ಗತ – ಪುನರ್ಜನ್ಮದ ರೋಚಕ ಕಾದಂಬರಿ

ಗತ – ಪುನರ್ಜನ್ಮದ ರೋಚಕ ಕಾದಂಬರಿ

ಪುಸ್ತಕದ ಹೆಸರು: ಗತ
ಲೇಖಕರ ಹೆಸರು: ಆಶಾ ರಘು
ಪ್ರಥಮ ಮುದ್ರಣ: 2021
ಪ್ರಕಾಶಕರು : ಸಾಹಿತ್ಯ ಲೋಕಪಬ್ಲಿಕೇಷನ್ಸ್
ಪುಟಗಳು: 232
ಬೆಲೆ: 250 ರೂ/-

ಲೇಖಕರ ಪರಿಚಯ:ಕಾದಂಬರಿಗಾರ್ತಿಯಾದ ಆಶಾ ರಘು ಬೆಂಗಳೂರಿನವರು.


ಬೆಂಗಳೂರು ವಿ.ವಿಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಕನ್ನಡ ಉಪನ್ಯಾಸಕರಾಗಿ ಕೆಲಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಪೂರ್ಣಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿ ತನ್ನನ್ನು
ತೊಡಗಿಸಿಕೊಂಡಿದ್ದಾರೆ. ‘ ಆವರ್ತ’ ‘ಗತ’ ‘ ಮಾಯೆ’ ‘ಆರನೇ ಬೆರಳು’ ‘ಬೊಗಸೆಯಲ್ಲಿ ಕಥೆಗಳು’
”ಅಪರೂಪದ ಪುರಾಣ ಕಥೆಗಳು ‘ಚೂಡಾಮಣಿ’ ‘ಬಂಗಾರದ ಪಂಜರ ಮತ್ತು ಇತರ ನಾಟಕಗಳು’ ಮೊದಲಾದ ಕೃತಿಗಳನ್ನು ರಚಿಸಿದ್ದು,ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.ಇವರ ‘ಆವರ್ತ’ ಮೂರನೆಯ ಆವೃತ್ತಿಯನ್ನು ಕಂಡಿದೆ.

ಕೃತಿಯ ಬಗ್ಗೆ: ಲೇಖಕಿ ಆಶಾ ರಘು ಅವರ ಅಪರೂಪದ ಪುರಾಣ ಕಥೆಗಳು ಓದಿದ ನನಗೆ ಅವರ ಇನ್ನಷ್ಟು ಕೃತಿಗಳನ್ನು ಓದುವ ಬಯಕೆಯಾಯಿತು. ಅದಾಗಲೇ ಅವರು ‘ಆವರ್ತ’ ಕಾದಂಬರಿಯ ಬಗ್ಗೆ ಹಲವಾರು ಲೇಖಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದಾಗ ಓದುವ ಹಂಬಲ ತೀವ್ರವಾಗಿ ಆಶಾ ರಘು ಅವರನ್ನು ಪುಸ್ತಕಕ್ಕಾಗಿ ಸಂಪರ್ಕಿಸಿದೆ. ಇದೇ ಬಳಗದಲ್ಲಿ ಅವರ ‘ಗತ ‘ಕಾದಂಬರಿಯ ಬಗ್ಗೆ ಯಾರೋ ಅನಿಸಿಕೆ ಬರೆದಿದ್ದರು. ಹಾಗಾಗಿ ಆವರ್ತ ದ ಜೊತೆಗೆ ಇದನ್ನೂ ತರಿಸಿದೆ. ಆದರೆ ಆರಾಮವಾಗಿ ಓದಲು ಹಲವಾರು ಅಡೆತಡೆ.ಇದೀಗ ದಸರಾ ರಜೆಯಲ್ಲಿ ಸಿಕ್ಕಿದ ಬಿಡುವಿನ ವೇಳೆಯಲ್ಲಿ ‘ಆವರ್ತ’ವನ್ನು ಕೈಗೆತ್ತಿಕೊಳ್ಳಲಾಗಲಿಲ್ಲ. ಅಷ್ಟು ದಪ್ಪವಿದೆ. ‘ಗತ’ವನ್ನು ಓದಿ ಮುಗಿಸಿದೆ. ಇನ್ನೂ ಅದೇ ಗುಂಗಿನಲ್ಲಿದ್ದೇನೆ.

