ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ

ಗಗನ್ ರಾಮ್ – ಪ್ರತಿಭಾವಂತ ರಂಗ ವಿದ್ಯಾರ್ಥಿ

ಇತೀಚಿನ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಲನಚಿತ್ರ ಖ್ಯಾತಿಯ ಗಗನ್ ರಾಮ್ ಪ್ರಸಕ್ತ ಸಾಲಿನ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ರಂಗ ವಿದ್ಯಾರ್ಥಿ.

ಗಗನ್ ರಾಮ್ ಕುರಿತು

ಶಾಲಾ ದಿನಗಳಿಂದ, ಅಂದರೆ 2005 ರಿಂದ ಇಲ್ಲಿಯವರೆಗೂ ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಗಗನ್ ರಾಮ್ ರವರು ತೊಡಗಿಸಿಕೊಂಡಿರುತ್ತಾರೆ. ಖ್ಯಾತ ಸಾಹಿತಿಗಳಾದ ಡಿ.ಆರ್.ನಾಗರಾಜ್ ಅವರ ಶ್ರೀಮತಿ ಯವರಾದ ಸಿ.ಎನ್.ಗಿರಿಜಮ್ಮ ರವರಿಂದ ರಂಗಭೂಮಿಗೆ ಪರಿಚಯವಾಯಿತು. ಶಾಲಾ ದಿನಗಳಲ್ಲಿ ಗಗನ್ ರಾಮ್ ಮಾಡಿದ ಪ್ರಮುಖ ನಾಟಕಗಳೆಂದರೆ ‘ಮಾಮಾ ಮೋಶಿ’, ‘ಗಾಂಪರ ಗುಂಪು’, ‘ಕಣ್ಣಿಗೆ ಮಣ್ಣು’. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಶುರುವಾದ ರಂಗಭೂಮಿಯ ನಂಟನ್ನು ಮುಂದುವರಿಸುತ್ತ, ಮುಂದೆ 2010 ರಿಂದ ಬೆಂಗಳೂರಿನ ಸುಮಾರು 26ಕ್ಕೂ ಹೆಚ್ಚು ಹವ್ಯಾಸಿ ಮತ್ತು ವೃತ್ತಿಪರ ತಂಡಗಳಲ್ಲಿ ಇದುವರೆಗೂ 80ಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ, ಅವುಗಳ ಒಟ್ಟು 550 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟನಾಗಿ ರಂಗದ ಮೇಲೆ ಕಾಣಿಸಿಕೊಂಡಿರುತ್ತಾರೆ. ಎಂ.ಬಿ.ಎ ಸ್ನಾತಕೋತ್ತರ ಪದವೀಧರನಾಗಿರುವ ಗಗನ್ ರಾಮ್, ಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂದು ನಿರ್ಧರಿಸಿದ ನಂತರ 2018ರಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪದವಿ ಪಡೆದು, ತದ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್- ಥಿಯೇಟರ್ ಪೂರ್ಣಗೊಳಿಸಿದ್ದಲ್ಲದೆ, ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಾದ ಯುಜಿಸಿ ನೆಟ್ ಅಲ್ಲಿ ಉತ್ತೀರ್ಣನಾಗಿರುತ್ತಾರೆ. ಇದೀಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮೂರು ವರ್ಷದ ಡಿಪ್ಲೊಮಾ ಇನ್ ಡ್ರ್ಯಾಮಾಟಿಕ್ ಆರ್ಟ್ಸ್ ಕೋರ್ಸ್ಗೆ ಆಯ್ಕೆಯಾಗಿದ್ದಾರೆ. ಈ ಮೂರು ವರ್ಷದಲ್ಲಿ ವಿನ್ಯಾಸ ಮತ್ತು ನಿರ್ದೇಶನದ ಐಚ್ಛಿಕ ವಿಷಯದಲ್ಲಿ ಸುದೀರ್ಘ ಅಧ್ಯಯನ ಮುಗಿಸಿಕೊಂಡು ಕನ್ನಡ ಮತ್ತು ರಾಷ್ಟ್ರೀಯ ರಂಗಭೂಮಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಬೇಕು ಹಾಗು ರಂಗಭೂಮಿಗೆ ಸಂಬಂಧಿಸಿದ ಹಾಗೆ ಸಂಶೋಧನೆ (ಪಿ.ಹೆಚ್ ಡಿ) ಮಾಡಬೇಕೆಂಬ ಮಹದಾಸೆಯೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ನಟನೆಯ ಜೊತೆ ರಂಗದ ಹಿಂದಿನ ಕೆಲಸಗಳಲ್ಲಿಯೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಲಿರುವ ಗಗನ್ ರಾಮ್ 2011 ರಲ್ಲಿ ಒಂದು ಕಿರುಚಿತ್ರವನ್ನ ಹಾಗು 2015 ರಲ್ಲಿ ವಿಜಯ ಕರ್ನಾಟಕ ನಾಟಕೋತ್ಸವದಲ್ಲಿ ಒಂದು ಕಿರು ನಾಟಕವನ್ನೂ ಸಹ ನಿರ್ದೇಶಿಸಿರುತ್ತಾರೆ. 2018 – 19 ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಸ್ತುತ ಪಡಿಸಿದ ‘ಗಾಂಧೀ – 150 : ಒಂದು ರಂಗಪಯಣ’ ಎಂಬ ಅಭಿಯಾನದ ಪ್ರಮುಖ ಭಾಗವಾದ ‘ಪಾಪು ಬಾಪು’ ನಾಟಕದಲ್ಲಿ ನಟ ಹಾಗು ತಂತ್ರಜ್ಞನಾಗಿ ಕೆಲಸ ಮಾಡಿದ್ದಾರೆ. ಈ ನಾಟಕವು ರಾಜ್ಯಾದ್ಯಂತ ತಿರುಗಾಟ ಮಾಡಿ 1000 ಕ್ಕೂ ಹೆಚ್ಚು ಪ್ರದರ್ಶಗಳನ್ನು ಕಂಡಿತ್ತು.

