ಖೈದಿಯ ಗೋಡೆ ಕವಿತೆ

ಎಷ್ಟೂಂದು ನಿಶ್ಚಲವಾಗಿ ನಿಂತಿದೆ
ಕಲ್ಲು-ಮಣ್ಣು-ಸುಣ್ಣದಿಂದ ಕೂಡಿದ
ಬ್ರಿಟೀಷರ ಕಾಲದ ಈ ಗೋಡೆ
ನನಗೆ ಹೆಮ್ಮೆಯ ಸಂಗತಿ
ಈ ನಿರ್ಜೀವಿ ಗೋಡೆ

ಜೀವ ಇಲ್ಲದೆಯೂ..
ನನ್ನೆದೆಯ ಭಾವಗಳಿಗೆ
ಸ್ಪಂದಿಸೋ ಈ ಗೋಡೆ
ನಾನು ಜೈಲಿನಲ್ಲಿ ಸಂಪಾದಿಸಿದ್ದು;
ಹದಿಮೂರು ವರ್ಷಗಳಿಂದ

ಇದ್ದಿಲಿನಿಂದ ನಾ ಒತ್ತಿ ಒತ್ತೀ..
ನನ್ನ ಮನದಾಳದ ನೋವುಗಳನ್ನು
ಗಟ್ಟಿಯಾಗಿ ಗೀಚುವಾಗಲೆಲ್ಲ
ಉಸಿರನ್ನೂ ಬಿಡದೆ ನಿಂತಿದ್ದ ಈ ಗೋಡೆ;
ಆಗಾಗ ನನ್ನ ಇತಿಹಾಸವನ್ನೇ ಹೊಳೆಯುವಂತೆ
ಇಲ್ಲಿಗೆ ಬಂದವರಿಗೆಲ್ಲಾ ಬಣ್ಣಿಸುತ್ತದೆ
ಉಣ್ಣಿಸಿ, ಅವರನ್ನೂ ಸಲುಹುತ್ತದೆ ಕೂಡ

ಪ್ರೇಯಸಿಯರ ವಿರಹಕ್ಕೋ
ಅಪ್ಪ-ಅಮ್ಮನ ನೆನಪಿಗೋ
ಗೆಳೆಯರ ತುಂಟಾಟದ ಸವಿಗಳಿಗೋ
ರಂಗದ ಮೇಲಿನ ನನ್ನ ಅಚ್ಚರಿ ದೃಶ್ಯಗಳಿಗೋ
ಇಲ್ಲಿಗೆ ಬರುವ ಮುಂಚೆ ಪ್ರೀತಿಸಿದ್ದ
ಆ ಚೋರಿ ಯಾಶಿಯ ಬಲೆಗೋ ಸಿಕ್ಕ
ಈ ನೀರಪರಾಧಿಯ ಸಾಲುಗಳ ವ್ಯಸನಕ್ಕೋ
ದಿನವೂ, ಪ್ರತಿಕ್ಷಣವೂ.. ಬಲಿಯಾಗಿ
ತನ್ನ ಮೈಮೇಲಿನ ಅಗಣಿತ ಬರೆಗಳಿಗೆ
ಕವಿತೆಯ ರೂಪಕೊಟ್ಟಿದೆ; ಈ ನನ್ನ ನೆಚ್ಚಿನ ಗೋಡೆ

ಬಹುಷಃ ನನಗೆ ನಾಳೆಯೇ ಬಿಡುಗಡೆಯ ದಿನ
ಆದರೆ, ನನ್ನ ಸುತ್ತ ಇದ್ದ ಈ ಗೋಡೆಗಳಿಗೆ..?
ಸಾಧ್ಯವೇ ಇಲ್ಲ!
ನಾನು ಗೋಡೆಯಿಂದ, ಅಥವಾ
ಗೋಡೆ ನನ್ನಿಂದ ಬಿಡುಗಡೆಪಡೆದರೂ..
ನಾನು ಯಾಶಿಯಿಂದ, ಹಾಗೂ
ಗೋಡೆಯು ಕವಿತೆಗಳಿಂದ ಬಿಡುಗಡೆಪಡೆಯಲು
ಸಾಧ್ಯವೇ ಇಲ್ಲ!!

ಅನಂತ ಕುಣಿಗಲ್

ಚಿತ್ರ ಕೃಪೆ : ಲಕ್ಷ್ಮೀನಾರಾಯಣ ಟಿ ಹಾಗು ಗೂಗಲ್

Related post