ಗಂಜೀಫಾ ಚಿತ್ರಕಲೆ ಮತ್ತು ಸಾಂಸ್ಕೃತಿಕ ನೇಪಥ್ಯ

ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ.

‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ.

ಮುಮ್ಮಡಿ ಕೃಷ್ಣರಾಜ ಒಡೆಯರ್

ಆಗ ಇದನ್ನು ದೇವರ ಆಟ ಎಂದು ಕರೆಯಲಾಗುತ್ತಿತ್ತು. ಇವುಗಳ ಬಣ್ಣಗಾರಿಕೆ ವಸ್ತು ವಿಶೇಷ ಎಲ್ಲವೂ ಆಯಾ ಕಲಾವಿದರ ಸ್ವಂತಿಕೆಯಿಂದ ಕೂಡಿದಂಥವು. ಮುಮ್ಮಡಿಯ ಮೇರುಕೃತಿ “ಶ್ರೀ ತತ್ವನಿಧಿ”. ಅದರಲ್ಲಿ ಶಕ್ತಿನಿಧಿ, ಶಿವತತ್ವನಿಧಿ, ಬ್ರಹ್ಮನಿಧಿ, ಗ್ರಹನಿಧಿ, ವೈಷ್ಣವನಿಧಿ, ಆಗಮನಿಧಿ ಮತ್ತು ಕೌತುಕನಿಧಿ ಎಂಬುದಾಗಿ ಒಂಭತ್ತು ನಿಧಿಗಳಿವೆ. ಇದರಲ್ಲಿ ಗಂಜೀಫಾ ಮೊದಲಾದ ಒಳಾಂಗಣ ಆಟಗಳ ಸಚಿತ್ರ ವಿವರಗಳಿವೆ. ಇದೊಂದು ಸಮಗ್ರ ವಿಶ್ವಕೋಶ. “ಶ್ರೀ ತತ್ವನಿಧಿ”ಯ ಕೌತುಕ ನಿಧಿಯಲ್ಲಿ ಗಂಜೀಫಾ ಕುರಿತ ಚಿತ್ರಗಳ ಸಹಿತ ವಿವರಗಳಿವೆ. ಇದೊಂದು ಒಳಾಂಗಣ ಕ್ರೀಡೆಯಾಗಿದ್ದು ಬುದ್ಧಿಯನ್ನು ಚುರುಕುಗೊಳಿಸಲೆಂದು ಈ ಆಟ ಆಡುತ್ತಿದ್ದರು. ಪಶ್ಚಿಮ ಬಂಗಾಳದ ಬಿಷ್ಣು ಪುರ್, ಮುರ್ಷಿದಾಬಾದ್, ಕಲ್ಕತ್ತಾದ ಸೋನೇಲ್ ಪುರ್, ರಘುರಾಜ್ ಪುರ, ಪಂಜಕಾಬ್‌ನ ಹೊಶಿಯಾ ಪುರ್, ರಾಜಾಸ್ತಾನ್‌ನ ಜಯಪುರ್‌ನ ಕರೌಲಿ, ಉದಯ್ ಪುರ್, ಗುಜರಾತ್‌ನ ಕಾಂಬೆ, ಮಧ್ಯ ಪ್ರದೇಶದ ಕಾಂಬೆ, ಮಧ್ಯ ಪ್ರದೇಶದ ಶಿವಪುರ್, ಬಿಹಾರದ ಪಾಟ್ಣಾ. ತೆಲಂಗಾಣದ ನಿರ್ಮಲ್, ಆಂಧ್ರ ಪ್ರದೇಶದ ಕರ್ನೂಲ್, ಬನಗಾನ ಪಲ್ಲಿ, ಕಡಪ, ಕರ್ನಾಟಕದ ಮೈಸೂರು, ತಮಿಳುನಾಡಿನ ತಂಜಾವೂರು, ಮಹಾರಾಷ್ಟದ ಅಹಮದ್ ನಗರ, ಸಾವಂತ ವಾಡಿ, ಒರಿಸ್ಸಾ ಹಾಗೂ ಕರ್ನಾಟಕಗಳಲ್ಲಿ ಈ ಕಲೆ ಹೆಚ್ಚು ಜನಪ್ರಿಯವಾಗಿದ್ದು ಪ್ರಚಲಿತದಲ್ಲಿದ್ದಿತು. ಪ್ರಸ್ತುತ ರಘು ರಾಜಪರ್, ಬಿಷ್ಣುಪುರ್, ಮೈಸೂರ್, ಸಾವಂತ್ ವಾಡಿ, ಮತ್ತು ನಿರ್ಮಲ್ ಪ್ರಾಂತ್ಯಗಳಲ್ಲಿ ಈ ಕಲೆ ಇಂದಿಗೂ ಕಾರ್ಯಗತವಾಗಿದೆ.

