ಕೈರಾತಗಳು! – Malkohas

ಕೈರಾತ! ಇದು ಹಕ್ಕಿಯ ಕನ್ನಡದ್ದೇ ಹೆಸರಾದರೂ ಬಹುತೇಕರು ಕೇಳಿಲ್ಲ. ಇಂಗ್ಲಿಷಿನಲ್ಲಿ ಮಲ್ಕೊಹ (Malkoha) ಎನ್ನುತ್ತಾರೆ. ಹಿಂದೆ ನಾವು ಪರಪುಟ್ಟಹಕ್ಕಿ ಕೋಗಿಲೆ ಬಗ್ಗೆ ತಿಳಿದುಕೊಳ್ಳುವಾಗ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಪರತಂತ್ರಹಕ್ಕಿಗಳನ್ನು ಕುರಿತಾಗಿ ತಿಳಿದಿದ್ದೆವು. ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಡುವ ಕೋಗಿಲೆಯಂತಹ ಕುಕ್ಕು ಹಕ್ಕಿಗಳು ಪರತಂತ್ರಹಕ್ಕಿಗಳಾದರೆ, ಗೂಡು ಕಟ್ಟುವ ಕೈರಾತಗಳು ಪರತಂತ್ರವಲ್ಲದ ಕುಕ್ಕು ಹಕ್ಕಿಗಳು.

ಚಿತ್ರ ಕೃಪೆ : ಸಿ ಎಸ್ ಶ್ರೀವಾತ್ಸವ

ದಕ್ಷಿಣ ಏಷ್ಯಾದಲ್ಲಿ ನಾಲ್ಕು ಬಗೆಯ ಕೈರಾತಗಳು ಕಂಡುಬರುತ್ತವೆ. ಕೆಂಗಂದು ಕೈರಾತ (ಸಿರ್‍ಕೀರ್ ಮಲ್ಕೋಹ, Sirkeer Malkoha Taccocua leschenaultii ) ಹೊರತುಪಡಿಸಿ ಉಳಿದವು ಮರವಾಸಿಗಳು. ಉದ್ದವಾದ, ಬಿಳಿತುದಿಯ ಬಾಲವುಳ್ಳ ಹಕ್ಕಿಗಳು. ಎಲ್ಲವೂ ಹಾರುವುದರಲ್ಲಿ ಆಲಸ್ಯ ತೋರಿಸುವಂತಹ ಹಕ್ಕಿಗಳು. ಕೆಂಗಂದು ಕೈರಾತದ ಹಾರಾಟ ಪೊದೆ, ಸೊಪ್ಪುಸದೆಗಳ ನಡುವೆ ತೂರಿಕೊಂಡು ಹೋಗುವಂತೆ ಕಾಣುತ್ತದೆ. ಕೈರಾತ ಹಕ್ಕಿಗಳಲ್ಲಿ ಇದರ ಕೊಕ್ಕು ಮಾತ್ರ ಕೆಂಪು. ಉಳಿದ ಕೈರಾತಗಳಿಗೆ ಹಸಿರು ಅಥವಾ ತಿಳಿಹಸಿರು ಕೊಕ್ಕು ಇರುತ್ತದೆ. ಇದು ದಖನ್‍ಪ್ರಸ್ಥಭೂಮಿ ಈಶಾನ್ಯರಾಜ್ಯಗಳು ಹಾಗೂ ಹಿಮಾಲಯದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಪಾಕಿಸ್ಥಾನದ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲೂ ಉಂಟು.

ಚಿತ್ರ ಕೃಪೆ : ಜಿ ಎಸ್ ಶ್ರೀನಾಥ

ನೀಲಿ ಮುಖದ ಕೈರಾತ (Blue-faced Malkoha Phaenicophaeus viridirostris) ಕರ್ನಾಟಕದಲ್ಲಿ ಕಂಡುಬರುವ ಮತ್ತೊಂದು ಕೈರಾತ. ಇದು ಆಂಶಿಕವಾಗಿ ಫಲಾಹಾರಿ ಹಕ್ಕಿ. ಉಳಿದಂತೆ ಕೀಟಗಳು, ಕಂಬಳಿಹುಳುಗಳು, ಹಲ್ಲಿಗಳು ಮತ್ತು ಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಇದು ಗುಜರಾತ್, ಮಹಾರಾಷ್ಟ್ರ, ದಕ್ಷಿಣ ಭಾರತ, ಒಡಿಶಾ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.

ಕೆಂಗಂದು ಕೈರಾತ ತಲೆ ಮತ್ತು ಬಾಲವನ್ನು ಸಮಾನಾಂತರವಾಗಿಟ್ಟುಕೊಂಡು ಓಡಾಡುವುದುಂಟು. ಒಂದು ಹಕ್ಕಿಯ ಸುತ್ತ ವೃತ್ತಾಕಾರದಲ್ಲಿ ಇನ್ನೊಂದು ಸುತ್ತುವುದೂ ಉಂಟು!

ಇಂತಹ ವಿಶಿಷ್ಟವಾದ ಹಕ್ಕಿಗಾಗಿ ಹುಡುಕಾಡಿ, ಕಂಡರೆ ksn.bird@gmail.com ಮೇಲ್ ಐಡಿ ಗೆ ಬರೆದು ತಿಳಿಸಿ ಅಥವಾ ಕಾಮೆಂಟ್ ಮಾಡಿ.

ಕಲ್ಗುಂಡಿ ನವೀನ್

ಚಿತ್ರ ಕೃಪೆ : ಜಿ ಎಸ್ ಶ್ರೀನಾಥ, ಸಿ ಎಸ್ ಶ್ರೀವಾತ್ಸವ ಮತ್ತು ಸ್ಕಂದ ಶ್ಯಾಮ್ ಸುಂದರ್

Related post

Leave a Reply

Your email address will not be published. Required fields are marked *