ಕೊಡಗಿನ ದೇಸಿ ಹಬ್ಬದಲ್ಲಿನ ಮುಖವರ್ಣಿಕೆಗಳು

ಕುಂಡೆ ಹಬ್ಬ ಹಾಗು ಬೋಡುನಮ್ಮೆ” ಇವು ಕೊಡಗು ಮತ್ತು ಗೊಡಗಿನ ಸುತ್ತಮುತ್ತಲ ಪರಿಸರದಲ್ಲಿ ನಡೆಯುವ ಸ್ಥಳೀಯ ಪಾರಂಪರಿಕ ಹಬ್ಬವಾಗಿದೆ. ಮೂಲತಃ ಕೇರಳದಿಂದ ಈ ಹಬ್ಬ ಬಂದಿದೆ ಎಂದು ನಂಬುವ ಈ ಮಂದಿಯು ತಮ್ಮ ಸಮುದಾಯಗಳನ್ನು ಈ ಕಾಡಿನಲ್ಲಿ ಇರುವ ಭದ್ರಕಾಳಿ ಮಾತೆಯೇ ಕರೆದುಕೊಂಡು ಬಂದಿದ್ದಾಳೆ ಎಂದು ನಂಬುತ್ತಾರೆ.

ಕುಂಡೆ ಹಬ್ಬ ಹಾಗು ಬಹುವೇಷಿಗಳು:

ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಈ ಹಬ್ಬವನ್ನು ಕೆಲವರು “ಕುಂಡೇ ಹಬ್ಬ” ಎಂದು ಕರೆಯುತ್ತಾರೆ. ಈ ಹಬ್ಬದ ದಿನದಂದು ದಾರಿಯಲ್ಲಿ ಸಿಕ್ಕವರಿಗೆಲ್ಲಾ ಅಶ್ಲೀಲ ಪದಗಳಿಂದ ಬೈಯ್ಯುತ್ತಾ ಹಣ ವಸೂಲಿ ಮಾಡುವುದರಿಂದ ಕೆಲವರು “ಬೈಗುಳದ ಹಬ್ಬ” ಎಂದೂ ಕೆರಯುತ್ತಾರೆ. ಕೊಡಗಿನಲ್ಲಿ ನೆಲೆಸಿರುವ ಜೇನುಕುರುಬ ಬುಡಕಟ್ಟು ಜನಾಂಗದ ಸಮುದಾಯವು ತಮ್ಮ ಜನಾಂಗ ಆಚರಿಸುವ ಸಂಭ್ರಮದ “ಕುಂಡೆ” ಹಬ್ಬಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಈ ವರ್ಷ ಯಾವ ರೀತಿಯ ವೇಷ ಹಾಕಬೇಕು? ಯಾರಿಗೆ ಬೈಯ್ಯ ಬೇಕು? ಹೇಗೆ ಹಣ ವಸೂಲಿ ಮಾಡಬೇಕೆಂಬುವುದರ ಬಗ್ಗೆ ಹಾಡಿಗಳಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ವೈಶಿಷ್ಟ್ಯಪೂರ್ಣವಾಗಿ ಕೊಡಗಿನಲ್ಲಿ ನಡೆಯುವ “ಕುಂಡೆ” ಹಬ್ಬ ಒಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹದೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅಂತಹ ವಿಚಿತ್ರ ಹಬ್ಬದ ಬಗ್ಗೆ ಎಂಥವರಿಗೂ ಕುತೂಹಲ ಮೂಡದೆ ಇರದು. ಬುಡಕಟ್ಟು ಜನಾಂಗದವರು ಆಚರಿಸುವ ಈ ಹಬ್ಬದ ಸಂಭ್ರಮವನ್ನು ನೋಡಬೇಕಾದರೆ ಕೊಡಗಿನ ಗೋಣಿಕೊಪ್ಪದಿಂದ ತಿತಿಮತಿಗೆ ತೆರಳುವ ರಸ್ತೆಯಲ್ಲಿ ಸಿಗುವ ದೇವರಪುರಕ್ಕೆ ಮೇ ತಿಂಗಳ ಕೊನೆಯ ವಾರದಲ್ಲಿ ಬರಬೇಕು.

