ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ

ಕ್ರೂಸ್ ಲೈನರ್ ಆಂಗ್ರಿಯಾ – ದೇಶೀಯ ನೌಕಾ ಯಾನದ ಹೊಸ ಆಯಾಮ

ನೀರೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರಲ್ಲೂ ಬಹುಮುಖ್ಯವಾಗಿ ಸಮುದ್ರದಲ್ಲಿ ಆಟವಾಡುವುದು ಅಥವಾ ಸಮುದ್ರದಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಸಮುದ್ರ ಕಿನಾರೆಯಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಆಟವಾಡುವುದು ಮತ್ತು ಸಮುದ್ರ ಕಿನಾರೆಯಲ್ಲಿ ನಡೆದಾಡುವುದೆಂದರೆ ಎಲ್ಲರೂ ಬಹಳ ಇಷ್ಟಪಡುವ ವಿಚಾರ. ಅದರಲ್ಲೂ ಆಳ ಸಮುದ್ರದಲ್ಲಿ ಪ್ರಯಾಣ ಮಾಡುವುದೆಂದರೆ ಅಥವಾ ಸಮುದ್ರದ ಆಳಕ್ಕೆ ಹೋಗುವುದೆಂದರೆ ಅದೊಂದು ಸಾಹಸಗಾಥೆಯೇ ಸರಿ. ಸಮುದ್ರದಾಳದ ಪ್ರಯಾಣ ಎಷ್ಟು ಮೋಜನ್ನು ಒದಗಿಸುತ್ತದೆಯೇ ಅಷ್ಟೇ ಅಪಾಯಕಾರಿಯೂ ಹೌದು.

ಆಳ ಸಮುದ್ರದ ಸೊಬಗನ್ನು ಸವಿಯಲು ಹಲವರು ದೋಣಿಗಳ ಮತ್ತು ಬೋಟ್ ಮೂಲಕ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಅದೇ ರೀತಿ ಭಾರತದ ಪ್ರಪ್ರಥಮ ದೇಶೀಯ ಐಷಾರಾಮಿ ಕ್ರೂಸ್ ಲೈನರ್ ಆ್ಯಂಗ್ರಿಯಾ ಮುಂಬಯಿನಲ್ಲಿ ಲೋಕಾರ್ಪಣೆಗೊಂಡಿದೆ. ಆಳ ಸಮುದ್ರದಲ್ಲಿ ವಿಹಾರವೇ ಒಂದು ವಿನೋದದ ಚಟುವಟಿಕೆಯಾಗಿದ್ದು ಅದನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡು ಕೇಂದ್ರ ಸರಕಾರದ ಪ್ರಮುಖ ಕಾರ್ಯಕ್ರಮ ‘ಸಾಗರ್ ಮಾಲಾ ಯೋಜನೆ’ಯಡಿಯಲ್ಲಿ ಮುಂಬಯಿನಿಂದ ಗೋವಾದ ಸಮುದ್ರದಲ್ಲಿ ನೀರಿನ ಪ್ರಯಾಣವನ್ನು ಹೆಚ್ಚು ವಿನೋದ ಮತ್ತು ಐಷಾರಾಮಿಯಾಗಿಸಿ ಮುಂಬಯಿ ಗೋವಾ ಕ್ರೂಸ್ ಲೈನರ್ ಆ್ಯಂಗ್ರಿಯಾ ಅಕ್ಟೋಬರ್ ಮಧ್ಯ ಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ್ದು, ಈ ವಿಹಾರ ನೌಕೆಯನ್ನು ಜಪಾನ್ ನಲ್ಲಿ ವಿಶೇಷ ವಿನ್ಯಾಸದೊಂದಿಗೆ ನಿರ್ಮಿಸಲಾಗಿದೆ.

