ಕೆಸವೆಯ ಕರಾಮತ್ತು

ಕೆಸವೆಯ ಕರಾಮತ್ತು

ಹಳ್ಳಿಗಳಲ್ಲಿ ಕೆಸರಿನ ಕೆರೆಯ ಬದಿಗಳಲ್ಲಿ ಅಲಂಕಾರಿಕವಾಗಿ ಬೆಳೆದು ನಿಂತ ದೊಡ್ಡ ಎಲೆಗಳ ಸಸ್ಯರಾಶಿ ಕಂಡುಬರುತ್ತದೆ. ನೋಡಲು ದಟ್ಟ ಹಸಿರಿನ ದಪ್ಪನೆಯ, ಅಗಲವಾದ ಎಲೆಗಳ ಸಸ್ಯವನ್ನು ಮನೆ ಅಂಗಳದಲ್ಲಿ ಬೆಳೆಸಲೂ ಸಹ ಆಸೆಯಾಗುತ್ತದೆ. ಈ ಸಸ್ಯವನ್ನು ಕೆಸವೆ ದಂಟು ಎಂದು ಕರೆಯಲಾಗುತ್ತದೆ.

ಕೆಸರು ಹಾಗು ನೆರಳಿನಲ್ಲಿ ಬೆಳೆಯುವ ಕೆಸವಿನ ಸಸ್ಯ ದಕ್ಷಿಣ ಏಷ್ಯಾದಲ್ಲಿ ದಟ್ಟವಾಗಿ ಕಂಡುಬಂದಿದೆ. ಕೊಲೊಕಾಸಿಯ ಎಸ್ಕುಲೆಂಟಾ [Colocasia esculenta] ಸಸ್ಯ ಶಾಸ್ತ್ರೀಯ ಹೆಸರುಳ್ಳ ಅರಾಸಿಯೆ (Araceae) ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಸಹ ಕೆಸವೆ ದಂಟಿನ ಉಪ್ಪಿನಕಾಯಿ, ತೊಕ್ಕು, ಗೊಜ್ಜುಗಳು ದೊರೆಯುತ್ತವೆ. ಸಾಂಪ್ರದಾಯಿಕವಾಗಿ ಕೆಸವೆ ದಂಟಿನ ಪಲ್ಯವನ್ನು ಹಿರಿಯರ ಪುಣ್ಯಕಾರ್ಯದಲ್ಲಿ ತಪ್ಪದೇ ತಯಾರಿಸುವುದು ವಾಡಿಕೆ. ಕೆಸವೆಯಿಂದ ಮಾಡಿದ ಪತ್ರೊಡೆಯಂತು ಬಹು ಪರಿಚಿತ ಹಾಗು ರುಚಿಯುಕ್ತ ಖಾದ್ಯವಾಗಿದೆ. ಈ ಸಸ್ಯದ ಗಡ್ಡೆಗಳನ್ನು ನೆಲಕ್ಕೆ ಚೆಲ್ಲಿದರೆ ಸಾಕು ಈ ಸಸ್ಯ ಬೇರೂರತ್ತದೆ.

ಕನ್ನಡದಲ್ಲಿ ಕೆಸವೆ, ಆಂಗ್ಲ ಭಾಷೆಯಲ್ಲಿ “ತಾರೋ”, ಮಲೆಯಾಳಂ ನಲ್ಲಿ “ಚಿಂಪು” ಎಂದು ಕರೆಯಲಾಗುತ್ತದೆ. ಬಹಳಷ್ಟು ಉನ್ನತ ಪೌಷ್ಠಿಕಾಂಶಗಳಿಂದ ಕೂಡಿದ ಈ ಸಸ್ಯವು ಬಹಳಷ್ಟು ಔಷಧೀಯ ಗುಣಗಳನ್ನು ಕೂಡ ಹೊಂದಿರುತ್ತದೆ.

ಕೆಸವಿನ ಪತ್ರೊಡೆ

ಕೆಸವೆಯನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್ “C” ಹೇರಳವಾಗಿ ದೊರಕಿಸುತ್ತದೆ. ದೇಹದಲ್ಲಿನ ಟಾಕ್ಸಿನ್ ಗಳನ್ನು ಕಡಿಮೆ ಮಾಡಿ ರಕ್ತವನ್ನು ಶುದ್ದೀಕರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಕೆಸವೆ ಸಹಯಾಕಾರಿ. ಮೂತ್ರಪಿಂಡದಲ್ಲಿ ಕಂಡುಬರುವ ಕಲ್ಲುಗಳನ್ನೂ ಕರಗಿಸುವ ಸಾಮರ್ಥ್ಯ ಕೆಸವಿನಲ್ಲಿದೆ.

ಇಷ್ಟೆಲ್ಲಾ ಕರಾಮತ್ತು ಹೊಂದಿರುವ ಕೆಸವೆಯ ಖಾದ್ಯಗಳನ್ನು ತಯಾರಿಸಿ ಸೇವಿಸುವುದರಿಂದ ಊಟದ ರುಚಿಯೂ ಹೆಚ್ಚು, ದೇಹಕ್ಕೂ ಅಚ್ಚುಮೆಚ್ಚು.

ಶಿಲ್ಪ

Related post

Leave a Reply

Your email address will not be published. Required fields are marked *