ನು ಮತ್ತೆ ಪಡೆದರೆ, ಎಲ್ಲ ಥಣ್ಣಗಾಗುತ್ತದೆ ಎಂಬಂಥ ಲೆಕ್ಕಾಚಾರದಲ್ಲಿ ಯುದ್ಧ ಸಾರಿದ್ದರು.

ಮಾರನೆಯ ದಿನ ಅಣ್ಣ ಆಸ್ಪತ್ರೆಯಂದ ಬಂದು ವಿವರ ತಿಳಿಸಿದಾಗ ಎಲ್ಲರಿಗೂ ಸಮಾಧಾನ. ಇನ್ನೇನು ಯಾವ ಘಳಿಗೆಯಾದರೂ ಪೂರ್ಣ ಪ್ರಮಾಣದ ಯುದ್ಧ ಆರಂಭ ಆಗಬಹುದೆಂದೂ, ಅದಕ್ಕಾಗಿ ಈ ರೀತಿಯಲ್ಲಿ ಜನಗಳನ್ನು ತಯಾರು ಮಾಡಲು ಮತ್ತು ಯುದ್ಧ ವಿಮಾನಗಳ ತರಬೇತಿ ಕೂಡ ಎಂದು. ಹಾಗೆ ಹಾರಾಡಿದಾಗ ಹೊರಗೆ ಓಡುವ ಬದಲು, ಮನೆಯಲ್ಲೇ ಗೋಡೆಗೆ ಒರಗಿದಂತೆ ನಿಲ್ಲಬೇಕು ಮುಂತಾಗಿ ಎಂದು ತಿಳಿಸಿದ್ದರು. ಅಷ್ಟಲ್ಲದೆ, ರಾತ್ರಿಯ ಹೊತ್ತು ಕಿಟಕಿಗಳನ್ನೆಲ್ಲ ಮುಚ್ಚಿ ದಪ್ಪ ಪರದೆ ಎಳೆದು, ದೀಪದ ಬೆಳಕು ಕಿಂಚಿತ್ತೂ ಹೊರಕ್ಕೆ ಕಾಣದ ಹಾಗೆ. ಅದೇ ತೆರವಾಗಿ, ಪ್ರತಿ ರಾತ್ರಿ ಬೀದಿ ದೀಪಗಳನ್ನೂ ಇಡೀ ನಗರದಲ್ಲಿ ಸಂಪೂರ್ಣ ಆರಿಸಿ, ಕತ್ತಲೆಯ ನಗರವಾಗಿಸಲಾಗಿತ್ತು. ಬೆಳಕು ಕಂಡರೆ ಶತ್ರು ವಿಮಾನಗಳು ನಡುರಾತ್ರಿಗಳಲ್ಲಿ ಬಾಂಬ್ ದಾಳಿ ನಡೆಸಬಹುದೆಂಬ ಭಯದಿಂದ!


ಆ ದಿನದ ನಂತರ ಆಗಸ್ಟ್ ತಿಂಗಳಲ್ಲಿ ಹಾಗೆಯೇ ಆಗಾಗ ಸಮರಸಾಧನೆ ಆಗುತ್ತಿದ್ದರಿಂದ ಅದೂ ನಮಗೆಲ್ಲ ಅಭ್ಯಾಸ ಆಗಿ ಭಯ ಬಿಟ್ಟಿತ್ತು.