ಈ ಹಡಗಿನ ಮೂಲಕ ಮುಂಬೈನಿಂದ ಗೋವಾಕ್ಕೆ ಪ್ರಯಾಣ ಮಾಡಲು ಒಟ್ಟು ಹದಿನಾಲ್ಕು ಗಂಟೆಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಇದು ತಡೆರಹಿತ ಪ್ರಯಾಣವಾಗಿದ್ದು, ದಿಘಾಯಿ, ದಾಬೋಲ್, ಮಲ್ವಾನ್ ಮತ್ತು ಕೊಂಕಣ ತೀರಗಳಲ್ಲಿ ಜೆಟ್ಟಿಯ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಇಲ್ಲಿ ಈ ಹಡಗಿಗೆ ನಿಲುಗಡೆಯನ್ನು ನೀಡುವ ಕುರಿತು ಚಿಂತಿಸಲಾಗುತ್ತಿದೆ. ಈ ಪ್ರಮಾಣವು ಸಮುದ್ರದ ಮಧ್ಯದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಅಭೂತಪೂರ್ವವಾದ ಸೌಂದರ್ಯವನ್ನು ಆನಂದಿಸಲು ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಇದರ ಸಲುವಾಗಿಯೇ ಹಡಗಿನ ಡೆಕ್ ನಲ್ಲಿ ವಿಶೇಷವಾಗಿ ವೀಕ್ಷಣಾ ಸೌಲಭ್ಯವನ್ನು ಪ್ರವಾಸಿಗರಿಗೆ ಒದಗಿಸಲಾಗಿದೆ. ಈ ನೌಕೆಯಲ್ಲಿ ಒಟ್ಟಿಗೇ ಏಕಕಾಲದಲ್ಲಿ ನಾಲ್ಕು ಸಾವಿರ ಮಂದಿ ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ವಿವಿಧ ದರ್ಜೆಯ ಒಟ್ಟು 104 ಕೊಠಡಿಗಳಿವೆ. ನೌಕೆಯ ಒಳಭಾಗದಲ್ಲಿ ಬಾರ್, ರೆಸ್ಟೋರೆಂಟುಗಳು, ಈಜುಕೊಳ ಸ್ಪಾ ಮತ್ತು ಡಿಸ್ಕೋಥೆಕ್ ಹೊಂದಿರುವ ಅಭೂತಪೂರ್ವ ಸೌಲಭ್ಯಗಳನ್ನು ಹೊಂದಿ ದೇಶದ ಪ್ರಥಮ ಐಷಾರಾಮಿ ಹಡಗೆಂದು ಹೇಳಲಾಗಿದೆ. ಕ್ರೂಸ್ ಲೈನರ್ ಆ್ಯಂಗ್ರಿಯಾ ನೌಕೆಯು 2 ಶಕ್ತಿಶಾಲಿ ಫೈಲ್ ಸ್ಟಿಕ್ 18ಪಿ.ಸಿ 2-6 ಇಂಜಿನ್ ಇವುಗಳಿಂದ 27,000 BHP ಶಕ್ತಿಯನ್ನು ಉತ್ಪಾದಿಸುವುದರೊಂದಿಗೆ ಇದು ಗಂಟೆಗೆ ಇಪ್ಪತ್ತೈದು ನಾಟಿಕಲ್ ಮೈಲ್ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಈ ನೌಕೆಯ ಒಟ್ಟು ಉದ್ದ ಕೇವಲ 131 ಮೀಟರ್ ಗಳಷ್ಟು ಇದ್ದರೂ ಇಡೀ ಹಡಗಿನಲ್ಲಿ ಒಂದು ಸುತ್ತು ತಿರುಗಿ ಬಂದರೆ ಒಟ್ಟು 4 ಕಿ.