ಕೇಳಲು ಕಿವಿಯೊಂದು…!
ಆಸ್ಥೆಯಿಂದ ಕೇಳಲೊಂದು
ಕಿವಿ ಇದ್ದರೆ
ಆ ಕಿವಿ ಹೊತ್ತ ದೇಹಕೊಂದು
ಮನಸಿದ್ದರೆ
ದುಗುಡವೋ ದುಃಖವೋ
ಖುಷಿಯೋ ಉನ್ಮಾದವೋ
ಏನಾದರೂ ಹೇಳಿ
ಸದ್ಯ ಹೇಳಿದೆನೆಲ್ಲ ಎಂದು
ಹಗುರಾಗಬಹುದು!
ಅಂಥ ಕಿವಿಯೇ
ಅತ್ಯಲ್ಪ ಒಂದಾದರು
ಇಲ್ಲದಿದ್ದರೆ
ಹೇಳುವುದಾದರು ಏನು
ಮತ್ತು ಯಾರಿಗಾದರು?
ಆದರೂ ಗೋಡೆಗೋ
ಗಾಳಿಗೋ
ಗಿಡಮರಗಳಿಗೋ
ಅಥವ ಯಾವುದೋ ಒಂದು
ಬಿರುಸು ಲೋಹಕೋ
ಹೀಗೋ ಹಾಗೋ ಹೇಳಿ
ಹಗುರಾಗಬಹುದು
ಆಗಲೂ
ಹಾಗೆ ಹೇಳುವ ಮನಸು
ಇನ್ನೂ ಉಳಿದಿದ್ದರೆ!
ಅನೇಕವು ಅದೆಂಥ
ಕಠಿಣ ಕಬ್ಬಿಣ ಕಿವುಡು
ಸಂದರ್ಭಗಳೆಂದರೆ
ನಿಮ್ಮ ಸುತ್ತಮುತ್ತಲು
ಜೀವಂತ ಕಿವಿಗಳ ಹೊತ್ತ
ನಿಮ್ಮವರೆ
ನಿಮ್ಮ ಒಡಹುಟ್ಟಿದವರೆ
ನಿಮ್ಮ ಸಂಗಾತಿಯೆ
ಅಥವ ಗೆಳೆಯ ಗೆಳತಿಯೆ
ಮುಂತಾಗಿ ಇದ್ದೂ ಸಹ
ಆ ಕಿವಿಗಳಿಗೆ ಕೇಳುವ
ವ್ಯವಧಾನವಾಗಲಿ
ಎದೆಯಾಗಲಿ
ಅಂಥ ಎದೆಯಲಿ
ಕನಿಷ್ಠ ಕೇಳಿಯಾದರು ಮರೆತುಬಿಡುವ
ಕರುಣೆಯಾಗಲಿ
ಯಕಃಶ್ಚಿತ್ ಸಹ ಇರದು!
ಇಂಥ ಸುಖಕ್ಕೇನು
ನಮ್ಮವರು
ನಮ್ಮ ಬಂಧು ಮಿತ್ರರು
ಎಂಬ ಭ್ರಮೆ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ
1 Comment
ಕಿವಿ ಇರದ ಮಿತ್ರರು ಬಂಧು ಜನರು ಕೇಳುವುದಿಲ್ಲ ಕವಿಯ ಅಳಲು
ಕಿವಿ ಇರದವರ ಕಥೆ ಚೆನ್ನಾಗಿದೆ ಮೂರ್ತಿ!