ಕೆಲಸದ ಒತ್ತಡ -ನಿರ್ವಹಣೆ ಏಕೆ? ಹೇಗೆ?

ಕರೋನದ ಒಂದು, ಎರಡು, ಮೂರು ಅಲೆಗಳ ಆರ್ಭಟ ಮುಗಿದಿದ್ದು ಎಲ್ಲರಿಗು ಸಿಕ್ಕಿದ್ದ “ವರ್ಕ್ ಫ್ರಮ್ ಹೋಂ” ಅವಕಾಶ ಮುಗಿದು, ಈಗ ಹೆಚ್ಚು ಕಡಿಮೆ ಎಲ್ಲಾ ಕಂಪನಿಗಳು ತಮ್ಮ ಕೆಲಸಗಾರರನ್ನು ಮರಳಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿರುವ ಸಂದರ್ಭದಲ್ಲಿ ಎಲ್ಲರು ಪುನಃ ಅದೇ ಟ್ರಾಫಿಕ್ ಜಾಮ್ ಒತ್ತಡದಿಂದ ಆಫೀಸಿಗೆ ಹೋಗಿ ಅಲ್ಲಿಯ ಒತ್ತಡವನ್ನು ಸಹ ನಿಭಾಯಿಸಬೇಕಾಗಿದೆ.

ಮತ್ತದೇ ಯಾಂತ್ರಿಕ ಜೀವನದಲ್ಲಿ ಸಂಜೆಯಾಗುತ್ತಿದ್ದಂತೆ ಆಫೀಸ್ ನಿಂದ ಮನೆಗೆ ಬರುವ ವೇಳೆಗೆ ಕೇಳುವ ಒಂದೇ ಮಾತು ತುಂಬಾ ಕೆಲಸದ ಒತ್ತಡ ಕಣ್ರಿ, ಇದ್ದಕ್ಕಿದಂತೆ ತಲೆ ಸುತ್ತು, ವೈದ್ಯರ ಬಳಿ ಹೋದ್ರೆ ಕೆಲಸದ ಒತ್ತಡಕ್ಕೆ ಹೀಗಾಗಿದೆ. ಜಾಸ್ತಿ ಸ್ಟ್ರೆಸ್ ಮಾಡ್ಕೋಬೇಡಿ ಅಂತ. 30-35 ವರ್ಷ ದಾಟದವರೂ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದು ಇದಕ್ಕೆ ಕೇಳಿ ಬರುವ ಒಂದೇ ಕಾರಣ ಕೆಲಸದ ಒತ್ತಡ ಅಂತೆ ಕಣ್ರಿ. ಕೆಲಸದ ಜಾಗದಲ್ಲಿ ಅನಗತ್ಯ ಒತ್ತಡ ತೆಗೆದುಕೊಳ್ಳುವುದರಿಂದ ಅದು ಆರೋಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಯಲ್ಲದೇ ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಅಪ್ತ ಸಲಹೆಗಾರರು ಹೇಳುವ ಪ್ರಕಾರ ಒತ್ತಡ ಏಕೆ ಬರುತ್ತಿದೆ ಅದಕ್ಕೆ ಕಾರಣವೇನು ಎಂದು ಶಾಂತಿಯಿಂದ ಕುಳಿತು ಯೋಚಿಸಿ ಅದನ್ನು ಹೋಗಲಾಡಿಸಿಕೊಳ್ಳಬೇಕು ಎನ್ನುತ್ತಾರೆ. ಒತ್ತಡಕ್ಕೆ ಕೆಲವೊಮ್ಮೆ ಒಂದೇ ಕಾರಣ ಇರದೇ ಹಲವಾರು ಇತರ ಯೋಚನೆಗಳು, ವಿಷಯಗಳು ಸಹ ಇರಬಹುದು. ಇಂತಹ ಸಮಯದಲ್ಲಿ ಇದನ್ನು ನಿರ್ವಹಣೆ ಹೇಗೆ ಮಾಡಬೇಕು ಎಂದು ನಾವೇ ನಿರ್ಧರಿಸಬೇಕು. ಆಫೀಸ್ ನಲ್ಲಿ ಅಧಿಕ ಕೆಲಸದ ಒತ್ತಡ ಇದ್ದರೆ ಅದರಿಂದ ಹೊರಬರಲು ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಿ ಖಂಡಿತ ಹೊರಬರಬಹುದು. ಅದು ಹೇಗೆ? ಕೆಳಗೆ ಓದಿ…