ಈ ಚಿತ್ರಗಳನ್ನು ಬಹಳ ಮುಖ್ಯವಾಗಿ ಕಾಗದ, ದಂತ ಮತ್ತು ಮರದ ತೆಳುವಾದ ಹಲಗೆಗಳ ಮೇಲೆ ಚಿತ್ರಿಸುತ್ತಾರೆ. ಹದಿನೆಂಟನೇ ಶತಮಾನದಲ್ಲಿ ಕಾಗದದ ಅನ್ವೇಷಣೆಯ ನಂತರ ಕಾಗದದ ತೆಳುವಾದ ಪದರುಗಳನ್ನು ಒಂದಕ್ಕೊಂದು ಮರದ ಅಂಟಿನಿಂದ ಅಂಟಿಸಿ ಪೋಸ್ಟರ್ ಬಣ್ಣಗಳಿಂದ ಕಥೆಯ ಹಂದರಕ್ಕೆ ತಕ್ಕಂತೆ ಚಿತ್ರಿಸುತ್ತಾರೆ. ಈ ಮೊದಲೆಲ್ಲಾ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿದ್ದರು. ವೃತ್ತ, ಚೌಕ, ಆಯತ, ದೀರ್ಘ ವೃತ್ತಗಳು ಇವುಗಳ ಪ್ರಮುಖ ಆಕಾರಗಳು. ಹೀಗೆ ಸಿದ್ಧಪಡಿಸಿದ ಚಿತ್ರಗಳನ್ನು ವೃತ್ತಾಕಾರಲ್ಲಿ, ಚೌಕ ಮತ್ತು ಆಯತಗಳಂಥ ಉದ್ದನೆಯ ಫಲಕಗಳಾಗಿ ಸಂಯೋಜಿಸಿರುತ್ತಾರೆ.

ಕ್ರೀಡಾ ಪತ್ರಂ” ಎಂದರೆ ಆಟದ ಪತ್ರ(ರಟ್ಟು)ಗಳು ಲಿಖಿತ ಆಧಾರಗಳು ಸಮರ್ಪಕವಾಗಿ ದೊರೆಯದಿದ್ದರೂ “ಐನ್-ಇ-ಅಕ್ಬರೀ” ಎಂಬ ಪುಸ್ತಕದಲ್ಲಿ ಅಬ್ದುಲ್ ಫಾಝಿಲ್ ಎಂಬ ಕಲಾವಿದನು ಗಂಜೀಫಾ ರಚನಾ ಪ್ರಕಾರಗಳಲ್ಲಿ ಪ್ರಮುಖವಾಗಿ ಹನ್ನೆರಡು ವಿಭಾಗಗಳು ಇವೆ ಎಂದೂ ಈ ಕಲಾ ಪ್ರಕಾರದ ಮೂಲವು ಪುರಾತನ ಋಷಿ ಮುನಿಗಳಿಂದ ಆದದ್ದು ಎಂದು ಹೇಳುತ್ತಾನೆ. ಮೊಗಲರ ಕಾಲದಲ್ಲಿ ಅಕ್ಬರನ ಆಣತಿಯಂತೆ ರಚಿಸಲ್ಪಟ್ಟ ಬಾಬರ್ ನಾಮಾದಲ್ಲಿ ಈ ಕ್ರೀಡೆಯ ಜನಪ್ರಿಯತೆಯು ಎದ್ದು ಕಾಣುತ್ತದೆ. ಅಕ್ಬರನ ಪುತ್ರಿ ಬೇಗಂ ಗುಲ್ಬದನ್ ತನ್ನ ಅಣ್ಣನ ನೆನಪಿಗಾಗಿ ಹುಮಯುನ್ ನಾಮಾವನ್ನು ಪ್ರಕಟಿಸಿದ್ದಳು. ಗಂಜೀಫಾ ಎಂಬ ಪದವು ಪರ್ಷಿಯಾದ ಪದವಾಗಿದ್ದು ಖಜಾನೆ, ಕಣಜ, ನಿಧಿ ಎಂಬುದಾಗಿ ಇದೆ. ಮೊದ ಮೊದಲು ಈ ಕಲೆಯು ಕ್ರೀಡಾ ರೂಪದಲ್ಲಿ ಅರಮನೆಯ ಸೇವಕರು, ಖಜಾನೆಯ ಅಧಿಕಾರಿಗಳು, ಸೈನ್ಯದ ಸದಸ್ಯರು, ವ್ಯಾಪಾರಸ್ತರು ಮೊದಲಾಗಿ ಈ ಕಲೆಯನ್ನು ಆರಂಬಿಸಿ ನಂತರದಲ್ಲಿ ರಾಜ್ಯಾದ್ಯಂತ ಹರಡಿ ಭಾರತದಾದ್ಯಂತ ಪಸರಿಸಲಾಯಿತು. ಮುಂದೆ ಈ ಕಲೆಯು ಆಯಾ ಪ್ರಾಂತ್ಯದ ಸಂಸ್ಕೃತಿ, ಪ್ರಾಂತೀಯ ಸಂಪ್ರದಾಯಗಳ ಒಳಗೊಳ್ಳುವಿಕೆಯಿಂದ ಗಂಜೀಫಾ ಕಲೆಯು ತನ್ನ ವೈವಿದ್ಯತೆಗಳಿಂದ ಮೆರೆದಿದೆ. 

