ಕೋಟೆಯ ಜಾಡು
ಕಣ್ಮುಂದೆ ಎದ್ದು ನಿಂತ ಬೃಹತ್ ಬಂಡೆಗಳ ವಿಶಾಲ ಕೋಟೆ. ಒಂದೊಂದು ಕಲ್ಲೂ ಏನನ್ನೋ ಹೇಳಬಯಸುತ್ತಿವೆ.. ಕಲ್ಲುಗಳ ಸಂದಿಯಲಿ ಪಿಸು ಪಿಸು ಮಾತು.. ಉಸಿರು ಬಿಗಿಹಿಡಿಯುತ್ತಿರುವ ಸದ್ದು.. ಕಳ್ಳ ಹೆಜ್ಜೆಯಲಿ ಪಲಾಯನ ಮಾಡುತ್ತಿರುವ ಹೆಜ್ಹೆಗಳ ಸಪ್ಪಳ. ಇದ್ದಕ್ಕಿಂದಂತೇ ಪಕ್ಕದಲ್ಲೇ ಭಾರೀ ಆಸ್ಪೋಟ.
ಅವಿತು ಕುಳಿತವರ ಆರ್ತನಾದ, ಜೀವಕ್ಕಾಗಿ ಪರಿತಪಿಸುತ್ತಿರುವ ನರಳಾಟ. ಅದೆಲ್ಲಿ ಅಡಗಿದ್ರೋ ಅಸಹಾಯಕ ಹೆಣ್ಣುಮಕ್ಕಳ ಚೀರಾಟ.. ಮಕ್ಕಳ ಜೋರುದನಿಯ ಅಳು ಎಲ್ಲವೂ ಸ್ಪಷ್ಟವಾಗಿ ಕೇಳುತ್ತಿದೆ. ಕೋಟೆಯ ಹೊರಭಾಗದಲ್ಲಿ ಕುದುರೆಗಳ ಖರಪುಟ ಶಬ್ದ ಹೆಚ್ಚಾಗುತ್ತಿದೆ. ಮೇಲಿಂದ ಮೇಲೆ ಸಿಡಿಗುಂಡುಗಳ ದಾಳಿ ನಡೆಸುತ್ತಾ ಕೋಟೆಯನ್ನು ಭೇಧಿಸುವ ಯತ್ನದಲ್ಲಿ ಮುಂದಾಗಿವೆ. ರಣಕಹಳೆ ಜೋರಾಗಿ ಮೊಳಗುತ್ತಿದೆ. ಶತೃಪಾಳಯದಲ್ಲಿ ಅಲ್ಲಾ ಹು ಅಕ್ಬರ್ ಎಂಬ ಘೋಷ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಕೋಟೆಯೊಳಗೆ ಕುಳಿತ ಅಸಹಾಯಕ ಸೈನಿಕರು ತಮ್ಮಲ್ಲಿರುವ ಹಳೆಯ ಕತ್ತಿ ಖಡ್ಗಗಳನ್ನು ಮಸೆಯುತ್ತಾ ಜೀವವುಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಹೆಂಗಸರು ಪ್ರಾಣದ ಜೊತೆಯಲ್ಲಿ ದೇಹವನ್ನೂ ಕಾಪಾಡಿಕೊಳ್ಳುವ ಭೀತಿ…. ಹರ ಹರ ಮಹಾದೇವನನ್ನೂ ಕೂಗಲಾರದೇ ರೋಧಿಸುತ್ತಿದ್ದಾರೆ. ಆಗಷ್ಟೇ ಮದುವೆಯಾದ ಜೋಡಿಯನ್ನು ಕಾಪಾಡುವ ಸಲುವಾಗಿ ಎಲ್ಲರೂ ಬೊಬ್ಬಿರಿಯುತ್ತಿದ್ದಾರೆ. ಓಡಿ ಓಡಿ ನಿಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಿ, ಭಗವಂತನ ದಯೆಯಿದ್ದರೆ ಮತ್ತೆ ಸಂಧಿಸೋಣ ಹೋಗಿ ಓಡಿ ಹೋಗಿ ಎಂದು ಚೀತ್ಕರಿಸುತ್ತಿದ್ದಾರೆ. ಅಷ್ಟರಲ್ಲಿ ಪಕ್ಕದಲ್ಲೇ ಮತ್ತೊಂದು ಸ್ಪೋಟ. ಬೆಂಕಿಯ ಕೆನ್ನಾಲಿಗೆಗಳು ಚಾಚಿಕೊಳ್ಳುತ್ತಿವೆ ವಿಪರೀತವಾಗಿ ಧೂಳು ನಮ್ಮನ್ನು ಆವರಿಸಿಕೊಳ್ಳುತ್ತಿದೆ, ಉಸಿರುಗಟ್ಟಿಸುವಂತಹ ಹೊಗೆ ನಮ್ಮ ಕಣ್ಣುಗಳನ್ನು ಮುಚ್ಚುವಂತೆ ಮಾಡಿದೆ, ಹೇಗೋ ಕಣ್ತೆರೆದು ನೋಡಿದರೆ ನಾನು ನನ್ನ ಕೊಠಡಿಯಲ್ಲಿದ್ದೇನೆ.. ಅಬ್ಬಾ ಎಂತಹ ಕನಸು… ಆ ಸೈನಿಕರು ಏನಾದ್ರೋ ಆ ನವವಿವಾಹಿತರು ಬದುಕಿದ್ರಾ, ಆ ಹೆಂಗಳೆಯರ ಪಾಡು ಏನಾಯ್ತೋ ಗೊತ್ತಾಗದೇ ಮನಸ್ಸು ವಿಲವಿಲ ಒದ್ದಾಡ ಹತ್ತಿತು…..
ಕನಸಿನಲ್ಲಿ ಕಂಡ ಕೋಟೆಯನ್ನು ಎಲ್ಲೋ ನೋಡಿದಂತೆ ಭಾಸವಾಗುತ್ತಿತ್ತು. ಒಮ್ಮೆ ನೋಡಲೇಬೇಕೆಂದು ತೀರ್ಮಾನ ಮಾಡಿಯೇ ಬಿಟ್ಟೆ. ಒಂದೆರಡು ದಿನಗಳ ನಂತರ ಹಳೆಯ ಪುಸ್ತಕಗಳನ್ನು ತಿರುವುತ್ತಾ ಕುಳಿತಿದ್ದಾಗ ಸುರಪುರದ ಕೋಟೆಯ ಚಿತ್ರ ಕಂಡು ಬಂತು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಸರಿ ಒಂದಷ್ಟು ದಿನ ಕೆಲಸಕ್ಕೆ ರಜೆ ಮಾಡಿ ಕಲಬುರಗಿಯ ಕಡೆ ಹೊರಟೇಬಿಟ್ಟೆ.
ಪಕ್ಕದಲ್ಲಿ ಅದೇನೋ ರಾಜಗಾಂಭೀರ್ಯದಿಂದ ಕುಳಿತಿದ್ದ ವ್ಯಕ್ತಿಯ ಹತ್ರ ಇದು ಯಾವ ಊರು, ಯಾವ ಕೋಟೆ ಅಂತ ಕೇಳಿದೆ… ತಕ್ಷಣವೇ ಆತ ಜೇಬಿನ ಕಿಸೆಗೆ ಕೈ ಹಾಕಿ ಪುಟ್ಟ ನಶ್ಯದ ಡಬ್ಬಿ ತೆಗೆದು ಸ್ವಲ್ಪ ಮೂಗಿಗೇರಿಸಿಯೇಬಿಟ್ಟ… ಯಾಕೋ ಈ ವ್ಯಕ್ತಿ ಮಾತಾಡಲ್ಲವೇನೋ ಅಂತ ನಾನು ಸುಮ್ಮನಾಗಿ ಕಿಟಕಿಯಾಚೆ ನೋಡತೊಡಗಿದೆ. ಅಷ್ಟರಲ್ಲಿ ಆ ವ್ಯಕ್ತಿಯು… ಅದೇನು ಕೇಳ್ತೀರಿ ಈ ಕೋಟೆಯ ಕಥೆ ಅಂತ ಶುರುವಿಟ್ಟುಕೊಂಡ್ರು… ಮಿಕ್ಕಿದ್ದು ಅವರ ಮಾತಲ್ಲೇ ಕೇಳಿ………
” ನಾವು ಸುಮಾರು ವರ್ಷಗಳು ಇಲ್ಲೇ ಇದ್ದದ್ದು, ಈಗ ಸುಮಾರು ಮೂವತ್ತು ವರ್ಷಗಳಿಂದ ಕಲಬುರಗಿ ನಗರಕ್ಕೆ ಶಿಫ್ಟ್ ಆಗಿದ್ದೇವೆ. ನಾವು ಸಣ್ಣವರಿದ್ದಾಗ ಈ ಬೆಟ್ಟ ಕೋಟೆ ಇಲ್ಲೆಲ್ಲಾ ಆಟ ಆಡ್ತಿದ್ವಿ.. ತುಂಬಾ ಚೆಂದನೆಯ ಕೋಟೆಯನ್ನು ಇಲ್ಲಿ ಕಟ್ಟಿದ್ದಾರೆ, ಸಾಕಷ್ಟು ಸಿಹಿನೀರಿನ ಹೊಂಡಗಳು ಕೂಡಾ ಕಟ್ಟಿಸಿದ್ದಾರೆ. ಈ ಕೋಟೆ ಕಟ್ಟಲು ಚೆಂದದ ಕಥೆ ಇದೆ ಅದೇನಪ್ಪಾ ಅಂದ್ರೆ, ನೂರಾರು ವರ್ಷಗಳ ಹಿಂದಿನ ಮಾತು.ಆಗ ವಿಜಯನಗರದ ರಾಜರು ಆಳ್ವಿಕೆ ಮಾಡ್ತಾ ಇದ್ರು… ಒಂದಷ್ಟು ಜನ ಗುಡ್ಡಗಾಡು ಜನ ಈ ಸಾಮ್ರಾಜ್ಯದಲ್ಲಿ ಆಶ್ರಯ ಪಡ್ಕೊಂಡಿದ್ರು… ಹಂಗೂ ಹಿಂಗೂ ಜೀವನ ಮಾಡ್ಕೊಂಡಿದ್ರು, ರಾಜನಿಷ್ಠರಾಗಿ ಯುದ್ಧದ ಸಮಯದಲ್ಲಿ ದೇಶಸೇವೆಯನ್ನು ಮಾಡ್ಕೊಂಡಿದ್ರು..