ಕೊನೆಗೂ ಅರ್ಥವಾಗದವಳು

ಅವಳ ನಾಲಿಗೆಗಿಂತ ಅವಳ ಮುಂಗುರುಳೇ ಹೆಚ್ಚು ಮಾತನಾಡುತ್ತವೆ!ಏಕೆಂದರೆ, ಅವಳು ಮಾತನಾಡುವಾಗ ಹಾರಾಡುವ ಮುಂಗುರುಳು,ಫಳ-ಫಳ ಹೊಳೆಯುವ ಕಣ್ಞುಗಳು,ಅತೀ ಕೋಮಲವಾಗಿ ಹೊರಡುವ ಧ್ವನಿ, ಎಲ್ಲದರಲ್ಲಿಯೂ ಸಮ್ಮೋಹನ ಶಕ್ತಿ ಕಾಣದಿರಲಾರದು.

ನನ್ನ ಅವಳ ಪರಿಚಯ ಅತೀ ಹಳೆಯದಾದರೂ,ಪರಿಚಯವಾದಾಗಿನಿಂದ ಪ್ರಶ್ನೆಯಾಗಿಯೇ ಕಾಡುತ್ತಿದ್ದಾಳೆ!ಅವಳು ” ಹೀಗೇ” ಎಂದು ಹೇಳುವುದು ನನ್ನಿಂದ ಮಾತ್ರವಲ್ಲ, ಅವಳನ್ನು ಹತ್ತಿರದಿಂದ ಬಲ್ಲ ಯಾರಿಗೂ ಸಾಧ್ಯವಾಗಿಲ್ಲ.ಬಹುಶಃ ಸಾದ್ಯವಾಗಲಿಕ್ಕೂ ಇಲ್ಲ!

” ವಿವೇಕಶೂನ್ಯ ಆಲೋಚನೆಗಳೆಲ್ಲವೂ ನಮ್ಮ ದುಃಖಕ್ಕೆ ಕಾರಣ” ಎಂಬ ನಿಲುವಿನ ಅವಳು, ಪಿರಿಯಡ್ ಇದ್ದಾಗ ಮಾತ್ರ ಕ್ಲಾಸಿಗೆ ಹೋಗುತ್ತಾಳೆ.ಬಾಕೀ ಸಮಯವನ್ನೆಲ್ಲಾ ಅಕ್ಕಮಹದೇವಿ,ವಿವೇಕಾನಂದ ಮುಂತಾದವರ ಜೀವನ ಅಧ್ಯಯನದಲ್ಲಿ ಕಳೆಯುವ ಅವಳು,ಅವರ ಜೀವನದಲ್ಲಿ ತನ್ನನ್ನೇ ಕಾಣ ಬಯಸುವಂತೆ ಕೆಲಕಾಲ ಮೌನವಾಗಿಯೇ ಇರುವಂತೆ ಕಾಣುತ್ತಾಳೆ.ಜೀವನದ ಬಗ್ಗೆ ಅವಳು ಕೊಡುವ ಅರ್ಥ,ವಿಚಾರ,ಅನಿಸಿಕೆ,ಭಾವೀ ಜೀವನದ ಬಗ್ಗೆ ಅವಳು ತಳೆದ ಧೋರಣೆ,ಪಾಠ ಹೇಳುವ ವೈಖರಿ,ಮಕ್ಕಳ ಮನ ಗೆಲ್ಲುವ ರೀತಿ ಎಲ್ಲದರಲ್ಲಿಯೂ, ತನ್ನದೇ ಆದ ವಿಶೇಷತೆ ಕಾಯ್ದುಕೊಂಡಿದ್ದು, ಅವುಗಳನ್ನು ಬೆಳೆಸಿಕೊಂಡು ಉಳಿಸಿಕೊಂಡು ಹೋಗುವ ಹಂಬಲ ಎದ್ದು ಕಾಣುತ್ತದೆ.

ಇಪ್ಪತ್ತೈದರ ಹರೆಯದ ಬದುಕಿನಲ್ಲಿ ತಳೆದ ಈ ವಿಶೇಷ ನಿಲುವನ್ನು ಕಂಡು, ನಾನು ಎಷ್ಟೋ ಸಾರಿ ಮೂಕನಾದ ಅನುಭವ ಇನ್ನೂ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ! ಅವಳಿಗಿರುವ ಹವ್ಯಾಸವೆಂದರೆ ತನ್ನ ಆತ್ಮೀಯರಿಗೆಲ್ಲಾ ಆಧ್ಯಾತ್ಮ ಭಾವ ತುಂಬಿ ಗಂಟೆಗಟ್ಟಲೇ ಪುಟಗಟ್ಟಲೇ ಪತ್ರ ಬರೆಯುವುದು.ಖಾಲೀ ಹಾಳೆ ಸಿಕ್ಕಲ್ಲಿ ಜೀವನದ ಬಗ್ಗೆ ಕವನ ಗೀಚುವುದು.

ಭಾವನಾ ಎಂದು ಹೆಸರಿಟ್ಟುಕೊಂಡ ಅವಳು, ಒಂದರ್ಥದಲ್ಲಿ ಭಾವಜೀವಿಯೇ ಸರಿ.ಅವಳು ಮಾತನಾಡುವುದೇ ವಿರಳ.ಒಮ್ಮೊಮ್ಮೆ ಮಾತಿಗಿಳಿದರೆ ಇಡೀ ಸ್ಟಾಪ್ ರೂಂ ಅಷ್ಟೇ ಅಲ್ಲ, ಪ್ರಿನ್ಸಿಪಾಲರನ್ನೂ ಬಾಯಿ ಮುಚ್ಚುವಂತೆ ಮಾಡಿದ್ದೂ ನನಗೆ ನೆನಪಿದೆ.ಅವಳಿಗೆ ಕೋಪ ಬಂದಾಗಲಂತೂ ಇಡೀ ಸ್ಟಾಪ್ ರೂಂ ಶಾಂತಿಧಾಮವಾಗುತ್ತಿತ್ತು! ಅದೊಂದು ದಿನ ” ಹೆಣ್ಣು ಅಬಲೆ” ಎಂದು ವಾದ ಮಂಡಿಸಲು ನಿಂತ ನನಗೆ ,ಅವಳು ಬಿಡಿಸದ ಸವಾಲ್ ಆದಳು.ಎಂದೂ ವಾದ ವಿವಾದದಲ್ಲಿ ಸೋಲು ಕಾಣದ ನಾನು, ಅಂದು ಸೋಲನ್ನೊಪ್ಪಿಕೊಂಡು ವೇದಿಕೆಯಿಂದ ಕೆಳಗಿಳಿದಿದ್ದೆ! ಹೆಣ್ಣು ಅಬಲೆಯಲ್ಲ ಎಂದು ವಾದ ಮಂಡಿಸಿದ ಅವಳು, ಸಹೋದ್ಯೋಗಿ ಮಿತ್ರರಿಂದ ಚಪ್ಪಾಳೆಗಿಟ್ಟಿಸಿಕೊಂಡಳು.ಆಗ ಅವಳ ಮುಖ ನೋಡಬೇಕಿತ್ತು!