ಸಣ್ಣ ವಿರಾಮಗಳು: ಕೆಲಸದ ಮಧ್ಯೆ ಪ್ರತಿ ಒಂದು ಅಥವಾ ಎರಡು ಘಂಟೆಗೊಮ್ಮೆ ಸಣ್ಣವಿರಾಮ ತೆಗೆದುಕೊಳ್ಳಿ. ಬಹಳಷ್ಟು ಜನ ಊಟಕ್ಕೆ ಬಿಟ್ಟರೆ ಕೆಲಸ ಮಾಡುವ ಡೆಸ್ಕ್ ಬಿಟ್ಟು ಏಳುವುದಿಲ್ಲ. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಮ್ಮ ಮೆದುಳು ಸತತವಾಗಿ ಒಂದೇ ಕೆಲಸದಲ್ಲಿ ಬಹಳ ಹೊತ್ತು ಕ್ರಿಯಾಶೀಲವಾಗಿದ್ದರೆ ಅದು ಅಪಾಯಕಾರಿ. ಪ್ರತಿ ಎರಡು ಘಂಟೆಗೊಮ್ಮೆ ಎರಡು ಮೂರು ನಿಮಿಷದ ವಿರಾಮ ತೆಗೆದುಕೊಳ್ಳಿ. ಕುಳಿತಲ್ಲಿಂದ ಎದ್ದು ಆಫೀಸಿನ ಕಿಟಕಿಯ ತನಕವೋ ಅಥವಾ ವಾಟರ್ ಕೂಲರ್ ತನಕ ಹೋಗಿ ನೀರು ಕುಡಿದು ಬನ್ನಿ, ಕೈಕಾಲುಗಳನ್ನು ಮೈಮುರಿಯುವ ಮೂಲಕ ರಿಲ್ಯಾಕ್ಸ್ ಮಾಡಿಕೊಳ್ಳಿ , ಹೀಗೆ ಮಾಡಿ ನಿಮ್ಮ ಡೆಸ್ಕಗೆ ಬಂದಾಗ ನಿಮಗೆ ರಿಲ್ಯಾಕ್ಸ್ ಆಗುತ್ತದೆ. ನಿಮ್ಮ ಕಛೇರಿಯ ಆವರಣದಲ್ಲಿ ಹೂದೊಟ ಅಥವಾ ಹಸಿರು ಲಾನ್ ಇದ್ದರೆ ಅದರ ಕಡೆ ದೃಷ್ಟಿ ಹಾಯಿಸಿ.

ಊಟದ ವಿರಾಮ: ಕೆಲವರು ಊಟ ಮಾಡಲು ಬೇರೆಯದೇ ಕ್ಯಾಂಟಿನ್ ಇದ್ದರೂ ಅಲ್ಲಿ ಹೋದರೆ ಸಮಯ ವ್ಯರ್ಥವಾಗುತ್ತದೆ ಎಂದು ತಾವು ಕುಳಿತು ಕೊಳ್ಳುವ ಸ್ಥಳದಲ್ಲೇ ಊಟ ಮಾಡುತ್ತಾ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಬಹಳ ತಪ್ಪು. ನಿಮ್ಮ ಎಂಟು ಘಂಟೆಯ ಕೆಲಸದ ಅವಧಿಯಲ್ಲಿ ಊಟದ ವಿರಾಮ ಬಹಳ ದೊಡ್ಡ ವಿರಾಮವಾಗಿದ್ದು ಅದನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಕ್ಯಾಂಟಿನ್‍ಗೆ ಹೋದರೆ ಅಲ್ಲಿ ಸಹೋದ್ಯೋಗಿಗಳ ಜೊತೆ ಕುಳಿತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ವಲ್ಪ ಹರಟುತ್ತಾ ಊಟ ಮಾಡುವುದರಿಂದ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ. ಕೆಲಸ ಮಾಡುವ ಕಡೆಯೆ ಕುಳಿತು ಊಟ ಮಾಡುವುದರಿಂದ ಕೆಲಸದ ಒತ್ತಡದಲ್ಲೆ ಊಟ ಮಾಡುವುದು ಒಳ್ಳೆಯದಲ್ಲ. ಊಟದ ವಿರಾಮದಲ್ಲಿ ಸಹೋದ್ಯೋಗಿಗಳ ಜೊತೆ ಅದು ಇದು ಮಾತನಾಡುವುದರಿಂದ ಕೆಲಸದಿಂದ ಸ್ವಲ್ಪ ಮೆದುಳಿಗೆ ಬಿಡುವು ಸಿಗುತ್ತದಲ್ಲದೇ ಮತ್ತೆ ನಿಮ್ಮ ಡೆಸ್ಕಗೆ ಹಿಂದಿರುಗಿದಾಗ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡಲು ಸಾಧ್ಯ.