ಇತ್ತ ಬಹಮನಿ ಅರಸರು ಅವರ ರಾಜ್ಯ ವಿಸ್ತಾರ ಮಾಡೋ ದುರಾಸೆಯಿಂದ ವಿಜಯನಗರದ ಮೇಲೆ ದಾಳಿ ಮಾಡ್ತಾ ಇದ್ರು, ವಿಜಯನಗರದ ಸೈನ್ಯ ಕಾದಾಡಿ ಕಾದಾಡಿ ಸುಸ್ತಾಗಿ ಸೋಲೊಪ್ಪಿಕೊಳ್ತಂತೆ, ಆಗ ಬಹುಮನಿ ಅರಸರು ಈ ಭಾಗದಲ್ಲಿ ಹಲವಾರು ದಾಳಿಗಳನ್ನು ಮಾಡಿದ್ರಂತೆ, ಗುಡಿಗಳು, ಅರಮನೆ, ಮನೆಗಳು, ಗೋಶಾಲೆ, ಮಠಗಳು ಎಲ್ಲದರ ಮೇಲೂ ದಾಳಿ ಮಾಡಿದ್ರಂತೆ, ಒಂದ್ಕಡೆ ಲೂಟಿ ಮಾಡಿ ಪ್ರತಿರೋಧ ಮಾಡಿದವರನ್ನು ಹಿಡಿದು ಕೊಲ್ತಾ ಇದ್ರಂತೆ, ಆಗಿನ ಕಾಲಕ್ಕೆ ಹೊಸದಾಗಿ ಮದುವೆಯಾದ ಜೋಡಿಗಳನ್ನು ಹಿಡಿದು ಗಂಡನ್ನು ಕೊಂದು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ಅವರನ್ನು ತಮ್ಮ ರಾಣೀವಾಸಕ್ಕೆ ದೂಡುತ್ತಿದ್ರಂತೆ… ಗುಡ್ಡಗಾಡಿನಲ್ಲಿ ವಾಸವಾಗಿದ್ದ ಗುಂಪೊಂದರ ಯುವ ನಾಯಕನೊಬ್ಬ ಆಗಷ್ಟೇ ಮದುವೆಯಾಗಿದ್ದ… ಇಡೀ ತಾಂಡಾದ ಜನರು ಆ ನಾಯಕನನ್ನು ಮತ್ತು ಅವನ ಹೆಂಡತಿಯನ್ನು ತಾಂಡಾ ಬಿಟ್ಟು ದೂರಹೋಗುವಂತೆ ಒತ್ತಾಯಿಸಿದರು… ಆದರೆ ಆ ಯುವ ನಾಯಕ ಹೋಗಲು ನಿರಾಕರಿಸಿಬಿಟ್ಟ… ತೀವ್ರವಾದ ಗೊಂದಲ ಮಾತುಕತೆಗಳು ಆ ಗುಂಪಿನಲ್ಲಿ ಇಡೀ ರಾತ್ರಿ ನಡೆಯಿತು.. ಸೂರ್ಯೋದಯದ ಹೊತ್ತಿಗೆ ಒಂದು ತೀರ್ಮಾನ ಮಾಡಿದ್ರಂತೆ ಏನಂದ್ರೆ, ತೀರಾ ವಯಸ್ಸಾದವರನ್ನು ಹೊರತು ಪಡಿಸಿ ಇಡೀ ತಾಂಡಾದ ಜನರೆಲ್ಲಾ ವಲಸೆ ಹೋಗಿಬಿಡೋದು ಅಂತ. ಹಾಗೆ ಒಂದಷ್ಟು ದಿನ ಆದ್ಮೇಲೆ ಅವರನ್ನೂ ಸ್ಥಳಾಂತರ ಮಾಡೋದು ಅನ್ನೋ ನಿರ್ಧಾರ ಮಾಡಿದ್ರಂತೆ..
ಸರಿ ವಲಸೆ ಶುರುವಾಯ್ತು.. ಕುರಿ, ಎಮ್ಮೆಗಳು, ದನ ಎತ್ತುಗಳ ಜೊತೆ ಪಾತ್ರೆ ಪಗಡಿ, ಬಟ್ಟೆ ಬರೆಗಳನ್ನು ಗಂಟು ಕಟ್ಟಿಕೊಂಡು ತುಂಗಭದ್ರಾ ನದಿಯ ನಡುವಿದ್ದ ಪುಟ್ಟ ಪುಟ್ಟ ದ್ವೀಪಗಳಲ್ಲಿ ತಲೆಮರೆಸಿಕೊಂಡಿದ್ರಂತೆ.. ಇವ್ರ ಹಣೆಬರಹಕ್ಕೆ ಮಳೆಗಾಲ ಶುರುವಾಗಿ ದ್ವೀಪಗಳಲ್ಲಿ ನೀರಿನ ಮಟ್ಟ ಏರುತ್ತಾ ಹೋಯ್ತು, ಸರಿ ಬೇರೆ ದಾರಿ ಕಾಣದೇ ಆ ಜಾಗದಿಂದ್ಲೂ ಹೊರಟು ಕೃಷ್ಣಾ ನದೀ ಪಾತ್ರದ ಕಡೆ ಹೊರಟ್ರಂತೆ, ದಾರಿಯಲ್ಲಿ ಈ ಬೆಟ್ಟಗಳ ಸಾಲು ಅವರಿಗೆ ಸುರಕ್ಷಿತ ತಾಣವಾಗಿ ಕಂಡು ಇಲ್ಲೇ ನೆಲೆಯೂರಿದ್ರಂತೆ… ಹೀಗೆ ನವವಿವಾಹಿತೆಯೊಬ್ಬಳನ್ನು ಕಾಪಾಡುವ ದೃಷ್ಟಿಯಿಂದ ಇಲ್ಲಿನ ಕೋಟೆ ನಿರ್ಮಾಣ ಆಯ್ತಂತೆ” ಅಂತ ಆ ಹಿರಿಯರು ಮಾತು ಮುಗಿಸಿದರು..
ನಾನೂ ಕಥೆ ಕೇಳಿ ಅವಾಕ್ಕಾದೆ.. ಬರಿಗೈಲಿ ಬಂದ ಒಂದಷ್ಟು ಜನ ಗುಡ್ಡಗಾಡಿನ ಜನ ಅದ್ಹೇಗೆ ಇಷ್ಟು ದೊಡ್ಡ ಕೋಟೆ ಕಟ್ಟಿದ್ರಪ್ಪಾ ಅನ್ನೋ ಕುತೂಹಲ ನನ್ನ ತಲೆಯಲ್ಲಿ ಹೊಕ್ಕುಬಿಡ್ತು.
ಬಸ್ಸು ತನ್ನವೇಗವನ್ನು ಹೆಚ್ಚಿಸಿಕೊಂಡು ಕಲಬುರಗಿ ತಲುಪಿದಾಗ ಗಂಟೆ ಎಂಟಾಗಿತ್ತು.. ನಾನೂ ರೂಮೊಂದನ್ನು ಬಾಡಿಗೆಗೆ ಹಿಡಿದು ಸ್ವಲ್ಪ ಹೊತ್ತು ಹಾಗೆಯೇ ಅಡ್ಡಾದೆ, ಕಣ್ಮುಚ್ಚಿದರೆ ಅದೇ ಕೋಟೆ ಕಾಣುತ್ತಿದೆ. ಇರಲಿ ಅದೇನು ಈ ಕಿಲೇ ಕಾ ರಹಸ್ಯ ಪತ್ತೆ ಮಾಡೇ ಬಿಡೋಣ ಅಂತ ಮನಸ್ಸಲ್ಲೇ ತೀರ್ಮಾನಿಸಿ ಬಿಟ್ಟೆ…
ಬಂದ ಕೆಲಸ ಮುಗಿಸಿಬಿಟ್ಟೆ… ಆದ್ರೆ ತಲೆಯಲ್ಲಿ ಕೊರೆಯುತ್ತಿರುವ ಕೋಟೆಯ ವಿಚಾರ ಏನ್ಮಾಡೋದು ಗೊತ್ತಾಗುತ್ತಿಲ್ಲ. ಆಗ ಹೊಳೆದ ಹೆಸರು ವೀರಭದ್ರಪ್ಪನವರದ್ದು… ಅದೇ ಬೆಳಿಗ್ಗೆ ಬಸ್ಸಲ್ಲಿ ಪಕ್ಕದಲ್ಲಿ ಕುಳಿತಿದ್ದವರು… ಸದ್ಯ ಹೇಗೋ ಅವರ ಮೊಬೈಲ್ ಸಂಖ್ಯೆ ಕೇಳಿ ಪಡೆದಿದ್ದೆ.. ಸರಿ ಫೋನಾಯಿಸಿದೆ ಒಂದೆರೆಡು ಬಾರಿ ರಿಂಗಾಗುವಷ್ಟರಲ್ಲಿ ಆ ಬದಿಯಲ್ಲಿ ಇದ್ದವರು ಹಲೋ ಯಾರು ಬೇಕು ಅಂದ್ರು, ನಾನು ನಿಧಾನವಾಗಿ ವೀರಭದ್ರಪ್ಪನವರು ಬೇಕಾಗಿತ್ತು ಅಂದೆ. ಆ ಕಡೆಯವರು ಇಲ್ರೀ ಅವರು ಹೊರಗ ಹೋಗ್ಯಾರ ಸಂಜೀ ಮುಂದ ಬರ್ತಾರು ಅಂತ ಹೇಳಿದ್ರು.. ಸರಿ ಮತ್ತೆ ಸಾಯಂಕಾಲ ಫೋನ್ ಮಾಡುವುದಾಗಿ ಹೇಳಿ ಸುಮ್ಮನಾದೆ… ಅದ್ಯಾಕೆ ಈ ಕೋಟೆ ಈ ಪರಿ ಕಾಡ್ತಾ ಇದ್ಯೋ ಆ ದೇವನೇ ಬಲ್ಲ… ಸರಿ ಸಂಜೆ ಮತ್ತೆ ಫೋನಾಯಿಸಿದೆ. ಈ ಬಾರಿ ಖುದ್ದು ವೀರಭದ್ರಪ್ಪನವರೇ ಫೋನ್ ರಿಸೀವ್ ಮಾಡಿದ್ರು… ನಾನು ಪರಿಚಯ ಹೇಳಿದೆ. ತಕ್ಷಣವೇ ಗುರುತು ಹಿಡಿದು ಬರ್ರೀ ಸಾಹೇಬ್ರ ಮನಿಗೆ ಒಂದು ಚಾ ಕುಡ್ದು ಹೋಗ್ರಲ್ಲಾ ಅಂತ ಆಹ್ವಾನಿಸಿದ್ರು. ಸರಿ ಅವರ ಮನೆ ವಿಳಾಸ ಪಡೆದುಕೊಂಡು ಹೊರಟುಬಿಟ್ಟೆ…