ಮೀಟರ್ ನಷ್ಟು ನಡೆದಾಡಿ ಕ್ರಮಿಸಿದಂತೆ ಆಗುತ್ತದೆ. ಈ ನೌಕೆಯ ಪ್ರಯಾಣದ ಸಂದರ್ಭದಲ್ಲಿ ಪ್ರತಿ ವ್ಯಕ್ತಿಗೆ ರೂ.2,000/- ವೆಚ್ಚದಲ್ಲಿ ಚಹಾ, ಜ್ಯೂಸ್, ತಿಂಡಿ, ಮಧ್ಯಾಹ್ನದ ಭೋಜನ ಮತ್ತು ಉಪಹಾರಗಳನ್ನು ಪ್ರವಾಸಿಗರಿಗೆ ಈ ಸಂಸ್ಥೆಯು ನೀಡುತ್ತದೆ.ಈ ನೌಕೆಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುವ ಕಾಫಿ, ಅಂಗಡಿ, ಬಾರ್ ಮತ್ತು ಎರಡು ರೆಸ್ಟೋರೆಂಟ್ ಗಳನ್ನು ಹೊಂದಿದೆ, ಇಲ್ಲಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕರಾವಳಿ ಮತ್ತು ಪ್ರಾದೇಶಿಕವಾದ ಹಲವಾರು ತಿನಿಸುಗಳನ್ನು ಜಾಗತಿಕವಾದ ಪಾಕ ಪದ್ಧತಿಯೊಂದಿಗೆ ಪ್ರವಾಸಿಗರ ಅಭಿರುಚಿಗೆ ಅನುಗುಣವಾಗಿ ಒದಗಿಸುವ ವ್ಯವಸ್ಥೆಯನ್ನು ವಿಶೇಷವಾಗಿ ಮಾಡಲಾಗಿದೆ. ಈ ನೌಕೆಯ ಒಳಗಡೆ ಸಂಗೀತ ಮತ್ತು ನೃತ್ಯ (ಡಿಸ್ಕೋಥೆಕ್), ಈಜುಕೊಳ, ಸ್ಪಾ, ಓದುವಿಕೆಗೆ ವಾಚನಾಲಯ ಮತ್ತು ವಿಶೇಷವಾದ ಮನರಂಜನಾ ಕೊಠಡಿ, ಚಿತ್ರದ ಗ್ಯಾಲರಿ, ಪ್ರವಾಸಿಗರ ಅಭಿರುಚಿಯ ಚಲನಚಿತ್ರಗಳನ್ನು ನೋಡಲು ಚಲನಚಿತ್ರ ಮಂದಿರಗಳ ಸೌಲಭ್ಯವನ್ನು ವಿಶೇಷವಾಗಿ ಹಾಗೂ ಐಷಾರಾಮಿಯಾಗಿ ಈ ಹಡಗಿನಲ್ಲಿ ಒದಗಿಸಲಾಗಿದೆ. ಈ ನೌಕೆಯ ಒಳಗಿನ ಸ್ಪಾ ಮತ್ತು ಡಿಸ್ಕೋತೆಕ್ ನ್ನು ಪ್ರವಾಸಿಗರು ಮುಂಚಿತವಾಗಿ ಬುಕ್ಕಿಂಗ್ ಮಾಡಿಸಿದರಷ್ಟೇ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ನೌಕೆ ಒಳಗಿರುವ ಈಜುಕೊಳಗಳು ಬಾರ್, ರೆಸ್ಟೋರೆಂಟ್, ವಾಚನಾಲಯ ಮತ್ತು ವಿವಿಧ ರೀತಿಯ ಅಂಗಡಿಗಳಿಗೆ ಪ್ರವಾಸಿಗರು ಅಥವಾ ಪ್ರಯಾಣಿಕರು ಉಚಿತವಾಗಿ ಪ್ರವೇಶಿಸಬಹುದಾಗಿದೆ. ಮದ್ಯ ಪೂರೈಸುವ ಪ್ರದೇಶಗಳಲ್ಲಿ ಮತ್ತು ಗಾಜ್ ಡೆಕ್ ಒಳಗೆ ಮಕ್ಕಳಿಗೆ ಹೋಗಲು ಅನುಮತಿ ಇರುವುದಿಲ್ಲ. ಈ ನೌಕೆಯು ಮುಂಬೈನಿಂದ ಗೋವಾಕ್ಕೆ ಹೊರಡುವುದಾದಲ್ಲಿ ಸಂಜೆ 4 ಗಂಟೆಗೆ ಹೊರಟು ಮಾರನೇ ದಿನ ಬೆಳಗ್ಗೆ 