ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನಡೆದ ಘಟನೆ ಅಂದು ನನ್ನ ಯಜಮಾನರು ಮುಂಜಾನೆಯಿಂದ ತುಂಬಾ ಸಂತೋಷದಲ್ಲಿದ್ದರು.. ಆದರೆ ರಾತ್ರಿಯ ಆ ಘಟನೆ ಇನ್ನಿಲ್ಲದಂತೆ ಕಾಡುತ್ತಿದೆ ಇಂದಿಗೂ.. ಅಷ್ಟಕ್ಕೂ ಆ ರಾತ್ರಿ ನಡೆದದ್ದಾದರೂ ಏನು ? ಎಲ್ಲ ವಿವರಿಸುವೆ ಅದಕ್ಕೂ ಮುಂಚೆ ನನ್ನ ಸಣ್ಣ ಪರಿಚಯ ನಿಮಗಾಗಲಿ..
ನನ್ನ ಹೆಸರು ಗೀತ (ಹೆಸರು ಬದಲಿಸಿದೆ) ನನ್ನ ಗಂಡ ಅತ್ತೆ ಒಂದು ವರುಷದ ಮಗು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ.. ನನ್ನ ಮನೆಯವರು ಪ್ರೈವೇಟ್ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿ. ಬರುವ ಸಂಬಳ ಅಷ್ಟಕಷ್ಟೇ.. ಆದರೆ ಮದುವೆಯಾಗಿ ನಾಲ್ಕು ವರ್ಷಗಳಾಯಿತು ಯಾವುದಕ್ಕೂ ಕೊರತೆ ಇಲ್ಲ ಎನ್ನುವಂತೆ ಸಲುಹಿದರು ಇಂದಿಗೂ.
ಬಡತನಲ್ಲಿ ಮಕ್ಕಳಿಗೆ ಬರವಿಲ್ಲ.. ದೇವರು ನನ್ನ ಮಡಿಲು ಮತ್ತೆ ತುಂಬಿಸಿದ.. ಈಗ ಮೂರು ತಿಂಗಳ ಗರ್ಭಿಣಿ. ನಾನು ಸ್ತ್ರೀ ರೋಗ ತಜ್ಞರ ಬಳಿ ಆಗಾಗ ನಿಯಮಿತವಾಗಿ ತಪಾಸಣೆಗೊಳಗಾಗುಗುತ್ತಿದ್ದೆ. ನಮ್ಮ ಮನೆಯವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹಿಂಜರಿಕೆ. ಹಾಗಾಗಿ ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ..
ಅದೊಂದು ದೊಡ್ಡ ಹಾಸ್ಪಿಟಲ್.. ಮೂರು ಅಂತಸ್ತಿನ ಕಟ್ಟಡ ವೈಭವೋಪೇತವಾಗಿದೆ.. ಮೊದಲನೇ ಸಲ ಹೋದಾಗ ಕಟ್ಟಡ ನೋಡಿಯೇ ಬೆದರಿ ಹೋಗಿದ್ದೆ. ಮನೆಗೆ ಬಂದ ಮೇಲೆ ಈ ರೀತಿ ದೊಡ್ಡ ಪ್ರಮಾಣದಲ್ಲಿ ಅಗತ್ಯ ಇದೆಯೇ.. ಬೇಡ ಮುಟ್ಟಿದರೆ ಮುನ್ನೂರು ರುಪಾಯಿ ಆಕೆ ಶುಲ್ಕ ವಸೂಲಿ ಎಂದು ಎಷ್ಟೇ ಖ್ಯಾತೆ ತೆಗೆದರೂ. ನನ್ನ ಮನೆಯವರದು ಒಂದೇ ಹಟ.. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸರಿಯಾಗಿರುವುದಿಲ್ಲ. ವೈದ್ಯರ ಕೊರತೆ ಸಹಜವಾಗಿ ಸ್ಪಂದಿಸುವುದೇ ಇಲ್ಲ ಎಂಬ ವಾದ. ಇರಲಿ ಬಿಡು ಎಂದು ನಾನೂ ಅವರು ಹೇಳಿದಂತೆ ಕೇಳುವ ಸ್ಥಿತಿ. ಸರಿ ಹೀಗೆ ದಿನಗಳು ಕಳೆಯಿತು ಮಗುವಿನ ಆರೋಗ್ಯಕ್ಕಾಗಿ ತಪಾಸಣೆಗೆ ಹೋದೆ.. ಡಾಕ್ಟರ್ ಸ್ಕ್ಯಾನ್ ಮಾಡಿಸಿ ಕೊಂಡು ಬನ್ನಿ ಎಂದು ೩೦೦ ರುಪಾಯಿ ಪೀಕಿದರು.. ಮರುದಿನ ಎಂದಿನಂತೆ ಮರುಪರಿಶೀಲನೆ ಸಹಜ ವೈದ್ಯಕೀಯ ಭೇಟಿ ಎಂದು ಹೋದರೆ.. ಹೊರಗೆ ಕಾಯುತ್ತಿದ್ದ ನರ್ಸ್ ಸುತಾರಾಂ ಒಪ್ಪಲಿಲ್ಲ ಕಾರಣ ನಿಮ್ಮ ಟೋಕನ್ ಇಲ್ಲ.. ೩೦೦ ರೂಪಾಯಿ ಪಾವತಿಸದೇ ಬಿಡುವುದಿಲ್ಲ ಎಂದರು.. ಅಲ್ಲ ಮೇಡಂ ನಿನ್ನೆ ತಾನೇ ಬಂದು ತೋರಿಸಿಕೊಂಡು ಹೋಗಿದ್ದೇನೆ ಈ ದಿನ ರಿಪೋರ್ಟ ಮಾತ್ರ ಎಂದರೆ ಅದೇನೂ ಇಲ್ಲ ಮೇಡಂ ಇಷ್ಟೋಂದು ಜನ ಇಲ್ವಾ ಅವರೆಲ್ಲಾ ತೊಗೋಂಡಿಲ್ವ.. ನೀವೇನು ಸ್ಪೆಶಲ್.. ಸುಮ್ಮನೆ ೩೦೦ ರೂಪಾಯಿ ಕೊಟ್ಟು ನಿಮ್ಮ ಸರತಿ ಬಂದ ನಂತರ ಬನ್ನಿ ಎಂದಳು. ಒಂದು ಘಂಟೆ ಕಾದೆ.. ನನ್ನ ಸರತಿ ಬಂದಿತು.. ಡಾಕ್ಟರ್ ನನ್ನ ಗಮನಿಸುತ್ತಾ ಮಗು ತುಂಬಾ ಚೆನ್ನಾಗಿ ಬೆಳೆಯುತ್ತಿದೆ.. ಈಗ ಬರೆಯುವ ಮಾತ್ರೆ ತೊಗೊಳ್ಳಿ ಮುಂದಿನ ವಾರ ಬನ್ನಿ ಎಂದು ಕಳುಹಿಸಿದರು…
ನನ್ನ ಯಜಮಾನರು ಬಂದರೆ ಈ ಸಂತೋಷದ ಸುದ್ದಿ ಹಂಚಿಕೊಳ್ಳಬೇಕೆಂದು ಕಾಯುತ್ತಿದ್ದೆ.. ಅವರದು ಕಂಪನಿಯ ಕೆಲಸ. ಒತ್ತಡ ಜಾಸ್ತಿ.. ಬಂದವರೇ ಏನೇ ಹೇಗಿದೀಯ ? ಡಾಕ್ಟರ್ ಹತ್ತಿರ ಹೋಗಿ ಬಂದೆಯಾ ? ಏನಾಯಿತು ? ಎಂದರು.. ನಾನು ನಗು ನಗುತ್ತಾ.. ಎಲ್ಲ ಚೆನ್ನಾಗಿದೆ ರೀ ಮಗು ಬಹಳ ಚೆನ್ನಾಗಿ ಬೆಳೆಯುತ್ತಿದೆ ಎಂದೆ, ಯಜಮಾನರ ಮುಖದಲ್ಲಿ ಮುಗುಳ್ನಗೆ ಹಾಗು ಸಂತಸ.
