ಗರ್ಭಿಣಿ ಹೆಂಡತಿಯ ಆರೈಕೆ ಹೀಗಿರಲಿ
ಪ್ರತಿಯೊಂದು ಹೆಣ್ಣಿಗೂ ಗರ್ಭಾವಸ್ಥೆಯು ಜೀವನದ ಅತ್ಯಂತ ಅಮೂಲ್ಯವಾದ ಘಟ್ಟ. ಈ ಅವಧಿಯಲ್ಲಿ ಆಕೆಯ ಕಾಳಜಿಯು ಕುಟುಂಬದ ಸದಸ್ಯರ ಆದ್ಯ ಕರ್ತವ್ಯವಾಗಿದೆ. ಈ ಕಾಳಜಿ ತನ್ನ ಪತಿಯಿಂದಲೇ ಬಂದರೆ ಆಕೆಯ ಆಯಾಸ, ನೋವೆಲ್ಲವೂ ಮಾಯವಾಗಿಬಿಡುತ್ತದೆ. ಏಕೆಂದರೆ ಪ್ರತಿಯೊಬ್ಬ ಹೆಂಡತಿಯ ದೃಷ್ಟಿಯಲ್ಲೂ ಗಂಡನ ಆರೈಕೆ, ಪ್ರೀತಿಗೆ ಅಷ್ಟೊಂದು ಮೌಲ್ಯವಿದೆ. ಪ್ರತಿಯೊಬ್ಬ ಪತಿಯು ತನ್ನ ಗರ್ಭಿಣಿ ಮಡದಿಯನ್ನು ಖುಷಿಯಾಗಿರುವಂತೆ ಮಾಡಲು ಈ ಕೆಳಕಂಡ ವಿಚಾರಗಳ ಬಗ್ಗೆ ಗಮನ ಕೊಡುವುದು ಅಗತ್ಯ.
ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆಯು ಒಂದು ಅದ್ಭುತವಾದ ಹಂತವಾಗಿದ್ದು, ಈ ಅವಧಿಯಲ್ಲಿ ಆಕೆಯ ದೇಹದಲ್ಲಷ್ಟೇ ಅಲ್ಲದೇ ಮಾನಸಿಕ ಸ್ಥಿತಿಯಲ್ಲೂ ಬಹಳಷ್ಟು ವ್ಯತ್ಯಾಸಗಳು ಆಗುತ್ತವೆ. ಗರ್ಭಾವಸ್ಥೆಯ ಅವಧಿಯಲ್ಲಿ ಪ್ರತೀ ಹೆಣ್ಣಿಗೂ ಹೆಚ್ಚಿನ ಪ್ರಮಾಣದ ಕಾಳಜಿ ಮತ್ತು ಆರೈಕೆ ಅಗತ್ಯವಿದೆ. ಈ ಕಾಳಜಿ ಮತ್ತು ಆರೈಕೆಯನ್ನು ಆಕೆಯ ಕುಟುಂಬದ ಸದಸ್ಯರು ಮಾಡುವುದರ ಬದಲು ತನ್ನ ಕೈಹಿಡಿದ ಪತಿಯೇ ಮಾಡಿದಾಗ ಅದರಿಂದ ಆಕೆಗೆ ಸಿಗುವ ಸಂತೋಷ ವಿಭಿನ್ನವಾದದ್ದು. ಇದರಿಂದ ಆಕೆಯ ದೇಹದ ಆಯಾಸ ಮತ್ತು ನೋವಿಗೆ ಒಂದಷ್ಟು ಉಪಶಮನ ಸಿಕ್ಕಂತಾಗುತ್ತದೆ.