‘ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ನಡೆಯುವ ಈ ಹಬ್ಬಕ್ಕೆ ಹುಣಸೂರು, ಗೋಣಿಕೊಪ್ಪ, ತಿತಿಮತಿ, ಪಾಲಿಬೆಟ್ಟ, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ ಮೊದಲಾದ ಕಡೆಗಳಿಂದ ಸಾವಿರಾರು ಜೇನುಕುರುಬ ಬುಡಕಟ್ಟು ಮಂದಿ ಅಗಮಿಸುತ್ತಾರೆ. ನೂರಾರು ಮಂದಿ ಒಂದೆಡೆ ವಿಚಿತ್ರ ವೇಷ ಹಾಕಿಕೊಂಡು ಮೈಗೆ ಬಣ್ಣ ಬಳಿದುಕೊಂಡು ತಗಡಿನ ಡಬ್ಬಾ, ಡೋಲು ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಬಾರಿಸುತ್ತ, ತಾಳ ಹಾಕುತ್ತ “ಕುಂಡೆ ಕುಂಡೆ ಕುಹೂ ಕುಹೂ” ಎಂದು ಬಯ್ಯುತ್ತಾ ಸಾಗುತ್ತಾರೆ. ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವ ಬುಡಕಟ್ಟು ಮಂದಿ ಮತ್ತು ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಹಬ್ಬದಲ್ಲಿ ಅಶ್ಲೀಲ ಪದಗಳನ್ನು ನುಡಿಯುತ್ತಾ…ಕುಂಡೇ…ಕುಂಡೇ…ಎನ್ನುತ್ತಾ ಮಹಿಳೆಯರ ಒಳಉಡುಪು ಸೇರಿದಂತೆ ವಿವಿಧ ಉಡುಪುಗಳನ್ನು ವಿಚಿತ್ರವಾಗಿ ಧರಿಸಿಕೊಂಡು, ಕೈಯ್ಯಲ್ಲಿ ಸೋರೆಕಾಯಿ ಬುರುಡೆ, ದೊಣ್ಣೆಗಳನ್ನು ಹಿಡಿದು ಕಂಠಪೂರ್ತಿ ಕುಡಿದು ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ, ದಾರಿಯಲ್ಲಿ ಸಿಕ್ಕವರನ್ನು ಅಡ್ಡ ಹಾಕಿ ಬೈದು ಹಣ ವಸೂಲಿ ಮಾಡಿ, ನಂತರ ತಾವು ಮಾಡಿದ್ದಕ್ಕೆ ಕ್ಷಮೆ ಕೇಳುವುದು ಈ ಹಬ್ಬದಲ್ಲಿ ಸಾಧಾರಣವಾಗಿ ಕಂಡುಬರುವ ದೃಶ್ಯವಾಗಿದೆ’.

ಹಬ್ಬದ ದಿನದಂದು ಮೈಗೆಲ್ಲಾ ಮಸಿ ಬಳಿದುಕೊಂಡು, ವಿಚಿತ್ರ ವೇಷ ಭೂಷಣಗಳನ್ನು ತೊಟ್ಟು ಮನೆಯಿಂದ ಹೊರಡುವ ವೇಷಧಾರಿಗಳು ದಾರಿಯುದ್ದಕ್ಕೂ ಎದುರಿಗೆ ಸಿಕ್ಕ ಜನರನ್ನು ಬೈಯ್ಯುತ್ತಲೇ ಸಾಗುತ್ತಾರೆ. ಅಷ್ಟೇ ಅಲ್ಲದೇ, ರಸ್ತೆಗಳಲ್ಲಿ ಸಾಗುವ ವಾಹನಗಳನ್ನು ಕೂಡ ತಡೆದು ಅವರಿಂದ ಹಣ ವಸೂಲಿ ಮಾಡುತ್ತಾರೆ. ಆ ದಿನ ತಾವು ಕೆಲಸ ಮಾಡುವ ತೋಟದ ಮಾಲೀಕರನ್ನು ಕೂಡ ಬಿಡದೆ ಬೈಯ್ಯುತ್ತಾರೆ. ಜೊತೆಗೆ ದೇವರಿಗೂ ಮನಬಂದಂತೆ ಬೈಯ್ಯುತ್ತಾರೆ. ಕೇಳಿದ ತಕ್ಷಣ ಹಣ ಕೊಟ್ಟರೆ “ಒಳ್ಳೆ ಕುಂಡೆ” ಎನ್ನುವ ವೇಷಧಾರಿಗಳು ಹಣ ಕೊಡದಿದ್ದರೆ “ಕೆಟ್ಟ ಕುಂಡೆ” ಎನ್ನುತ್ತಾ ಅವರನ್ನು ಸುತ್ತುವರಿದು ಅಶ್ಲೀಲ ಪದಗಳ ಮಳೆಗರೆಯುತ್ತಾ ಹಣ ವಸೂಲಿ ಮಾಡದೆ ಅಲ್ಲಿಂದ ಮುಂದಕ್ಕೆ ಕದಲುವುದಿಲ್ಲ. ಹೀಗೆ ಎಲ್ಲೆಡೆಯಿಂದ ಆಗಮಿಸುವ ವೇಷಧಾರಿಗಳು ಸಂಜೆ ವೇಳೆಗೆ ದೇವರಪುರದ ಅಯ್ಯಪ್ಪ ದೇವಾಲಯದಲ್ಲಿ ನೆರೆದು ಸಾಂಪ್ರದಾಯಿಕ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಇದೇ ಸಂದರ್ಭದಲ್ಲಿ ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆ ಹೊತ್ತ ಮಂದಿ ಈ ಕೀಲುಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಕುಂಡೆ ಹಬ್ಬದ ಸಂದರ್ಭದಲ್ಲಿ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಕುಂಡೆ ಹಬ್ಬದ ಆಚರಣೆಯ ಹಿನ್ನೆಲೆ

ದೇವರಪುರದಲ್ಲಿ ನಡೆಯುವ ಈ ಕುಂಡೆ ಹಬ್ಬಕ್ಕೆ ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು. ಇನ್ನು ಬುಡಕಟ್ಟು ಜನಾಂಗದ ವೇಷಧಾರಿಗಳು ದೇವರನ್ನು ಮನಬಂದಂತೆ ಬಯ್ಯುವುದಕ್ಕೆ ಕಾರಣವೇನು? ಕುಂಡೆ ಹಬ್ಬ ಎಂಬ ಹೆಸರು ಹೇಗೆ ಬಂತು ಎಂಬುವುದಕ್ಕೂ ಇಲ್ಲೊಂದು ದಂತ ಕಥೆ ಇದೆ.