ಗಂಜೀಫಾ ರಟ್ಟುಗಳನ್ನು ಅನೇಕ ದೃಶ್ಯ ನಿರೂಪಣೆಗಳಲ್ಲಿ ಚಿತ್ರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದುವು ಕೃಷ್ಣಾಷ್ಟ ಮಾಲಾ, ದಶಾವತಾರ, ಅಷ್ಟ ದಿಕ್ಪಾಲ, ಸಪ್ತಮಾತೃಕಾ, ನವಗುಂಜಾರ, ಪರ್ಲಖೇಮುಂಡಿ ರಾಮಾಯಣ, ಸೋನೇಪುರ, ರಾಜ ಕಾರ್ಡ, ಅಷ್ಟಲಕ್ಷಿ, ಕೃಷ್ಣ, ನವೀನ ರಾಮ ಚಡಾ, ಕಲ್ಯಾಣ, ಸ್ವಾತಂತ್ರ್ಯ ಸಂಗ್ರಾಮದ ಕಥೆ, ಗಣೇಶ್ ಸೆಟ್, ಅಷ್ಟ ಮಹಿಷಿ ಕೃಷ್ಣ, ಪ್ರಾಣಿಗಳ ಚಿತ್ರ, ಪಕ್ಷಿಗಳ ಚಿತ್ರ, ಸಂಗೀತ ವಾದ್ಯಗಳು, ವಾದ್ಯ ನುಡಿಸುವ ಮಹಿಳೆಯರು, ಸೀತಾ, ರಾಶಿ ಚಕ್ರ, ಅಗ್ನಿ, ಆಟಗಳು ಇತ್ಯಾದಿ. ಈ ಕೆಲಸಕ್ಕೆ ನಿಗಧಿತ ನುರಿತ ಕಲಾವಿದರೇ ಇಂಥಾ ರಟ್ಟುಗಳ ಕಟ್ಟು ಗಳನ್ನು ಸಿಧ್ಧಪಡಿಸುತ್ತಿದ್ದರು. ಕಾಲಕ್ರಮದಲ್ಲಿ ಈ ಕಲೆಯು  ಮೈಸೂರು ಸಂಪ್ರದಾಯಿಕ ಶೈಲಿಯಿಂದ ಪ್ರಭಾವಿತವಾಗಿ ಹೊಸ ರೂಪವನ್ನು ತಳೆಯಿತು. ಇವು ಆಟದ ಸಾಧನಗಳಾಗಿದ್ದರೂ ಕಲಾತ್ಮಕವಾಗಿ ಬಹಳ ಆಕರ್ಷಣೆಯಿಂದ ಕೂಡಿದ್ದವು. ಇಂಥಾ ಅಪರೂಪದ ಕಲೆಯ ಬಗ್ಗೆ ತಿಳಿಯುವ, ಕಲಾಕೃತಿಯನ್ನಾಗಿ ನೋಡುವ, ಆ ಕಲಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯ ಬಹಳ ಇದೆ.

