ಕೋಗಿಲೆ ಮಾತ್ರ ಪರಪುಟ್ಟ ಹಕ್ಕಿಯೇ?!

ಕೋಗಿಲೆ ಎಂದ ಕೂಡಲೆ ನಮ್ಮ ಮನಸ್ಸಿಗೆ ಬರುವುದು ಮೂರು. “ವಸಂತಕಾಲ, ಮಧುರ ಕಂಠ ಮತ್ತು ಪರಪುಟ್ಟ”. ಸದ್ಯ ನಾವು ಅದೇ ಕಾಲದಲ್ಲಿಯೇ ಇದ್ದೇವೆ. ಮೊದಲೆರೆಡನ್ನು ಬಿಟ್ಟು ಮೂರನೆಯದನ್ನು ಕುರಿತಾಗಿ ತಿಳಿದುಕೊಳ್ಳೋಣ.

ಗಂಡು ಕೋಗಿಲೆ

ಹೆಣ್ಣು ಕೋಗಿಲೆ

ಮರಿ ಕೋಗಿಲೆ

ಕೋಗಿಲೆ ಗೂಡುಕಟ್ಟುವುದಿಲ್ಲ, ಬದಲಿಗೆ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುತ್ತದೆ. ಕಾಗೆ ಇದರ ಮೊಟ್ಟೆಗೆ ಕಾವುಕೊಟ್ಟು ಮರಿಮಾಡಿ ಸಾಕುತ್ತದೆ ಎಂಬುದನ್ನು ನಮ್ಮ ಪೂರ್ವೀಕರು ಗಮನವಿಟ್ಟು ನೋಡಿ ತಿಳಿದುಕೊಂಡಿದ್ದರು. ಅದರಿಂದಲೇ ಕೋಗಿಲೆಗೆ ಪರಪುಟ್ಟ ಎಂಬ ಹೆಸರು. ಕೋಗಿಲೆ ಸೋಮಾರಿ ಎಂದಾಯಿತು!

ಆದರೆ, ಆಧುನಿಕ ವಿಜ್ಞಾನ ಈ ಕುರತಾಗಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿ, ಅನೇಕ ವಿಷಯಗಳನ್ನು ತಿಳಿಸಿದೆ. ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಇರಲಿ, ಜನಸಾಮಾನ್ಯರಾದ ನಮಗೆ ಅಷ್ಟೆಲ್ಲ ವಿವರಗಳು ಬೇಡ. ಮುಖ್ಯವಾಗಿ ಈ ಪರಪುಟ್ಟತನ ಎಂಬುದು ಕೇವಲ ಕೋಗಿಲೆಗೆ ಸೀಮಿತವಾದದಲ್ಲ ಜಗತ್ತಿನಲ್ಲಿ ಸುಮಾರು ಐವತ್ತು ಬಗೆಯ ಹಕ್ಕಿಗಳು ಹೀಗೆ ಬೇರೆ ಹಕ್ಕಿಯ ಗೂಡಿನಲ್ಲಿ ಮೊಟ್ಟೆಯಿಟ್ಟು ತಮ್ಮ ಸಂತಾನವನ್ನು ಬೆಳೆಸುವ ಜವಾಬ್ದಾರಿಯನ್ನು ಬೇರೆ ಹಕ್ಕಿಗಳಿಗೆ ಕೊಡುತ್ತವೆ ಎಂಬುದು ಕುತೂಹಲಕಾರಿ ಅಂಶ.

ಎಷ್ಟೋ ವೇಳೆ ಈ ಹಕ್ಕಿಗಳು ತಮಗಿಂತ ಗಾತ್ರದಲ್ಲಿ ಚಿಕ್ಕದಾಗಿರುವ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆಯಿಟ್ಟುಬಿಡುತ್ತವೆ. ಮೊಟ್ಟೆಯೊಡೆದು ಬರುವ ಮರಿಯೇ ತಾಯಿ ಹಕ್ಕಿಗಿಂತ ದೊಡ್ಡದಾಗಿರುತ್ತದೆ! ಇದು ತನ್ನ ಮರಿಯಲ್ಲ ಎಂಬುದು ತಾಯಿ ಹಕ್ಕಿಗೆ ತಿಳಿದಿದ್ದರೂ ಅದು ಮಾತೃವಾತ್ಸಲ್ಯದಿಂದ ಅದನ್ನು ಸಲಹಿ ದೊಡ್ಡದನ್ನಾಗಿ ಮಾಡುತ್ತದೆ. ಹಸಿವಿನಿಂದ ಕೂಗುವ ಮರಿಹಕ್ಕಿಯ ದನಿ ಹಕ್ಕಿಯಲ್ಲಿ ತಾಯ್ತನದ ಗುಣಗಳನ್ನು ಪ್ರಚೋದಿಸುತ್ತದೆ ಎನ್ನುತ್ತದೆ ವೈಜ್ಞಾನಿಕ ಸಂಶೋಧನೆಗಳು.

ಇತ್ತೀಚೆಗೆ ಇಂತಹದ್ದೇ ಒಂದು ವಿಡಿಯೋ ಜಾಲತಾಣಗಳಲ್ಲಿ ವೈರಲ್‍ ಆಗಿದೆ. ಇದರಲ್ಲಿ ದೊಡ್ಡಗಾತ್ರದ ಹಕ್ಕಿಗೆ ಗುಟುಕು ಕೊಡಲು ಆ ಪುಟ್ಟ ಹಕ್ಕಿ ಹೆಣಗುವುದನ್ನು ತೋರಿಸಲಾಗಿದೆ. ಇದು ವೃದ್ಧತಾಯಿಗೆ ಮರಿ ಆಹಾರ ಕೊಡುತ್ತಿರುವುದು ಎಂದು ತಪ್ಪಾಗಿ ಹೇಳಲಾಗಿದೆ. ನಿಜದಲ್ಲಿ ಇದು ಮರಿಗೆ ತಾಯಿ ಗುಟುಕು ಕೊಡುತ್ತಿರುವ ವಿಡಿಯೋನೇ ಆಗಿದೆ. ದೊಡ್ಡ ಮರಿಯ ಹೆಗಲನ್ನು ಹತ್ತಿ ಆ ಪುಟ್ಟ ಹಕ್ಕಿ ಗುಟುಕು ಕೊಡುತ್ತದೆ. ಆ ತಾಯ್ತನದ ಗುಣವನ್ನು ನಾವು ಮನುಷ್ಯರು ಗುರುತಿಸಿ ಗೌರವಿಸಬೇಕು. ವಿಜ್ಞಾನದ ತಿಳಿವಳಿಕೆಯೂ ಇರಲಿ, ತಂದೆ ತಾಯಿಗಳನ್ನು ಗೌರವಿಸಬೇಕು ಎಂಬ ಧರ್ಮವೂ ಇರಲಿ, ಅಲ್ಲವೆ? ಏನಂತೀರಿ?

-ಕಲ್ಗುಂಡಿ ನವೀನ್

-ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ

ಕಲ್ಗುಂಡಿ ನವೀನ್

(ಕೆ.ಎಸ್. ನವೀನ್)

Facebook: www.facebook.com/ksn.bird

kalgundi.naveen@yahoo.com

Related post