ಹೆಣ್ಣು ಎಂಬುದು ಭೋಗದ ವಸ್ತುವಲ್ಲ. ಹೆಣ್ಣನ್ನು ಶಕ್ತಿ ದೇವತೆಯಾಗಿ ಆರಾಧಿಸುತ್ತಿದ್ದ ಕಾಲವೊಂದಿತ್ತು. ಇಂದು ಸಮಾಜದಲ್ಲಿ ಆಗುವಂತಹ ಅತ್ಯಾಚಾರ ಎಂಬ ಮಾಹಾರೋಗದಿಂದ ಹೆಣ್ಣುಮಕ್ಕಳನ್ನು ಕಾಪಾಡಬೇಕಾದ ಅನಿವಾರ್ಯತೆ ಬಂದೊದಗಿದೆ.
ಕಾಲ ಬದಲಾಯಿತೋ ಅಥವಾ ಜನಗಳು ಬದಲಾದರೋ ಎಂಬುದು ತಿಳಿಯದಂತಾಗಿದೆ. ಗಾಂಧೀಜಿ ಕಂಡ ಕನಸು ಮರೀಚಿಕೆಯಾಗುತ್ತಿದೆ. ಯಾವ ಧೈರ್ಯದ ಮೇಲೆ ಒಂದು ಹೆಣ್ಣು ಮಗಳು ಅರ್ಧ ರಾತ್ರಿಯಲ್ಲಿ ಒಬ್ಬಳೇ ಹೋಗಲು ಸಾಧ್ಯ. ಹಗಲು ಹೊತ್ತಿನಲ್ಲಿಯೇ ಹೆಣ್ಣುಮಕ್ಕಳು ಓಡಾಡದಂತಹ ಪರಿಸ್ಥಿತಿ ಬಂದಾಗಿದೆ.
ಹೆಚ್ಚಿನ ಯುವಜನತೆ ಮಾದಕ ವಸ್ತುಗಳ ದಾಸರಾಗಿ ಹಾಗೂ ಕೆಲ ಪ್ರೇರಿತ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ಹೆಣ್ಣು ಎಂಬುದನ್ನು ಮರೆತು ಮೃಗಗಳಿಗಿಂತ ಕೀಳಾಗಿ ಹೆಣ್ಣಿನ ಮೇಲೆರಗುತ್ತಿದ್ದಾರೆ. ಹೆಣ್ಣನ್ನು ಕಾಮದ ಒಂದು ವಸ್ತುವಾಗಿ, ಅವನ ತೃಷೆ ತೀರಿಸುವ ಭೋಗದ ವಸ್ತುವಾಗಿ ತುಚ್ಚವಾಗಿ ನೋಡಲಾಗುತ್ತಿದೆ.
ಮಕ್ಕಳ ಮೇಲಿನ ಅತ್ಯಾಚಾರ ಎಂಬ ಪದ ಕೇಳಿದೊಡನೆ ಎಂತಹ ಕಲ್ಲು ಮನಸ್ಸಿನವರ ಮನಸ್ಸು ಕರಗದೆ ಇರಲಾರದು. ಅತ್ಯಾಚಾರ ಮಾಡುವವನು ಮನಸ್ಸು ಎಂತಹ ಕ್ರೂರವಾಗಿರಬೇಕು. ಅಷ್ಟೊಂದು ಕ್ರೂರವಾಗಿ ಹಿಂಸಿಸಿ ಅವರನ್ನು ಸಾಯಿಸಿ ಅವನು ಖುಷಿ ಪಡುತ್ತಾನಲ್ಲ, ಛೇ ಎಂತಹ ನೀಚತನ.
ಒಂದು ಹೆಣ್ಣನ್ನು ಆದಿಶಕ್ತಿಯಾಗಿ ಪೂಜಿಸುವಂತಹ ದೇಶದಲ್ಲಿ ನಾವಿದ್ದೇವೆ. ಅದೇ ದೇಶದಲ್ಲಿ ಇಂದು ಶೇಕಡಾ 63ರಷ್ಟು ಅತ್ಯಾಚಾರಗಳು ಆಗುತ್ತಿವೆ, ಎಂದರೆ ನಮ್ಮ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತರಾಗಿದ್ದಾರೆ ಎಂಬುವುದನ್ನು ಯೋಚಿಸಬೇಕಾಗುತ್ತದೆ. ಏನೂ ಅರಿಯದ ಮುಗ್ಧ ಕಂದಮ್ಮಗಳ ಮೇಲೆ ಅವನ ಕಾಮದ ತೃಷೆಯನ್ನು ತೀರಿಸಿಕೊಳ್ಳುತ್ತಾನಲ್ಲ ಛೇ, ಅವನೆಂತಹ ನೀಚ ವ್ಯಕ್ತಿ. ಅವನು ಮಾನವ ಕುಲಕ್ಕೆ ಹಾಗೂ ಗಂಡಿನ ಕುಲಕ್ಕೆ ಅವಮಾನ. ಅವನದು ಅದೇ ಹೆಣ್ಣಿನ ಗರ್ಭದಿಂದಲೇ ತನ್ನ ಹುಟ್ಟು ಎಂಬುವುದನ್ನು ಮರೆತಂತಿದೆ. ಅಂತಹವನನ್ನು ಹೆತ್ತ ಆ ತಾಯಿಯ ಗರ್ಭಕ್ಕೆ ಅವಮಾನ.