ಮೈಸೂರನ ಪ್ರಮುಖ ಗಂಜೀಫಾ ಚಿತ್ರಗಳ ವಿಷಯಗಳು:

೧.           ಕಂಸ ವಧೆ

೨.           ಚಕ್ರಾಸುರನ ವಧೆ

೩.           ತಾಟಕಾಸುರನ ವಧೆ

೪.           ಕಾಳಿಂಗ ವಧೆ

೫.           ಬಕಾಸುರ ವಧೆ (ಕೊಕ್ಕರೆ ರಕ್ಕಸ)

೬.           ಕೇಶಿ ವಧೆ (ಕುದುರೆ ರಕ್ಕಸ)

೭.           ಅಘಾಸುರ ವಧೆ (ಅಘಾಸುರ ವಧೆ)

೮.          ಅವಳಿ ಅರ್ಜುನ ಮರಗಳ ವಧೆ

೯.           ಪೂತನಿ ವಧೆ

೧೦.       ಶಕಟಾಸುರ ವಧೆ

೧೧.       ವತ್ಸವಾಸುರ ವಧೆ (ಕರು ರಕ್ಕಸ)

೧೨.       ಚಾಮುಂಡಿ ಕಾರ್ಡ

೧೩.       ನವಗ್ರಹ

೧೪.       ಕಲ್ಯಾಣ ಗಣೇಶ

೧೫.       ಕೃಷ್ಣರಾಜ ಮೊಹರು

ದೇವ ದೇವತೆಗಳು ಮತ್ತು ಅವರ ಗುರುತಿಸುವಿಕೆಗಾಗಿ ಧರಿಸುವ ಸೂಕ್ತ ಆಯುಧ

ದೇವತೆಗಳುಆಯುಧ
  
ಬ್ರಾಹ್ಮಣಿಕಾಮಧೇನು
ನೀರಿನ ಕೊಡಮಹೇಶ್ವರಿ
ಮೇಕೆಕೌಮಾರಿ
ತ್ರಿಶೂಲವೈಷ್ಣವಿ
ಚಕ್ರಆಗ್ನೇಯ
ನೇಗಿಲುಇಂದ್ರಾಣಿ ವಜ್ರ
ಚಾಮುಂಡಖಡ್ಗ
ಗಣೇಶಅಂಕುಶ

ದಿಕ್ಪಾಲಕರು ಮತ್ತು ಅವರಿಗೆ ಬಳಸುವ ಬಣ್ಣಗಳು, ಬಣ್ಣಗಳು ಮತ್ತು ಅವುಗಳ ಭಾವಾರ್ಥ, ದಿಕ್ಪಾಲಕರ ಹೆಸರು ಬಳಸುವ ಬಣ್ಣ   ಬಳಸುವ ಆಯುಧ:

ದಿಕ್ಪಾಲಕರುಬಣ್ಣಗಳುಆಯುಧ
   
ಕುಬೇರ (ಉತ್ತರ)ಕಪ್ಪುಕುಂಭ
ಯಮ (ದಕ್ಷಿಣ)ಬಿಳಿದಂಡಾಯುಧ
ಇಂದ್ರ (ಪೂರ್ವ)ಹಸಿರುವಜ್ರ
ವರುಣ (ಪಶ್ಚಿಮ)ನೀಲಪಾಶ
ಈಶಾನ್ಯಕಿತ್ತಳೆತ್ರಿಶೂಲ
ಅಗ್ನಿಕಂದುಜ್ವಾಲೆ
ವಾಯುಹಳದಿಧ್ವಜ
ನೈರುತ್ಯಕೆಂಪುಖಡ್ಗ

ಕೃಷ್ಣಾಷ್ಟಮಲ್ಲ ಕಾರ್ಡುಗಳು :

