ಕಾದಂಬರಿ – ಶ್ರೀಮತಿ ಆಶಾ ರಘು

ಕೃತಿ ವಿಮರ್ಶೆ – ಕೆ ಏನ್ ಭಗವಾನ್

’ಗತ’ ಎರಡು ಜನ್ಮಗಳ ಸಂಬಂಧ ಮಾಲೆ

ನಾವು ವ್ಯಕ್ತಿಯೊಬ್ಬನ ಮಾತು, ನಡವಳಿಕೆಗಳನ್ನು ಗಮನಿಸಿ ’ನೀನು ಹಿಂದಿನ ಜನ್ಮದಲ್ಲಿ ಇಂಥ ಪ್ರಾಣಿಯಾಗಿ ಹುಟ್ಟಿದ್ದಿರಬೇಕು’ ಎಂದು ಕುಚೇಷ್ಟೆ ಮಾಡುವವರು. ’ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ’ ಎಂಬ ವೇದಾಂತವನ್ನು ನಂಬುವವರು. ಜಗತ್ತಿನ ಹೆಚ್ಚಿನ ಮತಧರ್ಮಾವಲಂಬಿಗಳಲ್ಲೂ ಇಂಥ ನಂಬಿಕೆಯುಂಟು.

ಹಾಗಿಲ್ಲದೇ ಹೋಗಿದ್ದಲ್ಲಿ, ಪಾಪ ಪುಣ್ಯಗಳ ಪರಿಕಲ್ಪನೆ ಹುಟ್ಟದೆ ಮಾನವರು ಪಾಪಭೀತಿಯಿಲ್ಲದ ದಾನವರಾಗಿಬಿಡುತ್ತಿದ್ದರು. ಹುಟ್ಟು ಸಾವು ಎರಡು ಸ್ಥಿತಿಗಳು ಭೌತಿಕ ಶರೀರಕ್ಕಷ್ಟೇ ಅನ್ವಯ, ಅದರ ಎಲ್ಲ ಚಟುವಟಿಕೆಗಳಿಗೂ ಸಾಕ್ಷಿಪ್ರಜ್ಞೆಯಾದ ಆತ್ಮಕ್ಕೆ ಅನ್ವಯಿಸದು. ಆತ್ಮ ಎಂಬ ಚಿರಂತನ ಚೇತನವು ಗತಿಸುವ ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ, ಇನ್ನೊಂದರಿಂದ ಮತ್ತೊಂದಕ್ಕೆ ಜಿಗಿಯುತ್ತ, ಹಲವು ಜನ್ಮಗಳಲ್ಲಿ ಸಂಚಯಿಸಿದ ಪುಣ್ಯಫಲದಿಂದ ಸಾಯುಜ್ಯ ಹೊಂದುತ್ತದೆ. ಅಂದರೆ ಆತ್ಮವು ಪರಮಾತ್ಮನಲ್ಲಿ ಲೀನವಾಗುತ್ತದೆ. ಇದನ್ನೇ ಮುಕ್ತಿ ಎನ್ನುವುದು.

ಬೂದಿಯಲ್ಲಿ ಹೊರಳಾಡುತ್ತಿರುವ ನಾಯಿಗೆ ತನ್ನ ಪೂರ್ವಜನ್ಮದ ನೆನಪಾಗುತ್ತದಂತೆ. ಆದರೆ ಗತಜನ್ಮದ ಅನುಭವವನ್ನು ಹೇಳಿಕೊಳ್ಳಲು ಸಾಧ್ಯವಾಗದು. ಕಾರಣ ಅದಕ್ಕೆ ಮನುಷ್ಯರ ಯಾವೊಂದು ಭಾಷೆಯೂ ಬರುವುದಿಲ್ಲ. ಪೂರ್ವಜನ್ಮದ ಸ್ಮರಣೆ ಇರಿಸಿಕೊಂಡು ಅದರಂತೆ ಆಲೋಚಿಸುವ, ಅನುಭವಿಸುವ ಮನಸ್ಥಿತಿಯನ್ನು ವೈದ್ಯ ವಿಜ್ಞಾನಿಗಳು para psychology (ಅಪರ ಮನಶ್ಯಾಸ್ತ್ರ) ಎಂದು ಗುರುತಿಸಿದ್ದಾರೆ. ಅಂಥ ಹಿನ್ನೆಲೆಯಲ್ಲಿ ಪಿ.ವೆಂಕಟರಮಣಾಚಾರ್ಯರು ಕನ್ನಡದಲ್ಲಿ ಬರೆದ ’ಅಪರ ಜೀವನ’ವೇ ಮೊದಲ ಕಥೆಯಂತೆ. ಅದು 1940ರಲ್ಲಿ ಪ್ರಕಟವಾದ ’ಅಂತರಂಗದ ಕಥೆಗಳು’ ಸಂಕಲನದಲ್ಲಿದೆ ಎಂಬುದಾಗಿ ದೇಶ ಕುಲಕರ್ಣಿ ಒಂದು ಕಡೆ ದಾಖಲಿಸಿದ್ದಾರೆ. ಡಾ.ಎಸ್.ಎಲ್.ಭೈರಪ್ಪನವರು ಬರೆದ ’ನಾಯಿ ನೆರಳು’ (1968) ಅಪರ ಮನಶ್ಯಾಸ್ತ್ರ ಸಂಬಂಧಿತ ಮೊದಲ ಕನ್ನಡ ಕಾದಂಬರಿ. ಇತ್ತೀಚೆಗೆ ಲೇಖಕಿ ಆಶಾ ರಘು ರಚಿಸಿರುವ ’ಗತ’ ಕಾದಂಬರಿ ಈ ನಿಟ್ಟಿನ ಎರಡನೇ ಕಾದಂಬರಿ ಎನ್ನಬಹುದು.