ಹವ್ಯಾಸವೂ ಇರಲಿ: ಕೆಲಸದ ಮಧ್ಯೆ ಎರಡು ಮೂರು ಘಂಟೆಗೊಮ್ಮೆ ಸಹುದ್ಯೋಗಿಗಳೊಂದಿಗೆ ಕ್ಯಾಂಟಿನ್ ಅಥವಾ ಒಳಾಂಗಣ ಕ್ರೀಡೆಗಳಾದ ಟೆಬಲ್ ಟೆನ್ನಿಸ್ ಅಥವಾ ಕೇರಂ ವ್ಯವಸ್ಥೆ ಇದ್ದರೆ ಅಲ್ಲಿ ಹೋಗಿ 10-15 ನಿಮಿಷ ಕಾಲ ಕಳೆಯಿರಿ. ಕಾಫಿ ಟೀ ಹೀರುವ ಮೂಲಕ ಸಮಯ ಕಳೆಯುವುದರಿಂದ ಹಾಗೂ ದಿನವಿಡಿ ಮಾಡುವ ಒಂದೇ ಕೆಲಸದಿಂದ ಸ್ವಲ್ಪ ನಿಮಿಷ ಬೇರೆ ಕೆಲಸ ಮಾಡುವುದರಿಂದ ಮಾಡುವ ಕೆಲಸವನ್ನು ಇನ್ನು ಅತ್ಯುತ್ತಮವಾಗಿ ಮಾಡಲು ಸಾಧ್ಯ. ಕುಳಿತಲ್ಲಿಂದ ಎದ್ದು ಹೋಗಲು ಆಗದಿದ್ದರೆ ಕುಳಿತಲ್ಲೇ ಸ್ವಲ್ಪ ಸಂಗೀತ ಕೇಳುವುದೋ ಅಥವಾ ನೀವು ಚಿತ್ರಗಾರರಾಗಿದ್ದರೆ ಚಿತ್ರ ಸ್ಕೆಚ್ ಮಾಡುವುದರಿಂದ ಅನಗತ್ಯ ಕೆಲಸದ ಒತ್ತಡದಿಂದ ಪಾರಾಗಬಹುದು.

ಉತ್ತಮ ಆಹಾರದ ಆಯ್ಕೆ: ಕೆಲವರಿಗೆ ಕೆಲಸದ ಮಧ್ಯೆ ಚಿಪ್ಸ್ ಹಾಗೂ ಜಂಕ್ ಫುಡ್ ತಿನ್ನುವ ಅಭ್ಯಾಸವಿರುತ್ತದೆ. ಇದರಿಂದ ಹೆಚ್ಚಿನ ಉಪ್ಪಿನ ಹಾಗೂ ಸಕ್ಕರೆ ಅಂಶ ದೇಹವನ್ನು ಸೇರಿ ಬೊಜ್ಜಿಗೆ ಕಾರಣವಾಗಬಹುದಲ್ಲದೇ ಅನೇಕ ಖಾಯಿಲೆಗಳಿಗೂ ಕಾರಣವಾಗಬಹುದು. ಒತ್ತಡ ಇದ್ದಾಗ ಕೆಲವರು ಎನೋ ಒಂದು ತಿಂದರೆ ಅಯಿತು ಎಂದು ತಿನ್ನುತ್ತಾರೆ. ಹೀಗೆ ಮಾಡದೆ ಡ್ರೈ ಫ್ರೂಟ್ಸ್, ಸೇಂಗಾ ಬೀಜ ಅಥವಾ ಕ್ಯಾರೆಟ್ ಮತ್ತು ಸೌತೆಕಾಯಿ ತುಂಡುಗಳನ್ನು ಮನೆಯಿಂದ ಬರುವಾಗ ತಂದು ತಿನ್ನಿ. ನಮ್ಮ ಆಹಾರ ಶೈಲಿಯೂ ಕೂಡ ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಉತ್ತಮ ಆಹಾರ ಶೈಲಿ ನಿಮ್ಮದಾಗಿರಲಿ.