ಹೆಣ್ಣುಮಕ್ಕಳು ಇರುವ ತಂದೆತಾಯಿಗಳು ಅವರ ಹೆಣ್ಣುಮಕ್ಕಳ ಬಗ್ಗೆ ಪ್ರತೀಕ್ಷಣ ಯೋಚನೆ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ಭಯದಿಂದ ಬದುಕುವಂತಾಗಿದೆ. ಸೃಷ್ಟಿಯ ಮೂಲವೇ ಹೆಣ್ಣು. ಅದೇ ಹೆಣ್ಣು ಇಂದು ನಿರ್ಭಯವಾಗಿ ನಡೆದಾಡಲು ಯೋಚಿಸುವಂತಾಗಿದೆ.
ಹೆಣ್ಣಿನ ಗುಪ್ತಾಂಗವನ್ನು ಸೀಳುವಾಗ ಅಲ್ಲಿಂದಲೇ ತನ್ನ ಜನನವಾಗಿದೆ ಎಂಬುದನ್ನು ಯಾಕೆ ಅರಿಯದೇ ಹೋದ. ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡುವಾಗ ತನ್ನ ತಾಯಿ, ಅಕ್ಕ ತಂಗಿಯರು ನೆನಪಿಗೆ ಬರಲಿಲ್ಲವೇ. ಏನೂ ಅರಿಯದ ಕಂದಮ್ಮಗಳ ಮೇಲೆ ಎರಗುವಾಗ ಅವನಿಗೆ ಆ ಮಗುವಿನ ಮುಗ್ಧ ಮುಖ ಕಣ್ಣಿಗೆ ಕಾಣದಾಯಿತೆ. ಅರಿವಿರುವ ಮನುಷ್ಯ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯಬಹುದೇ. ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇವೆ.
ಇದಕ್ಕೆ ಕಾರಣ, ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವುದು. ಹಾಗೂ ನಮ್ಮ ದೇಶದ ಕಾನೂನು. ಹೆತ್ತವರಿಗೆ ತಮ್ಮ ಹೆಣ್ಣು ಮಕ್ಕಳ ಮೇಲೆ ಮಾತ್ರ ಹತೋಟಿ ಇದ್ದರೆ ಸಾಲದು. ಗಂಡು ಮಕ್ಕಳ ಮೇಲೆಯೂ ಹತೋಟಿ ಇರಬೇಕು. ಗೂಳಿಗಳ ಹಾಗೇ ಬೆಳೆಸಿ ಸಮಾಜಕ್ಕೆ ಇಂತಹ ನೀಚ ಸಂಸ್ಕಾರರಹಿತ ಮಕ್ಕಳ ನೀಡುವ ಅವಶ್ಯಕತೆಯಾದರೂ ಇದೆಯೇ?
ಗಂಡುಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಪ್ರತೀ ಹೆಣ್ಣನ್ನು ಪೂಜ್ಯನೀಯ ಭಾವನೆಯನ್ನು ಬೆಳೆಸುವಂತೆ ಪ್ರೇರೆಪಿಸಬೇಕು. ಒಬ್ಬ ಅತ್ಯಾಚಾರಿ ಬೆಳೆದಂತಹ ವಾತಾವರಣ ಕೂಡಾ ಅವನ ಈ ನೀಚತನಕ್ಕೆ ಸಾಕ್ಷಿ. ಹೆಣ್ಣಿಗೆ ರಕ್ಷಣೆ ನೀಡಬೇಕಾದ ಗಂಡು ಭಕ್ಷಕನಾದರೆ ಸಮಾಜದಲ್ಲಿ ನಡೆದಾಡಲು ಕಷ್ಟಸಾಧ್ಯ.