‘ಗತ’ ಪುಸ್ತಕದಲ್ಲಿ ತಿಳಿಸಿರುವಂತೆ ಪುನರ್ಜನ್ಮದ ಕಥೆಯುಳ್ಳ ಒಂದು ರೋಚಕ ಕಾದಂಬರಿ.ವಿಭಿನ್ನ ಕಥೆಯುಳ್ಳ ಇದರಲ್ಲಿ ಬರುವ ಪಾತ್ರಗಳು ಹಲವಾರು. ಇದರ ಕಥಾ ನಾಯಕಿ ‘ಅನುರಾಧ’ ಬಾಲ್ಯದಿಂದಲೂ ಭಿನ್ನವಾದ ಮನಸ್ಸಿನ ಹುಡುಗಿ. ಆಕೆಗೆ ನಿದ್ದೆಯಲ್ಲಿ ಬೀಳುತ್ತಿದ್ದ ಕನಸುಗಳಲ್ಲಿ ಆಕೆಯ ಹಿಂದಿನ ಜನ್ಮದ ಘಟನೆಗಳಿಗೆ ಸಂಬಂಧಿಸಿರುತ್ತದೆ. ಈ ಜನ್ಮದಲ್ಲಿ ತಾನು ನೋಡಿರದ ಊರು, ದೇವಸ್ಥಾನ,ಅದೇ ಕೋಟೆ,ಗುಹೆ..
ಯಾಕೋ ಪದೇ ಪದೇ ನೆನಪಿಗೆ ಬರುತ್ತಿರುತ್ತದೆ. ಒಂಬತ್ತು ವರ್ಷವಿರುವಾಗಲೇ ಪ್ರೌಢ ವಯಸ್ಸಿನ ಹೆಣ್ಣು ಮಗಳಂತೆ ಮಾತನಾಡುವ ಇವಳನ್ನು ಕಂಡರೆ ಹೆತ್ತವರಿಗೆ ಜೊತೆಗಿರುವ ಸೋದರತ್ತೆ, ಮಾವನಿಗೆ ಇರಿಸು ಮುರಿಸು.

ಅನುರಾಧಳ ತಂದೆ ರಂಗನಾಥರು ಹಾಗೂ ಹೇಮಾವತಿ ಅಣ್ಣ ತಂಗಿಯರು ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಮೇಲೆ ರಂಗನಾಥರು ತಮ್ಮ ಎಳೆಯ ವಯಸ್ಸಿಗೇ ಸಂಸಾರದ ಭಾರವನ್ನು ಹೊತ್ತವರು .ಹುಟ್ಟೂರು ತುಮಕೂರಿನಿಂದ ಬೆಂಗಳೂರಿಗೆ ಬಂದು ಖಾಸಗಿ ಕಂಪನಿ ಸಂಜೀವಿನಿ ಕಾಫಿ ವರ್ಕ್ಸ್ ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿ ಅದರಲ್ಲಿ ಮುಂದುವರಿದು ಭವಿಷ್ಯ ಕಂಡವರು .ಅದೇ ಕಾಫಿ ವರ್ಕ್ಸ್ ನಲ್ಲಿ ಪರಿಚಯವಾದ ಪುರುಷೋತ್ತಮ್ ಅನಾಥಾಲಯದಲ್ಲಿ ಓದಿ ಬೆಳೆದವರು. ಪರಿಚಯ ಸ್ನೇಹವಾದಾಗ ತಂಗಿ ಹೇಮಾವತಿಯನ್ನು ಮದುವೆ ಮಾಡಿ ಕೊಟ್ಟು ಮನೆ ಅಳಿಯನನ್ನಾಗಿ ಮಾಡಿಕೊಂಡರು. ಈಗ ಅವರ ಮಗ ರಾಜೇಶನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವ ಬಯಕೆ ಎಲ್ಲರದು. ಆದರೆ ಅನುರಾಧ ತಾಯಿಯ ಬಳಿ ತಾನು ಅನುರಾಧ ಅಲ್ಲ, ನೀನು ನನ್ನ ಅಮ್ಮನಲ್ಲ ,ನನ್ನ ಅಮ್ಮ ಅಂಬುಜಮ್ಮ ನಾನು ಚಿಕ್ಕವಳಿರುವಾಗಲೇ ನಮ್ಮೂರಿನ ಕೆರೆಯಲಿ ಬಟ್ಟೆ ಒಗೀತಾ ಇದ್ದಾಗ ಕಾಲು ಜಾರಿ ನೀರಿಗೆ ಬಿದ್ದು ತೀರಿಕೊಂಡಳು, ಎಂದೇ ಹೇಳುತ್ತಿದ್ದಳು ಅಷ್ಟೇ ಅಲ್ಲದೆ ಮನೆಯವರೆಲ್ಲರಲ್ಲಿ, ತನಗೆ ಮದುವೆಯಾಗಿದೆ, ಗಂಡ ನರೇಂದ್ರನಾಥ ತನುಜಾ ,ತಾರಿಣಿ ಎಂಬ ಇಬ್ಬರು ಹೆಣ್ಣು ಮಕ್ಕಳು ಬೇರೆ ಇದ್ದಾರೆ, ಎಂದೇ ಹೇಳುತ್ತಿದ್ದಳು. ಯಾವ ಊರು ಕೇಳಿದರೆ ತುಂಬಾ ದೂರ ‘ಕಮಲನಾಥಪುರ’ ಅನ್ನುತ್ತಿದ್ದಳು. ಮನೆಯವರೆಲ್ಲ ಅವಳು ಟಿವಿಯಲ್ಲಿ ಬರುವ ಧಾರವಾಹಿ ನೋಡಿ, ದೊಡ್ಡವರ ಮಾತುಗಳನ್ನು ಕೇಳಿ ಕೇಳಿ ಬಾಲಿಶವಾಗಿ ಮಾತನಾಡುತ್ತಾಳೆ, ದೊಡ್ಡವಳಾದ ಮೇಲೆ ಸರಿ ಹೋಗುತ್ತಾಳೆ ಎಂದೇ ಅಂದುಕೊಂಡರು. ಆದರೆ ಹೀಗೆ ತುಂಬಾ ಸಲ ಆದಾಗ ಹೇಮಾವತಿಯ ಸಲಹೆ ಮೇರೆಗೆ ತಾಯಿ ಸುಗುಣಾಂಬ ಗಂಡಸರು ಇಲ್ಲದೆ ವೇಳೆಯಲ್ಲಿ, ಹೇಮಾ ಮತ್ತು ಮಕ್ಕಳನ್ನು ಕರೆದುಕೊಂಡು ಮಂತ್ರ ವಾದಿಯ ಬಳಿ ಆಕೆಯನ್ನು ಕರೆದುಕೊಂಡು ಹೋದರು .ಅವರು ದೆವ್ವ ಬಿಡಿಸುವ ನೆಪದಲ್ಲಿ ಸೊಪ್ಪಿನಿಂದ ಥಳಿಸಿ ಆಕೆಯನ್ನು ಹಿಂಸಿಸಿದರು. ಮನೆಯ ಗಂಡಸರಿಗೆ ವಿಚಾರ ತಿಳಿದಾಗ ಇಬ್ಬರು ಹೆಂಗಸರ ಮೇಲೂ ರೇಗಿದರು .

ಬೇವಿನ ಸೊಪ್ಪಿನ ಹೊಡೆತದಿಂದ ಕೆಂಪು ಕೆಂಪಾದ ಶರೀರದಿಂದ ಬಸವಳಿದ ಅನುವನ್ನು ಕಂಡ ತಾಯಿಯ ಹೃದಯ ಮರುಗಿತು. ಪಶ್ಚಾತ್ತಾಪವಾಯಿತು.ಆದರೆ ಏನು ಮಾಡುವುದು? ಮರುದಿನ ಎಲ್ಲರೂ ಎದ್ದಾಗ ಅನು
ಕಾಣೆಯಾಗಿದ್ದಳು. ಹುಡುಕಿದಾಗ ಯಾವುದೋ ಬಸ್ಸು ಹತ್ತಿ ತನ್ನೂರು ತನ್ನೂರು ಆದ ಕಮಲಾನಾಥಪುರಕ್ಕೆ ಹೋಗುತ್ತೇನೆಂದು ಹೊರಟಿದ್ದಳು. ಮತ್ತೆ ಅವಳನ್ನು ಕರೆದುಕೊಂಡು ಹೋಗುವುದಾಗಿ ಹೇಳಿ ,ಒಪ್ಪಿಸಿ ಮನೆಗೆ ಕರೆತಂದರು.ಮರಳಿದ ನಂತರ ಯಾರೆಷ್ಟೇ ಪ್ರಯತ್ನಿಸಿದರೂ ಕಮಲನಾಥಪುರವೆಂಬ ಊರಿನ ಬಗ್ಗೆ ಏನೂ ಮಾಹಿತಿ ತಿಳಿಯದೆ ಹೋಯಿತು. ಗೂಗಲ್ ನಲ್ಲಿ ಹುಡುಕಿದರೂ, ಪರಿಚಯದವರನ್ನು, ಬಸ್ಸಿನವರನ್ನು ಕೇಳಿದರು ಅಷ್ಟೇ ಫಲಿತಾಂಶ ಮಾತ್ರ ಸೊನ್ನೆ, ಹೀಗೆ ದಿನಗಳು ಉರುಳಿತು. ಇದರ ನಡುವೆ ಮನೋವೈದ್ಯರನ್ನು ಕಂಡಾಗ ಅವರು ‘ತನ್ನ ಅನುಭವ ಅಂತ ಹೇಳೋ ಎಷ್ಟೋ ತುಣುಕುಗಳು, ಪುಸ್ತಕಗಳಿಂದ ಸ್ಫೂರ್ತಿ ಪಡೆದ ಕಲ್ಪನೆಗಳಾಗಿರಬಹುದು, ಹಾಗೆಯೇ ಕನಸಿನಲ್ಲೂ ಕೂಡ ಪ್ರಕಟವಾಗಬಹುದು’ ಎಂದು ಹೇಳಿ ಮನಸ್ಸಿನ ಬಗ್ಗೆ ಬೋಧನೆಯನ್ನ ಕೊಟ್ಟರು.

ಮನೋವೈದ್ಯರನ್ನು ಸಂದರ್ಶಿಸಿ ಬಂದ ಮೇಲೆ ಅನುವಿನ ಮಾತಿಗೆ ಯಾರು ಮಹತ್ತ್ವನ್ನೇ ಕೊಡಲಿಲ್ಲ. ನಂತರ ಅವಳಿಗೆ ಹನ್ನೊಂದು ,ಹನ್ನೆರಡು ವಯಸ್ಸಾಗುವವರೆಗೆ, ಹೀಗೆ ಸ್ವಲ್ಪ ಹಠ ಮಾಡಿದರೂ ಹದಿಮೂರನೆಯ ವಯಸ್ಸಿಗೆ ಮೈ ನೆರೆದ ಮೇಲೆ ಸಂಪೂರ್ಣವಾಗಿ ಆಕೆ ತನ್ನ ಹಠವನ್ನು ನಿಲ್ಲಿಸಿದಳು. ಆದರೆ ದೇವರ ಎದುರು ಕೂತು ಮಾತ್ರ ತನ್ನ ಗತ ಜನ್ಮದ ನೆನಪು ಮಾಡಿಕೊಂಡು ಕಣ್ಣೀರು ಹಾಕುವುದನ್ನು ನಿಲ್ಲಿಸಲಿಲ್ಲ. ಒಟ್ಟಾರೆ ಮನೆಯ ಸದಸ್ಯರೊಡನೆ ಆಂಟಿಯೂ ಅಂಟದ ಒಂದು ರೀತಿಯ ಸಂಬಂಧವನ್ನು ಕಾಯ್ದುಕೊಂಡಿದ್ದಳು ಆಕೆ.