ರಿಕ್ಷಾವೊಂದನ್ನು ಹಿಡಿದು ವೀರಭದ್ರಪ್ಪ ಅವರ ಮನೆ ತಲುಪಿದೆ..ಬಹು ಆತ್ಮೀಯವಾಗಿ ಸ್ವಾಗತಿಸಿದರು. ಪುಟ್ಟದಾದ್ರೂ ಅಚ್ಚುಕಟ್ಟಾದ ಮನೆ. ಸೋಫಾದ ಮೇಲೆ ಕೂರುತ್ತಿದ್ದ ಹಾಗೆ ತಣ್ಣನೆಯ ನೀರು ಮತ್ತು ಬೆಲ್ಲದ ಚೂರುಗಳನ್ನು ಕೊಟ್ರು.. ಹಿಂದೆಯೇ ಬಿಸಿಬಿಸಿಯಾದ ವಗ್ಗರಣೆಯ ಮಂಡಕ್ಕಿ ಮತ್ತು ಮಿರ್ಚಿಯ ಔತಣವೂ ನಡೆಯಿತು. ನನ್ನ ಉದ್ಯೋಗ ಊರು ಹೀಗೇ ಕೆಲಹೊತ್ತಿನ ಮಾತುಕತೆ ನಡೆಯುವಷ್ಟರಲ್ಲಿ ಹಬೆಯಾಡುವ ಗಟ್ಟಿ ಹಾಲಿನ ಚಹ ಕೂಡಾ ಬಂತು.. ಚಹ ಸೇವಿಸುತ್ತಲೇ ನನ್ನ ತಲೆಯಲ್ಲಿ ಗುಂಗಿ ಹುಳುವಿನಂತೆ ಕೊರೆಯುತ್ತಿದ್ದ ಕೋಟೆಯ ಕಥೆಯ ವಿಚಾರ ಪ್ರಸ್ತಾಪ ಮಾಡಿದೆ. ಇನ್ನೇನಾದ್ರೂ ಮಾಹಿತಿ ಅವರ ಬಳಿ ಸಿಗುತ್ತೇನೋ ಅಂತ.. ಅದಕ್ಕವರು ಇಲ್ರೀ ನಂಗೇನು ಹೆಚ್ಚು ತಿಳಿದಿಲ್ಲ ಅಂತ ನನ್ನಾಸೆಗೆ ತಣ್ಣೀರು ಎರಚಿಬಿಟ್ರು… ನನ್ನ ಪರಿಸ್ಥಿತಿ ಗಾಳಿ ಬಿಟ್ಟ ಬೆಲೂನಿನಂತಾಯಿತು.. ನನ್ನ ಜೋಲುಮೋರೆ ನೋಡಿ ಆ ವೃದ್ಧರಿಗೆ ಅದೇನು ಅನ್ನಿಸಿತೋ ಏನೋ ತಡೀರಿ ಬಂದೆ ಅಂತ ಕೋಣೆಯೊಳಗೆ ಹೋದ್ರು, ಒಂದೆರಡು ನಿಮಿಷಗಳ ಬಳಿಕ ಹೊರಬಂದ್ರು ಬರುವಾಗ ಅವರ ಕೈಯಲ್ಲಿ ಪುಟ್ಟದೊಂದು ಡೈರಿ ಇತ್ತು. ಮಾತಾಡದೇ ವೀರಭದ್ರಪ್ಪನವರು ಆ ಡೈರಿಯ ಪುಟಗಳನ್ನು ತಿರುವುತೊಡಗಿದರು. ಜೇಬಿನಿಂದ ತಮ್ಮ ಮೊಬೈಲ್ ಹೊರತೆಗೆದು ಅದ್ಯಾರ ನಂಬರ್‌ಗೋ ಡಯಲ್ ಮಾಡಿ ಮೊಬೈಲನ್ನು ಕಿವಿಗೆ ಹಿಡಿದು ಕುಳಿತ್ರು… ಅತ್ತ ಕಡೆಯಿಂದ ನೋ ರಿಪ್ಲೈ… ಮತ್ತೊಮ್ಮೆ ಪ್ರಯತ್ನಿಸಿದ್ರು… ಆ ಬದಿಯವರು ಕರೆ ಸ್ವೀಕರಿಸಿರಬೇಕು. ಇವರ ಮುಖ ಮೊರದಷ್ಟಾಯಿತು… ಒಂದೆರಡು ನಿಮಿಷಗಳಲ್ಲಿ ಸೂಕ್ಷ್ಮವಾಗಿ ಕೋಟೆಯ ವಿಚಾರಗಳನ್ನು ಅತ್ತಲಿನವರಿಗೆ ತಿಳಿಸಿ ನನ್ನ ಬಗ್ಗೆಯೂ ಪ್ರಸ್ತಾಪಿಸಿದರು. ಅವರೇನು ಹೇಳಿದ್ರೋ ಅನ್ನೋ ಕುತೂಹಲ ನನಗೆ, ವೀರಭದ್ರಪ್ಪನವರು ಸರಿ ಹಾಗೇ ಆಗ್ಲಿ ಅಂತೆಲ್ಲಾ ಹೇಳಿ ಕಾಲ್ ಕತ್ತರಿಸಿದ್ರು. ನಿಧಾನವಾಗಿ ನನ್ನ ಕಡೆ ತಿರುಗಿ.. ” ಸಾಹೇಬ್ರ ಒಂದು ಕೆಲಸ ಮಾಡ್ರಲ.. ನಾಳೆ ಏಳೂವರೆಗೆ ರೆಡಿ ಇರ್ರಿ ನಾ ನಿಮ್ ಲಾಡ್ಜ್ ಬಳಿ ಬರ್ತೀನಿ, ಆ ಕೋಟೆಯ ಊರಿಗೆ ಹೋಗೋಣ, ನನ್ನ ಸ್ನೇಹಿತರು ಕೂಡಾ ಬರ್ತೀನಿ ಅಂದಾರ್ರಿ.. ಅವರು ಒಂದಷ್ಟು ರಿಸರ್ಚ್ ಮಾಡ್ಯಾರಂತ ಹೋಗಿ ಅದೇನು ಅಂತ ಕೇಳೇಬಿಡಾಣ ಅಂತ ಧೈರ್ಯ ಮೂಡಿಸಿದ್ರು… ನಾನೆಷ್ಟು ನಿರಾಕರಿಸಿದ್ರೂ ರಾತ್ರಿ ಪುಷ್ಕಳವಾದ ರೊಟ್ಟಿ ಊಟವನ್ನು ಸಹ ಮಾಡಿಸಿ ಬೀಳ್ಕೊಟ್ಟರು.
ಮರುದಿನ ಟಾಕುಟೀಕಾಗಿ ಏಳು ಗಂಟೆಗೆಲ್ಲಾ ವೀರಭದ್ರಪ್ಪ ನನ್ನ ರೂಮಿನ ಮುಂದೆ ಹಾಜರಾಗಿಬಿಟ್ರು. ಸರಿ ನಾನೂ ಸಿದ್ದವಾಗಿದ್ದೆ.. ಸರಿ ಹೊರಟೇ ಬಿಟ್ವಿ, ನಾನು ನನ್ನ ಕ್ಯಾಮರಾ, ಬರೆಯಲು ಒಂದೆರಡು ಪೆನ್ನುಗಳು, ಪುಸ್ತಕ ಎಲ್ಲವನ್ನೂ ತೆಗೆದುಕೊಂಡೆ. ಲಾಡ್ಜಿನ ಎದುರಲ್ಲೇ ಇದ್ದ ಹೋಟೆಲ್ ಒಂದಕ್ಕೆ ನುಗ್ಗಿ ಒಂದಷ್ಟು ಉಪಹಾರ ಮುಗಿಸಿ ಅಲ್ಲಿಂದ ಬಸ್ಟ್ಯಾಂಡಿಗೆ ದಾರಿ ಬೆಳೆಸಿದೆವು. ಬಸ್ ಸ್ಟ್ಯಾಂಡ್ ನಲ್ಲಿ ವಿಪರೀತ ಜನಜಂಗುಳಿ, ಎಲ್ಲೆಂದರಲ್ಲಿ ಪಾನ್ ಉಗುಳಿದ ಕರೆಗಳು, ತಲೆಮೇಲೆ ರುಮಾಲು ಸುತ್ತಿ ಢಾಳಾಗಿ ಅರಶಿನದ ಭಂಡಾರವನ್ನು ಲೇಪಿಸಿಕೊಂಡು ಓಡಾಡುವ ಪುರುಷರು ಹಸಿರು ಬಣ್ಣದ ಇಳಕಲ್ ಸೀರೆಯನ್ನು ತಲೆತುಂಬಾ ಹೊದ್ದುಕೊಂಡ ಮಹಿಳೆಯರು ಅಲ್ಲಲ್ಲಿ ಕುಳಿತಿದ್ದಾರೆ, ಕೆಲವರು ಮಲಗಿದ್ದಾರೆ. ಅವರ ನಡುವೆಯೇ ಹೇಗೋ ಜಾಗ ಮಾಡಿಕೊಂಡು ನಾವಿಬ್ಬರೂ ಶಹಪುರಕ್ಕೆ ಹೋಗುವ ಬಸ್ಸಿನ ಬಳಿ ಬಂದೆವು. ಸದ್ಯ ಬಸ್ ಸಿದ್ಧ ಇತ್ತು. ಕೂಡಲು ಸುಲಭವಾಗಿ ಸೀಟು ಸಿಕ್ಕವು. ಬಸ್ಸು ಕ್ರಮೇಣ ಭರ್ತಿಯಾಯಿತು, ಕಂಡೆಕ್ಟರ್ ಟಿಕೆಟ್ ನೀಡುತ್ತಲೇ ಬಸ್ಸು ಹೊರಟಿತು. ವೀರಭದ್ರಪ್ಪನವರ ಬಗ್ಗೆ ಗೌರವದ ಭಾವನೆ ಹೆಚ್ಚಾಯಿತು.ಹಾಗೆಯೇ ಅವರ ಕುಟುಂಬದ ಬಗ್ಗೆ ವಿಚಾರಿಸತೊಡಗಿದೆ. ಅವರಿಗೆ ಮೂವರು ಮಕ್ಕಳಂತೆ, ಮೊದಲು ಮಗಳು ಆಕೆಗೆ ವಿವಾಹವಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿದ್ದಾಳಂತೆ ಆಕೆಗೆ ಒಬ್ಬ ಮಗನಂತೆ, ಇನ್ನುಳಿದ ಇಬ್ಬರೂ ಗಂಡು ಮಕ್ಕಳು ಮೊದಲನೆಯವ ಅಮೇರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ ಇನ್ನೊಬ್ಬ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾನಂತೆ, ಮಕ್ಕಳು ಕೈ ತುಂಬಾ ಸಂಪಾದಿಸಿ ಸಾಕಷ್ಟು ಹಣವನ್ನು ತಂದೆಗೆ ಕಳಿಸುತ್ತಿದ್ದಾರಂತೆ… ಮನೆಯಲ್ಲಿ ವೀರಭದ್ರಪ್ಪ ಮತ್ತು ಅವರ ಶ್ರೀಮತಿ ಸುಲೋಚನ ಮಾತ್ರಾ ಇರುವುದಾಗಿ ಹೇಳಿದರು. ಮಗನಿಗೆ ಕನ್ಯೆ ಹುಡುಕುತ್ತಿರುವುದಾಗಿ ತಿಳಿಸಿದರು… ನಾನು ಅವರಿಗೆ ನನ್ನ ಜೊತೆ ಬಂದಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದೆ. ಅದಕ್ಕೆ ವೀರಭದ್ರಪ್ಪ ” ಎಂತಾ ಮಾತೂಂತ ಹೇಳ್ತೀರ್ರಿ, ನೀವು ನಮ್ಮೂರಿನ ಕೋಟೆ ನೋಡಾಕ, ಅದ್ರ ಕತೆ ಕೇಳಾಕ ಅಷ್ಟು ದೂರದಿಂದ ಬಂದೀರಿ, ನಮ್ಮೂರ ಕತೆ ಕತಿ ಕೇಳಾಕ ನಮಗೂ ಆಸಿ ಹುಟ್ಟೈತ್ರಿ ” ಅಂತ ಮಾತು ಮೊಟಕುಗೊಳಿಸಿದರು. ಆ ಭಾಗದ ಮಳೆ ಬೆಳೆ ಹೀಗೆ ಅದೂ ಇದು ಮಾತು ಆಡ್ತಾ ಶಹಪುರವನ್ನು ಸೇರಿಕೊಂಡ್ವಿ.
