ಕೊನೇ ಬೆಂಚಿನ ಗೀಚು…!
— 1 —
ನಾವಿಬ್ಬರೂ ಒಂದೇ ಕೇರಿ ಕೆರೆಯಲ್ಲಿ
ಕುಂಡಿ ತೊಳೆದು
ಅವನ ಚಡ್ಡಿ ನಾನು
ನನ್ನ ಚಡ್ಡಿ ಅವನು
ಮರೆತೋ ಏನೋ ಎನುವಂತೆ
ಅದಲು ಬದಲು
ಮೇಲೇರಿಸಿ ಹಿಗ್ಗಿ ಹಿಗ್ಗಿ ಓಡಾಡಿದ್ದ
ನಮ್ಮಿಬ್ಬರ ಆ ಆಪ್ತ
ಎಳೆಯ ದಿನಗಳು
ನಮ್ಮ ಗುಂಡಿಗೆಗಳ ಗೋಡೆಗಳಲಿ
ಗೀರಿದ್ದ
ಆ ಮುಗ್ಧ ಮೈತ್ರಿಯ ಗೆರೆಗಳು
ಇಂದಿಗೂ ಉಳಿದಿವೆ ಅಳಿಯದೆ!
ಅವನು ಬೆಳೆದು ಪ್ರಬುದ್ಧ ಹೊಸ್ತಿಲು
ಹತ್ತುವ ಹೊತ್ತಿಗೆ
ನನ್ನ ಪ್ರೇರಣೆಗೆ
ಸುಮ್ಮನೆ ಆರಂಭಿಸಿದ ಬರವಣಿಗೆ
ದಿಢೀರಂತ ಎತ್ತೆತ್ತರ ಎತ್ತಿ
ನಿಲ್ಲಿಸಿಬಿಟ್ಟಿತು
ಪ್ರಸಿದ್ಧಿಯ ಝಗಮಗ ರಂಗದ
ಮಧ್ಯೆ
ಆಗವನ ಅಹರ್ನಿಶಿ ಸುತ್ತುವರಿದ
ಥರಹಾವರಿ ಮಾಧ್ಯಮಗಳು
ಮತ್ತು ಮತ್ತೂ ಮೇಲೆತ್ತುವ ಚಪ್ಪಾಳೆ
ದಂಡು
ಮೆಜಾರಿಟಿ ವರ್ಗ ಎಂಬುದವನ ಠಸ್ಸೆ
ಗುರುತು!
ಅಂತೆಯೇ
ಅವನಂತೆಯೇ
ನನ್ನ ಓರಗೆಯ
ಕೆಲಬಲದ ಇನ್ನೂ ಕೆಲವು
ಹುಡುಗರು
ಈಗ ಎತ್ತರದ ಚುಕ್ಕೆಗಳು
ಮಿಂಚಿ ಮಿರುಗುವ
ದೊಡ್ಡ ದೊಡ್ಡ ಹೆಸರುಗಳು
ಅವನ ಹಾಗೆ ಸಂಖ್ಯೆಯಲಿ
ಕೆಲವೊಮ್ಮೆ ಯುಕ್ತ ವ್ಯೂಹದಲಿ
ರಟ್ಟೆಬಲಕ್ಕು ಮಿಕ್ಕಿದ ಸಂದಣಿ
ಇವರು ಅಪ್ಪಟ ಮೆಜಾರಿಟಿ!
ಇಲ್ಲಿ ಜಾತಿವಿಜಾತಿಗಳ ನಡುವೆ
ಮೆಟಾರಿಟಿ ಮೈನಾರಿಟಿ ಪೈಪೋಟಿ!
ಮೆಜಾರಿಟಿಯಲಿ
ಒಳ ಮೆಜಾರಿಟಿಗಳ ವೈವಿಧ್ಯ!
ನನ್ನಂತೆ ಸರಹದ್ದಿನಿಂದಾಚೆ
ನವೆದು ಎಳೆಕಿತ್ತ ಸೀರೆಯಂಚಿನ
ಗುರುತಿರದ ಮಾದರಿ ಜನ
ಸಣ್ಣ ಕುಲಕಸುಬಿನ ಮೈನಾರಿಟಿ
ಬೆರಳೆಣಿಕೆಗೂ ಸಿಗದ ಮೈನಾರಿಟಿ
ಸರಕಾರಿ ಶಬ್ದಕೋಶದಲೆ
ಅಚ್ಚಾಗದೆ ಉಳಿದದ್ದು ಸೋಜಿಗ!
ಅಂಥವರೆಲ್ಲರು
ಪದಕ ಪಾರಿತೋಷಕಗಳ
ಗುಡ್ಡೆ ಹಾಕಿಕೊಂಡರು
ತೂಕಕ್ಕೂ ಸಿಗದಷ್ಟು ಒಬ್ಬೊಬ್ಬರೂ
ರಾಜ್ಯದ
ಹಾಗೂ ಆ ಮೂಲಕ ರಾಷ್ಟ್ರದ!
— 2 —
ನಾನೂ ಬರೆದೆ
ಅವರಿನ್ನೂ ಅಂಬೆಗಾಲಿಡುವಾಗಲೆ
ಸಾಕಷ್ಟು ಬರೆಹ ತೀಡಿದ್ದೆ
ಎಲ್ಲ ಮಾದರಿಯಲ್ಲಿ
ಆಡು ಮುಟ್ಟುವ ಸೊಪ್ಪಿನ ಥರದ
ವೈವಿಧ್ಯ ಬರೆವಣಿಗೆಯಲ್ಲಿ!
ಆದರೆ
ಸಮಯ
ಮತ್ತದನ್ನು ಹಿಡಿದು ಆಡಿಸುವ
ಸೂತ್ರಧಾರ
ಎಲ್ಲ ಅವರ ಮೆಜಾರಿಟಿ ಕಡೆ…!
ಇಂಥ ಅಗಾಧ ಮೆಜಾರಿಟಿ
ಜಾತ್ರೆಯಲಿ
ಗುಡಾರಗಳ ಹೂಡಿದ ಅಂಗಡಿ
ಸಾಲಿನಲಿ
ಎಂದೂ ಯಾರೊಬ್ಬರಿಗೂ ಕಾಣದ
ನನ್ನ ಮೈನಾರಿಟಿ ಮಾರಾಟ
ಮತ್ತು ನಮ್ಮಂಥವರ ಸರಕು
ಅರ್ಧಂಬರ್ಧ ಅಳಿಸಿ ಕಾಣಿಸದ
ಪುಟಾಣಿ ಪೂರ್ಣವಿರಾಮ!
ಈಗ ಚೂರುಪಾರು
ನಾನು ಬರೆದರು
ಹಾಡುವವರಿಲ್ಲ…
ಎಲ್ಲ ನಡುರಾತ್ರಿಯಲಿ
ಬೀದಿಬದಿಯ ಅರಚು
ಆರ್ತ ಕಿರುಚು!

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459
3 Comments
ಚಡ್ಡಿ ದೋಸ್ತಿಗಳು ಪಡ್ಡೆ ಹುಡುಗರಾದ ಕವನ
ಚೆನ್ನಾಗಿದೆ!
ಚಡ್ಡಿಯಿಂದ ಪಡ್ಡೇ ತನಕ ಚೆನ್ನಾಗಿದೆ
Very good poem