ಹೀಗೆಯೇ ಸ್ವಲ್ಪ ಹೊತ್ತು ಕಳೆದಿರಬೇಕು.. ನನಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಳ್ಳಲಾರಂಬಿಸಿತು.. ಕಿರುಚಲಾರಂಬಿಸಿದೆ.. ಅತ್ತೆ ಪಾಪ ಕೈಲಾದ ಮಟ್ಟಿಗೆ ಅದೇನೋ ಜೀರಿಗೆ ನೀರು ಕುಡಿಸಿದರು.. ಯಜಮಾನರು ಏನು ಆಗೊಲ್ಲ ನಾಳೆ ಡಾಕ್ಟರ್ ಹತ್ತಿರ ಹೋಗಿ ಬರುವ ಈ ಒಂದು ದಿನ ತಾಳ್ಮೆ ತೊಗೊ ಎಂದರು.. ಯಾಕೆಂದರೆ ರಾತ್ರಿ ಸಮಯ ಮೀರುತ್ತಿತ್ತು.. ಜೊತೆಗೆ ರಕ್ತ ಸ್ರಾವ..
ಹೇಗೋ ಆ ರಾತ್ರಿ ಕಳೆದೆ..
ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪೊಜೆ ವ್ರತ ಇಷ್ಟ.. ಅತ್ತೆ ಹಳೇ ಸಂಪ್ರದಾಯದವರು. ಮಂಗಳಗೌರಿ ಪೊಜೆ ಮಾಡು ಗಂಡನಿಗೆ ಶ್ರೇಯಸ್ಸು ಎಂದು ಹಟ.. ನನಗೋ ಹೊಟ್ಟೆ ಸಣ್ಣದಾಗಿ ನೋಯ್ತಿದೆ.. ಹೇಳಿಕೊಳ್ಳದೇ.. ಪೊಜೆ ಮುಗಿಸಿ ಮನೆಯ ಆಜು ಬಾಜೂ ಎಲ್ಲ ಮುತೈದೆಯರ ಕರೆದು ತಾಂಬೂಲ ಹಂಚಿದ್ದಾಯಿತು. ನಮ್ಮ ಅತ್ತೆಗೆ ಎಲ್ಲಿಲ್ಲದ ಸಂತೋಷ…
ಹೇಗೋ ಆ ದಿನವೆಲ್ಲ ಪೊಜೆ ಪುನಸ್ಕಾರದಲ್ಲಿ ಕಳೆದೆ. ನನ್ನ ಮನೆಯವರದು ಒಂದೇ ಬೈಗುಳ ಮೊದಲು ಆಸ್ಪತ್ರೆಗೆ ಹೋಗಬೇಕಿತ್ತು.. ಮಗು ಹೇಗಿದೆಯೋ ಏನೋ ಎಂದು.. ನಾನು ಹೇಳಿದೆ ಈಗೇನು ಆಗಿಲ್ಲ ಬಿಡಿ ಎಂದೆ.. ನಾಳೆ ತೋರಿಸು ಎಂದು ಗದರಸಿ ಹೊರಟು ಹೋದರು..