ಹೀಗೆ ದಿನಗಳು ಕಳೆಯುತ್ತಿದ್ದವು. ಮನೆಯವರೆಲ್ಲ ಮಂಗಳೂರಿಗೆ ಒಂದು ದಿನ ವಿಹಾರಕ್ಕಾಗಿ ಹೋದ ಸಂದರ್ಭದಲ್ಲಿ ರಾಜೇಶ ಅನುವಿನಲ್ಲಿ ಮಾತನಾಡುತ್ತಿದ್ದಾಗ ಇನ್ನೂ ಆಕೆ ಅದೇ ಹಳೆ ಕಥೆಯನ್ನು ಮರೆಯಲಿಲ್ಲವೆಂದು ತಿಳಿಯಿತು. ರಾಜೇಶ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ.ಹಾಗಾಗಿ ಅವಳ ಮಾತನ್ನು ಕೇಳಿದ ಮೇಲೆ ತಾನು ಆಕೆಯ ಪರವಾಗಿ ನಿಂತು ಆ ಊರನ್ನು ಪತ್ತೆ ಹಚ್ಚುವಲ್ಲಿ ಅವಳಿಗೆ ನೆರವಾಗುವುದಾಗಿ ಆಕೆಯಲ್ಲಿ ಹೇಳಿದ ರಾಜೇಶ.

ಅಲ್ಲಿಂದ ಮರಳಿ ಬೆಂಗಳೂರಿಗೆ ಹಿಂದಿರುಗಿದ ಮೇಲೆ ದೇವಸ್ಥಾನಗಳ ಬಗೆಗಿನ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಚಾನೆಲ್ ಒಂದಕ್ಕೆ ಕರೆ ಮಾಡಿದಾಗ ಅಲ್ಲಿಂದ ಬಂದ ನಕಾರಾತ್ಮಕ ಉತ್ತರ ಕೇಳಿದಾಗ ಮತ್ತೆ ಇಬ್ಬರೂ ಸುಸ್ತಾದರು.ಆದರೆ ಪ್ರಯತ್ನವನ್ನು ಕೈಬಿಡಲಿಲ್ಲ. ಆ ಚಾನಲ್ ನಲ್ಲಿ ಪ್ರಸಾರವಾದ ಹಲವು ಕಂತುಗಳನ್ನು ನೋಡಿದರೂ ಅನುರಾಧ ಹೇಳುವ ದೇವಸ್ಥಾನದ ಯಾವುದೇ ಕುರುಹು ಅಲ್ಲಿ ಕಾಣುವುದಿಲ್ಲ. ಹೀಗೆ ಅನುವಿನ ಜೊತೆ ಹುಡುಕಾಟದ ಬೆನ್ನು ಹತ್ತಿ ನೆರವಾಗುವುದಲ್ಲದೆ ಜೊತೆಗೆ ಆಕೆಯ ಮನಸ್ಸಿನ ಆರೋಗ್ಯವೂ ಕೆಡದಂತೆ ಜೊತೆಗಿದ್ದು ನೋಡಿಕೊಳ್ಳುತ್ತಾನೆ ರಾಜೇಶ. ಈ ಎಲ್ಲಾ ಬೆಳವಣಿಗೆಗಳು ಮನೆಯವರ ಗಮನಕ್ಕೆ ಬಂದು ಇನ್ನು ತಡ ಮಾಡದೆ ರಾಜೇಶ ಹಾಗೂ ಅನುರಾಧಳ ಮದುವೆಯನ್ನು ಮಾಡಿ ಮುಗಿಸುವ ಯೋಚನೆಯನ್ನು ಮಾಡುತ್ತಾರೆ. ಅನುರಾಧಾಳ ಅಪ್ಪ ಅನುವನ್ನು ಮದುವೆಗೆ ಒಪ್ಪಿಸುವಲ್ಲಿಯೂ ಯಶಸ್ವಿಯಾಗುತ್ತಾರೆ. ಈ ಸಂದರ್ಭದಲ್ಲಿ ಹಿರಿಯ ಜೀವ ಮನೆಯಲ್ಲಿದ್ದರೆ ಉತ್ತಮ ಎಂದು ಮನಗಂಡು ಮದುವೆಯ ಸಿದ್ಧತೆಗೆ ಎಂದು ದೂರದ ಊರಿನಿಂದ ಹಿರಿಯರಾದ , ಸಂಬಂಧದಲ್ಲಿ ರಂಗನಾಥನರಿಗೆ ಸೋದರ ಮಾವನಾಗ ಬೇಕಾದ ಕಂಠೀನರಸಿಂಹರನ್ನು ಬರ ಹೇಳುತ್ತಾರೆ.

ಅದರಂತೆ ಅವರ ಆಗಮನ ಮನೆಯವರಿಗೆಲ್ಲಾ ಖುಷಿ ಕೊಡುತ್ತದೆ. ಬಂದೊಡನೆ ಪೊಟ್ಟಣದಿಂದ ಲಾಡು ಮುರಿದು ಹಂಚಿದ ಮಾವ ಕಮಲನಾಥ ಸ್ವಾಮಿಯ ಪ್ರಸಾದವೆನ್ನುತ್ತಾರೆ. ಆ ಹೆಸರನ್ನು ಕೇಳಿದಾಗ ಉದ್ವೇಗಗಂಡ ಅನು ಯಾವ ಊರದು ಮಾವ? ಎಂದು ಪ್ರಶ್ನಿಸುತ್ತಾಳೆ. ಸೀತಮ್ಮನಪುರ ಅಂತ, ಚೆನ್ನಾಗಿದೆ ದೇವಸ್ಥಾನ ನೀವೂ ಹೋಗಿ ಬನ್ನಿ ಅನ್ನುತ್ತಾರೆ . ಆಗ ರಂಗನಾಥರು ಊರ ಹೆಸರು ಕಮಲನಾಥಪುರ ಅಂತ ಯಾರು ಹೇಳಿದ ಹಾಗಿತ್ತು ಅಂದಾಗ ಅವರು, ಹೌದು ಅದೇ ಆ ಊರಿನ ಹಳೆ ಹೆಸರು ಎಂದು ಹೇಳಿ ಅದರ ಕಥೆಯನ್ನು ವಿಸ್ತಾರವಾಗಿ ಹೇಳುತ್ತಾರೆ. ಆಗ ಅನು ಅಲ್ಲಿನ ಎಲ್ಲಾ ವಿವರಗಳನ್ನು ಹೇಳುವಾಗ ಆಶ್ಚರ್ಯ ಚಿಕಿತರಾದ ಮಾವನಿಗೆ ಮನೆಯವರು ಅನುವಿನ ವಿಷಯವನ್ನು ವಿವರವಾಗಿ ಒಪ್ಪಿಸುತ್ತಾರೆ ಕೇಳಿದ ಮಾವ ಇನ್ನು ತಡ ಮಾಡುವುದು ಬೇಡ, ಇವಳನ್ನು ಸೀತಮ್ಮನ ಪುರಕ್ಕೆ ಕರಕೊಂಡು ಹೋಗೋಣ ಎನ್ನುತ್ತಾರೆ.

ಮರುದಿನವೇ ಹೊರಟ ಅನು ಮತ್ತು ಮನೆಯವರು ಆ ಹೊಸ ಊರನ್ನು ತಲುಪುತ್ತಾರೆ. ಹಾಗೂ ಅನು ಹೇಳುತ್ತಿದ್ದ ಅವಳ ಗಂಡ ನರೇಂದ್ರನಾಥ ಅವರ ಮನೆಗೆ ಹೋಗುತ್ತಾರೆ. ನರೇಂದ್ರನಾಥ ಲೋಕಲ್ ಗೈಡ್ ಆಗಿ ಕೆಲಸ ಮಾಡುತ್ತಿರುತ್ತಾರೆ ಈಗ ಅವರ ಪ್ರಾಯ ಸುಮಾರು 47 ಅವಳ ಹೆಂಡತಿಯಾಗಿದ್ದ ಸಾವಿತ್ರಿ ಸುಮಾರು ೧೯ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿರುತ್ತಾಳೆ ಎಂಬ ವದಂತಿ ಇರುತ್ತದೆ.

ಈಗ ಬಂದ ಅನು ಮತ್ತು ಮನೆಯವರು ನರೇಂದ್ರನಾಥನ ಬಳಿ ಆತನ ಹೆಂಡತಿಯ ಬಗ್ಗೆ ಕೇಳಿದಾಗ ಮೊದಲು ಅವರೇನೂ ಹೇಳಲು ಇಚ್ಛಿಸುವುದಿಲ್ಲ. ಆದರೆ ನಂತರ ಅವರು’ ನನ್ನ ಹೆಂಡತಿಗೆ ಮೊದಲಿನಿಂದಲೂ ಕೆಲಸದ ಆಳು ದಾನಪ್ಪನೊಡನೆ ಸಲಿಗೆ ಜಾಸ್ತಿ. ನನ್ನೊಂದಿಗೆ ಮದುವೆ ಬಲವಂತದಲ್ಲಿ ಆದದ್ದೆಂದು ನಂತರ ತಿಳಿಯಿತು. ವರುಷದಂತೆ ಒಂದು ದಿನ ತಾಯಿ ಮನೆಗೆ ಹೋದಾಗ ಮಕ್ಕಳನ್ನು ಮಲಗಿಸಿ ತನ್ನ ಒಡವೆ ಎಲ್ಲ ತೆಗೆದುಕೊಂಡು ಆ ಆಳು ದಾನಪ್ಪನೊಡನೆ ಓಡಿ ಹೋದಳು. ನಂತರ ಏನಾದಳೋ ಗೊತ್ತಿಲ್ಲ,” ಎನ್ನುತ್ತಿದ್ದಂತೆ ಅನು ನಡುವೆ ಬಾಯಿ ಹಾಕಿ ‘ಇಲ್ಲ ಇಲ್ಲ ಅಲ್ಲಿ ನಡೆದದ್ದೇ ಬೇರೆ’ ಎನ್ನುತ್ತಾಳೆ. ಎಲ್ಲರೂ ಬೆರಗಾಗಿ ಅವಳನ್ನು ನೋಡಿದಾಗ ಆಕೆ 19 ವರ್ಷಗಳ ಹಿಂದೆ ನಡೆದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತಾಳೆ .ಅಷ್ಟೇ ಅಲ್ಲದೆ ಅಲ್ಲಿ ಬಂದು ಸೇರಿದ ಎಲ್ಲಾ ಜನರ ಗುರುತು ಹಿಡಿದು ಹೆಸರು ಹೇಳುತ್ತಾಳೆ.ಹಾಗಾದರೆ ಅನು ಸಾವಿತ್ರಿಯ ಪುನರ್ಜನ್ಮವೇ? ಆಕೆ ಹೇಳಿದ ಕಥೆಯಾದರೂ ಏನು? ಅವಳು ಹೇಳಿದ ಕಥೆಯನ್ನು ಊರಿನ ಜನರು ನಂಬಿದರೆ? ನಡೆದದ್ದಾದರೂ ಏನು? ಈ ದಾನಪ್ಪ ಯಾರು? ತನ್ನ ಹಿಂದಿನ ಎಲ್ಲವನ್ನೂ ಹೇಳಿ ಮುಗಿಸಿದ ಅನುವಿನ ಈಗಿನ ನಿಲುವೇನು ಮನೆಯವರೊಂದಿಗೆ ಮರಳಿ ತನ್ನೂರಿಗೆ ಬಂದು ತನ್ನನ್ನು ಪ್ರೀತಿಸುತ್ತಿದ್ದ ರಾಜೇಶನನ್ನು ವರಿಸಿದಳೇ? ಅಥವಾ ಅಲ್ಲೇ ನೆಲೆಯಾದಳೇ? ತಿಳಿಯಬೇಕಾದರೆ ಓದಿ ‘ಗತ’…

ವಾಣಿಶ್ರೀ ಕೊಂಚಾಡಿ

Related post

Leave a Reply

Your email address will not be published. Required fields are marked *