ಈ ಕೆಳಕಂಡ ಅಂಶಗಳ ಕಡೆಗೆ ಪತಿಯು ಗಮನ ನೀಡಬಹುದು:
ನಿಮ್ಮದು ಕವಿ ಹೃದಯವಾಗಿದ್ದರೆ, ನಿಮಗೆ ತೋಚುವ ಸುಂದರವಾದ ಪ್ರೀತಿಯ ಸಾಲುಗಳನ್ನು ಚೆಂದದ ಬಣ್ಣದ ಗ್ರೀಟಿಂಗ್ ಕಾರ್ಡ್ನಲ್ಲಿ ಬರೆದು ಆಕೆಯ ಕೈಗೆ ನೀಡಿರಿ ಅಥವಾ ಆಕೆಯ ಮುಂದೆ ಅದನ್ನು ಓದಿರಿ. ಸಾಧ್ಯವಾದರೆ ಆಕೆಗೆ ಇಷ್ಟವಾಗುವಂತಹ ಸುಂದರವಾದ ಚಿತ್ರವನ್ನು ಬರೆದು ಕೊಡಿ. ಇದರಿಂದ ಪತ್ನಿಗೆ ತನ್ನ ಗಂಡ ತನ್ನ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾನೆ ಎನ್ನುವ ಭಾವ ಮೂಡುತ್ತದೆ. ಇದು ನಿಮಗೆ ನಿಮ್ಮ ಗರ್ಭಸ್ಥ ಪತ್ನಿಯ ಮೇಲಿರುವ ಪ್ರೀತಿಯ ಧ್ಯೋತಕವಾಗುತ್ತದೆ.
ಪತ್ನಿಯು ಗರ್ಭಿಣಿ ಆಗಿರುವುದರಿಂದ, ಆಕೆಗೆ ವಿವಿಧ ಬಯಕೆಗಳು ಇರುವುದು ಸಹಜ. ಆದ್ದರಿಂದ ಆಕೆಗೆ ಪ್ರಿಯವಾದ ಖಾದ್ಯಗಳನ್ನು ಖುದ್ದು ನೀವೇ ತಯಾರಿಸಿ ಆಕೆಗೆ ಬಡಿಸಿ ನೀಡಿರಿ. ಆಕೆಯ ಊಟವಾದ ನಂತರ ಆಕೆಯ ಊಟದ ತಟ್ಟೆಗಳಿಂದ ಹಿಡಿದು, ಅಡುಗೆಯ ಪಾತ್ರೆಗಳನ್ನೂ ನೀವೇ ಸ್ವಚ್ಛಗೊಳಿಸಿ ಇಡಿ.
ಆದಷ್ಟು ಆಕೆಗೆ ಇಷಷ್ಟವಾಗುವ ಲಘು ಸಂಗೀತವನ್ನು ಕೇಳಿಸಿರಿ. ರಾತ್ರಿಯ ವೇಳೆಗೆ ವಿಭಿನ್ನವಾದ ರೀತಿಯಲ್ಲಿ ಮೇಣದ ಬತ್ತಿಗಳನ್ನು ಹಚ್ಚಿಟ್ಟು ಆಕೆಗೆ ವಿಭಿನ್ನವಾದ ಮತ್ತು ಆಹ್ಲಾದಕರ ವಾತಾವರಣವನ್ನು ಒದಗಿಸಿರಿ.