9 ಗಂಟೆಗೆ ಗೋವಾವನ್ನು ತಲುಪುತ್ತದೆ ಅದೇ ರೀತಿ ಗೋವಾದಿಂದ ಇದೇ ನೌಕೆಯು 4 ಗಂಟೆಗೆ ಹೊರಟು ಅಲ್ಲಿಂದ ಮುಂಬಯಿಗೆ ಬೆಳಗ್ಗೆ 9 ಗಂಟೆಗೆ ತಲುಪುತ್ತದೆ. ಈ ನೌಕೆಯಲ್ಲಿ ಪ್ರಯಾಣ ದರವನ್ನು ಡಾರ್ಮೆಟ್ರಿ ಗೆ ರೂ.4,300/- ರಿಂದ ಡಬ್ಬಲ್ ರೂಮಿಗೆ ರೂ.7,650/- ವರೆಗೆ (ಊಟದ ಮೊತ್ತ ರೂ.2,000/-ಪ್ರತ್ಯೇಕ). ಆಫ್ ಸೀಸನ್ ಗಳಲ್ಲಿ ಈ ನೌಕೆಯ ಪ್ರಯಾಣ ಮತ್ತಷ್ಟು ದುಬಾರಿಯಾಗಿರುತ್ತದೆ ಹಾಗೂ ಈ ನೌಕೆಯಲ್ಲಿ ಪ್ರಯಾಣ ಮಾಡಲು ಇಚ್ಛಿಸುವ ಪ್ರವಾಸಿಗರು ಸಮೀಪದ ಎಲ್ಲ ಟ್ರಾವೆಲ್ ಏಜೆಂಟರುಗಳು ಅಥವಾ ಆಂಗ್ರಿಯಾಕ್ರೂಸ್ ಇವರ ವೆಬ್ ಸೈಟ್ (http://angriyacruises.com) ಮೂಲಕವೂ ತಮ್ಮ ಟಿಕೆಟ್ ಮೊದಲಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಒಟ್ಟಿನಲ್ಲಿ ಆಳ ಸಮುದ್ರದ ಪ್ರಯಾಣವು ಕೇವಲ ವಿದೇಶಗಳಿಗೆ ಪ್ರಯಾಣಿಸುವ ಸಂದರ್ಭದಲ್ಲಷ್ಟೇ ಎಂದು ಪರಿತಪಿಸುತ್ತಿದ್ದ ಸಾಹಸಿ ಹಾಗೂ ವಿನೋದದ ಪ್ರವಾಸಿಗರಿಗೆ ದೇಶೀಯವಾಗಿ ಕ್ರೂಸ್ ಲೈನರ್ ಆ್ಯಂಗ್ರಿಯಾ ಎಂಬ ಸಂಸ್ಥೆಯು ಸಮುದ್ರ ಪ್ರಯಾಣದ ವಿನೋದ ಹಾಗೂ ಮೋಜನ್ನು ಒದಗಿಸಿಕೊಡುವ ವಿಶೇಷವಾದ ಪ್ರಯತ್ನವನ್ನು ಮಾಡಿರುವುದು ದೇಶೀಯ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ನಿಜಕ್ಕೂ ಉತ್ತಮವಾದ ಬೆಳವಣಿಗೆಯಾಗಿದೆ. ಇಂತಹ ಯಾನವು ಕೇವಲ ಮೋಜು ಮಸ್ತಿಯ ಹೆಸರಿನಲ್ಲಿ ಮದ್ಯಪಾನ ಮತ್ತು ಐಷಾರಾಮಿ ದುಂದುವೆಚ್ಚಕ್ಕಷ್ಟೇ ಸೀಮಿತವಾಗಿರದೆ ಸಮುದ್ರದೊಳಗಿನ ವಿವಿಧ ಆಯಾಮಗಳು ಹಾಗೂ ಅಲ್ಲಿನ ವಿಶೇಷ ಸಂದರ್ಭಗಳನ್ನು ಹಾಗೂ ವಾತಾವರಣವನ್ನು ಅರಿಯುವ ಒಂದು ಅಧ್ಯಯನದ ಪ್ರವಾಸವಾಗಿ ಪ್ರವಾಸಿಗರು ಬಳಸಿಕೊಂಡಲ್ಲಿ ಖಂಡಿತವಾಗಿ ಇದೊಂದು ಅತ್ಯುತ್ತಮವಾದ ಪ್ರಯತ್ನ ಆಗಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *