ಗಿಳಿ ಗೊರವಂಕಗಳಂತೆ ಬಾಳಿದರು…

ಗಿಳಿ ಗೊರವಂಕಗಳಂತೆ ಬಾಳಿದರು ಎಂದು ನಾವು ಸಾಮಾನ್ಯವಾಗಿ ಹಿಂದಿನ ಸಾಹಿತ್ಯದಲ್ಲಿ ನೋಡುತ್ತೇವೆ. ಇದು ಗಿಳಿಗಳು ಹಾಗೂ ಗೊರವಂಕಗಳು ಒಟ್ಟಿಗೆ ಜೀವಿಸುವುದನ್ನು ನೋಡಿ ಬೆಳೆದುಬಂದಿರುವ ನುಡಿಗಟ್ಟು. ಈ ಎರಡೂ ಪ್ರಭೇದದ ಹಕ್ಕಿಗಳು ಸಾಮಾನ್ಯವಾಗಿ ಒಟ್ಟೊಟ್ಟಾಗಿರುವುದರಿಂದಲೂ ಹಾಗೂ ಒಂದೇ ಸಂಗಾತಿಗೆ ಅಂಟಿಕೊಂಡಿರುವುದರಿಂದಲೂ ಈ ಮಾತು ಬಂದಿರಬೇಕು.

ಇಂದಿನ ಅಂಕಣದಲ್ಲಿ ಕೇವಲ ಗೊರವಂಕಗಳನ್ನು ಮಾತ್ರ ಪರಿಗಣಿಸಲಾಗಿದೆ. ಗೊರವಂಕಗಳನ್ನು ಮೈನಾಗಳೆಂದೂ ಕರೆಯುತ್ತಾರೆ ಮತ್ತು ಈ ಹೆಸರೇ ನಗರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಿಂದ ಬಂದ ಜನರಲ್ಲಿ ಹೆಚ್ಚು ಪ್ರಚಲಿತವಾಗಿದೆ. ಇವುಗಳಲ್ಲಿಯೂ ಅನೇಕ ಪ್ರಭೇದಗಳಿವೆ.

ಏಷ್ಯಾದಲ್ಲಿ ಹತ್ತೊಂಬತ್ತು ಪ್ರಭೇದಗಳು ಮತ್ತು ಒಂದು ಅಲೆಮಾರಿ ಪ್ರಭೇದವಿದ್ದು ಜಗತ್ತಿನಾದ್ಯಂತ ಸುಮಾರು 116 ಪ್ರಭೇದದ ಮೈನಾಗಳಿವೆ. ಸಾಕಷ್ಟು ಗಲಾಟೆ ಮಾಡುವ ಹಕ್ಕಿಗಳೂ ಇವು. ಅನೇಕವು ಇತರ ಹಕ್ಕಿಗಳ ಧ್ವನಿಗಳನ್ನು ಯಾವ ಶ್ರಮವೂ ಇಲ್ಲದೆ ಅನುಕರಿಸುತ್ತವೆ.

ಹಣ್ಣುಗಳನ್ನು ತಿನ್ನುವ, ಕೀಟಾಹಾರಿ, ಮಕರಂದ ಕುಡಿಯುವ ಹಾಗೂ ಮಿಶ್ರಾಹಾರಿ ಮೈನಾಗಳು ಸಹಾ ಇವೆ. ಇವು ಇತರ ಹಕ್ಕಿಗಳಂತೆ ಕೀಟಗಳ ನಿಯಂತ್ರಣದಲ್ಲಿ ಹಾಗೂ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬೀಜಪ್ರಸರಣವನ್ನೂ ಮಾಡುತ್ತವೆ. ಬೇಟೆಗಾರ ಹಕ್ಕಿಗಳ ಆಹಾರವಾಗಿಯೂ ಇವು ಆಹಾರ ಸರಪಳಿಯಲ್ಲಿ ಸ್ಥಾನಪಡೆದಿವೆ. ಹಾಗಾಗಿ, ಇವು ಮಹತ್ವದ ಜೀವಿಗಳು.

ಇವು ಗೂಡುಕಟ್ಟುವುದು ಉಂಟಾದರೂ ಮರದ ಪೊಟರೆ, ದಂಡೆಯ ಮೇಲಿನ ರಂದ್ರಗಳನ್ನು ಬೇಕಾದಂತೆ ಸರಿಪಡಿಸಿಕೊಂಡು ಮೊಟ್ಟೆಯಿಟ್ಟು ಮರಿಮಾಡುವುದೂ ಉಂಟು.