ನಾನು ’ಗತ’ ಕಾದಂಬರಿಯನ್ನು ಒಂದು ವಾರದ ಹಿಂದೆಯೇ ಅತ್ಯಂತ ಕುತೂಹಲದಿಂದ ಓದಿ ಮುಗಿಸಿದ್ದೆನಾದರೂ, ಆ ಕುರಿತು ನನ್ನ ಅನಿಸಿಕೆಗಳನ್ನು ’ಲೋಕಾರ್ಪಣೆ’ಗೊಳಿಸುವ ಮೊದಲು ’ನಾಯಿ ನೆರಳು’ ದಾರಿಯಲ್ಲಿ ’ಗತ’ವೂ ಸಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಎರಡರಲ್ಲಿನ ಸಮಾನ ಅಂಶಗಳನ್ನು ಒಮ್ಮೆ ಅವಲೋಕಿಸಬೇಕಾಯಿತು.

’ನಾಯಿ ನೆರಳು’ ಪುರುಷ ಪ್ರಧಾನದ್ದೂ, ’ಗತ’ ಸ್ತ್ರೀ ಪ್ರಧಾನದ್ದೂ ಆದ ಕಾದಂಬರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಮೊದಲನೆ ಕಾದಂಬರಿಯಲ್ಲಿ ವಿಶ್ವೇಶ್ವರ ಮುಖ್ಯ ಪಾತ್ರವೆನಿಸಿದರೆ, ಎರಡನೆಯದರಲ್ಲಿ ಅನು (ಅನುರಾಧ) ಮುಖ್ಯ ಪಾತ್ರ. ಅಲ್ಲಿನ ಕಥೆ ಜೋಗಿಹಳ್ಳಿಯಿಂದ ಗಂಗಾಪುರದತ್ತ ಸಾಗಿದರೆ, ಇಲ್ಲಿಯದು ಬೆಂಗಳೂರಿನಿಂದ ಕಮಲನಾಥಪುರ (ಬದಲಾದ ಸೀತಮ್ಮನಪುರ) ದತ್ತ ಸಾಗುತ್ತದೆ. ’ನಾಯಿ ನೆರಳು’ ನ ವಿಶ್ವೇಶ್ವರ ಪ್ರಯಾಗದ ಗಂಗೆಯಲ್ಲಿ ಮುಳುಗಿ ಸತ್ತು ’ಕ್ಷೇತ್ರಪಾಲ’ ನಾಗಿ ಮರುಜನ್ಮ ಪಡೆದರೆ, ’ಗತ’ ದ ಸಾವಿತ್ರಿ ತನ್ನ ಮಲತಾಯಿಯ ಸಂಚಿನಿಂದ ಕೊಲೆಯಾಗಿ, ’ಅನು’ ಆಗಿ ಮರುಜನ್ಮ ಪಡೆಯುತ್ತಾಳೆ. ’ನಾಯಿ ನೆರಳು’ ಕಥೆಯ ವೆಂಕಮ್ಮ, ವಿಶ್ವೇಶ್ವರನೇ ಮರುಜನ್ಮ ಪಡೆದು ಬಂದ ಕ್ಷೇತ್ರಪಾಲನನ್ನು ಪತಿಯಾಗಿ ಸ್ವೀಕರಿಸಿದಾಗ ತನಗೆ ಅವನಷ್ಟೇ ವಯಸ್ಸಿನ ಮಗ ಇರುತ್ತಾನೆ. ’ಗತ’ ದಲ್ಲೂ ಇಂಥದ್ದೇ ಸಾಮ್ಯತೆ. ನರೇಂದ್ರ, ಸತ್ತ ಸಾವಿತ್ರಿಯೇ ಮರುಜನ್ಮ ಪಡೆದು ಅನು ಆಗಿ ಬಂದವಳನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ. ಅದಾಗಲೇ ಅವನಿಗೆ ಅನು ವಯಸ್ಸನ್ನು ಮೀರಿದ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ಇಂಥ ಅನೂಹ್ಯ ಸಂಬಂಧಗಳನ್ನು ದೃಢೀಕರಿಸಲು ಒಂದು ಕಡೆ ಗುಡಿಯ ಪೂಜಾರಿಗೆ ಅಮ್ಮ (ದೇವಿ)ನು ಮೈಮೇಲೆ ಬಂದರೆ, ಇನ್ನೊಂದು ಕಡೆ ಹೊಸ ಸಂಬಂಧಕ್ಕ್ ಧರ್ಮಸಮ್ಮತಿ ನೀಡಿದ್ದು ದೇವಸ್ಥಾನವೊಂದಕ್ಕೆ ಬಂದಿದ್ದ ಒಬ್ಬ ಸಂಸ್ಯಾಸಿ.