ಇನ್ನು ದೇಶದ ಕಾನೂನು ಅತ್ಯಾಚಾರ ವಿಷಯಕ್ಕೆ ಬಂದಾಗ ಮಾತ್ರ ಬದಲಾಗುವುದಿಲ್ಲ. ಎಲ್ಲವನ್ನೂ ರಾಜಕೀಯ ಪ್ರೇರಿತವಾಗಿ ನೋಡಲಾಗುತ್ತಿದೆ. ಆದರೆ ಅವರಿಗೆ ಬೇಕಾದಾಗ ಮಸೂದೆಗಳು ಬದಲಾಗುತ್ತದೆ ಹೊಸ ಕಾನೂನುಗಳು ಜಾರಿ ಬರುತ್ತದೆ. ಆದರೆ, ಅತ್ಯಾಚಾರದ ವಿಷಯದಲ್ಲಿ ಯಾವುದೇ ಮಾಸೂದೆಗಳಾಗಲಿ ಕಾನೂನಾಗಲಿ ಬರಲು ಸಾದ್ಯವಿಲ್ಲವೇ?.
ನಮ್ಮ ದೇಶದಲ್ಲಿ ಒಂದು ಹೆಣ್ಣಿನ ಅತ್ಯಾಚಾರವಾದ ಕೂಡಲೇ ಕೆಲ ಬುದ್ದಿಜೀವಿಗಳು ಎಚ್ಚೆತ್ತುಕೊಂಡು ಅತ್ಯಾಚಾರ ಆಗಲು ಆಕೆ ತೊಡುವ ಬಟ್ಟೆ ಕಾರಣ ಎನ್ನುತ್ತಾರೆ. ಅಂದರೆ, ಅವಳು ಹೆಣ್ಣು ಎನ್ನುವುದನ್ನು ಅವಳು ಹಾಕುವ ಬಟ್ಟೆಯಿಂದ ನಿರ್ಧಾರ ಮಾಡಲಾಗುತ್ತದೆಯೇ?. ಇಂದಿಗೂ ಕೆಲಮಂದಿ ಅದನ್ನು ಸಮರ್ಥನೆ ಮಾಡುತ್ತಲೇ ಬಂದಿದ್ದಾರೆ. ಯಾಕೆ, ಗಂಡು ನೋಡುವ ದೃಷ್ಟಿ ಬದಲಾಗಬೇಕು ಎನ್ನುವುದಿಲ್ಲ.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಂಶವೆಂದರೆ ಪ್ರತೀ ಒಂದು ಗಂಡಿನ ಸೃಷ್ಟಿಯಲ್ಲಿ ಹೆಣ್ಣಿನ ಪಾಲಿದೆ. ಪ್ರತೀ ಮನೆಯ ಮಹಾಲಕ್ಷ್ಮೀ ಸ್ವರೂಪವಾಗಿ ಆ ಹೆಣ್ಣು ಜೀವಿಸುತ್ತಾಳೆ. ಆದರೆ ಅದೇ ಬೇರೆ ಮನೆ ಹೆಣ್ಣು ಅತ್ಯಾಚಾರಕ್ಕೆ ಬಲಿಯಾದಾಗ ಮಾತ್ರ ಕಣ್ಣುಮುಚ್ಚಿ ತೀರ್ಪು ಕೊಡುತ್ತೇವೆ.
ಯಾರಾದರೂ ಅತ್ಯಾಚಾರ ಆಗಿ ಮೃತಪಟ್ಟರೆ ನಾಲ್ಕುದಿನ ಜೋರಾಗಿ ಸದ್ದು ಮಾಡುತ್ತದೆ. ಸ್ವಲ್ಪ ಸ್ಥಿತಿವಂತರಾಗಿದ್ದರೆ ಸ್ವಲ್ಪದಿನ ಜಾಸ್ತಿಯಾಗಬಹುದೇನೋ. ಬಡವರಾದರೆ ಅದು ಸದ್ದು ಮಾಡುವುದೇ ಇಲ್ಲ. ಯಾಕೆ ಅವರ ಜೀವಕ್ಕೆ ಬೆಲೆ ಇಲ್ಲವೇನು?. ಇದರಲ್ಲೂ ಧರ್ಮ, ಜಾತಿ, ಶ್ರೀಮಂತ, ಬಡವ ಎಂಬ ತಾರತಮ್ಯ ಬೇಕೆ?.
ಪ್ರತಿಯೊಂದು ಹೆಣ್ಣು ಮಾತೃತ್ವದ ರೂಪ ಅಲ್ಲವೇನು? ಎಲ್ಲಾ ಹೆಣ್ಣಿನ ನೋವು ಒಂದೇ ಅಲ್ಲವೇನು?