ವಿಶ್ವಾಸ ಎಂಬುದು ವಿಷದ ಬಾಟಲು ಎನ್ನುತ್ತಿದ್ದ ಭಾವನಾ,ಪ್ರೀತಿ ಪ್ರೇಮದಂತಹ ಆಡಂಬರಗಳಿಗೆ ಸಿಲುಕಲಾರದ ಹೆಣ್ಣೆಂದು ಅವಳನ್ನು ನೋಡಿದ ಯಾರಿಗಾದರೂ ಅನ್ನಿಸುತ್ತಿತ್ತು.ಎಷ್ಟೋ ಸಾರಿ ಅವಳ ಮನ ಪರಿವರ್ತನೆ ಮಾಡಬೇಕೆಂದು ಪ್ರೇಮಪ್ರಧಾನ ಕಾದಂಬರಿಗಳನ್ನು ಓದಲು ಕೊಡ ಹೋಗಿ, ಅವಳು ತಿರಸ್ಕರಿಸಿದಾಗ ನಾನು ತಲೆ ತಗ್ಗಿಸಿಕೊಂಡು ಬಂದಿದ್ದೆ!

***

ಹೀಗೆ ಯಾರ ಬಲೆಗೂ ಬೀಳದ ಭಾವನಾ,ನೂತನವಾಗಿ ಆಗಮಿಸಿದ ಇಂಗ್ಲೀಷ್ ಫ್ರೊಫೆಸರ್ ಸಂತೋಷನ ಬೆನ್ನಿಗೆ ಬೀಳುವಂತೆ ಕಂಡಳು! ಬೆಳಗಿನ ತಂಗಾಳಿಗೆ ಸಸಿಯು ತಲೆ ಹಾಕುವಂತೆ, ಅವಳೂ ಸಂತೋಷನ ಮಾತಿಗೆ ತಲೆಹಾಕತೊಡಗಿದಳು.ಮೊದಮೊದಲು ನಂಬದಿದ್ದ ನಾನು,ಕ್ರಮೇಣ ಅವರಿಬ್ಬರ ವರ್ತನೆ ಕಂಡು ಅನಿವಾರ್ಯ ವಾಗಿ ನಂಬಲೇ ಬೇಕಾಯ್ತು.ಸಂತೋಷನಿಗೆ ನಾನು ಮನದಲ್ಲೇ ಹಾರೈಸಿದ್ದೆ.ಏಕೆಂದರೆ ಭಾವನಾಳನ್ನು ಬದಲಿಸುವ ಗಂಡು ಈ ಭೂಮಿ ಮೇಲೆ ಹುಟ್ಟುವುದೇ ಇಲ್ಲವೆಂದು ನಾನಂದುಕೊಂಡಿದ್ದೆ!

ಅವಳ ಸಲುಗೆಯ ಸ್ನೇಹದಿಂದ ಪುಳಕಿತಗೊಂಡ ಸಂತೋಷ್, ಅದೊಂದು ದಿನ ಅವಳಿಗೊಂದು ಪ್ರೇಮ ಪತ್ರ ಬರೆದು ಕೊಟ್ಟಿದ್ದ.ಅದನ್ನು ಓದಿದ ಭಾವನಾ, ಮಿಸ್ಟರ್ ಸಂತೋಷ್ ಇದಕ್ಕೆ ನನ್ನ ಉತ್ತರ ಶೂನ್ಯ.ದಯವಿಟ್ಟು ಇದನ್ನು ಅಗ್ನಿಗಾಹುತಿ ಮಾಡಿಬಿಡಿ ಎಂದು ಹಿಂತಿರುಗಿಸಿದ್ದಳು.

ಸಂತೋಷ್- ಭಾವನಾರ ಸ್ನೇಹವನ್ನು ತಪ್ಪಾಗಿ ತಿಳಿದುಕೊಂಡವರಿಗೆಲ್ಲಾ ಅಂದು ಬೆವರಿಳಿದು ಹೋಗಿತ್ತು, ನನಗೂ ಕೂಡ! ಜೀವನದ ಒಂದೊಂದು ಕ್ಷಣವನ್ನೂ ಆನಂದವಾಗಿ, ರಸಿಕತೆಯಲ್ಲಿ ಕಳೆಯಬೇಕಾದ ಪ್ರಾಯದಲ್ಲೂ ಅವಳು ನಿಂತ ನೀರಾಗಿದ್ದಳು, ತಟಸ್ಥವಾಗಿದ್ದಳು.ಸಂತೋಷನ ಸಲಿಗೆಯ ಸ್ನೇಹ ಕೂಡ ಅವಳ ಬಾಳಿಗೆ ಪ್ರೀತಿ- ಪ್ರೇಮವನ್ನು ನೀಡುವಲ್ಲಿ ಸಫಲವಾಗಲಿಲ್ಲ! ಹಾಗೆಂದು ಅವಳು ಸಂತೋಷನ ಸ್ನೇಹವನ್ನು ಕಳೆದು ಕೊಳ್ಳಲೂ ಬಯಸುತ್ತಿರಲಿಲ್ಲ.ಅವಳು ಬಯಸುತ್ತಿದ್ದುದು ಪವಿತ್ರ ಸ್ನೇಹವನ್ನಷ್ಟೇ!