ಆ ಮುಂದಿನ ಬೆಳವಣಿಗೆ ಎರಡೂ ಕಾದಂಬರಿಗಳಲ್ಲಿ ಬೇರೆ ಬೇರೆಯವೇ ಆಗುತ್ತವೆ. ’ನಾಯಿ ನೆರಳು’ ಕಥೆಯ ವಿಶ್ವೇಶ್ವರ ಕ್ಷೇತ್ರಪಾಲನಾಗಿ ಮರುಜನ್ಮ ತಳೆದು ಬಂದುದರಲ್ಲಿ ಸಾರ್ಥಕತೆ ಇಲ್ಲ. ’ಗತ’ ದಲ್ಲಾದರೋ ಅನು ರೂಪದಲ್ಲಿ ಮರುಜನ್ಮ ಪಡೆದ ಸಾವಿತ್ರಿ ಗಂಡನೊಂದಿಗೆ ಬಾಳುವುದರ ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡುವುದಲ್ಲದೆ ಸೀತಮ್ಮನಪುರದಲ್ಲಿ ಒಂದು ಅನಾಥಾಲಯವನ್ನೂ ಕಟ್ಟಿಸುತ್ತಾಳೆ. ಅದು ಸಾಧ್ಯವಾಗಿದ್ದು ತನ್ನ ತವರಿನ ಒಡವೆಗಳು ಹಿಂದಿರುಗಿ ಬಂದಿದ್ದು ಹಾಗೂ ದೊಡ್ಡಯ್ಯ ಎನ್ನುವ ಹಿರಿಯ ಕೊಟ್ಟುಹೋಗಿದ್ದ ಬಂಗಾರದ ನಾಣ್ಯಗಳು ತುಂಬಿದ್ದ ಪೆಟ್ಟಿಗೆ. ಅಷ್ಟೇ ಅಲ್ಲ, ಅವಳನ್ನು ಭಾವಿ ಅರ್ಧಾಂಗಿಯೆಂದೇ ಭಾವಿಸಿಕೊಂಡಿದ್ದ ಸೋದರತ್ತೆಯ ಮಗ ರಾಜೇಶನಿಗೆ ಅನಾಥಾಲಯದಲ್ಲಿ ಸೇವಾವ್ರತಿಯಾಗಿದ್ದ ಶಾಂತಿ ಎಂಬ ಹೆಣ್ಣನ್ನು ಒಪ್ಪಿಸಿ ಮದುವೆ ಮಾಡಿಸಿದ್ದು ಮೆಚ್ಚುವ ಕಾರ್ಯವೇ.