‘ಒಂದಾನೊಂದು ಕಾಲದಲ್ಲಿ ಸ್ವಾಮಿ ಅಯ್ಯಪ್ಪನು ತಾನು ಬೇಟೆಯಾಡಲೆಂದು ಕೊಡಗಿನ ಬುಡಕಟ್ಟು ಜನಾಂಗದವರ ಜೇನುಕುರುಬರನ್ನು ತನ್ನ ಜೊತೆ ಕಾಡಿಗೆ ಕರೆದುಕೊಂಡು ಹೋಗಿದ್ದು, ಕಾಡನ್ನೆಲ್ಲಾ ಸುತ್ತಾಡಿ ಬೇಟೆಯಾಡಿದ ಬಳಿಕ ಜೇನುಕುರುಬ ಬುಡಕಟ್ಟು ಮಂದಿಯನ್ನು ಕಾಡಿನಲ್ಲಿಯೇ ಬಿಟ್ಟು, ಈಗ ಬರುತ್ತೇನೆ ಎಂದು ಹೇಳಿ ಹೋದ ಅಯ್ಯಪ್ಪ ಬಹಳ ಸಮಯವಾದರೂ ಬರಲಿಲ್ಲವಂತೆ. ಅಯ್ಯಪ್ಪನನ್ನು ಕಾದು ಸುಸ್ತಾದ ಜೇನುಕುರುಬರು ಅಯ್ಯಪ್ಪ ಹೋದ ಹಾದಿಯಲ್ಲಿಯೇ ಆತನನ್ನು ಹುಡುಕುತ್ತಾ ಇವರೂ ಹೋದರಂತೆ. ಹೀಗೆ ಹೋದ ಬುಡಕಟ್ಟು ಮಂದಿಯು ಅಯ್ಯಪ್ಪ ಭದ್ರಕಾಳಿಯೊಂದಿಗೆ ಸರಸವಾಡುತ್ತಿರುವುನ್ನು ಕಂಡು ಕೋಪಗೊಂಡರು. ಇದರಿಂದ ವಿಚಲಿತರಾಗಿ ಜೇನುಕುರುಬರು ಅಯ್ಯಪ್ಪನನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರು. ಓಡುತ್ತ ಹಿಂಬಾಲಿಸಿದ ಬುಡಕಟ್ಟು ಮಂದಿಗೆ ಅಯ್ಯಪ್ಪನು ತನ್ನ ಹಿಂಭಾಗದ ಪೃಷ್ಠ ತೋರಿಸುತ್ತ ಓಡಿದನಂತೆ. ಆ ಕಾರಣದಿಂದ ಕೊಡಗಿನ ಜೇನುಕುರುಬರು ಕುಂಡೇ… ಕುಂಡೇ… ಎಂದು ಹೀಯಾಳಿಸುವುದು ರೂಢಿಗೆ ಬಂತೆಂದು ಹೇಳಲಾಗುತ್ತಿದೆ.

ಕೆಲವು ವರ್ಷಗಳಿಂದ ಕುಂಡೆ ಹಬ್ಬ ಹಾದಿ ತಪ್ಪುತ್ತಿದ್ದು, ಹೆಂಡ ಕುಡಿದು ಕಂಡ ಕಂಡವರಿಂದ ಹಣ ವಸೂಲಿ ಹಾಗೂ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮದ್ಯವನ್ನು ನಿಷೇಧಿಸುವ, ಸಂಯಮ ಪಾಲಿಸುವ ಕಟ್ಟುನಿಟ್ಟು ಕ್ರಮಗಳನ್ನು ಪಾಲಿಸುವಂತೆ ಕೆಲವೊಂದು ನಿಯಂತ್ರಣವನ್ನು ಹೇರಿದೆ. ಗೋಣಿಕೊಪ್ಪ ವಿಭಾಗದಲ್ಲಿ ಮದ್ಯ ನಿಷೇಧಿಸಲಾಗಿದೆ. ಅಲ್ಲದೆ, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಬಲತ್ಕಾರವಾಗಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದೆ.

ಇದೇ ಹಬ್ಬದ ಸಂದರ್ಭದಲ್ಲಿ ನಡೆಯುವ ಕೀಲು ಕುದುರೆ ನೃತ್ಯದ ಹಿಂದೆಯೂ ಮತ್ತೊಂದು ಸ್ವಾರಸ್ಯಕರ ಕಥೆಯಿದೆ. ಅದೇನೆಂದರೆ ಅರ್ಜುನ ಮತ್ತು ಶಿವ ಕೇರಳದಿಂದ ಪುಲಪಳ್ಳಿ ಎಂಬಲ್ಲಿಗೆ ಹೋದಾಗ ಇಬ್ಬರು ನಪುಂಸಕರು ಸೀರೆಯುಟ್ಟು ಮೋಹಿನಿಯಾಗಿ ನರ್ತಿಸಿ ವಂಚಿಸಿದರಂತೆ. ಈ ಸಂದರ್ಭದಲ್ಲಿ ಕೋಪಗೊಂಡ ಶಿವ “ನೀವು ಕುದುರೆಯಾಗಿ” ಎಂದು ಶಾಪ ಹಾಕಿದನಂತೆ. ಆದುದರಿಂದ ಈ ಹಬ್ಬದಲ್ಲಿ ಕೀಲು ಕುದುರೆ ನೃತ್ಯ ಇಂದಿಗೂ ನಡೆದುಕೊಂಡು ಬರುತ್ತಿದೆ.’

