ಕೋಟೆಯ ಜಾಡು – ಭಾಗ – 2

ಕೋಟೆಯ ಜಾಡು – ಭಾಗ – 2

ಹಿಂದಿನ ಸಂಚಿಕೆಯಿಂದ…

ಭಾಗ – 1 https://bit.ly/3ju8P7v

ಕೇವಲ ಹತ್ತು ಅಡಿಗಳ ಆಳದಲ್ಲೇ ಜೀವಜಲವಿದೆ. ಆ ಬೆಟ್ಟಗುಡ್ಡಗಳ ನಡುವೆ ಹೇಗೋ ಎಲ್ರೂ ಆಶ್ರಯ ಪಡೆದು ಕೊಂಡ್ರು… ಸುತ್ತಮುತ್ತ ಯಾರೂ ವಾಸಿಸುತ್ತಿಲ್ಲ… ದನಕರುಗಳಿಗೆ ಮೇವು ಹೇಗೋ ದೊರೆಯುತ್ತಿತ್ತು… ಆದರೆ ಇವರಿಗೆ ತಿನ್ನಲು ಏನೂ ಸಿಗುತ್ತಿಲ್ಲ… ಸುತ್ತಮುತ್ತಲಿನ ಹಳ್ಳಿಗಳನ್ನು ಹುಡುಕುತ್ತಾ ಹೊರಟು ಒಂದಷ್ಟು ಜನ ಹೊರಟರು.
ಹತ್ತಾರು ಮೈಲುಗಳ ದೂರ ನಡೆದರೂ ಜನಸಂಚಾರ ಕಾಣುತ್ತಿಲ್ಲ…. ಪಿಡ್ಡನಾಯಕನು ತಾನಿದ್ದ ಸ್ಥಳದಿಂದ ಈಶಾನ್ಯ ದಿಕ್ಕಿನ ಕಡೆ ಸಾಗುತ್ತಿದ್ದನು… ದೂರದಲ್ಲಿ ಎಲ್ಲೋ ಹೊಗೆಯು ಕಾಣುತ್ತಿತ್ತು.. ಪಿಡ್ಡಪ್ಪನ ಮುಖ ಅರಳಿತು.. ವೇಗವಾಗಿ ಆ ಹೊಗೆ ಕಾಣಿಸಿದ ಕಡೆ ಹೆಜ್ಜೆಹಾಕಿದನು.