ಮನೆಯೆಲ್ಲಾ ಖಾಲೀ ಖಾಲೀ ಎನಿಸುವುದು ಗಂಡ ಮನೆಯಲ್ಲಿ ಇಲ್ಲ ಎಂದಾಗ! ಗಂಡನನ್ನು ತುಂಬಾ ಹಚ್ಚಿ ಕೊಂಡವರಿಗೆ ಹೀಗಾಗುವುದುಂಟು.. ನನ್ನ ಮನೆಯವರದ್ದು ಊರು ಊರು ತಿರುಗುವ ಕೆಲಸ.. ಬರುವುದು ಎಂದೋ.. ಆದರೆ ಬೇಸರ ನೀಗಿಸಲು ಮಗನ ಆಟ ಪಾಠ ನನಗೆ ಲವಲವಿಕೆ ಉಂಟು ಮಾಡುತ್ತದೆ.. ಹೀಗೆಯೇ ಅಪರಾಹ್ನ ೧ ಗಂಟೆಯ ಸಮಯ ಆಟ ಆಡಿಸುತ್ತಿರಬೇಕಾದರೆ ದಿಢೀರನೆ ಹೊಟ್ಟೆ ಶೂಲೆ ಶುರುವಾಯಿತು.. ಆಸ್ಪತ್ರೆಗೆ ದೌಡಾಯಿಸಿದೆ . ಡಾ. ವನಿತಾ “ನೋಡಿ ಗೀತ ನೀವು ಮತ್ತೆ ಸ್ಕ್ಯಾನ್ ಮಾಡಿಸಿ ಆಮೇಲೆ ಬನ್ನಿ” ಎಂದು ಸಲಹೆ ಬರೆದು ಕಳುಹಿಸಿದರು.. ವರದಿ ತರುವಷ್ಟರಲ್ಲಿ ೩ ಘಂಟೆ.. ಡಾಕ್ಟರ್ ಹೇಳಿದರು ಮಗುವಿಗೇನೂ ತೊಂದರೆ ಇಲ್ಲ.. ಹೊಟ್ಟೆ ನೋವು ನಿಲ್ಲಲು ರಕ್ತಸ್ರಾವ ನಿಲ್ಲಲು ಇಂಜೆಕ್ಷನ್ ಹಾಕುವೆ ೮೦೦ ರೂಪಾಯಿಯಾಗುತ್ತದೆ ಹಾಕಿಸುವೆಯಾ ಎನ್ನುತ್ತಿರುವಂತೆ.. ಮನೆಯವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದೆ.. ಯಜಮಾನರು ಕೊಂಚ ಕಸಿವಿಸಿ ಮಾತನಾಡಿ ಸರೀ ಹಾಕಿಸಿಕೋ ಎಂದರು.. ನಾನು ಮನೆಗೆ ಬಂದೆ. ಯಥಾಪ್ರಕಾರ ನಿದ್ದೆ. ಬೆಳಕು ಹರಿದದ್ದು ಗೊತ್ತಾಗಲಿಲ್ಲ..
ಇಂದು ಸೋಮವಾರ ಬೆಳಗಾಗಿ, ಎದ್ದು ತುಂಬಾ ಲವಲವಿಕೆಯಿಂದ ಪೂಜೆ ಪುನಸ್ಕಾರ ಎಲ್ಲಾ ಮುಗಿಸಿದೆ.. ನನ್ನ ಮನೆಯವರು ನೆನ್ನೆಯೇ ಹೇಳಿದ್ದರು ನೆನಪಿನಲ್ಲಿತ್ತು.ಹಾಗಾಗಿ ಪ್ರಯಾಣಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದೆ.
ಸುರೇಶ್ (ಯಜಮಾನರು).. “ಹೇ ಗೀತಾ.. ನಾನು ಎಲ್ಲ ಬಟ್ಟೆ ಬರೆ ಹೊಂದಿಸಿಕೊಳ್ಳುವೆ ನೀನು ಮಾತ್ರೆ ಹಾಕಿ ಕೊಂಡು ಮಲಗು..”
ಗೀತ.. ಆಯ್ತು ರೀ ಹಾಗೆ ಮಾಡುವೆ.
ಸ್ವಲ್ಪ ಹೊತ್ತು ಸಂದಿರಬೇಕು.. ಸಮಯ ೧೦ಘಂಟೆ ರಾತ್ರಿ..
ಸುರೇಶ್.. ಗೀತ ನಾನು ಗುಲ್ಬರ್ಗ ಹೋಗಿ ಬರುವೆ..
ಗೀತಾ.. ರೀ ಯಾಕೋ ಮತ್ತೆ ಹೊಟ್ಟೆ ತುಂಬಾ ನೋಯ್ತಿದೆ ರಕ್ತಸ್ರಾವ ಆಗ್ತಿದೆ…
ಸುರೇಶ್.. ಏನೇ ನಾಳೆ ಬೇರೆ ಮೀಟಿಂಗ್ ಇದೆ. ನೀನು ನೋಡಿದರೆ ಈತರಹ..
