ಕ್ರಾಸ್ ರೋಡ್ಸ್

ಕ್ರಾಸ್ ರೋಡ್ಸ್

ಲೇಖಕರು: ಡಾ.ವಿರೂಪಾಕ್ಷ ದೇವರಮನೆ
ಪ್ರಕಾಶಕರು:ನವಕರ್ನಾಟಕ ಪ್ರಕಾಶನ
ಬೆಲೆ: 120/-

ಕಿಶೋರಾವಸ್ಥೆ ಎಂದಾಕ್ಷಣ ಹದಿಹರೆಯದ ಮಕ್ಕಳ ಮಾನಸಿಕ ತುಮುಲಗಳು, ತಲ್ಲಣಗಳು ಕಣ್ಣ ಮುಂದೆ ಹಾದುಹೋಗುತ್ತವೆ.
ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿಯೂ ಬದಲಾವಣೆಗಳನ್ನು ಕಾಣುವ ವಯೋಮಾನವಿದು. ಶೈಕ್ಷಣಿಕವಾಗಿಯೂ ಈ ವಯೋಮಾನದವರಿಗೆ ಬಹುಮುಖ್ಯ ಕಾಲಘಟ್ಟವೂ ಹೌದು.

Adolescence ಎನ್ನುವುದು ಬಹಳ ಸೂಕ್ಷ್ಮವಾದ ಕಾಲಘಟ್ಟ…ಇದನ್ನು ಸೂಕ್ತವಾದ ರೀತಿಯಲ್ಲಿ ನಿಭಾಯಿಸುವ ,ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಬೇಕಾದ ಮನೋ ಸ್ಥೈರ್ಯವನ್ನು ತುಂಬುವ ಪ್ರಯತ್ನವೇ “ಕ್ರಾಸ್ ರೋಡ್ಸ್” – ಕಿಶೋರದ ಕವಲು ಹಾದಿ ಕೃತಿ.

ತಮ್ಮ ಮನೋವೈಜ್ಞಾನಿಕ ಕೃತಿಗಳ ಮೂಲಕ ಈಗಾಗಲೇ ಕನ್ನಡದ ಮನೆ ಮನೆಗಳಲ್ಲಿ ಜನಪ್ರಿಯರಾಗಿರುವ ಡಾ.ವಿರೂಪಾಕ್ಷ ದೇವರಮನೆ ಅವರ ಅನುಭವದ ಮೂಸೆಯಿಂದ ಹೊರಬಂದಿರುವ ಸುಂದರ ಹೊತ್ತಿಗೆ “ಕ್ರಾಸ್ ರೋಡ್ಸ್”. ಇಲ್ಲಿನ ಕಥೆಗಳ ಪಾತ್ರಗಳು ನಮ್ಮ ನಡುವಿನಲ್ಲೇ ಇರುವ, ಕೆಲವೊಮ್ಮೆ ನಾವೇ ಆಗಿರುವ ಪಾತ್ರಗಳು; ನಮ್ಮೊಳಗಿನ ನಮ್ಮನ್ನು ಮನಬಿಚ್ಚಿ ಮಾತನಾಡುವಂತೆ ಮಾಡುತ್ತವೆ. ಸಮಸ್ಯೆಗಳ ಜೊತೆ ಜೊತೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನ ಮಾಡುತ್ತವೆ. ಓದುಗನಿಗೆ ಎಲ್ಲಿಯೂ ಎಡವದೇ ಓದುತ್ತಾ ತನ್ನೊಳಗೆ ಅಂತರ್ಮಥನ ನಡೆಸುವಂತೆ ಪ್ರೇರೇಪಣೆ ನೀಡುತ್ತದೆ.

ಬಹಳಷ್ಟು ವಿದ್ಯಾರ್ಥಿಗಳಿಗೆ ಕೋರ್ಸು, ಕಾಲೇಜು, ಸ್ನೇಹಿತರು, ವೃತ್ತಿ, ಸಂಗಾತಿಯ ಆಯ್ಕೆಗಳಲ್ಲಿನ ಗೊಂದಲ ಸಹಜವಾಗಿ ಇರುತ್ತದೆ, ಜೊತೆಗೆ ಪೋಷಕರಿಗೂ ಮಕ್ಕಳಿಗೂ ಈ ವಿಷಯಗಳಲ್ಲಿ ಅಭಿಪ್ರಾಯ ಭೇದಗಳು ಇರುತ್ತವೆ. ಇದು ಹೆಚ್ಚಿದರೆ ಕಿಶೋರದ ಕವಲು ಹಾದಿಯ ಪಯಣದಲ್ಲಿ ಗೊಂದಲ ಉಂಟಾಗಬಹುದು. ಬದುಕು ಅಸಹನೀಯ ಎನಿಸಬಹುದು. ಹರೆಯ ತರುವ ಶಾರೀರಿಕ ಮಾನಸಿಕ ಬದಲಾವಣೆಗಳು, ಶೈಕ್ಷಣಿಕ, ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗಬಹುದು.

ಹದಿಹರೆಯದಲ್ಲಿ ” ನಾ ನಿನ್ನೊಡನೆ ಇದ್ದೇನೆ” ಎನ್ನುವ ಭರವಸೆಯ ಮಾತು, ನೀನು ನನಗೆ ಹೆಮ್ಮೆ ಎನ್ನುವ ಮಾತುಗಳು ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಆತಂಕ, ಖಿನ್ನತೆ, ಕೀಳರಿಮೆ, ಒಂಟಿತನ, ಐಡೆಂಟಿ ಕ್ರೈಸಿಸ್ ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಪುಸ್ತಕ.

ಬದುಕಿನ ಕ್ರಾಸ್‌ರೋಡ್ ಎಲ್ಲರೂ ದಾಟಿ ಬರಲೇಬೇಕಾದ ಕಾಲಘಟ್ಟ. ಯೌವನದ ಕನಸುಗಳ ಬೆನ್ನು ಹತ್ತಿ ಸೋತವರಿಗೆ ,ಹೆತ್ತವರ ಸಹಕಾರ ಸಿಗದೇ ಪೇಚಾಡಿದವರಿಗೆ, ಗುರು ಹಿರಿಯರ ಮಾರ್ಗದರ್ಶನ ಮರೀಚಿಕೆಯಾದವರಿಗೆ ಈ ಪುಸ್ತಕ ಖಂಡಿತಾ ಸಹಾಯ ಮಾಡುತ್ತದೆ.

ಪ್ರತಿಯೊಬ್ಬರ ಮನೆಯಲ್ಲೂ ಇರಲೇಬೇಕಾದ ಕೃತಿ “ಕ್ರಾಸ್ ರೋಡ್ಸ್”

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *