ಗಮ್ಯದೆಡೆಗೆ…..

ಗಮ್ಯದೆಡೆಗೆ…..

ನಾವು ಮನೆಯ ಬಿಟ್ಟು ನಡೆದಾಗ
ಆಗಷ್ಟೇ ಹದಿನೆಂಟು ತುಂಬಿತ್ತು
ಕನಸುಗಳ ಬೀಜಕೆ ಪ್ರಯತ್ನದ ನೀರುಣಿಸಿ
ಭವ್ಯ ಭವಿತವ್ಯದ ದಾರಿಯೆಡೆಗೆ ನಡೆದೆವು!!!

ಗುರಿ ಬೇರೆ!ದಾರಿಯೂ ಬೇರೆ,!!
ನೀ ಎಂಜಿನಿಯರನಾದೆ
ನಾ ಭಾರತಮ್ಮನ ಕಾಯಲು ಹೊರಟೆ!!!

ನಿನಗೆ ಸಿಕ್ಕಿದ್ದು
ಏಳಕ್ಕೆ ಎದ್ದು ಐದಕ್ಕೆ ಮುಗಿವ ಕಾಯಕ
ನನಗೋ ಮುಂಜಾನೆ ನಾಲ್ಕು
ಮುಗಿವ ಸಮಯವನೆಂತೋ ಅರಿಯೆ
ಸಭಿಕರ ಚಪ್ಪಾಳೆಯಲಿ
ನೀ ಪದವಿ ಪಡೆವಾಗ
ನಾ ಪೆರೇಡು ಮಾಡುತ್ತಿದ್ದೆ!!!

ಕಂಪನಿಯ ನೌಕರಿ ನೀ ಹಿಡಿದಾಗ
ನಾ ಗಡಿಯ ಕಾಯಲು ಹೊರಟೆ
ನನ್ನ ಬದುಕಿನ ಹಾದಿ ಹಿಡಿದೆ
ಪ್ರತಿ ಹಬ್ಬ ಹರಿದಿನವೂ
ನೀ ಮನೆಯವರೊಡನಿದ್ದೆ
ನಾ ಅವರ ನೋಡುವ ಹಂಬಲದಲಿದ್ದೆ!!

ನೀ ಸಂಭ್ರಮಿಸುತ್ತಿರುವಾಗ
ನಾ ದೇಶದ ಹಿತ ಕಾಯುತ್ತ
ಬಂಕರಿನ ಗೆಳೆಯರೊಂದಿಗೆ
ಎಲ್ಲರಿಗೂ ಶುಭ ಕೋರಿದ್ದೆ!!

ನಾವಿಬ್ಬರೂ ಸಂಸಾರಿಗಳಾಗಿ
ನಿತ್ಯವೂ ನಿನ್ನವಳು ನಿನ್ನೊಡನೆ
ನನ್ನವಳು ನನ್ನ ಇರುವಿಕೆಗಾಗಿ
ಶುಭ ಕೋರುತ್ತಲೇ ಇದ್ದರು!!

ನೀ ಕಂಪನಿಗಾಗಿ ದೇಶ ಸುತ್ತಿದೆ
ನಾ ಗಡಿಯ ಭದ್ರತೆಗೆ ಪಯಣಿಸಿದೆ

ನಾವಿಬ್ಬರೂ ಮರಳಿದಾಗ!?
ನಮ್ಮವರ ಕಣ್ಣಲ್ಲಿ ನೀರು!!!
ನಿನ್ನವಳ ಕಣ್ಣೊರೆಸಲು ನೀನಿದ್ದೆ
ನೀ ಅವಳನ್ನು ಸಂತೈಸಿದ್ದೆ!!

ನನಗೆ ನನ್ನವಳ ಸಂತೈಸಲು
ಅವಳ ಕಣ್ಣೊರೆಸಲು ಆಗಲೇ ಇಲ್ಲ!!
ಏಕೆಂದರೆ,ನನ್ನೆದೆಯ ಮೇಲೆ
ಮೆಡಲುಗಳ ಧರಿಸಿ ರಾಷ್ಟ್ರಧ್ವಜ ಹೊದ್ದು
ನಾ ಶವಪೆಟ್ಟಿಗೆಯೊಳಗೆ ಮಲಗಿದ್ದೆ!!
ನನ್ನ ಬದುಕು ಕೊನೆಯಾಗಿ
ನಿನ್ನ ಬದುಕು ಸಾಗುತ್ತಿತ್ತು

ನಾವು ಮನೆಯ ಬಿಟ್ಟಾಗ
ನಮಗೆ ಹದಿನೆಂಟು ತುಂಬಿತ್ತು!!

ಸುನೀಲ್ ಹಳೆಯೂರು
(ಮೂಲ ಅದ್ವಿತ್ ವರ್ಮ ಅವರ ಆಂಗ್ಲ ಕವಿತೆಯ ಭಾವಾನುವಾದ)

Related post

Leave a Reply

Your email address will not be published. Required fields are marked *