” ಸಂತೋಷ್, ನಿಮ್ಮ ಮಟ್ಟಕ್ಕೆ ಏರದೇ ನಾನು, ನಿಮ್ಮನ್ನು ನಿರಾಸೆಗೊಳಿಸಿರಬಹುದು,ನನ್ನನ್ನು ಕ್ಷಮಿಸಿ.ನಾನು ನಿಮ್ಮಲ್ಲಿರುವ ಮುಗ್ಧತೆಗೆ ಶರಣಾಗಿ ನಿಮ್ಮ ಸ್ನೇಹ ಬಯಸಿದ್ದೇನೆ.ನನಗೆ ಪ್ರೇಮ ಕಾಮದ ಹಸಿವಿಲ್ಲ.ನನಗಿರುವುದು ಜ್ಞಾನದ ಹಸಿವು.ಜೀವನಪೂರ್ತಿ ನಾನು ಜೀವನಕ್ಕೆ ಅರ್ಥವನ್ನು ಹುಡುಕಬಯಸುತ್ತೇನೆ.ನಾವಿಬ್ಬರೂ ಪವಿತ್ರ ಸ್ನೇಹಕ್ಕೆ ಉದಾಹರಣೆಯಾಗಿರೋಣ” ಎಂದು ಹೇಳುತ್ತಿರುವುದನ್ನು ಕೇಳಿ,ಅವಳ ಬಗ್ಗೆ ನಾನು ಇನ್ನೂ ಗೌರವ ಭಾವನೆ ತಳೆದಿದ್ದೆ!ಸಂತೋಷ್ ಮಾತ್ರ ಮುಂದೆ ಒಂದೇ ವಾರದಲ್ಲಿ ವರ್ಗಾಯಿಸಿಕೊಂಡು,ಅವಳಿಂದ ದೂರ ಹೋದ.ಅವನ ಅಗಲುವಿಕೆ, ಭಾವನಾಳ ಹೃದಯದ ಯಾವ ಮೂಲೆಯನ್ನೂ ಕಲುಕಲಿಲ್ಲ ಕದಡಲಿಲ್ಲ!

***

ಅದೊಂದು ದಿನ ……….

ಬೆಂಗಳೂರಿನಲ್ಲಿದ್ದ ನನ್ನ ಸ್ನೇಹಿತ ಭಾಸ್ಕರ್ ಇಂಗ್ಲೀಷ್ ಪ್ರೊಫೆಸರ್ ಆಗಿ ನಮ್ಮ ಕಾಲೇಜಿಗೆ ಬಂದ.ಅಷ್ಠೇನೂ ಸುಂದರನಲ್ದ ಆತ, ಸಾಕಷ್ಟು ಪ್ರತಿಭಾವಂತ.ಇಂಗ್ಲೀಷ್ ನ್ನು ನಿರರ್ಗಳವಾಗಿ ನೀರು ಕುಡಿದಂತೆ ಮಾತನಾಡುವ ಆತನನ್ನು ಕಂಡಾಗಲೆಲ್ಲಾ,ನನ್ನ ಹಿಂದಿ ಆತನೆದುರು ಬಿಚ್ಚಿಕೊಳ್ಳಲು ಹಿಂಜರಿಯುತ್ತಿತ್ತು! ಸದಾ ಸಂದರ್ಶನ, ನಾಟಕ,ವ್ಯಂಗ್ಯಚಿತ್ರ, ಎಂದು ತಿರುಗಾಡುತ್ತಿದ್ದ ಭಾಸ್ಕರನಿಗೆ ಬೆಳ್ಳಿ ತೆರೆಯ ನಟ-ನಟಿಯರೆಲ್ಲ ಆತ್ಮೀಯರಾಗಿದ್ದರು.ಆತನ ಎಷ್ಟೋ ಸಂದರ್ಶನ,ಕತೆ,ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು,ರೇಡಿಯೋದಲ್ಲಿ ಪ್ರಸಾರವಾಗಿದ್ದವು.

ಸ್ಟಾಪ್ ರೂಂ ನಲ್ಲಿ ಎಲ್ಲರ ಪರಿಚಯ ಮಾಡಿ ಮುಗಿದ ನಂತರ ಭಾವನಾ ಮೇಡಂ ಹತ್ತಿರ ಭಾಸ್ಕರನನ್ನು ಕರೆದುಕೊಂಡು ಹೋಗಿ ” ಮೇಡಂ,ಈತ ನನ್ನ ಸ್ನೇಹಿತ ಭಾಸ್ಕರ್, ಇಂಗ್ಲಿಷ್ ಪ್ರೊಫೆಸರ್. ಟ್ರಾನ್ಸಫರ್ ಆಗಿ ಇಲ್ಲಿಗೆ ಬಂದಿದ್ದಾನೆ.ತುಂಬಾ ಬ್ರಿಲಿಯಂಟ್ ಪರ್ಸನ್.ಅಷ್ಟೇ ಅಲ್ಲ ಪಕ್ಕಾ ಕನ್ನಡ ಸಾಹಿತಿ ಕೂಡ” ಎಂದು ಪರಿಚಯಿಸಿದೆ.

ಭಾವನಾ ತನ್ನ ಎರಡೂ ಕೈ ಜೋಡಿಸುತ್ತ ” ನನ್ನ ಹೆಸರು ಭಾವನಾ, ಇಲ್ಲಿ ಇತಿಹಾಸ ನನ್ನ ವಿಷಯ.ನಿಮ್ಮಂತಹ ಬ್ರಿಲಿಯಂಟ್ ಪರ್ಸನಾಲಿಟಿ ಇರೋರು ನಮ್ಮಲ್ಲಿಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ” ಎಂದಳು.

ಪ್ರಥಮ ಭೇಟಿಯಲ್ಲಿಯೇ ಭಾವನಾ, ಭಾಸ್ಕರನಿಗೆ ದೇವಿಯಾಗಿ ಕಂಡಳು.ಸುಂದರ ಕಣ್ಣಿನ ಹುಡುಗಿಯರ ಸ್ನೇಹವನ್ನು ಅತಿಯಾಗಿ ಬಯಸುತ್ತಿದ್ದ ಅವನಿಗೆ,ಅವಳನ್ನು ಕಂಡು ಗೌರವ ಮೂಡಿತು! ಹರ್ಷದಿಂದ ತಾನು ಬರೆದ ಸಾಹಿತ್ಯವನ್ನೆಲ್ಲ ಕ್ರಮೇಣ ಅವಳಿಗೆ ಪರಿಚಯಿಸಿದ.ಎಷ್ಟೋ ಸಾರಿ ಕಾರ್ಯಕ್ರಮವಿದ್ದಾಗ ಭಾವನಾಳ ಮೇಲೆಯೇ ತನ್ನ ಭಾವನೆಗಳನ್ನು ಹರಿಬಿಟ್ಟು ಕವನ ಬರೆದು ಹಾಡಿದ! ಭಾಸ್ಕರನ ಆಗಾಧ ಪ್ರತಿಭೆ ಕಂಡು ಭಾವನಾಳಲ್ಲಿ ಅಭಿಮಾನ ಮೂಡಿತು. ಆತನಿಂದ ತಾನೂ ಕಲಿಯ ಬೇಕೆಂಬ ಹಂಬಲ ಅವಳಲ್ಲಿ ಮೂಡಿತು.ಆದರೆ ಭಾವನಾಳನ್ನು ಮೈಗೂಡಿಕೊಂಡಿದ್ದ ಗಂಭೀರತನ, ಆಧ್ಯಾತ್ಮಿಕ ವಿಚಾರಗಳು, ಭಾಸ್ಕರನ ಮುಗುಳು ನಗೆಯಲ್ಲಿ ಅರಳುವ ಕುಡಿ ಮೀಸೆಯನ್ನು ಕಂಡಾಗಲೆಲ್ಲ ,ಕರಗಿ ಕಡಿಮೆಯಾದ ಅನುಭವವಾಗಹತ್ತಿತು ಅವಳಿಗೆ!