ಶಹಪುರದಲ್ಲಿ ಗಲ್ಲಿ ಗಲ್ಲಿಗಳ ರಸ್ತೆಯ ಜಾಡನ್ನು ಹಿಡಿದು ಪ್ರೊಫೆಸರ್ ಇಂಗಳಗಿಯವರ ಮನೆಯನ್ನು ತಲುಪಿದೆವು. ಇಂಗಳಗಿಯವರೂ ವೀರಭದ್ರಪ್ಪನವರ ಓರಗೆಯವರು. ಅತ್ಯಂತ ಆದರದಿಂದ ನಮ್ಮನ್ನು ಬರಮಾಡಿಕೊಂಡ್ರು, ನನ್ನ ಪರಿಚಯವನ್ನು ವೀರಭದ್ರಪ್ಪ ಇಂಗಳಗಿಯವರಿಗೆ ಮಾಡಿಕೊಟ್ರು. ಬಹಳ ಪ್ರೀತಿಯಿಂದ ನಮ್ಮನ್ನು ಮನೆಯೊಳಗೆ ಬರಮಾಡಿಕೊಂಡು ನೀರು ಮತ್ತು ಬೆಲ್ಲವನ್ನು ನೀಡಿ ನಾವು ಬಂದ ಕಾರಣ ಕೇಳಿದ್ರು, ನಾನು ನಿಧಾನವಾಗಿ ನನಗೆ ಬಿದ್ದ ಕನಸು ಮತ್ತು ನಾನು ನೋಡಿದ ಕೋಟೆ ಹಾಗೂ ವೀರಭದ್ರಪ್ಪ ಹೇಳಿದ ಕಥೆ ಎಲ್ಲದರ ಪ್ರಸ್ತಾಪ ಮಾಡಿ ಆ ಕೋಟೆ ಮತ್ತು ಆ ಗುಡ್ಡಗಾಡು ಜನರ ಕಥೆ ಏನಾಯ್ತು ಅಂತ ತಿಳಿಯೋ ಕುತೂಹಲ ಎಲ್ಲವನ್ನೂ ತಿಳಿಸಿದೆ. ಒಂದರೆ ಗಳಿಗೆ ಚಿಂತಿತರಾಗಿ ಮುಖದಲ್ಲಿ ಯಾವುದೇ ಭಾವವಿಲ್ಲದೇ ಕುಳಿತರು. ನಾವೂ ಸುಮ್ಮನಾಗಿ ಕಾಯುತ್ತಿದ್ವಿ… ಅದೇನು ಅನ್ನಿಸಿತೋ ಏನೋ ಆ ಹಿರಿಯ ಜೀವ ಒಂದು ನಿರ್ಧಾರಕ್ಕೆ ಬಂದವರಂತೆ ” ಬನ್ನಿ ಒಳಗೆ ಮಾತಾಡೋದು ಬಹಳಷ್ಟು ಇದೆ ” ಅಂತ ತಮ್ಮ ಕೋಣೆಯೊಳಗೆ ಕರೆದೊಯ್ದರು. ನಾವೂ ಅವರನ್ನು ಹಿಂಬಾಲಿಸಿ ಅವರ ಕೋಣೆಯನ್ನು ಪ್ರವೇಶಿಸಿದ್ವಿ. ಯಾವುದೋ ಸರ್ಕಾರಿ ಗ್ರಂಥಾಲಯ ಪ್ರವೇಶಿಸದ ಹಾಗೆ ಆಯ್ತು ಕೊಠಡಿಯ ತುಂಬೆಲ್ಲಾ ಪುಸ್ತಕದ ರ್ಯಾಕುಗಳು. ಕನ್ನಡ ಮತ್ತು ಇಂಗ್ಲೀಷಿನ ಸಾವಿರಾರು ಪುಸ್ತಕಗಳು. ನಡುಮಧ್ಯದಲ್ಲಿ ಒಂದು ಪುಟ್ಟ ಟೇಬಲ್ ಅವರಿಗೊಂದು ಕುರ್ಚಿ ಹಾಗೂ ಸಂದರ್ಶಕರಿಗೆ ಎರಡು ಕುರ್ಚಿಗಳನ್ನು ಹಾಕಲಾಗಿತ್ತು. ಟೇಬಲ್ಲಿನ ಮೇಲೆ ಪುಟ್ಟದೊಂದು ಲ್ಯಾಂಪ್, ಗಾಜಿನ ಪೇಪರ್ ವೈಟ್, ಪೆನ್ನುಗಳು, ಸ್ಕೇಲ್ ಮತ್ತು ಕತ್ತರಿಯನ್ನೂ ಇರಿಸಿದ್ರು. ನಿಮಗೇನು ಗೊತ್ತಿದೆ ಹೇಳಿ ಅಂದ್ರು ನಾನು ವೀರಭದ್ರಪ್ಪ ಹೇಳಿದ ಕಥೆಯನ್ನು ಅವರ ಮುಂದೆ ತಿಳಿಸಿದೆ. ಬೇಸರವಿಲ್ಲದೇ ಕಥೆ ಕೇಳಿ ಹೌದು ಹೌದು ಅಂತ ಗೋಣಾಡಿಸುತ್ತಾ ಕುಳಿತಿದ್ರು. ಕೊನೆಯಲ್ಲಿ ನಾ ಹೇಳಿದ ಕಥೆ ಸರಿಯಾಗಿದೆ ಅಂತ ಹೇಳಿ ಇನ್ನೇನು ಮಾಹಿತಿ ಬೇಕು ಅಂದ್ರು. ನಾನು ಈ ಜನರ ಮೂಲ, ಮುಂದೇನಾಯ್ತು, ಈ ಕೋಟೆ ಕಟ್ಟಿದ್ದು ಯಾರು ಅಂತ ಕೇಳಿದೆ ಅದಕ್ಕವರು ತಾಳ್ಮೆಯಿಂದ ” ನೀವು ಹೇಳಿ ನಿಲ್ಲಿಸಿದ್ದೀರಲ್ಲ ಅಲ್ಲಿಂದಲೇ ಮುಂದುವರೆಸುತ್ತೇನೆ ಕೇಳಿ ” ಅಂತ ಶುರುಮಾಡಿದ್ರು.
” ಅದು ವಿಜಯನಗರದ ಅರಸರ ಕಾಲ ಎಲ್ಲವೂ ಸುಭಿಕ್ಷವಾಗಿತ್ತು. ರಾಜ್ಯದಲ್ಲಿ ಮಳೆ ಬೆಳೆ ಎಲ್ಲವೂ ಚೆನ್ನಾಗಿತ್ತು. ರಾಜ್ಯದಲ್ಲಿ ಪ್ರಜೆಗಳಲ್ಲಿ ಸಾಮರಸ್ಯ ಎಲ್ಲವೂ ಚೆಂದವಿತ್ತು. ಇಲ್ಲಿನ ಮಣ್ಣಿನ ಮಡಕೆಗಳಿಗೆ, ಕೌದಿ, ಕಂಬಳಿಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ವ್ಯಾಪಾರ ವಹಿವಾಟು ಎಲ್ಲವೂ ಚೆನ್ನಾಗಿತ್ತು. ದೂರದ ಅರಬ್ ದೇಶಗಳಿಂದ ಕುದುರೆಗಳನ್ನು ಇಲ್ಲಿಗೆ ತರಲಾಗುತ್ತಿತ್ತು. ಹಾಗೂ ಸ್ಥಳೀಯವಾಗಿ ಖೆಡ್ಡಾ ಮಾಡಿ ಆನೆಗಳನ್ನೂ ಪಳಗಿಸುತ್ತಿದ್ದರು. ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದ ಜನರು ಆನೆ ಸಾಕುವುದರಲ್ಲಿ ನಿಷ್ಣಾತರಾಗಿದ್ರು. ಹೀಗೆಯೇ ಇದ್ದ ಒಂದು ಗುಂಪಿಗೆ ಕೃಷ್ಣಪ್ಪ ಎಂಬುವವ ನಾಯಕನಾಗಿದ್ದ, ಆತನಿಗೆ ಒಬ್ಬನೇ ಮಗ ಅವನಿಗೆ ಪಿಡ್ಡಪ್ಪ ಅಂತ ಹೆಸರಿಟ್ಟಿದ್ರು, ತಂದೆಯಂತೆಯೇ ಮಗನೂ ಆಜಾನುಬಾಹು, ಸುಮಾರು ಆರು ಅಡಿಗಳ ದೈತ್ಯದೇಹಿ ನೋಡಲು ಸುಂದರವಾಗಿದ್ದ ಆಗ ಅವನಿಗೆ ಹದಿನೆಂಟು ವರ್ಷಗಳಾಗಿತ್ತು. ಅಪ್ಪ ಆನೆ ಪಳಗಿಸುವುದನ್ನು ಬಾಲ್ಯದಿಂದಲೇ ನೋಡುತ್ತಲೇ ಬೆಳೆದಿದ್ದ.. ಹಾಗೂ ತಾನೂ ಆನೆ ಪಳಗಿಸುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದ. ಅರಮನೆಯ ಒಡನಾಟವನ್ನು ತಂದೆ ಕೃಷ್ಣಪ್ಪ ನಾಯಕನೇ ನೋಡಿಕೊಳ್ಳುತ್ತಿದ್ದ.. ಪಿಡ್ಡಪ್ಪ ನಾಯಕ ಆನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ.