ಕೆಲಸ ಮಾಡುವ ವಾತಾವರಣವೂ ಸರಿಯಾಗಿರಲಿ : ನೀವು ಕ್ಯೂಬಿಕಲ್ ಅಥವಾ ಕ್ಯಾಬಿನ್ ನಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಅದು ನಿಮ್ಮ ಮನೆ ಇದ್ದಂತೆ. ಯಾಕೆಂದರೆ ನೀವು ಎನಿಲ್ಲವೆಂದರೂ ಆ ಜಾಗದಲ್ಲಿ ಸುಮಾರು ಏಳು ಘಂಟೆಗಿಂತ ಹೆಚ್ಚು ಸಮಯ ಕುಳಿತು ಕೆಲಸ ಮಾಡುತ್ತಿರುತ್ತಿರಿ. ಹಾಗಾಗಿ ಆ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಿ ಅಲ್ಲದೇ ನಿಮ್ಮ ಕೆಲಸಕ್ಕೆ ಸಂಭಂದಿಸಿದ ವಸ್ತುಗಳನ್ನು ಕಡತಗಳನ್ನು ನೀಟ್ ಆಗಿ ಜೋಡಿಸಿಕೊಳ್ಳಿ. ಇದರಿಂದ ಏನಾದರೂ ಹುಡುಕುವಾಗ ಅನಗತ್ಯ ಗೊಂದಲ ತಪ್ಪುತ್ತದೆಯಲ್ಲದೇ ಇಂತಹ ಗೊಂದಲಗಳು ಒತ್ತಡವನ್ನು ಇನ್ನೂ ಜಾಸ್ತಿ ಮಾಡುತ್ತದೆ. ನಿಮ್ಮ ಕುಟುಂಬದ ಫೋಟೋ ಒಂದು ನಿಮ್ಮ ಡೆಸ್ಕಿನಲ್ಲಿ ಇರಲಿ ಹಾಗೂ ಸಾಧ್ಯವಾದರೆ ಒಂದು ಸಣ್ಣ ದೇವರ ಫೋಟೋ ಕೂಡ ಇರಲಿ. ದಿನದ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆ ಕೈಮುಗಿದು ಕೆಲಸ ಪ್ರಾರಂಭಿಸಿ.

ಸಮಯದ ನಿರ್ವಹಣೆ: ಕೆಲಸದ ಜಾಗದಲ್ಲಿ ಇದಕ್ಕೆ ಬಹಳ ಮಹತ್ವ ಇದೆ. ನಿಮಗೆ ಕೆಲಸ ಜಾಸ್ತಿ ಇದ್ದು ಅದನ್ನು ನಿರ್ವಹಿಸಲು ಸಮಯ ಕಡಿಮೆ ಇದ್ದಾಗ ನಾವು ಅನಗತ್ಯ ಕೆಲಸದ ಒತ್ತಡಕ್ಕೆ ಸಿಲುಕುತ್ತೇವೆ. ಇದಕ್ಕೆ ಕಾರಣ ನಾವು ಸಮಯದ ಸದುಪಯೋಗವನ್ನು ಸರಿಯಾಗಿ ನಿರ್ವಹಿಸದೇ ಇರುವುದು. ಹತ್ತಾರು ಕೆಲಸಗಳಿದ್ದರೆ ಅತಿ ಪ್ರಮುಖವಾದ ಕೆಲಸ ಯಾವುದು ಎಂದು ಮೊದಲೇ ನಿರ್ಧರಿಸಿ ಅದನ್ನು ಮುಗಿಸಲು ಪ್ರಯತ್ನಿಸಿ ನಂತರ ಉಳಿದ ಕೆಲಸವನ್ನು ಕೈಗೆತ್ತಿಕೊಳ್ಳಿ. ಸಾಧ್ಯವಾದಾಗ ನಿಗದಿತ ಸಮಯಕ್ಕಿಂತ ಅರ್ಧ ಘಂಟೆ ಮುಂಚೆ ಬಂದು ಆ ಸಮಯದಲ್ಲಿ ಆ ದಿನದಲ್ಲಿ ಮಾಡಿ ಮುಗಿಸಬೇಕಾಗಿರುವ ಕೆಲಸದ ಬಗ್ಗೆ ಯೋಚಿಸಿ. ಯಾವ ಕಾರಣಕ್ಕೂ ಆಫೀಸಿನ ಕೆಲಸವನ್ನು ಮನೆಗೆ ಒಯ್ಯಬೇಡಿ. ಈಗಾಗಲೇ ಎರಡು ವರ್ಷದಿಂದ ಮನೆಯಲ್ಲೇ ಕೆಲಸ ಮಾಡಿದ್ದೀರಿ, ಇದರಿಂದ ಮನೆಯ ವಾತಾವರಣವೂ ಹಾಳಾಗಬಹುದು.

ಧೀರ್ಘ ಉಸಿರನ್ನು ಎಳೆದುಕೊಳ್ಳಿ: ಕೆಲವೊಮ್ಮೆ ಒತ್ತಡ ಇದ್ದಾಗ ನಾವೆಷ್ಟು ಆಳವಾಗಿ ಕೆಲಸದಲ್ಲಿ ಮುಳುಗಿರುತ್ತೇವೆಂದರೆ ಕೆಲಸ ಮುಗಿಸಬೇಕೆಂಬ ಒತ್ತಡದಲ್ಲಿ ನಮ್ಮ ಹೃದಯದ ಬಡಿತ ಜಾಸ್ತಿಯಾಗಿದ್ದು ನಮ್ಮ ಗಮನಕ್ಕೆ ಬರುವುದಿಲ್ಲ. ಇದಕ್ಕೆ ಆಸ್ಪದ ಕೊಡದೆ ಹೊಟ್ಟೆಯ ಮೇಲೆ ಕೈಯನ್ನು ಇಟ್ಟು ಧೀರ್ಘ ಉಸಿರನ್ನು ಎಳೆದುಕೊಳ್ಳಿ. ಹೀಗೆ ಮಾಡಿದಾಗ ಮನಸ್ಸಿಗೆ ಸಮಾಧಾನವಾಗುತ್ತದೆಯಲ್ಲದೇ ಹೃದಯದ ಬಡಿತವೂ ಕಡಿಮೆಯಾಗುತ್ತದೆ ಅನಗತ್ಯ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಈ ರೀತಿ ಒಂದೈದು ಬಾರಿ ಮಾಡಿ ಆಗ ಮನಸಿನ ಉದ್ವೇಗವೂ ಕಡಿಮೆಯಾಗಿ ತಕ್ಷಣವೆ ಉಲ್ಲಾಸಿತರಾದಂತೆ ಅನ್ನಿಸುತ್ತದೆ.

ಮನೆಯವರೊಂದಿಗೆ ಸಮಯ ಕಳೆಯಿರಿ: ನೀವು ಹೊರಗೆ ಮನೆಯವರೊಂದಿಗೆ ಕಳೆಯುವ ಸಮಯ ನೀವು ಆಫೀಸಿನಲ್ಲಿ ಮಾಡುವ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತದೆ. ವಾರದಲ್ಲಿ ಒಂದೆರಡು ಬಾರಿಯಾದರೂ ಇಲ್ಲದಿದ್ದರೆ ವಾರದ ಕೊನೆಯಲ್ಲಿ ಮನೆಯವರೊಂದಿಗೆ ಹೊರಗಡೆ ಸಿನಿಮಾಕ್ಕೋ ಅಥವಾ ರಾತ್ರಿ ಊಟಕ್ಕೋ ಹೋಗಿ. ವಾರಾಂತ್ಯದಲ್ಲಿ ನಿಮ್ಮ ಬಂಧು ಮಿತ್ರರೊಡನೆ ಅಥವಾ ಯಾವುದಾದರೂ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಿ, ಇವೆಲ್ಲವೂ ಮನಸ್ಸಿಗೆ ಆನಂದವನ್ನು ನೀಡುತ್ತದೆಯಲ್ಲದೇ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಹಕ್ಕೆ ಸ್ವಲ್ಪ ವ್ಯಾಯಾಮ ಅತಿ ಮುಖ್ಯ: ನಮ್ಮ ಮನಸ್ಸಿಗೆ ಕೆಲಸದ ಒತ್ತಡವಿದ್ದಾಗ ನಮ್ಮ ದೇಹ ಜಗಳದ ಮನಸ್ಥಿತಿಯಲ್ಲಿರುತ್ತದೆ. ನಮ್ಮ ದೇಹ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಗುರುತಿಸುವುದಿಲ್ಲ ಎನ್ನುತ್ತಾರೆ ವೈದ್ಯರುಗಳು. ಹಾಗಾಗಿ ದಿನದ ಸ್ವಲ್ಪ ವೇಳೆಯನ್ನು ಜಿಮ್‍ನಲ್ಲಿ ಕಳೆಯುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಮನಸ್ಸಿಗೆ ಉಲ್ಲಾಸ ತರುವ ಹಾರ್ಮೋನ್‍ಗಳು ಹೆಚ್ಚಿಗೆ ಬಿಡುಗಡೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತದೆ. ಇದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದಲ್ಲದೇ ಅಂದು ಕೊಂಡ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಲು ಇವು ಸಹಾಯ ಮಾಡುತ್ತದೆ.

