ಗಾಜಿನ ಬಳೆಯ ಸ್ವಗತ…
ಹೆಣ್ಣೆ ನಮ್ಮಿಬ್ಬರದು
ಬಿಡಿಸಲಾಗದ ಬಂಧ,
ಅವಿನಾಭಾವ ಸಂಬಂಧ.
ನೀ ಮಗುವಾಗಿದ್ದಾಗ
ನಿನ್ನಮ್ಮನ ಕೈಲಿದ್ದ
ನನ್ನ ನಾದಕೆ ನೀ
ಕಣ್ಣರಳಿಸುತಿದ್ದೆ.
ಪುಟ್ಟಕೂಸಾಗಿದ್ದಾಗ
ಹಠ ಮಾಡಿ ನೀನೆನ್ನ
ಧರಿಸಿದ್ದೆಯಲ್ಲ.
ಆಡುವಾಗ ಬಿದ್ದು
ನಾ ಚೂರುಚೂರಾಗಿ
ನಿನ್ನ ಕೈಲಿ ರಕ್ತ ಬಂದು
‘ಓ ನಾನೆಷ್ಟು ಹೆದರಿದ್ದೆ’
ಆದರೇನು ನನ್ನೆಡೆಗೆ ನಿನ್ನ
ಸೆಳೆತ ಅಗಾಧವಾದುದು.
ಹಬ್ಬ-ಹರಿದಿನಗಳಲಿ
ನಿನ್ನ ಕೈ ತುಂಬಾ ನಾ
ಮೆರೆದಿದ್ದ ನಾ ಮರೆವೆನೆ.
ನಿನ್ನ ನೋಡಲು ಬಂದ
ವರ ಮಹಾಶಯ ನಿನ್ನ
ಕೈಲಿ ಅಂದವಾಗಿ ನಲಿಯುತಿದ್ದ ನನ್ನ ನೋಡಿಯೇ ಅಲ್ಲವೆ
ನಿನಗೆ ಮರುಳಾಗಿದ್ದು !!
ನೆನಪಿದೆಯೆ ನಿಮ್ಮಪ್ಪ ನಿನ್ನ
ನಿನ್ನವನಿಗೆ ಧಾರೆಯೆರೆವಾಗ
ಕಣ್ಣಹನಿಗಳೆರಡು ನನ್ನ
ಮೇಲೆ ಬಿದ್ದಾಗ ನನ್ನ
ಗಾಜೆದೆಯೂ ಒಂದು
ಕ್ಷಣ ಮಿಡುಕಿದ್ದು ಸುಳ್ಳಲ್ಲ.
ನೆನಪಿದೆಯೆ ಗೆಳತಿ ನಿನ್ನ
” ಮೊದಲ ರಾತ್ರಿ “
ನನ್ನ ಗಲಗಲ ಸದ್ದಿಗೆ
ಹೆದರಿ ನೀನಿದ್ದರೆ, ಹೇಗೆ
ಹೇಳಿಲಿ ನಿನ್ನವನ ತುಂಟುತನ
ಛೀ, ನಾಚಿಕೆಯಾಗುವುದಪ್ಪ;
ಅವನ ಒರಟುತನಕೆ
ನನ್ನವರು ಬಲಿಯಾದರಲ್ಲ
ಆದರೂ ನನಗೆ ಬೇಸರವಿಲ್ಲ.
ಮುಂಜಾನೆ ಮಂಜಿನಲಿ
ಮಿಂದ ಸುಮದಂತೆ
ಲಕಲಕಿಸುತಿದ್ದ ನಿನ್ನ
ಮೊಗವ ಕಂಡ ಮೇಲೆ ನನ್ನ
ನೋವು ನೋವಾಗಿರಲಿಲ್ಲ;
ದಿನ ತುಂಬಿದ ನಿನ್ನ
ಆರತಿಯ ಸಂಭ್ರಮಕೆ
ನಾ ಸಾಕ್ಷಿಯಾದೆನಲ್ಲ
ಮೊಗ್ಗರಳಿ ಹೂವಾಗುವ
ಕಾಯಿ ಹಣ್ಣಾಗುವ
ರೂಪಾಂತರಕೆ ನಾ ಹಿಗ್ಗಿನ
ಬುಗ್ಗೆಯಾದೆನಲ್ಲ.;
ನಿನ್ನ ಕೂಸು ಬಂದ ಮೇಲೆ
ನನ್ನ ಗಲ್ ಗಲ್ ಸದ್ದಿಗೆ
ನಿನ್ನನ್ನು ಗುರುತಿಸಿದಾಗ
ನನ್ನ ಮನ ಹೆಮ್ಮೆಪಟ್ಟಿತು.;
ಯಾರದೋ ಪತಿ
ಮರಣಿಸಿದಾಗ ಆಕೆಯ
ಕೈಗಳಲಿದ್ದ ನನ್ನನು
ನಿರ್ದಾಕ್ಷಿಣ್ಯವಾಗಿ
ಒಡೆಯಲು ಬಂದಾಗ
ನೀನವರ ಎದುರಿಸಿ
ಹೆಣ್ಣು ಹುಟ್ಟಿದಾಗಿನಿಂದ
ಅವಳ ಜೊತೆಗಾತಿಯಿವಳು
ಗಂಡ ಹೋದ ಮಾತ್ರಕ್ಕೆ
ಅದನೇಕೆ ಒಡೆಯಬೇಕೆಂದು
ನನ್ನ ಕಾಪಾಡಿದವಳು ನೀ.
ನಿನ್ನ ನುಡಿ ಕೇಳಿ ನನ್ನ
ಮನ ತುಂಬಿ ಬಂತು.;
ನಿಮ್ಮೆಲ್ಲರ ಸುಖ ದುಃಖಕೆ
ನಾ ಮೂಕಸಾಕ್ಷಿಯಾಗಿದ್ದೆ.
ಆದರೀಗೇನಾಗಿದೆ
ನಾನಾರಿಗೂ ಬೇಡವಾಗಿದ್ದೇನೆ
ಮುಂದೆ ನನ್ನ ಸಂತತಿಯ
ಅಳಿವು ಉಳಿವು ಎಲ್ಲಾ
ನಿಮ್ಮವರ ಕೈಲಿದೆ !!

ಶ್ರೀವಲ್ಲಿ ಮಂಜುನಾಥ