ಶ್ರಾವಣ ಮಾಸದ ಆಗಮನದಿಂದ ಮಾವು ಚಿಗುರುವಂತೆ, ಕೋಗಿಲೆ ಹಾಡುವಂತೆ ,ಭಾವನಾಳ ಬಾಳಿನಲ್ಲಿ ಭಾಸ್ಕರನ ಆಗಮನದಿಂದ ನವೀನ ಬದಲಾವಣೆ ಕಂಡುಬರತೊಡಗಿತು!ಮೊದಲು ಪ್ರೀತಿ- ಪ್ರೇಮವನ್ನು ಆಡಂಬರ ಎನ್ನುತ್ತಿದ್ದ ಅವಳು,ಈಗ ಜೀವನದಲ್ಲಿ ಅನಿವಾರ್ಯ ಎಂಬಂತೆ ಒಪ್ಪಿಕೊಂಡ ಹಾಗೆ ಕಂಡಳು.ಈಗೀಗ ನನ್ನಿಂದಲೇ ಕಾದಂಬರಿ ಕೇಳಿ ಓದುವಷ್ಟು ಬದಲಾದಳು. ಈ ಪರಿವರ್ತನೆ ಕಂಡು ಸಹೋದ್ಯೋಗಿ ಮಿತ್ರರಿಗೆಲ್ಲ ಒಂದು ರೀತಿ ಆಶ್ಚರ್ಯವಾದರೆ, ಹೊಟ್ಟೆ ಕಿಚ್ಚೂ ಉಂಟಾಯಿತು.ಏಕೆಂದರೆ ಭಾವನಾ ಎಂತಹ ಗಂಡಸೂ ಮತ್ತೆ ಮತ್ತೆ ನೋಡುವಷ್ಟು ಸುಂದರಿ, ಮೋಹಕ ಕಂಗಳ ಚಲುವೆ.

***

ಮೊದಮೊದಲು ಯಾರಿಗೂ ಅರ್ಥವಾಗದೇ ಜಾರಿಕೊಳ್ಳುತ್ತಿದ್ದ ಭಾವನಾ,ಇಗೀಗ ಅರ್ಥವಾಗಹತ್ತಿದಳು.ದೈನಿಕ,ಪಾಕ್ಷಿಕ,ಮಾಸ ಪತ್ರಿಕೆಗಳಲ್ಲೂ ಅವಳ ಫಳ-ಫಳ ಹೊಳೆಯುವ ಕಣ್ಣುಗಳು ಆಟವಾಡಹತ್ತಿದವು. ಇತ್ತೀಚೆಗೆ ಆಧುನಿಕ ಜೀವನ ,ಫ್ಯಾಷನ್ ಬಗ್ಗೆ ನನ್ನ ಬಳಿಯೂ ಪ್ರಶ್ನೆ ತಂದು ಚರ್ಚಿಸತೊಡಗಿದಳು.ಅವಳ ಬದಲಾವಣೆ ಕಂಡ ಸಹೋದ್ಯೋಗಿ ರವಿ, ತನಗೆ ಅರ್ಥ ಗೊತ್ತಿದ್ದರೂ ಕೆಲವು ಪ್ರಶ್ನೆಗಳನ್ನು ಹಾಕತೊಡಗಿದಾಗ ” ಮಿಸ್ಟರ್ ರವಿ, ಈ ಪ್ರಶ್ನೆಯನ್ನು ನಿಮ್ಮ ಹೃದಯಕ್ಕೆ ಕೇಳಿ ನೋಡಿ, ಅದೇ ನಿಮಗೆ ಉತ್ತರಿಸುತ್ತದೆ” ಎಂದು ಜಾರಿಕೊಳ್ಳುವಷ್ಟು ಭಾವನಾ ಬದಲಾದಳು.ಎಷ್ಟೋ ಸಾರಿ ನಾನು ತಲೆ ತಿನ್ನುವಂತಹ ವಿಚಾರ ಮುಂದಿಟ್ಟು ಕಾಡಿದಾಗ, ” ಮಿಸ್ಟರ್ ಅನಂತ್ ಸಹನೆಯ ಕಟ್ಟೆಯೊಡೆದಾಗ ಪರಿಣಾಮ ಭೀಕರವಾಗುತ್ತದೆ” ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದಳು.

***

ಭಾಸ್ಕರನ ಸ್ನೇಹದಲ್ಲಿ ಭಾವನಾ ದಿನ ದಿನಕ್ಕೂ ಕರಗುವಂತೆ ಕಂಡಳು.ಭಾಸ್ಕರ ಅವಳ ಮನದ ಆಕಾಶದಲ್ಲಿ ಸಾಕಷ್ಟು ಪ್ರಕಾಶ ಬೀರಿದ.ಆತನ ಪ್ರಾಸಬದ್ದ ಕಾವ್ಯಮಯ ಮಾತು,ಜೀವನದ ಬಗ್ಗೆ ಆತನ ನಿಲುವು,ವರ್ತನೆಗಳೆಲ್ಲ ಭಾವನಾಳ ಭಾವದ ಮೇಲೆ ಪ್ರಭಾವ ಬೀರಿದಂತೆ ಕಂಡವು.ತನ್ನನ್ನು ಭಾಸ್ಕರನ ಸೊತ್ತು ಎಂದುಕೊಂಡು ನಾಚಿಕೆಯಿಂದ ಎಷ್ಟೋ ಸಾರಿ ಒಬ್ಬಳೇ ನಕ್ಕದ್ದೂ ಉಂಟು! ಬೆಳಗಿನ ಜಾವ ಜಾಗಿಂಗ್ ಹೋದಾಗ,ಆತನ ರೂಂ ಬಾಗಿಲು ತಟ್ಟಿ ತಣ್ಣೀರು ಸೀಂಚನ ಮಾಡಿ,ಆತನನ್ನು ಕೆರಳಿಸಿ ಮೋಜು ನೋಡಿದ್ದೂ ಉಂಟು.