ಅದೊಂದು ಪುಟ್ಟ ಹಳ್ಳಿ ಸುಮಾರು ಮೂವತ್ತು ಮನೆಗಳು ಅಲ್ಲಿದ್ದವು… ಹಳ್ಳಿಯ ನಡು ಮಧ್ಯದಲ್ಲಿ ಒಂದು ವಿಶಾಲವಾದ ಆಲದ ಮರ. ಮರದ ನೆರಳಿನಲ್ಲಿ ಊರಿನ ಒಂದಷ್ಟು ಗಂಡಸರು ಹರಟೆ ಹೊಡೀತಾ ಕುಳಿತಿದ್ರು, ದಡ ದಡಾಂತ ಪಿಡ್ಡಪ್ಪ ಮತ್ತು ಅವನ ಗೆಳೆಯರು ಬಂದದ್ದು ನೋಡಿ ಗಾಬರಿಯಿಂದ ಎದ್ದು, “ಏ ಯಾರ್ರಲೇ ಅದೂ, ಹಾಂಗ ಒಳ್ಳಿ ದನ ನುಗ್ಗದಂಗ ನುಗ್ತೀರಲ್ಲ” ಅಂತ ಎದ್ರು… ಪಿಡ್ಡಪ್ಪ ಸೀದಾ ಬಂದವನೇ ಅಲ್ಲಿದ್ದವರಲ್ಲಿ ಹಿರಿಯನ ಕಾಲಿಗೆ ಬಿದ್ದನು. ” ನನ್ನೊಡೆಯಾ ನಾವು ಭಾಳಾ ದೂರಿಂದ ಬಂದೀವ್ರೀ..ಹೊಲ ಮನಿ ದನ ಕರು ಎಲ್ಲ ಬಿಟ್ಟು ಬಂದೀವ್ರೀ ಸುಲ್ತಾನರ ಸೈನ್ಯಕ್ಕ ಅಂಜಿ ಬಂದೀವ್ರೀ, ಮಕ್ಳು, ಹೆಣ್ಣಮಕ್ಳು ಎಲ್ಲಾ ಹಸಿದಾರ್ರೀ , ನಮಗ ದನ, ಕುರಿ ಕಾಯೋ ಮಂದೀರಿ, ಭಾಳ ಹಸಿವಾಗೈತಿ, ಉಣ್ಣಕ್ಕಾ ಏನಾರ ಕೊಡ್ರಿ, ನೀವು ಹೇಳಿದ ಚಾಕ್ರಿ ಮಾಡ್ತೇವಿ” ಅಂತ ಅವಲತ್ತುಗೊಳ್ತಾನೆ.. ಆ ಊರಿನ ಹಿರಿಯ ” ಅಲ್ರಲೇ ನೀವೆಲ್ಲಾ ಯಾವ ಊರಿಂದ ಬಂದ್ರೀ, ಯಾವ ಸುಲ್ತಾನರ ಫೌಜು ನಿಮಗ ಕಾಡತೈತಿ? ” ಅಂತ ಪ್ರಶ್ನಿಸಿದ.. ಪಿಡ್ಡಪ್ಪ ತನ್ನ ಕಥೆ ಹೇಳಿದ.‌ ಆ ಊರಿನ ಜನ ಮೊದಲು ಅವರಿಗೆ ರೊಟ್ಟಿ ಪಲ್ಯಗಳನ್ನು ಕೊಟ್ಟು, ಒಂದು ಎತ್ತಿನ ಬಂಡಿ ಹೂಡಿಸಿ ಒಂದೆರಡು ಚೀಲ ಜೋಳ,ಭತ್ತಗಳನ್ನು ಕೊಟ್ಟು “ಮೊದಲು ನಿಮ್ಮ ಜನಕ್ಕ ಕೊಟ್ಟು ಬರ್ರಿ, ಆಮ್ಯಾಗ ಏನಾರ ಮಾಡೋ ಚಿಂತಿ ಮಾಡಾಣ” ಅಂದು ಒಂದಿಬ್ರು ಊರ ಜನರನ್ನು ಜೊತೆ ಮಾಡಿ ಪಿಡ್ಡಪ್ಪನ ಜೊತೆಯಲ್ಲಿ ಕಳಿಸಿದ್ರು, ಆ ಊರಿನ ಜನರ ಔದಾರ್ಯ ಕೊಂಡಾಡುತ್ತಾ ಪಿಡ್ಡಪ್ಪ ತನ್ನವರು ಇದ್ದ ಸ್ಥಳಕ್ಕೆ ಮರು ಪ್ರಯಾಣ ಬೆಳೆಸಿದನು. ದಾರಿಯಲ್ಲಿ ಹೋಗುತ್ತಿದ್ದಾಗ ಆ ಊರಿನ ಯುವಕರು ತಮ್ಮ ಭಾಗವನ್ನು ಆಳುತ್ತಿರುವ ಬಿಜಾಪುರದ ಆದಿಲ್ ಷಾಹಿಗಳು ಒಂದು ಸ್ಪರ್ಧೆ ಇಟ್ಟಿದ್ದಾರೆ, ಅದರಲ್ಲಿ ಗೆದ್ದವರಿಗೆ ಕೇಳಿದ್ದನು ಕೊಡ್ತಾರಂತೆ ಎನ್ನುವ ವಿಚಾರ ತಿಳಿಸಿದರು.

ಪಿಡ್ಡಪ್ಪ ಕುತೂಹಲದಿಂದ ” ಏನು ಸ್ಪರ್ಧೆ ಅದು” ಅಂತ ಕೇಳಿದನು. ಬಿಜಾಪುರ ಸಂಸ್ಥಾನದ ಕೋಟೆಯಲ್ಲಿ ಮದವೇರಿದ ಆನೆಯೊಂದಿದೆ ಅದನ್ನು ಮಣಿಸಬೇಕು ಇದೇ ಆ ಸ್ಪರ್ಧೆ.. ಎಂದು‌ ಆ ಯುವಕ ಇಲ್ಲೀವರೆಗೂ ಏಳು ಮಂದಿ ಆ ಆನೆಗೆ ಬಲಿಯಾಗಿದ್ದಾರೆ ಅಂತ ಹೇಳಿದ.

