ಗಂಡಿನ ನಕಲಿ ವೇಷಧಾರಿ !! ಕತ್ತೆಕಿರುಬ – Spotted Hyena
ಆಫ್ರಿಕಾದ ವಿಲಕ್ಷಣ ಪ್ರಾಣಿ ಚುಕ್ಕೆ ಕತ್ತೆಕಿರುಬ (Spotted Hyena) ಇದು ಗಂಡಿನ ನಕಲಿ ವೇಷಧಾರಿ !! ಜಗತ್ತಿನಾದ್ಯಂತ ಹಯಿನಾದ ಒಂಬತ್ತು ಜಾತಿ / ಪ್ರಬೇಧಗಳಿದ್ದು ,ನಮ್ಮ ದೇಶದಲ್ಲಿ Striped Hyena ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ Spotted Hyena ಬಗ್ಗೆ.
ನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ, ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ ದೊಡ್ಡ ದೊಡ್ಡ ರಾಷ್ಟ್ರೀಯ ಉದ್ಯಾನವನಗಳು ಅಲ್ಲಿವೆ, ಆಫ್ರಿಕಾ ಆನೆ, ಜೀರಾಫೆ, ಹಿಪ್ಪೊಗಳ ಸಮೂಹವನ್ನೇ ನೋಡಬಹುದು.ನವೆಂಬರ್ ತಿಂಗಳಲ್ಲಿ ಮಳೆಗಾಲ ಶುರುವಾದಂತೆ ವೈಲ್ಡ್ ಬೀಸ್ಟ್ ನಂತಹ ಸಸ್ಯಹಾರಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೊಸದಾಗಿ ಹುಟ್ಟುವ ಹುಲ್ಲನ್ನು ಅರಸುತ್ತಾ ಸಾಗುವ ಮಹಾ ವಲಸೆ (Great Migration) ನೋಡಬಹುದು, ಆಫ್ರಿಕಾ ಎಂದೊಡನೆ ಅದು ಪ್ರಾಣಿಗಳ ಸ್ವರ್ಗ ಎನ್ನುವ ಕಲ್ಪನೆ ಮನಸ್ಸಲ್ಲಿ ಮೂಡುತ್ತದೆ.
ಇಂತಹ ಪ್ರಾಣಿಗಳ ಸ್ವರ್ಗದಲ್ಲಿ ಚುಕ್ಕೆ ಕತ್ತೆ ಕಿರುಬ (Spotted Hyena) ಎಂಬ ವಿಲಕ್ಷಣ ಪ್ರಾಣಿ ಇದೆ, ನೋಡಲು ಅಸಹ್ಯ ಎನಿಸುವ ಮೈಕಟ್ಟು, ಮನುಷ್ಯ ನಕ್ಕಂತೆ ಹೊರಡುವ ಧ್ವನಿ, ಸಿಂಹಗಳನ್ನು ಹೆದರಿಸಿ ಅವುಗಳ ಬೇಟೆ ಕಸಿಯಬಲ್ಲ ಸಾಮರ್ಥ್ಯ ಹೊಂದಿರುವ ಇವು ಜಾಡಮಾಲಿಗಳಂತೆ (scavenger) ಕಂಡರೂ ಸ್ವತಃ ಬೇಟೆಯಾಡಬಲ್ಲವು.
ಈ ಜಾತಿಯಲ್ಲಿ ಹೆಣ್ಣು ಕತ್ತೆ ಕಿರುಬವನ್ನ ಗಂಡುಬೀರಿ ಅಥವಾ ಗಂಡಣ್ಣ ಎನ್ನಬಹುದು!!! ಯಾಕೆಂದರೆ ಗಂಡಸ್ತನ ನಿರ್ಧರಿಸಬಲ್ಲ ಟೆಸ್ಟೋಸ್ಟೆರಾನ್ ಹಾರ್ಮೋನು ಇವಳಲ್ಲಿ ಗುಂಡಿಗಿಂತ 3 ಪಟ್ಟು ಅಧಿಕ, ಹಾಗಾಗಿ ಮಾಂಸಖಂಡಗಳೂ ಬಲಿಷ್ಠ, ಗಂಡಿಗಿಂತಲೂ ಬಲಶಾಲಿ ಹಾಗು ಗಾತ್ರದಲ್ಲಿ ದೊಡ್ಡವಳು, ಇಡೀ ಗುಂಪನ್ನು ಆಳುವುದು ಹೆಣ್ಣು ಇವಳು ಹೆಚ್ಚು ಆಕ್ರಮಣಕಾರಿಯೂ ಹೌದು.
ವಿಚಿತ್ರ ಸಂಗತಿಯೆಂದರೆ ಹೆಣ್ಣು ಹಯಿನಾಗಳಿಗೆ ಸುಮಾರು 15-20 ಸೆಂಮೀ ಉದ್ದವಿರುವ ಹಾಗು ನಿಮಿರುವ ಸಾಮರ್ಥ್ಯ ಇರುವ ಗಂಡಿನ ಜನನಾಂಗವಿದ್ದು ಇದಕ್ಕೆ Pseudopenis or Penile-Clitoris ಎನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಹುಸಿ ಶಿಶ್ನ ಎನ್ನಬಹುದು.ವಾಸ್ತವದಲ್ಲಿ ಇದು ಹೆಣ್ಣಿನ ಚಂದ್ರನಾಡಿ ಅಥವಾ ಭಗಾಂಕುರದ ಮುಂದುವರೆದ ಭಾಗವಾಗಿದ್ದು ಶಿಶ್ನದಂತೆ ಕಾಣುತ್ತದೆ, ಇದು ಹೆಣ್ಣಿನ ಜನನಾಂಗಕ್ಕೆ ಸಂಪರ್ಕ ಹೊಂದಿದ್ದು ಮರಿಗಳನ್ನು ಹಾಕುವಾಗ ಜನನ ಕಾಲುವೆಯಂತೆ ಕೆಲಸ ಮಾಡುತ್ತದೆ.ಹಾಗಾಗಿ ಇದು ನಿಜವಾದ ಶಿಶ್ನವಲ್ಲ.