ಗರ್ಭಿಣಿ ಮಹಿಳೆಯರಿಗೆ ದೈಹಿಕ ಆಯಾಸ ಅಧಿಕವಾಗಿ ಇರುವುದರಿಂದ ರಾತ್ರಿಯ ವೇಳೆ ವಿಪರೀತ ಕಾಲು ಸೆಳೆತ ಸಾಮಾನ್ಯವಾಗಿ ಇರುತ್ತದೆ ಇದರಿಂದ ಆಕೆ ಅದೆಷ್ಟೋ ರಾತ್ರಿ ನಿದ್ರಿಸಲೂ ಕಷ್ಟಪಡುತ್ತಾಳೆ. ಈ ಸಂದರ್ಭಗಳನ್ನು ಗಮನಿಸಿಕೊಂಡು ಗರ್ಭಿಣಿ ಪತ್ನಿಗೆ ಆಯುರ್ವೇಧೀಯ ಅಂಶಗಳು ಇರುವ ತೈಲಗಳಿಂದ ಹಿತವಾಗಿ ಒತ್ತುತ್ತಾ ಮಸಾಜ್ ಮಡಿರಿ. ಇದು ಗರ್ಭಿಣಿ ಪತ್ನಿಗೆ ವಿಶ್ರಾಂತಿ ಒದಗಿಸಿ ಒತ್ತಡ ಕಡಿಮೆ ಮಾಡುತ್ತದೆ. ಪ್ರತಿಯೊಬ್ಬ ಹೆಣ್ಣಿನ ಗರ್ಭಾವಸ್ಥೆಯ ಅವಧಿಯಲ್ಲಿ ಇದು ಅತ್ಯಂತ ಅಗತ್ಯವಾಗಿದೆ. ಗರ್ಭಿಣಿ ಮಹಿಳೆಯು ಮರಳಿ ಹೊಸ ಚೈತನ್ಯ ಪಡೆಯಲು ಕಾಲೊತ್ತುವುದು ಅತ್ಯಂತ ಅಗತ್ಯ.
ಗರ್ಭಿಣಿ ಪತ್ನಿಗೆ ಹೆಚ್ಚಿನ ದೈಹಿಕ ಬಳಲಿಕೆ ಇರುವುದರಿಂದ ಪತಿಯರು ಹೆಚ್ಚಿನ ಮನೆಗೆಲಸಗಳನ್ನು ಮಾಡಬೇಕು. ಈ ಸಂದರ್ಭದಲ್ಲಿ ಗರ್ಭಿಣಿ ಪತ್ನಿಯನ್ನು ಹೆಚ್ಚಿನ ಹೊತ್ತು ಆರಾಮವಾಗಿ ಮಲಗಲು ಬಿಡಿ. ಇದರಿಂದ ಆಕೆಯು ಅಗತ್ಯವಿರುವ ವಿಶ್ರಾಂತಿಯನ್ನು ಪಡೆಯಬಹುದು ಮತ್ತು ಆಹ್ಲಾದವನ್ನು ಪಡೆಯುತ್ತಾಳೆ.
ತನ್ನ ಗರ್ಭಿಣಿ ಪತ್ನಿಯನ್ನು ಆಯುರ್ವೇದೀಯ ಸ್ಪಾಗೆ ಕರೆದುಕೊಂಡು ಹೋದಲ್ಲಿ, ಅಲ್ಲಿ ಆಕೆ ಕಳೆಯೋ ಒಂದೊಂದು ದಿನದಿಂದಲೂ ಆಕೆ ಮತ್ತಷ್ಟು ಹೊಸ ಚೈತನ್ಯವನ್ನು ಪಡೆದು ನವ ಯವ್ವನವನ್ನು ಪಡೆಯುತ್ತಾಳೆ. ಆದ್ದರಿಂದ ಪ್ರತಿಯೊಬ್ಬ ಪತಿಯು ತನ್ನ ಗರ್ಭಿಣಿ ಪತ್ನಿಯನ್ನು ಕನಿಷ್ಟ ತಿಂಗಳಲ್ಲಿ ಒಂದು ದಿನವನ್ನು ಸ್ಪಾಗಾಗಿ ಮೀಸಲಿಟ್ಟು ಅಲ್ಲಿಗೆ ಕರೆದೊಯ್ಯಬೇಕು. ಇದು ಆಕೆಗೆ ಹೊಸ ಜಗತ್ತಿನ ಪರಿಚಯ ಮಾಡಿಸಿ ನವೀನ ವಾತಾವರಣವನ್ನು ನೀಡುತ್ತದೆ. ಅವಕಾಶಗಳು ಇದ್ದಲ್ಲಿ ಹೆಂಡತಿಗೆ ಮನೆಯಲ್ಲಿಯೇ ಸ್ಪಾ ವ್ಯವಸ್ಥೆಯನ್ನು ಮಾಡಬಹುದು.
ಒತ್ತಡದ ಜಗತ್ತಿನಿಂದ ಆರಾಮ ಪಡೆಯಲು ಸಾಮಾನ್ಯವಾಗಿ ಪಟ್ಟಣವಾಸಿಗಳು ವಾರಾಂತ್ಯದ ಔಟಿಂಗ್ ಹೋಗುತ್ತಾರೆ. ಅದೇ ರೀತಿ ಪತಿಯರು ತಮ್ಮ ಗರ್ಭಿಣಿ ಪತ್ನಿಯನ್ನು ವಾರಂತ್ಯದಲ್ಲಿ ಹೊಸ ವಾತಾವರಣ ಮತ್ತು ನೆಮ್ಮದಿಯನ್ನು ಒದಗಿಸುವಂತಹ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕು. ಇದು ಪತಿ ಪತ್ನಿಯರಿಬ್ಬರಿಗೂ ನಿರಾಳತೆಯನ್ನು ನೀಡುತ್ತದೆ. ಔಟಿಂಗ್‌ಗಾಗಿ ಎಲ್ಲೆಲ್ಲೋ ಹೋಗಬೇಕಾಗಿಲ್ಲ, ಸಮೀಪದಲ್ಲೇ ಇರುವ ಶಾಂತವಾದ ಸ್ಥಳಗಳಿಗೆ ಹೋಗಿ ಜತೆಯಾಗಿ ಸಮಯವನ್ನು ಕಳೆದಾಗ ಪತ್ನಿಯು ಉಲ್ಲಸಿತಗೊಳ್ಳುತ್ತಾಳೆ. ಮಗು ಜನಿಸಿದ ನಂತರ ಇಂತಹ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಸಿಕ್ಕ ಸಮಯವನ್ನು ಉಪಯೋಗಿಸಿಕೊಳ್ಳಿ.
ಹೆಂಡತಿಯು ಸಹಜವಾಗಿ ತನ್ನ ಗಂಡನ ಪ್ರೀತಿಯನ್ನು ಅಪೇಕ್ಷಿಸುತ್ತಾಳೆ. ಇದು ಪ್ರತಿಯೊಬ್ಬ ಹೆಂಡತಿಗೂ ಅತ್ಯಂತ ಅಗತ್ಯವೂ ಹೌದು. ಈ ಅಭಿಲಾಷೆ ಪತ್ನಿ ಗರ್ಭಿಣಿಯಾಗಿದ್ದಾಗ ತುಸು ಹೆಚ್ಚೇ ಇರುತ್ತದೆ. ಪ್ರೈವೆಸಿ ಇರುವ ಅವಧಿಯಲ್ಲೆಲ್ಲಾ ಪತ್ನಿಯ ಸಮೀಪವೇ ಇದ್ದು, ಜನಿಸಲಿರುವ ಮಗುವಿನ ಕುರಿತು ನಿಮ್ಮ ಮುಂದಿನ ಯೋಜನೆಗಳನ್ನು ಪತ್ನಿಯೊಂದಿಗೆ ಹಂಚಿಕೊಳ್ಳಿ. ಪತಿಯ ದೈಹಿಕವಾದ ಸ್ಪರ್ಶವು ಗರ್ಭಿಣಿ ಪತ್ನಿಗೆ ಆಹ್ಲಾದವನ್ನು ನೀಡುತ್ತದೆ. ಗಂಡನ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಪತ್ನಿಗೆ ಪತಿಯು ಸ್ನಾನ ಮಾಡಿಸುವುದರಿಂದ ಆಕೆಯ ಮೇಲೆ ಗಂಡ ಇಟ್ಟಿರುವ ಪ್ರೀತಿಯ ಆಳ ಆಕೆಗೆ ಸ್ಪಷ್ಟವಾಗಿ ತಿಳಿಯುತ್ತದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ – ೫೭೪೧೯೮
ದೂ: 9742884160