ಒಮ್ಮೆ ಕಾಡಿನೊಳಗೆ ಪುಂಡು ಆನೆಯೊಂದರ ಉಪಟಳ ಹೆಚ್ಚಾಗಿತ್ತು ಸುದ್ದಿ ತಿಳಿದ ಕೃಷ್ಣಪ್ಪ ನಾಯಕ ಮೊದಲ ಬಾರಿಗೆ ಮಗನನ್ನೇ ಖೆಡ್ಡ ನಡೆಸುವಂತೆ ಹೇಳಿ ತಕ್ಕದಾದ ತಂಡವನ್ನು ಕಳಿಸಿಕೊಟ್ಟ. ಪಿಡ್ಡಪ್ಪ ಒಂದಷ್ಟು ಹಗ್ಗ, ಅಂಕುಶ, ಭರ್ಜಿ ಮೊದಲಾದ ಸಾಮಗ್ರಿಗಳನ್ನು ಹಿಡಿದು ತನ್ನದೇ ಓರಗೆಯ ಮಿತ್ರರ ಜೊತೆಗೂಡಿ ಆನೆ ಹಿಡಿಯಲು ಹೊರಟ.. ತಂಡದಲ್ಲಿ ಇವನದೇ ಹುರುಪು, ಕಾಡು ಸನಿಹವಾಗುತ್ತಿತ್ತು, ಕಾಡಿನಂಚಿನಲ್ಲಿದ್ದ ಹಳ್ಳಿಗೆ ಪ್ರವೇಶಮಾಡಿತು ಪಿಡ್ಡನಾಯಕನ ತಂಡ, ಆ ಹಳ್ಳಿಯ ಜನರು ಇವರನ್ನು ದೇವಲೋಕದಿಂದ ಬಂದ ದೇವತೆಗಳಂತೆ ನೋಡತೊಡಗಿದರು. ಪುಂಡು ಆನೆಯ ಉಪಟಳದಿಂದ ಬಹಳಷ್ಟು ರೋಸಿಹೋಗಿತ್ತು ಆ ಜನರಿಗೆ. ಆ ಹಳ್ಳಿಯಲ್ಲಿ ತನ್ನದೇ ಜಾತಿಯ ನಾಯಕನೊಬ್ಬ ಇದ್ದ ನೆನಪು ಪಿಡ್ಡಪ್ಪನಿಗೆ.. ಆ ಹಳ್ಳಿಯ ಮುಖ್ಯಸ್ಥನಲ್ಲಿ ವಿಚಾರಿಸಿದ. ಹಳ್ಳಿಯ ಪಟೇಲ ಹೂಂ ಸೋಮಿ ಅವ ಇದ್ದ ಕಳೆದವಾರ ಇದೇ ಆನೆ ಹಿಡಿಯೋಕ ಹೋದಾಗ ಕೊಂದುಬಿಡ್ತು ರೀ ಅವನ್ನ.. ಅವನ ಮನೆ ಮಂದಿನ ನೋಡಿದ್ರಾ ಕರಳು ಕಿತ್ತು ಬರತೈತ್ರೀ ಅಂದ. ಮತ್ತು ಆ ಮೃತನ ಮನೆಯವರಿಗೆ ಹೇಳಿ ಕಳಿಸಲಾಯ್ತು. ರೋಧಿಸುತ್ತಾ ನಡುವಯಸ್ಸಿನ ಹೆಂಗಸೊಬ್ಬಳು ಬಂದು ತಮ್ಮಾ ಹುಷಾರಲೇ ಆ ಆನಿ ನನ್ನ ಸೌಭಾಗ್ಯ ಕಳಿದೈತಿ, ಇನ್ನ ನನ್ನ ಕೂಸ ಹ್ಯಾಂಗ ಮದುವಿ ಮಾಡ್ಲೋ, ಆ ಆನೀನ ಮಾತ್ರಾ ಬಿಡಬ್ಯಾಡಲೇ ಅಂತ ಕೂಗಾಡಲು ಶುರುಮಾಡಿದ್ಲು.. ಇವನೂ ಯಕ್ಕಾ ಚಿಂತಿ ಬಿಡ್ರಿ ನಾ ಅದೇನಿ, ಆ ಆನೀನ ನಾಯಿ ಹಿಡ್ದಂಗ್ ಹಿಡ್ದು ಅರಮನೆ ಲಾಯದಾಗ ಕಟ್ತೀನಿ ಅಂದ.. ಸರಿ ಸ್ವಲ್ಪ ಹೊತ್ತು ವಿಶ್ರಮಿಸಿ ಊಟೋಪಚಾರಗಳನ್ನು ಮುಗಿಸಿ ನಸುಗತ್ತಲೆಯಲ್ಲಿ ಪಿಡ್ಡಪ್ಪ ತನ್ನ ತಂಡದೊಂದಿಗೆ ಅರಣ್ಯಪ್ರವೇಶ ಮಾಡಿದ…
ಆನೆ ಓಡಾಡಿದ ಗುರುತುಗಳನ್ನು ಹುಡುಕುತ್ತಾ ಕಾಡಲ್ಲಿ ಅಲೆದಾಡತೊಡಗಿತು ತಂಡ.. ಒಂದೆರಡು ಕಡೆ ಕಂದಕಗಳನ್ನು ತೋಡಿ ಖೆಡ್ಡಾ ಸಿದ್ಧಮಾಡಿ. ಶಂಖ ಜಾಗಟೆಗಳನ್ನು ಬಾರಿಸುತ್ತಾ ಆನೆಯ ಬೇಟೆಗೆ ಹೊರಟೇಬಿಟ್ರು.. ಅದೃಷ್ಟವೇನೋ ಎಂಬಂತೆ ಆ ಪುಂಡು ಆನೆ ಬಹುಬೇಗ ಇವರ ಕಣ್ಣಿಗೆ ಕಾಣಿಸಿತು. ಪಿಡ್ಡಪ್ಪ ತನ್ನ ಅನುಚರರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಾ ಆ ಆನೆಯನ್ನು ಸುತ್ತುವರೆಯುವಂತೆ ಮಾಡಿದ. ಶಂಖ ಜಾಗಟೆಗಳ ಶಬ್ದಕ್ಕೆ ಬೆಚ್ಚಿದ ಆನೆಯನ್ನು ನಿಧಾನವಾಗಿ ಇವರು ತೋಡಿದ್ದ ಖೆಡ್ಡಾದ ಬಳಿಗೆ ಕರೆತಂದು ಕೊನೆಗೆ ಖೆಡ್ಡಾದಲ್ಲಿ ಅದನ್ನು ಬೀಳಿಸಿದರು. ಆಗ ಪಿಡ್ಡಪ್ಪ ನಾಯಕನು ತನ್ನ ಅನುಚರರಲ್ಲಿ ಇಬ್ಬರನ್ನು ಅರಮನೆಗೆ ಕಳಿಸಿ ನಾಲ್ಕು ಸಾಕಾನೆಗಳನ್ನು ತರುವಂತೆ ಆದೇಶಿಸಿದನು... ಬಹುತೇಕ ಎಲ್ಲ ಅನುಚರರನ್ನು ಆನೆಯನ್ನು ಕಾಯಲು ಬಿಟ್ಟು ತಾನು ಆ ಹಳ್ಳಿಗೆ ಬಂದನು. ಹಳ್ಳಿಯ ಪ್ರಮುಖರೆಲ್ಲರನ್ನೂ ಸೇರಿಸಿ ಆನೆಯನ್ನು ಸೆರೆ ಹಿಡಿದಿರುವುದಾಗಿ ಹೇಳಿ ತನ್ನ ಬಳಗಕ್ಕೆ ಭೋಜನ ವ್ಯವಸ್ಥೆ ಬೇಕಾಗಿದೆ ಎಂದನು. ಇಡೀ ಗ್ರಾಮವೇ ಆನಂದದಿಂದ ಸಂಭ್ರಮವನ್ನು ಆಚರಿಸಲು ಶುರುಮಾಡಿತು. ಕೆಲವರ ಮನೆಗಳಲ್ಲಿ ಹೋಳಿಗೆಯ ತಯಾರಿಯು ಶುರುವಾಯಿತು, ರೊಟ್ಟಿ ಪಲ್ಯಗಳು ಅನ್ನ, ಸಾರುಗಳು, ಗಟ್ಟಿ ಮೊಸರು ಎಲ್ಲವನ್ನು ಸಿದ್ಧ ಮಾಡತೊಡಗಿದರು. ಪಿಡ್ಡಪ್ಪ ತಂದ ಈ ಶುಭವಾರ್ತೆಗೆ ಅವನನ್ನು ಹೆಗಲಮೇಲೆ ಹೊತ್ತುಕೊಂಡು ಆ ಹಳ್ಳಿಯಲ್ಲಿ ಮೆರವಣಿಗೆಯನ್ನು ಆ ಊರಿನ ಯುವಕರು ಮಾಡುತ್ತಿದ್ರು… ಆ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ… ನಾಯಕನೂ ಬಹಳ ಖುಷಿಯಿಂದ ಇದ್ದನು.ಮೆರವಣಿಗೆಯಲ್ಲಿ ಸಾಗುವಾಗ ಪುಟ್ಟ ಗುಡಿಸಲಿನ ಬಾಗಿಲಲಿ ಮರೆಯಾಗಿ ನಿಂತು ನೋಡುತ್ತಿದ್ದ ಚೆಲುವೆಯ ಮೇಲೆ ಅವನ ಕಣ್ಣು ನೆಟ್ಟಿತು.
ಅಷ್ಟರಲ್ಲಿ ಆ ಮನೆಯ ಒಳಗಿಂದ ಅದೇ ನಡುವಯಸ್ಕ ಹೆಂಗಸು ಹೊರಬಂದು ಪಿಡ್ಡಪ್ಪನನ್ನು ಕೊಂಡಾಡಲು ಶುರುಮಾಡಿದಳು. ಇವನೂ ಆಕೆಗೆ ನಮಸ್ಕರಿಸಿ ಯಕ್ಕಾ ನಾಳೆ ಮಾಮನ್ನ ಕೊಂದ ಆನೀನ ಕಾಡಿಂದ ಹೊರಕ್ಕೆ ತರತೀನ ನೋಡಬಾರ ಯಕ್ಕಾ ಅಂದ… ಆದ್ರೂ ಇವನ ಕಣ್ಣು ಆ ಚೆಲುವೆಯ ಮೇಲೇ ನೆಟ್ಟಿತ್ತು… ಆ ಚೆಲುವಾದ ಕಂಗಳೂ ಇವನನ್ನೇ ನೋಡುತ್ತಿವೆ… ಮೆರವಣಿಗೆ ಮುಗಿದು ಎಲ್ರೂ ಅವರವರ ಕೆಲಸಗಳಲ್ಲಿ ತೊಡಗಿಕೊಂಡ್ರು, ಇವನೂ ನಿಧಾನವಾಗಿ ಆ ಗುಡಿಸಲಿನ ಕಡೆ ಹೆಜ್ಜೆಹಾಕಿದ… ಇನ್ನೂ ಸಂಭ್ರಮದಲ್ಲೇ ಇದ್ದ ಆ ಹೆಂಗಸು ಇವನನ್ನು ತನ್ನ ಮನೆಗೆ ಕರೆದಳು. ಇವನೂ ಹೋದ. ಆಕೆಯ ಕಂಗಳಲ್ಲಿ ನಿಲ್ಲದ ಅಶ್ರುಧಾರೆ. ಇವನು ಆಕೆಯನ್ನು ಸಂತೈಸುತ್ತಾ ಹೇಳಿದ ಯಕ್ಕಾ ಇನ್ಯಾಕೆ ಅಳಾಕ ಹತ್ತಿ.. ಆ ಆನೀನ ಹಿಡಿದಾತು ಅಂದ, ಅದಕ್ಕೆ ಆಕೆ ಕಲ್ಲುಗುಂಡಿನಂತ ನಿನ ಮಾವ ತೀರಿಹೋದ್ನೋ ತಮ್ಮಾ ಈ ಎದೀ ಮ್ಯಾಲ ನಿಂತಿರೋ ನನ ಮಗಳ ಲಗ್ನಾ ಹ್ಯಾಂಗ ಮಾಡ್ಲೋ, ಆಕೀಗ ಗಂಡು ಎಲ್ಲಿಂದ ತರ‌್ಲೋ ತಮ್ಮಾ ಅಂತ ರೋಧಿಸಿದಳು. ಮೆಲ್ಲನೇ ಪಿಡ್ಡಪ್ಪ ಆಕೆಯ ಬಳಿ ಯಕ್ಕಾ ನೋಡಬೇ ನಿನದೇನೂ ಅಭ್ಯಂತರ ಇಲ್ಲಾಂದ್ರೆ ನಾನೇ ನಿನ ಮಗಳ ಲಗ್ನ ಮಾಡ್ಕೋತೀನಿ ಅಂದ.. ಆಕೆಯ ಕಂಗಳಲ್ಲಿ ಕಾಂತಿ ಮೂಡಿತು. ಸಿಂಹದಾಂಗ ಅದೀಯೋ ನೀ ಓಪ್ಪಿದರೆ ಆತಾ… ನಿಮ್ಮನೀಗ ಎಲ್ರೂ ಒಪ್ಪಬ್ಯಾಡದೇನೋ ಅಂದ್ಲು. ಇವ ಅದಕ್ಕೇನಬೇ ನಮ್ಮಪ್ಪನ್ನ ನಿಮ್ಮನೆಗೆ ಕಳಿಸ್ತೀನಿ, ಅವನ ಜೋಡಿ ಮಾತಾಡಿ ಲಗ್ನ ಮಾಡಿಕೊಡಬೇ ಅಂದ… ಸರಿ ತಮ್ಮಾ ಹಂಗೇ ಆಗ್ಲಿ ಅಂದು ಪಿಡ್ಡಪ್ಪನಿಗೆ ತಿನ್ನಲು ಉಪಹಾರವನ್ನು ನೀಡಿದಳು…
ಮರುದಿನ ಅರಮನೆಯ ಸಾಕಾನೆಗಳು ಬಂದವು ಇವನು ತನ್ನ ಸಂಗಡಿಗರ ಜೊತೆಯಲ್ಲಿ ಕಾಡಿಗೆ ತೆರಳಿ ಖೆಡ್ಡಾಗೆ ಬಿದ್ದ ಆನೆಯನ್ನು ಬಲವಾದ ಹಗ್ಗಗಳಿಂದ ಬಂಧಿಸಿ ಕಾಡಿನಿಂದ ಅರಮನೆಯ ಗಜಶಾಲೆಗೆ ಸಾಗಿಸಿದನು. ಆ ಹಳ್ಳಿಯ ಜನರಷ್ಟೇ ಅಲ್ಲದೇ ನೆರೆಯ ಅನೇಕ ಹಳ್ಳಿಗಳ ಜನರೂ ಈ ಕೌತುಕವನ್ನು ನೋಡಿ ಸಂಭ್ರಮಿಸುತ್ತಿದ್ದರು. ಸಾಕಾನೆಯೊಂದರ ಮೇಲೆ ರಾಜನಂತೆ ಪಿಡ್ಡಪ್ಪ ಕುಳಿತು ಎಲ್ಲರ ಕಡೆಗೂ ಕೈಬೀಸಿ ಸಾಗುತ್ತಿದ್ದ. ಆ ಗುಂಪಿನ ನಡುವೆ ಆ ಸುಂದರ ನೇತ್ರದ್ವಯಗಳು ಇವನಿಗೆ ಗೋಚರಿಸಿತು. ಮನಸ್ಸಲ್ಲಿ ಅದೇನೋ ಉತ್ಸಾಹ ಮನೆಮಾಡಿತು. ಚೆಲುವಿಯ ಕಡೆಗೂ ಕೈ ಬೀಸಿದ. ಅವಳು ನಾಚಿಕೆಯಿಂದ ತಲೆತಗ್ಗಿಸಿದಳು. ಊರಿನವರ ಹರ್ಷೋದ್ಘಾರದ ನಡುವೆ ರಾಜಗಾಂಭೀರ್ಯದಿಂದ ಗಜಶಾಲೆಯತ್ತ ಇಡೀ ತಂಡ ರಾಜಧಾನಿಯತ್ತ ಪಯಣ ಬೆಳೆಸಿತು.
ಇದಾದ ಸುಮಾರು ಒಂದು ತಿಂಗಳ ಬಳಿಕ ಪಿಡ್ಡಪ್ಪನು ತನ್ನ ತಂದೆ ಕೃಷ್ಣಪ್ಪ ನಾಯಕನಲ್ಲಿ ಆ ಚೆಲುವಿಯ ವಿಚಾರವನ್ನು ಪ್ರಸ್ತಾಪಿಸಿದನು. ಹೇಗೂ ಮಗನಿಗೆ ಮದುವೆ ಮಾಡಬೇಕೆಂದು ಯೋಚಿಸುತ್ತಿದ್ದ ಕೃಷ್ಣಪ್ಪ ನಾಯಕನಿಗೆ ಬಹಳ ಸಂತಸವಾಗಿ ಮಗನಿಗೆ ಸಮ್ಮತಿಯನ್ನು ನೀಡಿದನು. ಒಂದು ಒಳ್ಳೆಯ ಮುಹೂರ್ತದಲ್ಲಿ ಸಪರಿವಾರ ಸಮೇತನಾಗಿ ಕಾಡಿನಂಚಿನಲ್ಲಿದ್ದ ಹಳ್ಳಿಗೆ ಪ್ರಯಾಣ ಬೆಳೆಸಿದನು.