ಕುಂಡೆ ಹಬ್ಬದ ಸಂದರ್ಭ ನಡೆಯುವ ಪೂಜಾ ಕಾರ್ಯಗಳಲ್ಲಿ ಇತರರು ಭಾಗವಹಿಸುತ್ತಾರೆಯಾದರೂ ಹಬ್ಬದ ಆಚರಣೆಯ ಬಹುಪಾಲು ಬುಡಕಟ್ಟು ಮಂದಿಗೆ ಮೀಸಲಾಗಿರುತ್ತದೆ. ಚಿತ್ರ ವಿಚಿತ್ರ ಉಡುಗೆ ತೊಡುಗೆಗಳನ್ನು ತೊಟ್ಟು ಕೈಯ್ಯಲ್ಲಿ ಬುರುಡೆ ಹಿಡಿದು ದೇವರಪುರದತ್ತ  ಹೊರಡುವ ವೇಷಧಾರಿಗಳ ಪೈಕಿ ಹೆಚ್ಚಿನವರು ವಸೂಲಿಯಾದ ಹಣದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಾ ದೇವಾಲಯವನ್ನು ತಲುಪುವ ಮುನ್ನವೇ ರಸ್ತೆ ಬದಿಯಲ್ಲೋ, ಚರಂಡಿಯಲ್ಲೋ ಬಿದ್ದು ಮೈ ಮರೆಯುತ್ತಾರೆ. ಹೆಂಡದ ನಶೆಯಿಳಿದ ಬಳಿಕ ಸಂಜೆ ಭದ್ರಕಾಳಿ ದೇವಾಲಯದತ್ತ ತೆರಳಿ ದೇವರಿಗೆ ಹಾಗೂ ಜನರಿಗೆ ಬೈದುದಕ್ಕೆ ತಪ್ಪಾಯಿತೆಂದೂ, ತಪ್ಪನ್ನು ಮನ್ನಿಸುವಂತೆಯೂ ಭದ್ರಕಾಳಿಯೊಂದಿಗೆ ಬೇಡಿಕೊಳ್ಳುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ತಾವು ಅನುಭವಿಸಿದ ಹಬ್ಬದ ಸಂಭ್ರಮವನ್ನು ಮೆಲುಕು ಹಾಕುತ್ತಾ ವೇಷಧಾರಿಗಳು ತಮ್ಮ ಮನೆಯ ಹಾದಿಹಿಡಿಯುತ್ತಾರೆ. ಅಲ್ಲಿಗೆ ಹಬ್ಬವೂ ಮುಗಿದು ಹೋಗುತ್ತದೆ.