ಸಾಮಾನ್ಯವಾಗಿ ಸಸ್ತನಿಗಳಲ್ಲಿ ಗಂಡುಗಳು ವೃಷಣಗಳನ್ನು ಹೊಂದಿರುತ್ತವೆ, ಇವು ಸಂತಾನೋತ್ಪತ್ತಿಗೆ ಬಹುಮುಖ್ಯ, ಎರಡು ಬೀಜಗಳು ಚರ್ಮದ ಚೀಲದೊಳಗೆ ಶಿಶ್ನದ ಅಡಿಭಾಗದಲ್ಲಿ ಇರುತ್ತವೆ, ಇದು ಗಂಡಿಗೆ ಸಾಮಾನ್ಯ ಆದರೆ ಹೆಣ್ಣು ಚುಕ್ಕೆ ಕತ್ತೆ ಕಿರುಬಗಳಲ್ಲಿಯೂ ವೃಷಣದ ರಚನೆ ಇದೆ. ಇದು ಕೊಬ್ಬಿನಿಂದ ಕೂಡಿದ ಚೀಲವಾಗಿದ್ದು ಅಸಲಿ ವೃಷಣವಲ್ಲ. ಇಲ್ಲಿ ಬಹಳ ಮುಖ್ಯವಾದ ಸಮಸ್ಯೆ ಎಂದರೆ ಹಯಿನಾಗಳಲ್ಲಿ ಗಂಡು ಹೆಣ್ಣನ್ನು ಗುರುತಿಸುವುದು. ಬಾಹ್ಯ ರಚನೆಯಿಂದ ಗಂಡು ಹೆಣ್ಣನ್ನು ಗುರುತಿಸುವುದು ತುಂಬಾ ಕಷ್ಟ.ಪರಿಣಿತರು ಶಿಶ್ನದ ಮುಂದೊಗಲನ್ನು ಗಮನಿಸಿ ನಿಖರವಾಗಿ ಗಂಡು ಹೆಣ್ಣನ್ನು ಗುರುತಿಸುತ್ತಾರೆ.
ಮಿಲನ ತುಂಬಾ ಕಷ್ಟ: ಈ ಜಾತಿಯ ಹಯಿನಾಗಳಲ್ಲಿ ಮಿಲನ ಕ್ರಿಯೆ ಸುಲಭವಲ್ಲ, ಗಂಡು ಹೆಣ್ಣು ಕೂಡುವಾಗ ಹೆಣ್ಣಿನ ಹುಸಿ ಶಿಶ್ನವು ನಾವು ಕಾಲು ಚೀಲ ಮಡಚಿದಂತೆ ಮಡಚಿ ದೇಹದೊಳಗೆ ಸೇರಬೇಕು, ಆಗ ಮಾತ್ರ ಮಿಲನ ಕ್ರಿಯೆ ನಡೆಸಲು ಸಾಧ್ಯ. ನಿಮಿರುವ ಸಾಮರ್ಥ್ಯ ಇರುವ ಹುಸಿ ಶಿಶ್ನವನ್ನು ಹೊಂದಿದ ಎರಡು ಹೆಣ್ಣುಗಳು ಕೂಡ ಮಿಲನ ಕ್ರಿಯೆ ನಡೆಸುವುದಿಲ್ಲ, ಇವುಗಳಲ್ಲಿ ಸಲಿಂಗಕಾಮ ಇಲ್ಲ, ಮಿಲನಕ್ಕೆ ಹೆಣ್ಣು ಗಂಡಿನ ಅಗತ್ಯವಿದೆ.
ಗಂಡಿನಂತೆ ವೇಷ ಧರಿಸಿದ್ದರೂ ಗರ್ಭಧಾರಣೆ ಹೆಣ್ಣಿಗೆ ಬಲು ಕಷ್ಟ, ಮರಿ ಹಾಕುವಾಗ ಹುಸಿ ಶಿಶ್ನದ ಕಾಲುವೆಯಲ್ಲಿ (Pseudopenis canal) ಮರಿಗಳು ಸಿಲುಕಿ ಉಸಿರು ಕಟ್ಟಿ ಸಾಯುತ್ತವೆ, ಕೆಲವು ಸಲ ತಾಯಿಯೂ ಮೃತವಾಗುತ್ತವೆ. ಸಿಂಹಗಳಿಗೆ ಆಗಾಗ ತೊಂದರೆ ಕೊಡುವ ಇವುಗಳು ಮಾಂಸಹಾರಿಗಳ ಬೇಟೆಯನ್ನು ಕಸಿದು ತಿನ್ನುತ್ತವೆ, ಗಟ್ಟಿ ಎಲುಬನ್ನು ಕಡಿದು ಪುಡಿಮಾಡಬಲ್ಲವು.
ಆವಾಸ ನಾಶ, ಉರುಳುಗಳು, ವಿನೋದದ ಬೇಟೆ, ವಿಷಪ್ರಾಶನ ಇವುಗಳಿಗೆ ಕಂಟಕವಾಗಿದೆ.
ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಷನ್ ಟ್ರಸ್ಟ್