ಹಳ್ಳಿಯನ್ನು ತಲುಪಿದರು, ಆ ಚೆಲುವಿಯ ಮನೆಯನ್ನು ಪತ್ತೆ ಮಾಡಲು ಕಷ್ಟವೇನೂ ಆಗಲಿಲ್ಲ. ಹೇಗೂ ಪಿಡ್ಡಪ್ಪ ಚೆಲುವಿಯ ಅಮ್ಮನ ಬಳಿ ಈ ವಿಚಾರ ಪ್ರಸ್ತಾಪಿಸಿದ್ದ,
ಚೆಲುವಿಯ ತಾಯಿಯೂ ಈ ಮದುವೆಗೆ ಸಮ್ಮತಿಯನ್ನು ಕೊಟ್ಟುಬಿಟ್ಳು. ತನ್ನ ಪತಿ ಮರಣಿಸಿದ ವಿಚಾರವನ್ನು ತಿಳಿಸಿದಳು. ಆಗ ಕೃಷ್ಣಪ್ಪ ನಾಯಕನು ” ಚಿಂತಿ ಬಿಡವ್ವಾ ತಂಗಿ ನಿನ ಮಗಳನ್ನು ನನ್ನ ಸ್ವಂತ ಮಗಳಂಗ ನೋಡ್ಕತೀವಿ. ಹ್ಯಾಗೂ ಪಿಡ್ಡ ಅರಮನೆ ಕೆಲಸಕ್ಕ ನಿಂತಾನ ಅನ್ನ ರೊಟ್ಟಿಗೇನೂ ಕೊರತೆ ಇರಾಂಗಿಲ್ಲ. ಒಂದು ಛಲೋ ದಿನ ನೋಡಿ ಇಬ್ಬರಿಗೂ ಲಗ್ನ ಮಾಡಿಸಿಬಿಡಾಣ” ಅಂದ. ಸರಿ ಅದೇ ಹಳ್ಳಿಯಲ್ಲಿಯ ಹಿರಿಯರೊಬ್ಬರು ಇಬ್ಬರ ಹೆಸರಿನ ಬಲದಮೇಲೆ ಒಂದು ತಿಂಗಳಲ್ಲೇ ಒಳ್ಳೆಯ ದಿನ ಮತ್ತು ಮುಹೂರ್ತವನ್ನು ಸೂಚಿಸಿದರು. ಇಬ್ಬರೂ ಅದೇ ದಿನದಲ್ಲೇ ಮದುವೆ ಮಾಡಲು ತೀರ್ಮಾನಿಸಿದರು. ಗ್ರಾಮಸ್ಥರ ಸಮ್ಮುಖದಲ್ಲೇ ವಿಳ್ಳೇಶಾಸ್ತ್ರವೂ ಮುಗಿದು ಹೋಯಿತು. ಗ್ರಾಮದ ಪಟೇಲ ಮುಂದೆ ಬಂದು ಕೃಷ್ಣಪ್ಪನಿಗೆ ” ನಾಯಕರೇ, ನಿಮ್ಮ ಮಗನ ಸಾಹಸಕ್ಕೆ ಮತ್ತು ಆತ ನಮಗೆ ಮಾಡಿರೋ ಉಪಕಾರಕ್ಕೆ, ನಾವು ಏನು ಕೊಟ್ರೂ ಕಮ್ಮಿ ಅನ್ಸತ್ತೆ. ಅದಕ್ಕೆ ನಿಮ್ಮ ಮಗನ ಮದುವಿ ಖರ್ಚು ನಾವು ಹಳ್ಳಿಯವರು ಸೇರಿ ಮಾಡ್ತೀವಿ. ದೇವರು ಕೊಟ್ಟಂತೆ ಛಲೋ ಮದುವಿ ಮಾಡ್ಕೊಡ್ತೀವಿ, ಚೆಲುವಿ ಅಪ್ಪನೂ ನಮ್ಮ ಹಳ್ಳೀ ಸಲುವಾಗಿ ಜೀವ ಕೊಟ್ಟಾನ, ಅವನ್ದು ಋಣ ಐತ್ರಪ್ಪ ನಮ್ ಮ್ಯಾಗ, ನೀವು ಬರೀ ಕೈಯ್ಯಾಗ ಬಂದು ಮದುವಿ ಮುಗಿಸಿ ನಮ್ಮೂರ ಮಗಳನ್ನು ಕರ್ಕೊಂಡು ಹೋಗ್ರಿ” ಅಂತ ತುಂಬು ಮನಸ್ಸಿನಿಂದ ಮಾತಾಡಿದ. ಎಲ್ಲರೂ ಸಂತಸದಿಂದ ಬೀಳ್ಕೊಂಡರು.
ಇತ್ತ ಪಿಡ್ಡಪ್ಪನಾಯಕನಿಗೂ ಒಳಗೊಳಗೇ ಸಂಭ್ರಮ ಮನೆಮಾಡಿತ್ತು. ಆ ಚೆಲುವಿಯನ್ನು ಅದ್ಯಾವಾಗ ಮದುವೆಯಾಗ್ತೇನೋ ಅವಳ ಜೊತೆಗಿನ ಸುಂದರ ಸಾಂಸಾರಿಕ ಜೀವನದ ಕನಸು ಕಾಣತೊಡಗಿದ. ಅದೇ ಗುಂಗಿನಲ್ಲಿ ಭಾರವಾದ ಮನಸ್ಸಿನಿಂದಲೇ ಆ ಹಳ್ಳಿಯಿಂದ ತನ್ನೂರಿಗೆ ತಂದೆ ತಾಯಿಯರ ಜೊತೆ ಹೊರಟ.
ಊರು ತಲುಪಿದೊಡನೆಯೇ ಆ ಊರಿನ ಪುರೋಹಿತರ ಬಳಿಗೆ ಕೃಷ್ಣಪ್ಪ ನಾಯಕ ಹೊರಟ, ತನ್ನ ಮಗನ ಹಾಗೂ ಚೆಲುವಿಯ ಹೆಸರಿನ ಬಲದ ಮೇಲೆ ಮದುವೆಗೆ ಮುಹೂರ್ತ ಹುಡುಕಿಸಿದ. ಆ ಪುರೋಹಿತರು ಪಂಚಾಂಗ ತೆಗೆದು ಲೆಕ್ಕಾಚಾರ ಮಾಡಿ ಶ್ರಾವಣ ಮಾಸದ ಶುದ್ಧ ಪಂಚಮಿಯ ದಿನ ಅತ್ಯಂತ ಪ್ರಶಸ್ತವಾಗಿದೆ. ಅಂದೇ ಮಾಡುವಂತೆ ಸೂಚನೆಯನ್ನು ಕೊಟ್ಟರು. ಕೃಷ್ಣಪ್ಪ ನಾಯಕನು ಆ ಪುರೋಹಿತರಿಗೆ ದಕ್ಷಿಣೆಯನ್ನು ಸಲ್ಲಿಸಿ ಸಂತಸದಿಂದ ಮನೆಗೆ ಮರಳಿದನು. ಮನೆ ತಲುಪಿ ಮಗ ಮತ್ತು ಮಡದಿಯ ಬಳಿ ಪುರೋಹಿತರು ಹೇಳಿದ್ದನ್ನು ತಿಳಿಸಿದನು. ಶ್ರಾವಣವೆಂದರೆ ಇನ್ನೂ ಮೂರು ತಿಂಗಳು, ಅಷ್ಟರಲ್ಲಿ ಮಳೆಗಾಲವೂ ಮುಗಿದಿರುತ್ತದೆ. ಎಲ್ಲವೂ ಸುಸೂತ್ರವಾಗಿ ನೆರವೇರಲಿದೆ ಎಂದು ಎಲ್ಲರೂ ಸಂಭ್ರಮದಿಂದ ಕಾಲ ಕಳೆದರು. ಮಾರನೆಯ ದಿನವೇ ಊರಿನ ಪ್ರತಿನಿಧಿಯೊಬ್ಬನನ್ನು ಗೊತ್ತು ಮಾಡಿ ಕಾಡಿನಂಚಿನ ಹಳ್ಳಿಯ ಚೆಲುವಿಯ ಮನೆಗೆ ಶುಭ ಸಮಾಚಾರವನ್ನು ತಲುಪಿಸಲಾಯ್ತು.
ಇತ್ತ ಪಿಡ್ಡಪ್ಪನ ಮನೆಯಲ್ಲಿ ಮದುವೆಯ ಸಡಗರ ಶುರುವಾಗತೊಡಗಿತು. ಪಿಡ್ಡಪ್ಪನಂತೂ ಹರ್ಷದ ಹೊಳೆಯಲ್ಲಿ ಈಜಾಡುತ್ತಿದ್ದ.. ಊಟ ನಿದ್ರೆಗಳು ಬೇಡವಾದವು. ಕುಳಿತಲ್ಲಿ ನಿಂತಲ್ಲಿ ಚೆಲುವಿಯ ಕನಸಲ್ಲೇ ತೇಲಾಡತೊಡಗಿದ. ಅತ್ತ ಮದುವಣಗಿತ್ತಿಯ ಕಥೆಯೂ ಅಷ್ಟೇ.. ಸಂಭ್ರಮದಲ್ಲಿ ತೇಲಾಡತೊಡಗಿದಳು.
ಆ ಹಳ್ಳಿಯ ಜನರೂ ಶುಭ ಸಮಾಚಾರ ತಿಳಿದಾಗಿನಿಂದ ಮದುವೆ ಸಿದ್ದತೆಯಲ್ಲಿ ಮುಳುಗಿಹೋದರು, ಕಳೆದ ವರ್ಷ ಬೆಳೆದ ಭತ್ತದಲ್ಲಿ ಇಪ್ಪತ್ತು ಮೂಟೆಯನ್ನು ಕೊಡಲು ಪಟೇಲ ಮುಂದಾದ, ಹಳ್ಳಿಯ ಬಹುತೇಕರು ತಂತಂಮ್ಮ ಮನೆಯಲ್ಲೇ ಮದುವೆಯೇನೋ ಎಂಬಂತೆ ಯಥಾಶಕ್ತಿ ಕಾಣಿಕೆ ನೀಡಲು ಶುರುಮಾಡಿದ್ರು….