ಭಾವನಾ ಇತ್ತೀಚೆಗಂತೂ ಭಾಸ್ಕರನಿಗಿಂತ ಮೊದಲೇ ಬಂದು ಸ್ಟಾಫ್ ರೂಂ ನಲ್ಲಿ ಕಾಯುತ್ತಿದ್ದಳು.ಎಷ್ಟೋ ಸಾಹಿತ್ಯಿಕ ಸಭೆ- ಸಮಾರಂಭಗಳಲ್ಲಿ ಆತನ ಜೊತೆ ಜೊತೆಯಾಗೇ ಕಾಣಿಸಿಕೊಳ್ಳಹತ್ತಿದಳು.ತಾನು ಬರೆದ ಕವನಗಳನ್ನೆಲ್ಲ ತಂದು ಭಾಸ್ಕರನ ಮುಂದೆ ಇಡುತ್ತಿದ್ದಳು.ಆತ ತಪ್ಪಿದಲ್ಲೆಲ್ಲ ತಿಳಿಸಿ ಹೇಳತೊಡಗಿದಳು ಭಾವನಾ!!

ಏಕಾಂತದಲ್ಲಿ ತನ್ನನ್ನೇ ತಾನು ಮರೆತು ಭಾವನಾಪರವಶಳಾಗುತ್ತಾಳೆ.ಅವಳನ್ನು ವಾಸ್ತವ ಲೋಕಕ್ಕೆ ಕರೆತರಲು, ಭಾಸ್ಕರ್ ಅವಳ ಕೆಂದುಟಿಗೆ ಹೂ ಮುತ್ತನಿಡುತ್ತಾನೆ. ಬೆಚ್ಚಿ ಬಿದ್ದ ಅವಳು ಕಾವ್ಯಮಯವಾಗಿ ಮಾತನಾಡುತ್ತಾಳೆ.ಮುಗುಳು ನಗೆಯಲ್ಲಿ ಆತನನ್ನು ಸೆಳೆಯುತ್ತಾಳೆ.

” ಭಾವನಾ,ಗಡಿಯಾರಕ್ಕೆ ಮುಳ್ಳುಗಳೇ ಇರದಿದ್ದರೆ, ಈ ಹಗಲು- ರಾತ್ರಿಗಳೇ ಇರದಿದ್ದರೆ,ನಾವು ಸದಾ ಹೀಗೇ ಜೊತೆಯಾಗಿಯೇ ಕುಳಿತು ಬಿಡಬಹುದಲ್ವೆ?” ಎಂದು ಭಾಸ್ಕರ ಅವಳ ಕೆನ್ನೆ ಸವರಿದಾಗ-

“ಹೌದು” ಎಂಬುದಷ್ಟೇ ಅವಳ ಉತ್ತರ.ಭಾಸ್ಕರನ ಮಾತು ನಿಂತಾಗ, ಆಸೆ ತುಂಬಿದ ನೋಟದಿಂದ ಆತನ ತುಟಿಯ ಮೇಲೆ ತನ್ನ ಬೆರಳುಗಳನ್ನಾಡಿಸಿ”ಇನ್ನೂ ಮಾತನಾಡು ಭಾಸ್ಕರ್ ನಿನ್ನ ಮಾತು ಕೇಳ್ತಾ ಇದ್ದರೆ ನಾನು ನಾನಾಗಿರುವುದಿಲ್ಲ.ನನ್ನನ್ನು ನಾನು ಮರೆಯುವುದರಲ್ಲಿ ಯಾವುದೋ ಶಕ್ಕಿ ಇದೆ” ಎಂದು ಕಣ್ಣಲ್ಲೇ ಮಾತನಾಡುತ್ತಾಳೆ.

ಪ್ರೀತಿಯ ಬಗ್ಗೆ ಉದ್ದುದ್ದವಾಗಿ ಮಾತನಾಡುವ,ಪ್ರೀತಿಯೇ ದೇವರೆನ್ನುವ ಭಾಸ್ಕರ, ಅವಳ ಪಾಲಿಗೆ ಸುಂದರ ಪ್ರೇಮಲೋಕದ ಸುರಸುಂದರಾಂಗ ಮನ್ಮಥರಾಜ!ಅವಳ ದೃಷ್ಟಿಯಲ್ಲಿ ಭಾಸ್ಕರ “ಸ್ನೇಹ ಸಂಜೀವಿನಿ” ” ಸ್ನೇಹ ಸಿಂಹಾಸನಾಧೀಶ”.

**

ಒಂದು ಭಾನುವಾರ….

ನಿಸರ್ಗದ ಸಿರಿಯನ್ನು ಆಸ್ವಾದಿಸುತ್ತಿದ್ದ ಭಾವನಾಳಿಗೆ,ಭಾಸ್ಕರ ತನ್ನ ಮನದಾಳದ ಭಾವನೆಗಳನ್ನೆಲ್ಲ ತಿಳಿಸಿದ.ತನ್ನ ಭಾವೀ ಬಾಳಿನ ಕನಸಿನ ಅರಮನೆಯ ಸುಂದರ ಚಿತ್ರವನ್ನು ಬಿಡಿಸುತ್ತ ,

” ಭಾವನಾ ನೋಡು,ಆ ಭಾಸ್ಕರನಿಗೆ ಬಂಧನವಿದೆ. ಹೊತ್ತು ಮುಳುಗಿದರೆ ಆತ ನಿರ್ಗಮಿಸಲೇ ಬೇಕು.ಆದರೆ ಈ ನಿನ್ನ ಭಾಸ್ಕರ ಇರುವುದೇ ನಿನಗೋಸ್ಕರ.ಭಾವನಾ ನಿನ್ನ ಬಿಟ್ಟು ಒಂದು ಗಳಿಗೆ ಕೂಡ ಕಳೆಯಲಾರದಷ್ಟು ನಾನು ಅಧೀರನಾಗಿದ್ದೇನೆ.ನಿನ್ನ ಸ್ನೇಹ ನನಗೊಂದು ವರದಾನವಾಗಿದೆ.ನೀನೇ ನನ್ನ ಬಾಳು ಬೆಳಗುವ ಶ್ರೀಮತಿಯಾಗಬೇಕು” ಎಂದೆಲ್ಲ ಹೇಳಿದ.