ಪ್ರಸ್ತುತ ದಾಕ್ಷಾಯಣಿ ಭಟ್ ಅವರ ದೃಶ್ಯ ರಂಗ ತಂಡದಲ್ಲಿ ಅತಿಥಿ ಕಲಾವಿದನಾಗಿ ಕೆಲಸ ಮಾಡುತ್ತಿರುವ ಗಗನ್ ರಾಮ್. ಇದುವರೆಗೂ ಅಭಿನಯಿಸಿರುವ ಪ್ರಮುಖ ನಾಟಕಗಳೆಂದರೆ ಮಾಮಾ ಮೋಶಿ, ಬೋಗಿ, ಉಂಡಾಡಿ ಗುಂಡ, ಚಮ್ಮಾರನ ಚಾಲೂಕಿ ಹೆಂಡತಿ, ಶ್ರದ್ಧಾ, ಗುಮ್ಮ ಬಂದ ಗುಮ್ಮ, ಕಾಡ್ಮನ್ಸ, ನೂರ್ ಜಹಾನ್, ಚಿರೆಬಂದೀ ವಾಡೆ, ಅಂದಿನ ರಾಮನ ಮುಂದಿನ ಕಥೆ, ಹಾನುಷ್ ಮತ್ತು ವಿದಿಶೆಯ ವಿದೂಷಕ, ಇಲ್ಲಿರುವುದು ಸುಮ್ಮನೆ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್. ಪ್ರಮುಖ ರಂಗ ನಿರ್ದೇಶಕರಾದ ಸಿ.ಎನ್.ಗಿರಿಜಮ್ಮ, ಪಿ.ಡಿ.ಸತೀಶ್ ಚಂದ್ರ, ಭಾರ್ಗವಿ ನಾರಾಯಣ್, ಉದಯ್ ಸೋಸಲೆ, ನಾಗೇಂದ್ರ ಶಾ, ರಾಜಗುರು ಹೊಸಕೋಟಿ, ಎಸ್. ಸುರೇಂದ್ರನಾಥ್, ಬಿ.ಎಂ.ಗಿರಿರಾಜ್, ಚಿದಂಬರ ರಾವ್ ಜಂಬೆ, ಮಂಜು ಕೊಡಗು, ಅನಿರುದ್ಧ ಖುತ್ವಾಡ್, ವೆಂಕಟರಮಣ ಐತಾಳ್, ವಿದ್ಯಾನಿಧಿ ವನಾರಾಸೆ, ಎಸ್.ರಘುನಂದನ್, ಅಕ್ಷರ ಕೆ.ವಿ., ಡಾ||ಶ್ರೀಪಾದ್ ಭಟ್ ಮತ್ತು ದಾಕ್ಷಾಯಿಣಿ ಭಟ್ ರಂತಹ ರಂಗ ದಿಗ್ಗಜರೊಂದಿಗೆ ಕೆಲಸ ಮಾಡಿದ್ದಾರೆ. ಪ್ರಮುಖ ರಂಗ ತಂಡಗಳಾದ ಪ್ರ.ಕ.ಸಂ, ಗ್ರೀನ್ ರೂಮ್ ಕ್ಲಬ್, ಸಾತ್ವಿಕ, ರಂಗಪಯಣ, ರಂಗವರ್ತುಲ, ರಂಗಶಂಕರ (ರೆಪೆರ್ಟ್ರಿ), ಮನೋರಂಗ ಮತ್ತು ದೃಶ್ಯ ರಂಗ ತಂಡ ಗಳೊಂದಿಗೆ ಸಹ ಕೆಲಸ ಮಾಡಿದ ಅನುಭವ ಗಗನ್ ರಾಮ್ ರವರಿಗಿದೆ.