ಏನೋ ತಡಿ ದೇವರಿದ್ದಾನೆ.. ನಾನು ಆಸ್ಪತ್ರೆಗೆ ಪೋನಾಯಿಸಿದೆ
ಸುರೇಶ್… ಹಲೋ ಡಾಕ್ಟರ್
ಮೇಡಂ.. ನನ್ನ ಹೆಂಡತಿ ನಿಮ್ಮ ಪೇಷಂಟ್.. ತುಂಬಾ ಹೊಟ್ಟೆ ನೋವು ರಕ್ತಸ್ರಾವ ಅಂತಿದ್ದಾಳೆ.
ಗೀತ.. ಅಮ್ಮಾ ನೋವು ತಡೆಯೋಕೆ ಆಗ್ತಿಲ್ಲ..
ಸುರೇಶ.. ಮೇಡಂ ಹೇಳಿ ಬೇಗ ಕರ್ಕೊಂಡ್ ಬರ್ಲಾ
ಡಾಕ್ಟರ್ ವನಿತಾ.. ಆಯ್ತು ಕರ್ಕೊಂಡ್ ಬನ್ನಿ..
ಸುರೇಶ್ ತನ್ನ ಬೈಕಿನಲ್ಲಿ ಗೀತಾಳನ್ನು ಕೂಡಿಸಿಕೊಂಡು ಕಷ್ಟಪಟ್ಟು ಆಸ್ಪತ್ರೆಗೆ ಧಾವಿಸಿದರು. ಹತ್ತು ನಿಮಿಷ ಆದಮೇಲೆ ಡಾ ವನಿತಾ ಬಂದರು.
ಡಾ. ವನಿತಾ. ಏನ್ರೀ ಹೀಗಾಯ್ತಾ?
ಸುರೇಶ್.. ಹೌದು ಮೇಡಂ.
ಡಾ ವನಿತಾ.. ಓಕೆ. ರೀ…. ನೀವು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ. ಪೇಷಂಟ್ ಎಮರ್ಜೆನ್ಸೀ… ಅವರೇ ನೋಡ್ತಾರೆ.
ಸುರೇಶ್.. ಮೇಡಂ ನೀವು ಬಾ ಅಂತ ಹೇಳಿ, ಈಗ ಸರ್ಕಾರಿ ಆಸ್ಪತ್ರೆಗೆ ಅಂದರೆ ಹೇಗೆ? ಇಷ್ಟೋತ್ತಿನಲ್ಲಿ ಹೇಗೆ ಕರ್ಕೋಂಡು ಹೋಗೋದು.. ಅದರಲ್ಲೂ ಗಾಡಿಯಲ್ಲಿ, ಅಷ್ಟಕ್ಕೂ ನಮ್ಮ ಮಾಮನವರನ್ನು ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಿದ್ದೆವು ವಾಪಸ್ಸು ಬರಲಿಲ್ಲ….
ಮೇಡಂ…. ಪ್ಲೀಸ್ ಹಾಗೆ ಹೇಳಬೇಡಿ ಟ್ರೀಟ್ಮೆಂಟ್ ನೀಡಿ.
ಡಾ ವನಿತಾ.. ಇಲ್ಲ ರೀ.. ಅಲ್ಲಿಯೂ ಚೆನ್ನಾಗಿ ನೋಡ್ತಾರೆ.. ಎಲ್ಲ ನಿಮ್ಮ ಭ್ರಮೆ ಅಷ್ಟೇ…
ಸುರೇಶ್.. Pls ಮೇಡಮ್ ರಿಕ್ವೆಷ್ಟ.. ಅಡ್ಮಿಟ್ ಮಾಡ್ಕೋಳ್ಳಿ.
ಡಾ ವನಿತಾ… ನೋಡಿ.. ಅನೆಸ್ತೇಷಿಯಾ ಬೇರೆ ಕೊಡಬೇಕು.. ಡಿ. ಎಂ. ಸಿ ಆಗುತ್ತದೆ… ದುಡ್ಡು ಜಾಸ್ತಿ ಖರ್ಚು ಆಗುತ್ತದೆ… ಈ ಹೊತ್ತಿನಲ್ಲಿ ಯಾರು ಬರೋಲ್ಲ ಕಷ್ಟ.. ಅಥವಾ ನಾಳೆವರೆಗೂ ಕಾದು ನೋಡೋಣ, ಹಣವು ಅಷ್ಟೋಂದಾಗೊಲ್ಲ..