ವಿದೇಶಗಳಲ್ಲಿ ಇರುವಂತೆ ಕಠಿಣವಾದ ಶಿಕ್ಷೆ ನಮ್ಮಲ್ಲಿ ಯಾಕಿಲ್ಲ? ಇನು ಎಷ್ಟು ಮಂದಿಯ ಬಲಿ ಕೊಡಬೇಕು. ಒಂದು ಕಠಿಣವಾದ ಕಾನೂನು ಬಂತೆಂದರೆ ಮಾತ್ರ ಅತ್ಯಾಚಾರ ಕಡಿಮೆಯಾಗಬಹುದೇ ಹೊರತು ಮೊಂಬತ್ತಿ ಹಿಡಿದು ಹೋರಾಟ ಮಾಡಿದ ತಕ್ಷಣ ಅತ್ಯಾಚಾರ ಕಡಿಮೆಯಾಗುವುದಿಲ್ಲ. ಮಾಡುವ ಹೋರಾಟವು ರಾಜಕೀಯ ಪ್ರೇರಿತವಾಗಿರದೇ ನ್ಯಾಯುತವಾಗಿ ನ್ಯಾಯ ಸಿಗುವವರೆಗೆ ಹೋರಾಟ ಮಾಡಬೇಕು. ಇಲ್ಲವಾದರೆ ಮುಂದೊಂದು ದಿನ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಮೇಯ ಬರಬಹುದು . ಭಯವಿಲ್ಲದೇ ಯಾವ ಮನುಷ್ಯನು ಅವನ ತಪ್ಪನ್ನು ತಿದ್ದಿಕೊಳ್ಳಲು ಸಾದ್ಯವಿಲ್ಲ.
ಭೀಕರವಾಗಿ ಅತ್ಯಾಚಾರ ಮಾಡುವ ವ್ಯಕ್ತಿಗೆ ಅಷ್ಟೇ ಭೀಕರವಾಗಿ ಶಿಕ್ಷೆಯು ಕೊಟ್ಟಲ್ಲಿ ಈ ಅತ್ಯಾಚಾರ ಕಡಿಮೆಯಾಗಬಹುದೇನೋ. ಅವನು ಜೀವನ ಪರ್ಯಂತ ನರಳಿ ನರಳಿ ಸಾಯುವುಂತಹ ಶಿಕ್ಷೆ ಕೊಟ್ಟಾಗ ಮಾತ್ರ ಆ ನರಳಿ ಸತ್ತ ಹೆಣ್ಣಿನ ಜೀವಕ್ಕೆ ಸದ್ಗತಿ ಸಿಗಲು ಸಾಧ್ಯ. ಧರ್ಮ ಉಳಿಯಬೇಕು ಅಧರ್ಮ ಅಳಿಯಬೇಕು.
ಗಂಡುಮಕ್ಕಳಷ್ಟೇ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಎಲ್ಲಾ ರೀತಿಯಿಂದಲೂ ಬದುಕುವ ಹಕ್ಕಿದೆ. ಹೆಣ್ಣುಮಕ್ಕಳಿಗೆ ಸ್ವ ರಕ್ಷಣೆ ಮಾಡಿಕೊಳ್ಳುವ ಎಲ್ಲಾ ತರಭೇತಿ ನೀಡಬೇಕು ಹಾಗೂ ಅವರಲ್ಲಿ ಆತ್ಮವಿಶ್ವಾಸ ನೀಡಬೇಕು. ಮುಂದೊಂದು ದಿನ ಅವಳನ್ನು ಅವಳೇ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಅವಳಿಗೆ ಬರಲಿ. ಸಮಾಜವನ್ನು ನಂಬಿ ಕೂತರೆ ಯಾವುದೇ ಪ್ರಯೋಜನ ಸಿಗಲಾರದು. ಇವಾಗಿನ ನಮ್ಮ ಸುತ್ತಾ ಇರುವ ಕೆಲ ಜನರಿಗೆ ಬೇರೆಯವರ ಬಗ್ಗೆ ಯೋಚಿಸುವಷ್ಟು ಪುರುಸೊತ್ತು ಇಲ್ಲ. ಯೋಚಿಸಿದರೂ ಸಕಾರಾತ್ಮಕವಾಗಿ ಯೋಚನೆ ಮಾಡುವುದಿಲ್ಲ. ನಾವು ಬಹಳ ಮುಂದುವರಿದು ಬಿಟ್ಟಿದ್ದೇವೆ. ನಮ್ಮ ಕಣ್ಣೆದುರು ಏನೇ ದುರ್ಘಟನೆಗಳು ಆದರೂ ವಿಡಿಯೋ ಮಾಡುತ್ತಾ ನಿಂತಿರುತ್ತೆವೆಯೇ ವಿನಃ ಸಹಾಯಕ್ಕೆ ಹೋಗುವ ಮನಸ್ಥಿತಿ ಇರುವುದಿಲ್ಲ. ಹಾಗಾಗಿ ಅವಳ ರಕ್ಷಣೆ ಅವಳಿಂದಲೇ ಆಗಬೇಕಾಗಿದೆ.
ಸೌಮ್ಯ ನಾರಾಯಣ್
ಚಿತ್ರಗಳು : ಗೂಗಲ್