(c) ©

ನಮ್ಮ ಬೆಂಗಳೂರಿನ ಲಾಲ್‍ಬಾಗಿನಲ್ಲಿಯೇ ನಾಲ್ಕು ಬಗೆಯ ಮೈನಾಗಳನ್ನು ದಾಖಲಿಸಲಾಗಿದೆ. ಆದರೆ, ಸಾಮಾನ್ಯವಾಗಿ ನಮಗೆ ಕಂಡುಬರುವುದು ಪ್ರಧಾನವಾಗಿ ಕಂದು ಬಣ್ಣವನ್ನು ಹೊಂದಿರುವ ರೆಕ್ಕೆಯ ಮೇಲೆ ಬಿಳಿ ಮಚ್ಚೆಯನ್ನು ಹೊಂದಿರುವ ಹಳದಿಕೊಕ್ಕು ಹಾಗೂ ಕಣ್ಣಿನ ಸುತ್ತಲು ಹಳದಿ ಬಣ್ಣದ ಚರ್ಮವನ್ನು ಹೊಂದಿರುವ ಮೈನಾ ಅಥವಾ ಗೊರವಂಕ (Common Myna Acridotheres tristis). ಇದನ್ನು ಸಾಮಾನ್ಯ ಮೈನಾ ಎಂದು ಕರೆಯುತ್ತಾರೆ. ಇದು ಭಾರತಾದ್ಯಂತ ಹಾಗೂ ಹೊರಗೂ ಕಂಡುಬರುತ್ತದೆ. ಕಾಡು ಮೈನಾ (Jungle Myna Acridotheres fuscus) ಎಂದು ಕರೆಸಿಕೊಳ್ಳುವ ಇನ್ನೊಂದು ತುಸುತೆಳ್ಳಗಿರುವ, ಕಣ್ಣಿನ ಸುತ್ತಲು ಹಳದಿ ಇಲ್ಲದ, ಕೇಸರಿ ಬಣ್ಣದ ಕೊಕ್ಕಿರುವ ಮೈನಾ ನಮ್ಮಲ್ಲಿ ಸಿಗುತ್ತದೆಯಾದರೂ ಇದರ ವ್ಯಾಪ್ತಿ ಸಾಮಾನ್ಯ ಮೈನಾದಕ್ಕಿಂತ ಚಿಕ್ಕದು. ಮಧ್ಯಭಾರತ ಹಾಗೂ ಪಶ್ಚಿಮ ಭಾರತದ ಅನೇಕ ಕಡೆ ಕಾಣದು. ಬ್ರಾಹ್ಮಿಣಿ ಮೈನಾ (Brahminy Starling Sturnia pagodarum) ಎಂಬ ಇನ್ನೊಂದು ಪ್ರಭೇದ ನಗರ ಪ್ರದೇಶಗಳಲ್ಲಿಯೂ ತುಸುವೇ ಹೊರಹೋದರೆ ಯಥೇಚ್ಛವಾಗಿಯೂ ಕಾಣುತ್ತವೆ. ಇದರ ಕಪ್ಪು “ತಲೆಕೂದಲು” ವಿಶೇಷ. ಕಂದುಕೇಸರಿ ಬಣ್ಣದ ಹಕ್ಕಿ. ಹಳ್ಳಿಕಡೆ ಇದಕ್ಕೆ ಬೈತಲೆ ಬಸವಿ ಎಂಬ ಕುತೂಹಲಕರ ಹೆಸರಿದೆ. ಈ ಹೆಸರು ಜನರೊಂದಿಗೆ ಒಂದು ರೀತಿಯ ಅನ್ಯೋನ್ಯತೆಯನ್ನೂ ತೋರಿಸುತ್ತದೆ. ಚಳಿಗಾಲದಲ್ಲಿ ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿ ವಲಸೆ ಬರುವ ಗುಲಾಬಿ ಕಬ್ಬಕ್ಕಿಗಳು (ರೋಸಿ ಸ್ಟಾರ್ಲಿಂಗ್‍ಗಳು Rosy Starling Pastor roseus) ಸಹ ಒಂದು ಪ್ರಭೇದದ ಮೈನಾಗಳೇ.

ನೀವು ಮತ್ತೆ ಕುಕ್ಕೆ ಸುಬ್ರಹ್ಮಣ್ಯ ಅಥವಾ ಧರ್ಮಸ್ಥಳದಂತಹ ದೇವಳಗಳಿಗೆ (ಒಟ್ಟಾರೆ ಪಶ್ಚಿಮಘಟ್ಟಗಳಲ್ಲಿನ ಸ್ಥಳಗಳಿಗೆ) ಹೋದರೆ ಬೆಟ್ಟದ ಮೈನಾ (Southern Hill Myna Gracula indica) ಎಂಬ ಇನ್ನೊಂದು ಪ್ರಭೇದ ಕಾಣುತ್ತದೆ. ತಲೆಯ ಮೇಲೆ ಹಳದಿ ಬಣ್ಣದ ಗೆರೆಯಿರುವ, ಕಿವಿ ಕೊಕ್ಕಿನ ಬಳಿಯೂ ಹಳದಿಯಿರುವ ಇದನ್ನು ಸುಲಭವಾಗಿ ಗುರುತಿಸಬಹುದು, ಹಾಗೂ ಕೇಳಬಹುದು ಸಹ! ಅತಿಯಾಗಿ ಗಲಾಟೆ ಮಾಡುವ ಹಕ್ಕಿಗಳಾದ ಇವು ಹತ್ತಿರದಲ್ಲಿದ್ದರೆ ನಿದ್ದೆ ಬರುವುದಿಲ್ಲ! ಇನ್ನು ಅನೇಕ ಬಗೆಯ ಮೈನಾಗಳು ನಮ್ಮಲ್ಲಿ ಕಂಡುಬರುತ್ತವೆ. ಮುಂದಿನ ಬಾರಿ ಹೊರಗೆ ಹೋದಾಗೆಲ್ಲ ಗಮನಿಸಿ. ನೀವು ಕಂಡ ಮೈನಾಗಳ ವಿವರಗಳನ್ನು ನಮಗೆ ಬರೆದು ತಿಳಿಸಿ. ತಿಳಿಸುತ್ತೀರಲ್ಲಾ?

ಧನ್ಯವಾದಗಳು!

  • ಕಲ್ಗುಂಡಿ ನವೀನ್
  • ಚಿತ್ರಗಳು : ಜಿ ಎಸ್ ಶ್ರೀನಾಥ ಹಾಗು https://www.wallpaperflare.com/

Related post