’ನಾಯಿ ನೆರಳು’ ಕಥೆಯ ಕ್ಷೇತ್ರಪಾಲ ಗತಜನ್ಮದಲ್ಲಿ ಹೆಂಡತಿಯಾಗಿದ್ದ ವೆಂಕಮ್ಮನನ್ನು ಹಿರಿಯರ ಸಮ್ಮತಿಯಂತೆ ಕೂಡಿದರೂ, ಮತ್ತೊಂದು ಗಂಡುಮಗು (ಅನಂತ) ಆದರೂ, ಮನೆಯಾಳು ಕರಿಯನ ಮಗಳನ್ನು ಕೆಡಿಸಿದ ಅಪರಾಧದ ಮೇಲೆ ಜೈಲಿಗೆ ಹೋಗಿದ್ದು ಮರುಜನ್ಮಕ್ಕೆ ಸಾರ್ಥಕ್ಯ ತಂದುಕೊಡುವುದಿಲ್ಲ. ಜೊತೆಗೆ ಬೇರೆ ಊರಿನಲ್ಲಿ ಕಿರಿಯ ಮಗನೊಂದಿಗೆ ವಾಸವಿದ್ದ ವೆಂಕಮ್ಮನಿಗೆ ಒಂದಿಷ್ಟು ಹಣ ನೀಡಿ ಸಂನ್ಯಾಸಿಯಂತೆ ಹೊರಟುಹೋಗಿದ್ದರಲ್ಲಿ ಕರ್ತವ್ಯ ವಿಮುಖತೆ ಪ್ರಧಾನವಾಗಿ ಕಾಣುತ್ತದೆ.

ಹೀಗೆ ಪುನರ್ಜನ್ಮ ಪಡೆದ ಹೆಣ್ಣೊಬ್ಬಳು ಜವಾಬ್ದಾರಿ ಸ್ಥಾನದಲ್ಲಿ ನಿಂತು, ಗತಜನ್ಮದಲ್ಲಿ ಉಳಿಸಿಹೋಗಿದ್ದ ಕರ್ತವ್ಯಗಳನ್ನು ಪೂರೈಸಿದ ನಂತರವಷ್ಟೆ ಗುಹೆಯಲ್ಲಿ ಅದೃಶ್ಯಳಾಗುವ ಕತೆಯೊಂದನ್ನು ಆಶಾ ರಘು ಯಾವುದೇ ಗೊಂದಲಗಳಿಗೆ ’ಅನು’ ವು ಮಾಡಿಕೊಡದ ರೀತಿಯಲ್ಲಿ ’ಗತ’ ವನ್ನು ಸೃಷ್ಟಿಸಿದ್ದಾರೆ. ಒಂದೊಂದು ಘಟನೆ, ಒಂದೊಂದು ತಿರುವಿಗೂ ಪೂರಕ ಅಂಶಗಳನ್ನು ತುಂಬಿದ್ದಾರೆ. ಕೆಲವೊಂದು ಕಠಿಣ ಕಾರ್ಯಗಳನ್ನೂ ಇಲ್ಲಿ ’ಹೂವನ್ನೆತ್ತಿದಷ್ಟೇ ಹಗುರ’ ವಾಗಿಸಿದ್ದಾರೆ!

ಆರಂಭಿಕ ಪುಟದಲ್ಲಿ ರಂಗನಾಥ- ಸುಗುಣಮ್ಮ ದಂಪತಿಗಳ ಹತ್ತು ವರ್ಷದ ಮಗಳು ಅನು ’ನಾನು ಆ ಗುಹೆಯನ್ನು ನೋಡಿದ್ದೇನೆ. ನನ್ನ ಅಮ್ಮ ಅಂಬುಜಮ್ಮ’ ಎಂದು ಬಡಬಡಿಸುವುದು, ಹದಿಹರೆಯದಲ್ಲಿ ’ನನ್ನದು ಕಮಲನಾಥಪುರ. ನನಗೆ ಮದುವೆಯಾಗಿದೆ. ನನ್ನ ಗಂಡ ನರೇಂದ್ರ. ನನಗಿಬ್ಬರು ಹೆಣ್ಣು ಮಕ್ಕಳಿದ್ದಾರೆ’ ಎಂದು ಗತಜನ್ಮದ ಸಾವಿತ್ರಿಯಂತೆ ಖಚಿತವಾಗಿ ತಿಳಿಸುವುದು, ಕಮಲನಾಥಪುರ ಈಗ ಸೀತಮ್ಮನಪುರವಾಗಿ ನಾಮಾಂತರಗೊಂಡಿರುವ ಸಂಗತಿಯನ್ನು ರಂಗನಾಥರ ದೂರದ ಸಂಬಂಧಿ ಕಂಠೀನರಸಿಂಹರಿಂದ ಹೇಳಿಸುವುದು, ತನ್ನ ಹೆಂಡತಿ ರಾಜೇಶನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಸಂಶಯಿಸಿ ನರೇಂದ್ರ ಹೃದಯವೊಡೆದು ಸಾಯುವುದು- ಇಂಥ ಸಂಗತಿಗಳನ್ನೆಲ್ಲ ಬಹು ಜಾಣ್ಮೆಯಿಂದ ನಿಭಾಯಿಸಿದ್ದಾರೆ.