ದಿನಗಳಂತೂ ಬೇಗ ಬೇಗ ಉರುಳತೊಡಗಿತು. ಪಿಡ್ಡಪ್ಪನಂತೂ ಅರಮನೆಯ ಕೆಲಸ ಕಾರ್ಯಗಳನ್ನು ಮರತೇಬಿಟ್ಟ…
ಅಂತೂ ಮದುವೆಯ ದಿನ ಬಂದೇಬಿಡ್ತು… ಕಾಡಿನಂಚಿನ ಹಳ್ಳಿಯಲ್ಲಿ ಸಡಗರದಿಂದ ಮದುವೆ ಶಾಸ್ತ್ರವು ಮೊದಲಾಯಿತು. ಪತಿಯನ್ನು ಕಳೆದುಕೊಂಡ ತಾಯಿಯಂತೂ ಹಳ್ಳಿಯ ಜನರ ಔದಾರ್ಯತೆ ಕಂಡು ಮೂಕಳಾಗಿ ಬಿಟ್ಟಿದ್ದಳು. ಚೆಲುವಿಯೂ ಹಳ್ಳಿ ಜನರ ಆರೈಕೆಯಲ್ಲಿ ಮತ್ತಷ್ಟು ಕಂಗೊಳಿಸುತ್ತಿದ್ದಳು. ಎರಡು ದಿನಗಳ ಮದುವೆ.. ಹಳ್ಳಿಯಲ್ಲಿ ಜಾತ್ರೆಯ ಸಂಭ್ರಮ. ರಾತ್ರಿಯ ಹೊತ್ತಿನಲಿ ಹಳ್ಳಿಯ ಬೀದಿಗಳ ತುಂಬೆಲ್ಲಾ ದೀವಟಿಗೆಗಳ ಅಲಂಕಾರ. ಮರುದಿನ ಮದುವೆ.. ಮುಂಚೆಯೇ ತೀರ್ಮಾನಿಸಿದ್ದ ಶುಭಮುಹೂರ್ತದಲ್ಲಿ ಪಿಡ್ಡಪ್ಪನು ತನ್ನ ಕನಸಿನ ಚೆಲುವಿಗೆ ಮಾಂಗಲ್ಯಧಾರಣೆ ಮಾಡಿದನು. ಎರಡೂ ಊರುಗಳ ಜನರ ಸಂಭ್ರಮ ಮುಗಿಲು ಮುಟ್ಟಿತು. ಮಧ್ಯಾಹ್ನ ಭೋಜನದ ನಂತರ ನವದಂಪತಿಗಳನ್ನು ಹೂವುಗಳಿಂದ ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಕೂರಿಸಿ ಹಳ್ಳಿಯ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.. ಅಷ್ಟರಲ್ಲಿ ಕೃಷ್ಣಪ್ಪನು “ಇನ್ನು ತಡ ಬೇಡ..ನಾವು ಊರು ತಲುಪೋ ಹೊತ್ತಿಗೆ ನಡುರಾತ್ರಿಯಾಗುತ್ತೆ. ಎಲ್ರೂ ಹೊರಡಿ” ಅಂತ ಆದೇಶಿಸಿದನು. ಪಿಡ್ಡಪ್ಪನ ಹೆಂಡತಿಯು ಬೀಗಿತ್ತಿಯ ಕೈ ಹಿಡಿದು ” ಏ ತಂಗೀ ನಿನ ಕೂಸನ್ನ ನನ್ನ ಕೂಸಂತಾ ಜ್ವಾಪಾನ ಮಾಡ್ತೀನಿ, ಇನ್ನ ನೀನೊಬ್ಬಾಕಿ ಇಲ್ಲಾರ ಇದ್ದು ಏನ ಮಾಡದೈತಿ, ನಮ್ ಕೂಟಾನೇ ಬಾರವ್ವಾ” ಅಂತ ಬಲವಂತ ಮಾಡಿದಳು. ಎರಡೂ ಹಳ್ಳಿಯ ಜನರೂ ಇದಕ್ಕೆ ಸಮ್ಮತಿ ಸೂಚಿಸಿದರು. ಕೃಷ್ಣಪ್ಪ ನಾಯಕನಿಗಂತೂ ತನ್ನ ಮಡದಿಯ ಮೇಲೆ ಎಲ್ಲಿಲ್ಲದ ಅಭಿಮಾನ ಉಕ್ಕಿ ಬಂತು. ಮಗಳೂ ತನ್ನ ತಾಯಿಯನ್ನು ಗೋಗರೆಯತೊಡಗಿದಳು… ಇದ್ಯಾವುದಕ್ಕೂ ಒಪ್ಪುತ್ತಿಲ್ಲ ಆ ಮಹಾತಾಯಿ… ಅಷ್ಟರಲ್ಲಿ ಪಿಡ್ಡಪ್ಪನೇ ಬಂದು ” ಯಕ್ಕಾ ನೀ ನಮ್ ಕೂಟಾ ಬಂದ್ಬಿಡು, ನಿನ ಮಗಳಿಗೂ ಜೋಡಿ ಅಕ್ಕೈತಿ, ನಮ್ಮವ್ವಂಗೂ ಜೋಡಿ ಸಿಗತೈತಿ…ಬಾರಬೇ” ಅಂತ ಬಲವಂತ ಮಾಡಿದ, ಸರಿ ಅಳಿಯನ ಒತ್ತಾಯಕ್ಕೆ ಆಕೆಯೂ ಒಪ್ಪಿದಳು.. ಸರಿ ಪಿಡ್ಡಪ್ಪನ ಹಳ್ಳಿಯ ಕಡೆ ದಿಬ್ಬಣ ಹೊರಟಿತು.
ರಾತ್ರಿಯ ಕಾವಳದಲ್ಲಿ ಸಾಲೆತ್ತಿನ ಬಂಡಿಗಳಲ್ಲಿ ಎಲ್ರೂ ಸಾಗುತ್ತಿದ್ದಾರು… ಊರ ಗಡಿಯನ್ನು ತಲುಪುವ ಹೊತ್ತಿಗೆ ಭೀಕರ ಸುದ್ದಿಯೊಂದು ಬರಸಿಡಿಲಿನಂತೆ ಅವರ ಕಿವಿಗಪ್ಪಳಿಸಿತು… ರಾಜ್ಯದಾಹದ ದುರಾಸೆಯಲ್ಲಿ ಬಹುಮನಿ ಸುಲ್ತಾನನ ಸೈನ್ಯ ವಿಜಯನಗರ ಸಂಸ್ಥಾನದ ಮೇಲೆ ಮುಗಿಬಿದ್ದಿತ್ತು… ಹಾಗೂ ವಿರೋಧಿ ಪಡೆ ತಮ್ಮ ಗ್ರಾಮದ ಕಡೆಯೇ ಸಾಗುತ್ತಿದೆ ಎಂಬ ಸುದ್ದಿ ಕೇಳಿದಾಗ ಎಲ್ಲರಲ್ಲೂ ಆತಂಕ ಮನೆಮಾಡಿತು… ಪಿಡ್ಡಪ್ಪನಂತೂ ಕುದ್ದು ಹೋದ… ತಾನೇ ಯುದ್ಧಕ್ಕೆ ಹೊರಡುವ ನಿರ್ಧಾರವನ್ನು ಪ್ರಕಟಿಸಿಯೇಬಿಟ್ಟ…
ಊರ ಜನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.. “ಇನ್ನೂ ಹಸೀ ಮೈ, ಮೈಗಂಟಿದ ಅರಿಶಿಣವಿನ್ನೂ ಆರಿಲ್ಲ…ಅಂತಾದ್ರಾಗ ಯುದ್ದಕ್ಕೆ ಹೋಗಂಗಿಲ್ಲ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ, ಎಲ್ರೂ ಊರಿನ ದಾರಿಯನ್ನು ಮರೆತು ತುಂಗಭದ್ರೆಯ ಕಡೆ ಹೆಜ್ಜೆ ಹಾಕಿದರು… ಅಂತ ಹೇಳಿ ಆ ಹಿರಿಯರು ಸ್ವಲ್ಪ ವಿಶ್ರಾಂತಿ ಪಡೆದರು.
ನನಗಂತೂ ಮದುವೆಯ ಸನ್ನಿವೇಶ ಹಾಗೂ ವೈರಿ ಪಡೆಗಳ ಆಕ್ರಮಣದ ಕಥೆ ಕೇಳಿ ಹೃದಯ ಭಾರವಾಯ್ತು.. ಆ ಹಿರಿಯರು ಮತ್ತೊಂದು ಕಪ್ ಚಹಾ ಕುಡಿದು ಮುಂದುವರೆಸಿ ವೀರಭದ್ರಪ್ಪ ಹೇಳಿದ್ದು ಸರಿಯಾಗಿದೆ.. ಹೀಗೆ ಆ ವಂಶದ ಕಥೆಯನ್ನು ಮುಂದುವರೆಸುತ್ತಾ ” ಗುಂಪಿನಲ್ಲಿದ್ದ ಬಹುತೇಕರು ಒಂದೋ ಗೌಳಿಗರು ಇಲ್ಲ ಕುರುಬರು ಇವರಿಗೆ ಈ ಉದ್ಯೋಗಗಳು ಬಿಟ್ಟು ಬೇರೇ ಕೆಲಸ ಮಾಡಿ ಗೊತ್ತಿಲ್ಲ… ಪಾಪ ಕಣ್ರೀ ಅವರ ಪಾಡು ಮದುವೆ ಮನೆಯಿಂದ ತಂದಿದ್ದ ಬುತ್ತಿ ಇರುವವರೆಗೆ ಹೇಗೋ ಕಾಲ ಹಾಕಿದ್ರು, ಆಮೇಲೆ ಹಸಿವು, ಸಂಕಟಗಳು ಶುರುವಾದ್ವು ಮಕ್ಕಳು ಹಸಿವಿನಿಂದ ರೋಧಿಸತೊಡಗಿದವು, ಇನ್ನೂ ಕೆಲವರಿಗೆ ಊರಲ್ಲಿ ಬಿಟ್ಟು ಬಂದ ಆಸ್ತಿ ಪಾಸ್ತಿಗಳು, ದನ ಕರುಗಳು ಹಾಗೂ ವಯಸ್ಸಾದ ತಾಯಿ ತಂದೆಯರ ಚಿಂತೆ ಶುರುವಾಯ್ತು… ಸರಿ ಕೆಲವರು ಧೈರ್ಯ ಮಾಡಿ ಒಂದಷ್ಟು ಜನ ಊರಿಗೆ ಹೋಗೋಣ, ಅಲ್ಲಿರುವ ಸಾಮಾನು ಸರಂಜಾಮುಗಳ ಜೊತೆ ತಾಯಿ ತಂದೆಯರನ್ನೂ ಕರೆತರುವ ನಿರ್ಧಾರ ಮಾಡಿ ಊರಿನ ಕಡೆ ಹಿಂತಿರುಗಿದರು…ಕೃಷ್ಣಪ್ಪ ನಾಯಕನು ಮಗನಿಗೆ ಮಗಾ ಇಷ್ಟಪಟ್ಟು ಪಿರೂತಿ ಮಾಡಿ ಈ ಕನ್ಯಾನ ಲಗ್ನ ಮಾಡ್ಕಂಡಿ, ಏನಾರ ಆಗ್ಲೀ ಈಕೀನ ಜ್ವಾಪಾನ ಮಾಡೋ ತಮ್ಮಾ ಅಂದು ಹೇಳಿದ. ಸರಿ ಮೌನವಾಗಿ ತುಂಗಭದ್ರೆಯ ದಡತಲುಪಿ ನೋಡ್ತಾರೆ, ಗಂಗೆ ತುಂಬಿ ಹರಿಯುತ್ತಿದ್ದಾಳೆ. ಸರಿ ಇಲ್ಲಿ ಉಳಿಯಲು ಸಾಧ್ಯವಿಲ್ಲ ಅಂತ ಹೇಗೋ ನದಿ ದಾಟಿ ಈಗಿನ ಸುರಪುರದ ಕಡೆ ಬರುತ್ತಾರೆ” ಅಂದು ಸ್ವಲ್ಪ ನಿರಾಳವಾದ್ರು ಆ ವೃದ್ಧರು. ಕೃಷಿಗೆ ಯೋಗ್ಯವಲ್ಲದ ಆ ಭೂಮಿ ಬೆಟ್ಟಗುಡ್ಡಗಳಿಂದ ಕೂಡಿದೆ.
ಮುಂದಿನ ವಾರಕ್ಕೆ…..
ಸಿ.ಎನ್. ಮಹೇಶ್