ಈ ಮಧ್ಯೆ ನಮ್ಮ ಪ್ರಯಾಣದ ಬಗ್ಗೆ ಸೆಪ್ಟೆಂಬರ್ ಮೊದಲ ವಾರಕ್ಕೆ ಒಪ್ಪಿಗೆ ಬಂತು. ಇನ್ನೇನು ಸೋಮಾಲಿ ಏರ್ಲೈನ್ಸ್ ಕಡೆ ಹೋಗಿ, ನಮ್ಮಿಬ್ಬರ ಕಛೇರಿಗಳಿಂದ ಕೊಟ್ಟಿದ್ದ ಪತ್ರ ತೋರಿಸಿ, ಟಿಕೆಟ್ ಮಾಡಿಸಿ ಬರುವ ಕೆಲಸ ಬಾಕಿ. ಅದರ ಜೊತೆಗೆ, ನಾನು ಇಂಗ್ಲೆಂಡಿಗೆ ಹೋಗಲು ಮಾಡುತ್ತಿದ್ದ ಪತ್ರ ವ್ಯವಹಾರ ಯಶಸ್ವಿಯಾಗಿ, ಆಗಿನ ಲೆಕ್ಕದಲ್ಲಿ ಹದಿನೈದೋ ಅಥವ ಇಪ್ಪತ್ತೋ (ನೆನಪಿಲ್ಲ) ಪೌಂಡ್ ಸ್ಟರ್ಲಿಂಗ್ ಡ್ರಾಫ್ಟ್ ಕಳಿಸಲು ಕೇಳಿದ್ದರು. ಅದಕ್ಕಾಗಿ ಬ್ಯಾಂಕಿಗೆ ಹೋಗಬೇಕು ಅಂದುಕೊಳ್ಳುವ ಹೊತ್ತಿಗೆ ಯುದ್ಧ ಆರಂಭ ಆಗಿಯೇ ಬಿಟ್ಟು, ಎಲ್ಲ ತರದ ಸಂಪರ್ಕಗಳೂ ಸಂಪೂರ್ಣ ಬಂದಾದವು! ಅಂತರರಾಷ್ಟ್ರೀಯ ದೂರವಾಣಿ, ತಂತಿ ಸೌಲಭ್ಯ, ಅಂಚೆ ಸೌಕರ್ಯ ಮತ್ತು ವಿಮಾನಯಾನ ಎಲ್ಲ ಬಂದ್! ಆದ ಕಾರಣ ಲಂಡನ್ನಿಗೆ ಪೌಂಡಿನಲ್ಲಿ ಡ್ರ್ಯಾಫ್ಟ್ ಕೊಂಡರೂ, ಅಂಚೆಯೇ ಇಲ್ಲದೆ, ಕಳಿಸುವುದು ಹೇಗೆ? ಕೊನೆಗೆ, ಭಾರತದಿಂದಲೇ ಕಳಿಸಲು ತೀರ್ಮಾನಿಸಿದೆ. ಅಷ್ಟು ಹೊತ್ತಿಗೆ ನಮ್ಮ ಪ್ರಯಾಣದ ಟಿಕೆಟ್ಟುಗಳೂ ಬಂದಿದ್ದವು. ಮೊಗದಿಶುವಿಂದ ಅಕ್ಟೋಬರ್ ಮೊದಲ ವಾರ ನೈರೋಬಿ- ಬಾಂಬೆ-ಬೆಂಗಳೂರು ಮಾರ್ಗವಾಗಿ ಗೊತ್ತಾಗಿತ್ತು. ಆದರೆ ಹಾರ್ಗೀಸಾ ಬಿಡುವುದು ಹೇಗೆ? ಅದೂ ಅಲ್ಲದೆ ಮಗುವಿಗೆ ಆರು ತಿಂಗಳಾದ್ದರಿಂದ ಯಾವ ತರದ ಪ್ರಯೋಗಶೀಲತೆಗೂ ಆಸ್ಪದ ಇರಲಿಲ್ಲ. ಹಾಗಾಗಿ ಕಠಿಣ ಪರಿಸ್ಥಿತಿ. ಇನ್ನೇನು ಹಾರ್ಗೀಸಾ ಬಿಡುವ ದಿನ ಹತ್ತಿರ ಬರುವ ಹೊತ್ತಿಗೆ, ಸೈನಿಕ ಸರಕುಗಳನ್ನು ಮೊಗದಿಶುವಿಂದ ಪ್ರತಿ ದಿನ ಮಿಲಿಟರಿ ವಿಮಾನಗಳು ತಂದು ವಾಪಸ್ಸು ಹೋಗುತ್ತಿವೆ ಎಂದೂ, ಅವುಗಳಲ್ಲೆ ಅನೇಕರು ಪ್ರಯಾಣ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಕೊನೆಗೆ ನಾವೂ ಸಹ ಪ್ರಯತ್ನಿಸಲು ಮುಂದಾದೆವು.

ಮುಂದುವರೆಯುವುದು…

ಸೂಚನೆ: ಸುಮಾರು ನಾಲ್ಕು ದಶಕಗಳ ಹಿಂದೆ, ಇದೇ ಶೀರ್ಷಿಕೆಯ ನನ್ನ ಸುದೀರ್ಘ ಲೇಖನ ‘ಕಸ್ತೂರಿ’ ಮಾಸಿಕದ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು.

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

Leave a Reply

Your email address will not be published. Required fields are marked *