ಪಿಡ್ಡಪ್ಪ ಮೊದಲೇ ಆನೆ ಪಳಗಿಸುವವ… ಒಂದು ಕೈ ನೋಡೇ ಬಿಡೋಣ ಅಂತ ತೀರ್ಮಾನಿಸಿದ. ತನ್ನವರಿದ್ದ ಸ್ಥಳ ತಲುಪಿ, ಅವರಿಗೆಲ್ಲ ಊಟದ ವ್ಯವಸ್ಥೆ ಮಾಡಿ, ತಂದೆ ಕೃಷ್ಣಪ್ಪ ನಾಯಕನಲ್ಲಿ ನಿಧಾನವಾಗಿ ಈ ವಿಚಾರ ತಿಳಿಸಿದ…. ಮಗನ ಉತ್ಸಾಹ ಕಂಡು ತಂದೆ ಅತ್ಯುತ್ಸಾಹದಿಂದ ಮಗನಿಗೆ ಆಶೀರ್ವದಿಸಿ ” ಹೋಗ್ಬಾ ತಮ್ಮ, ನೀ ಗೆದ್ದೇ ಗೆಲ್ತೀಯಲೇ, ನಿನ ಮ್ಯಾಗ ಭಾಳಾ ನಂಬಿಕೆ ಐತಿ, ಛಲೋ ಕಾದಾಡಲೆ, ಗೆದ್ದಮ್ಯಾಗ ನವಾಬರ ಬಳಿ ಈ ಜಾಗ ನಮಗೇ ಬರೆಸಿಕೊಂಡು ಬಿಡೋಪ್ಪಾ, ಇಲ್ಲೇ ನಾವು ಏನಾರ ಮಾಡೋಣ ” ಅಂತ ಹೇಳಿದ.

ಮರು ದಿನವೇ ಪಿಡ್ಡಪ್ಪ ಮೂರ್ನಾಲ್ಕು ಗೆಳೆಯರ ಜೊತೆ ಬಿಜಾಪುರದ ಕಡೆ ಪ್ರಯಾಣ ಬೆಳೆಸಿದ, ಇಡೀ ದಿನ ನಾಲ್ಕು ಯೋಜನಗಳಷ್ಟು ನಡೆದು ರಾತ್ರಿಯ ಹೊತ್ತಿಗೆ ಬಿಜಾಪುರ ಸೇರಿಕೊಂಡ.. ಅಲ್ಲೇ ಧರ್ಮಛತ್ರವೊಂದರಲ್ಲಿ ರಾತ್ರಿ ತಂಗಿದ್ದ. ಊರತುಂಬಾ ಆ ಆನೆಯದ್ದೇ ಮಾತುಕಥೆ, ಆ ಆನೆಯ ಶೌರ್ಯ ಪ್ರತಾಪಗಳ ವರ್ಣನೆಯೇ ಹರಿದಾಡುತ್ತಿತ್ತು. ಮೂರುದಿನಗಳಿಂದ ಅದಕ್ಕೆ ಆಹಾರ ನೀಡಿಲ್ಲವಂತೆ, ಬರೀ ಅಫೀಮು ತಿನ್ನಿಸ್ತಾ ಇದ್ದಾರಂತೆ ಅಂತೆಲ್ಲಾ ಊಹಾಪೋಹದ ಸುದ್ದಿಗಳು ಪಿಡ್ಡಪ್ಪನ ಕಿವಿಗೆ ಬಿದ್ದವು.. ಪ್ರಾತಃವಿಧಿಗಳನ್ನು ಮುಗಿಸಿ, ಆನೆ ಇದ್ದ ಮೈದಾನದ ಬಳಿಗೆ ತನ್ನ ತಂಡದ ಜೊತೆಯಲ್ಲಿ ಬಂದನು. ಸುತ್ತಲೂ ಗೋಡೆಗಳಿಂದ ಆವೃತ್ತವಾದ ಸ್ಥಳದಲ್ಲಿ ಆ ಮದಗಜವನ್ನು ಬಿಡಲಾಗಿತ್ತು. ಸುಮಾರು ಹದಿನೈದು ಅಡಿಗಳ ಎತ್ತರದ ಆ ಅನೆಯು ಬಹಳ ರೋಷದಿಂದ ತೂರಾಡುತ್ತಾ ಇತ್ತು… ನಿಧಾನವಾಗಿ ಜನ ಆ ಆನೆಯನ್ನು ನೋಡಲು ಆಗಮಿಸುತ್ತಿದ್ದರು. ನವಾಬ ತನ್ನ ಬಳಗದ ಜೊತೆಯಲ್ಲಿ ಆಗಮಿಸಿದನು. ಸ್ಪರ್ಧೆಗೆ ಆಹ್ವಾನವನ್ನು ನೀಡಲಾಯ್ತು. ಯಾರೂ ಮುಂದೆ ಬರುತ್ತಿಲ್ಲ. ಆಗ ಪಿಡ್ಡಪ್ಪ ತಾನು ಸವಾಲು ಸ್ವೀಕರಿಸಲು ಸಿದ್ದವಿರುವಿದಾಗಿ ಹೇಳಿದನು. ಎಲ್ಲರೂ ಅವನತ್ತ ಕನಿಕರದಿಂದ ನೋಡತೊಡಗಿದರು. ಆರಡಿ ಎತ್ತರದ ಈ ತರುಣ ಅನ್ಯಾಯವಾಗಿ ಮಡಿಯುತ್ತಾನಲ್ಲಾ ಎಂದು ಮರುಗಿದರು.

ಇತ್ತ ಪಿಡ್ಡಪ್ಪನು ತನ್ನ ಸಹಚರರಿಗೆ ಹೇಳಿ ದೊಡ್ಡದೊಂದು ಬೋಗುಣಿಯಲ್ಲಿ ನೀರನ್ನು ಸಂಗ್ರಹ ಮಾಡಿಡಲು ಹೇಳಿದ. ಹಾಗೆಯೇ ಒಂದು ದೊಡ್ಡದಾದ ಬಿಳಿಯ ವಸ್ತ್ರವನ್ನೂ ತರಿಸಿಕೊಂಡ, ಎಲ್ಲವೂ ಸಿದ್ಧವಾದ ಬಳಿಕ ಆನೆಯಿದ್ದ ಮೈದಾನಕ್ಕೆ ಧುಮುಕಿದನು. ಎಲ್ಲರಲ್ಲೂ ಆತಂಕ, ಕುತೂಹಲ ಮನೆಮಾಡಿತು. ಆ ಮದಕರಿಯು ಪಿಡ್ಡಪ್ಪನ ಕಡೆ ಧಾವಿಸಿಬಂತು, ಇತ್ತ ಪಿಡ್ಡಪ್ಪನು ಅದರಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿ ಯಶಸ್ವಿಯಾದ, ಆನೆಗೆ ಮತ್ತಷ್ಟು ರೋಷ ಹೆಚ್ಚಾಯಿತು. ಪಿಡ್ಡಪ್ಪನನ್ನು ಕೊಂದೇ ಬಿಡುವ ತವಕದಲ್ಲಿ ಅವನ ಬೆನ್ನಟ್ಟಿತು. ಬಹಳ ಚಾಕಚಕ್ಯತೆಯಿಂದ ಪಿಡ್ಡಪ್ಪ ತಪ್ಪಿಸಿಕೊಳ್ಳುತ್ತಿದ್ದನು. ಓಡಾಡಿಸಿ ಓಡಾಡಿಸಿ ಆನೆಯ ಚಲನವಲನಗಳನ್ನೇ ಗಮನಿಸಿದ ಪಿಡ್ಡಪ್ಪ ಹೇಗೋ ಆನೆಯ ಹಿಂಬದಿ ಸೇರಿಕೊಂಡನು. ಆನೆಯು ಸ್ವಲ್ಪ ಗಲಿಬಿಲಿಗೊಂಡಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಿಡ್ಡಪ್ಪ ಆನೆಯ ಬಾಲವನ್ನು ಗಟ್ಟಿಯಾಗಿ ಹಿಡಿದು, ತನ್ನ ಸೊಂಟದಲ್ಲಿದ್ದ ಹಗ್ಗದಿಂದ ಅದನ್ನು ಕಟ್ಟಿ ಆನೆಯನ್ನು ಹಿಂಬದಿಯಿಂದ ಏರತೊಡಗಿದ.