ಅವಳು ತದೇಕ ಚಿತ್ತದಿಂದ ಆಕಾಶದೆಡೆಗೆ ಶೂನ್ಯ ನೋಟ ಬೀರುತ್ತಾಳೆ.ಅವಳ ಮೃದುವಾದ ತುಟಿ ಒರಟಾದ ಅನುಭವವಾಯಿತು.ಕಣ್ಣೀರ ಹನಿಯೊಂದು ಉದುರುವುದರಲ್ಲಿತ್ತು,ಭಾಸ್ಕರನಿಗೆ ಕಾಣದಂತೆ ಒರೆಸಿಕೊಂಡಳು.ಆ ಕ್ಷಣ ಅವಳು ಮೌನ ಗೌರಿಯಾಗಿದ್ದಳು.

” ಯಾಕೆ ಭಾವನಾ, ಸುಮ್ಮನಾದೆ? ನಿನ್ನ ಬಿಟ್ಟು ಬಾಳಲಾರದಷ್ಟು ನಾನು ಹುಚ್ಚನಾಗಿದ್ದೇನೆ.ನನ್ನ ಮದುವೆ ಆಗ್ತಿಯಾ? ಮಾತನಾಡು ಭಾವನಾ” ಎಂದು ಭಾಸ್ಕರ್ ಅವಳ ಮುಂಗುರುಳು ತೀಡುತ್ತಾ ಕೇಳಿದ.

” ಭಾಸ್ಕರ್ ನಿಮ್ಮ ಸ್ನೇಹ- ಸಹವಾಸದಿಂದ ನನ್ನ ಬದುಕಿನಲ್ಲಿ ಹೊಸ ತಿರುವು ಮೂಡಿದ್ದು ನಿಜ.ಖಂಡಿತ ನಾನು ನಿಮ್ಮ ಹೊರತು,ನಿಮ್ಮ ಸ್ನೇಹದ ಹೊರತು ಬದುಕಲಾರನೇನೋ ಎನ್ನಿಸಿದೆ.ನಾನು ನಿಮ್ಮ ಸ್ನೇಹಕ್ಕೆ ಸೋತು ಹೋಗಿದ್ದೇನೆ.ನನ್ನ ಬಾಳಿನಲ್ಲಾದ ಈ ಬದಲಾವಣೆಯನ್ನು ಕಂಡು ನಾನೇ ಅಚ್ಚರಿ ಪಟ್ಟಿದ್ದೇನೆ.ಜೀವನದ ಬಗ್ಗೆ ಸದಾ ಜಿಗುಪ್ಸೆಯ ಭಾವ ಹೊಂದಿದ್ದ ನನಗೆ ಹೊಸ ಸ್ಫೂರ್ತಿ ಯಿತ್ತು,ನನ್ನನ್ನು ಬಾಳಲು ಪ್ರೇರೇಪಿಸಿದ ಕೀರ್ತಿ ನಿಮ್ಮದು.” ಎಂದ ಭಾವನಾ ಭಾಸ್ಕರನ ಮುಂಗೈಗೆ ಆತ್ಮೀಯವಾಗಿ ಮುತ್ತಿಟ್ಟಳು.

ಮದುವೆಯ ಬಗ್ಗೆ ಭಾವನಾಳಿಂದ ಯಾವ ಮಾತೂ ಬಾರದ್ದರಿಂದ ಭಾಸ್ಕರ್ ಆ ಕ್ಷಣ ಚಿಂತಿತನಾದ.ಅವಳನ್ನು ಜೀವನಪರ್ಯಂತ ಬಂಧಿಸುವಷ್ಟು ಅವಳನ್ನು ಹಚ್ಚಿಕೊಂಡಿದ್ದ.

” ಭಾಸ್ಕರ್, ಹೋಗೋಣವೇ?” ಎಂದ ಅವಳ ಮಾತಿಗೆ ಆತ ” ಹೂಂ” ಎಂದನಷ್ಟೇ, ಆದರ ಅವಳಿಂದ ಬೇರ್ಪಡುವುದು ಆತನಿಗೆ ಇಷ್ಟವಿರಲಿಲ್ಲ..

ಎಲ್ಲಿಂದಲೋ ಬಂದು ಸ್ನೇಹಿತರಾಗಿದ್ದ ಅವರನ್ನು, ಎರಡು ತಿಂಗಳ ಕಾಲ ಬೇಸಿಗೆ ರಜೆ ಅಗಲಿಸಲು ಬಂದಿತೇನೊ ಎಂಬಂತೆ ಬಂದೇ ಬಿಟ್ಟಿತು.ಪರೀಕ್ಷೆಗಳನ್ನೆಲ್ಲ ಮುಗಿಸಿಕೊಂಡು ಆಯಾ ವಿಷಯದ ಪೇಪರ್ ಗಳ ಬಂಡಲ್ ತೆಗೆದುಕೊಳ್ಳುತ್ತಿದ್ದಾಗ, ಭಾಸ್ಕರ್ ಭಾವನಾಳತ್ತ ನೋಡಿದ,ಅವಳು ಇತಿಹಾಸದಲ್ಲಿ ತಲ್ಲೀನಳಾಗಿದ್ದಳು.

” ರಜೆಯನ್ನು ಹೇಗೆ ಕಳೀತೀರಾ?” ಎಂದ ಭಾಸ್ಕರ

” ಗೆಳೆಯರ ಭೇಟಿ, ಕಥೆ- ಕಾದಂಬರಿಯಲ್ಲಿ ಮೈಮರೆಯುತ್ತೇನೆ.

” ಫೋನ್ ,ಮೆಸೇಜ್ ಮಾಡೋದಿಲ್ಲವೆ?”

” ಮಾಡ್ತೀನಿ, ಏನಾದರೂ ವಿಶೇಷ ಇದ್ದರೆ ಮಾತ್ರ”

” ನೋಡು ಭಾವನಾ, ನಮ್ಮಿಬ್ಬರ ಭವಿಷ್ಯದ ಬಗ್ಗೆ ವಿಚಾರ ಮಾಡು.ನನ್ನ ಲೈಫ್ ಫೈಲ್ ನಿನ್ನ ಕೈಗೇ ಕೊಟ್ಟಿದ್ದೇನೆ” ಎಂದ ಭಾಸ್ಕರ.

” ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಊರಿಗೆ ಹೋಗ್ತೀನಿ. ಸಾಧ್ಯವಾದರೆ ನೀವೂ ಬಸ್ ಸ್ಟ್ಯಾಂಡ್ ಗೆ ಬನ್ನಿ.ಎರಡು ತಿಂಗಳ ಕಾಲ ಮತ್ತೆ ಭೇಟಿಯಾಗೋಲ್ಲ. ಬರ್ತೀರಾ?” ಎಂದಳು..

ಭಾಸ್ಕರ ಒಂದು ಕ್ಷಣ ಮೌನವಾದ. ಆ ಕ್ಷಣವೇ ಭಾವನಾ ಆತನಿಂದ ದೂರ ಹೋದಂತೆ ಭಾಸವಾಯಿತು.

**

ಬಸ್ ಸ್ಟ್ಯಾಂಡ್ ನಲ್ಲಿ ಭಾವನಾಳಿಗಿಂತ ಮೊದಲೇ ಭಾಸ್ಕರ ಬಂದು ಕಾಯುತ್ತಿದ್ದ.ಭಾವನಾ ಅವನಿಚ್ಚೆಯಮೇರೆಗೆ ಮಲ್ಲಿಗೆ ಮುಡಿದಳು. ಅವಳ ಗತ್ತಿನ ಮಾತಿನ ಜೊತೆಗೆ ಮುಂಗುರುಳು ಹಾರಾಡುತ್ತಿದ್ದವು.ಬಸ್ ಹೊರಟಿತು.

ಮರೆಯಾಗುವ ವರೆಗೂ ಭಾಸ್ಕರ ನೋಡುತ್ತಲೇ ನಿಂತಿದ್ದ.ಅಗಲಿಕೆಯ ನೋವು ತಾಳದ ಭಾವನಾಳ ಕಣ್ಣಲ್ಲಿ ಕಣ್ಣೀರು ಸುರಿಯುತ್ತಿದ್ದರೂ, ಕೈ ಮಾತ್ರ ಬೀಸುತ್ತಲೇ ಇತ್ತು.ಭಾಸ್ಕರನಿಗೆ ಹೃದಯ ಭಾರವಾದ ಅನುಭವ‌. ಅನಿವಾರ್ಯವಾಗಿ ಮನೆಯತ್ತ ಹೆಜ್ಜೆ ಹಾಕಿದ.ಅವಳ ಗೆಜ್ಜೆಯ ನಿನಾದ ಆತನ ನೆನಪನ್ನು ಕೆರಳಿಸುತ್ತಿತ್ತು.

***

ಸುಮಾರು ಎಂಟು ದಿನಗಳ ಅಂತರದಲ್ಲಿ ಅಂತರದೇಶಿ ಪತ್ರವೊಂದು ಭಾಸ್ಕರನ ವಿಳಾಸಕ್ಕೆ ಬಂದಿತು.

ಅಕ್ಷರಗಳು ತೀರಾ ಪರಿಚಿತವೆನಿಸಿದಂತೆ ಕಂಡವು.ಬಿಡಿಸಿ ನೋಡಿದ, ಭಾವನಾಳದೇ ಎಂದರಿವಾದಾಗ, ತಾನೆಲ್ಲಿದ್ದೇನೆ ಎಂಬುದನ್ನೇ ಮರೆತು, ಪತ್ರಕ್ಕೊಂದು ಮುತ್ತನ್ನಿಟ್ಟು, ಪತ್ರದಲ್ಲಿ ದೃಷ್ಟಿ ನೆಟ್ಟ.

ಓದುತ್ತಿದ್ದಂತೆಯೇ ಆತನ ಮುಖ ಲಕ್ಷಣಗಳು ಬದಲಾದವು.

ಪ್ರಿಯ ಸ್ನೇಹ ಸಿಂಧೂರ ಭಾಸ್ಕರ,.

ಅಂದು ಸಂಜೆ 7-30 ಕ್ಕೆ ಊರನ್ನು ತಲುಪಿದೆ.

ಪ್ರಯಾಣವೆಲ್ಲ ಸ್ನೇಹ ತುಂಬಿದ ನೆನಪಿನ ದೋಣಿಯಲ್ಲಿಯೇ ಆಯಿತು.ನನ್ನ ತಂದೆ ತಾಯಿ ಸಹೋದರರೆಲ್ಲ ನನ್ನ ಎದುರಿಗೆ ಕುಳಿತು ಯಾಕಿಷ್ಟು ಸೊರಗಿದ್ದೀಯಾ? ಎಂದು ಕೇಳಿದರು. ನಾನೇನು ಹೇಳಲಿ ಭಾಸ್ಕರ್?ಮನದಾಳದ ನೋವನ್ನು ಎಲ್ಲರಿಗೂ ಹೇಳಲಾಗುತ್ತದೆಯೇ?

ಭಾಸ್ಕರ್ , ನಿಮ್ಮ ಸ್ನೇಹದಿಂದ ನಾನು ಸಾಕಷ್ಟು ಕಲಿತೆ.ನಿಮ್ಮಂತವರ ಸ್ನೇಹ ಸಿಕ್ಕಿದ್ದು ನನ್ನ ಅದೃಷ್ಟ. ಅಂದು ನೀವು ಮದುವೆಯ ಬಗ್ಗೆ ನನ್ನ ಕೇಳಿದಾಗ, ನನಗರಿವಿಲ್ಲದೇ ನನ್ನ ಕಣ್ಣಲ್ಲಿ ನೀರೂರಿತ್ತು.ತಾವು ನೋಡಿರಲೂ ಬಹುದು.

ನಿಮ್ಮ ಆ ಪ್ರಶ್ನೆಗೆ ನಾನು ಉತ್ತರವನ್ನೇ ಕೊಡಲಿಲ್ಲ.ಅಂದೇ ನಿಮಗೆ ನಾನು ಉತ್ತರ ನೀಡಿದ್ದರೆ, ಸಂತೋಷ್ ನಂತೆ ನಿಮ್ಮನ್ನೂ ಕಳೆದುಕೊಳ್ಳುತ್ತೇನೆಂಬ ಭಯ- ದುಃಖ ನನ್ನನ್ನು ಕಾಡಿತು.