ಸುರೇಶ್.. ಮೇಡಂ ಹಣ ಇವತ್ತು ಇರುತ್ತದೆ ನಾಳೆ ಇರೊಲ್ಲ.. ಮುಂದೆ ದುಡೀಬಹುದು.. ಪರವಾಗಿಲ್ಲ.. ಎಷ್ಟೇ ಖರ್ಚು ಆಗಲಿ.. ಪ್ರಾಣ ಹಾನಿ ಆಗದೇ ಇದ್ದರೆ ಸಾಕು..
ಡಾ ವನಿತಾ.. ನೋಡಪ್ಪಾ.. ನನ್ನ ಪೀಜು ೮ ಸಾವಿರ
ಅನಸ್ತೇಸಿಯಾ ಐದು ಸಾವಿರ ಹಾಸ್ಪಿಟಲ್ ಖರ್ಚು ಅದೂ ಇದೂ ಎಲ್ಲ ೨೦ ಸಾವಿರ ಆಗಬಹುದು..
ಸುರೇಶ್.. ಓಕೆ ಮೇಡಂ ಮಾಡಿ..
ಡಾ ವನಿತಾ.. ನರ್ಸ, ಬೇಗ ಆಪರೇಷನ್ಗೆ ರೆಡೀ ಮಾಡಿ.
ಡಾ ವನಿತಾ… ಹಲೋ ಹಲೋ ಡಾಕ್ಟರ್ ರಂಗರಾಜ್ ಇದಾರ..
ಡಾ ರಂಗ ರಾಜ್.. ಹಾ ಮೇಡಂ ನಾನೇ ಹೇಳಿ.. ಒಂದು ಡಿಎಂಸಿ ಇದೆ. ಹಾ ಮೇಡಂ ಬಂದೆ..
ಡಾ.. ರಂಗರಾಜ್ ಬಂದರು ಅನಸ್ತೇಸಿಯಾ ನಂತರ ಆಪರೇಷನ್ ಮಾಡಿ, ಮಗುವನ್ನು ಹೊರತೆಗೆದು ಡಿಎಂಸಿ ಮಾಡಿ ಬೇರೇ ರೂಮಿಗೆ ಶಿಫ್ಟ್ ಮಾಡಿದರು..
ಮರುದಿನ 6 ಘಂಟೆಗೆ ನರ್ಸ್ ಒಂದು ಡಿಪ್ ಹಾಕಿದರು ಎರಡು ಮಾತ್ರೆ ಕೊಟ್ಟು ಐದು ದಿನ ತೆಗೆದುಕೊಳ್ಳಲು ಹೇಳಿ ಬಂದದ್ದು ಮದ್ಯಾಹ್ನವೇ.. ಸಂಜೆ ವೇಳೆಗೆ ಡಿಸ್ಚಾರ್ಜ್ ಮಾಡುವೆ ಎಂದು ಹೇಳಿ ಹೋದರು.. ಸುರೇಶ್ ಆಸ್ಪತ್ರೆಯಿಂದ ಗೀತಾಳನ್ನು ಮನೆಗೆ ಕರೆದುಕೊಂಡು ಬಂದರು..
ಊಟ ಮಾಡುತ್ತಾ ಗೀತ ಕೇಳಿದಳು.. ಮಗು ಹೊಟ್ಟೆಯಲ್ಲಿ ಯಾಕೆ ಸತ್ತು ಹೋಯಿತು.. ಡಾಕ್ಟರ್ ಏನು ಹೇಳಿದರು..
ಸುರೇಶ್ ಗೀತಾಳಿ ಗೆ .. “ಡಾಕ್ಟರ್ ಅವರು ಬರೀ ಅವರ ಬಿಲ್ ಬಗ್ಗೆ ಮಾತ್ರ ವಿವರಿಸಿದರು..”
ಗೀತಾಳ ಕೈಯಲ್ಲಿ ಉಳಿದ ತುತ್ತು ಗಂಟಲಿಗಿಳಿಯಲಿಲ್ಲ..
ಪವನ ಕುಮಾರ ಕೆ ವಿ
ಬಳ್ಳಾರಿ – 9663346949