ಆನೆ ಎತ್ತ ಸರಿಯಲೂ ಆಗದಂತೆ ಬಾಲವನ್ನು ಗಟ್ಟಿಯಾಗಿ ಪಿಡ್ಡಪ್ಪ ಹಿಡಿದುಬಿಟ್ಟಿದ್ದ. ಸೊಂಟಕ್ಕೆ ಸಿಕ್ಕಿಸಿದ್ದ ಸಣ್ಣ ಕತ್ತಿಯೊಂದನ್ನು ಹೊರತೆಗೆದು, ಆನೆಯ ಕುಂಭಸ್ಥಳವನ್ನು ತಿವಿಯತೊಡಗಿ ತನ್ನ ಸಹಚರರಿಗೆ ಬಿಳಿಯ ಬಟ್ಟೆಯನ್ನು ತರಲು ಹೇಳಿದನು, ಇಬ್ಬರು ಅವನ ಅನುಚರರು ಆ ವಸ್ತ್ರವನ್ನು ಅಗಲವಾಗಿ ಹಿಡಿದು ಬಂದರು, ಆನೆಯ ಮುಖವನ್ನು ಆ ವಸ್ತ್ರದಿಂದ ಮುಚ್ಚಿಬಿಟ್ರು… ಅಷ್ಟರಲ್ಲಿ ಆ ಮದಗಜವು ಸೋಲನ್ನು ಒಪ್ಪಿಕೊಂಡಿತ್ತು… ಬಳಿಕ ಪಿಡ್ಡಪ್ಪನು ನೀರನ್ನು ತರಲು ಹೇಳಿದನು. ಆ ದೊಡ್ಡ ಬೋಗುಣಿಯ ನೀರನ್ನು ಮೈದಾನದಲ್ಲಿ ಅವನ ಸಹಚರರರು ತಂದಿಟ್ಟರು, ಪಿಡ್ಡಪ್ಪನು ತನ್ನ ಕಾಲುಗಳಿಂದ ತಿವಿಯುತ್ತಾ ಆನೆಯ ಮೇಲೆ ಸಂಪೂರ್ಣ ಹತೋಟಿಯನ್ನು ಸಂಪಾದಿಸಿದನು, ಹಾಗೂ ಆ ಸಲಗಕ್ಕೆ ಹೊಟ್ಟೆ ತುಂಬಾ ನೀರು ಕುಡಿಸಿದನು.