ಭಾಸ್ಕರ್, ನಾನಿಷ್ಟು ಜನ ಗಂಡಸರ ಸ್ನೇಹ ಮಾಡಿದರೂ, ಎಲ್ಲರೂ ಮದುವೆಯ ಬಗ್ಗೆ ಕೇಳಿದ್ದಾರೆ.ಹೀಗೇಕೆ? ಗಂಡಸರೆಲ್ಲ ಹೀಗೇನಾ? ಎಂಬ ಸಂಶಯ. ಈ ಮೊದಲೆ ಹೇಳಿದಂತೆ ನನಗೆ ಪ್ರೇಮದಾಹವಿಲ್ಲ, ಸ್ನೇಹದಾಹವಿದೆ.

ಮದುವೆ ಎಂಬುದೊಂದು ಬಂಧನ.ನಾನು ಆ ಬಂಧನಕ್ಕೆ ಸಿಲುಕ ಬಯಸುವುದಿಲ್ಲ.ಅದರಲ್ಲೂ ನನಗೆ ಈ ಲವ್ ಮ್ಯಾರೇಜ್ ನಲ್ಲಿ ನಂಬಿಕೆ ಇಲ್ಲ.

ನಾನು ನಿಮ್ಮಲ್ಲಿರುವ ಪಾಂಡಿತ್ಯ ಕಂಡು, ನಿಮ್ಮಿಂದ ಕಲಿಯಬೇಕೆಂಬ ಹಂಬಲದಿಂದ ನಿಮ್ಮ ಸ್ನೇಹವನ್ನು ಬಯಸಿದೆ. ಪ್ಲೀಜ್…. ನಾವು ಪವಿತ್ರ ಸ್ನೇಹಕ್ಕೆ ಉದಾಹರಣೆಯಾಗಿರೋಣ.ಈ ಪ್ರೀತಿ- ಪ್ರೇಮದಂತಹ ಆಡಂಬರಗಳಿಗೆ ಬಲಿಯಾಗುವುದು ಬೇಡ.

ನಿಮ್ಮ ಮನಸ್ಸಿಗೆ ಬೇಸರ,ದುಃಖ ವಾದರೆ ನನ್ನನ್ನು ” ಕತ್ತೆ” ಎಂದು ಬೈದಾದರೂ ನನ್ನ ಕ್ಷಮಿಸಿ ಬಿಡಿ.ನನಗೆ ನಿಮ್ಮ ಪವಿತ್ರ ಸ್ನೇಹ ಬೇಕು.ಮದುವೆಯ ಬಗ್ಗೆ ಯೋಚನೆ ಮಾಡಬೇಡಿ.

ನಿರಾಸೆಗೆ ಕ್ಷಮೆ ಇರಲಿ.

ನಿಮ್ಮ ಗೆಳತಿ

ಭಾವನಾ

.

ಪತ್ರ ಓದಿದ ಭಾಸ್ಕರ್ ಮಂಕಾಗಿ ಹೋದ.ಸೀದಾ ನನ್ನ ಬಳಿ ಬಂದು, ತನ್ನ ಅಳಲನ್ನೆಲ್ಲ ತೋಡಿಕೊಂಡ.ಆ ಕ್ಷಣ ಭಾಸ್ಕರ್ ನನಗೆ ಚಿಕ್ಕ ಮಗುವಿನಂತೆ ಕಂಡ!

ಭಾವನಾ ನನ್ನ ನೆನಪಿನಂಗಳಕ್ಕೆ ಬಂದಳು.ಸಂತೋಷನ ಜೊತೆ ಅವಳಿಗಿದ್ದ ಸ್ನೇಹವನ್ನೂ, ಭಾಸ್ಕರನ ಜೊತೆಗಿದ್ದ ಸ್ನೇಹವನ್ನೂ ಕೂಲಂಕುಷವಾಗಿ ಹೋಲಿಸಿ ನೋಡಿದೆ.ಬಹಳ ವ್ಯತ್ಯಾಸ ಕಂಡು ಬಂದಿತು! ಮೊದಲಿನಿಂದಲೂ ಭಾವನಾ ನನಗೆ ಪ್ರಶ್ನೆಯಾಗಿಯೇ ಕಾಡಿದ್ದಳು.ಈಗ ಭಾಸ್ಕರನಿಗೆ ಬರೆದ ಪತ್ರ ಓದಿದ ಮೇಲಂತೂ ಇನ್ನೂ ಅರ್ಥವಾಗದ ಒಗಟಾದಳು.

***

ರಜೆ ಮುಗಿಸಿಕೊಂಡು ಮತ್ತೆ ಕಾಲೇಜಿಗೆ ಬಂದಿದ್ದಾಳೆ.ಅವಳಲ್ಲಿ ಯಾವ ಪರಿವರ್ತನೆಯೂ ನನಗೆ ಕಾಣಿಸಲಿಲ್ಲ.ಭಾಸ್ಕರ್ ಮಾತ್ರ ನುಣುಪಾದ ಗಲ್ಲದ ಮೇಲೆ ದಟ್ಟವಾಗಿ ಗಡ್ಡ ಬೆಳೆಸಿಕೊಂಡಿದ್ದಾನೆ.ಆತನ ಮಾತು,ವರ್ತನೆ,ವಿಚಾರಗಳಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ.ಭಾವನಾ ಮಾತ್ರ ತನಗೇನೂ ಸಂಬಂಧವಿಲ್ಲ ಎಂಬಂತೆ ಮೊದಲಿನಂತೆಯೇ ಇದ್ದಾಳೆ!

ಅದೇ ಗತ್ತು ಗಾಂಭಿರ್ಯದಿಂದ ನನಗಷ್ಟೇ ಅಲ್ಲ, ಅವಳನು ಬಲ್ಲ ಎಲ್ಲರಿಗೂ ಒಗಟಾಗಿಯೇ ಉಳಿದಿದ್ದಾಳೆ.

ಪರಮೇಶ್ವರಪ್ಪ ಕುದರಿ

ಚಿತ್ರದುರ್ಗ

ಚಿತ್ರ ಕೃಪೆ : pininterest

Related post

1 Comment

  • A very good story kept me curious untill last
    Thank you

Leave a Reply

Your email address will not be published. Required fields are marked *