ಕಳೆದ ವರ್ಷ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ್ದ ಥಿಯೇಟರ್ ಅಪ್ರಿಸಿಯೇಷನ್ ಕೋರ್ಸ್ ಸೇರಿದಂತೆ ಇದುವರೆಗೆ ಸಾಕಷ್ಟು ರಂಗ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ರಂಗ ದಿಗ್ಗಜರಡಿಯಲ್ಲಿ, ಯಕ್ಷಗಾನ, ಕುಡಿಯಾಟಂ ಸೇರಿದಂತೆ ವಿವಿಧ ಪ್ರಾಕಾರಗಳಲ್ಲಿ ತರಬೇತಿಯನ್ನು ಪಡೆದಿದ್ದಾರೆ. ಚಿಂಟು ಟಿ.ವಿಯ ಸ್ಪೈಡರ್ ಮ್ಯಾನ್ ಕಾರ್ಟೂನ್ ನಲ್ಲಿ ಸ್ಪೈಡರ್ ಮ್ಯಾನ್ ಪಾತ್ರಕ್ಕೆ ಕಂಠದಾನ ಕಲಾವಿದನಾಗಿ ಕೆಲಸ ಮಾಡಲು ಶುರು ಮಾಡಿದ ಗಗನ್ ರಾಮ್ ಮುಂದೆ ಕನ್ನಡ ಚಿತ್ರಗಳಾದ ಜಾಲಿಬಾಯ್ (2011), ಜಟ್ಟಾ (2013), ವಿಶಲ್ (2013), ರಾಜಹುಲಿ (2017), ಅಮರಾವತಿ (2017), ಮೊಜೊ (2017) ಮತ್ತು 2020ರಿಂದ ‘ಬಾಹುಬಲಿ’ (ದಿ ಬಿಗಿನಿಂಗ್), ‘ಪದ್ಮಾವತ್’, ‘ವಡಾ ಚೆನ್ನೈ’ ಮತ್ತು ‘ಆಕ್ಷನ್’ ಚಲನಚಿತ್ರಗಳಿಗೆ ಕಂಠದಾನ ಕಲಾವಿದನಾಗಿ ಸಹ ಕೆಲಸವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಹಿಂದಿ ಧಾರಾವಾಹಿ ‘ಉತ್ತರನ್’ ನ ಕನ್ನಡ ಅವತರ್ಣಿಕೆಯಾದ ‘ಮುದ್ದು ಬಂಗಾರ’ ಧಾರಾವಾಹಿಗೆ ಕಂಠದಾನ ಮಾಡುತಿದ್ದಾರೆ. ಇದನ್ನು ಕಲರ್ಸ್ ಸೂಪರ್ ನಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಘಂಟೆಗೆಗೆ ಪ್ರಸಾರ ಮಾಡಲಾಗುತ್ತಿದೆ. ಈ ಧಾರಾವಾಹಿಯ ಮುಖ್ಯಪಾತ್ರವಾದ ‘ವೀರ್’ ಪಾತ್ರಕ್ಕೆ ಗಗನ್ ರಾಮ್ ರವರದೇ ಧ್ವನಿ. ಹಿಂದೆ ಗಿರೀಶ್ ಕಾರ್ನಾಡ್ ಅವರ ‘ಅಂಜು ಮಲ್ಲಿಗೆ’ ನಾಟಕದ ಆಡಿಯೋ ಬುಕ್ ನಲ್ಲಿ ಡೇವಿಡ್ ಎಂಬ ಪಾತ್ರಕ್ಕೆ ಕಂಠದಾನ ಮಾಡಿದ್ದು ಚಿತ್ರರಂಗದ ಗಂಧ ಗಾಳಿ ಗೊತ್ತಿಲ್ಲದೇ 2010 ರಲ್ಲಿ ಪ್ರವೇಶಿಸಿದ ಗಗನ್ ರಾಮ್ ಮೊದಮೊದಲು ಸಾಕಷ್ಟು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಸಹ ಕೆಲಸ ಮಾಡಿದ್ದಾರೆ. ನಂತರ ಪಾತ್ರಗಳನ್ನು