ಆಶಾ ರಘು ಅವರ ಕಥನ ಶೈಲಿ ಬಹುಮಟ್ಟಿಗೆ ಅನಕೃ ಅವರ ಸಾಮಾಜಿಕ ಕಾದಂಬರಿಗಳ ಶೈಲಿಯನ್ನು ಹೋಲುತ್ತದೆ. ಅಂದರೆ ಅತಿ ವಿವರಣೆ, ದಟ್ಟ ವಿವರಗಳಿಗಿಂತ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿರುವುದು. ಸರಳತೆ ಸಹಜತೆಗಳಲ್ಲೇ ಸಮರ್ಥನೀಯ ಅಂಶಗಳು ತೇಲಿಬರುವುದನ್ನು ಇಲ್ಲಿ ಗಮನಿಸಬಹುದು. ರಸ ತೀವ್ರತೆಗಳಂತೂ ಇಲ್ಲೆಲ್ಲೂ ಕಾಣಸಿಗವು. ಒಟ್ಟಾರೆಯಾಗಿ ಹೇಳುವುದಾದರೆ ಪುನರ್ಜನ್ಮದ ಕಥನ ಕುರಿತಂತೆ ’ನಾಯಿ ನೆರಳು’ ಮೊದಲ ಮಾದರಿಯಾದರೆ, ’ಗತ’ ಅಭಿವೃದ್ಧಿಗೊಂಡ ಎರಡನೇ ಮಾದರಿ ಎನ್ನಬಹುದು.

ಲೇಖಕಿಯನ್ನು ಅಭಿನಂದಿಸುವ ಜೊತೆ ಜೊತೆಗೆ, ಗುಹೆಯ ಮಾರ್ಗದಲ್ಲಿ ನಡೆಯುತ್ತಿರುವ ಹೆಣ್ಣೊಬ್ಬಳು ಅಪೂರ್ವ ಸಂಗತಿಗಳನ್ನು ಬಿಚ್ಚಿಡಲು ಹೊರಟಿರುವಳೇನೋ ಎನಿಸುವ ರೀತಿಯಲ್ಲಿ ಮುಖಪುಟವನ್ನು ಚಿತ್ರಿಸಿದ ಚಂದ್ರನಾಥರಿಗೂ ವಂದನೆಗಳನ್ನು ತಿಳಿಸಲೇಬೇಕು.

ಕೆ.ಎನ್.ಭಗವಾನ್

ಸಾಹಿತ್ಯಮೈತ್ರಿ: ಈ ಕೃತಿಯನ್ನು ಮೆಚ್ಚಿ ಶ್ರೀ ಎಸ್ ಎಲ್ ಭೈರಪ್ಪನವರು ತಮ್ಮ ಅಮೃತಹಸ್ತ ದಿಂದ ಬಿಡುಗಡೆ ಮಾಡಿರುತ್ತಾರೆಆಸಕ್ತರು ಪುಸ್ತಕ ಕೊಂಡು ಓದಬೇಕಿದ್ದಲ್ಲಿ ಶ್ರೀ ರಘುವೀರ್ ( ಮೊಬೈಲ್ – 9945939436 ) ರವರನ್ನು ಸಂಪರ್ಕಿಸಿ ನಿಮ್ಮ ಮನೆಯ ಬಾಗಿಲಿಗೆ ಅಂಚೆ ವೆಚ್ಚವಿಲ್ಲದೆ ತಲುಪಿಸುತ್ತಾರೆ.

Related post

1 Comment

  • ಗತ ಕಾದಂಬರಿಯ ವಿಮರ್ಶೆ ಓದಿದೆನು.. ಇಡೀ ಕಾದಂಬರಿ ಓದಿದ ಭಾಸವಾಗುತ್ತದೆ.. ವಿಮರ್ಶೆ ಕೃತಿಯನ್ನು ಕೊಂಡು ಓದಬೇಕೆನಿಸುವಂತೆ ಮಾಡುತ್ತದೆ.

    ಧನ್ಯವಾದಗಳು
    ಪವನ ಕುಮಾರ ಕೆ ವಿ ಬಳ್ಳಾರಿ

Leave a Reply

Your email address will not be published. Required fields are marked *