ಬೋಡುನಮ್ಮೆ

ಸಮುದಾಯಗಳ ದೃಷ್ಟಿಯಿಂದ ಆಚರಣೆಯಲ್ಲಿ ತುಂಬಾ ವ್ಯತ್ಯಾಸವಿರುವುದನ್ನು ಕಾಣಬಹುದಾಗಿದೆ. ಇತ್ತ ಸಂಪೂರ್ಣ ಕಾಡುಜನರೂ ಅಲ್ಲದ ಅತ್ತ ಆಧುನಿಕ ಪಟ್ಟಣ ಜೀವನವೂ ಇಲ್ಲದ ಅತಂತ್ರದ ಜೀವನದ ವಿಧಾನ ಈ ಜೇನು ಕುರುಬರದ್ದು. ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಹಬ್ಬಗಳು ಕೇವಲ ಗುರುವಾರದ ದಿನದಂದೇ ನಡೆಯುತ್ತವೆ. ಇವು ಇತರೆ ಕಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಇಂತಹ ಹಬ್ಬಗಳ ಪೈಕಿ “ಬೋಡುನಮ್ಮೆ” ಹಬ್ಬವೂ ಒಂದಾಗಿದೆ. ಈ ಹಬ್ಬವನ್ನು ಜಿಲ್ಲೆಯಾದ್ಯಂತ ಮತ್ತು ಜಿಲ್ಲೆಯ ಸುತ್ತಲೂ ಇರುವ ಕೆಲವು ಗ್ರಾಮಗಳಲ್ಲಿ ಅದರಲ್ಲೂ ಭದ್ರಕಾಳಿ ದೇವಾಲಯವಿರುವ ಊರುಗಳಲ್ಲಿ ಮಾತ್ರ ಆಚರಿಸಲಾಗುತ್ತದೆ. ಬಂಡರ ಒಕ್ಕಲು, ಬೆಟ್ಟ ಕುರುಬರು, ಬಂಗಾರದ ಕುಡಿ, ಯರವರು ಮತ್ತು ತೆರಗೊಕ್ಕಲಿನವರು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆಗಾಗಿ ಸಿದ್ದಾಪುರ, ತಿತಿಮತಿ, ಗೋಣಿಕೊಪ್ಪ, ಮೂರ್ನಾಡು, ವೀರಾಜಪೇಟೆ, ಪಿರಿಯಾಪಟ್ಟಣ ಚೆಂಬೆಬೆಳ್ಳೂರು ಮತ್ತು ಹುಣಸೂರು ತಾಲ್ಲೂಕುಗಳಿಂದ ಜನರು ಬರುತ್ತಾರೆ. ಸಾಮಾನ್ಯವಾಗಿ ಗ್ರಾಮಕ್ಕೊಂದು ಭದ್ರಕಾಳಿ ದೇವಾಲಯವಿದ್ದು, ಈ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಬೋಡುನಮ್ಮೆ ಹಬ್ಬವನ್ನು ಆಚರಿಸಲಾಗುತ್ತದೆ.’  ಈ ದೇವಾಲಯಕ್ಕೆ ಹಬ್ಬದ ಸಂದರ್ಭದಲ್ಲಿ ಹೆಂಗಸರು ಹೋಗುವುದಿಲ್ಲ ಮತ್ತು ಇಡೀ ಸಮುದಾಯವು ಮಾಂಸಾಹಾರ, ಕೋಳಿಮೊಟ್ಟೆ, ಚಿಗುರು ಕಡಿಯುವುದು ಮಾಡದೆ ಬಹಳ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ.  ಈ ಸಮುದಾಯದವರು ಅಯ್ಯಪ್ಪನನ್ನೂ ಕೂಡ ಪೂಜೆ ಮಾಡುವ ಸಂಪ್ರದಾಯವಿದ್ದು ಆತನ ವಾಹನವಾದ ಕುದುರೆಯನ್ನು ಈ ಹಬ್ಬದ ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ಆ ಕುದುರೆಯನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ವಸ್ತುಗಳಿಂದ ಅಲಂಕರಿಸುತ್ತಾರೆ.

ಬೋಡುನಮ್ಮೆ ಆಚರಣೆ

ಪ್ರತಿವರ್ಷವೂ ಮಳೆಗಾಲಕ್ಕೆ ಮುನ್ನ ಏಪ್ರಿಲ್ ತಿಂಗಳಲ್ಲಿ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನ ಭದ್ರಕಾಳಿ ದೇವರ ಹಬ್ಬ ನಡೆಯುತ್ತದೆ. ಈ ವೇಳೆಯಲ್ಲಿ ನಡೆಯುವ ಬೋಡುಹಬ್ಬ ವಿಶಿಷ್ಟವಾಗಿದ್ದು, ಇದು ಪ್ರತಿ ವರ್ಷದ ಮೊದಲ ಬೋಡು ಹಬ್ಬವಾಗಿದೆ. ಹಬ್ಬದ ಮೊದಲ ದಿನ ಊರಿನವರೆಲ್ಲ ದೇವನೆಲೆಯಲ್ಲಿ ಸೇರಿ ಹಬ್ಬದ ಕಟ್ಟು ಹಾಕಲಾಗುತ್ತದೆ. ಇದನ್ನು ಊರಿನಲ್ಲಿ ಕಟ್ಟು ಬೀಳುವುದು ಎಂದು ಹೇಳಲಾಗುತ್ತದೆ. ಕಟ್ಟು ಬಿದ್ದ ಬಳಿಕ ಅಂದಿನಿಂದ ಹಬ್ಬ ಮುಗಿಯುವ ತನಕ ಊರನ್ನು ಬಿಟ್ಟು ಯಾರೂ ಹೊರಗೆ ಹೋಗುವ ಹಾಗಿಲ್ಲ ಹೊಸಬರೂ ಬರುವ ಹಾಗಿಲ್ಲ ಮಾಂಸ ಸೇವನೆ, ಮರ ಕಡಿಯುವುದು, ಇನ್ನಿತರ ಯಾವುದೇ ಕಾರ್ಯಗಳನ್ನು ಮಾಡುವಂತಿಲ್ಲ. ಈ ದಿನದಂದು ಊರಿನವರೆಲ್ಲ ಹಗಲು ಹೊತ್ತು ಅನ್ನ ಸೇವಿಸದೆ, ಗಡ್ಡೆ, ಗೆಣಸು, ಹಣ್ಣುಗಳಂಥ ಲಘು ಫಲಾಹಾರವನ್ನು ಮಾತ್ರ ಸೇವಿಸಿ, ರಾತ್ರಿ ಮಾತ್ರ ಅನ್ನ ಸೇವಿಸುತ್ತಾರೆ. ಜಾತಿ ಬೇಧಗಳನ್ನು ತೊರೆದು ದುಗುಡ ದುಮ್ಮಾನಗಳನ್ನು ಮರೆತು ಒಟ್ಟಿಗೆ ಕುಣಿದು ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ದಕ್ಷಿಣ ಕೊಡಗಿನ ಕೆಲವೆಡೆಗಳಲ್ಲಿ ಮುಂದುವರೆಯುತ್ತದೆ. ವಾರಗಳ ಕಾಲ ಹಬ್ಬದ ಆಚರಣೆ ನಡೆದು ಕೊನೆಯ ಎರಡು ದಿನಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಕಿರಾತ ವೇಷ

ವಾರಗಟ್ಟಲೆ ನಡೆಯುವ ಈ ಹಬ್ಬದ ಕೊನೆಯ ಎರಡು ದಿನಗಳು ಕಿರಾತ ವೇಷ ತೊಡುವ ಉತ್ಸವ ನಡೆಯುತ್ತದೆ. ಹಾಗೆ ನೋಡಿದರೆ ಈ ಆಚರಣೆಯಲ್ಲಿ ಒಂದಷ್ಟು ವಿಶೇಷತೆಗಳನ್ನು ಕಾಣಬಹುದಾಗಿದೆ. ಹಬ್ಬದ ಸಂಪ್ರದಾಯತೆ ಹರಕೆ ಹೊತ್ತವರು ವಿವಿಧ ವೇಷ ಭೂಷಣ ಧರಿಸಿ ಕೆಸರು ಮೈಗೆ ಹಚ್ಚಿಕೊಂಡು, ಹುಲ್ಲನ್ನು ಮೈಗೆ ಕಟ್ಟಿಕೊಂಡು, ಮುಖಕ್ಕೆ ಮುಖವಾಡ ಧರಿಸಿಕೊಂಡು, ಪೌರಾಣಿಕ ಪಾತ್ರ, ಬೇಟೆಗಾರರ ವೇಷ, ಬಣ್ಣ ಬಣ್ಣದ ಕೂದಲು, ವಿಧ ವಿಧವಾದ ಮುಖವರ್ಣಿಕೆಗಳನ್ನು ಮಾಡಿ ಅಲಂಕರಿಸಿಕೊಂಡು ಕುಣಿದು ಕುಪ್ಪಳಿಸುತ್ತಾ ತಮ್ಮ ಹರಕೆ ತೀರಿಸುತ್ತಾರೆ. ಇವರೆಲ್ಲರೂ ‘ಕಿರಾತ ವೇಷ’ ದಲ್ಲಿ ಸ್ಥಿತಿವಂತರ ಮನೆಗೆ ಹೋಗಿ ಅವರು ನೀಡಿದ್ದನ್ನು ಬೇಡಿ ತಂದು ಅದರಲ್ಲಿ ಶೇಕಡ ಹತ್ತರಷ್ಟು ಹಣವನ್ನು ಭದ್ರಕಾಳಿ ಮಾತೆಗೆ ಸಮರ್ಪಿಸುತ್ತಾರೆ. ಇದರೊಂದಿಗೆ ಈ ವೇಳೆ ಹುಲಿ ವೇಷವನ್ನು ಧರಿಸಿ ನೃತ್ಯಮಾಡುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಇದೊಂದು ಸಂಪ್ರದಾಯವಾದರೆ ಇಲ್ಲಿ ಹರಕೆಯಾಗಿದೆ ಅದಕ್ಕಾಗಿ ಇವರೆಲ್ಲರೂ ಹಬ್ಬದ ದಿನ ಹಬ್ಬ ನಡೆಯುವ ದೇವಾಲಯದ ದೇವನೆಲೆಯಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಚಂಡೆ ಮತ್ತು ಓಲಗಕ್ಕೆ ಹೆಜ್ಜೆ ಹಾಕುತ್ತಾ ದೇವನೆಲೆಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಪಾಲ್ಗೊಳ್ಳುತ್ತಾರೆ. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಸಾಂಪ್ರದಾಯಿಕ ವಾದ್ಯಗಳ ಜೊತೆಗೆ ಪ್ಲಾಸಿಕ್ ಕ್ಯಾನ್, ಪ್ಲಾಸ್ಟಿಕ್ ಡ್ರಮ್, ತಗಡಿನ ಡಬ್ಬ, ಮುಚ್ಚಳಗಳನ್ನು ಕೂಡ ವಾದ್ಯಗಳಾಗಿ ಬಳಸುತ್ತಾರೆ. ಈ ಸಂದರ್ಭದಲ್ಲಿ ಇವರೆಲ್ಲರೂ ತಮ್ಮದೇ ಆದ ದೇಸೀ ಹಾಡುಗಳನ್ನು ಹಾಡುತ್ತಿರುತ್ತಾರೆ. ಈ ಹಾಡುಗಳು ಗೋವಾ ಪ್ರಾಂತ್ಯದ ಹಾಡುಗಳ ರೀತಿಯಲ್ಲಿ ಇದ್ದು ಆಂಗ್ಲ ಪದಜಾಲವೂ ಹಾಡುಗಳಲ್ಲಿ ಹೊಂದಿರುತ್ತವೆ. ಇಲ್ಲಿ ಉಮ್ಮತ್ತಾಟ್ಟು ಮತ್ತು ಕುಂಡೇಪಟ್ಟು ನೃತ್ಯಗಳು ಕೂಡ ಮೇಳೈಸಿರುತ್ತವೆ. ಈ ಹಬ್ಬವು ಭದ್ರಕಾಳಿಗೆ ಅರ್ಪಿತವಾಗಿದ್ದು ದೇವಾಲಯದ ಆವರಣದಲ್ಲಿ ವರ್ಣರಂಜಿತವಾಗಿ ಆಚರಣೆ ಮಾಡುತ್ತಾರೆ.

ಟಿ. ಲಕ್ಷ್ಮೀ ನಾರಾಯಣ
ಚಿತ್ರಕಲಾವಿದರು ಮತ್ತು ಬರಹಗಾರರು

ಚಿತ್ರ ಹಾಗು ವಿಡಿಯೋ ಕೃಪೆ: ಗೂಗಲ್ ಅಂತರ್ಜಾಲ ಹಾಗು ವಾಟ್ಸಪ್

Related post

Leave a Reply

Your email address will not be published. Required fields are marked *