ಸಲಗದ ಮೇಲೆ ನಿರಾಳವಾಗಿ ಕುಳಿತು, ಆ ಸಣ್ಣ ಕತ್ತಿಯಿಂದ ತಿವಿಯುತ್ತಾ ಆನೆಯನ್ನು ಮೊಣಕಾಲುಗಳ ಮೇಲೆ ಕೂರಿಸಿಬಿಟ್ಟನು. ಮೈದಾನದಲ್ಲಿ ಸೇರಿದ್ದ ಸಾವಿರಾರು ಜನರು ಒಮ್ಮೆಲೇ ಹರ್ಷೋದ್ಘಾರ ಮಾಡಿದರು. ನವಾಬನೂ ಸಂತಸದಿಂದ ಎದ್ದು ನಿಂತು ಕರತಾಡನ ಮಾಡತೊಡಗಿದನು. ಎಲ್ಲರಲ್ಲೂ ಸಂಭ್ರಮ ಮನೆಮಾಡಿತು. ರಾಜಭಟರು ಕೊಟ್ಟ ಸರಪಳಿಗಳಿಂದ ಆ ಸಲಗವನ್ನು ಬಿಗಿದುಕಟ್ಟಿದರು. ನೂರಾರು ಜನರು ಮೈದಾನದೊಳಗೆ ಬಂದು ಪಿಡ್ಡಪ್ಪನನ್ನು ತಮ್ಮ ಬಂದ ಬುಜಗಳ ಮೇಲೆ ಕೂರಿಸಿಕೊಂಡು ಮೆರೆದಾಡಿದರು. ನವಾಬನು ಪಿಡ್ಡಪ್ಪನನ್ನು ಕರೆದನು. ಪಿಡ್ಡಪ್ಪನು ತನ್ನ ಆರಡಿಯ ಆಜಾನುಬಾಹು ಶರೀರವನ್ನು ಮುಷ್ಟಿಯಂತೆ ಬಗ್ಗಿಸಿ ಆದಿಲ್ ಷಾಹಿ ನವಾಬನ ಎದುರು ನಿಂತನು. ಆಗ ನವಾಬನು ” ಭೇಷ್ ಚೋಕ್ರಾ, ಅದ್ಬುತವಾಗಿ ನಿನ್ನ ಕೌಶಲ್ಯ ತೋರಿಸಿ, ಅಷ್ಟು ದೊಡ್ಡ ಆನೆಯನ್ನು ಪಳಗಿಸಿಬಿಟ್ಟೆ, ನೀನ್ಯಾರು? ನಿನಗೇನು ಬೇಕೋ ಕೇಳಿಕೋ” ಎಂದನು. ಆಗ ಪಿಡ್ಡಪ್ಪನು ” ಖಾವಂದರೇ, ನನ್ನ ಹೆಸರು ಪಿಡ್ಡಪ್ಪ, ತುಂಗಭದ್ರಾ ನದೀ ತೀರದಿಂದ ಬಂದಿದ್ದೇನೆ. ನಮ್ಮವರು ಬೆಟ್ಟಗುಡ್ಡಗಳ ಮಧ್ಯೆ ವಾಸಿಸುತ್ತಿದ್ದೇವೆ.. ನಮಗೆ ಅಲ್ಲೇ ಇರಲು ಅಪ್ಪಣೆ ಕೊಡಿ” ಎಂದಷ್ಟೇ ಬೇಡಿದನು. ಆಗ ಆ ರಾಜನು ಬಹು ಮರ್ಯಾದೆಯಿಂದ ಪಿಡ್ಡಪ್ಪನಿಗೆ, ಆ ಜಾಗವನ್ನು ಬಿಟ್ಟುಕೊಟ್ಟು ಅಲ್ಲೊಂದು ಸುಂದರವಾದ ರಾಜ್ಯ ಸ್ಥಾಪನೆ ಮಾಡು, ನಿನ್ನಂತಹ ಶೂರ ಸೇನಾನಿಗಳನ್ನು ತಯಾರು ಮಾಡು, ನಿನಗೆ ಎಲ್ಲ ಸಹಕಾರಗಳನ್ನೂ ನಮ್ಮ ಸಂಸ್ಥಾನವು ಒದಗಿಸಿಕೊಡುತ್ತದೆ” ಎಂಬ ಅಭಯವನ್ನು ನೀಡಿದನು..

ಆ ನಂತರದಲ್ಲಿ ಆದಿಲ್ ಷಾಹಿಗಳ ಸಹಕಾರದಲ್ಲಿ ಈ ಪ್ರದೇಶದಲ್ಲಿ ಕೋಟೆಗಳು, ವಾಸಿಸಲು ಮನೆಗಳು ಎಲ್ಲಾ ನಿರ್ಮಾಣಗೊಂಡವು. ಹೀಗೆ ಇಲ್ಲಿ ಸುರಪುರ ಸಂಸ್ಥಾನ ತಲೆಯೆತ್ತಿತು.”” ಎಂದು ಆ ಹಿರಿಯರು ನಾನು ಕನಸಲ್ಲಿ ಕಂಡ ಕೋಟೆಯ ಕಥೆಯನ್ನು ಹೇಳಿ ಮುಗಿಸಿದರು. ನನಗೂ ಆ ಕಥೆ ಕೇಳಿ ಬಹಳ ಸಂತಸವಾಗಿ ಅವರಿಗೆ ಅನಂತ ಧನ್ಯವಾದಗಳನ್ನು ತಿಳಿಸಿ, ವೀರಭದ್ರಪ್ಪನವರ ಜೊತೆಯಲ್ಲಿ ಕಲಬುರಗಿ ನಗರದ ಕಡೆ ಹೆಜ್ಜೆ ಹಾಕಿದೆ.

ಸಮಾಪ್ತ

ಸಿ.ಎನ್. ಮಹೇಶ್

Related post

Leave a Reply

Your email address will not be published. Required fields are marked *