ಕೊನೆಯದಾಗಿ ಉತ್ತಮ ಜೀವನ ಶೈಲಿ ನಿಮ್ಮದಾಗಿರಲಿ: ಕೆಲವರು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೆಚ್ಚಿಗೆ ಧೂಮಪಾನ ಹಾಗೂ ಕುಡಿತದಲ್ಲಿ ತೊಡಗುತ್ತಾರೆ. ಇದು ತುಂಬಾ ತಪ್ಪು. ಆದರೆ ಇವುಗಳಿಂದ ಇನ್ನೂ ಅಪಾಯವೇ ಜಾಸ್ತಿ ಹೊರತು ಮಾನಸಿಕ ಒತ್ತಡ ಕಡಿಮೆ ಮಾಡುವುದಿಲ್ಲ. ಅದರ ಬದಲಾಗಿ ಅನಾರೋಗ್ಯಕ್ಕೆ ದಾರಿಮಾಡುತ್ತದೆ. ಇದಕ್ಕೆ ಬದಲಾಗಿ ನಿಮ್ಮ ಮನಸ್ಥಿತಿಯನ್ನು ನಿಮ್ಮ ದೈಹಿಕ ಸಾಮರ್ಥ್ಯವನ್ನು ಸುಸ್ಥಿಯಲ್ಲಿಡುವಂಥಹ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ ಇದರಿಂದ ಮಾನಸಿಕ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ. ಜೊತೆಗೆ ದಿನದಲ್ಲಿ ಕನಿಷ್ಟ 6 ಘಂಟೆಗಳ ನಿದ್ದೆಯನ್ನು ಮರೆಯಬೇಡಿ. ಇದರಿಂದ ನಿಮ್ಮ ಅರ್ಧ ಮಾನಸಿಕ ಒತ್ತಡ ಕಡಿಮೆಯಾಗುತ್ತದಲ್ಲದೇ ಆಫೀಸಿನಲ್ಲಿ ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ತರುತ್ತದೆ. ಸರಿಯಾದ ಸಮಯದ ಸದ್ಭಳಕೆ ಮಾಡದೆ, ಆಫೀಸಿನಲ್ಲಿ ಅನಗತ್ಯ ಕೆಲಸದ ಒತ್ತಡ ತೆಗೆದುಕೊಂಡು ನಮ್ಮ ಜೀವನಕ್ಕೇನಾದರೂ ಅಪಾಯವಾದರೇ ನಮ್ಮನ್ನೆ ನಂಬಿಕೊಂಡ ಮನೆಯವರ ಗತಿಯೇನು ಎಂಬುದನ್ನು ಮನದಲ್ಲಿಟ್ಟುಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಜ್ಜೆಯಿಡುವುದು ಜಾಣ್ಮೆಯ ನಡೆಯಾಗಿದೆ.

ಡಾ.ಪ್ರಕಾಶ್.ಕೆ.ನಾಡಿಗ್
ತುಮಕೂರು

Related post

Leave a Reply

Your email address will not be published. Required fields are marked *