ಹೆಸರೇ ಹೇಳುವಂತೆ ಕೃಷ್ಣ-ಅಷ್ಟ-ಮಲ್ಲ. ಶ್ರೀ ಕೃಷ್ಣನು ಎಂಟು ಮಂದಿ ರಾಕ್ಷಸರೊಡನೆ ಹೋರಾಡಿ ಅವರನ್ನು ಸಂಹಾರ ಮಾಡಿದ ಚಿತ್ರಗಳು. ನೋಡಲಿಕ್ಕೆ ಕೃಷ್ಣನ ಚಿತ್ರ ಒಂದೇ ರೀತಿ ಕಂಡರೂ ಸಂಹರಿಸಲ್ಪಟ್ಟ ರಾಕ್ಷಸರು ಅವರ ಉಡುಗೆ ತೊಡುಗೆಗಳಲ್ಲಿ ವ್ಯತ್ಯಾಸವಿದೆ. ಕೃಷ್ಣನ ಬಾಲ್ಯದಿಂದ ಆತನು ಪ್ರೌಢಾವಸ್ಥೆಗೆ ಬರುವ ಹಂತದಲ್ಲಿ ಮಾಡಿದ ಹೋರಾಟಗಳ ಚಿತ್ರಗಳು ಸಾಕಷ್ಟು ಸಿಗುತ್ತವೆ. ಪ್ರಧಾನ ಬಿಲ್ಲೆಗಳಲ್ಲಿ ಕೃಷ್ಣ-ರಾಧೆ, ಕೃಷ್ಣ-ಬಲರಾಮ ಚಿತ್ರಗಳನ್ನು ಕಾಣಬಹುದು. ಇದೇ ರೀತಿಯಲ್ಲಿ ತಯಾರಾದ  ಮೊಗಲ್ ಗಂಜೀಫಾ ಅಂಕಿ ಪ್ರಧಾನ ಬಿಲ್ಲೆಗಳಲ್ಲಿನ ಚಿತ್ರಗಳಲ್ಲಿ ಅಂಥಾ ವ್ಯತ್ಯಾಸವೇನೂ ಕಾಣುವುದಿಲ್ಲ. ಮೇಲಿನ ಎಲ್ಲ ಬಿಲ್ಲೆಗಳ ಚತ್ರಗಳೂ ಕೂಡ ಆಯಾ ಕಥೆಗಳ ನಿರೂಪಣಾ ಕೌಶಲ್ಯದ ಹಾದಿಯಲ್ಲೇ ಚಿತ್ರಿತವಾಗಿವೆ. ಈ ಗಂಜೀಫಾ ಕಲೆಯನ್ನು ತಮ್ಮ ವೃತ್ತಿಯನ್ನಾಗಿ ತಮ್ಮ ಹಿಂದಿನ ತಲೆಮಾರುಗಳಿಂದ ಕಲಿತು ಈಗಲೂ ಮುಂದುವರೆಸಿಕೊಂಡು ಹೋಗುವ ಕಲಾವಿದರನೇಕರು ಇದ್ದಾರೆ ಅವರಲ್ಲಿ ಪ್ರಮುಖರೆಂದರೆ. “ರಘುಪತಿ ಭಟ್, ಸುಧಾ ವೆಂಕಟೇಶ್, ಚಂದ್ರಿಕಾ ಪ್ರದ್ಮನಾಭ್, ವಿನುತ ಪ್ರಕಾಶ್, ಗಿರಿಜಾ ಕುಮಾರ್, ಆರ್. ಈ. ಸಿಂಗ್, ಜೇ. ಈ ವಿಠ್ಠಲ್ ರಾವ್, ಮಮತ. ವಿ, ಎಸ್. ಪಿ. ವೀಣಾ, ಡಾ. ಪರಿಮಳ ಲೋಚನ್, ಡಾ. ಅರಿಣಿಮಾ ಪಾಟಿ, ಡಾ. ಎಮ್. ಮುಂದಗೊಳ್, ಬನಮಾರಿ ಮಹಾಪಾತ್ರ, ಸುಬಾಸ್. ಬಿ. ಚಿತಾರಿ, ಸಿತಾಲ್ ಫೌಜೀದಾರ್, ಪಾಪನ್ ಪಾಸ್ ದಾಸ್. ಮೊದಲಾದವರು ಈ ಚಿತ್ರಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಗಂಜೀಫಾ ದಂತ ಇನ್ನು ಎಷ್ಟೋ ಸಾಂಪ್ರದಾಯಿಕ ಕಲೆಗಳ ಬಗ್ಗೆ ಇಂದಿನ ಯುವಪೀಳಿಗೆಯು ಹೆಚ್ಚು ತಿಳಿದುಕೊಳ್ಳಬೇಕೆಂಬುದೇ ಈ ಲೇಖನದ ಉದ್ದೇಶ.

ಲಕ್ಷ್ಮೀನಾರಾಯಣ್ .ಟಿ

ಚಿತ್ರಗಳು : ಗೂಗಲ್

Related post

1 Comment

  • ಧನ್ಯವಾದ ಚಂದ್ರು…ಚೆನ್ನಾಗಿದೆ

Leave a Reply

Your email address will not be published. Required fields are marked *