ಹುಡುಕುತ್ತ ಇಲ್ಲಿಯವರೆಗೂ ಸುಮಾರು 7 ಕಿರುಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 12 ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ ‘ಮಿ. ಜೋ ಬಿ. ಕಾರ್ವಾಲ್ಹೋ’ ಎಂಬ ಬಾಲಿವುಡ್ ಚಿತ್ರದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಗಗನ್ ರಾಮ್, ಅದೇ ವರ್ಷ ‘ಹುಚ್ಚುಡುಗ್ರು’ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2017ರಲ್ಲಿ ನಿರ್ದೇಶಕ ಹರ್ಷ್ ಗೌಡ ಅವರ ಸೈ-ಫೈ ಚಲನಚಿತ್ರವಾದ ‘ಟೋರಾ ಟೋರಾ’ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ನಂತರ 2020 ರ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡಿದ್ದ ‘ಬ್ರಾಹ್ಮಿ’ ಸಿನೆಮಾದಲ್ಲಿ ಒಂದು ಕ್ಯಾಮಿಯೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಜುಲೈ 21 ರಂದು ಬಿಡುಗಡೆಯಾದ ಯಶಸ್ವಿ ಕನ್ನಡ ಚಲನಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ದ ಕ್ಜೇ಼ವಿಯರ್ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಗನ್ ರಾಮ್ ವೀರನಾರಾಯಣ ಅವರ ನಿರ್ದೇಶನದ ಐವಾರಾ ಕಂಬೈನ್ಸ್ ನಿರ್ಮಿಸುತ್ತಿರುವ ‘ಟಾರ್ಚು’ ಎಂಬ ಕಲಾತ್ಮಕ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ‘ವಿಶ್ವ ಸಿನೆಮಾ’ ವಿಭಾಗದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಮಹತ್ವಾಕಾಂಕ್ಷೆ ಚಿತ್ರ ತಂಡಕ್ಕಿದೆ.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಕರ್ನಾಟಕದಿಂದ ಏಕೈಕ ವಿದ್ಯಾರ್ಥಿಯಾಗಿ ಆಯ್ಕೆಯಾಗಿರುವ ಗಗನ್ ರಾಮ್ ರವರಿಗೆ ಸಾಹಿತ್ಯಮೈತ್ರಿ ತಂಡದಿಂದ ಅಭಿನಂದನೆಗಳು.

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *